ಭದ್ರಾವತಿ ಸಮೀಪದ ಎಂ.ಸಿ ಹಳ್ಳಿ ಶ್ರೀಕ್ಷೇತ್ರ ಭದ್ರಗಿರಿಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ದವತ್ತೀರು ಸ್ವಾಮೀಜಿಗಳ ೬ನೇ ವರ್ಷದ ಗುರುಪೂಜೆ ಸಮಾರಂಭ ಬೆಂಗಳೂರಿನ ಸರ್ವಧರ್ಮ ಸಮನ್ವಯ ಪೀಠದ ಶ್ರೀ ಸಂಗಮಾನಂದ ಸ್ವಾಮೀಜಿ ಉದ್ಘಾಟಿಸಿದರು.
ಭದ್ರಾವತಿ: ಧರ್ಮ, ಜಾತಿ ಬೇಧಭಾವವಿಲ್ಲದೆ ಆಶ್ರಯ, ಆಶೀರ್ವಾದ ನೀಡಿ ನಿರ್ಗಮಿಸಿರುವ ಸ್ವಾಮೀಜಿಗಳ ಸ್ಮರಣೆ ಮುಖ್ಯ ಎಂದು ಬೆಂಗಳೂರಿನ ಸರ್ವಧರ್ಮ ಸಮನ್ವಯ ಪೀಠದ ಶ್ರೀ ಸಂಗಮಾನಂದ ಸ್ವಾಮೀಜಿ ಹೇಳಿದರು.
ಶ್ರೀಗಳು ಇಲ್ಲಿಗೆ ಸಮೀಪದ ಎಂ.ಸಿ ಹಳ್ಳಿ ಶ್ರೀಕ್ಷೇತ್ರ ಭದ್ರಗಿರಿಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ದವತ್ತೀರು ಸ್ವಾಮೀಜಿಗಳ ೬ನೇ ವರ್ಷದ ಗುರುಪೂಜೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಆಶೀರ್ವಚನ ನೀಡಿದರು.
ಮನುಷ್ಯರ ಬದುಕು ಸಾರ್ಥಕಗೊಳ್ಳಬೇಕಾದರೆ ಧಾರ್ಮಿಕ ಹಾಗು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ಶ್ರೀ ಕ್ಷೇತ್ರ ಭದ್ರಗಿರಿ ಅನೇಕ ಸಾಧು ಸಂತರುಗಳ ಸಂಗಮ ಸ್ಥಳ. ಅನೇಕ ಸಾಧುಗಳು ಇಲ್ಲಿಗೆ ಭೇಟಿ ನೀಡಿದ್ದು, ಇದೊಂದು ಪುಣ್ಯಸ್ಥಳವಾಗಿದೆ ಎಂದರು.
ನಗರಸಭೆ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ರಾಜ್ಯ ಮಾತ್ರವಲ್ಲದೆ ವಿದೇಶಗಳಿಂದಲೂ ಭಕ್ತರನ್ನು ಸೆಳೆದ ಮಹತ್ವದ ಕ್ಷೇತ್ರ ಭದ್ರಗಿರಿ. ಭಕ್ತರನ್ನು ಸೆಳೆಯುವುದು ಸಲಭವಲ್ಲ. ವಿಶೇಷ ಶಕ್ತಿ ಇದ್ದಾಗ ಮಾತ್ರ ಭಕ್ತರು ಆಕರ್ಷಿತರಾಗಲು ಸಾಧ್ಯ ಎಂದರು.
ಶ್ರೀಮಂತರಿಗೆ ಮಹತ್ವನೀಡಲು ಅನೇಕ ಮಠಗಳಿವೆ. ಆದರೆ ಭದ್ರಗಿರಿ ಆಶ್ರಮವು ಬಡವರಿಗೆ ಆದ್ಯತೆ ನೀಡುವ ಮೂಲಕವೇ ಮನ್ನಣೆ ಪಡೆದಿದೆ. ಈ ಆಶ್ರಮದ ವತಿಯಿಂದ ಬಡವರಿಗೆ ನೆರವಾಗುವಂಥ ಹಲವರು ಸೇವಾ ಕಾರ್ಯಗಳನ್ನು ಮುಂದುವರೆಸಿದೆ. ಈ ಆಶ್ರಮದ ಅಭಿವೃದ್ಧಿಗೆ ತಮ್ಮ ಕುಟುಂಬದವರು ಸದಾ ಸ್ಪಂದಿಸುವುದಾಗಿ ತಿಳಿಸಿದರು.
ಚಿತ್ರದುರ್ಗ ಬಂಜಾರ ಗುರುಪೀಠದ ಶ್ರೀಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ದವತ್ತೀರು ಸ್ವಾಮೀಜಿಗಳ ನಡೆ-ನುಡಿ ಭಕ್ತರಿಗೆ ಆದರ್ಶ. ಭಕ್ತರಲ್ಲಿ ಅಜ್ಞಾನ ದೂರಾಗಿಸಿ, ಜ್ಞಾನವನ್ನು ಸ್ಥಾಪಿಸುವುದೇ ಪ್ರತಿಯೊಬ್ಬ ಸ್ವಾಮೀಜಿಗಳ ಮೂಲ ಕರ್ತವ್ಯ ಎಂದರು.
ಕುಂಬಾರ ಗುರುಪೀಠದ ಶ್ರೀಕುಂಬಾರ ಗುಂಡಯ್ಯ ಸ್ವಾಮೀಜಿ, ಕೊಲ್ಲೂರಿನ ರಾಘವೇಂದ್ರ,ಲಿಂಗಯ್ಯ ಸ್ವಾಮೀಜಿ, ತರೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಎಚ್ ಶ್ರೀನಿವಾಸ್ ಅವರ ಪತ್ನಿ ವಾಣಿ, ಎಂ.ಸಿ ಹಳ್ಳಿ ಗ್ರಾ.ಪಂ. ಅಧ್ಯಕ್ಷ ಎಂ.ಸಿ ರಾಮೇಗೌಡ, ಉಪಾಧ್ಯಕ್ಷೆ ಅಲಮೇಲಮ್ಮ, ಆಶ್ರಮದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಘೋಷ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಸೃಜನ್ ಪ್ರಾರ್ಥಿಸಿದರು. ಡಾ. ವಿಕ್ರಂ ಸ್ವಾಗತಿಸಿ, ಡಾ. ದಿವ್ಯ ದವತ್ತೀರು ಶ್ರೀಗಳು ನಡೆದುಬಂದ ಹಾದಿಯನ್ನು ಪರಿಚಯಿಸಿದರು. ಮಂಜುನಾಥ್ ನಿರೂಪಿಸಿ, ವಂದಿಸಿದರು.