ಭದ್ರಾವತಿ ತಾಲೂಕಿನ ಮಾವಿನಕೆರೆ ಹಾಗು ಮಾವಿನಕೆರೆ ಕಾಲೋನಿ ಗ್ರಾಮದಲ್ಲಿ ಕಳೆದ ಸುಮಾರು ೧ ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಉಲ್ಬಣಗೊಂಡಿದ್ದು, ಗ್ರಾಮಸ್ಥರು ಮಂಗಳವಾರ ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ)ಯಲ್ಲಿರುವ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಉಪವಿಭಾಗ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಛೇರಿ ಮುಂಭಾಗ ಖಾಲಿ ಕೊಡದ ಹಿಡಿದು ಪ್ರತಿಭಟನೆ ನಡೆಸಿದರು.
ಭದ್ರಾವತಿ: ತಾಲೂಕಿನ ಮಾವಿನಕೆರೆ ಹಾಗು ಮಾವಿನಕೆರೆ ಕಾಲೋನಿ ಗ್ರಾಮದಲ್ಲಿ ಕಳೆದ ಸುಮಾರು ೧ ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಉಲ್ಬಣಗೊಂಡಿದ್ದು, ಗ್ರಾಮಸ್ಥರು ಮಂಗಳವಾರ ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ)ಯಲ್ಲಿರುವ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಉಪವಿಭಾಗ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಛೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಮಾವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಕೆರೆ, ಮಾವಿನಕೆರೆ ಕಾಲೋನಿ, ಕೆಂಚೇನಹಳ್ಳಿ ಕಾಲೋನಿ, ಕೆಂಚೇನಹಳ್ಳಿ ಹಾಗು ಕೆಂಚೇನಹಳ್ಳಿ ನೀರುಗುಂಡಿ ಗ್ರಾಮಕ್ಕೆ ಬಹು ಗ್ರಾಮ ಕುಡಿಯುವ ನೀರು ಯೋಜನೆಯಡಿ ನೀರು ಸರಬರಾಜು ಮಾಡಬೇಕಾಗಿದ್ದು, ಆದರೆ ಕೇವಲ ಮಾವಿನಕೆರೆ ಹಾಗು ಮಾವಿನಕೆರೆ ಕಾಲೋನಿ ಗ್ರಾಮಕ್ಕೆ ಮಾತ್ರ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿತ್ತು. ಜ.೧೨ರಿಂದ ಈ ಎರಡು ಗ್ರಾಮಗಳಿಗೂ ನೀರು ಸರಬರಾಜು ಆಗದೇ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಉಲ್ಬಣಿಸಿದೆ. ಕುಡಿಯುವ ನೀರು ಸರಬರಾಜು ಮಾಡುವಂತೆ ಗುತ್ತಿಗೆದಾರರಿಗೆ ಹಲವಾರು ಬಾರಿ ಕರೆ ಮಾಡಿದರೂ ಸಹ ಸರಿಯಾಗಿ ಸ್ಪಂದಿಸುತ್ತಿಲ್ಲ. ಇಲಾಖೆ ಅಭಿಯಂತರರಿಗೂ ಹಲವಾರು ಬಾರಿ ಪತ್ರ ಬರೆದು ಮನವಿ ಮಾಡಿದರೂ ಸಹ ಯಾವುದೇ ಪ್ರಕ್ತಿಯೆ ವ್ಯಕ್ತವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಬೀಗ ಜಡಿದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದು ಪ್ರತಿಭಟನಾನಿರತ ಗ್ರಾಮಸ್ಥರು ಹೇಳಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳವೆ ಬಾವಿಗಳಲ್ಲಿ ಅಂತರ್ಜಲ ಪ್ರಮಾಣ ಕುಸಿತಗೊಂಡಿದ್ದು, ಇದರಿಂದಾಗಿ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಕುಡಿಯಲು ನೀರು ಸರಬರಾಜು ಮಾಡದೆ ನಿರ್ಲಕ್ಷ್ಯ ವಹಿಸುತ್ತಿರುವುದು ಖಂಡನೀಯ ಎಂದು ಖಾಲಿ ಕೊಡದ ಹಿಡಿದು ಮಹಿಳೆಯರು ತಮ್ಮ ಆಕ್ರೋಶ ಹೊರ ಹಾಕಿದರು.
ಯೋಜನೆ ಆರಂಭಗೊಂಡು ಸುಮಾರು ೧೫ ವರ್ಷಗಳು ಕಳೆದಿವೆ. ಮಾವಿನಕೆರೆ ಮತ್ತು ಬಾರಂದೂರು ಗ್ರಾಮ ಪಂಚಾಯಿತಿಗಳ ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ. ಇದರಿಂದಾಗಿ ಸಾಕಷ್ಟು ಸಮಸ್ಯೆ ಎದುರಾಗಿದೆ. ಈ ಕುರಿತು ಹಲವಾರು ಬಾರಿ ಸಂಬಂಧ ಇಲಾಖೆಗಳ ಅಧಿಕಾರಿಗಳಿಗೆ, ಶಾಸಕರಿಗೆ, ಸಂಸದರಿಗೆ ಮನವಿ ಮಾಡಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾದಾನ ಹೊರ ಹಾಕಿದರು.
ಪ್ರತಿಭಟನೆಯಲ್ಲಿ ಮಾವಿನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್, ಮಾಜಿ ಅಧ್ಯಕ್ಷ ಶ್ರೀಧರ್ ಶೆಟ್ಟಿ, ಗ್ರಾಪಂ ಸದಸ್ಯರಾದ ಅಭಿನಂದನ್, ರಮೇಶ್, ಉಮೇಶ್, ನಗರಸಭೆ ಸದಸ್ಯ ಹನುಮಂತು, ಚೌಡೇಗೌಡ, ಗಾಂಧಿ ನಗರ ರಮೇಶ್, ಬಾರಂದೂರು ಗ್ರಾಪಂ ಅಧ್ಯಕ್ಷ ಚೇತನ್, ಸದಸ್ಯರಾದ ಜಯಮ್ಮ, ಕಿರಣ್, ಕೆಂಚಮ್ಮ, ಕೃಷ್ಣನಾಯ್ಕ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
----------------------------------------------------------------
ಗ್ರಾಮ ಪಂಚಾಯಿತಿಯ ಎಲ್ಲಾ ೮ ಗ್ರಾಮಗಳಲ್ಲಿ ೪೦ ದಿನಗಳಿಂದ ಒಂದು ತೊಟ್ಟು ನೀರು ಸರಬರಾಜು ಮಾಡಿಲ್ಲ. ಜನರು ತತ್ತರಿಸಿದ್ದು, ಇರುವ ಕೊಳವೆ ಬಾವಿ ನೀರು ಕುಡಿಯಲು ಯೋಗ್ಯವಲ್ಲವೆಂದು ವರದಿ ನೀಡಲಾಗಿದೆ. ಈ ನೀರು ಕುಡಿದ ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಶುದ್ದ ಕುಡಿಯುವ ನೀರು ಟ್ಯಾಂಕರ್‌ಗಳ ಮೂಲಕ ಗ್ರಾಮಗಳಿಗೆ ಸರಬರಾಜು ಮಾಡಲಾಗುತ್ತಿದೆ. ಇದರಿಂದ ವರ್ಷಕ್ಕೆ ಕನಿಷ್ಠ ೧.೫ ಲಕ್ಷ ರು. ವೆಚ್ಚ ಭರಿಸಲಾಗುತ್ತಿದೆ. ಇದರಿಂದಾಗಿ ಗ್ರಾ.ಪಂ. ಅಭಿವೃದ್ದಿ ಕಾರ್ಯಗಳಿಗೆ ತೊಂದರೆಯಾಗುತ್ತಿದೆ.
-ಸುರೇಶ್, ಅಧ್ಯಕ್ಷರು, ಮಾವಿನಕೆರೆ ಗ್ರಾಮಪಂಚಾಯಿತಿ, ಭದ್ರಾವತಿ.
-------------------------------------------------------
ಗ್ರಾಮೀಣ ಭಾಗದ ಜನರಿಗೆ ಶುದ್ದ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಕಳೆದ ೧೫ ವರ್ಷಗಳ ಹಿಂದೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೋಟ್ಯಾಂತರ ರು. ವೆಚ್ಚದಲ್ಲಿ ಕೈಗೆತ್ತಿಕೊಂಡು ಮಾವಿನಕೆರೆ ಗ್ರಾಮದಲ್ಲಿ ಫಿಲ್ಟರ್ ಮತ್ತು ಬಾರಂದೂರಿನಲ್ಲಿ ಘಟಕ ಆರಂಭಿಸಲಾಗಿದೆ. ಆದರೆ ಮಾವಿನಕೆರೆ, ಬಾರಂದೂರು ಹಾಗೂ ಕಾರೇಹಳ್ಳಿ ಗ್ರಾಪಂಗಳ ವ್ಯಾಪ್ತಿಯ ಗ್ರಾಮಗಳ ನಿವಾಸಿಗಳಿಗೆ ಶುದ್ದ ಕುಡಿಯುವ ನೀರಿನ ಯೋಜನೆ ಯಶಸ್ವಿಗೊಳಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
- ಶ್ರೀಧರ್ ಶೆಟ್ಟಿ, ಮಾಜಿ ಅಧ್ಯಕ್ಷರು, ಮಾವಿನಕೆರೆ ಗ್ರಾಮಪಂಚಾಯಿತಿ, ಭದ್ರಾವತಿ.
ಭದ್ರಾವತಿ ತಾಲೂಕಿನ ಮಾವಿನಕೆರೆ ಹಾಗು ಮಾವಿನಕೆರೆ ಕಾಲೋನಿ ಗ್ರಾಮದಲ್ಲಿ ಕಳೆದ ಸುಮಾರು ೧ ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಉಲ್ಬಣಗೊಂಡಿದ್ದು, ಗ್ರಾಮಸ್ಥರು ಮಂಗಳವಾರ ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ)ಯಲ್ಲಿರುವ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಉಪವಿಭಾಗ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಛೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.