ನೋಟಿನ ಮೂಲಕ ಹಿರಿಯ ನಾಣ್ಯ, ನೋಟು ಹಾಗು ಅಂಚೆ ಚೀಟಿ ಸಂಗ್ರಹಗಾರರಾದ ಗಣೇಶ್ ಸ್ವಾಗತ
ಅಯೋಧ್ಯೆ ಶ್ರೀ ರಾಮಮಂದಿರ ಲೋಕಾರ್ಪಣೆ- ಪ್ರಭು ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಎದುರಾಗಿದ್ದು, ನೋಟಿನ ಮೂಲಕ ಭದ್ರಾವತಿಯ ಹಿರಿಯ ನಾಣ್ಯ, ನೋಟು ಹಾಗು ಅಂಚೆ ಚೀಟಿ ಸಂಗ್ರಹಗಾರರಾದ ಗಣೇಶ್ ಸ್ವಾಗತ ಕೋರಿದ್ದಾರೆ.
ಭದ್ರಾವತಿ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆ ಹಾಗು ಪ್ರಭು ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಎದುರಾಗುತ್ತಿದ್ದು, ಈ ನಡುವೆ ನಗರದ ಹಿರಿಯ ನಾಣ್ಯ, ನೋಟು ಹಾಗು ಅಂಚೆ ಚೀಟಿ ಸಂಗ್ರಹಗಾರರಾದ ಗಣೇಶ್‌ರವರು ಈ ಐತಿಹಾಸಿಕ ಕ್ಷಣಗಣನೆಯನ್ನು ನೋಟಿನ ಮೂಲಕ ಸ್ವಾಗತಿಸಿದ್ದಾರೆ.
ಜ.೨೨, ೨೦೨೪ರ ಐತಿಹಾಸಿಕ ಕ್ಷಣಗಣನೆಗಾಗಿ ೧೦ ರು. ಮುಖಬೆಲೆ ನೋಟು ಸಮರ್ಪಿಸಿದ್ದಾರೆ. ಅಲ್ಲದೆ ಜೂ.೧, ೨೦೨೨ರಂದು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಹಾಗು ನ.೯, ೨೦೧೯ರ ಸುಪ್ರೀಂಕೋರ್ಟ್ ತೀರ್ಪು, ಫೆ.೫, ೨೦೨೦ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಾಮಕರಣ, ಫೆ.೧೯, ಟ್ರಸ್ಟ್ ಮೊದಲ ಸಭೆ ಹಾಗು ಜು.೧೮, ೨೦೨೦ ಟ್ರಸ್ಟ್ ಎರಡನೇ ಸಭೆ ದಿನಾಂಕಗಳ ರು. ೧೦ ಮುಖಬೆಲೆಯ ನೋಟುಗಳನ್ನು ಶುಭ ಸಂದರ್ಭದಲ್ಲಿ ಸಮರ್ಪಿಸುವ ಮೂಲಕ ಸಂಭ್ರಮ ಹಂಚಿಕೊಂಡಿದ್ದಾರೆ.
ರಾಜಕಾರಣಿಗಳು, ಮಠಾಧೀಶರು, ಚಲನಚಿತ್ರ ನಟರು, ಸಾಹಿತಿಗಳು, ಕವಿ, ಕ್ರೀಡಾಪಟು ಸೇರಿದಂತೆ ಗಣ್ಯ ವ್ಯಕ್ತಿಗಳಿಗೆ ಸಭೆ ಸಮಾರಂಭಗಳಲ್ಲಿ ಅವರ ಜನ್ಮದಿನಾಂಕ ಹೊಂದಿರುವ ನೋಟು ಉಡುಗೊರೆಯಾಗಿ ನೀಡುವ ಮೂಲಕ ಶುಭ ಹಾರೈಸುವ ಹಾಗು ನಿಧನರಾದ ಸಂದರ್ಭದಲ್ಲಿ ಮರಣ ದಿನಾಂಕ ಹೊಂದಿರುವ ನೋಟಿನ ಮೂಲಕ ಸಂತಾಪ ಸೂಚಿಸುವ ಮತ್ತು ಐತಿಹಾಸಿಕ ದಿನಗಳನ್ನು ನೋಟಿನ ಮೂಲಕ ಸ್ಮರಿಸುವ ಹವ್ಯಾಸ ಗಣೇಶ್ ಅವರು ಬೆಳೆಸಿಕೊಂಡು ಬಂದಿದ್ದಾರೆ.