Thursday, December 28, 2023

ಭದ್ರಾ ಪ್ರೌಢ ಶಾಲೆ ಹಳೇಯ ವಿದ್ಯಾರ್ಥಿಗಳಿಂದ ಗುರುವಂದನೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಭದ್ರಾ ಕಾಲೋನಿಯಲ್ಲಿರುವ ಭದ್ರಾ ಪ್ರೌಢ ಶಾಲೆಯಲ್ಲಿ ೧೯೯೨-೯೩ನೇ ಸಾಲಿನ ಹಳೇಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ನಡೆಯಿತು.
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಭದ್ರಾ ಕಾಲೋನಿಯಲ್ಲಿರುವ ಭದ್ರಾ ಪ್ರೌಢ ಶಾಲೆಯಲ್ಲಿ ೧೯೯೨-೯೩ನೇ ಸಾಲಿನ ಹಳೇಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ನಡೆಯಿತು.
    ಸುಮಾರು ೩೦ ವರ್ಷಗಳ ನಂತರ ವಿದ್ಯಾರ್ಥಿ ಸ್ನೇಹಿತರೆಲ್ಲರೂ ಒಂದೆಡೆ ಸೇರಿ ಸಂಭ್ರಮಾಚರಣೆ ನಡೆಸುವ ಮೂಲಕ ತಮಗೆ ವಿದ್ಯೆ ಹೇಳಿಕೊಟ್ಟ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿ ತಮ್ಮ ಹಿಂದಿನ ಅನುಭವಗಳನ್ನು ಹಂಚಿಕೊಂಡರು.  ಮುಖ್ಯ ಶಿಕ್ಷಕ ಸಿ.ಎಸ್.ನಾಗರಾಜ, ನಿವೃತ್ತ ಶಿಕ್ಷಕರಾದ ಚನ್ನಪ್ಪ ಮತ್ತು ಶಂಕರಪ್ಪ ಸೇರಿದಂತೆ ಶಿಕ್ಷಕ ಹಾಗು ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.
    ೧೯೯೨-೯೩ ನೇ ಸಾಲಿನ ವಿದ್ಯಾರ್ಥಿಯಾದ ಪ್ರಸ್ತುತ ಮೈಸೂರು ನಿವಾಸಿ ಕಾಂತರಾಜ್ ಶಾಲೆಗೆ ೧ ಲಕ್ಷ ರು. ಮೌಲ್ಯದ ಬೆಂಚ್ ಮತ್ತು ಡೆಸ್ಕ್ ಗಳನ್ನು ದೇಣಿಗೆಯಾಗಿ ನೀಡಿದರು.
    ದೇವೆಂದ್ರ ಸ್ವಾಗತಿಸಿ, ಎಸ್. ಚಂದ್ರಯ್ಯ ಮತ್ತು ಜಯರಂಗ ನಿರೂಪಿಸಿದರು. ರಮೇಶ್ ವಿ. ವಂದಿಸಿದರು.

ಸಾರ್ವಜನಿಕರಿಗೆ ತಕ್ಷಣ ಮಾಹಿತಿ ನೀಡಿ, ಆರಂಭಿಕ ಹಂತದಲ್ಲಿಯೇ ಸಮಸ್ಯೆ ಬಗೆಹರಿಸಿಕೊಳ್ಳಿ : ಸುರೇಶ್

ಭದ್ರಾವತಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ಇಲಾಖೆ ವತಿಯಿಂದ ಗುರುವಾರ ನಡೆದ ಸಾರ್ವಜನಿಕರ ಅಹವಾಲು ಸ್ವೀಕಾರ ಹಾಗು ಕುಂದುಕೊರತೆ ಸಭೆಯಲ್ಲಿ  ಲೋಕಾಯುಕ್ತ ನಿರೀಕ್ಷಕ ಎಚ್.ಎಸ್ ಸುರೇಶ್ ಪಾಲ್ಗೊಂಡು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.
    ಭದ್ರಾವತಿ: ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರು ಮಾಹಿತಿ ಕೇಳಿದಾಗ ಕೂಡಲೇ ಸ್ಪಂದಿಸಿದರೆ ಬಹಳಷ್ಟು ಸಮಸ್ಯೆಗಳು ಆರಂಭಿಕ ಹಂತದಲ್ಲಿಯೇ ಬಗೆಹರಿಯುತ್ತವೆ. ಅಸಮಂಜಸ ಉತ್ತರಗಳು ಹಾಗು ನಿರ್ಲಕ್ಷ್ಯದ ಕಾರಣದಿಂದ ದೂರುಗಳು ಸಲ್ಲಿಕೆಯಾಗುತ್ತವೆ ಎಂದು ಲೋಕಾಯುಕ್ತ ನಿರೀಕ್ಷಕ ಎಚ್.ಎಸ್ ಸುರೇಶ್ ಹೇಳಿದರು.
    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ಇಲಾಖೆ ವತಿಯಿಂದ ಗುರುವಾರ ನಡೆದ ಸಾರ್ವಜನಿಕರ ಅಹವಾಲು ಸ್ವೀಕಾರ ಹಾಗು ಕುಂದುಕೊರತೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಸಂಘಟನೆಗಳ ಪದಾಧಿಕಾರಿಗಳು ಕುಂದುಕೊರತೆ ಸಭೆಯಲ್ಲಿ ಸಮಸ್ಯೆ ಬಗ್ಗೆ ಚರ್ಚಿಸಬೇಕು ಹೊರತು ಭಾಷಣ ಮಾಡಬಾರದು. ಅದೇರೀತಿ  ಸಾರ್ವಜನಿಕರು ಕೇಳುವ ಪ್ರಶ್ನೆಗೆ ಉತ್ತರ ನೀಡುವುದು ಅಧಿಕಾರಿಗಳ ಜವಾಬ್ದಾರಿ ಎಂದರು.
    ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಎಲ್ಲಾ ಸರ್ಕಾರಿ ಅಧಿಕಾರಿಗಳು ಹಾಗು ನೌಕರರು ಗುರುತಿನ ಚೀಟಿಗಳನ್ನು ಕಡ್ಡಾಯವಾಗಿ ಧರಿಸಬೇಕೆಂದು ಸೂಚಿಸಿದರು.
ಸಭೆಯಲ್ಲಿ ಪೌರಾಯುಕ್ತ ಪ್ರಕಾಶ್ ಚನ್ನಪ್ಪನವರ್, ಪೊಲೀಸ್ ವೃತ್ತ ನಿರೀಕ್ಷಕ ಜಗದೀಶ್ ಹಂಚಿನಾಳ್ ಉಪಸ್ಥಿತರಿದ್ದರು.
    ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಗೋಪಾಲಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಟರಾಜ್, ಕಾರ್ಮಿಕ ನಿರೀಕ್ಷಕ ಭೀಮೇಶ್, ಪೇಪರ್‌ಟೌನ್ ಪೊಲೀಸ್ ಠಾಣಾ ನಿರೀಕ್ಷಕಿ ನಾಗಮ್ಮ, ತಾಲೂಕು ವೈದ್ಯಾಧಿಕಾರಿ ಡಾ. ಎಂ.ಬಿ.ಅಶೋಕ್, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿವಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರಸಭೆ ಕಂದಾಯಾಧಿಕಾರಿ ರಾಜ್‌ಕುಮಾರ್, ಸಮುದಾಯ ಸಂಘಟನಾಧಿಕಾರಿ ಸುಹಾಸಿನಿ, ಉಪ ತಹಸೀಲ್ದಾರ್ ರಾಧಾಕೃಷ್ಣ ಭಟ್, ಕಂದಾಯ ಇಲಾಖೆ ಕಂದಾಯ ನಿರೀಕ್ಷಕ ಪ್ರಶಾಂತ್, ಎನ್.ಎಂ ಬಸವರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.


Wednesday, December 27, 2023

ಬುದ್ಧ ವಿಹಾರದಲ್ಲಿ ಹುಣ್ಣಿಮೆ ಕಾರ್ಯಕ್ರಮ

ಭದ್ರಾವತಿ ನಗರದ ಸಂಬುದ್ಧ ದಮ್ಮಾಂಕುರ ಟ್ರಸ್ಟ್ ವತಿಯಿಂದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬುದ್ಧ ಸ್ಮರಣೆಯೊಂದಿಗೆ ಹುಣ್ಣಿಮೆ ಕಾರ್ಯಕ್ರಮ ಆಚರಿಸಲಾಯಿತು.
ಭದ್ರಾವತಿ ; ನಗರದ ಸಂಬುದ್ಧ ದಮ್ಮಾಂಕುರ ಟ್ರಸ್ಟ್ ವತಿಯಿಂದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬುದ್ಧ ಸ್ಮರಣೆಯೊಂದಿಗೆ ಹುಣ್ಣಿಮೆ ಕಾರ್ಯಕ್ರಮ ಆಚರಿಸಲಾಯಿತು.
ಹೊಸ ನಂಜಾಪುರದಲ್ಲಿರುವ ಬುದ್ಧ ವಿಹಾರದಲ್ಲಿ ಬುದ್ಧ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಮುಖರಾದ ಪ್ರೊ. ರಾಚಪ್ಪ, ಶ್ರೀನಿವಾಸ್, ಡಿ. ನರಸಿಂಹಮೂರ್ತಿ, ಸಿ. ಜಯಪ್ಪ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯ ಪಾಲ್ಗೊಂಡಿದ್ದರು.

ಪರವಾನಗಿ ಇಲ್ಲದ ಆಟೋ ಚಾಲನೆ : ರು.೧೦,೫೦೦ ದಂಡ

ಭದ್ರಾವತಿ : ಪರವಾನಗಿ ಇಲ್ಲದ ಆಟೋ ಚಲಾಯಿಸಿದ ಚಾಲಕನಿಗೆ ನಗರದ ಸಿವಿಲ್ ಜಡ್ಜ್ ಅಂಡ್ ಜೆಎಂಎಫ್‌ಸಿ ನ್ಯಾಯಾಲಯ ರು.೧೦.೫೦೦ ದಂಡ ವಿಧಿಸಿರುವ ಘಟನೆ ನಡೆದಿದೆ. 
ಸಂಚಾರಿ ಪೊಲೀಸರು ನಗರದ ಮಾಧವಚಾರ್ ವೃತ್ತದಲ್ಲಿ ವಾಹನ ತಪಾಸಣೆ ವೇಳೆ ಪರವಾನಗಿ ಇಲ್ಲದ ಆಟೋ ಚಾಲನೆ ಮಾಡುತ್ತಿದ್ದ ಚಾಲಕ ಜಿಂದಲ್ ಖಾನ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಮಂಗಳವಾರ ನ್ಯಾಯಾಲಯದ ಆದೇಶದ ಮೇರೆಗೆ ಚಾಲಕನಿಂದ ದಂಡ ವಸೂಲಾತಿ ಮಾಡಲಾಗಿದೆ. ವಿಶೇಷವಾಗಿ ಈ ಪ್ರಕರಣದಲ್ಲಿ ಕಡಿಮೆ ದಂಡ ವಸೂಲಾತಿ ಮಾಡುತ್ತಿದ್ದು, ನ್ಯಾಯಾಲಯ ಹೆಚ್ಚಿನ ದಂಡ ವಿಧಿಸುವ ಮೂಲಕ ಎಚ್ಚರಿಕೆ ಗಂಟೆ ನೀಡಿದೆ. 
ಕಳೆದ ಸುಮಾರು ೧ ತಿಂಗಳಿನಿಂದ ಸಂಚಾರಿ ಪೊಲೀಸರು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದು, ಈ ನಡುವೆಯೂ ಸಂಚಾರಿ ನಿಯಮ ಉಲ್ಲಂಘನೆಗಳು ಕಂಡು ಬರುತ್ತಿವೆ. ಈಗಲಾದರೂ ಸಾರ್ವಜನಿಕರು ಎಚ್ಚೆದ್ದುಕೊಂಡು ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. 

Tuesday, December 26, 2023

ಪತ್ರಕರ್ತ ಅನಂತ ಕುಮಾರ್‌ಗೆ ವೀರಯೋಧ ಮುರಳಿ ಪ್ರಶಸ್ತಿ

ಭದ್ರಾವತಿ ನಗರದ ಅಪೇಕ್ಷ ಕಲಾವೃಂದದ ವತಿಯಿಂದ ಪ್ರತಿವರ್ಷ ವೀರಯೋಧ ಮುರಳಿ ಸ್ಮರಣಾರ್ಥ ನೀಡಲಾಗುವ ೨೦೨೩ನೇ ಸಾಲಿನ ವೀರಯೋಧ ಮುರಳಿ ಪ್ರಶಸ್ತಿಯನ್ನು ಈ ಬಾರಿ ಕನ್ನಡಪ್ರಭ ಪತ್ರಿಕೆ ವರದಿಗಾರ ಅನಂತ ಕುಮಾರ್ ಅವರಿಗೆ ನೀಡಿ ಗೌರವಿಸಲಾಯಿತು.
    ಭದ್ರಾವತಿ: ನಗರದ ಅಪೇಕ್ಷ ಕಲಾವೃಂದದ ವತಿಯಿಂದ ಪ್ರತಿವರ್ಷ ವೀರಯೋಧ ಮುರಳಿ ಸ್ಮರಣಾರ್ಥ ನೀಡಲಾಗುವ ೨೦೨೩ನೇ ಸಾಲಿನ ವೀರಯೋಧ ಮುರಳಿ ಪ್ರಶಸ್ತಿಯನ್ನು ಈ ಬಾರಿ ಕನ್ನಡಪ್ರಭ ಪತ್ರಿಕೆ ವರದಿಗಾರ ಅನಂತ ಕುಮಾರ್ ಅವರಿಗೆ ನೀಡಿ ಗೌರವಿಸಲಾಯಿತು.
    ಸಿದ್ಧಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಅಪೇಕ್ಷ ನೃತ್ಯ ಕಲಾವೃಂದ ಹಾಗು ಶ್ರೀ ಬಸವೇಶ್ವರ ಧರ್ಮಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಸಂಗೀತ ಸಂಭ್ರಮ ಹಾಗು ಅಪೇಕ್ಷ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
    ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಬಿ.ಕೆ ಜಗನ್ನಾಥ್, ರೇವಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ಸಮಾಜ ಸೇವಕ ಪೊಲೀಸ್ ಉಮೇಶ್, ಶ್ರೀ ಬಸವೇಶ್ವರ ಧರ್ಮಸಂಸ್ಥೆ  ಅಧ್ಯಕ್ಷ ಶಿವಕುಮಾರ್, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರಸಭೆ ಮಾಜಿ ಅಧ್ಯಕ್ಷ ಬಿ.ಟಿ ನಾಗರಾಜ್, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಎಲ್. ದೇವರಾಜು, ಅಪೇಕ್ಷ ನೃತ್ಯಕಲಾ ವೃಂದದ ಅಧ್ಯಕ್ಷೆ ಭಾರತಿ ಗೋವಿಂದಸ್ವಾಮಿ, ಅಪೇಕ್ಷ ಮಂಜುನಾಥ್, ಸಾಹಿತಿ ಅರಳಿಹಳ್ಳಿ ಅಣ್ಣಪ್ಪ, ಶಿಕ್ಷಕ ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಮಾಜದ ಅಧಿಕಾರಿಗಳು ಕರ್ತವ್ಯದಲ್ಲಿ ಜಾತಿ ಪ್ರದರ್ಶಿಸಬೇಡಿ, ಹುಟ್ಟಿದ ಜಾತಿ ಬಗ್ಗೆ ಕೀಳರಿಮೆಯನ್ನೂ ಪಡಬೇಡಿ : ಕಾಗಿನೆಲೆ ಶ್ರೀ

 

ಭದ್ರಾವತಿ ಬಿ.ಎಚ್ ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ತಾಲೂಕು ಕುರುಬರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗು ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀ ಕನಕ ಗುರುಪೀಠ ಕ್ಷೇತ್ರ ಕಾಗಿನೆಲೆ ಪೀಠಾಧ್ಯಕ್ಷರಾದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.

    ಭದ್ರಾವತಿ: ಸಮಾಜದ ಅಧಿಕಾರಿಗಳು ಕರ್ತವ್ಯದಲ್ಲಿ ಜಾತಿ ಪ್ರದರ್ಶಿಸಬೇಡಿ. ಆದರೆ ಹುಟ್ಟಿದ ಜಾತಿ ಬಗ್ಗೆ ಕೀಳರಿಮೆಯನ್ನೂ ಪಡಬೇಡಿ ಎಂದು ಶ್ರೀ ಕನಕ ಗುರುಪೀಠ ಕ್ಷೇತ್ರ ಕಾಗಿನೆಲೆ ಪೀಠಾಧ್ಯಕ್ಷರಾದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಹೇಳಿದರು.

ನಗರದ ಬಿ.ಎಚ್ ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ತಾಲೂಕು ಕುರುಬರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ, ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.

ಭದ್ರಾವತಿ ತಾಲೂಕಿನ ಕುರುಬರ ಸಂಘ ಶೈಕ್ಷಣಿಕ ಕ್ರಾಂತಿ ಮೂಲಕ ಇಡೀ ರಾಜ್ಯದಲ್ಲಿ ಗಮನಸೆಳೆದಿದೆ. ಹುಟ್ಟಿದ ಮೇಲೆ ಹುಟ್ಟಿದ ಜಾತಿ ಬಗ್ಗೆ ಕೀಳಿರಿಮೆಪಡಬಾರದು. ಜಾತಿಯ ಇತಿಹಾಸ, ಸಂಸ್ಕೃತಿ ತಿಳಿಯದಿದ್ದರೆ ಮಾತ್ರ ಕೀಳರಿಮೆ ಮೂಡಲು ಸಾಧ್ಯ ಎಂದರು.

ಹಾಲುಮತ ಸಮಾಜದವರು ಒಟ್ಟುಗೂಡಿದರೆಂದರೆ ಇತರರಲ್ಲಿ ಸಂಚಲನ ಮೂಡುತ್ತದೆ. ಆದರೆ ನಾವು ಹಾಲಿನಂತೆ ಶುದ್ಧವಾಗಿ ಬದುಕೋಣ. ಹಾಲುಮತ ಸಮಾಜ ಉತ್ತಮ ಇತಿಹಾಸ ಹಾಗು ಧಾರ್ಮಿಕ ಸಂಸ್ಕೃತಿಯನ್ನು ಒಳಗೊಂಡಿರುವ ಸಮಾಜವಾಗಿದೆ ಎಂದರು.

ವಿದ್ಯೆ ವಿನಯ ಕಲಿಸಬೇಕು. ಸಮಾಜದ ಕಾರ್ಯಕ್ರಮಗಳಲ್ಲಿ ಒಟ್ಟುಗೂಡಿ ಸಮಾಜದ ಏಳಿಗೆಗೆ ಕಾರಣರಾಗಬೇಕೆಂದರು.

ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಿ.ಎಂ ಸಂತೋಷ್ ಮಾತನಾಡಿ, ಸಮಾಜ ಬಾಂಧವರ ನಡುವೆ ಬಾಂಧವ್ಯ ಬೆಳೆಯಲು ಮತ್ತು ಸಮಾಜದ ಪ್ರತಿಭಾವಂತರನ್ನು ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮಗಳು ಮುಖ್ಯ. ಸೇವಾ ಭಾವನೆ ರೂಢಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಗೌರವ ದೊರೆಯಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್. ಅಧಿಕಾರಿ ಬಿ.ಎಸ್. ಶೇಖರಪ್ಪ, ದಾವಣಗೆರೆಯ ಪ್ರೋಬೆಷನರಿ ತಹಶೀಲ್ದಾರ್ ಟಿ.ಎನ್. ರಘು, ಕರ್ನಾಟಕ ಪ್ರದೇಶ ಕುರುಬರ ಸಂಘದ ಉಪಾಧ್ಯಕ್ಷ ಕೆ. ರಂಗನಾಥ್, ನಿರ್ದೇಶಕರಾದ ಎಂ. ಶರತ್, ಡಾ. ಸೌಮ್ಯ ಪ್ರಶಾಂತ್, ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ. ಪ್ರಭಾಕರ್ ಬೀರಯ್ಯ, ತಾಲೂಕು ಕುರುಬರ ಸಂಘದ ಪದಾಧಿಕಾರಿಗಳಾದ ಬಿ.ಎಚ್ ವಸಂತ, ಎನ್. ಸತೀಶ್, ಬಿ.ಎಸ್ ಮಂಜುನಾಥ್, ಬಿ.ಎ ರಾಜೇಶ್, ಜೆ. ಕುಮಾರ್, ಕೆ. ಕೇಶವ, ಎಲ್. ಪ್ರವೀಣ್, ನಿರ್ದೇಶಕರಾದ ಸಣ್ಣಯ್ಯ, ಕೆ. ಲೋಕೇಶ್, ವಿನೋದ್ ಕುಮಾರ್, ಹೇಮಾವತಿ ಶಿವಾನಂದ, ಜೆ.ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಪ್ರಶಾಂತ ಸಣ್ಣಕ್ಕಿ ನಿರೂಪಿಸಿದರು.

ಗೂಂಡಾಗಿರಿ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ : ಜೆಡಿಎಸ್ ಆಗ್ರಹ

ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ

ಭದ್ರಾವತಿ ಕ್ಷೇತ್ರದಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಹಾಗು ಹೆಚ್ಚುತ್ತಿರುವ ದುರಾಡಳಿತದ ವಿರುದ್ಧ ಮಂಗಳವಾರ  ತಾಲೂಕು ಕಛೇರಿ ಮುಂಭಾಗ ಜಾತ್ಯಾತೀತ ಜನತಾದಳ ವತಿಯಿಂದ ಧರಣಿ ಸತ್ಯಾಗ್ರಹ ನಡೆಯಿತು.
    ಭದ್ರಾವತಿ :  ಕ್ಷೇತ್ರದಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಹಾಗು ಹೆಚ್ಚುತ್ತಿರುವ ದುರಾಡಳಿತದ ವಿರುದ್ಧ ಮಂಗಳವಾರ  ತಾಲೂಕು ಕಛೇರಿ ಮುಂಭಾಗ ಜಾತ್ಯಾತೀತ ಜನತಾದಳ ವತಿಯಿಂದ ಧರಣಿ ಸತ್ಯಾಗ್ರಹ ನಡೆಯಿತು.
    ಪಕ್ಷದ ಮುಖಂಡರಾದ ಶಾರದಾ ಅಪ್ಪಾಜಿ ನೇತೃತ್ವ ವಹಿಸಿದ್ದರು. ಪ್ರಮುಖರು ಮಾತನಾಡಿ, ಕ್ಷೇತ್ರದಲ್ಲಿ ಓ.ಸಿ, ಇಸ್ಪೀಟ್ ಸೇರಿದಂತೆ ಇನ್ನಿತರ ಜೂಜಾಟ, ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಅಲ್ಲದೆ ಗೂಂಡಾಗಿರಿ, ದಬ್ಬಾಳಿಕೆ, ಅಧಿಕಾರ ದುರ್ಬಳಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ಕ್ಷೇತ್ರದಲ್ಲಿ ಬಡವರು, ಅಸಹಾಯಕರು, ಶೋಷಿತರು ನೆಮ್ಮದಿಯಿಂದ ಬದುಕುವ ಸ್ಥಿತಿ ಇಲ್ಲವಾಗಿದೆ. ಶಾಂತಿ ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆರೋಪಿಸಿ, ತಕ್ಷಣ ಇವುಗಳಿಗೆ ಕಡಿವಾಣ ಹಾಕಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.      
    ಧರಣಿ ಸತ್ಯಾಗ್ರಹದಲ್ಲಿ ಜೆಡಿಎಸ್ ಪಕ್ಷದ ಪ್ರಮುಖರಾದ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ಗ್ರಾಮಾಂತರ ಅಧ್ಯಕ್ಷ ಧರ್ಮಕುಮಾರ್, ಮುಖಂಡರಾದ ಡಿ. ಆನಂದ, ಗೊಂದಿ ಜಯರಾಂ, ಎಂ.ಎ ಅಜಿತ್, ಧರ್ಮೇಗೌಡ(ಕುಂಬ್ರಿ ಚಂದ್ರಣ್ಣ), ಎಚ್.ಬಿ ರವಿಕುಮಾರ್, ಎಂ. ರಾಜು, ಎ.ಟಿ ರವಿ, ಉಮೇಶ್, ಗುಣಶೇಖರ್, ಮಧುಸೂಧನ್, ಉದಯ ಕುಮಾರ್, ದಿಲೀಪ್, ರೇಖಾ ಪ್ರಕಾಶ್, ಮಂಜುಳ ಸುಬ್ಬಣ್ಣ, ರೂಪಾವತಿ, ನಾಗರತ್ನ, ಸಾವಿತ್ರಮ್ಮ ಪುಟ್ಟೇಗೌಡ, ರಾಧ ಪ್ರಭಾಕರ್, ಭಾಗ್ಯಮ್ಮ, ಎ. ರಾಧ ಹಾಗು ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಯುವ ಮುಖಂಡ ಮಂಗೋಟೆ ರುದ್ರೇಶ್, ನಕುಲ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.