Sunday, January 21, 2024

ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಆಯೋಧ್ಯೆ ಧಾರ್ಮಿಕ ಆಚರಣೆಗಳಲ್ಲಿ ಬಿಳಿಕಿ ಶ್ರೀ

ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆ ಹಾಗು ಪ್ರಭು ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಎದುರಾಗುತ್ತಿದ್ದು, ಈ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಭದ್ರಾವತಿ ತಾಲೂಕಿನ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಂಡಿದ್ದಾರೆ.
    ಭದ್ರಾವತಿ : ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆ ಹಾಗು ಪ್ರಭು ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಎದುರಾಗುತ್ತಿದ್ದು, ಈ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ತಾಲೂಕಿನ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಂಡಿದ್ದಾರೆ.
    ಶ್ರೀ ಮಠದಲ್ಲಿ ನಿರಂತರವಾಗಿ ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳುವ ಮೂಲಕ ಧರ್ಮ ಜಾಗೃತಿ ಮೂಡಿಸುತ್ತಿರುವ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ತಾವರೆಕೆರೆ ಶಿಲಾಮಠದ ಡಾ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮತ್ತು ನಾಗಲಾಪುರ ಮಠ ಹಾಗು ತಂಡೆಕೆರೆ ಮಠದ ಸ್ವಾಮೀಜಿಯವರೊಂದಿಗೆ ಆಯೋಧ್ಯೆಯಲ್ಲಿ ನಡೆಯುವ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಂಡಿದ್ದಾರೆ.

ಹಿರಿಯ ಪತ್ರಕರ್ತ ಎನ್. ಗಣೇಶ್ ರಾವ್ ಸಿಂಧ್ಯಾ ನಿಧನ

ಎನ್. ಗಣೇಶ್ ರಾವ್ ಸಿಂಧ್ಯಾ
     ಭದ್ರಾವತಿ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಹಿರಿಯ ಪತ್ರಕರ್ತ ಹಾಗೂ  48 ವರ್ಷಗಳಿಂದ ನಿರಂತರವಾಗಿ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಎನ್. ಗಣೇಶ್ ರಾವ್ ಸಿಂಧ್ಯಾ(75) ರವರು ಭಾನುವಾರ ಬೆಳಿಗ್ಗೆ ನಿಧನರಾದರು.  ಪತ್ನಿ ಯಲ್ಲೂಬಾಯಿ, ಪತ್ರಕರ್ತ ಜಿ. ಸುಭಾಷ್ ರಾವ್ ಸಿಂಧ್ಯಾ, ತೇಜಸ್ ಪ್ರಿಂಟರ್ಸ್ ಮಾಲೀಕ ನವೀನ್ ಮತ್ತು ಪ್ರವೀಣ್ ಸೇರಿದಂತೆ ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಮೊಮ್ಮಕ್ಕಳಿದ್ದಾರೆ. 
       ಮೃತರ ಅಂತ್ಯಕ್ರಿಯೆ ನಗರದ ಹೊಳೆಹೊನ್ನೂರು ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ಭಾನುವಾರ ಸಂಜೆ ನೆರವೇರಿತು. 
        ಗಣೇಶ್ ರಾವ್ ಸಿಂಧ್ಯಾ ರವರು ಸ್ಥಳೀಯ ಮಟ್ಟದಲ್ಲಿ ಕನ್ನಡ ದಿನಪತ್ರಿಕೆ ಆರಂಭಿಸಿ ಅದರ ಸಂಪಾದಕರಾಗುವ ಜೊತೆಗೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ  ಪತ್ರಿಕಾ ಭವನ ಟ್ರಸ್ಟ್ ನಿರ್ದೇಶಕರಾಗಿದ್ದರು. 
    ಇದರೊಂದಿಗೆ ನಗರದ ರೈಲ್ವೆ ನಿಲ್ದಾಣ ರಸ್ತೆಯ ನಾಗರಾಜ್ ಪ್ರಿಂಟರ್ಸ್ ಮಾಲೀಕರಾಗಿ ಮುದ್ರಣ ಮಾಲೀಕರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 
     ಸಂತಾಪ: ಶಾಸಕ ಬಿ.ಕೆ ಸಂಗಮೇಶ್ವರ್, ಜೆಡಿಎಸ್ ಮುಖಂಡರಾದ ಶಾರದಾ ಅಪ್ಪಾಜಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ,  ಛತ್ರಪತಿ ಶಿವಾಜಿ  ಕ್ಷತ್ರಿಯ ಮರಾಠ ಸೇವಾ ಸಂಘ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯಾ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷಗಳ ಮುಖಂಡರು, ಗಣ್ಯರು ಸಂತಾಪ ಸೂಚಿಸಿದ್ದಾರೆ.



Saturday, January 20, 2024

ರಾಮಮಂದಿರ ಲೋಕಾರ್ಪಣೆ- ಪ್ರಭು ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ

ನೋಟಿನ ಮೂಲಕ ಹಿರಿಯ ನಾಣ್ಯ, ನೋಟು ಹಾಗು ಅಂಚೆ ಚೀಟಿ  ಸಂಗ್ರಹಗಾರರಾದ ಗಣೇಶ್ ಸ್ವಾಗತ

ಅಯೋಧ್ಯೆ ಶ್ರೀ ರಾಮಮಂದಿರ ಲೋಕಾರ್ಪಣೆ- ಪ್ರಭು ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಎದುರಾಗಿದ್ದು, ನೋಟಿನ ಮೂಲಕ ಭದ್ರಾವತಿಯ ಹಿರಿಯ ನಾಣ್ಯ, ನೋಟು ಹಾಗು ಅಂಚೆ ಚೀಟಿ  ಸಂಗ್ರಹಗಾರರಾದ ಗಣೇಶ್ ಸ್ವಾಗತ ಕೋರಿದ್ದಾರೆ.
    ಭದ್ರಾವತಿ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆ ಹಾಗು ಪ್ರಭು ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಎದುರಾಗುತ್ತಿದ್ದು, ಈ ನಡುವೆ  ನಗರದ ಹಿರಿಯ ನಾಣ್ಯ, ನೋಟು ಹಾಗು ಅಂಚೆ ಚೀಟಿ  ಸಂಗ್ರಹಗಾರರಾದ ಗಣೇಶ್‌ರವರು ಈ ಐತಿಹಾಸಿಕ ಕ್ಷಣಗಣನೆಯನ್ನು ನೋಟಿನ ಮೂಲಕ ಸ್ವಾಗತಿಸಿದ್ದಾರೆ.
    ಜ.೨೨, ೨೦೨೪ರ ಐತಿಹಾಸಿಕ ಕ್ಷಣಗಣನೆಗಾಗಿ ೧೦ ರು. ಮುಖಬೆಲೆ ನೋಟು ಸಮರ್ಪಿಸಿದ್ದಾರೆ. ಅಲ್ಲದೆ ಜೂ.೧, ೨೦೨೨ರಂದು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಹಾಗು ನ.೯, ೨೦೧೯ರ ಸುಪ್ರೀಂಕೋರ್ಟ್ ತೀರ್ಪು, ಫೆ.೫, ೨೦೨೦ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಾಮಕರಣ, ಫೆ.೧೯, ಟ್ರಸ್ಟ್ ಮೊದಲ ಸಭೆ ಹಾಗು ಜು.೧೮, ೨೦೨೦ ಟ್ರಸ್ಟ್ ಎರಡನೇ ಸಭೆ ದಿನಾಂಕಗಳ ರು. ೧೦ ಮುಖಬೆಲೆಯ ನೋಟುಗಳನ್ನು ಶುಭ ಸಂದರ್ಭದಲ್ಲಿ ಸಮರ್ಪಿಸುವ ಮೂಲಕ ಸಂಭ್ರಮ ಹಂಚಿಕೊಂಡಿದ್ದಾರೆ.
    ರಾಜಕಾರಣಿಗಳು, ಮಠಾಧೀಶರು, ಚಲನಚಿತ್ರ ನಟರು, ಸಾಹಿತಿಗಳು, ಕವಿ, ಕ್ರೀಡಾಪಟು ಸೇರಿದಂತೆ ಗಣ್ಯ ವ್ಯಕ್ತಿಗಳಿಗೆ ಸಭೆ ಸಮಾರಂಭಗಳಲ್ಲಿ ಅವರ ಜನ್ಮದಿನಾಂಕ ಹೊಂದಿರುವ ನೋಟು ಉಡುಗೊರೆಯಾಗಿ ನೀಡುವ ಮೂಲಕ ಶುಭ ಹಾರೈಸುವ ಹಾಗು ನಿಧನರಾದ ಸಂದರ್ಭದಲ್ಲಿ ಮರಣ ದಿನಾಂಕ ಹೊಂದಿರುವ ನೋಟಿನ ಮೂಲಕ ಸಂತಾಪ ಸೂಚಿಸುವ ಮತ್ತು ಐತಿಹಾಸಿಕ ದಿನಗಳನ್ನು ನೋಟಿನ ಮೂಲಕ ಸ್ಮರಿಸುವ ಹವ್ಯಾಸ ಗಣೇಶ್ ಅವರು ಬೆಳೆಸಿಕೊಂಡು ಬಂದಿದ್ದಾರೆ.

ಚಿನ್ನ-ಬೆಳ್ಳಿಯಲ್ಲಿ ಅರಳಿದ ಭವ್ಯ ರಾಮಮಂದಿರ : ಕಲಾವಿದ ಸಚಿನ್ ಎಂ. ವರ್ಣೇಕರ್

ಭದ್ರಾವತಿಯಲ್ಲಿ ಸೂಕ್ಷ್ಮ ಕಲಾಕೃತಿ ಮಾದರಿಗಳ ತಯಾರಿಕೆ ಕಲಾವಿದ ಸಚಿನ್ ಎಂ. ವರ್ಣೇಕರ್ ಅವರ ಕೈಚಳಕದಲ್ಲಿ ತಯಾರಾಗಿರುವ ಆಕರ್ಷಕವಾದ ಅಯೋಧ್ಯೆ ಭವ್ಯ ರಾಮಮಂದಿರ ಕಲಾಕೃತಿ ಮಾದರಿ
    ಭದ್ರಾವತಿ: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆ ಹಾಗು ಪ್ರಭು ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ದೇಶಾದ್ಯಂತ ವಿಭಿನ್ನ ಧಾರ್ಮಿಕ ಆಚರಣೆಗಳು ಜರುಗುತ್ತಿದ್ದು, ಈ ನಡುವೆ ಕಲಾ ಸಾಧಕರು ಪ್ರಭು ಶ್ರೀರಾಮ ಚಂದ್ರನಿಗಾಗಿ ತಮ್ಮಲ್ಲಿನ ಪ್ರತಿಭೆಗಳನ್ನು ಅನಾವರಣಗೊಳಿಸಿ ಸಮರ್ಪಿಸುತ್ತಿದ್ದಾರೆ. ಈ ಸಾಲಿನಲ್ಲಿ ನಗರದ ಸಚಿನ್ ಎಂ. ವರ್ಣೇಕರ್ ಸಹ ಒಬ್ಬರಾಗಿದ್ದಾರೆ.


    ಸಚಿನ್ ಮೂಲತಃ ಸೂಕ್ಷ್ಮ ಕಲಾಕೃತಿ (ಮೈಕ್ರೋ ಆರ್ಟ್ಸ್) ಮಾದರಿ ತಯಾರಿಕೆ ಕಲಾವಿದರಾಗಿದ್ದು, ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸಾಧಕರಾಗಿದ್ದಾರೆ. ಆಯೋಧ್ಯೆ ಭವ್ಯ ರಾಮಮಂದಿರ ಮಾದರಿ ತಯಾರಿಕೆಯಲ್ಲಿ ಇವರ ಪ್ರತಿಭೆ ಅನಾವರಣಗೊಂಡಿದೆ.  ೧೪೦ ಗ್ರಾಂ ತೂಕ, ೬ ಇಂಚು ಉದ್ದ, ೪ ಇಂಚು ಅಗಲ ಹಾಗು ೫.೫ ಇಂಚು ಎತ್ತರದ  ಚಿನ್ನ ಮತ್ತು ಬೆಳ್ಳಿ ಬಳಸಿ ಆಕರ್ಷಕವಾದ ಎರಡು ಭವ್ಯ ರಾಮಮಂದಿರ ಮಾದರಿ ತಯಾರಿಸಲಾಗಿದೆ.
    ಸಚಿನ್ ಚಿನ್ನ ಮತ್ತು ಬೆಳ್ಳಿ ಬಳಸಿ ಹಲವಾರು ಸೂಕ್ಷ್ಮ ಕಲಾಕೃತಿಗಳನ್ನು ರಚಿಸಿದ್ದು, ಅಲ್ಲದೆ ಇವರ ಕಲಾಕೃತಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ವಸ್ತು ಸಂಗ್ರಹಾಲಯದಲ್ಲಿ ಸ್ಥಾನ ಪಡೆದುಕೊಂಡಿರುವುದು ವಿಶೇಷವಾಗಿದೆ.

ವಿಇಎಸ್ ಆವರಣದಲ್ಲಿ ಜ.೨೯ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ನೂತನ ಕಟ್ಟಡದ ಉದ್ಘಾಟನೆ

ವಿದ್ಯಾಸಂಸ್ಥೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ

ಭದ್ರಾವತಿಯಲ್ಲಿ ಶನಿವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಕಛೇರಿಯಲ್ಲಿ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ ಮಾತನಾಡಿದರು.  
    ಭದ್ರಾವತಿ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ನಗರದ ಹೊಸಸೇತುವೆ ರಸ್ತೆ, ಸಿದ್ದಾರೂಢ ನಗರದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಟ್ಟಡಗಳ ಉದ್ಘಾಟನೆ, ಕ್ರೀಡಾ  ಹಾಗು ಸಾಂಸ್ಕೃತಿಕ ದಿನಾಚರಣೆ ಜ.೨೯ರಂದು ನಡೆಯಲಿದೆ ಎಂದು ವಿದ್ಯಾಸಂಸ್ಥೆ  ಹಾಗು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ ಹೇಳಿದರು.
    ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿದ್ಯಾಸಂಸ್ಥೆ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಟ್ಟಡದ ಉದ್ಘಾಟನೆ ಜ.೨೯ರಂದು ಸಂಜೆ ೫.೩೦ಕ್ಕೆ ನಡೆಯಲಿದೆ. ತಾಲೂಕಿನ ಸರ್ಕಾರಿ ನೌಕರರಿಗೆ ಕಾರ್ಯಾಗಾರ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ನಡೆಸಲು ಸುಸಜ್ಜಿತವಾದ ಯಾವುದೇ ಸಭಾಂಗಣದ ವ್ಯವಸ್ಥೆ ಇರುವುದಿಲ್ಲ. ಈ ಹಿನ್ನಲೆಯಲ್ಲಿ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಬಳಸಿ ಸುಮಾರು ೧.೩೦ ಕೋ. ರು. ವೆಚ್ಚದಲ್ಲಿ ಸುಸಜ್ಜಿತವಾದ ಸಭಾಂಗಣ ನೂತನ ಕಟ್ಟಡದಲ್ಲಿ ನಿರ್ಮಿಸಲಾಗಿದೆ. ಸಭಾಂಗಣ ೨೫೦ ರಿಂದ ೩೦೦ ಆಸನ ವ್ಯವಸ್ಥೆ ಹೊಂದಿದ್ದು, ಹವಾನಿಯಂತ್ರಿತ(ಎ.ಸಿ) ಸೌಲಭ್ಯದೊಂದಿಗೆ ಅತ್ಯಾಧುನಿಕ ಉಪಕರಣಗಳನ್ನು ಸಹ ಒಳಗೊಂಡಿದೆ ಎಂದರು.
    ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಮಧು ಬಂಗಾರಪ್ಪ ನೂತನ ಕಟ್ಟಡ ಉದ್ಘಾಟಿಸಲಿದ್ದು, ಸಂಸದ ಬಿ.ವೈ ರಾಘವೇಂದ್ರ, ವಿಧಾನಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
    ಶಾಸಕರಿಗೆ ಮನವಿ:
    ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶಾಸಕ ಬಿ.ಕೆ ಸಂಗಮೇಶ್ವರ ಅವರಿಗೆ ಶನಿವಾರ ಮನವಿ ಸಲ್ಲಿಸಲಾಗಿದ್ದು, ರಾಜ್ಯ ೭ನೇ ವೇತನ ಆಯೋಗದಿಂದ ಶೀಘ್ರ ವರದಿ ಪಡೆದು ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳನ್ನು ಪೂರ್ಣ ಪ್ರಮಾಣದಲ್ಲಿ ಪರಿಷ್ಕರಿಸಿ ಆದೇಶ ಹೊರಡಿಸುವುದು. ಹಳೇ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುವುದು ಹಾಗು ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸುವುದು ಒಟ್ಟು ೩ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ ಸಿದ್ದಾರಾಮಯ್ಯ ಅವರಿಗೆ ತಾಲೂಕಿನ ಸರ್ಕಾರಿ ನೌಕರರ ಪರವಾಗಿ ಒತ್ತಾಯಿಸುವಂತೆ ಮನವಿಯಲ್ಲಿ ಕೋರಲಾಗಿದೆ ಎಂದರು.
    ಶಾಲೆಗಳಲ್ಲಿ ಶೌಚಾಲಯ ಸ್ವಚ್ಛತೆಗೆ ಅಗತ್ಯ ಕ್ರಮ ಕೈಗೊಳ್ಳಲು ಮನವಿ :
ಶಾಲಾ ಮಕ್ಕಳಿಂದ ಯಾವುದೇ ಕೆಲಸ ಮಾಡಿಸದಂತೆ ಈಗಾಗಲೇ ಶಿಕ್ಷಣ ಸಚಿವರು ಆದೇಶಿಸಿದ್ದಾರೆ. ಈ ನಡುವೆ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಿ, ಸಿಬ್ಬಂದಿ ನೇಮಕಗೊಳಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಶೌಚಾಲಯ ಸ್ವಚ್ಛತೆಗೆ ಸಂಬಂಧಿಸಿಂತೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಶಿಕ್ಷಣ ಸಚಿವರೊಂದಿಗೆ ಮತ್ತೊಮ್ಮೆ ಚರ್ಚಿಸಲಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕೆಂದರು.  
    ಸಂಘದ ಗೌರವಾಧ್ಯಕ್ಷ ಆರ್. ಜನಾರ್ಧನ, ಉಪಾಧ್ಯಕ್ಷ ರಾಜ್‌ಕುಮಾರ್, ಕಾರ್ಯದರ್ಶಿ ಡಿ.ಎಸ್ ರಾಜಪ್ಪ, ಖಜಾಂಚಿ ಎಸ್.ಕೆ ಮೋಹನ್, ಜಂಟಿ ಕಾರ್ಯದರ್ಶಿ ಆರ್. ಉಮಾ, ಸರ್ಕಾರಿ ನೌಕರರ ಪ್ರಾಥಮಿಕ ಬಳಕೆದಾರರ ಸಂಘದ ಅಧ್ಯಕ್ಷ ಎಸ್.ಟಿ. ಸುಧೀಂದ್ರ ರೆಡ್ಡಿ, ಉಪಾಧ್ಯಕ್ಷ ಎ. ತಿಪ್ಪೇಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ. ಪೃಥ್ವಿರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿದ್ಯುತ್ ಅವಘಡ ; ನಗದು, ಚಿನ್ನಾಭರಣ ಅಗ್ನಿಗಾಹುತಿ

ಭದ್ರಾವತಿ ಹಳೇನಗರದ ಶ್ರೀ ಹಳದಮ್ಮ ದೇವಿ ದೇವಸ್ಥಾನದ ಬಳಿ ಮನೆಯೊಂದರಲ್ಲಿ ವಿದ್ಯುತ್ ಅವಘಡ ಸಂಭವಿಸಿ ನಗದು, ಚಿನ್ನಾಭರಣ ಸೇರಿದಂತೆ ಇನ್ನಿತರ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
    ಭದ್ರಾವತಿ: ಹಳೇನಗರದ ಶ್ರೀ ಹಳದಮ್ಮ ದೇವಿ ದೇವಸ್ಥಾನದ ಬಳಿ ಮನೆಯೊಂದರಲ್ಲಿ ವಿದ್ಯುತ್ ಅವಘಡ ಸಂಭವಿಸಿ ನಗದು, ಚಿನ್ನಾಭರಣ ಸೇರಿದಂತೆ ಇನ್ನಿತರ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
    ವಾಸು ಎಂಬುವರಿಗೆ ಸೇರಿದ ಮನೆಯಲ್ಲಿ ವಿದ್ಯುತ್ ಅವಘಡ ಸಂಭವಿಸಿದ್ದು, ಶುಕ್ರವಾರ ರಾತ್ರಿ ಬೆಂಕಿ ಕಾಣಿಕೊಂಡಿದೆ. ಈ ವಿದ್ಯುತ್ ಅವಘಡದಿಂದ ಮನೆಯಲ್ಲಿದ್ದ ಲಕ್ಷಾಂತರ ರು ಮೌಲ್ಯದ ಚಿನ್ನಾಭರಣ, ನಗದು ಸೇರಿದಂತೆ ಇನ್ನಿತರ ವಸ್ತುಗಳು ಸುಟ್ಟುಹೋಗಿವೆ.
    ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.  

ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳನ್ನು ಕೈಗೊಳ್ಳಲು ನಿರ್ದೇಶನ ನೀಡಿ

ಡಿ. ದೇವರಾಜ ಅರಸು ಜನಸ್ಪಂದನಾ ಸೇವಾ ಟ್ರಸ್ಟ್, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಮನವಿ  

ತಕ್ಷಣ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕ್ಷೇತ್ರದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಯೋಜನೆಯ ಪುನಶ್ಚೇತನ ಕಾಮಗಾರಿಗಳನ್ನು ಕೈಗೊಳ್ಳಲು ನಿರ್ದೇಶನ ನೀಡುವಂತೆ ಭದ್ರಾವತಿ ಡಿ. ದೇವರಾಜ ಅರಸು ಜನಸ್ಪಂದನಾ ಸೇವಾ ಟ್ರಸ್ಟ್ ಹಾಗು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.
    ಭದ್ರಾವತಿ: ತಕ್ಷಣ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕ್ಷೇತ್ರದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಯೋಜನೆಯ ಪುನಶ್ಚೇತನ ಕಾಮಗಾರಿಗಳನ್ನು ಕೈಗೊಳ್ಳಲು ನಿರ್ದೇಶನ ನೀಡುವಂತೆ ಡಿ. ದೇವರಾಜ ಅರಸು ಜನಸ್ಪಂದನಾ ಸೇವಾ ಟ್ರಸ್ಟ್ ಹಾಗು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.
    ಡಿ. ದೇವರಾಜ ಅರಸು ಜನಸ್ಪಂದನಾ ಸೇವಾ ಟ್ರಸ್ಟ್ ಹಾಗು ಸುವರ್ಣ ಮಹಿಳಾ ವೇದಿಕೆ ಛೇರ್ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಹಾಗು ಕಾರ್ಯದರ್ಶಿ ಗಿರಿನಾಯ್ಡು ಅವರು ಮನವಿ ಸಲ್ಲಿಸಿದ್ದು, ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಉಂಬ್ಳೆಬೈಲು ಹಾಗು ಭದ್ರಾವತಿ ತಾಲೂಕಿನ ಕಲ್ಲಹಳ್ಳಿ ಸೇರಿದಂತೆ ೨೮ ಗ್ರಾಮಗಳನ್ನೊಳಗೊಂಡ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ದೊಣಬಘಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾಗು ಸಿಂಗನಮನೆ ಗ್ರಾಮದ ಏಕಗ್ರಾಮ ಕುಡಿಯುವ ನೀರಿನ ಯೋಜನೆಯ ಮನಶ್ವೇತನ ಕಾಮಗಾರಿ ಮತ್ತು ಕಂಬದಾಳ್ ಹೊಸೂರು ಸೇರಿದಂತೆ ೨೧ ಗ್ರಾಮಗಳನ್ನೊಗೊಂಡ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪುನಶ್ಚೇತನ ಕಾಮಗಾರಿಗನ್ನು ತುರ್ತಾಗಿ ಕೈಗೊಳ್ಳಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ಡಿ. ದೇವರಾಜ ಅರಸು ಜನಸ್ಪಂದನಾ ಸೇವಾ ಟ್ರಸ್ಟ್ ಹಾಗು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ದೇಶಕರಾದ ಕೆ. ನಾಗೇಂದ್ರ ಪ್ರಸಾದ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಈ ಹಿನ್ನಲೆಯಲ್ಲಿ ನಿರ್ದೇಶಕರು ಈ ಸಂಬಂಧ ಕ್ರಮ ಕೈಗೊಳ್ಳುವಂತೆ ತಮಗೆ(ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ) ೧೮ ಅಕ್ಟೋಬರ್ ೨೦೨೩ರಂದು ಪತ್ರ ಬರೆದಿದ್ದಾರೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕ್ಷೇತ್ರದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಯೋಜನೆಯ ಪುನಶ್ಚೇತನ ಕಾಮಗಾರಿಗಳನ್ನು ಕೈಗೊಳ್ಳಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ಕೋರಿದ್ದಾರೆ.