ಭದ್ರಾವತಿ ಗಾಂಧಿನಗರದ ವೇಲಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ಭಾನುವಾರ ಧರ್ಮ ಕೇಂದ್ರದ ಭಕ್ತಾಧಿಗಳಿಂದ ಸಮುದಾಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು.
ಭದ್ರಾವತಿ : ಗಾಂಧಿನಗರದ ವೇಲಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ಭಾನುವಾರ ಧರ್ಮ ಕೇಂದ್ರದ ಭಕ್ತಾಧಿಗಳಿಂದ ಸಮುದಾಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು.
ಶಿವಮೊಗ್ಗ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಫ್ರಾನ್ಸಿಸ್ ಸೆರಾವೊರವರು ದೀಪ ಬೆಳಗಿಸಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಂತೆಯೇ ವಯಸ್ಕರ ಧರ್ಮೋಪದೇಶ ತರಗತಿಗಳನ್ನು ತೆಗೆದುಕೊಂಡರು.
ಪ್ರಾಸ್ತಾವಿಕ ನುಡಿಗಳನಾಡಿದ ಧರ್ಮಕೇಂದ್ರದ ಗುರುಗಳಾದ ಫಾದರ್ ಸ್ಟೀವನ್ ಡೇಸಾ, ಧರ್ಮ ಕೇಂದ್ರದ ಭಕ್ತಾಧಿಗಳು ವಿವಿಧ ವಲಯ(ವಾರ್ಡ್)ಗಳಲ್ಲಿ ವಾಸಿಸುವುದರಿಂದ ಆ ವಲಯಗಳ ಭಕ್ತ ಸಮೂಹವು ವಿವಿಧ ಸಂತರುಗಳ ಹೆಸರುಗಳನ್ನು ವಹಿಸಿಕೊಂಡು ಸಮುದಾಯದವನ್ನಾಗಿ ನಿರ್ಮಿಸಲಾಗಿದೆ. ಆ ವಿವಿಧ ಸಮುದಾಯಗಳ ಭಕ್ತಾಧಿಗಳು ಇಂದು ಒಟ್ಟುಗೂಡಿ ಸಮುದಾಯೋತ್ಸವ ಆಚರಿಸಲಾಗುತ್ತಿದೆ ಎಂದರು.
ಸಮುದಾಯೋತ್ಸವದ ಅಂಗವಾಗಿ ವಿವಿಧ ಸಮುದಾಯಗಳಿಂದ ಬೈಬಲ್ ಆಧಾರಿತ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆ ಏರ್ಪಡಿಸಲಾಗಿದೆ. ಈ ರೀತಿಯ ಚಟುವಟಿಕೆಗಳು ನಡೆಯುವುದರಿಂದ ಸಮುದಾಯದಲ್ಲಿರುವ ಕುಟುಂಬಗಳು ಒಂದುಗೂಡಲು, ಪರಸ್ಪರ ಅರ್ಥೈಸಿಕೊಳ್ಳಲು ಸಹಾಯವಾಗುತ್ತದೆ ಎಂದರು.
ಧರ್ಮ ಕೇಂದ್ರದಿಂದ ಒಟ್ಟು ೧೧ ಸಮುದಾಯಗಳು ವಿವಿಧ ರೀತಿಯ ಕಾರ್ಯಕ್ರಮಗಳನ್ನು ನೀಡಿ ಸ್ಪರ್ಧಿಸಿದವು. ನಿರ್ಮಲ ಮಾತೆ ಸಮುದಾಯ ಪ್ರಥಮ ಮತ್ತು ಆರೋಗ್ಯ ಮಾತೆ ಸಮುದಾಯ ದ್ವಿತೀಯ ಬಹುಮಾನಗಳನ್ನು ಪಡೆದುಕೊಂಡವು.
ಸಮುದಾಯದ ನಿರ್ದೇಶಕಿ ಸಿಸ್ಟರ್ ಬರ್ನಿ, ನಿರ್ಮಲ ಆಸ್ಪತ್ರೆ ಸುಪೀರಿಯರ್ ಸಿಸ್ಟರ್ ವಿಲ್ಮಾ, ಧರ್ಮಭಗಿನಿಯರು, ಸಮುದಾಯ ಒಕ್ಕೂಟಗಳ ಸದಸ್ಯರು, ಪಾಲನಾ ಪರಿಷತ್, ಆರ್ಥಿಕ ಸಮಿತಿಯ ಸದಸ್ಯರು ಮತ್ತು ಭಕ್ತಾಧಿಗಳು ಪಾಲ್ಗೊಂಡಿದ್ದರು.