Tuesday, November 26, 2024

ಬಾರಂದೂರು ಗ್ರಾಮ ಪಂಚಾಯಿತಿ ಉಪ ಚುನಾವಣೆ : ಕಿರಣ್ ಗೆಲುವು

ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ೧ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಕಿರಣ್ ಗೆಲುವು ಸಾಧಿಸಿದ್ದಾರೆ. 
ಭದ್ರಾವತಿ : ತಾಲೂಕಿನ ಬಾರಂದೂರು ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ೧ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಕಿರಣ್ ಗೆಲುವು ಸಾಧಿಸಿದ್ದಾರೆ. 
ಈ ಹಿಂದೆ ಸದಸ್ಯರಾಗಿದ್ದ ಗೋಪಾಲ್ ಬರ್ಗೆ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಒಟ್ಟು ೪ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ನ.೨೩ರಂದು ಮತದಾನ ನಡೆದಿದ್ದು, ಸೋಮವಾರ ಎಣಿಕೆ ನಡೆಯಿತು. ಕಿರಣ್ ೨೧೭ ಮತಗಳನ್ನು ಪಡೆದುಕೊಂಡಿದ್ದು, ಒಟ್ಟು ೧೧೭೦ ಮತಗಳಲ್ಲಿ ೮೨೬ ಮತಗಳು ಚಲಾವಣೆಯಾಗಿದ್ದವು. 
ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಿರಣ್‌ರವರನ್ನು ಯುವ ಮುಖಂಡ ಬಿ.ಎಸ್ ಬಸವೇಶ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಅಭಿನಂದಿಸಿದ್ದಾರೆ.  

ಪಿ.ಟಿ.ಸಿ.ಎಲ್ ಕಾಯ್ದೆ ನಿರ್ಲಕ್ಷಿಸುವ, ಮನಸ್ಸಿಗೆ ಬಂದಂತೆ ಆದೇಶಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ

ಪಿ.ಟಿ.ಸಿ.ಎಲ್ ಕಾಯ್ದೆ ನಿರ್ಲಕ್ಷಿಸುವ ಜೊತೆಗೆ ಉಲ್ಲಂಘನೆ ಮಾಡುತ್ತಿರುವ ಹಾಗು ಮನಸ್ಸಿಗೆ ಬಂದಂತೆ ಆದೇಶಿಸುತ್ತಿರುವ ಅಧಿಕಾರಿಗಳ ವಿರುದ್ಧ ಜಾತಿನಿಂದನೆ(ಅಟ್ರಾಸಿಟಿ) ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭದ್ರಾವತಿಯಲ್ಲಿ ಮಂಗಳವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ತಾಲೂಕು ಪಂಚಾಯಿತಿ ಮುಂಭಾಗ  ಪ್ರತಿಭಟನಾ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. 
    ಭದ್ರಾವತಿ : ಪಿ.ಟಿ.ಸಿ.ಎಲ್ ಕಾಯ್ದೆ ನಿರ್ಲಕ್ಷಿಸುವ ಜೊತೆಗೆ ಉಲ್ಲಂಘನೆ ಮಾಡುತ್ತಿರುವ ಹಾಗು ಮನಸ್ಸಿಗೆ ಬಂದಂತೆ ಆದೇಶಿಸುತ್ತಿರುವ ಅಧಿಕಾರಿಗಳ ವಿರುದ್ಧ ಜಾತಿನಿಂದನೆ(ಅಟ್ರಾಸಿಟಿ) ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಆಗ್ರಹಿಸಿದರು.
    ಅವರು ಮಂಗಳವಾರ ತಾಲೂಕು ಪಂಚಾಯಿತಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಧರಣಿ ಸತ್ಯಾಗ್ರಹ ನೇತೃತ್ವವಹಿಸಿ ಮಾತನಾಡಿ, ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರು ದೇಶದ ಶೋಷಿತ ಬಡ ವರ್ಗದ ಜನರಿಗಾಗಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಈ ಪೈಕಿ ಪಿಟಿಸಿಎಲ್ ಕಾಯ್ದೆ ಸಹ ಒಂದಾಗಿದೆ. ಈ ಕಾಯ್ದೆಯನ್ನು ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸುರವರು ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದರು. ಈ ಕಾಯ್ದೆ ಪ್ರಕಾರ ಶೋಷಿತ ಬಡ ವರ್ಗದ ಜನರಿಗೆ ಸರ್ಕಾರದಿಂದ ಮಂಜೂರಾದ ಭೂಮಿಯನ್ನು ಸರ್ಕಾರದ ಅನುಮತಿ ಇಲ್ಲದೆ ಯಾರು ಸಹ ಖರೀದಿಸುವಂತಿಲ್ಲ. ಒಂದು ವೇಳೆ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಸಾಲ ನೀಡಿ ಬಲವಂತವಾಗಿ ಭೂಮಿ ಬರೆಸಿಕೊಂಡಿದ್ದಲ್ಲಿ ಅಥವಾ ದಬ್ಬಾಳಿಕೆ ಅಥವಾ ಬೆದರಿಕೆ ಮೂಲಕ ಖರೀದಿಸಿದ್ದಲ್ಲಿ ಪುನಃ ಭೂಮಿಯನ್ನು ಮೂಲ ಮಂಜೂರುದಾರರಿಗೆ ಹಿಂದಿರುಗಿಸಬೇಕು. ಆದರೆ ಕಾಯ್ದೆ ಕುರಿತು ಅರಿವಿದ್ದರೂ ಸಹ ವಿನಾಕಾರಣ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸುವ ಮೂಲಕ ಬಡ ವರ್ಗದವರನ್ನು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವಂತೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. 


    ಈ ನಡುವೆ ಈ ಕಾಯ್ದೆಯನ್ನು ಸಮರ್ಪಕ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿ ವರ್ಗ ವಿಫಲವಾಗುತ್ತಿದ್ದು, ಬಹುತೇಕ ಪ್ರಕರಣಗಳಲ್ಲಿ ಈ ಕಾಯ್ದೆಯನ್ನು ಉಲ್ಲಂಘನೆ ಮಾಡುವ ಜೊತೆಗೆ ಮನಸ್ಸಿಗೆ ಬಂದಂತೆ ಆದೇಶಿಸಲಾಗುತ್ತಿದೆ. ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಬಡ ವರ್ಗದವರನ್ನು ರಕ್ಷಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು. 
    ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ ಪ್ರತಿಭಟನಾ ಧರಣಿ ಸತ್ಯಾಗ್ರಹ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್, ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಹಾಗು ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸುರವರ ಭಾವಚಿತ್ರ ಪುಷ್ಪನಮನ ಸಲ್ಲಿಸಿ ಚಾಲನೆ ನೀಡಿದರು. 
    ಪ್ರಮುಖರಾದ ಅರುಣ್‌ಕುಮಾರ್, ಶಶಿಕುಮಾರ್ ಗೌಡ, ಎನ್. ಮಂಜುನಾಥ್, ವೈ. ಶಶಿಕುಮಾರ್, ಎಂ.ವಿ ಚಂದ್ರಶೇಖರ್, ವಿ ಈರೇಶ್, ಪತ್ರೇಶ್, ಸಂಗಮ್ಮ, ಮಂಜಮ್ಮ, ಸುವರ್ಣಮ್ಮ, ಕಮಲಮ್ಮ, ಗೌರಮ್ಮ, ಟಿ. ಶ್ವೇತ, ಪವಿತ್ರ, ಆಶಾ, ಎಸ್. ಈರೇಶ್, ರುದ್ರೇಶಪ್ಪ, ಸೀನಪ್ಪ, ಚಂದ್ರಮ್ಮ, ನಾಗರತ್ನಮ್ಮ, ಜಯಮ್ಮ, ಲಕ್ಷ್ಮಮ್ಮ,  ಸೇರಿದಂತೆ ಮಾನವ ಹಕ್ಕುಗಳ ಹೋರಾಟ ಸಮಿತಿ ಪದಾಧಿಕಾರಿಗಳು, ಪಿಟಿಸಿಎಲ್ ಕಾಯ್ದೆಯಿಂದ ವಂಚಿತರಾದ ಫಲಾನುಭವಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

Monday, November 25, 2024

ನ.೨೭ರಂದು ಕನ್ನಡ ರಾಜ್ಯೋತ್ಸವ

ಭದ್ರಾವತಿ : ಸಿದ್ಧರೂಢನಗರದ ಡಾ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ೬೯ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.೨೭ರ ಬುಧವಾರ ಸಂಗೀತ ನೃತ್ಯ ಸಂಭ್ರಮ, ವಿವಿಧ ಕ್ಷೇತ್ರಗಳ ಗಣ್ಯರಿಗೆ ಸನ್ಮಾನ ಹಾಗು ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ. 
ಬೆಳಿಗ್ಗೆ ೯ ಗಂಟೆಗೆ ಉದ್ಯಮಿಗಳಾದ ಎ. ಮಾಧು ಮತ್ತು ಮಾದೇವಪ್ಪ ದ್ವಜಾರೋಹರಣ ನೆರವೇರಿಸಲಿದ್ದು, ನಿವೃತ್ತ ಸಹಾಯಕ ಪೊಲೀಸ್ ನಿರೀಕ್ಷಕ ಕೃಷ್ಣಮೂರ್ತಿ, ಡಾ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಸದಸ್ಯರಾದ ಎ. ಸಚ್ಚಿದಾನಂದ ಗುಪ್ತ, ಎಚ್.ಪಿ ಶಿವಪ್ಪ ಮತ್ತು ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಎಸ್.ಆರ್ ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. 
ಸಂಜೆ ೫ ಗಂಟೆಯಿಂದ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ ಹಾಗು ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ. ೬ರಿಂದ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದಾರೆ. ಡಾ. ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಿದ್ದಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದು, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್, ಬಗರ್ ಹುಕುಂ ಸಮಿತಿ ತಾಲೂಕು ಅಧ್ಯಕ್ಷ ಎಸ್. ಮಣಿಶೇಖರ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಯುವ ಮುಖಂಡರಾದ ಬಿ.ಎಸ್ ಗಣೇಶ್, ಬಿ.ಎಸ್ ಬಸವೇಶ್, ಗೋಪಾಲ್, ವೈ. ರೇಣುಕಮ್ಮ, ಆರ್. ಶ್ರೇಯಸ್ಸು, ಬಿ.ಎಂ ಸಂತೋಷ್, ಕಾಂತರಾಜ್, ಎಚ್. ರವಿಕುಮಾರ್, ಬಿ. ಸಿದ್ದಬಸಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. 

ದೇಶದ ಪ್ರಮುಖ ಸ್ವಯಂ ಸೇವಾ ಸಂಸ್ಥೆಗಳ ಸಾಲಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಪ್ರಕಾಶ್ ವೈ. ನಾಯ್ಕ್

ಭದ್ರಾವತಿಯಲ್ಲಿ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿ ಕುರಿತು ಯೋಜನಾಧಿಕಾರಿ ಪ್ರಕಾಶ್ ವೈ. ನಾಯ್ಕ್ ಮಾಹಿತಿ ನೀಡಿದರು.  
    ಭದ್ರಾವತಿ: ೧೯೮೨ರಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ ಸಾಮರ್ಥ್ಯ ವರ್ಧನೆಗಾಗಿ ಪ್ರಾರಂಭಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಮಾರು ೪೦ ವರ್ಷಗಳ ಸುಧೀರ್ಘ ಪ್ರಯಾಣದಲ್ಲಿ ಸ್ವಾವಲಂಬನೆ, ಆರ್ಥಿಕ ಸಾಮರ್ಥ್ಯ, ಕೌಶಲ್ಯಭಿವೃದ್ಧಿಯನ್ನು ಸಬಲೀಕರಣದ ವ್ಯಾಖ್ಯೆಯಲ್ಲಿ ಸೇರಿಸಿಕೊಂಡಿದೆ. ಪ್ರಸ್ತುತ ದೇಶದ ಪ್ರಮುಖ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ ಎಂದು ತಾಲೂಕಿನ ಯೋಜನೆ-೧ರ ಯೋಜನಾಧಿಕಾರಿ  ಪ್ರಕಾಶ್ ವೈ. ನಾಯ್ಕ್ ಹೇಳಿದರು. 
    ಅವರು ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ವೈಖರಿ ಕುರಿತು ಮಾಹಿತಿ ನೀಡಿದರು. ತಾಲೂಕಿನಲ್ಲಿ ೨೦೦೭-೦೮ ರಿಂದ ಸುಮಾರು ೧೭ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮಗಳಲ್ಲಿ ಸುಸ್ಥಿರ ಪ್ರಗತಿಯ ಅನೇಕ ಮಾದರಿಗಳನ್ನು ಪ್ರಾರಂಭಿಸಿದೆ. ತನ್ನ ಪಾಲುದಾರ ಕುಟುಂಬಗಳ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಯು ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಬ್ಯಾಂಕುಗಳು, ವಿಮಾ ಕಂಪನಿಗಳು ಮತ್ತು ಸರ್ಕಾರದ ಪ್ರತಿನಿಧಿಯಾಗಿ ಬಡವರು ಯಾವುದೇ ತೊಂದರೆ ಇಲ್ಲದೆ ಸೌಲಭ್ಯಗಳನ್ನು ಪಡೆಯಲು ನೆರವಿಗನಾಗಿ ಯೋಜನೆಯು ಯಶಸ್ವಿಯಾಗಿದೆ ಎಂದರು. 
    ಸಾಮೂಹಿಕವಾಗಿ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಲು ಗ್ರಾಮಗಳಲ್ಲಿ ಸತ್ಯನಾರಾಯಣ ಪೂಜೆ ಹಾಗೂ ವರಮಹಲಕ್ಷ್ಮಿ ವ್ರತವನ್ನು ಆಯೋಜನೆ ಮಾಡಿ ಜನರಲ್ಲಿ ಧಾರ್ಮಿಕ ಸಂಸ್ಕೃತಿಯ ಮತ್ತು ಸಂಪ್ರದಾಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ೫೧ ಜನ ಸೇವಾಪ್ರತಿನಿಧಿಗಳು, ೩೫ ಜನ ಸಿ.ಎಸ್.ಸಿ ಸೇವಾದಾರರು, ೩೫ ಜನ ಸುವಿಧಾ ಸಹಾಯಕರು, ೨ ಜನ ಶುದ್ಧಗಂಗಾ ಪ್ರೇರೇಕರು ೨೪ ಜನ ಖಾಯಂ ಸಿಬ್ಬಂದಿಗಳು ತಾಲೂಕು ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು. 
    ನ.೨೬ರಿಂದ ಲಕ್ಷ ದೀಪೋತ್ಸವ : 
    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿ ವರ್ಷದಂತೆ ಈ ಬಾರಿ ನ.೨೬ ರಿಂದ ೩೦ರವರೆಗೆ ಲಕ್ಷದೀಪೋತ್ಸವ ಜರುಗಲಿದ್ದು,  ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ನ.೨೯ ಮತ್ತು ೩೦ ರಂದು ೯೨ನೇ ವರ್ಷದ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳು, ವಸ್ತು ಪ್ರದರ್ಶನ, ಲಲಿತ ಕಲಾಗೋಷ್ಠಿ ಹಾಗು ಸಂಗೀತ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಕೋರಿದರು. 
    ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಆರ್ ಬದರಿನಾರಾಯಣ ಶ್ರೇಷ್ಠಿ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ ಮಾತನಾಡಿ, ಯೋಜನೆಯ ಕಾರ್ಯ ವೈಖರಿಗಳನ್ನು ಪ್ರಶಂಸಿಸಿದರು. ಯೋಜನೆ-೨ರ ಯೋಜನಾಧಿಕಾರಿ ಅಜಯ್‌ಕುಮಾರ್ ಉಪಸ್ಥಿತರಿದ್ದರು. 

Sunday, November 24, 2024

ಸರ್ಕಾರದಿಂದ ಮಂಜೂರಾದ ಜಮೀನು ಮೂಲ ವಾರಸುದಾರರಿಗೆ ಬಿಡಿಸಿಕೊಡಲು ಆಗ್ರಹಿಸಿ ಪ್ರತಿಭಟನೆ

ಸರ್ಕಾರದಿಂದ ಪರಿಶಿಷ್ಟ ಜಾತಿ/ಪಂಗಡದವರಿಗೆ ಮಂಜೂರಾಗಿರುವ ಜಮೀನು ನ್ಯಾಯಾಲಯದ ಆದೇಶದಂತೆ ಪಿಟಿಸಿಎಲ್ ಕಾಯ್ದೆಯಡಿ ಮೂಲ ಜಮೀನುದಾರರಿಗೆ ಬಿಡಿಸಿಕೊಡುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ನೇತೃತ್ವದಲ್ಲಿ ಭದ್ರಾವತಿ ತಾಲೂಕಿನ ಹಳ್ಳಿಕೆರೆ ಗ್ರಾಮದಲ್ಲಿ ಪ್ರತಿಭಟನೆ ನಡೆಸಲಾಯಿತು. 
    ಭದ್ರಾವತಿ: ಸರ್ಕಾರದಿಂದ ಪರಿಶಿಷ್ಟ ಜಾತಿ/ಪಂಗಡದವರಿಗೆ ಮಂಜೂರಾಗಿರುವ ಜಮೀನು ನ್ಯಾಯಾಲಯದ ಆದೇಶದಂತೆ ಪಿಟಿಸಿಎಲ್ ಕಾಯ್ದೆಯಡಿ ಮೂಲ ಜಮೀನುದಾರರಿಗೆ ಬಿಡಿಸಿಕೊಡುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. 
    ಹಳ್ಳಿಕೆರೆ ಗ್ರಾಮದ ಸ.ನಂ ೧೪/೬ ರಲ್ಲಿ  ಸೋಮ್ಲಾನಾಯ್ಕ ಬಿನ್ ಭಜನಾನಾಯ್ಕ ರವರಿಗೆ (ಆರ್.ಆರ್ ನಂ.೧೫೨ ರಂತೆ ಆದೇಶ ನಂ.ಜಿ.ಡಿ ೩೫/೫೨-೫೩ ದಿನಾಂಕ: ೨೮-೧೧-೧೯೫೬ರ ರೀತ್ಯಾ ಸಾಗುವಳಿ ಚೀಟಿ ಸಂಖ್ಯೆ ೬೫/೫೬-೫೭) ೪ ಎಕರೆ ಜಮೀನು ೧೦ ವರ್ಷ ಪರಭಾರೆ ಮಾಡಬಾರದೆಂಬ ನಿಬಂಧನೆಗಳಿಗೆ ಒಳಪಟ್ಟು ದರಖಾಸ್ತಿನಡಿ ಮಂಜೂರಾಗಿತ್ತು. 
    ಸೋಮ್ಲಾನಾಯ್ಕ ಅವರಿಗೆ ಮಂಜೂರಾದ ಈ ಜಮೀನನ್ನು ಇತರೆ ವ್ಯಕ್ತಿಗಳು ಖರೀದಿಸಿದ್ದು, ಪಿಟಿಸಿಎಲ್ ಕಾಯ್ದೆಯಡಿ ಸರ್ಕಾರದ ಅನುಮತಿ ಇಲ್ಲದೆ ಜಮೀನು ಖರೀದಿಸುವಂತಿಲ್ಲ. ಈ ಹಿನ್ನಲೆಯಲ್ಲಿ ಜಮೀನಿನ ಸಂಬಂಧ ಉಪ ವಿಭಾಗಾಧಿಕಾರಿಗಳ ಪ್ರಾಧಿಕಾರದಲ್ಲಿ ವಿಚಾರಣೆ ನಡೆದು ಪಿ.ಟಿ.ಸಿ.ಎಲ್.ಸಿ ಆರ್.೦೬/೮೧-೮೨ ರ ದಿನಾಂಕ: ೨೪-೦೧-೧೯೮೬ ರಂತೆ ಆದೇಶವಾಗಿದ್ದು, ಈ ಆದೇಶದಂತೆ ಅಂದಿನಿಂದ ಇಂದಿನವರೆಗೂ ವಾರಸುದಾರರಿಗೆ ಜಮೀನಿನ ಸ್ವಾಧೀನತೆಯನ್ನು ಬಿಡಿಸಿಕೊಟ್ಟಿರುವುದಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. 
    ಈ ಸಂಬಂಧ ಉಪ ವಿಭಾಗಾಧಿಕಾರಿಗಳಿಗೆ ಜಮೀನು ಬಿಡಿಸಿಕೊಡುವಂತೆ ಮನವಿ ಸಲ್ಲಿಸಲಾಗಿತ್ತು. ಈ ಕುರಿತು ತಾಲೂಕು ಆಡಳಿತಕ್ಕೆ ನಿರ್ದೇಶನ ನೀಡಲಾಗಿದೆ. ಆದರೆ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ತಕ್ಷಣ ಜಮೀನು ಮೂಲ ಜಮೀನುದಾರರಿಗೆ ಬಿಡಿಸಿಕೊಡುವಂತೆ ಆಗ್ರಹಿಸಿದರು. 
    ಬಂಜಾರ ರೈತ ಸಂಘದ ರಾಜ್ಯಾಧ್ಯಕ್ಷ ಕೃಷ್ಣಾ ನಾಯ್ಕ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಎಚ್ ಹಾಲೇಶಪ್ಪ ಸೇರಿದಂತೆ ದಲಿತ ಮುಖಂಡರು, ಜಮೀನಿನ ಮೂಲ ವಾರಸುದಾರ ಕುಟುಂಬದವರು, ಸ್ಥಳೀಯರು ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ನ.೨೫ರಂದು ರಕ್ತದಾನ-ರಕ್ತ ಗುಂಪು ತಪಾಸಣೆ ಶಿಬಿರ



    ಭದ್ರಾವತಿ: ನಗರದ ಬಿ.ಎಚ್ ರಸ್ತೆ, ಕಡದಕಟ್ಟೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ) ಮತ್ತು ಶಿವಮೊಗ್ಗ ರೋಟರಿ ರಕ್ತ ನಿಧಿ ಸಹಯೋಗದೊಂದಿಗೆ ದಿವಂಗತ ಡಾ. ಪಿ. ಪ್ರವೀಣ್ ಮತ್ತು ದಿವಂಗತ ಆರ್. ನಾರಾಯಣಸ್ವಾಮಿ ನಾಯ್ಡು ಸ್ಮರಣಾರ್ಥವಾಗಿ ನ.೨೫ರಂದು ರಕ್ತದಾನ ಹಾಗು ರಕ್ತ ಗುಂಪು ತಪಾಸಣೆ ಶಿಬಿರ ಆಯೋಜಿಸಲಾಗಿದೆ. 
    ಐಟಿಐ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ಸ್ವಯಂ ಪ್ರೇರಿತ ರಕ್ತದಾನ ಹಾಗು ರಕ್ತ ಗುಂಪು ತಪಾಸಣೆ ಶಿಬಿರ ಬೆಳಿಗ್ಗೆ ೮.೩೦ ರಿಂದ ಮಧ್ಯಾಹ್ನ ೨ ಗಂಟೆವರೆಗೆ ನಡೆಯಲಿದ್ದು, ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಶಿಬಿರ ಉದ್ಘಾಟಿಸಲಿದ್ದಾರೆ. 
    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ಐಟಿಐ ಆಡಳಿತಾಧಿಕಾರಿ ಎಸ್.ಎಲ್ ರಂಗನಾಥ್, ದಾನಿಗಳಾದ ಇಂಜಿನಿಯರ್ ಟಿ. ಪುಷ್ಪರಾಜ್ ಮತ್ತು ಆಲೆಮನೆ ಮಾಲೀಕ ಎನ್. ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಐಟಿಐ ಪ್ರಾಚಾರ್ಯ ಕಾಳಿದಾಸ ನಾಯ್ಕ ಅಧ್ಯಕ್ಷತೆ ವಹಿಸಲಿದ್ದು, ಶಿಬಿರ ಯಶಸ್ವಿಗೊಳಿಸಲು ಕೋರಲಾಗಿದೆ. 

ಶ್ರೀ ರವೀಂದ್ರನಾಥ ಠಾಗೂರ್ ಆಟೋ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವ

ಭದ್ರಾವತಿ ನಗರದ ಜನ್ನಾಪುರ ಜಯಶ್ರೀ ಕಲ್ಯಾಣ ಮಂದಿರ ಮುಂಭಾಗದ ಶ್ರೀ ರವೀಂದ್ರನಾಥ ಠಾಗೂರ್ ಆಟೋ ನಿಲ್ದಾಣದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ಭಾನುವಾರ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. 
    ಭದ್ರಾವತಿ: ನಗರದ ಜನ್ನಾಪುರ ಜಯಶ್ರೀ ಕಲ್ಯಾಣ ಮಂದಿರ ಮುಂಭಾಗದ ಶ್ರೀ ರವೀಂದ್ರನಾಥ ಠಾಗೂರ್ ಆಟೋ ನಿಲ್ದಾಣದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ಭಾನುವಾರ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. 
    ಬೆಳಿಗ್ಗೆ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಲಾಯಿತು. ಈ ಬಾರಿ ವಿಶೇಷವಾಗಿ ಜನ್ನಾಪುರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ನಗರಸಭೆ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಅನ್ನಸಂತರ್ಪಣೆ ನೆರವೇರಿತು. 
    ಪ್ರಮುಖರಾದ ರಮೇಶ್ ನಾಯ್ಕ, ಪರಮೇಶ್, ಶಿವು, ಕಂಠ, ಸತೀಶ್, ಸೋಮಣ್ಣ, ರಾಜು, ವೆಂಕಟೇಶ್, ಎ.ಎನ್ ಬಸವರಾಜ್, ಪರಶುರಾಮ್, ವಿನೋದ್, ಬಾಬು, ಉದಯ್, ಸದಾನಂದ ಮತ್ತು ಮೋಹನ್ ಕುಮಾರ್ ಹಾಗು ಸ್ಥಳೀಯರು ಉಪಸ್ಥಿತರಿದ್ದರು.