ಭದ್ರಾವತಿ ತಾಲೂಕಿನ ಕಾರೇಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗಂಡು ಚಿರತೆಯೊಂದು ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದ್ದು, ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಭದ್ರಾವತಿ : ಕ್ಷೇತ್ರದಲ್ಲಿ ಇತ್ತೀಚೆಗೆ ಚಿರತೆಗಳು ಪ್ರತ್ಯಕ್ಷವಾಗುತ್ತಿದ್ದು, ಸುಮಾರು ೨ ತಿಂಗಳ ಹಿಂದೆ ಅರಣ್ಯ ಇಲಾಖೆಯ ಬೋನಿಗೆ ಚಿರತೆಯೊಂದು ಸಿಕ್ಕಿ ಬಿದ್ದ ಪ್ರಕರಣ ನಡೆದಿತ್ತು. ಇದೀಗ ಗ್ರಾಮೀಣ ಭಾಗದಲ್ಲಿ ಮತ್ತೊಂದು ಚಿರತೆ ಬೋನಿಗೆ ಸಿಕ್ಕಿ ಬಿದ್ದಿದೆ.
ತಾಲೂಕಿನ ಕಾರೇಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗಂಡು ಚಿರತೆಯೊಂದು ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದ್ದು, ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೋನಿಗೆ ಸಿಕ್ಕಿ ಬಿದ್ದ ಚಿರತೆಯನ್ನು ಅರಣ್ಯಕ್ಕೆ ಬಿಡಲಾಗಿದೆ.
ಇತ್ತೀಚೆಗೆ ಗ್ರಾಮದ ಮನೆಯೊಂದರಲ್ಲಿ ಕಟ್ಟಿ ಹಾಕಲಾಗಿದ್ದ ಸಾಕು ನಾಯಿಯೊಂದರ ಮೇಲೆ ಚಿರತೆ ದಾಳಿ ನಡೆಸಿ ಪರಾರಿಯಾಗಿತ್ತು. ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು, ಸಿಬ್ಬಂದಿಗಳು ಚಿರತೆ ಪ್ರತ್ಯಕ್ಷವಾದ ಸ್ಥಳದಲ್ಲಿ ಬೋನ್ ಇಟ್ಟಿದ್ದರು. ಈ ನಡುವೆ ಗ್ರಾಮದಲ್ಲಿ ಆತಂಕ ಮನೆ ಮಾಡಿತ್ತು. ಇದೀಗ ಚಿರತೆ ಬೋನ್‌ಗೆ ಸಿಕ್ಕಿ ಬಿದ್ದಿದೆ.
ಶಾಸಕ ಬಿ.ಕೆ ಸಂಗಮೇಶ್ವರ್ ಸ್ಥಳಕ್ಕೆ ಭೇಟಿ ನೀಡಿ ಗ್ರಾಮದ ಮುಖಂಡರು, ಸ್ಥಳೀಯ ನಿವಾಸಿಗಳಿಗೆ ಧೈರ್ಯ ತುಂಬುವ ಮೂಲಕ ಎಚ್ಚರ ವಹಿಸುವಂತೆ ಮನವಿ ಮಾಡಿದರು.
ಸುಮಾರು ೨ ತಿಂಗಳ ಹಿಂದೆ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಇಡಲಾಗಿದ್ದ ಅರಣ್ಯ ಇಲಾಖೆಯ ಬೋನಿಗೆ ಮರಿ ಚಿರತೆಯೊಂದು ಸಿಕ್ಕಿ ಬಿದ್ದಿತ್ತು.