Saturday, November 16, 2024

ಸಂತೃಪ್ತಿಗಿಂತ ಮಿಗಿಲಾದ ಸಂಪತ್ತಿಲ್ಲ : ಶ್ರೀ ರಂಭಾಪುರಿ ಜಗದ್ಗುರುಗಳು

ಭದ್ರಾವತಿ ನಗರದ ಸಹ್ಯಾದ್ರಿ ಬಡಾವಣೆಯಲ್ಲಿ ಜರುಗಿದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಜಾಗೃತಿ ಸಮಾರಂಭದಲ್ಲಿ  ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ಭದ್ರಾವತಿ : ನಾವು ಆಡುವ ಮಾತುಗಳಿಗೆ ಕೊಲ್ಲುವ ಮತ್ತು ಕಾಪಾಡುವ ಸಾಮರ್ಥ್ಯ ಎರಡೂ ಇದೆ. ಮಾತುಗಳಲ್ಲಿ ಕರುಣೆ ಹಾಗೂ ನೈಜತೆಯಿದ್ದರೆ ಬದುಕು ಬಲಗೊಳ್ಳುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು. 
    ಜಗದ್ಗುರುಗಳು ನಗರದ ಸಹ್ಯಾದ್ರಿ ಬಡಾವಣೆಯಲ್ಲಿ ಜರುಗಿದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.  ಮನುಷ್ಯನ ಮನಸ್ಸು ಸಿರಿವಂತವಾದರೆ ಸಂಪತ್ತು ಇಲ್ಲದಿದ್ದರೂ ನಾವು ಸಿರಿವಂತರೆ. ಮನಸ್ಸೇ ಬಡವಾಗಿದ್ದರೆ ನಮ್ಮಲ್ಲಿ ಸಂಪತ್ತು ಇದ್ದರೂ ನಾವು ಬಡವರೇ. ಸಂತೃಪ್ತಿಗಿಂತ ಶ್ರೇಷ್ಠವಾದ ಸಂಪತ್ತಿಲ್ಲ ಎಂದರು. 
    ಹಣ ಇವತ್ತಲ್ಲ ನಾಳೆಯಾದರೂ ಸಂಪಾದಿಸಬಹುದು. ಆದರೆ ಜೊತೆಗಿರುವ ವ್ಯಕ್ತಿಯನ್ನು ಕಳೆದುಕೊಳ್ಳಬಾರದು. ಸಮಯ, ಸ್ನೇಹ ಮತ್ತು ಆರೋಗ್ಯ ಇವುಗಳಿಗೆ ಬೆಲೆ ಕಟ್ಟಲಾಗದು. ಜೀವನದ ಕೆಟ್ಟ ಘಟನೆಗಳನ್ನು ಮರೆತು ಬಿಡಬೇಕು. ಆದರೆ ಅದರಿಂದ ಕಲಿತ ಪಾಠಗಳನ್ನು ಯಾವಾಗಲೂ ಮರೆಯಬಾರದು. ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ಕಷ್ಟ ಬಿಟ್ಟಿದ್ದಲ್ಲ. ಸುಖ ದು:ಖಗಳಲ್ಲಿ ಸಮನಾಗಿ ಬಾಳುವುದೇ ಮನುಷ್ಯನ ಗುರಿಯಾಗಬೇಕು ಎಂದರು. 
    ಎಡೆಯೂರು ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಮಳಲಿಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಮತ್ತು ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು. ಕೂಡ್ಲಿಗೆರೆ ಹಾಲೇಶ್, ಬಿ.ಕೆ ಜಗನ್ನಾಥ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ಶ್ರೀ ಜಗದ್ಗುರು ರೇಣುಕಾಚಾರ್ಯ ಗುರಕುಲ ಸಾಧಕರಿಂದ ವೇದಘೋಷ, ಚನ್ನಗಿರಿ ಡಾ. ಕೇದಾರ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿಯವರಿಂದ ಪ್ರಾರ್ಥನೆ ಜರುಗಿತು. ತಾವರೆಕೆರೆ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ನಿರೂಪಿಸಿದರು. ಮನು ಸರ್ವರನ್ನು ಸ್ವಾಗತಿಸಿ, ಸ್ವಾಮಿ ವಂದಿಸಿದರು.  

Friday, November 15, 2024

ಮದ್ಯಪಾನ ಮಾಡಿ ವಾಹನ ಚಾಲನೆ ೧೦ ಸಾವಿರ ರು. ದಂಡ

ಭದ್ರಾವತಿ ನಗರದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳನ್ನು ನಿಯಂತ್ರಿಸುವ ಉದ್ದೇಶದಿಂದ ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈ ನಡುವೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿರುವವರಿಗೆ ೧೦ ಸಾವಿರ ರು. ದಂಡ ವಿಧಿಸಿ ಎಚ್ಚರಿಕೆ ನೀಡಿರುವುದು ಇದೀಗ ಗಮನ ಸೆಳೆದಿದೆ. 
    ಭದ್ರಾವತಿ : ನಗರದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳನ್ನು ನಿಯಂತ್ರಿಸುವ ಉದ್ದೇಶದಿಂದ ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈ ನಡುವೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿರುವವರಿಗೆ ೧೦ ಸಾವಿರ ರು. ದಂಡ ವಿಧಿಸಿ ಎಚ್ಚರಿಕೆ ನೀಡಿರುವುದು ಇದೀಗ ಗಮನ ಸೆಳೆದಿದೆ. 
    ನಗರದಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದ ಸವಾರರನ್ನು ಸಂಚಾರಿ ಪೊಲೀಸರು ತಪಾಸಣೆ ವೇಳೆ ಪತ್ತೆ ಹಚ್ಚಿದ್ದು, ಎರಡು ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ನ.೧೧ರಂದು ತಲಾ ೧೦ ಸಾವಿರ ರು. ದಂಡ ಪಡೆಯಲಾಗಿದೆ. 
    ಈ ಕುರಿತು ಸಂಚಾರಿ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇದು ಮದ್ಯಪಾನ ಮಾಡಿ ವಾಹನ ಚಲಾಯಿಸುವವರಿಗೆ ಎಚ್ಚರಿಕೆಯ ಸಂದೇಶವಾಗಿದೆ. ಈಗಾಗಲೇ ಹಲವು ಪ್ರಕರಣಗಳಲ್ಲಿ ಹೆಚ್ಚಿನ ದಂಡ ವಿಧಿಸಿ ವಸೂಲಿ ಮಾಡುವಲ್ಲಿ ಇಲ್ಲಿನ ಸಂಚಾರಿ ಪೊಲೀಸರು ಯಶಸ್ವಿಯಾಗಿದ್ದಾರೆ. 
: 9482007466

ವಿಕಲಚೇತನ ಮಕ್ಕಳೊಂದಿಗೆ ಹುಟ್ಟು ಹಬ್ಬದ ಆಚರಣೆ

ಭದ್ರಾವತಿ ಶುಗರ್ ಟೌನ್ ಲಯನ್ಸ್ ಕ್ಲಬ್ ಹಿರಿಯ ಸದಸ್ಯ ನಿತ್ಯಾನಂದ .ಪೈರವರು ಈ ಬಾರಿ ಸಹ ತಮ್ಮ ಹುಟ್ಟುಹಬ್ಬ ವಿಕಲಚೇತನ ಮಕ್ಕಳೊಂದಿಗೆ ಆಚರಿಸಿಕೊಂಡು ಸಂಭ್ರಮಿಸಿದರು. 
    ಭದ್ರಾವತಿ:  ಶುಗರ್ ಟೌನ್ ಲಯನ್ಸ್ ಕ್ಲಬ್ ಹಿರಿಯ ಸದಸ್ಯ ನಿತ್ಯಾನಂದ .ಪೈರವರು ಈ ಬಾರಿ ಸಹ ತಮ್ಮ ಹುಟ್ಟುಹಬ್ಬ ವಿಕಲಚೇತನ ಮಕ್ಕಳೊಂದಿಗೆ ಆಚರಿಸಿಕೊಂಡು ಸಂಭ್ರಮಿಸಿದರು. 
    ನಗರದ ನ್ಯೂಟೌನ್ ತರಂಗ ಕಿವುಡು ಮಕ್ಕಳ ಶಾಲೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರುರವರ ಜನ್ಮದಿನ ಮಕ್ಕಳ ದಿನಾಚರಣೆಯಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಲಕ ಮಕ್ಕಳಿಗೆ ಸಿಹಿಯೊಂದಿಗೆ ಸಂಭ್ರಮದ ಕ್ಷಣಗಳನ್ನು ಹಂಚಿಕೊಂಡರು. ಅಲ್ಲದೆ ಮಕ್ಕಳಿಗೆ ಅಗತ್ಯ ಪರಿಕರಗಳನ್ನು ವಿತರಿಸಲಾಯಿತು. 
    ಶುಗರ್ ಟೌನ್ ಲಯನ್ಸ್ ಕ್ಲಬ್ ಅಧ್ಯಕ್ಷ ಆರ್. ಉಮೇಶ್ ಹಾಗೂ ಪದಾಧಿಕಾರಿಗಳು, ಹಿರಿಯ ಸದಸ್ಯರು ಮತ್ತು ನಿತ್ಯಾನಂದ .ಪೈ ಕುಟುಂಬ ವರ್ಗದವರು ಪಾಲ್ಗೊಂಡಿದ್ದರು. 

ವಿಇಎಸ್ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತದ ಭದ್ರಾವತಿ ನಗರದ ಹೊಸಸೇತುವೆ ರಸ್ತೆಯ ಸಿದ್ದಾರೂಢನಗರದ ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯಲ್ಲಿ ಈ ಬಾರಿ ಮಕ್ಕಳ ದಿನಾಚರಣೆ ವಿಶೇಷವಾಗಿ ಆಚರಿಸಲಾಯಿತು. 
    ಭದ್ರಾವತಿ:  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತದ ನಗರದ ಹೊಸಸೇತುವೆ ರಸ್ತೆಯ ಸಿದ್ದಾರೂಢನಗರದ ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯಲ್ಲಿ ಈ ಬಾರಿ ಮಕ್ಕಳ ದಿನಾಚರಣೆ ವಿಶೇಷವಾಗಿ ಆಚರಿಸಲಾಯಿತು. 
    ವಿದ್ಯಾ ಸಂಸ್ಥೆಯ ವಿವಿಧ ವಿಭಾಗಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವೇದಿಕೆಯಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿಗಳಾದ ವಿ.ಎಸ್ ರೇವತಿ, ಎಂ. ಆಕೃತಿ ಕುಮಾರಿ ಮತ್ತು ಎಸ್. ಶ್ರೀದೇವಿ ಮಕ್ಕಳ ದಿನಾಚರಣೆ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. 
    ವಿದ್ಯಾರ್ಥಿನಿ ಬಿ.ಎಲ್ ಸುರಭಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾ ಸಂಸ್ಥೆ ಆಡಳಿತ ಅಧಿಕಾರಿ, ಬಿ. ಇಡಿ ವಿಭಾಗದ ಪ್ರಾಂಶುಪಾಲ ಡಾ. ಎಸ್.ಪಿ ರಾಕೇಶ್, ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗಗೌಡ ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
    ಬಿ. ಇಡಿ ವಿಭಾಗದ ಪ್ರಶಿಕ್ಷಣಾರ್ಥಿ ಎಚ್.ಎಸ್ ಸಂಭ್ರಮ ಕಾರ್ಯಕ್ರಮ ನಿರೂಪಿಸಿ, ಎಂ.ಟಿ ನೀಲಾ ಪ್ರಾರ್ಥಿಸಿದರು. ಕೆ. ಸ್ಪೂರ್ತಿ ಸ್ವಾಗತಿಸಿ, ಬಿ. ನಾಗರತ್ನ ವಂದಿಸಿದರು.  

Thursday, November 14, 2024

ಬಾಲ್ಯದಲ್ಲಿಯೇ ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮಾನಸಿಕ, ದೈಹಿಕವಾಗಿ ಸದೃಢರಾಗಿ : ಜೆ.ಎನ್ ಬಸವರಾಜಪ್ಪ


ಭದ್ರಾವತಿ ನಗರದ ಹೊಸಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರುರವರ ೧೩೫ನೇ ಜನ್ಮದಿನ ಆಚರಿಸಲಾಯಿತು. 
    ಭದ್ರಾವತಿ: ಮಕ್ಕಳು ಬಾಲ್ಯದಲ್ಲಿಯೇ ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮಾನಸಿಕವಾಗಿ, ದೈಹಿಕವಾಗಿ ಸದೃಢರಾಗಿರಬೇಕೆಂದು ನಗರದ ಹಿರಿಯ ಹಿರಿಯ ಸಾಹಿತಿ ಜೆ.ಎನ್ ಬಸವರಾಜಪ್ಪ ಹೇಳಿದರು. 
  ಅವರು ಗುರುವಾರ ನಗರದ ಹೊಸಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರುರವರ ೧೩೫ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಮಕ್ಕಳ ಮನಸ್ಸು ಪರಿಶುದ್ಧವಾಗಿರಬೇಕು. ದುಶ್ಚಟಗಳಿಂದ ದೂರವಿದ್ದು, ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ನೆಹರುರವರು ಮಕ್ಕಳ ಮೇಲೆ ಹೊಂದಿರುವ ಪ್ರೀತಿ ಅಪಾರವಾಗಿದ್ದು, ಅವರ ಆಶಯದಂತೆ ಅವರ ಜನ್ಮದಿನ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದರು. 
    ಶಿಕ್ಷಕಿ ಭಾಗ್ಯ ನೆಹರುರವರ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು. ಮುಖ್ಯ ಶಿಕ್ಷಕ ನಾಗೇಶ್ ನೆಹರುರವರ ಕಾಲಾವಧಿಯಲ್ಲಿ ದೇಶ ಕಂಡ ಪ್ರಗತಿಯ ಕುರಿತು ಮಾತನಾಡಿದರು. 
    ವಿದ್ಯಾರ್ಥಿಗಳಾದ  ಪೂರ್ವಿಕ, ಲಕ್ಷ್ಮಿ ಮತ್ತು ಜಯಶ್ರೀ ಮಕ್ಕಳ ದಿನಾಚರಣೆ ಕುರಿತು ಕಿರು ಭಾಷಣ ಮಾಡಿದರು. ವಿದ್ಯಾರ್ಥಿಗಳಿಂದ ನೃತ್ಯ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.  ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು. 

ಜವಾಹರಲಾಲ್ ನೆಹರು ವೇಷ ಧರಿಸಿ ಗಮನ ಸೆಳೆದ ಯು.ಕೆ.ಜಿ ವಿದ್ಯಾರ್ಥಿ

ಭದ್ರಾವತಿ ನ್ಯೂಟೌನ್ ಸೈಂಟ್ ಚಾರ್ಲ್ಸ್ ಶಾಲೆಯ ಯು.ಕೆ.ಜಿ ವಿದ್ಯಾರ್ಥಿ ಎಂ.ಕೆ ಸ್ಟೀಫನ್ ಗುರುವಾರ ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ವೇಷಭೂಷಣ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರುರವರ ವೇಷ ಧರಿಸಿದ್ದು ಎಲ್ಲರ ಗಮನ ಸೆಳೆಯಿತು. 
    ಭದ್ರಾವತಿ : ನ್ಯೂಟೌನ್ ಸೈಂಟ್ ಚಾರ್ಲ್ಸ್ ಶಾಲೆಯ ಯು.ಕೆ.ಜಿ ವಿದ್ಯಾರ್ಥಿ ಎಂ.ಕೆ ಸ್ಟೀಫನ್ ಗುರುವಾರ ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ವೇಷಭೂಷಣ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರುರವರ ವೇಷ ಧರಿಸಿದ್ದು ಎಲ್ಲರ ಗಮನ ಸೆಳೆಯಿತು.  
    ಅಲ್ಲದೆ ಮಕ್ಕಳ ದಿನಾಚರಣೆ ವಿಷಯವಾಗಿ ಮಾತನಾಡಿ ಶಿಕ್ಷಕರ ಮತ್ತು ಪೋಷಕರ ಮೆಚ್ಚುಗೆಗೆ ಪಾತ್ರರಾಗಿದ್ದು, ಸ್ಟೀಫನ್ ಹಳೇನಗರ ಭೂತನಗುಡಿ ನಿವಾಸಿ ಪತ್ರಕರ್ತ ಕಿರಣ್‌ಕುಮಾರ್-ರೀನಾ ದಂಪತಿ ಪುತ್ರ. ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ವಿಭಿನ್ನ ಕಾರ್ಯಕ್ರಮಗಳನ್ನು ಪ್ರತಿವರ್ಷ ಆಯೋಜಿಸಿಕೊಂಡು ಬರಲಾಗುತ್ತಿದ್ದು, ಈ ಶಾಲೆ ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. 

ವೃದ್ಧರ ಸೇವೆ ಮಾಡುವ ಮನೋಭಾವವಿದ್ದಾಗ ಮಾತ್ರ. ವೃದ್ದಾಶ್ರಮಗಳಲ್ಲೂ ನೆಮ್ಮದಿ : ಬಿ.ಕೆ ಮೋಹನ್


ಭದ್ರಾವತಿ ವಿಐಎಸ್‌ಎಲ್ ಅತಿಥಿಗೃಹ ಸಭಾಂಗಣದಲ್ಲಿ ನಗರದ ಜನ್ನಾಪುರ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗಾಗಿ ನೂತನವಾಗಿ ಜಾರಿಗೆ ತಂದಿರುವ `ಕಾರುಣ್ಯ ದಾರಿ ದೀಪ ಯೋಜನೆ' ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ: ವೃದ್ಧರ ಸೇವೆ ಮಾಡುವ ಮನೋಭಾವವಿದ್ದಾಗ ಮಾತ್ರ. ವೃದ್ದಾಶ್ರಮಗಳಲ್ಲೂ ನೆಮ್ಮದಿ ಕಾಣಲು ಸಾಧ್ಯ. ಇಂತಹ ಸಮಾಜಮುಖಿ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಹೇಳಿದರು. 
    ಅವರು ಗುರುವಾರ ವಿಐಎಸ್‌ಎಲ್ ಅತಿಥಿಗೃಹ ಸಭಾಂಗಣದಲ್ಲಿ ನಗರದ ಜನ್ನಾಪುರ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗಾಗಿ ನೂತನವಾಗಿ ಜಾರಿಗೆ ತಂದಿರುವ `ಕಾರುಣ್ಯ ದಾರಿ ದೀಪ ಯೋಜನೆ' ಉದ್ಘಾಟಿಸಿ ಮಾತನಾಡಿದರು. 
    ಎಲ್ಲರ ಸಹಕಾರದೊಂದಿಗೆ ವೃದ್ಧಾಶ್ರಮಗಳನ್ನು ತೆರೆಯುವುದು ಸುಲಭ. ಆದರೆ ಆ ವೃದ್ಧಾಶ್ರಮಗಳಲ್ಲಿ ವೃದ್ಧರ ಸೇವೆ ಮಾಡುವವರ ಅಗತ್ಯವಿದೆ.  ಇಂದು ನಮ್ಮನ್ನು ಬೆಳೆಸಿದ ತಂದೆ ತಾಯಿಯರನ್ನೇ ಅವರ ವೃದ್ದಾಪ್ಯದಲ್ಲಿ ನೋಡಿ ಕೊಳ್ಳುವುದು ಕಷ್ಟ. ಅಂತಹ ದಿನಗಳಲ್ಲಿ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ವಯೋವೃದ್ದರನ್ನು ಗೌರವಿಸಿ, ಪೋಷಣೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು. 
    ಮಕ್ಕಳು ತಮ್ಮ ಶಿಕ್ಷಣ ಹಾಗೂ ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕು.  ಸರ್ಕಾರದಿಂದ ಸಾಕಷ್ಟು ಸೌಲಭ್ಯ ದೊರೆಯುತ್ತಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು. ಟ್ರಸ್ಟ್ ಜಾರಿಗೆ ತಂದಿರುವ ನೂತನ ಯೋಜನೆ ಯಶಸ್ವಿಯಾಗಿ ಮುನ್ನಡೆಯಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಟ್ರಸ್ಟ್ ಸೇವಾ ಕಾರ್ಯಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ನಡೆಯುವಂತಾಗಬೇಕು. 
    ಟ್ರಸ್ಟ್ ಮುನ್ನಡೆಸಿಕೊಂಡು ಹೋಗುತ್ತಿರುವ ಜಿ. ರಾಜುರವರು ಮೂಲತಃ ಹೋರಾಟದಿಂದ ಬೆಳೆದುಬಂದವರು. ಇದೀಗ ಸೇವಾಮನೋಭಾವನೆಯೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಸೇವಾಕಾರ್ಯಕ್ಕೆ ಅಭಿನಂದನೆ ಸಲ್ಲಿಸುವ ಜೊತೆಗೆ ಶಾಸಕರು ಟ್ರಸ್ಟ್‌ಗೆ ೫ ಲಕ್ಷ ರು. ನೆರವು ನೀಡಿದ್ದು, ಅದನ್ನು ಸ್ವೀಕರಿಸಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ಕೋರಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಟ್ರಸ್ಟ್‌ಗೆ ಶಾಶ್ವತ ನೆಲೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಭರವಸೆ ನೀಡಿದರು. 
  ಹೋರಾಟಗಾರ ಕೆ.ಎಲ್ ಅಶೋಕ್ ಮಾತನಾಡಿ, ವೃದ್ದರು ಅನಾಥರಲ್ಲ. ವೃದ್ದರನ್ನು ಹೊರಹಾಕುವವರ ಅನಾಥರು ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಾಗಿದೆ. ನಿಸ್ವಾರ್ಥತೆಯಿಂದ ಎಲ್ಲರೊಡನೆ ಬದುಕುವುದು ಕಲಿತಾಗ ಮಾತ್ರ ಸಮಾಜ ಮುಂದುವರೆಯಲು ಸಾಧ್ಯ. ನಿಸ್ವಾರ್ಥ ಸೇವಾ ಮನೋಭಾವದಿಂದ ಆರೋಗ್ಯಯುತ ಸಮಾಜ ನಿರ್ಮಾಣ ಮಾಡಲು ಹೊರಟಿರುವ ಕಾರುಣ್ಯ ಟ್ರಸ್ಟಿನ ಕೆಲಸ ರಾಜ್ಯದ ಉದ್ದಗಲಕ್ಕೂ ಹರಡುವಂತಾಗಲಿ ಎಂದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ಮಾತನಾಡಿ, ಮನುಷ್ಯ ಮಾನವೀಯತೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ಆತ ದೈವತ್ವವನ್ನು ಪಡೆಯಲು ಸಾಧ್ಯ. ಆಗ ಮಾತ್ರ ಅವರ ಮೇಲೆ ಪೂಜ್ಯ ಭಾವನೆ ಮೂಡುತ್ತದೆ. ಈ ನಿಟ್ಟಿನಲ್ಲಿ ಬುದ್ದನ ಶಾಂತಿ ಮಂತ್ರ,  ಬಸವಣ್ಣನವರ ಆದರ್ಶ, ಅಂಬೇಡ್ಕರ್‌ರವರ ಜ್ಞಾನದ ದಾರಿಯಲ್ಲಿ ನಾವೆಲ್ಲರೂ ಮುನ್ನಡೆಯಬೇಕು. ೧೫ ಪ್ರೌಢಶಾಲೆಗಳಿಂದ ವಿಶೇಷ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಶಿಕ್ಷಣ ಕೊಡಿಸುವಲ್ಲಿ ಮುಂದಾಗಿರುವ ಕಾರುಣ್ಯ ಟ್ರಸ್ಟ್‌ಗೆ ಶಿಕ್ಷಣ ಇಲಾಖೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
    ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್, ಹಿರಿಯ ನ್ಯಾಯವಾದಿ ಕೆ.ಎನ್ ಶ್ರೀಹರ್ಷ, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ಸೂಡಾ ಸದಸ್ಯ ಎಚ್. ರವಿಕುಮಾರ್ ಸೇರಿದಂತೆ ಇನ್ನಿತರರು ಮಾತನಾಡಿ, ಟ್ರಸ್ಟ್ ಸೇವಾ ಕಾರ್ಯವನ್ನು ಪ್ರಶಂಸಿಸಿದರು. 
    ಕಾರುಣ್ಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜಿ.ರಾಜು ಅಧ್ಯಕ್ಷತೆ ವಹಿಸಿದ್ದರು.  ಟ್ರಸ್ಟ್ ಪ್ರಮುಖರಾದ ಗೌರವಾಧ್ಯಕ್ಷ ಡಾ. ವಿಜಯ್ ಜಿ. ದುಬೈ, ನಿರ್ದೇಶಕ ವಿ.ಟಿ ರಮೇಶ್, ಡಾ. ನರೇಂದ್ರ ಬಾಬು, ರಘುರಾಮ್, ಸುರೇಶ್(ಕ್ಲಬ್), ಕೆಡಿಪಿ ಸದಸ್ಯ ರಾಜೇಂದ್ರ, ಡಿಎಸ್‌ಎಸ್ ಮುಖಂಡ ವಿ. ವಿನೋದ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ಶಿಕ್ಷಕ ಎ. ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟ್ ಖಜಾಂಚಿ ನಾಗವೇಣಿ ಸ್ವಾಗತಿಸಿ, ನಗರಸಭೆ ಮಾಜಿ ಸದಸ್ಯೆ ಅನ್ನಪೂರ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪದಾಧಿಕಾರಿಗಳಾದ ನಾಗರಾಜ್, ಭಾಸ್ಕರ್, ಕಾರ್ತಿಕ್ ಸೇರಿದಂತೆ ಇನ್ನಿತರ ಸದಸ್ಯರು ಪಾಲ್ಗೊಂಡಿದ್ದರು.