Thursday, November 21, 2024

ದಲಿತ ಮುಖಂಡ ಕುಪ್ಪಸ್ವಾಮಿ ನಿಧನ

ಕುಪ್ಪಸ್ವಾಮಿ
ಭದ್ರಾವತಿ: ನಗರದ ಬಿ.ಎಚ್ ರಸ್ತೆ, ಅಂಬೇಡ್ಕರ್ ನಗರದ ನಿವಾಸಿ, ದಲಿತ ಮುಖಂಡ ಕುಪ್ಪಸ್ವಾಮಿ(೬೨) ನಿಧನ ಹೊಂದಿದರು. 
    ಪತ್ನಿ, ಪುತ್ರಿ ಹಾಗು ಪುತ್ರ ಇದ್ದಾರೆ. ಇವರ ಅಂತ್ಯಕ್ರಿಯೆ ಗುರುವಾರ ಲೋಯರ್ ಹುತ್ತಾ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಸುಮಾರು ೩ ದಶಕಗಳಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. 
    ಇವರ ನಿಧನಕ್ಕೆ ದಲಿತ ಸಂಘರ್ಷ ಸಮಿತಿ ಮುಖಂಡರಾದ ಸತ್ಯ ಭದ್ರಾವತಿ, ಚಿನ್ನಯ್ಯ ಸೇರಿದಂತೆ ಇನ್ನಿತರರ ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಶಾಸ್ತ್ರ ಹೇಳುವ ನೆಪದಲ್ಲಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ, ನಗದು ವಂಚನೆ

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುಮಾರು ೪ ತಿಂಗಳ ನಂತರ ದೂರು ದಾಖಲು 

    ಭದ್ರಾವತಿ :  ಶಾಸ್ತ್ರ ಹೇಳುವ ನೆಪದಲ್ಲಿ ಮನೆಗೆ ಆಗಮಿಸಿ ಲಕ್ಷಾಂತರ ರು. ನಗದು, ಚಿನ್ನಾಭರಣ ಪಡೆದು ವಂಚಿಸಿರುವ ಘಟನೆ ತಾಲೂಕಿನ ಎರಡು ಗ್ರಾಮಗಳಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 
    ತಾಲೂಕಿನ ಹಳೇ ಕೂಡ್ಲಿಗೆರೆ ಗ್ರಾಮದ ಎಚ್. ಮಹೇಶ್ ಎಂಬುವರ ಮನೆಗೆ ಯಾರೋ ಒಬ್ಬ ವ್ಯಕ್ತಿ ಶಾಸ್ತ್ರ ಹೇಳುವವನಾಗಿ ಪರಿಚಯವಾಗಿ ಮನೆಯ ಸಮಸ್ಯೆಯನ್ನು ಬಗೆಹರಿಸಿಕೊಡುವುದಾಗಿ ನಂಬಿಸಿ ಜು.೨೨ರಂದು ಆಗಮಿಸಿದ್ದು,  ಮನೆಯವರಿಂದ ಸುಮಾರು ೩ ಲಕ್ಷ ರು. ಮೌಲ್ಯದ ೪೭ ಗ್ರಾಂ. ತೂಕದ ಆಭರಣಗಳನ್ನು ತೆಗೆದುಕೊಂಡು ಪೆಟ್ಟಿಗೆಯಲ್ಲಿಟ್ಟಂತೆ ಮಾಡಿ ಮನೆಯ ಕೋಣೆಯಲ್ಲಿ ಇಟ್ಟು ತಾನೊಬ್ಬನೆ ಹೋಗಿ ಪೂಜೆ ಮಾಡಿ ೪೧ ದಿನಗಳ ಬಳಿಕ ಬೀಗವನ್ನು ತೆಗೆಯಬೇಕು ಹಾಗೂ ಪ್ರತಿನಿತ್ಯ ಪೂಜೆ ಮಾಡುವಂತೆ ತಿಳಿಸಿರುತ್ತಾರೆ. ೪೧ ದಿನಗಳ ನಂತರ ಮನೆಯವರು ಆ ವ್ಯಕ್ತಿಗೆ ಪೋನ್ ಮಾಡಿದಾಗ ಪೋನ್ ಸ್ವಿಚ್ ಆಫ್ ಆಗಿದ್ದು, ಅನುಮಾನದ ಮೇರೆಗೆ ಪೆಟ್ಟಿಗೆಯ ಬೀಗ ತೆಗೆದಾಗ ಯಾವುದೋ ನಕಲಿ ಆಭರಣಗಳನ್ನು ಇಟ್ಟು ಮೋಸಮಾಡಿರುವುದು ತಿಳಿದು ಬಂದಿದೆ. 
    ಈ ಹಿನ್ನಲೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳುವಾದ ಆಭರಣಗಳನ್ನು ಹಾಗೂ ೧.೫ ಲಕ್ಷ ರು. ನಗದು ಹಣ ವಾಪಸ್ ದೊರಕಿಸಿಕೊಡಬೇಕಾಗಿ ನ.೨೦ರಂದು ದೂರು ನೀಡಲಾಗಿದೆ. 
    ಮತ್ತೊಂದು ಪ್ರಕರಣದಲ್ಲಿ ತಾಲೂಕಿನ ಅತ್ತಿಗುಂದ ಗ್ರಾಮದ  ದೇವೇಂದ್ರಪ್ಪ  ಎಂಬುವರ ಮನೆಗೆ  ಯಾರೋ ಒಬ್ಬ ವ್ಯಕ್ತಿ ಶಾಸ್ತ್ರ ಹೇಳುವವನಾಗಿ ಪರಿಚಯವಾಗಿದ್ದು, ನಿಮ್ಮ ಮನೆಯ ಎಲ್ಲಾ ಸಮಸ್ಯೆ ಬಗೆಹರಿಸಲು ಪೂಜೆ ಮಾಡುವುದಾಗಿ ಅದಕ್ಕಾಗಿ ೪೦ ತೊಲ ಬಂಗಾರ ಹಾಗು ನಗದು ಹಣ ಪೂಜೆಗೆ ಇಡಲು ತಿಳಿಸಿರುತ್ತಾನೆ. ಆತನನ್ನು ನಂಬಿ ಮನೆಯವರು ಬಂಗಾರವನ್ನು ನೀಡಿದ್ದಾರೆ.  ಮನೆಯ ಕೋಣೆಯಲ್ಲಿ ಈತನೊಬ್ಬನೆ ಹೋಗಿ ಪೂಜೆ ಮಾಡಿದ್ದು, ಬಂಗಾರವನ್ನು ಪೆಟ್ಟಿಗೆಯಲ್ಲಿಟ್ಟು ಬೀಗ ಹಾಕಿ ೪೮ ದಿನಗಳ ಕಾಲ ಪೂಜೆಮಾಡಬೇಕು ಹಾಗು ಅಲ್ಲಿಯವರೆಗೂ ಯಾರೂ ಬೀಗವನ್ನು ತೆಗೆಯಬಾರದಾಗಿ ತಿಳಿಸಿರುತ್ತಾನೆ. ೪೮ ದಿನಗಳ ನಂತರ ಮನೆಯವರು ಈತನಿಗೆ ಫೋನ್ ಮಾಡಲಾಗಿ ಫೋನ್ ಸ್ವಿಚ್ ಆಫ್ ಬಂದಿದ್ದು, ಅನುಮಾನದ ಮೇರೆಗೆ ಬೀಗವನ್ನು ತೆಗೆದಾಗ ಪೆಟ್ಟಿಗೆ ಖಾಲಿ ಇದ್ದು, ಮೋಸ ಹೋಗಿರುವುದು ತಿಳಿದು ಬಂದಿರುತ್ತದೆ.
    ಈ ಹಿನ್ನಲೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳುವಾದ ಸುಮಾರು ೨೩.೧೦ ಲಕ್ಷ ರು. ಮೌಲ್ಯದ ಆಭರಣಗಳನ್ನು ಹಾಗೂ ೨.೨೫ ಲಕ್ಷ ರು. ನಗದು ದೊರಕಿಸಿಕೊಡಬೇಕಾಗಿ ನ.೨೦ರಂದು ದೂರು ನೀಡಲಾಗಿದೆ.  

ನ.೨೨ರಂದು ಕನ್ನಡ ರಾಜ್ಯೋತ್ಸವ

ಭದ್ರಾವತಿ: ನಗರದ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ನ.೨೨ರಂದು ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಸಂಜೆ ೬ ಗಂಟೆಗೆ  ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. 
ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್, ಸಂಘದ ಗೌರವಾಧ್ಯಕ್ಷ ಮೇಜರ್ ಡಾ. ವಿಕ್ರಮ್ ಕೆದ್ಲಾಯ ಸೇರಿದಂತೆ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡುವಂತೆ ಸಂಘದ ಕಾರ್ಯದರ್ಶಿ ಕೋರಿದ್ದಾರೆ. 

ಮಕ್ಕಳು ತಮ್ಮಲ್ಲಿನ ಪ್ರತಿಭೆಗಳ ಮೂಲಕ ಗುರು, ಹಿರಿಯರ ಮಾರ್ಗದರ್ಶನ, ಸಹಕಾರದಲ್ಲಿ ಗುರಿ ತಲುಪಿ : ಸಿ.ಎನ್ ಉಮೇಶ್

ಭದ್ರಾವತಿ ತಾಲೂಕಿನ ಶ್ರೀಶಾ ಕಲಾ ವೇದಿಕೆ, ಶಂಕರಘಟ್ಟ ವತಿಯಿಂದ ೬೯ನೇ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ಬಿ.ಆರ್ ಪ್ರಾಜೆಕ್ಟ್ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಮುಖರಾದ ದಾಳೇಗೌಡ, ಸಿ.ಎನ್ ಉಮೇಶ್, ಶ್ರೀಧರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 
    ಭದ್ರಾವತಿ: ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ತಮ್ಮಲ್ಲಿನ ಪ್ರತಿಭೆಗಳ ಮೂಲಕ ಗುರು, ಹಿರಿಯರ ಮಾರ್ಗದರ್ಶನ, ಸಹಕಾರ ಪಡೆದು ಗುರಿ ತಲುಪಬೇಕೆಂದು ಸಿರಗನ್ನಡ ವೇದಿಕೆ ರಾಜ್ಯ ಸಮಿತಿ ಉಪಾಧ್ಯಕ್ಷ ಸಿ.ಎನ್ ಉಮೇಶ್ ಹೇಳಿದರು. 
    ತಾಲೂಕಿನ ಶ್ರೀಶಾ ಕಲಾ ವೇದಿಕೆ, ಶಂಕರಘಟ್ಟ ವತಿಯಿಂದ ೬೯ನೇ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ಬಿ.ಆರ್ ಪ್ರಾಜೆಕ್ಟ್ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 
    ಮಕ್ಕಳು ಚನ್ನಾಗಿ ಓದಿ ವಿದ್ಯಾವಂತರಾಗಿ, ಪಾಠ, ಪಠ್ಯೇತರ ಚಟುವಟಿಕೆಗಳ ಜೊತೆಗೆ ತಮ್ಮಲ್ಲಿನ ಪ್ರತಿಭೆ ಮೂಲಕ ಆಸಕ್ತಿ ಇರುವಂತಹ, ತಮಗೆ ತಿಳಿದಿರುವಂತಹ ಕ್ಷೇತ್ರದಲ್ಲಿಯೇ ಮುಂದುವರೆಯಬೇಕು. ಆ ಮೂಲಕ ದೇಶಕ್ಕೆ, ನಾಡಿಗೆ ಕೀರ್ತಿ ತಂದಿರುವಂತಹ ದಿಜ್ಜಗರ ಸಾಲಿನಲ್ಲಿ ನೀವು ಒಬ್ಬರಾಗಬೇಕೆಂದರು.  
    ಕಾರ್ಯಕ್ರಮದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ೧ ರಿಂದ ೮ ನೇ ತರಗತಿ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಹಾಗೂ ಕ್ರೀಡೆಗಳಲ್ಲಿ ಭಾಗವಹಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾದ ಮತ್ತು ಕನ್ನಡದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ನೀಡಿ ಸನ್ಮಾನಿಸಲಾಯಿತು. 
   ನಿವೃತ್ತ ಅಭಿಯಂತರ, ಪತ್ರ ಸಂಸ್ಕೃತಿ ಸಂಸ್ಥಾಪಕ ದಾಳೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀಶಾ ಕಲಾ ವೇದಿಕೆ ಗೌರವಾಧ್ಯಕ್ಷ ಶ್ರೀಧರ್ ಉಪಸ್ಥಿತರಿದ್ದರು. 
    ವಿದ್ಯಾರ್ಥಿಗಳಾದ ರಕ್ಷಾ ಮತ್ತು ಹಿತಾ ಪ್ರಾರ್ಥಿಸಿ, ಶಿಕ್ಷಕಿ ರಂಜಿತಾ ಕಾರ್ಯಕ್ರಮ ನಿರೂಪಿಸಿದರು. ಆಶಾ ಶ್ರೀಧರ್ ವಂದಿಸಿದರು. ದಾಳೇಗೌಡ ದಂಪತಿ ಹಾಗು ಶಾಲೆಯ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. 

Wednesday, November 20, 2024

ಗಾಂಜಾ ಸೇವನೆ : ಪ್ರಕರಣ ದಾಖಲು


    ಭದ್ರಾವತಿ: ಮಾದಕ ವಸ್ತು ಗಾಂಜಾ ಸೇವನೆ ಮಾಡಿದ್ದ ವ್ಯಕ್ತಿಯೋರ್ವನನ್ನು ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆ ವೃತ್ತದ ಬಳಿ ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ. 
    ಪೇಪರ್‌ಟೌನ್ ಪೊಲೀಸ್ ಠಾಣೆ ಸಿಬ್ಬಂದಿ ಮಂಜುನಾಥ ಮಳ್ಳಿ ನ.೧೭ರಂದು ರಾತ್ರಿ ೭ ಗಂಟೆ ಸಮಯದಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ವ್ಯಕ್ತಿಯೋರ್ವ ಮಾದಕ ವಸ್ತು ಸೇವನೆ ಮಾಡಿರುವಂತೆ ಕಂಡು ಬಂದಿದ್ದು, ಈ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡಬಹುದೆಂಬ ಮುನ್ನಚ್ಚರಿಕೆಯಿಂದ ವಶಕ್ಕೆ ಪಡೆದು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿ ಮಾದಕ ವಸ್ತು ಗಾಂಜಾ ಸೇವನೆ ದೃಢಪಟ್ಟ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
: 9482007466

ಇಸ್ಪೀಟ್ ಜೂಜಾಟ ಅಡ್ಡೆ ಮೇಲೆ ದಾಳಿ : ಪ್ರಕರಣ ದಾಖಲು


    ಭದ್ರಾವತಿ: ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಅಡ್ಡೆಯೊಂದರ ಮೇಲೆ ದಾಳಿ ನಡೆಸಿ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ. 
    ಹಳೇನಗರದ ಪೊಲೀಸ್ ಠಾಣೆ ಸಿಬ್ಬಂದಿ ಪ್ರಪುಲ್ ಕುಮಾರ್‌ರವರು ನ.೧೭ರಂದು ಗಸ್ತು ಕರ್ತವ್ಯದಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ಜಟ್‌ಪಟ್ ನಗರದ ರಸ್ತೆ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ ೬ ಜನರ ತಂಡ ಇಸ್ಪೀಟ್ ಜೂಜಾಟದಲ್ಲಿ ತೊಡಗಿರುವುದು ಕಂಡು ಬಂದಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ವ್ಯವಸಾಯೋತ್ಪನ್ನ, ಹಾಲು ಉತ್ಪಾದಕರ ಸಹಕಾರ ಸಂಘಗಳು ರೈತರಿಗೆ ಹೆಚ್ಚಿನ ಸಹಕಾರಿ : ಎಚ್.ಎನ್ ವಿದ್ಯಾಧರ

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಹಾಲು ಒಕ್ಕೂಟ ನಿಯಮಿತ ಹಾಗು ಸಹಕಾರ ಇಲಾಖೆ ವತಿಯಿಂದ ಭದ್ರಾವತಿ ನಗರದ ತರೀಕೆರೆ ರಸ್ತೆಯ ಪಾಂಡುರಂಗ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ೭೧ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭ ಶಿವಮೊಗ್ಗ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಎಚ್.ಎನ್ ವಿದ್ಯಾಧರ ಉದ್ಘಾಟಿಸಿದರು. 
    ಭದ್ರಾವತಿ: ವ್ಯವಸಾಯೋತ್ಪನ್ನ ಸಹಕಾರ ಸಂಘಗಳು ಹಾಗು ಹಾಲು ಉತ್ಪಾದಕರ ಸಹಕಾರ ಸಂಘಗಳು ರೈತರಿಗೆ ಹೆಚ್ಚಿನ ಸಹಕಾರಿಗಳಾಗಿವೆ. ಈ ಹಿನ್ನಲೆಯಲ್ಲಿ ಈ ಎರಡೂ ಸಹಕಾರಗಳನ್ನು ಹೆಚ್ಚು ಬಲಪಡಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ಶಿವಮೊಗ್ಗ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಎಚ್.ಎನ್ ವಿದ್ಯಾಧರ ಹೇಳಿದರು. 
    ಅವರು ಬುಧವಾರ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಹಾಲು ಒಕ್ಕೂಟ ನಿಯಮಿತ ಹಾಗು ಸಹಕಾರ ಇಲಾಖೆ ವತಿಯಿಂದ ನಗರದ ತರೀಕೆರೆ ರಸ್ತೆಯ ಪಾಂಡುರಂಗ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ೭೧ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 
    ಸಮಾಜದಲ್ಲಿ ಸಹಕಾರ ಸಂಘಗಳ ಕೊಡುಗೆ ಹೆಚ್ಚಿನದ್ದಾಗಿದೆ. ಅದರಲ್ಲೂ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ವ್ಯವಸಾಯೋತ್ಪನ್ನ ಸಹಕಾರ ಸಂಘಗಳು ಹಾಗು ಹೈನುಗಾರಿಕೆಗೆ ಸಹಕಾರಿಯಾಗಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳು ರೈತರನ್ನು ಆರ್ಥಿಕವಾಗಿ ಬಲಪಡಿಸುವಲ್ಲಿ ನೆರವಾಗುತ್ತಿವೆ. ಅಲ್ಲದೆ ಉಳಿದಂತೆ ಎಲ್ಲಾ ರೀತಿಯ ಸಹಕಾರ ಸಂಘಗಳಿಂದ ಹಲವಾರು ರೀತಿಯ ಪ್ರಯೋಜನಗಳಾಗುತ್ತಿವೆ ಎಂದರು. 
    ಸಹಕಾರ ಸಂಘಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಲು ಸಮರ್ಥ ನಾಯಕತ್ವದ ಅಗತ್ಯವಿದೆ. ಪ್ರತಿಯೊಬ್ಬರು ಸಂಘದ ಏಳಿಗೆಗಾಗಿ ಶ್ರಮಿಸಬೇಕಾಗುತ್ತದೆ. ಅದರಲ್ಲೂ ಕಾರ್ಯ ಚಟುವಟಿಕೆಗಳಲ್ಲಿ ಪಾರದರ್ಶಕತೆ ಹೊಂದಿರಬೇಕು. ಇವೆಲ್ಲವನ್ನೂ ಸಹ ಸಮಾಜದಲ್ಲಿರುವವರು ಗಮನಿಸುತ್ತಿರುತ್ತಾರೆ. ಅಲ್ಲದೆ ಸಂಘದ ಮೇಲೆ ವಿಶ್ವಾಸ ಹೊಂದುವ ಜೊತೆಗೆ ಅದರಲ್ಲಿ ಭಾಗಿಯಾಗುತ್ತಾರೆ ಎಂದರು. 
    ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ ಮರಿಯಪ್ಪ, ಶಿವಮೊಗ್ಗ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕರಾದ ಡಿ. ಆನಂದ್, ಎಸ್. ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸಿ. ಹನುಮಂತು, ಬಿ.ಆರ್ ದಶರಥಗಿರಿ, ಜಿಲ್ಲಾ ಯೂನಿಯನ್ ಬ್ಯಾಂಕ್ ನಿರ್ದೇಶಕರಾದ ಟಿ.ಎಸ್ ದುಗ್ಗೇಶ್, ಗೊಂದಿ ಜಯರಾಂ, ರಾಜ್ಯ ಸಹಕಾರ ಅಡಕೆ ಮಾರಾಟ ಮಹಾಮಂಡಳ ನಿರ್ದೇಶಕ ಎಚ್.ಎನ್ ನಾಗರಾಜ್, ಪಿಎಲ್‌ಡಿ ಅಧ್ಯಕ್ಷ ವಿರುಪಾಕ್ಷಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಟಿ ನಾಗರಾಜ್, ರಾಮ್ಕೋಸ್ ಅಧ್ಯಕ್ಷ ಬಿ.ಜಿ ಜಗದೀಶ್ ಗೌಡ, ಭದ್ರಾ ಕುರಿ ಮೇಕೆ ಉಣ್ಣೆ ಸಹಕಾರ ಸಂಘದ ಅಧ್ಯಕ್ಷ ಬಿ.ಎಚ್ ವಸಂತ್, ಸಹಕಾರ ಸಂಘಗಳ ಉಪನಿಬಂಧಕ ನಾಗಭೂಷಣ ಸಿ. ಕಲ್ಮನೆ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕ ತೇಜೋಮೂರ್ತಿ, ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಒಕ್ಕೂಟದ ಅಧ್ಯಕ್ಷ ಟಿ.ಆರ್ ಸಂಗಯ್ಯ ಹಾಗು ಸಹಕಾರ ಸಂಘಗಳ ಸಹಾಯಕ ನಿಬಂಧಕ ಟಿ.ಎ ಶ್ರೀನಿವಾಸ್, ಮೋಹನ್, ಗಿರಿಯಪ್ಪ, ಕಾಂತರಾಜ್, ದೇವಿಕುಮಾರ್, ವೀರಮ್ಮ, ಕುಬೇಂದ್ರಪ್ಪ, ಈಶ್ವರಪ್ಪ, ಮುರಳಿಧರ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ವಾಟಗೋಡು ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಚ್.ಎಸ್ ಸಂಜೀವಕುಮಾರ್ ಸ್ವಾಗತಿಸಿದರು. ಗೀತಾ ತಂಡದವರು ಪ್ರಾರ್ಥಿಸಿ, ನಿರ್ದೇಶಕ ಅರಕೆರೆ ಎಚ್.ಎಲ್ ಷಡಾಕ್ಷರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಂ. ವಿರುಪಾಕ್ಷಪ್ಪ ಕಾರ್ಯಕ್ರಮ ನಿರೂಪಿಸಿದರು.