Monday, February 3, 2025

ಕಲಾವಿದ ವೈ.ಕೆ ಹನುಮಂತಯ್ಯರಿಗೆ ಗೌರವ ಡಾಕ್ಟರೇಟ್ ಪದವಿ


ಭದ್ರಾವತಿ ನಗರದ ರಂಗಭೂಮಿ ಹಾಗೂ ಚಲನಚಿತ್ರ ಕಿರುತೆರೆ ನಟ ವೈ.ಕೆ ಹನುಮಂತಯ್ಯರವರ ಕಲಾ ಸೇವೆಯನ್ನು ಪರಿಗಣಿಸಿ ಹೊಸೂರಿನ ಏಷ್ಯಾ ಇಂಟರ್‌ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. 
    ಭದ್ರಾವತಿ: ನಗರದ ರಂಗಭೂಮಿ ಹಾಗೂ ಚಲನಚಿತ್ರ ಕಿರುತೆರೆ ನಟ ವೈ.ಕೆ ಹನುಮಂತಯ್ಯರವರ ಕಲಾ ಸೇವೆಯನ್ನು ಪರಿಗಣಿಸಿ ಹೊಸೂರಿನ ಏಷ್ಯಾ ಇಂಟರ್‌ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. 
    ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ಸಕ್ಕರೆ ಘಟಕದಲ್ಲಿ ಸುಮಾರು ೨೯ ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ವೈ.ಕೆ ಹನುಮಂತಯ್ಯರವರು ಸುಮಾರು ೫ ದಶಕಗಳಿಂದ ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡಿದ್ದು, ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹಾಗು ಜಾನಪದ ಸೇರಿದಂತೆ ಒಟ್ಟು ೬೦ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇವರ ಅಭಿನಯದ ನಾಟಕಗಳು ಸುಮಾರು ೧೮೦ ಬಾರಿ ಪ್ರದರ್ಶನಗೊಂಡಿವೆ. ಅಲ್ಲದೆ ಹನುಮಂತಯ್ಯರವರು ನೃತ್ಯ ಕಲಾವಿದರಾಗಿದ್ದು, ಎಲ್ಲಾ ಪ್ರಕಾರದ ನೃತ್ಯಗಳನ್ನು ಪ್ರದರ್ಶಿಸಿದ್ದಾರೆ. 
    ೨೫೦ಕ್ಕೂ ಹೆಚ್ಚು ಬೀದಿ ನಾಟಕಗಳಲ್ಲಿ ಅಭಿನಯಿಸಿದ್ದು, ಚಲನಚಿತ್ರ ಕಿರುತೆರೆ ನಟರಾಗಿದ್ದಾರೆ. ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರಿಗೆ ಜಿಲ್ಲಾ ಹಾಗು ರಾಜ್ಯಮಟ್ಟದ ಹಲವಾರು ಪ್ರಶಸ್ತಿಗಳು ಲಭಿಸಿವೆ. ಇವರ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಲಾಗಿದೆ.  ನಗರದ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು ಅಭಿನಂದಿಸಿದ್ದಾರೆ. 

ವಿಇಎಸ್ ವಿದ್ಯಾಸಂಸ್ಥೆಯಲ್ಲಿ ಸಾಂಸ್ಕೃತಿಕ ದಿನಾಚರಣೆ, ಅಭಿನಂದನಾ ಕಾರ್ಯಕ್ರಮ

ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯದಲ್ಲೇ ಏಕೈಕ ವಿದ್ಯಾಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಭದ್ರಾವತಿ ನಗರದ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಸಾಂಸ್ಕೃತಿಕ ದಿನಾಚರಣೆ ಹಾಗೂ ಅಭಿನಂದನಾ ಕಾರ್ಯಕ್ರಮ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್ ಉದ್ಘಾಟಿಸಿದರು. 
    ಭದ್ರಾವತಿ : ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯದಲ್ಲೇ ಏಕೈಕ ವಿದ್ಯಾಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ನಗರದ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಸಾಂಸ್ಕೃತಿಕ ದಿನಾಚರಣೆ ಹಾಗೂ ಅಭಿನಂದನಾ ಕಾರ್ಯಕ್ರಮ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್ ಉದ್ಘಾಟಿಸಿದರು. 
    ವಿದ್ಯಾಸಂಸ್ಥೆ ಅಧ್ಯಕ್ಷ ಬಿ. ಸಿದ್ದಬಸಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾ ಸಂಸ್ಥೆ ಆಡಳಿತ ಮಂಡಳಿಯ ನೂತನ ಪದಾಧಿಕಾರಿಗಳು ಹಾಗೂ ನಿರ್ದೇಶಕರನ್ನು ಮತ್ತು ಸಂಸ್ಥಾಪಕರಾದ ಬಿ.ಎಲ್ ರಂಗಸ್ವಾಮಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಬಿ. ಇಡಿ ವಿಭಾಗಗಳಲ್ಲಿ ಅತಿಹೆಚ್ಚು ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಲ್ಲದೆ ರಾಜ್ಯಮಟ್ಟದ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.
    ವಿಧಾನ ಪರಿಷತ್ ಸದಸ್ಯೆ ಬಲ್ಕೀಷ್ ಬಾನು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್ ಷಡಾಕ್ಷರಿ,ಬೆಂಗಳೂರು ಹಾಗೂ ಪ್ರಧಾನ ಪೋಷಕರು, ವಿಶ್ವೇಶ್ವರಾಯ ವಿದ್ಯಾ ಸಂಸ್ಥೆ ಭದ್ರಾವತಿ ಇವರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಿದರು.  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರು(ಆಡಳಿತ) ಎಸ್.ಆರ್ ಮಂಜುನಾಥ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್ ಕುಮಾರ್, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಎಲ್  ಷಡಾಕ್ಷರಿ, ತಹಸೀಲ್ದಾರ್ ಪರುಸಪ್ಪ ಕುರುಬರ, ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ವಿದ್ಯಾಸಂಸ್ಥೆ ಆಡಳಿತ ಅಧಿಕಾರಿ, ಬಿ.ಇಡಿ ವಿಭಾಗದ ಪ್ರಾಂಶುಪಾಲ ಡಾ.ಎಸ್.ಪಿ ರಾಕೇಶ್ ಮತ್ತು ವಿದ್ಯಾಸಂಸ್ಥೆ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ನಿರ್ದೇಶಕರುಗಳು, ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು, ಪೋಷಕರು ಉಪಸ್ಥಿತರಿದ್ದರು. 
ವಿದ್ಯಾ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಎಸ್.ಕೆ ಮೋಹನ್ ಸ್ವಾಗತಿಸಿ, ನಿರ್ದೇಶಕ ಬಿ. ಚೆನ್ನಯ್ಯ ಕಾರ್ಯಕ್ರಮ ನಿರೂಪಿಸಿದರು.  ಖಜಾಂಚಿ ಕೆ.ಆರ್ ಪ್ರಶಾಂತ್ ರವರು  ವಂದಿಸಿದರು. 

Sunday, February 2, 2025

ಶ್ರೀ ಕಾಲಭೈರವೇಶ್ವರ ಸ್ವಾಮಿಯ ನೂತನ ಶಿಲಾಮಯ ದೇವಾಲಯ ಲೋಕಾರ್ಪಣೆ

ಶ್ರೀ ಕಾಲಭೈರವೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ನಗರದ ಬಿ.ಎಚ್ ರಸ್ತೆ, ಕಡದಕಟ್ಟೆಯಲ್ಲಿ ನಿರ್ಮಿಸಲಾಗಿರುವ ಶ್ರೀ ಕಾಲಭೈರವೇಶ್ವರ ಸ್ವಾಮಿಯ ನೂತನ ಶಿಲಾಮಯ ದೇವಾಲಯ ಲೋಕಾರ್ಪಣೆ ಹಾಗು ಸ್ಥಿತಬಿಂಬ ಪ್ರತಿಷ್ಠಾಪನೆ ಹಾಗು ದೀಪಸ್ತಂಭ ಪ್ರತಿಷ್ಠಾಪನಾ ಕಾರ್ಯಕ್ರಮ ಭಾನುವಾರ ವಿಜೃಂಭಣೆಯಿಂದ ಜರುಗಿತು. 
    ಭದ್ರಾವತಿ:  ಶ್ರೀ ಕಾಲಭೈರವೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ನಗರದ ಬಿ.ಎಚ್ ರಸ್ತೆ, ಕಡದಕಟ್ಟೆಯಲ್ಲಿ ನಿರ್ಮಿಸಲಾಗಿರುವ ಶ್ರೀ ಕಾಲಭೈರವೇಶ್ವರ ಸ್ವಾಮಿಯ ನೂತನ ಶಿಲಾಮಯ ದೇವಾಲಯ ಲೋಕಾರ್ಪಣೆ ಹಾಗು ಸ್ಥಿತಬಿಂಬ ಪ್ರತಿಷ್ಠಾಪನೆ ಹಾಗು ದೀಪಸ್ತಂಭ ಪ್ರತಿಷ್ಠಾಪನಾ ಕಾರ್ಯಕ್ರಮ ಭಾನುವಾರ ವಿಜೃಂಭಣೆಯಿಂದ ಜರುಗಿತು. 
    ಗಂಗಾಪೂಜೆ, ಗೋಪೂಜೆ, ಆಲಯ ಪ್ರವೇಶ, ಪಂಚಾಮೃತ ಅಭಿಷೇಕ, ಅಲಂಕಾರ ಪ್ರತಿಷ್ಠಾಪನಾ ಅಂಗವಾಗಿ ಪ್ರತಿಷ್ಠಾಪನಾದಿ ಮೂರ್ತಿ ಹೋಮಗಳು, ಮಹಾ ಪೂರ್ಣಾಹುತಿ, ಅಷ್ಟವದಾನ ಸೇವೆ, ಮಹಾಮಂಗಳಾರತಿ, ಬಿಂಬ ದರ್ಶನ  ಮತ್ತು ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. 
    ಶಿವಮೊಗ್ಗ ಬೆಕ್ಕಿನಕಲ್ಮಠ ಶ್ರೀ ಡಾ. ಮಲ್ಲಿಕಾರ್ಜುನ ಮುರುಗರಾಜೇಂದ್ರ ಸ್ವಾಮೀಜಿ, ಚಿತ್ರದುರ್ಗ ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಹೊಸದುರ್ಗ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮತ್ತು ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಮೇಷ ಲಗ್ನದಲ್ಲಿ ಶ್ರೀಗಳಿಂದ ಆಲಯ ಶಿಲಾಮಯ ದೇವಾಲಯ ಲೋಕಾರ್ಪಣೆಗೊಂಡಿತು. ನಂತರ ಜರುಗಿದ ಧಾರ್ಮಿಕ ಸಭೆಯಲ್ಲಿ ಶ್ರೀಗಳು ಭಕ್ತರಿಗೆ ಆಶೀರ್ವಚನ ನೀಡಿದರು. 
    ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್ ಸುಂದರೇಶ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ವಿಧಾನ ಪರಿಷತ್ ಮಾಜಿ ಸದಸ್ಯ, ಕೈಗಾರಿಕೋದ್ಯಮಿ ಎಸ್. ರುದ್ರೇಗೌಡ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಹೆಗಡೆ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಉದ್ಯಮಿ ಬಿ.ಕೆ ಜಗನ್ನಾಥ್, ಭಾರತಿ ರಾಮಕೃಷ್ಣ ಸೇರಿದಂತೆ ಇನ್ನಿತರರು ಪಾಲ್ಗೊಂಡು ಮಾತನಾಡಿದರು. 
    ಶ್ರೀ ಕಾಲಭೈರವೇಶ್ವರ ದೇವಸ್ಥಾನ ಮತ್ತು ಶ್ರೀ ಕಾಲಭೈರವೇಶ್ವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಲಕ್ಷಣ್‌ಗೌಡರು ಅಧ್ಯಕ್ಷತೆ ವಹಿಸಿದ್ದರು. ಕಾಗದನಗರ ೭ನೇ ವಾರ್ಡ್ ಶ್ರೀ ಕ್ಷೇತ್ರ ನಾಗರಕಟ್ಟೆ ಪ್ರಧಾನ ಅರ್ಚಕ ರಮೇಶ್ ಭಟ್ಟರು ತರಳಿಮಠರವರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. 
    ಮಧ್ಯಾಹ್ನ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ಭದ್ರಾವತಿ-ಶಿವಮೊಗ್ಗ ನಗರ ಹಾಗು ಗ್ರಾಮಾಂತರ ಪ್ರದೇಶಗಳಿಂದ ಭಕ್ತರು ಆಗಮಿಸಿದ್ದರು. 

ಎಲ್ಲಾ ಸಮುದಾಯಗಳಲ್ಲೂ ಸಾಮಾಜಿಕ ನ್ಯಾಯದ ಅಗತ್ಯವಿದೆ : ನಿವೃತ್ತ ನ್ಯಾಯಾಧೀಶ ಬಿಲ್ಲಪ್ಪ

ಭದ್ರಾವತಿ ಹಳೇನಗರದ ಉಪ್ಪಾರ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಭಗೀರಥ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಶ್ರೀ ಭಗೀರಥ ಭಾವಚಿತ್ರ ಅನಾವರಣಗೊಳಿಸಿದ ನಿವೃತ್ತ ನ್ಯಾಯಾಧೀಶ ಬಿಲ್ಲಪ್ಪರವರನ್ನು ಸನ್ಮಾನಿಸಿ ಗೌರವಿಸಲಾಯಿತು. 
ಭದ್ರಾವತಿ: ಸಾಮಾಜಿಕ ನ್ಯಾಯ ಎಂಬುದು ಎಲ್ಲಾ ಸಮುದಾಯಗಳಲ್ಲೂ ಬೇಕು. ಎಲ್ಲರೂ ಸಮಾನವಾಗಿ ಬದುಕಿದಾಗ ಮಾತ್ರ ನೆಮ್ಮದಿ ಕಾಣಲು ಸಾಧ್ಯ ಎಂದು ರಾಜ್ಯ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಬಿಲ್ಲಪ್ಪ ಹೇಳಿದರು. 
ಅವರು ಭಾನುವಾರ ಹಳೇನಗರದ ಉಪ್ಪಾರ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಭಗೀರಥ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಶ್ರೀ ಭಗೀರಥ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದರು. 
ಸಮುದಾಯಗಳನ್ನು ಸಂಘಟಿಸುವುದು ಬಹಳ ಕಷ್ಟದ ಕೆಲಸವಾಗಿದ್ದು, ಈ ನಡುವೆ ಸಮುದಾಯ ಭವನ ನಿರ್ಮಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಭವಿಷ್ಯದಲ್ಲಿ ಈ ಸಮುದಾಯ ಭವನದ ಮಹತ್ವ ಎಲ್ಲರಿಗೂ ಅರಿವಾಗಲಿದೆ ಎಂದರು. 
ಎಲ್ಲಾ ಸಮುದಾಯಗಳಲ್ಲೂ ಸಾಮಾಜಿಕ ನ್ಯಾಯದ ಅಗತ್ಯವಿದೆ. ಎಲ್ಲರೂ ಸಮಾನತೆಯಿಂದ ಬದುಕುಬೇಕು. ಉತ್ತಮ ಸಮಾಜ ನಿರ್ಮಿಸಿಕೊಳ್ಳಬೇಕೆಂಬುದು ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಆಶಯವಾಗಿದೆ. ಈ ನಿಟ್ಟಿನಲ್ಲಿ ಅವರು ನಮಗೆ ತೋರಿಸಿಕೊಟ್ಟಿರುವ ೩ ಪ್ರಮುಖ ಮಾರ್ಗಗಳು ಎಂದರೆ ಶಿಕ್ಷಣ, ಸಂಘಟನೆ ಹಾಗು ಹೋರಾಟ.  ಪ್ರತಿಯೊಬ್ಬರು ಶಿಕ್ಷಣವಂತಾಗಬೇಕು. ಆ ಮೂಲಕ ಭವಿಷ್ಯದ ಬದುಕು ಕಟ್ಟಿಕೊಳ್ಳಬೇಕು. ಕೇವಲ ಉನ್ನತ ಹುದ್ದೆ ಪಡೆದುಕೊಂಡರೆ ಸಾಲದು. ಸಮಾಜಮುಖಿ ಬದುಕು ನಮ್ಮದಾಗಬೇಕು. ಆಗ ಮಾತ್ರ ನಾವು ಪಡೆದ ಶಿಕ್ಷಣ ಸಾರ್ಥಕವಾಗುತ್ತದೆ ಎಂದರು. 
ಸಮಾಜದಲ್ಲಿ ಸಂಘಟನೆ ಇಲ್ಲದೆ ಏನನ್ನು ಸಹ ಮಾಡಲು ಸಾಧ್ಯವಿಲ್ಲ. ಸಂಘಟನೆಯಲ್ಲಿ ಬಲವಿದೆ. ಇದನ್ನು ನಾವುಗಳು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಸಂಘಟನೆ ಮೂಲಕ ಹೋರಾಟ ನಡೆಸಿ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಯಾರು ಸಹ ವೈಯಕ್ತಿಕ ಕಾರಣಗಳಿಗೆ ಸಂಘಟನೆಗಳನ್ನು ಬಲಿ ಕೊಡಬಾರದು ಎಂದರು. 
ನಗರಸಭೆ ಮಾಜಿ ಅಧ್ಯಕ್ಷ, ಹಿರಿಯ ಮುಖಂಡ ಬಿ.ಕೆ ಮೋಹನ್ ಮಾತನಾಡಿ, ಸಮಾಜದವರು ತುಂಬಾ ಶ್ರಮಪಟ್ಟು ಸಮುದಾಯ ಭವನವನ್ನು ನಿರ್ಮಿಸಿದ್ದಾರೆ. ಇದಕ್ಕೆ ಕಾರಣಕರ್ತರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಸಂಘಟನೆಗಳಲ್ಲಿ ಭಿನ್ನಭಿಪ್ರಾಯಗಳು ಸಹಜ ಪ್ರತಿಯೊಬ್ಬರೂ ಸಹ ಎಲ್ಲವನ್ನು ಸಹಿಸಿಕೊಂಡು ಮುಂದೆ ಸಾಗಬೇಕು. ಸಂಘಟನೆಯಲ್ಲಿ ಎಲ್ಲರ ಶ್ರಮ ಮುಖ್ಯವಾಗಿದೆ. ಇಲ್ಲಿ ಯಾರು ಸಹ ದೊಡ್ಡವರು, ಚಿಕ್ಕವರು ಎಂಬುದು ಇಲ್ಲ. ಸಮುದಾಯ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತಷ್ಟು ಬಲಗೊಳ್ಳಬೇಕು ಎಂದರು. 
ಹೊಸದುರ್ಗ ಶ್ರೀ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿದ್ದರು. ವಿಧಾನಪರಿಷತ್ ಸದಸ್ಯೆ ಬಲ್ಕೀಷ್ ಬಾನು, ಶಿವಮೊಗ್ಗ ಕೇಂದ್ರ ಕಾರಗೃಹ ಮುಖ್ಯ ಅಧೀಕ್ಷಕ ಡಾ. ಪಿ. ರಂಗನಾಥ್, ನಿವೃತ್ತ ಕೆಎಎಸ್ ಅಧಿಕಾರಿ ಬಿ. ಭೀಮಪ್ಪ, ತೆರಿಗೆ ಇಲಾಖೆ ನಿವೃತ್ತ ಹೆಚ್ಚುವರಿ ಆಯುಕ್ತ ಜಗನ್ನಾಥ್ ಸಗರ, ಉಪ್ಪಾ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಗಿರೀಶ್ ಉಪ್ಪಾರ, ಶ್ರೀ ಭಗೀರಥ  ಸಹಕಾರ ಸಂಘ ಜಿಲ್ಲಾಧ್ಯಕ್ಷ ಎನ್. ಮಂಜುನಾಥ್, ನಗರಸಭೆ ಸದಸ್ಯರಾದ ಬಿ.ಎಂ ಮಂಜುನಾಥ್, ಅನುಪಮ ಚನ್ನೇಶ್, ಯುವ ಮುಖಂಡ ಬಿ.ಎಸ್ ಗಣೇಶ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
ಉಪ್ಪಾರ ಸಂಘದ ತಾಲೂಕು ಅಧ್ಯಕ್ಷ ರವಿಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಗರಸಭೆ ಮಾಜಿ ಉಪಾಧ್ಯಕ್ಷೆ ವಿದ್ಯಾಶ್ರೀ ಕಾರ್ಯಕ್ರಮ ನಿರೂಪಿಸಿದರು. ಪ್ರಮುಖರರಾದ ರವೀಶ್, ರಾಜಶೇಖರ್ ಉಪ್ಪಾರ, ಶ್ರೀನಿವಾಸ್(ಪೋಟೋ ಗ್ರಾಫರ್), ಕುಮಾರ್, ರಾಮು ಸೇರಿದಂತೆ ತಾಲೂಕು ಸಂಘದ ಪದಾಧಿಕಾರಿಗಳು, ಇನ್ನಿತರ ಸಮಾಜದ ಮುಖಂಡರು, ಗಣ್ಯರು ಪಾಲ್ಗೊಂಡಿದ್ದರು. 
 

ಭದ್ರಾವತಿ ಹಳೇನಗರದ ಉಪ್ಪಾರ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಭಗೀರಥ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಮುದಾಯ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. 

Saturday, February 1, 2025

ಫೆ.೨ರಂದು ಶ್ರೀ ಕಾಲಭೈರವೇಶ್ವರ ಸ್ವಾಮಿಯ ನೂತನ ಶಿಲಾಮಯ ದೇವಾಲಯ ಲೋಕಾರ್ಪಣೆ

    ಭದ್ರಾವತಿ: ನಗರದ ಬಿ.ಎಚ್ ರಸ್ತೆ, ಕಡದಕಟ್ಟೆ, ಶ್ರೀ ಕಾಲಭೈರವೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ಫೆ.೨ರಂದು ಶ್ರೀ ಕಾಲಭೈರವೇಶ್ವರ ಸ್ವಾಮಿಯ ನೂತನ ಶಿಲಾಮಯ ದೇವಾಲಯ ಲೋಕಾರ್ಪಣೆ ಹಾಗು ಸ್ಥಿತಬಿಂಬ ಪ್ರತಿಷ್ಠಾಪನೆ ಹಾಗು ದೀಪಸ್ತಂಭ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ. 
    ಗಂಗಾಪೂಜೆ, ಗೋಪೂಜೆ, ಆಲಯ ಪ್ರವೇಶ, ಪಂಚಾಮೃತ ಅಭಿಷೇಕ, ಅಲಂಕಾರ ಪ್ರತಿಷ್ಠಾಪನಾ ಅಂಗವಾಗಿ ಪ್ರತಿಷ್ಠಾಪನಾದಿ ಮೂರ್ತಿ ಹೋಮಗಳು, ಮಹಾ ಪೂರ್ಣಾಹುತಿ, ಅಷ್ಟವದಾನ ಸೇವೆ, ಮಹಾಮಂಗಳಾರತಿ, ಬಿಂಬ ದರ್ಶನ  ಮತ್ತು ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಲಿವೆ. 
    ಬೆಳಿಗ್ಗೆ ೧೧ ಗಂಟೆಗೆ ಮೇಷ ಲಗ್ನದಲ್ಲಿ ಶ್ರೀಗಳಿಂದ ಆಲಯ ಶಿಲಾಮಯ ದೇವಾಲಯ ಲೋಕಾರ್ಪಣೆಗೊಳ್ಳಲಿದೆ. ಕಾಗದನಗರ ೭ನೇ ವಾರ್ಡ್ ಶ್ರೀ ಕ್ಷೇತ್ರ ನಾಗರಕಟ್ಟೆ ಪ್ರಧಾನ ಅರ್ಚಕ ರಮೇಶ್ ಭಟ್ಟರು ತರಳಿಮಠರವರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಲಿವೆ. ಶ್ರೀ ಕ್ಷೇತ್ರ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲನಂದನಾಥ ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶಿವಮೊಗ್ಗ ಬೆಕ್ಕಿನಕಲ್ಮಠ ಶ್ರೀ ಡಾ. ಮಲ್ಲಿಕಾರ್ಜುನ ಮುರುಗರಾಜೇಂದ್ರ ಸ್ವಾಮೀಜಿ, ಚಿತ್ರದುರ್ಗ ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಹೊಸದುರ್ಗ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮತ್ತು ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. 
    ಶ್ರೀ ಕಾಲಭೈರವೇಶ್ವರ ದೇವಸ್ಥಾನ ಮತ್ತು ಶ್ರೀ ಕಾಲಭೈರವೇಶ್ವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಲಕ್ಷಣ್‌ಗೌಡರು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಬಿ.ಕೆ ಸಂಗಮೇಶ್ವರ್, ಶಾರದಪೂರ್‍ಯಾನಾಯ್ಕ, ಚನ್ನಬಸಪ್ಪ, ಎಸ್.ಎಲ್ ಭೋಜೇಗೌಡ, ಡಿ.ಎಸ್ ಅರುಣ್, ಡಾ. ಧನಂಜಯ ಸರ್ಜಿ, ಬಲ್ಕೀಷ್ ಬಾನು, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ, ಎಚ್.ಎಸ್ ಸುಂದರೇಶ್, ಶಾರದ ಅಪ್ಪಾಜಿ, ಎಸ್. ರುದ್ರೇಗೌಡ, ಎಸ್.ಎಸ್ ಜ್ಯೋತಿ ಪ್ರಕಾಶ್, ಡಿ.ಜಿ ಬೆನಕಪ್ಪ, ರಮೇಶ್ ಹೆಗಡೆ, ಆರ್. ಕರುಣಾಮೂರ್ತಿ, ಎಸ್. ಕುಮಾರ್ ಮತ್ತು ಜಿ. ಧರ್ಮಪ್ರಸಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. 
  ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಟ್ರಸ್ಟ್ ಕೋರಿದೆ. 

ಸದಾಶಿವ ಆಯೋಗದ ವರದಿ, ಉಪ ಸಮಿತಿ ವರದಿ ಮರುವರ್ಗೀಕರಣಗೊಳಿಸಿ : ಮನವಿ

ಭದ್ರಾವತಿ ತಾಲೂಕು ಮೋಚಿಗಾರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಹಾಗೂ ಮಾಧುಸ್ವಾಮಿ ಸಂಪುಟದ ದರ್ಜಿ ಉಪಸಮಿತಿಯ ವರದಿಯ ಮರುವರ್ಗೀಕರಣಗೊಳಿಸುವಂತೆ ಕೋರಿ ತಹಸೀಲ್ದಾರ್ ಪರುಸಪ್ಪ ಕುರುಬರ ಅವರ ಮೂಲಕ ನ್ಯಾಯಮೂರ್ತಿ ಎಚ್.ಎನ್ ನಾಗಮೋಹನ್‌ದಾಸ್ ಏಕಸದಸ್ಯ ವಿಚಾರಣಾ ಆಯೋಗಕ್ಕೆ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ :  ತಾಲೂಕು ಮೋಚಿಗಾರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಹಾಗೂ ಮಾಧುಸ್ವಾಮಿ ಸಂಪುಟದ ದರ್ಜಿ ಉಪಸಮಿತಿಯ ವರದಿಯ ಮರುವರ್ಗೀಕರಣಗೊಳಿಸುವಂತೆ ಕೋರಿ ತಹಸೀಲ್ದಾರ್ ಪರುಸಪ್ಪ ಕುರುಬರ ಅವರ ಮೂಲಕ ನ್ಯಾಯಮೂರ್ತಿ ಎಚ್.ಎನ್ ನಾಗಮೋಹನ್‌ದಾಸ್ ಏಕಸದಸ್ಯ ವಿಚಾರಣಾ ಆಯೋಗಕ್ಕೆ ಮನವಿ ಸಲ್ಲಿಸಲಾಯಿತು. 
     ಸಂಘದ ತಾಲೂಕು ಅಧ್ಯಕ್ಷ ಬಿ.ಎನ್ ನಿದೀಶ್ ಕುಮಾರ್ ಹಾಗೂ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರೇಖಾರವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.  ತಾಲೂಕು ಸಂಘದ  ಕಾರ್ಯದರ್ಶಿ ಬಿ.ವೈ ಅಜಂತ್ ಕುಮಾರ್(ಸ್ವಾಮಿ) ಹಾಗೂ ಸಮಾಜದ ಹಿರಿಯರಾದ ಮಂಜುನಾಥ್, ಪಾರ್ವತಿ ದೇವಿ, ಟಿ. ವೆಂಕಟೇಶ್, ಮಂಜುನಾಥ್(ಆಕಾಶ ವಾಣಿ) ಟಿಟಿ ರಾಮು, ಸುನಿತಾ, ನಟರಾಜ, ರಾಜೇಶ್ವರಿ, ಮುರಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಬೆಂಕಿ ನಂದಿಸುವ ಕಾರ್ಯಕ್ಕೆ ಮೊದಲ ಆದ್ಯತೆ ನೀಡಿ : ಟಿ.ಎ ರತ್ನಾಪ್ರಭ

ಭದ್ರಾವತಿ ನ್ಯೂಟೌನ್ ಜೆಟಿಎಸ್ ಶಾಲೆ ಸಮೀಪದ ಲಯನ್ಸ್ ಕ್ಲಬ್ ಶುಗರ್ ಟೌನ್ ಸಭಾಂಗಣದಲ್ಲಿ ಅರಣ್ಯ ಇಲಾಖೆ ಮುಂಚೂಣಿ ಸಿಬ್ಬಂದಿಗಳಿಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಘಟಕದ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಬೆಂಕಿಯಿಂದ ಅರಣ್ಯ ರಕ್ಷಿಸುವ ಕುರಿತು ಕಾರ್ಯಾಗಾರದಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ವಸಂತಕುಮಾರ್ ಮಾಹಿತಿ ನೀಡಿದರು.  
    ಭದ್ರಾವತಿ: ಅರಣ್ಯದಲ್ಲಿ ಬೆಂಕಿ ಅವಘಡಗಳು ಸಂಭವಿಸಿದ ತುರ್ತು ಸಂದರ್ಭಗಳಲ್ಲಿ ಅರಣ್ಯ ಸಿಬ್ಬಂದಿಗಳು ಮೊದಲು ಬೆಂಕಿ ನಂದಿಸುವ ನಿಟ್ಟಿನಲ್ಲಿ ಮೊದಲ ಆದ್ಯತೆ ನೀಡಬೇಕೆಂದು ಚನ್ನಗಿರಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಟಿ.ಎ ರತ್ನಾಪ್ರಭ ಹೇಳಿದರು. 
    ಅವರು ಶನಿವಾರ ನಗರದ ನ್ಯೂಟೌನ್ ಜೆಟಿಎಸ್ ಶಾಲೆ ಸಮೀಪದ ಲಯನ್ಸ್ ಕ್ಲಬ್ ಶುಗರ್ ಟೌನ್ ಸಭಾಂಗಣದಲ್ಲಿ ಅರಣ್ಯ ಇಲಾಖೆ ಮುಂಚೂಣಿ ಸಿಬ್ಬಂದಿಗಳಿಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೆಂಕಿಯಿಂದ ಅರಣ್ಯ ರಕ್ಷಿಸುವ ಕುರಿತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. 


    ಅರಣ್ಯ ಸಿಬ್ಬಂದಿಗಳು ಕರ್ತವ್ಯದ ಸಂದರ್ಭದಲ್ಲಿ ಬೆಂಕಿ ಅವಘಡ ಕುರಿತ ಮಾಹಿತಿ ತಿಳಿದ ತಕ್ಷಣ ಮೊದಲು ಬೆಂಕಿ ನಂದಿಸುವ ಕಾರ್ಯಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಮುಂದಾಗಬೇಕು.  ಅಗ್ನಿ ನಂದಿಸುವ ಕುರಿತು ಹೆಚ್ಚಿನ ಮಾಹಿತಿ ಹೊಂದಿರಬೇಕು. ತರ್ತು ಸೇವೆಗಳನ್ನು ಬಳಸಿಕೊಂಡು ಬೆಂಕಿ ನಂದಿಸುವ ಮೂಲಕ ಅರಣ್ಯ ಸಂರಕ್ಷಣೆ ಮಾಡಬೇಕೆಂದರು. 
    ಅಗ್ನಿಶಾಮಕ ಠಾಣಾಧಿಕಾರಿ ವಸಂತಕುಮಾರ್ ಮಾತನಾಡಿ, ಬೆಂಕಿ ನಂದಿಸಲು ಹಲವಾರು ಕ್ರಮಗಳಿವೆ. ಆಯಾ ಸಂದರ್ಭಗಳಿಗೆ ತಕ್ಕಂತೆ ಅವುಗಳನ್ನು ಸರಿಯಾದ ರೀತಿಯಲ್ಲಿ ಅನುಸರಿಸಿದ್ದಲ್ಲಿ ಹೆಚ್ಚಿನ ಬೆಂಕಿ ಅವಘಡ ಸಂಭವಿಸುವುದನ್ನು ತಡೆಯಬಹುದಾಗಿದೆ ಎಂದರು. ಅಲ್ಲದೆ ಅಗ್ನಿ ನಂದಿಸುವ ಉಪಕರಣಗಳನ್ನು ಪ್ರದರ್ಶಿಸಿ ಅವುಗಳ ಕಾರ್ಯ ನಿಧಾನ ಹಾಗು ಬಳಸುವ ಕ್ರಮಗಳನ್ನು ವಿವರಿಸಿದರು. 
    ತರೀಕೆರೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್. ಉಮರ್ ಬಾದ್‌ಷಹಾ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಅಗ್ನಿಶಾಮಕ ದಳ ಅಧಿಕಾರಿ ಎಲ್.ಎಫ್ ಅಶೋಕ್ ಕುಮಾರ್, ಉಪ ವಲಯ ಅರಣ್ಯಾಧಿಕಾರಿ ಬಿ.ಎಚ್ ದುಗ್ಗಪ್ಪ, ನಿರಂಜನಮೂರ್ತಿ, ಮಹೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
ಅರಣ್ಯ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಂಗಸ್ವಾಮಿ ಪ್ರಾರ್ಥಿಸಿ, ಗಸ್ತು ಅರಣ್ಯ ಪಾಲಕ ಆರ್. ನಂದನ ಸ್ವಾಗತಿಸಿದರು. ಉಪ ವಲಯ ಅರಣ್ಯಾಧಿಕಾರಿ ಇ.ಎಂ ಶಫೀವುಲ್ಲಾ ವಂದಿಸಿದರು.
ಲಯನ್ಸ್ ಕ್ಲಬ್ ಆವರಣದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಬೆಂಕಿ ನಂದಿಸುವ ಕುರಿತು ಅಣಕು ಪ್ರದರ್ಶನ ನಡೆಸಿಕೊಡಲಾಯಿತು. 
 

ಭದ್ರಾವತಿ ನ್ಯೂಟೌನ್ ಜೆಟಿಎಸ್ ಶಾಲೆ ಸಮೀಪದ ಲಯನ್ಸ್ ಕ್ಲಬ್ ಶುಗರ್ ಟೌನ್ ಸಭಾಂಗಣದಲ್ಲಿ ಅರಣ್ಯ ಇಲಾಖೆ ಮುಂಚೂಣಿ ಸಿಬ್ಬಂದಿಗಳಿಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಘಟಕದ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಬೆಂಕಿಯಿಂದ ಅರಣ್ಯ ರಕ್ಷಿಸುವ ಕುರಿತು ಕಾರ್ಯಾಗಾರದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಬೆಂಕಿ ನಂದಿಸುವ ಕುರಿತು ಅಣಕು ಪ್ರದರ್ಶನ ನಡೆಸಿಕೊಡಲಾಯಿತು.