Monday, October 28, 2024

ಕನ್ನಡ ರಥಯಾತ್ರೆಗೆ ಉಕ್ಕಿನ ನಗರದಲ್ಲಿ ಅದ್ದೂರಿ ಸ್ವಾಗತ

ಮಂಡ್ಯದಲ್ಲಿ ಡಿ.೨೦, ೨೧ ಮತ್ತು ೨೨ರಂದು ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆ ಸೋಮವಾರ ಸಂಜೆ ೬.೩೦ರ ಸಮಯಕ್ಕೆ ಭದ್ರಾವತಿ ನಗರಕ್ಕೆ ಆಗಮಿಸಿತು. 
    ಭದ್ರಾವತಿ: ಮಂಡ್ಯದಲ್ಲಿ ಡಿ.೨೦, ೨೧ ಮತ್ತು ೨೨ರಂದು ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆ ಸೋಮವಾರ ಸಂಜೆ ೬.೩೦ರ ಸಮಯಕ್ಕೆ ನಗರಕ್ಕೆ ಆಗಮಿಸಿತು. 
    ನಗರದ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಅಂಬೇಡ್ಕರ್ ವೃತ್ತದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್‌ರವರು ಕನ್ನಡ ತಾಯಿ ಭುವನೇಶ್ವರಿಗೆ ಮಾಲಾರ್ಪಣೆ ಮಾಡಿದರು. 
    ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ, ಉಪ ತಹಸೀಲ್ದಾರ್ ಮಂಜಾನಾಯ್ಕ, ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಪ್ರಮುಖರಾದ ಕೋಡ್ಲು ಯಜ್ಞಯ್ಯ, ಎಂ.ಇ ಜಗದೀಶ್, ಟಿ. ತಿಮ್ಮಪ್ಪ, ಎಂ.ಎಸ್ ಸುಧಾಮಣಿ, ಗೊಂದಿ ಜಯರಾಂ, ಸತ್ಯ ಭದ್ರಾವತಿ, ಚಿನ್ನಯ್ಯ, ಮಣಿ ಜಿಂಕ್‌ಲೈನ್, ಪ್ರಶಾಂತ್, ಜೆ.ಎನ್ ಬಸವರಾಜಪ್ಪ, ಕೋಗಲೂರು ತಿಪ್ಪೇಸ್ವಾಮಿ, ಬಿ.ಟಿ ನಾಗರಾಜ್, ಬಸವರಾಜ ಬಿ. ಆನೇಕೊಪ್ಪ, ವಿಶಾಲಾಕ್ಷಿ, ಸುಮತಿ ಕಾರಂತ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ವಿಐಎಸ್‌ಎಲ್ ವಿಐಎಸ್‌ಎಲ್ ಉಲಿವಿಗಾಗಿ ಅ.೨೯ರಂದು ಗಣಹೋಮ



    ಭದ್ರಾವತಿ: ನಗರದ ನ್ಯೂಕಾಲೋನಿ ಎಸ್‌ಎವಿ ವೃತ್ತದಲ್ಲಿ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ೧೪ ವರ್ಷದ ಶ್ರೀ ವಿನಾಯಕ ಮಹೋತ್ಸವ ಅಂಗವಾಗಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ವಿಸರ್ಜನೆ ನ.೨ರಂದು ನಡೆಯಲಿದೆ. 
    ಕಳೆದ ವರ್ಷ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಮೂಲಕ ಸಮಿತಿ ವತಿಯಿಂದ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ವಿನೂತನ ಪ್ರಯತ್ನ ಕೈಗೊಳ್ಳಲಾಗಿತ್ತು. ವೇದಿಕೆಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಚಿತ್ರಣವನ್ನು ತೆರೆದಿಡುವ ಮೂಲಕ ಗಮನ ಸೆಳೆಯಲಾಗಿತ್ತು. ಅಲ್ಲದೆ ಕಾರ್ಖಾನೆ ಉಳಿವಿಗಾಗಿ ಗಣಹೋಮ ಸಹ ಏರ್ಪಡಿಸಲಾಗಿತ್ತು. ಈ ಬಾರಿ ಸಹ ಅ.೨೯ರ ಮಂಗಳವಾರ ಗಣಹೋಮ ಹಮ್ಮಿಕೊಳ್ಳಲಾಗಿದೆ. 
    ನ.೨ರಂದು ಡೊಳ್ಳು ಕುಣಿತ, ತಮಟೆ ಹಾಗು ಮಂಗಳವಾದ್ಯಗಳೊಂದಿಗೆ ವಿಸರ್ಜನಾ ಪೂರ್ವ ಉತ್ಸವ ಮೆರವಣಿಗೆ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.  

ದಿಶಾ ಸಮಿತಿಗೆ ಯುವ ಮುಖಂಡ ಜಿ. ಆನಂದಕುಮಾರ್

ಜಿ. ಆನಂದಕುಮಾರ್ 
    ಭದ್ರಾವತಿ : ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಆದೇಶದಂತೆ ಜಿಲ್ಲಾಮಟ್ಟದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ದಿಶಾ ಸಮಿತಿಗೆ ನಗರದ ಯುವ ಮುಖಂಡ ಜಿ. ಆನಂದಕುಮಾರ್ ನಾಮನಿರ್ದೇಶನಗೊಂಡಿದ್ದಾರೆ. 
    ಸಮಿತಿ ಅಧ್ಯಕ್ಷರಾದ ಸಂಸದ ಬಿ.ವೈ ರಾಘವೇಂದ್ರರವರ ಕೋರಿಕೆ ಮೇರೆಗೆ ಆನಂದಕುಮಾರ್‌ರವರನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಮನಿರ್ದೇಶನಗೊಳಿಸಿ ಆದೇಶ ಹೊರಡಿಸಿದ್ದಾರೆ. ದಿಶಾ ಸಮಿತಿ ಅಧ್ಯಕ್ಷರು ಹಾಗು ೪೦ ಮಂದಿ ಸದಸ್ಯರನ್ನು ಒಳಗೊಂಡಿದೆ. 
    ಜಿ. ಆನಂದಕುಮಾರ್‌ರವರು ಆನಂದ ಸಾಮಾಜಿಕ ಸೇವಾ ಸಂಸ್ಥೆ ಮೂಲಕ ಗುರುತಿಸಿಕೊಂಡಿದ್ದು, ಒಂದು ಬಾರಿ ಬಿಜೆಪಿ ಮಂಡಲ ನಗರ ಅಧ್ಯಕ್ಷರಾಗಿ, ೨ ಬಾರಿ ನಗರಸಭೆ ಸದಸ್ಯರಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 
    ದಿಶಾ ಸಮಿತಿಗೆ ನಾಮನಿರ್ದೇಶನಗೊಳ್ಳಲು ಕಾರಣಕರ್ತರಾದ ಸಂಸದ ಬಿ.ವೈ ರಾಘವೇಂದ್ರರವರಿಗೆ ಜಿ. ಆನಂದಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ. 

Saturday, October 26, 2024

ಬಸ್ ನಿಲ್ದಾಣದ ಬಳಿ ಓ.ಸಿ ಮಟ್ಕಾ ಜೂಜಾಟ : ಪ್ರಕರಣ ದಾಖಲು

    ಭದ್ರಾವತಿ: ನಗರದ ಬೈಪಾಸ್ ರಸ್ತೆ, ನಗರಸಭೆ ವ್ಯಾಪ್ತಿಯ ಉಜ್ಜನಿಪುರ ಸರ್ಕಲ್ ಸಮೀಪದ ಬಸ್ ನಿಲ್ದಾಣದ ಬಳಿ ಓ.ಸಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯೋರ್ವನ ವಿರುದ್ಧ ಪ್ರಕರಣ ದಾಖಲಾಗಿದೆ. 
    ಪೇಪರ್‌ಟೌನ್ ಪೊಲೀಸ್ ಠಾಣೆ ಸಿಬ್ಬಂದಿ ಬಸವರಾಜ್ ಅ.೨೫ರ ಸಂಜೆ ೫ ಗಂಟೆ ಸಮಯದಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಓ.ಸಿ ಮಟ್ಕಾ ಜೂಜಾಟದಲ್ಲಿ ತೊಡಗಿರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಮನೆಯಲ್ಲಿ ದಾಸ್ತಾನು ಮಾಡಿದ್ದ ೫ ಕೆ.ಜಿ ಒಣ ಗಾಂಜಾ ಸೊಪ್ಪು ವಶ : ಪ್ರಕರಣ ದಾಖಲು


    ಭದ್ರಾವತಿ : ವ್ಯಕ್ತಿಯೋರ್ವ ಮನೆಯಲ್ಲಿ ದಾಸ್ತಾನು ಮಾಡಿದ್ದ ಸುಮಾರು ೫ ಕೆ.ಜಿ ತೂಕದ ಒಣ ಗಾಂಜಾ ಸೊಪ್ಪನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ನಡೆದಿದೆ. 
    ತಾಲೂಕಿನ ಅಗರದಹಳ್ಳಿ ಗ್ರಾಮದ ಮನೆಯೊಂದರಲ್ಲಿ ಗಾಂಜಾ ಸೊಪ್ಪನ್ನು ದಾಸ್ತಾನು ಮಾಡಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜುರವರ ನೇತೃತ್ವದ ತಂಡ ದಾಳಿ ನಡೆಸಿದ್ದು, ಸುಮಾರು ೨.೮೦ ಲಕ್ಷ ರು. ಮೌಲ್ಯದ ೫ ಕೆ.ಜಿ ೫೭೪ ಗ್ರಾಂ ತೂಕದ ಒಣ ಗಾಂಜಾ ಸೊಪ್ಪು ಪತ್ತೆಯಾಗಿದೆ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. 

ಮನೆಯ ಮೇಲ್ಛಾವಣಿ ಶೀಟ್ ತೆಗೆದು ಚಿನ್ನಾಭರಣ ಕಳ್ಳತನ



    ಭದ್ರಾವತಿ : ಮನೆಯ ಮೇಲ್ಛಾವಣಿ ಶೀಟ್ ತೆಗೆದು ಒಳಗೆ ಪ್ರವೇಶಿಸಿ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ತಾಲೂಕಿನ ಆನವೇರಿ ಗ್ರಾಮದಲ್ಲಿ ನಡೆದಿದೆ. 
    ಶೇಖರಪ್ಪ ಎಂಬುವರರ ಮನೆಯಲ್ಲಿ ಕಳ್ಳತನ ನಡೆದಿದ್ದು, ಅ.೨೪ರಂದು ಮಧ್ಯಾಹ್ನ ೧.೩೦ರ ಸಮಯದಲ್ಲಿ ಮನೆಗೆ ಬೀಗ ಹಾಕಿಕೊಂಡು ಶಿವಮೊಗ್ಗಕ್ಕೆ ಹೋಗಿದ್ದು,  ಸಂಜೆ ೬.೩೦ರ ಸಮಯಕ್ಕೆ ಮನೆಗೆ ಬಂದಾಗ ಕಳ್ಳತನ ಮಾಡಿರುವುದು ಕಂಡು ಬಂದಿದೆ. ಸುಮಾರು ೩೫ ಸಾವಿರ ರು. ಮೌಲ್ಯದ ಚಿನ್ನ ಹಾಗು ಸುಮಾರು ೧೫ ಸಾವಿರ ರು. ಮೌಲ್ಯದ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಲಾಗಿದೆ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮನುಷ್ಯನ ದೈಹಿಕ, ಬುದ್ಧಿ ಬೆಳವಣಿಗೆಗೆ ಅಯೋಡಿನ್ ಅತಿ ಅವಶ್ಯಕ : ಕೆ. ಸುಶೀಲಬಾಯಿ

ಭದ್ರಾವತಿ ತಾಲೂಕಿನ ಅರೆಬಿಳಿಚಿ ಗ್ರಾಮದ ಶ್ರೀ ಬಸವೇಶ್ವರ ಪ್ರೌಢಶಾಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ಹಾಗು ಅರೆಬಿಳಿಚಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಒಕ್ಕೂಟದ ಸಹಯೋಗದೊಂದಿಗೆ ಸ್ವಾಸ್ಥ್ಯ ಸಂಕಲ್ಪ ಹಾಗು ಅಯೋಡಿನ್ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು. 
    ಭದ್ರಾವತಿ: ಅಯೋಡಿನ್ ಮನುಷ್ಯನ ದೈಹಿಕ ಹಾಗು ಬುದ್ಧಿ ಬೆಳವಣಿಗೆಯಲ್ಲಿ ಅತಿ ಅವಶ್ಯಕವಾದ ಸೂಕ್ಷ್ಮ ಪೋಷಕಾಂಶವಾಗಿದ್ದು, ಇದು ನೈಸರ್ಗಿಕವಾಗಿ ಅಯೋಡಿನ್‌ಯುಕ್ತ ಉಪ್ಪಿನಲ್ಲಿ ದೊರೆಯುತ್ತದೆ ಎಂದು ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ. ಸುಶೀಲಬಾಯಿ ಹೇಳಿದರು. 
    ಅವರು ತಾಲೂಕಿನ ಅರೆಬಳಿಚಿಯಲ್ಲಿರುವ ಶ್ರೀ ಬಸವೇಶ್ವರ ಪ್ರೌಢಶಾಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ಹಾಗು ಅರೆಬಿಳಿಚಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಒಕ್ಕೂಟದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಸ್ವಾಸ್ಥ್ಯ ಸಂಕಲ್ಪ ಹಾಗು ಅಯೋಡಿನ್ ಸಪ್ತಾಹ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾಹಿತಿ ನೀಡಿದರು. 
    ನಿರಂತರ ಮಳೆಯಿಂದಾಗಿ ಭೂಮಿಯ ಮೇಲ್ಮೈಯಲ್ಲಿರುವ ಅಯೋಡಿನ್ ಅಂಶ ಕೊಚ್ಚಿ ಹೋಗಿ ಹಳ್ಳ-ಕೊಳ್ಳ, ನದಿಗಳ ಸಮುದ್ರ ಸೇರುತ್ತದೆ. ಈ ಹಿನ್ನಲೆಯಲ್ಲಿ ಗೆಡ್ಡೆ ರೂಪದಲ್ಲಿರುವ ಮೂಲಂಗಿ, ಗೆಣಸು, ಕ್ಯಾರೇಟ್, ಬೀಟ್‌ರೋಟ್, ಕೋಸು ಇತ್ಯಾದಿ ತರಕಾರಿಗಳಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ದೊರೆಯುತ್ತದೆ. ಸಮುದ್ರದ ಮೀನು ಇತ್ಯಾದಿಗಳಲ್ಲಿ ಇದು ಹೆಚ್ಚಾಗಿ ದೊರೆಯುತ್ತದೆ ಎಂದರು. 
    ಅಯೋಡಿನ್ ಪೋಷಕಾಂಶ ಕೊರತೆಯಿಂದ ಗರ್ಭಿಣಿ ಮಹಿಳೆಯರಲ್ಲಿ ಗರ್ಭಪಾತ, ಬುದ್ಧಿಮಾಂಧ್ಯ, ಕಿವುಡತನ, ಮೂಕತನ ಹಾಗು ಮೆಳ್ಳೆ ಕಣ್ಣು ಶಿಶುವಿನ ಜನನ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೆ ಮಕ್ಕಳಲ್ಲಿ ಕುಬ್ಜತನ, ಗ್ರಹಣ ಶಕ್ತಿಯ ಕೊರತೆ, ಕುಂಠಿತ ಬುದ್ಧಿ ಬೆಳವಣಿಗೆ, ವಯಸ್ಕರಲ್ಲಿ ಅತಿಯಾದ ಆಯಾಸ, ಹೆಣ್ಣು ಮಕ್ಕಳ ಋತು ಚಕ್ರದಲ್ಲಿ ಸಮಸ್ಯೆಗಳು ಕಂಡು ಬರುತ್ತವೆ. ಸ್ಥೂಲಕಾಯ ಹಾಗು ಥೈರಾಯಿಡ್ ಗ್ರಂಥಿಯ ಗಳಗಂಡ ಅಥವಾ ಗಾಯಿಟರ್ ಎಂಬ ಕೊರತೆ ಕಾಯಿಲೆಯು ಕಾಡುತ್ತದೆ ಎಂದರು. 
    ಸರ್ಕಾರ ಎಲ್ಲರಿಗೂ ಅಯೋಡಿನ್ ಪೋಷಕಾಂಶ ವಿತರಿಸುವ ಉದ್ದೇಶದಿಂದ ಉಪ್ಪಿನಲ್ಲಿ ಅಯೋಡಿನ್ ಅಂಶ ಸೇರಿಸಿ `ಅಯೋಡಿನ್‌ಯುಕ್ತ ಉಪ್ಪು' ಮಾರಾಟಕ್ಕೆ ಅವಕಾಶ ನೀಡಿದೆ. ನಾವುಗಳು ಅಯೋಡಿನ್‌ಯುಕ್ತ ಉಪ್ಪನ್ನು ಖರೀದಿಸಬೇಕು. ಅಲ್ಲದೆ ಗಾಳಿಯಲ್ಲಿ ಅಯೋಡಿನ್ ಅಂಶ ಹಾಳಾಗದಂತೆ ಭದ್ರವಾದ ಮುಚ್ಚಳವಿರುವ ಡಬ್ಬದಲ್ಲಿ ಸಂಗ್ರಹಿಸಿ ಬಳಸಬೇಕೆಂದರು. 
ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕಾಗಿ ಶುಚಿ, ಪೋಷಕಾಂಶಯುಕ್ತ ಆಹಾರ ಹಾಗು ಶುದ್ಧ ನೀರಿನ ಸೇವನೆ, ಪರಿಸರ ಸ್ವಚ್ಛತೆಯ ಕಾಳಜಿ ಮತ್ತು ಪರಿಸರ ರಕ್ಷಣೆ ಅತಿ ಮುಖ್ಯ ಎಂದರು. 
    ಶಾಲಾ ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು, ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಒಕ್ಕೂಟದ ಪ್ರತಿನಿಧಿಗಳು, ವಿದ್ಯಾಥಿಗಳು ಉಪಸ್ಥಿತರಿದ್ದರು.