Sunday, November 17, 2024

ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಚಾಲಕರಾಗಿ ಎಸ್. ಮಂಜುನಾಥ್ ನೇಮಕ

ಭದ್ರಾವತಿ ಜನ್ನಾಪುರ ನಿವಾಸಿ, ಮಾದಿಗ ಸಮಾಜ(ಕೆಆರ್‌ಎಂಎಸ್) ರಾಜ್ಯಾಧ್ಯಕ್ಷ ಎಸ್. ಮಂಜುನಾಥ್‌ರವರನ್ನು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಚಾಲಕರಾಗಿ ನೇಮಕಗೊಳಿಸಲಾಗಿದೆ. ಶಾಸಕ ಬಿ.ಕೆ ಸಂಗಮೇಶ್ವರ್ ಭಾನುವಾರ ಆದೇಶ ಪತ್ರ ವಿತರಿಸಿದರು. 
    ಭದ್ರಾವತಿ: ನಗರದ ಜನ್ನಾಪುರ ನಿವಾಸಿ, ಮಾದಿಗ ಸಮಾಜ(ಕೆಆರ್‌ಎಂಎಸ್) ರಾಜ್ಯಾಧ್ಯಕ್ಷ ಎಸ್. ಮಂಜುನಾಥ್‌ರವರನ್ನು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಚಾಲಕರಾಗಿ ನೇಮಕಗೊಳಿಸಲಾಗಿದೆ.  
     ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಒ.ಬಿ.ಸಿ, ಅಲ್ಪಸಂಖ್ಯಾತ ಉಸ್ತುವಾರಿ ಕೆ.ರಾಜು ಹಾಗು ಎ.ಐ.ಸಿ.ಸಿ ಪರಿಶಿಷ್ಟ ಜಾತಿ ವಿಭಾಗದ ರಾಷ್ಟ್ರೀಯ ಅಧ್ಯಕ್ಷ ರಾಜೇಶ್ ಲಿಲೋತಿಯರವರ ಆದೇಶದ ಮೇರೆಗೆ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಿರ್ದೇಶನದಂತೆ  ಕೆ.ಪಿ.ಸಿ.ಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಆರ್ ಧರ್ಮಸೇನ ಮಂಜುನಾಥ್‌ರವರನ್ನು ನೇಮಕಗೊಳಿಸಿದ್ದಾರೆ. 
     ಜಿಲ್ಲಾ ವ್ಯಾಪ್ತಿಯಲ್ಲಿ ಸಂಸದರು, ಶಾಸಕರು, ಜಿಲ್ಲಾಧ್ಯಕ್ಷರು ಹಾಗು ಪಕ್ಷದ ಮುಖಂಡರ ಸಹಕಾರದೊಂದಿಗೆ ಜಿಲ್ಲಾ ಬ್ಲಾಕ್ ಮತ್ತು ಬೂತ್ ಮಟ್ಟದಲ್ಲಿ ಪರಿಶಿಷ್ಟಜಾತಿ ಸಮುದಾಯದ ಎಲ್ಲಾ ಜನಾಂಗದ ಜನರನ್ನು ಗುರುತಿಸಿ ಪಕ್ಷದ ಸಂಘಟನೆಗೆ ಶ್ರಮಿಸುವಂತೆ ಕೋರಲಾಗಿದೆ.  ಆದೇಶ ಪತ್ರವನ್ನು ಭಾನುವಾರ ಶಾಸಕರ ಗೃಹ ಕಛೇರಿಯಲ್ಲಿ ಎಸ್. ಮಂಜುನಾಥ್‌ರವರಿಗೆ ನೀಡಿ ಅಭಿನಂದಿಸಲಾಯಿತು. 

ಪರಿಶಿಷ್ಟ ಜಾತಿ ಸಮುದಾಯದವರಿಗೆ ಪಕ್ಷದಲ್ಲಿ ಹೆಚ್ಚಿನ ಅವಕಾಶ : ಶಾಸಕರಿಗೆ ಕೃತಜ್ಞತೆ


ಭದ್ರಾವತಿಯಲ್ಲಿ ಭಾನುವಾರ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರನ್ನು ಗೃಹಕಛೇರಿಯಲ್ಲಿ ಮಾದಿಗ ಸಮಾಜ(ಕೆಆರ್‌ಎಂಎಸ್) ರಾಜ್ಯಾಧ್ಯಕ್ಷ, ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಚಾಲಕ ಎಸ್. ಮಂಜುನಾಥ್ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ: ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಸಮುದಾಯದವರನ್ನು ಗುರುತಿಸಿ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿರುವುದು ಸ್ವಾಗತಾರ್ಹ ಸಂಗತಿಯಾಗಿದ್ದು, ಈ ನಿಟ್ಟಿನಲ್ಲಿ ಕಾರಣಕರ್ತರಾಗಿರುವ ಶಾಸಕ ಬಿ.ಕೆ ಸಂಗಮೇಶ್ವರ್‌ರವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಮಾದಿಗ ಸಮಾಜ(ಕೆಆರ್‌ಎಂಎಸ್) ರಾಜ್ಯಾಧ್ಯಕ್ಷ, ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಚಾಲಕ ಎಸ್. ಮಂಜುನಾಥ್ ಹೇಳಿದರು. 
    ಅವರು ಭಾನುವಾರ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಗೃಹಕಛೇರಿಯಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿದರು. 
    ಈಗಾಗಲೇ ತಮ್ಮ ಮಾರ್ಗದರ್ಶನದಲ್ಲಿ ಕ್ಷೇತ್ರದಾದ್ಯಂತ ಪರಿಶಿಷ್ಟ ಜಾತಿ ಸಮುದಾಯದವರನ್ನು ಸಂಘಟಿಸಿದ್ದು, ಅಲ್ಲದೆ ಇತ್ತೀಚೆಗೆ ನಡೆದ ಚನ್ನಪಟ್ಟಣ ವಿಧಾನಸಭಾ ಚುನಾವಣೆಯಲ್ಲಿ ಉಸ್ತುವಾರಿಯಾಗಿ ನೇಮಕಗೊಳ್ಳಲು ಕಾರಣಕರ್ತರಾಗುವ ಮೂಲಕ ಇದೀಗ ರಾಜ್ಯ ಸಂಚಾಲಕರಾಗಿ ಇನ್ನೂ ಹೆಚ್ಚಿನ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿರುವುದು ಸಂತಸವನ್ನುಂಟುಮಾಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಕಾರ ನೀಡುವಂತೆ ಕೋರಿದರು. 
    ನಗರಸಭೆ ಮಾಜಿ ಉಪಾಧ್ಯಕ್ಷ ಚನ್ನಪ್ಪ, ಸದಸ್ಯ ಶರವಣ, ಸಿ. ಜಯಪ್ಪ, ಪ್ರಮೋದ್ ಕಡೂರು, ಬಸವರಾಜ್ ದಾನವಾಡಿ, ಮೋಹನ್, ನಂಜುಂಡನಾಯ್ಕ ನಾಗತಿಬೆಳಗಲು, ರಂಗಸ್ವಾಮಿ ದಾನವಾಡಿ, ಚಂದ್ರಪ್ಪ ಕೂಡ್ಲಿಗೆರೆ, ಸ್ವಾಮಿ, ನಾಗರಾಜ್ ತಟ್ಟೆಹಳ್ಳಿ, ಜೆಬಿಟಿ ಬಾಬು ಸೇರಿದಂತೆ ಮಾದಿಗ ಸಮಾಜದ ಪ್ರಮುಖರು, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. 

Saturday, November 16, 2024

ವಾಹನ ಸವಾರರನ್ನು ಅಡ್ಡಗಟ್ಟಿ ನಗದು, ಚಿನ್ನಾಭರಣ ದರೋಡೆ



    ಭದ್ರಾವತಿ: ನಗರದಲ್ಲಿ ಇತ್ತೀಚೆಗೆ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಒಂದೇ ದಿನ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದ್ವಿಚಕ್ರ ವಾಹನಗಳಲ್ಲಿ ಹೋಗುತ್ತಿದ್ದ ಸವಾರನ್ನು ಅಡ್ಡಗಟ್ಟಿ ಬೆದರಿಸಿ ನಗದು, ಚಿನ್ನಾಭರಣ ದರೋಡೆ ಮಾಡಿರುವ ಘಟನೆ ನಡೆದಿದೆ.   
    ಕಳೆದ ೩ ದಿನಗಳ ಹಿಂದೆ ನಗರಸಭೆ ವ್ಯಾಪ್ತಿಯ ಕಡದಕಟ್ಟೆ ನಿವಾಸಿ ಸಿ. ವೆಂಕಟೇಶ್ ಎಂಬುವರು ರಾತ್ರಿ ೧೦ ಗಂಟೆ ಸಮಯದಲ್ಲಿ ಬಿ.ಎಚ್ ರಸ್ತೆ, ಭೈರವೇಶ್ವರ ಕಮ್ಯೂನಿಕೇಷನ್ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ತೆಗೆದುಕೊಂಡು ಮನೆಗೆ ಹೊರಟಾಗ ಸುಮಾರು ೨೦ ರಿಂದ ೨೫ ವರ್ಷ ವಯಸ್ಸಿನ ೩ ಜನ ಯುವಕರು ದ್ವಿಚಕ್ರ ವಾಹನ ಅಡ್ಡಗಟ್ಟಿ ಕೊರಳಿನಲ್ಲಿದ್ದ ಸುಮಾರು ೨೮ ಗ್ರಾಂ ತೂಕದ ಅಂದಾಜು ೧.೭೫ ರು. ಮೌಲ್ಯದ ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 
    ಮತ್ತೊಂದು ಪ್ರಕರಣದಲ್ಲಿ ತಾಲೂಕಿನ ಪದ್ಮೇನಹಳ್ಳಿ ಗ್ರಾಮದ ನಿವಾಸಿ ರಾಕೇಶ್ ಎಂಬುವರು ಸಂಜೆ ೭ ಗಂಟೆ ಸಮಯದಲ್ಲಿ ಪದ್ಮೇನಹಳ್ಳಿ ಗ್ರಾಮಕ್ಕೆ ಹೋಗುತ್ತಿರುವಾಗ ತಡಸ ಗ್ರಾಮದ ಬಳಿ ಸುಮಾರು ೨೫-೩೦ ವಯಸ್ಸಿನ ೩ ಜನ ಯುವಕರು  ಮದ್ಯಪಾನ ಮಾಡುತ್ತಿದ್ದು, ಇವರನ್ನು ಅಡ್ಡಗಟ್ಟಿ ಚಾಕು ತೋರಿಸಿ ಬೆದರಿಸಿ  ಜೇಬಿನಲ್ಲಿದ್ದ  ೨ ಸಾವಿರ ರು. ನಗದು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಬಿ. ಸಿದ್ದಬಸಪ್ಪ ಪುನರ್ ಆಯ್ಕೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಭದ್ರಾವತಿ ತಾಲೂಕು ಶಾಖೆ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಜಯ ಸಾಧಿಸುವ ಮೂಲಕ ಬಿ. ಸಿದ್ದಬಸಪ್ಪ ಪುನರ್ ಆಯ್ಕೆಯಾಗಿದ್ದಾರೆ. 
    ಭದ್ರಾವತಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಜಯ ಸಾಧಿಸುವ ಮೂಲಕ ಬಿ. ಸಿದ್ದಬಸಪ್ಪ ಪುನರ್ ಆಯ್ಕೆಯಾಗಿದ್ದಾರೆ. 
    ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿ. ಸಿದ್ದಬಸಪ್ಪರವರು ೨೨ ಹಾಗು ಡಾ. ಗಿರೀಶ್ ೧೧ ಮತಗಳನ್ನು ಪಡೆದುಕೊಂಡಿದ್ದು, ಸಿದ್ದಬಸಪ್ಪ ಗೆಲುವು ಸಾಧಿಸಿದ್ದಾರೆ. ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರಶಾಂತ್ ೨೨ ಮತ್ತು ವೆಂಕಟೇಶ್ವರಪ್ಪ ೧೨ ಮತಗಳನ್ನು ಪಡೆದುಕೊಂಡಿದ್ದು, ಪ್ರಶಾಂತ್ ಗೆಲುವು ಸಾಧಿಸಿದ್ದಾರೆ. ಉಳಿದಂತೆ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಸ್ಪರ್ಧಿಸಿದ್ದ ವೆಂಕಟೇಶ್ ೧೯ ಹಾಗು ರಾಜಕುಮಾರ್ ೧೫ ಮತಗಳನ್ನು ಪಡೆದುಕೊಂಡಿದ್ದು, ವೆಂಕಟೇಶ್ ಗೆಲುವು ಸಾಧಿಸಿದ್ದಾರೆ. 

ವಿದ್ಯಾರ್ಥಿ ನಿಲಯದ ವಿದ್ಯಾಥಿಗಳಿಗೆ ಕ್ರೀಡಾಕೂಟ : ಜಿಲ್ಲಾಮಟ್ಟಕ್ಕೆ ಆಯ್ಕೆ

ಭದ್ರಾವತಿ ತಾಲೂಕಿನ ಎಲ್ಲಾ ಇಲಾಖೆಗಳ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗಾಗಿ ನಗರದ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 
    ಭದ್ರಾವತಿ: ತಾಲೂಕಿನ ಎಲ್ಲಾ ಇಲಾಖೆಗಳ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗಾಗಿ ನಗರದ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 
    ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾಮಟ್ಟಕ್ಕೆ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೂ ಕ್ರೀಡಾ ಚಟುವಟಿಕೆಗಳ ಅಗತ್ಯತೆ ಮನಗಂಡು ಕ್ರೀಡಾಕೂಟ ಆಯೋಜಿಸಿಕೊಂಡು ಬರಲಾಗುತ್ತಿದೆ. 
    ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ತಾಲೂಕು ಕಲ್ಯಾಣಾಧಿಕಾರಿ ಕೆ.ಎಸ್ ಶೈಲಾ, ವಿಸ್ತರಣಾಧಿಕಾರಿ ಟಿ.ಎಸ್ ಮೀನಾಕ್ಷಮ್ಮ, ನಿಲಯ ಮೇಲ್ವಿಚಾರಕ ಸಿ.ಎಂ ರಮೇಶ್ ಹಾಗೂ ತಾಲೂಕಿನ ಎಲ್ಲಾ ನಿಲಯ ಮೇಲ್ವಿಚಾರಕರು, ಹಾಗೂ ಇಲಾಖೆಯ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ. 

ಶ್ರೀ ವಿನಾಯಕ ಮೂರ್ತಿ ಪ್ರತಿಷ್ಠಾಪನೆ : ಹೋಮ-ಹವನ, ಅನ್ನಸಂತರ್ಪಣೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಸುರಗಿತೋಪು ಅರಳಿಕಟ್ಟೆ ಶ್ರೀ ವರಸಿದ್ದಿ ವಿನಾಯಕ ಸೇವಾ ಸಮಿತಿ ವತಿಯಿಂದ ಶ್ರೀ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಶನಿವಾರ ಹೋಮ-ಹವನ, ಅನ್ನಸಂತರ್ಪಣೆ ನೆರವೇರಿತು. 
       ಭದ್ರಾವತಿ  : ನಗರಸಭೆ ವ್ಯಾಪ್ತಿಯ ಸುರಗಿತೋಪು ಅರಳಿಕಟ್ಟೆ ಶ್ರೀ ವರಸಿದ್ದಿ ವಿನಾಯಕ ಸೇವಾ ಸಮಿತಿ ವತಿಯಿಂದ ಶ್ರೀ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಶನಿವಾರ ಹೋಮ-ಹವನ, ಅನ್ನಸಂತರ್ಪಣೆ ನೆರವೇರಿತು. 
    ಕಳೆದ ಕೆಲವು ವರ್ಷಗಳಿಂದ ಸೇವಾ ಸಮಿತಿ ವತಿಯಿಂದ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ವಿನಾಯಕ ಚತುರ್ಥಿ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ವಿಶೇಷವಾಗಿ ಈ ಬಾರಿ ಅಶ್ವಧಾರಿಯಾಗಿ ವಿಜಯ ಯಾತ್ರೆಗೆ ಹೊರಟ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಿದ್ದು, ಭಕ್ತರ ಕಣ್ಮನ ಸೆಳೆದಿದೆ. 
    ಬೆಳಿಗ್ಗೆ ಹೋಮ-ಹವನದೊಂದಿಗೆ ವಿಶೇಷ ಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು.

ಸಂತೃಪ್ತಿಗಿಂತ ಮಿಗಿಲಾದ ಸಂಪತ್ತಿಲ್ಲ : ಶ್ರೀ ರಂಭಾಪುರಿ ಜಗದ್ಗುರುಗಳು

ಭದ್ರಾವತಿ ನಗರದ ಸಹ್ಯಾದ್ರಿ ಬಡಾವಣೆಯಲ್ಲಿ ಜರುಗಿದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಜಾಗೃತಿ ಸಮಾರಂಭದಲ್ಲಿ  ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ಭದ್ರಾವತಿ : ನಾವು ಆಡುವ ಮಾತುಗಳಿಗೆ ಕೊಲ್ಲುವ ಮತ್ತು ಕಾಪಾಡುವ ಸಾಮರ್ಥ್ಯ ಎರಡೂ ಇದೆ. ಮಾತುಗಳಲ್ಲಿ ಕರುಣೆ ಹಾಗೂ ನೈಜತೆಯಿದ್ದರೆ ಬದುಕು ಬಲಗೊಳ್ಳುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು. 
    ಜಗದ್ಗುರುಗಳು ನಗರದ ಸಹ್ಯಾದ್ರಿ ಬಡಾವಣೆಯಲ್ಲಿ ಜರುಗಿದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.  ಮನುಷ್ಯನ ಮನಸ್ಸು ಸಿರಿವಂತವಾದರೆ ಸಂಪತ್ತು ಇಲ್ಲದಿದ್ದರೂ ನಾವು ಸಿರಿವಂತರೆ. ಮನಸ್ಸೇ ಬಡವಾಗಿದ್ದರೆ ನಮ್ಮಲ್ಲಿ ಸಂಪತ್ತು ಇದ್ದರೂ ನಾವು ಬಡವರೇ. ಸಂತೃಪ್ತಿಗಿಂತ ಶ್ರೇಷ್ಠವಾದ ಸಂಪತ್ತಿಲ್ಲ ಎಂದರು. 
    ಹಣ ಇವತ್ತಲ್ಲ ನಾಳೆಯಾದರೂ ಸಂಪಾದಿಸಬಹುದು. ಆದರೆ ಜೊತೆಗಿರುವ ವ್ಯಕ್ತಿಯನ್ನು ಕಳೆದುಕೊಳ್ಳಬಾರದು. ಸಮಯ, ಸ್ನೇಹ ಮತ್ತು ಆರೋಗ್ಯ ಇವುಗಳಿಗೆ ಬೆಲೆ ಕಟ್ಟಲಾಗದು. ಜೀವನದ ಕೆಟ್ಟ ಘಟನೆಗಳನ್ನು ಮರೆತು ಬಿಡಬೇಕು. ಆದರೆ ಅದರಿಂದ ಕಲಿತ ಪಾಠಗಳನ್ನು ಯಾವಾಗಲೂ ಮರೆಯಬಾರದು. ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ಕಷ್ಟ ಬಿಟ್ಟಿದ್ದಲ್ಲ. ಸುಖ ದು:ಖಗಳಲ್ಲಿ ಸಮನಾಗಿ ಬಾಳುವುದೇ ಮನುಷ್ಯನ ಗುರಿಯಾಗಬೇಕು ಎಂದರು. 
    ಎಡೆಯೂರು ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಮಳಲಿಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಮತ್ತು ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು. ಕೂಡ್ಲಿಗೆರೆ ಹಾಲೇಶ್, ಬಿ.ಕೆ ಜಗನ್ನಾಥ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ಶ್ರೀ ಜಗದ್ಗುರು ರೇಣುಕಾಚಾರ್ಯ ಗುರಕುಲ ಸಾಧಕರಿಂದ ವೇದಘೋಷ, ಚನ್ನಗಿರಿ ಡಾ. ಕೇದಾರ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿಯವರಿಂದ ಪ್ರಾರ್ಥನೆ ಜರುಗಿತು. ತಾವರೆಕೆರೆ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ನಿರೂಪಿಸಿದರು. ಮನು ಸರ್ವರನ್ನು ಸ್ವಾಗತಿಸಿ, ಸ್ವಾಮಿ ವಂದಿಸಿದರು.