Thursday, February 27, 2025

ಯಡಿಯೂರಪ್ಪ ೮೨ನೇ ಜನ್ಮದಿನ : ಹಣ್ಣು, ಬ್ರೆಡ್ ವಿತರಣೆ

ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ೮೨ನೇ ಜನ್ಮದಿನಾಚರಣೆ ಅಂಗವಾಗಿ ಭದ್ರಾವತಿ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಿಸಲಾಯಿತು. 
    ಭದ್ರಾವತಿ: ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ೮೨ನೇ ಜನ್ಮದಿನಾಚರಣೆ ಅಂಗವಾಗಿ ಗುರುವಾರ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಿಸಲಾಯಿತು. 
    ಪ್ರತಿ ವರ್ಷದಂತೆ ಈ ಬಾರಿ ಸಹ ಬಿಜೆಪಿ ತಾಲೂಕು ಮಂಡಲ ವತಿಯಿಂದ ದಣಿವರಿಯದ ಜನ ನಾಯಕ, ರೈತ ಬಂದು ಬಿ.ಎಸ್ ಯಡಿಯೂರಪ್ಪನವರ ಜನ್ಮದಿನಾಚರಣೆ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಣೆ ಮೂಲಕ ಸಾಮಾಜಿಕ ಸೇವಾ ಕಾರ್ಯಗಳೊಂದಿಗೆ ವಿಶೇಷವಾಗಿ ಆಚರಿಸಲಾಯಿತು. 
    ಈ ಸಂದರ್ಭದಲ್ಲಿ ಪ್ರಮುಖರು ಮಾತನಾಡಿ, ಯಡಿಯೂರಪ್ಪನವರು ತಮ್ಮ ಅಧಿಕಾರದ ಅವಧಿಯಲ್ಲಿ ಮಕ್ಕಳು, ಮಹಿಳೆಯರು, ವೃದ್ಧರು, ವಿದ್ಯಾರ್ಥಿಗಳು, ದೀನದಲಿತರು ಹಾಗು ರೈತರಿಗಾಗಿ ಜಾರಿಗೆ ತಂದಿರುವ ಜಾರಿಗೆ ತಂದಿರುವ ಹಲವಾರು ಯೋಜನೆಗಳು ಇಂದಿಗೂ ಮಾದರಿಯಾಗಿವೆ. ಅವರು ನಡೆದು ಬಂದ ದಾರಿ, ಸರ್ವಜನಾಂಗದವರ ಏಳಿಗಾಗಿ ನಡೆಸಿರುವ ಹೋರಾಟಗಳು ಎಲ್ಲರಿಗೂ ಮಾರ್ಗದರ್ಶಕವಾಗಿವೆ ಎಂದು ಬಣ್ಣಿಸಿದರು. 


ಭದ್ರಾವತಿ ಹೊಸಮನೆ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ಬಿಜೆಪಿ ಮಂಡಲ ವತಿಯಿಂದ ಬಿ.ಎಸ್ ಯಡಿಯೂರಪ್ಪನವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಗವಂತ ಇನ್ನೂ ಹೆಚ್ಚಿನ ಆಯುರಾರೋಗ್ಯ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು. 
    ಇದಕ್ಕೂ ಹೊಸಮನೆ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ಬಿ.ಎಸ್ ಯಡಿಯೂರಪ್ಪನವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಗವಂತ ಇನ್ನೂ ಹೆಚ್ಚಿನ ಆಯುರಾರೋಗ್ಯ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದರು. 
    ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ನೇತೃತ್ವ ವಹಿಸಿದ್ದರು. ಪ್ರಮುಖರಾದ ಕೂಡ್ಲಿಗೆರೆ ಹಾಲೇಶ್, ಬಿ.ಜಿ ರಾಮಲಿಂಗಯ್ಯ, ಎಂ. ಮಂಜುನಾಥ್, ಎಂ.ಎಸ್ ಸುರೇಶಪ್ಪ, ಜಿ. ಆನಂದಕುಮಾರ್, ಎಚ್. ತೀರ್ಥಯ್ಯ, ಜೆ. ಮೂರ್ತಿ, ಕಾ.ರಾ ನಾಗರಾಜ್, ರಾಜಶೇಖರ್ ಉಪ್ಪಾರ, ಸತೀಶ್ ಕುಮಾರ್, ಹನುಮಂತನಾಯ್ಕ, ಅಣ್ಣಪ್ಪ, ಬಿ.ಎಸ್ ಶ್ರೀನಾಥ್, ರಾಜು, ಸುಬ್ರಮಣಿ, ರಘುರಾವ್, ಹರೀಶ್, ನರೇಂದ್ರ, ಧನುಷ್ ಬೋಸ್ಲೆ, ನಂದೀಶ್, ಶರವಣ, ಮಂಜುಳಾ, ಅನುಷಾ, ಶಕುಂತಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ೧೦ ಲಕ್ಷ ರು. ಅನುದಾನ ಬಿಡುಗಡೆ

ಶಾಸಕರಿಗೆ ಗೆಳೆಯರ ಬಳಗ ಟ್ರಸ್ಟ್‌ನಿಂದ ಸನ್ಮಾನ 

ಭದ್ರಾವತಿ ಅಪ್ಪರ್‌ಹುತ್ತಾದಲ್ಲಿರುವ ಶ್ರೀ ನಂದಿ, ಈಶ್ವರ ಮತ್ತು ಸಂಕಷ್ಟಹರ ಗಣಪತಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಸರ್ಕಾರದಿಂದ ೧೦ ಲಕ್ಷ ರು. ಅನುದಾನ ಬಿಡುಗಡೆ ಮಾಡಿಸಿಕೊಟ್ಟಿರುವ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ಅಪ್ಪರ್‌ಹುತ್ತಾ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 
ಭದ್ರಾವತಿ: ಅಪ್ಪರ್‌ಹುತ್ತಾದಲ್ಲಿರುವ ಶ್ರೀ ನಂದಿ, ಈಶ್ವರ ಮತ್ತು ಸಂಕಷ್ಟಹರ ಗಣಪತಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಸರ್ಕಾರದಿಂದ ೧೦ ಲಕ್ಷ ರು. ಅನುದಾನ ಬಿಡುಗಡೆ ಮಾಡಿಸಿಕೊಟ್ಟಿರುವ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ಅಪ್ಪರ್‌ಹುತ್ತಾ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 
ಬುಧವಾರ ಮಹಾಶಿವರಾತ್ರಿ ಅಂಗವಾಗಿ ರಾತ್ರಿ ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದ ಶಾಸಕರನ್ನು ಬಳಗದ ವತಿಯಿಂದ ಸನ್ಮಾನಿಸಿ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಕೋರಲಾಯಿತು. 
  ಅಪ್ಪರ್ ಹುತ್ತ ಗೆಳೆಯರ ಬಳಗ ಟ್ರಸ್ಟ್ ಅಧ್ಯಕ್ಷ ಹೇಮರಾಜ್, ಗೌರವಾಧ್ಯಕ್ಷ ಎಸ್.ಕೆ ಕುಮಾರ್, ಪ್ರಧಾನ ಕಾರ್ಯದರ್ಶಿ ಚರಣ್ ರಾಜ್, ರಾಜು, ರಾಜಣ್ಣ, ಶಿವಕುಮಾರ್, ಉಮಾ ಭಜನಾ ಮಂಡಳಿ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
 

Mob: 9738801478
: 9482007466

ಮೀನಾಕ್ಷಿಯವರ ಆರೋಗ್ಯ ಸ್ಥಿತಿಗೆ ಸಂಬಂಧಿಸಿದ ವರದಿಗಳ ಕುರಿತು ಸ್ಪಷ್ಟೀಕರಣ



    ಭದ್ರಾವತಿ: ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ದಾಖಲಾಗಿರುವ ೫೯ ವರ್ಷದ ರೋಗಿ ಮೀನಾಕ್ಷಿಯವರ ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ ಕೆಲ ಮಾಧ್ಯಮ ವರದಿಗಳಲ್ಲಿ ಬಂದಿರುವ ತಪ್ಪು ಮಾಹಿತಿ ಸ್ಪಷ್ಟಪಡಿಸುವ ಉದ್ದೇಶದಿಂದ, ಅವರ ಚಿಕಿತ್ಸೆಗೆ ಸಂಬಂಧಿಸಿದ ನಿಜವಾದ ಅಂಶಗಳನ್ನು ತಿಳಿಸಲು ಈ ಹೇಳಿಕೆ ಬಿಡುಗಡೆ ಮಾಡಲಾಗಿದೆ.
    ಮೀನಾಕ್ಷಿಯವರು, ೨೪ ಫೆಬ್ರವರಿ ಸೋಮವಾರದಂದು ಮತ್ತೊಂದು ಖಾಸಗಿ ಆಸ್ಪತ್ರೆಯಿಂದ ರೆಫರ್ ಆಗಿ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ದಾಖಲಾಗಿದ್ದರು, ಅಲ್ಲಿ ಅವರು ಸೋಂಕು ಮತ್ತು ರಕ್ತದೊತ್ತಡ ಕುಸಿತಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯುತ್ತಿದ್ದರು. ನಮ್ಮ ಆಸ್ಪತ್ರೆಗೆ ದಾಖಲಾದ ಕೂಡಲೇ ಅವರನ್ನು ತುರ್ತು ನಿಗಾ ಘಟಕಕ್ಕೆ ಕರೆದೊಯ್ಯಲಾಯಿತು ಮತ್ತು ನಂತರ ವೈದ್ಯಕೀಯ ತೀವ್ರ ನಿಗಾ ಘಟಕ (ಎಂಐಸಿಯು) ಗೆ ವರ್ಗಾಯಿಸಲಾಯಿತು. ಅವರ ಗಂಭೀರ ಸ್ಥಿತಿಯನ್ನು ಗಮನಿಸಿ, ವೆಂಟಿಲೇಟರ್ ಸಹಿತ ಸಂಪೂರ್ಣ ಚಿಕಿತ್ಸೆ ನೀಡಲಾಯಿತು.
    ಕೆಲವು ಮಾಧ್ಯಮ ವರದಿಗಳಲ್ಲಿ, ನಮ್ಮ ವೈದ್ಯರು ಮೀನಾಕ್ಷಿಯವರನ್ನು ಮೃತ ಪಟ್ಟಿದ್ದಾರೆ ಎಂದು ಘೋಷಿಸಿದರು ಮತ್ತು ಅವರ ಮನೆಗೆ ತಲುಪಿದ ಮೇಲೆ "ಅವರು  ಮತ್ತೆ ಉಸಿರಾಡಲು ಪ್ರಾರಂಭಿಸಿದರು" ಎಂಬ ಮಾಹಿತಿ ತಪ್ಪಾಗಿ ಪ್ರಕಟಿಸಲಾಗಿದೆ. ನಾವು ಈ ವರದಿಗಳನ್ನು ಪೂರ್ತಿಯಾಗಿ ತಿರಸ್ಕರಿಸುತ್ತೇವೆ. ನಮ್ಮ ವೈದ್ಯರು ಯಾವುದೇ ಹಂತದಲ್ಲಿಯೂ ರೋಗಿ ಮೃತ ಪಟ್ಟಿದ್ದಾರೆ ಎಂದು ಘೋಷಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇವೆ. ಕುಟುಂಬದ ಒತ್ತಾಯದ ಮೇರೆಗೆ, ವೈದ್ಯಕೀಯ ಸಲಹೆ ವಿರುದ್ಧ (ಡಿಎಎಂಎ) ಅವರನ್ನು ಬಿಡುಗಡೆ ಮಾಡಲಾಯಿತು.
    ೨೫ ಫೆಬ್ರವರಿ ಮಂಗಳವಾರದ ಬೆಳಿಗ್ಗೆ, ಅವರ ಆರೋಗ್ಯ ಮತ್ತಷ್ಟು ಗಂಭೀರಗೊಂಡಿದ್ದರಿಂದ ಅವರ ಆರೋಗ್ಯ ಪುನಶ್ಚೇತನಗೊಳ್ಳುವ ಸಾಧ್ಯತೆ ಕಡಿಮೆ ಇರುವ ಬಗ್ಗೆ ಕುಟುಂಬಕ್ಕೆ ತಿಳಿಸಲಾಯಿತು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲು ರೋಗಿ ಸಂಬಂಧಿಕರಿಗೆ ತಿಳಿಸಿದರೂ, ಕುಟುಂಬದ ಸದಸ್ಯರು ಅವರ ಬಿಡುಗಡೆಗಾಗಿ ಒತ್ತಾಯಿಸಿದರು. ಹೀಗಾಗಿ, ವೈದ್ಯಕೀಯ ಸಲಹೆಯ ವಿರುದ್ಧವಾಗಿ, ಅಂದು ಬೆಳಿಗ್ಗೆ ಅವರನ್ನು ಬಿಡುಗಡೆ ಮಾಡಲಾಯಿತು. ವೈದ್ಯಕೀಯ ತಂಡವು ಅದರಿಂದ ಉಂಟಾಗಬಹುದಾದ ಅಪಾಯಗಳ ಬಗ್ಗೆ ಕುಟುಂಬಕ್ಕೆ ಸ್ಪಷ್ಟವಾದ ಮಾಹಿತಿ ನೀಡಿತ್ತು. ಆ ನಂತರ, ಮನೆಗೆ ತಲುಪಿದ ಬೆನ್ನಲ್ಲೇ, ರೋಗಿಯ ಪ್ರತಿಕ್ರಿಯೆಯಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದಂತೆ ಕಂಡುಬಂದ ಕಾರಣ, ಅವರ ಕುಟುಂಬ ಅದೇ ದಿನ ಕೆಲವೇ ಗಂಟೆಗಳಲ್ಲಿ ಅವರನ್ನು ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಬಂದರು. ತಕ್ಷಣ ಅವರನ್ನು ಪುನಃ ದಾಖಲಿಸಿ, ನಮ್ಮ ವೈದ್ಯಕೀಯ ತಂಡ ಅವರಿಗೆ ಅಗತ್ಯವಾದ ಚಿಕಿತ್ಸೆ ನೀಡಿದೆ.
    ಮಾಧ್ಯಮ ಪ್ರತಿನಿಧಿಗಳಿಗೆ ಈ ಅಧಿಕೃತ ಹೇಳಿಕೆಯನ್ನು ಆಧಾರವಾಗಿ ಬಳಸುವಂತೆ ಮನವಿ ಮಾಡುತ್ತೇವೆ. ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ, ದಯವಿಟ್ಟು ಶ್ರೀ ಕಿಶನ್ ಸಿಂಗ್, ಬ್ರ್ಯಾಂಡ್‌ಕಾಂ PR, ಮೊಬೈಲ್: +೯೧ ೭೦೯೦೭೧೧೯೧೬, ಇಮೇಲ್: kishan@brandcompr.com ಗೆ ಸಂಪರ್ಕಿಸಬಹುದು.

ಭದ್ರಾವತಿ ವಿವಿಧೆಡೆ ಈಶ್ವರ ದೇವಾಲಯಗಳಲ್ಲಿ ಮಹಾಶಿವರಾತ್ರಿ ಆಚರಣೆ

ಭದ್ರಾವತಿ ನಗರದ ಹೃದಯ ಭಾಗದಲ್ಲಿ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ದೇವಾಲಯದಲ್ಲಿ ಮಹಾರಾತ್ರಿ ಆಚರಣೆ ಅಂಗವಾಗಿ ಮೂಲ ವಿಗ್ರಹಕ್ಕೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. 
    ಭದ್ರಾವತಿ: ನಗರದ ವಿವಿಧೆಡೆ ಈಶ್ವರ ದೇವಾಲಯಗಳಲ್ಲಿ ಮಹಾಶಿವರಾತ್ರಿ ಹಬ್ಬ ಈ ಬಾರಿ ಸಹ ವಿಜೃಂಭಣೆಯಿಂದ ಆಚರಿಸಲಾಯಿತು. ಬಹುತೇಕ ದೇವಾಲಯಗಳಲ್ಲಿ ಭಕ್ತ ಸಮೂಹವೇ ಕಂಡು ಬಂದಿತು.  ದೇವಾಲಯಗಳು ಹಸಿರು ತೋರುಣಗಳಿಂದ, ವಿದ್ಯುತ್ ಹಾಗು ಪುಷ್ಪಾಂಲಕಾರಗಳಿಂದ ಆಕರ್ಷಕವಾಗಿ ಕಂಗೊಳಿಸಿದವು. ಹಗಲು-ರಾತ್ರಿ ಬಿಡುವಿಲ್ಲದೆ ಧಾರ್ಮಿಕ ಆಚರಣೆಗಳು ಜರುಗಿದವು. ಇದಕ್ಕೆ ಪೂರಕವೆಂಬಂತೆ ಭಕ್ತರು ಸಹ ಪಾಲ್ಗೊಂಡು ಭಕ್ತಿ ಮೆರೆದರು.
     ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ :
    ಹೊಸಮನೆ ಎನ್.ಎಂ.ಸಿ ಎಡಭಾಗದಲ್ಲಿರುವ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಗೆ ರುದ್ರಾಭಿಷೇಕ, ರುದ್ರಹೋಮ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಅಲ್ಲದೆ ಕೇಶವಪುರ ಬಡಾವಣೆಯ ಶ್ರೀ ಕೃಷ್ಣ ಸತ್ಸಂಗ ಮತ್ತು ಕದಳಿ ವೇದಿಕೆ ತಂಡಗಳಿಂದ ಭಜನೆ, ಜ್ಞಾನವಾಹಿನಿ ಭಜನೆ ತಂಡದಿಂದ ಭಜನೆ, ಹೊಸಮನೆ ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿಯಿಂದ ಮ್ಯಾನ್ಯೂಲ್ ಭಕ್ತಿಗಾಯನ ಲಹರಿ, ಧರ್ಮಶಾಸ್ತ್ರ ಭಜನಾ ಮಂಡಳಿಯಿಂದ ಭಜನೆ ಹಾಗು ಶಿವಮೊಗ್ಗ ಗಾಯಕ ಪ್ರೀತಮ್ ಮತ್ತು ತಂಡದಿಂದ ಭಕ್ತಿಗೀತೆಗಳು ಜರುಗಿದವು. 
    ಶ್ರೀ ಭದ್ರಾ ಶಿವಾಲಯ ಸಮಿತಿ ಅಧ್ಯಕ್ಷ ಜಿ. ಆನಂದಕುಮಾರ್ ನೇತೃತ್ವ ವಹಿಸಿದ್ದರು. ಸಮಿತಿ ಪದಾಧಿಕಾರಿಗಳು ಹಾಗು ಸದಸ್ಯರು, ಸ್ಥಳೀಯ ಮುಖಂಡರು, ಗಣ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ನಗರದ ವಿವಿಧ ಭಾಗಗಳಿಂದ ಭಕ್ತಾಧಿಗಳು ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.
    ಶ್ರೀ ಸಂಗಮೇಶ್ವರ ದೇವಾಲಯ: 
    ನಗರದ ಹೃದಯ ಭಾಗದಲ್ಲಿ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ದೇವಾಲಯದಲ್ಲಿ ಸ್ವಾಮಿಯ ದರ್ಶನ ಪಡೆಯಲು ಬುಧವಾರ ಬೆಳಿಗ್ಗೆಯಿಂದಲೇ ಭಕ್ತಾರು ಸಾಲುಗಟ್ಟಿ ನಿಂತಿರುವುದು ಕಂಡು ಬಂದಿತು.
    ಪ್ರತಿ ವರ್ಷದಂತೆ ಈ ಬಾರಿ ಸಹ ವೀರಶೈವ ಸೇವಾ ಸಮಿತಿವತಿಯಿಂದ ಧಾರ್ಮಿಕ ಆಚರಣೆಗಳು ಜರುಗಿದವು. ಮಂಗಳವಾರ ಸಂಜೆ ಗಣಹೋಮ, ರುದ್ರಹೋಮ, ನವಗ್ರಹ ಪೂಜೆ ಜರುಗಿದವು. ಬೆಳಿಗ್ಗೆ  ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣಪತಿ, ಶ್ರೀ ಸಂಗಮೇಶ್ವರಸ್ವಾಮಿ, ನಂದಿ, ನಾಗದೇವತೆ ದೇವರುಗಳಿಗೆ ರುದ್ರಾಭಿಷೇಕ ನೆರವೇರಿತು. ವೀರಶೈವ ಸೇವಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಶಿವರಾತ್ರಿ ಆಚರಣಾ ಉಸ್ತುವಾರಿ ವಿವಿಧ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ದೇವಸ್ಥಾನದ ಸಮೀಪ ಸೇವಾಕರ್ತರಿಂದ ಭಕ್ತರಿಗೆ ಕಲ್ಲಂಗಡಿ ಹಣ್ಣು, ಕೋಸಂಬರಿ, ಪಾನಕ ವಿತರಣೆ ನೆರವೇರಿತು. ಸ್ಥಳೀಯ ಸಂಘ-ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷಗಳ ಪ್ರಮುಖರು, ಗಣ್ಯರು ಸೇರಿದಂತೆ ನಗರದ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದು ಕೃಪೆಗೆ ಪಾತ್ರರಾದರು. 
    ಶ್ರೀ ಮರುಳಸಿದ್ದೇಶ್ವರಸ್ವಾಮಿ ದೇವಸ್ಥಾನ :
    ಡೈರಿ ಸಮೀಪದ ಜೇಡಿಕಟ್ಟೆಯಲ್ಲಿರುವ ಮರುಳಸಿದ್ದೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಬಿಳಿಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಇಷ್ಟಲಿಂಗ ಪೂಜೆ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗು ಅನ್ನ ದಾಸೋಹ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ದೇವಸ್ಥಾನದ ಮುಖ್ಯ ಅರ್ಚಕ ತಿಪ್ಪೇಸ್ವಾಮಿ, ಶ್ರೀ ಮರುಳಸಿದ್ದೇಶ್ವರಸ್ವಾಮಿ ಜನ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಜೇಡಿಕಟ್ಟೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಂದ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದು ಕೃಪೆಗೆ ಪಾತ್ರರಾದರು.
    ಲೋಯರ್ ಹುತ್ತಾ ಬಿ.ಎಚ್ ರಸ್ತೆಯಲ್ಲಿರುವ ಶ್ರೀ ಭದ್ರೇಶ್ವರ ದೇವಸ್ಥಾನ, ಅಪ್ಪರ್‌ಹುತ್ತಾದಲ್ಲಿರುವ ಶ್ರೀ ನಂದಿ, ಈಶ್ವರ ಮತ್ತು ಸಂಕಷ್ಟಹರ ಗಣಪತಿ ದೇವಸ್ಥಾನ, ನಗರದ ನ್ಯೂಟೌನ್ ಶಿವ ಸಾಯಿ ಕೃಪಾ ಧಾಮ, ಕಾಗದನಗರದ ಶ್ರೀ ಈಶ್ವರ ದೇವಸ್ಥಾನ, ಜನ್ನಾಪುರ ಶ್ರೀ ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಕೆ.ಸಿ ಬಡಾವಣೆ ಹಾಲಪ್ಪ ಶೆಡ್‌ನಲ್ಲಿರುವ ಶ್ರೀ ನಾಗದೇವಾಲಯ, ವೀರಾಪುರ ಹುಲಿಬಂಡೆ ಸಿದ್ದೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಮಹಾಶಿವರಾತ್ರಿ ವಿಜೃಂಭಣೆಯಿಂದ ಜರುಗಿತು.  
 

ಭದ್ರಾವತಿ ಹೊಸಮನೆ ಎನ್.ಎಂ.ಸಿ ಎಡಭಾಗದಲ್ಲಿರುವ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಗೆ ರುದ್ರಾಭಿಷೇಕ, ರುದ್ರಹೋಮ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಶ್ರೀ ಭದ್ರಾ ಶಿವಾಲಯ ಸಮಿತಿ ಅಧ್ಯಕ್ಷ ಜಿ. ಆನಂದಕುಮಾರ್ ನೇತೃತ್ವ ವಹಿಸಿದ್ದರು. ಸಮಿತಿ ಪದಾಧಿಕಾರಿಗಳು ಹಾಗು ಸದಸ್ಯರು, ಸ್ಥಳೀಯ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Tuesday, February 25, 2025

ನಡೆಯಿತು ವಿಸ್ಮಯ : ಸತ್ತು ಬದುಕಿದ ಮೀನಾಕ್ಷಿ....!

ಭದ್ರಾವತಿ ಗಾಂಧಿ ನಗರದ ನಿವಾಸಿ ಮೀನಾಕ್ಷಿ 
    ಭದ್ರಾವತಿ:  ಶಿವಮೊಗ್ಗ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಗೃಹಿಣಿಯೋರ್ವರು ಸೋಮವಾರ ರಾತ್ರಿ ನಿಧನರಾಗಿದ್ದಾರೆಂದು ವೈದ್ಯರು ದೃಢೀಕರಿಸಿದ್ದಾರೆ. ಮಂಗಳವಾರ ಬೆಳಗ್ಗೆ ಅವರ ನಿವಾಸಕ್ಕೆ ಮೃತ ದೇಹವನ್ನು ತಂದು ಇಳಿಸುವಾಗ ಕಣ್ತೆರೆದು ಉಸಿರಾಡಿದ ವಿಸ್ಮಯ ಘಟನೆ ಹಳೇನಗರ ವ್ಯಾಪ್ತಿಯ ಗಾಂಧಿನಗರದಲ್ಲಿ ನಡೆದಿದೆ.
    ಗಾಂಧಿನಗರ ನಿವಾಸಿ ಗುತ್ತಿಗೆದಾರ ಸುಬ್ರಮಣಿ ಅವರ ಪತ್ನಿ ಮೀನಾಕ್ಷಿ(೫೨) ಅವರನ್ನು ಅನಾರೋಗ್ಯ ನಿಮಿತ್ತ ಶಿವಮೊಗ್ಗ ಖಾಸಗಿ   ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ೧೧.೩೦ಕ್ಕೆ ಮೀನಾಕ್ಷಿ ಅವರು ನಿಧನರಾದರೆಂದು ವೈದ್ಯರು ದೃಢಪಡಿಸಿದ್ದರು. ವಿಷಯ ತಿಳಿದ ಅವರ ಬಂಧು ಬಳಗ ಸೇರಿದಂತೆ ನೂರಾರು ಮಂದಿ ಅವರ ನಿವಾಸದ ಬಳಿ ನೆರೆದಿದ್ದರು. ಮಂಗಳವಾರ ಬೆಳಗ್ಗೆ ಮೃತ ದೇಹ ಅವರ ನಿವಾಸಕ್ಕೆ ತಂದು ಇಳಿಸುವಾಗ ಮೃತರಾಗಿದ್ದವರು ಕಣ್ತೆರೆದು ನೋಡಿ ಉಸಿರಾಡಿದ್ದಾರೆ. 
    ಕುಟುಂಬಸ್ಥರು ಅಚ್ಚರಿಗೊಂಡು ನೀರು ಕುಡಿಸಿದ್ದಾರೆ. ತಕ್ಷಣವೇ ಸಮೀಪದ ನರ್ಸಿಂಗ್ ಹೋಂಗೆ ಹೋಗಿ ಪರೀಕ್ಷಿಸಿಕೊಂಡು ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಯಾರಾದರೂ ಮಾತನಾಡಿದರೆ ಉತ್ತರಿಸುತ್ತಾರೆಂದು ಕುಟುಂಬ ಮೂಲಗಳು ತಿಳಿಸಿವೆ. ಮುಖಂಡರಾದ ವಿ.ಕದಿರೇಶ್, ಆರ್.ಕರಣಾಮೂರ್ತಿ, ಮಂಜುನಾಥ್, ಸ್ವಾಮಿನಾಥನ್, ವಿದ್ಯಾಧರನ್, ಸೋಮಸುಂದರ್ ಸೇರಿದಂತೆ ಕುಟುಂಬ ಬಳಗದವರು, ಹಿತೈಷಿಗಳು ಮೀನಾಕ್ಷಿಯವರು ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. 
    ವೀರಶೈವ ಸಮಾಜ ಸಂತಸ : 
    ಭದ್ರಾ ನದಿ ದಡದಲ್ಲಿರುವ ಶ್ರೀ ಸಂಗಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷ ಶಿವರಾತ್ರಿ ಹಬ್ಬದ ಮುನ್ನಾ ದಿನದಂದು ಲೋಕ ಕಲ್ಯಾಣಾರ್ಥ ಹಮ್ಮಿಕೊಳ್ಳುವ ಹೋಮ-ಹವನ ಮತ್ತಿತರೆ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಸುಬ್ರಮಣಿ ದಂಪತಿ ಹಾಗು ಕುಟುಂಬ ಸದಸ್ಯರು ಭಾಗವಹಿಸುತ್ತಿದ್ದರು.  ಮಹಾಶಿವರಾತ್ರಿ ಮುನ್ನಾ ದಿನ ಮಂಗಳವಾರ ಸಹ ಅವರೇ ಹೋಮ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಆದರೆ ವಿಧಿಯಾಟ ಸೋಮವಾರ ರಾತ್ರಿ ಮರಣ ಹೊಂದಿದರೆಂದು ತಿಳಿದು ವೀರಶೈವ ಸೇವಾ ಸಮಾಜ ಬಾಂಧವರಲ್ಲಿ ದುಃಖ ಆವರಿಸಿಕೊಂಡಿತ್ತು. ವೀರಶೈವ ಸಮಾಜದ ಅಧ್ಯಕ್ಷ ಆರ್.ಮಹೇಶ್‌ಕುಮಾರ್ ಮುಖಂಡರಾದ ವಾಗೀಶ್‌ಕೋಠಿ, ಟಿ.ಎಸ್.ಆನಂದಕುಮಾರ್ ಮುಂತಾದವರು ಬೃಹತ್ ಹಾರದೊಂದಿಗೆ ಮೃತರ ನಿವಾಸಕ್ಕೆ ತೆರಳಿದ್ದರು. ಆಗತಾನೆ ವಾಹನದಲ್ಲಿ ಮೃತದೇಹ ತಂದು ಇಳಿಸಿದಾಗ ಕಣ್ತೆರದು ಉಸಿರಾಡಿದನ್ನು ಕಣ್ಣಾರೆ ಕಂಡು ಆಶ್ಚರ್ಯ ಚಕಿತರಾಗಿದ್ದಾರೆ. ಭಗವಂತ ಅವರಿಗೆ ಇನ್ನೂ ಆಯುರಾರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ. 
 

ಮಾವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಉಲ್ಬಣ : ಕಛೇರಿಗೆ ಬೀಗ ಜಡಿದು ಪ್ರತಿಭಟನೆ

ಭದ್ರಾವತಿ ತಾಲೂಕಿನ ಮಾವಿನಕೆರೆ ಹಾಗು ಮಾವಿನಕೆರೆ ಕಾಲೋನಿ ಗ್ರಾಮದಲ್ಲಿ ಕಳೆದ ಸುಮಾರು ೧ ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಉಲ್ಬಣಗೊಂಡಿದ್ದು, ಗ್ರಾಮಸ್ಥರು ಮಂಗಳವಾರ ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ)ಯಲ್ಲಿರುವ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಉಪವಿಭಾಗ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಛೇರಿ ಮುಂಭಾಗ ಖಾಲಿ ಕೊಡದ ಹಿಡಿದು ಪ್ರತಿಭಟನೆ ನಡೆಸಿದರು. 
    ಭದ್ರಾವತಿ: ತಾಲೂಕಿನ ಮಾವಿನಕೆರೆ ಹಾಗು ಮಾವಿನಕೆರೆ ಕಾಲೋನಿ ಗ್ರಾಮದಲ್ಲಿ ಕಳೆದ ಸುಮಾರು ೧ ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಉಲ್ಬಣಗೊಂಡಿದ್ದು, ಗ್ರಾಮಸ್ಥರು ಮಂಗಳವಾರ ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ)ಯಲ್ಲಿರುವ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಉಪವಿಭಾಗ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಛೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. 
    ಮಾವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಕೆರೆ, ಮಾವಿನಕೆರೆ ಕಾಲೋನಿ, ಕೆಂಚೇನಹಳ್ಳಿ ಕಾಲೋನಿ, ಕೆಂಚೇನಹಳ್ಳಿ ಹಾಗು ಕೆಂಚೇನಹಳ್ಳಿ ನೀರುಗುಂಡಿ ಗ್ರಾಮಕ್ಕೆ ಬಹು ಗ್ರಾಮ ಕುಡಿಯುವ ನೀರು ಯೋಜನೆಯಡಿ ನೀರು ಸರಬರಾಜು ಮಾಡಬೇಕಾಗಿದ್ದು, ಆದರೆ ಕೇವಲ ಮಾವಿನಕೆರೆ ಹಾಗು ಮಾವಿನಕೆರೆ ಕಾಲೋನಿ ಗ್ರಾಮಕ್ಕೆ ಮಾತ್ರ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿತ್ತು. ಜ.೧೨ರಿಂದ ಈ ಎರಡು ಗ್ರಾಮಗಳಿಗೂ ನೀರು ಸರಬರಾಜು ಆಗದೇ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಉಲ್ಬಣಿಸಿದೆ. ಕುಡಿಯುವ ನೀರು ಸರಬರಾಜು ಮಾಡುವಂತೆ ಗುತ್ತಿಗೆದಾರರಿಗೆ ಹಲವಾರು ಬಾರಿ ಕರೆ ಮಾಡಿದರೂ ಸಹ ಸರಿಯಾಗಿ ಸ್ಪಂದಿಸುತ್ತಿಲ್ಲ. ಇಲಾಖೆ ಅಭಿಯಂತರರಿಗೂ ಹಲವಾರು ಬಾರಿ ಪತ್ರ ಬರೆದು ಮನವಿ ಮಾಡಿದರೂ ಸಹ ಯಾವುದೇ ಪ್ರಕ್ತಿಯೆ ವ್ಯಕ್ತವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಬೀಗ ಜಡಿದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದು ಪ್ರತಿಭಟನಾನಿರತ ಗ್ರಾಮಸ್ಥರು ಹೇಳಿದರು. 
    ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳವೆ ಬಾವಿಗಳಲ್ಲಿ ಅಂತರ್ಜಲ ಪ್ರಮಾಣ ಕುಸಿತಗೊಂಡಿದ್ದು, ಇದರಿಂದಾಗಿ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಕುಡಿಯಲು ನೀರು ಸರಬರಾಜು ಮಾಡದೆ ನಿರ್ಲಕ್ಷ್ಯ ವಹಿಸುತ್ತಿರುವುದು ಖಂಡನೀಯ ಎಂದು ಖಾಲಿ ಕೊಡದ ಹಿಡಿದು ಮಹಿಳೆಯರು ತಮ್ಮ ಆಕ್ರೋಶ ಹೊರ ಹಾಕಿದರು. 
    ಯೋಜನೆ ಆರಂಭಗೊಂಡು ಸುಮಾರು ೧೫ ವರ್ಷಗಳು ಕಳೆದಿವೆ. ಮಾವಿನಕೆರೆ ಮತ್ತು ಬಾರಂದೂರು ಗ್ರಾಮ ಪಂಚಾಯಿತಿಗಳ ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ. ಇದರಿಂದಾಗಿ ಸಾಕಷ್ಟು ಸಮಸ್ಯೆ ಎದುರಾಗಿದೆ. ಈ ಕುರಿತು ಹಲವಾರು ಬಾರಿ  ಸಂಬಂಧ ಇಲಾಖೆಗಳ ಅಧಿಕಾರಿಗಳಿಗೆ, ಶಾಸಕರಿಗೆ, ಸಂಸದರಿಗೆ ಮನವಿ ಮಾಡಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾದಾನ ಹೊರ ಹಾಕಿದರು. 
    ಪ್ರತಿಭಟನೆಯಲ್ಲಿ ಮಾವಿನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್, ಮಾಜಿ ಅಧ್ಯಕ್ಷ ಶ್ರೀಧರ್ ಶೆಟ್ಟಿ,  ಗ್ರಾಪಂ ಸದಸ್ಯರಾದ ಅಭಿನಂದನ್, ರಮೇಶ್, ಉಮೇಶ್, ನಗರಸಭೆ ಸದಸ್ಯ ಹನುಮಂತು, ಚೌಡೇಗೌಡ, ಗಾಂಧಿ ನಗರ ರಮೇಶ್, ಬಾರಂದೂರು ಗ್ರಾಪಂ ಅಧ್ಯಕ್ಷ ಚೇತನ್, ಸದಸ್ಯರಾದ ಜಯಮ್ಮ, ಕಿರಣ್, ಕೆಂಚಮ್ಮ, ಕೃಷ್ಣನಾಯ್ಕ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 
 
----------------------------------------------------------------
ಗ್ರಾಮ ಪಂಚಾಯಿತಿಯ ಎಲ್ಲಾ ೮ ಗ್ರಾಮಗಳಲ್ಲಿ ೪೦ ದಿನಗಳಿಂದ ಒಂದು ತೊಟ್ಟು ನೀರು ಸರಬರಾಜು ಮಾಡಿಲ್ಲ. ಜನರು ತತ್ತರಿಸಿದ್ದು, ಇರುವ ಕೊಳವೆ ಬಾವಿ ನೀರು ಕುಡಿಯಲು ಯೋಗ್ಯವಲ್ಲವೆಂದು ವರದಿ ನೀಡಲಾಗಿದೆ.  ಈ ನೀರು ಕುಡಿದ ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಶುದ್ದ ಕುಡಿಯುವ ನೀರು ಟ್ಯಾಂಕರ್‌ಗಳ ಮೂಲಕ ಗ್ರಾಮಗಳಿಗೆ ಸರಬರಾಜು ಮಾಡಲಾಗುತ್ತಿದೆ. ಇದರಿಂದ ವರ್ಷಕ್ಕೆ ಕನಿಷ್ಠ ೧.೫ ಲಕ್ಷ ರು. ವೆಚ್ಚ ಭರಿಸಲಾಗುತ್ತಿದೆ. ಇದರಿಂದಾಗಿ ಗ್ರಾ.ಪಂ. ಅಭಿವೃದ್ದಿ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. 
 -ಸುರೇಶ್, ಅಧ್ಯಕ್ಷರು, ಮಾವಿನಕೆರೆ ಗ್ರಾಮಪಂಚಾಯಿತಿ, ಭದ್ರಾವತಿ. 
 -------------------------------------------------------

ಗ್ರಾಮೀಣ ಭಾಗದ ಜನರಿಗೆ ಶುದ್ದ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಕಳೆದ ೧೫ ವರ್ಷಗಳ ಹಿಂದೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೋಟ್ಯಾಂತರ ರು. ವೆಚ್ಚದಲ್ಲಿ ಕೈಗೆತ್ತಿಕೊಂಡು ಮಾವಿನಕೆರೆ ಗ್ರಾಮದಲ್ಲಿ ಫಿಲ್ಟರ್ ಮತ್ತು ಬಾರಂದೂರಿನಲ್ಲಿ ಘಟಕ ಆರಂಭಿಸಲಾಗಿದೆ. ಆದರೆ ಮಾವಿನಕೆರೆ, ಬಾರಂದೂರು ಹಾಗೂ ಕಾರೇಹಳ್ಳಿ ಗ್ರಾಪಂಗಳ ವ್ಯಾಪ್ತಿಯ ಗ್ರಾಮಗಳ ನಿವಾಸಿಗಳಿಗೆ ಶುದ್ದ ಕುಡಿಯುವ ನೀರಿನ ಯೋಜನೆ ಯಶಸ್ವಿಗೊಳಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
 - ಶ್ರೀಧರ್ ಶೆಟ್ಟಿ, ಮಾಜಿ ಅಧ್ಯಕ್ಷರು, ಮಾವಿನಕೆರೆ ಗ್ರಾಮಪಂಚಾಯಿತಿ, ಭದ್ರಾವತಿ. 


ಭದ್ರಾವತಿ ತಾಲೂಕಿನ ಮಾವಿನಕೆರೆ ಹಾಗು ಮಾವಿನಕೆರೆ ಕಾಲೋನಿ ಗ್ರಾಮದಲ್ಲಿ ಕಳೆದ ಸುಮಾರು ೧ ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಉಲ್ಬಣಗೊಂಡಿದ್ದು, ಗ್ರಾಮಸ್ಥರು ಮಂಗಳವಾರ ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ)ಯಲ್ಲಿರುವ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಉಪವಿಭಾಗ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಛೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. 
 

ಕಾಯ್ದೆ ಜಾರಿಗೆ ಬಂದರೂ ನಿಲ್ಲದ ಫೈನಾನ್ಸ್ ಕಂಪನಿಗಳ ಕಿರುಕುಳ

ಕುಟುಂಬಸ್ಥರನ್ನು ೧ ತಿಂಗಳ ಕಾಲ ಬೀದಿಗೆ ತಳ್ಳಿದ ಇಕ್ವಿಟಾಸ್ ಫೈನಾನ್ಸ್ 

ಭದ್ರಾವತಿ ತಾಲೂಕಿನ ಆಗರದಹಳ್ಳಿ ಗ್ರಾಮದ ನಿವಾಸಿ, ಭೋವಿ ಜನಾಂಗದ ಕೃಷಿ ಕೂಲಿ ಕಾರ್ಮಿಕ ಚೌಡಪ್ಪ ಹಾಗು ಸಹೋದರರ ಎರಡು ಮನೆಗಳಿಗೆ ಇಕ್ವಿಟಾಸ್ ಫೈನಾನ್ಸ್ ರವರು ನೋಟಿಸ್ ಅಂಟಿಸಿ ಬೀಗ ಜಡಿದಿರುವುದು. 
    ಭದ್ರಾವತಿ : ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ, ದೌರ್ಜನ್ಯ ತಪ್ಪಿಸಲು ಸರ್ಕಾರ ಕಾಯ್ದೆ ಜಾರಿಗೆ ತಂದಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ನಗರದ ಮೈಕ್ರೋ ಫೈನಾನ್ಸ್ ಕಂಪನಿಯೊಂದು ರೈತ ಕುಟುಂಬವನ್ನು ಸುಮಾರು ೧ ತಿಂಗಳ ಕಾಲ ಬೀದಿಗೆ ತಳ್ಳಿರುವ ಘಟನೆ ಬೆಳಕಿಗೆ ಬಂದಿದೆ. ಮತ್ತೊಂದೆಡೆ ಇದರ ವಿರುದ್ಧ ರೈತ ಸಂಘ ಧ್ವನಿ ಎತ್ತುವ ಮೂಲಕ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವಲ್ಲಿ ಮುಂದಾಗಿದೆ. 
    ತಾಲೂಕಿನ ಆಗರದಹಳ್ಳಿ ಗ್ರಾಮದ ನಿವಾಸಿ, ಭೋವಿ ಜನಾಂಗದ ಕೃಷಿ ಕೂಲಿ ಕಾರ್ಮಿಕ ಚೌಡಪ್ಪ ನಗರದ ಇಕ್ವಿಟಾಸ್ ಫೈನಾನ್ಸ್‌ನಿಂದ ಸುಮಾರು ೨ ಲಕ್ಷ ರು. ಸಾಲ ೨೦೨೧ರಲ್ಲಿ ಪಡೆದಿದ್ದು, ಈಗಾಗಲೇ ಸಾಲದ ೯ ಕಂತುಗಳನ್ನು ಫೈನಾನ್ಸ್‌ಗೆ ಪಾವತಿಸಿರುತ್ತಾರೆ. ಈ ನಡುವೆ ಉಳಿದ ಬಾಕಿ ಹಣ ವಸೂಲಿಗಾಗಿ ಫೈನಾನ್ಸ್‌ರವರು ಒಂದು ತಿಂಗಳ ಹಿಂದೆ ಚೌಡಪ್ಪ ಹಾಗು ಸಹೋದರರಿಗೆ ಸೇರಿದ ೩೦*೫೦ ಅಡಿ ವಿಸ್ತೀರ್ಣದ ಎರಡು ಮನೆಗಳಿಗೆ ಬೀಗ ಜಡಿದು ಕುಟುಂಬದ ಸುಮಾರು ೧೫ ಮಂದಿ ಬೀದಿಯಲ್ಲಿ ಕಾಲ ಕಳೆಯುವಂತೆ ಮಾಡಿದ್ದು, ಶಾಲಾ ಕಟ್ಟಡ, ದೇವಸ್ಥಾನಗಳಲ್ಲಿ ಕುಟುಂಬಸ್ಥರು ಉಳಿದುಕೊಂಡು ಜೀವನ ಸಾಗಿಸಿರುವುದು ತಿಳಿದು ಬಂದಿದೆ. 
    ಫೈನಾನ್ಸ್ ಕಂಪನಿಯ ಈ ಕ್ರೂರ ವರ್ತನೆಯನ್ನು ಖಂಡಿಸಿ ರೈತ ಸಂಘದಿಂದ ಇದರ ವಿರುದ್ಧ ಹೋರಾಟ ಆರಂಭಿಸಿದ್ದು, ಮೊದಲ ಹಂತದಲ್ಲಿ ಕಳೆದ ೨ ದಿನಗಳ ಹಿಂದೆ ಫೈನಾನ್ಸ್‌ರವರು ಎರಡು ಮನೆಗಳಿಗೆ ಜಡಿದಿರುವ ಬೀಗ ತೆರವುಗೊಳಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದೆ.  


ಭದ್ರಾವತಿ ನಗರದ ಇಕ್ವಿಟಾಸ್ ಫೈನಾನ್ಸ್ ಕಛೇರಿಯಲ್ಲಿ ಪ್ರತಿಭಟನೆ ನಡೆಸಿದ ರೈತರು, ಫೈನಾನ್ಸ್ ವಿರುದ್ಧ ಘೋಷಣೆಗಳನ್ನು ಕೂಗುವ ಜೊತೆಗೆ ಎಚ್ಚರಿಕೆ ನೋಟಿಸ್ ಅಂಟಿಸಿದರು. 
    ಫೈನಾನ್ಸ್ ಕಛೇರಿಯಲ್ಲಿ ಪ್ರತಿಭಟನೆ : 
    ಮಂಗಳವಾರ ನಗರದ ಇಕ್ವಿಟಾಸ್ ಫೈನಾನ್ಸ್ ಕಛೇರಿಯಲ್ಲಿ ಪ್ರತಿಭಟನೆ ನಡೆಸಿದ ರೈತರು, ಫೈನಾನ್ಸ್ ವಿರುದ್ಧ ಘೋಷಣೆಗಳನ್ನು ಕೂಗುವ ಜೊತೆಗೆ ಸರ್ಕಾರ ಕಾಯ್ದೆ ಜಾರಿಗೆ ತಂದರೂ ಸಹ ಬಡ ರೈತರ ಮೇಲೆ ಕಿರುಕುಳ ಮುಂದುವರೆಯುತ್ತಿರುವುದು ಖಂಡನೀಯ. ತಕ್ಷಣ ಜಿಲ್ಲಾಧಿಕಾರಿಗಳು ಗಮನ ಹರಿಸುವ ಮೂಲಕ ಇಂತಹ ಫೈನಾನ್ಸ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಅಲ್ಲದೆ ` ಮೈಕ್ರೋ ಫೈನಾನ್ಸ್ ಕಂಪನಿಗಳೇ ಊರೊಳಗೆ ಕಾಲಿಟ್ಟರೆ ನಿಮಗೆ ಉಳಿಗಾಲವಿಲ್ಲ' ಎಂಬ ಘೋಷ ವಾಕ್ಯದೊಂದಿಗೆ ಎಚ್ಚರಿಕೆ ದಿನವಾಗಿ ಆಚರಿಸಿ ಕಛೇರಿಗೆ ನೋಟಿಸ್ ಅಂಟಿಸಲಾಯಿತು. 


ಭದ್ರಾವತಿ ನಗರದ ಇಕ್ವಿಟಾಸ್ ಫೈನಾನ್ಸ್ ಕಛೇರಿಯ ಕ್ರೂರ ವರ್ತನೆ ಖಂಡಿಸಿ ಮಂಗಳವಾರ ರೈತರು ಲೋಕಾಯುಕ್ತ ಜಿಲ್ಲಾ ನಿರೀಕ್ಷಕ ವೀರಬಸಪ್ಪ ಕುಶಾಲಪುರ ಅವರಿಗೆ ದೂರು ಸಲ್ಲಿಸಿದರು. 
      ಲೋಕಾಯುಕ್ತರಿಗೆ ದೂರು : 
    ಪ್ರತಿಭಟನೆಗೂ ಮೊದಲು ರೈತರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಲೋಕಾಯುಕ್ತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಹವಾಲು ಸ್ವೀಕಾರ ಸಭೆಯಲ್ಲಿ ಲೋಕಾಯುಕ್ತ ಜಿಲ್ಲಾ ನಿರೀಕ್ಷಕ ವೀರಬಸಪ್ಪ ಕುಶಾಲಪುರ ಅವರಿಗೆ ದೂರು ಸಲ್ಲಿಸಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದ್ದು, ಸರ್ಕಾರ ಕಾಯ್ದೆ ಜಾರಿಗೆ ತಂದರೂ ಸಹ ಕಿರುಕುಳ ನಿಲ್ಲುತ್ತಿಲ್ಲ. ಇಕ್ವಿಟಾಸ್ ಫೈನಾನ್ಸ್ ಕ್ರೂರ ವರ್ತನೆ ಕುರಿತು ಫೆ.೪ರಂದು ತಹಸೀಲ್ದಾರ್ ಗಮನಕ್ಕೆ ತರಲಾಗಿದೆ. ಆದರೆ ತಾಲೂಕು ಆಡಳಿತ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. 
    ಇದಕ್ಕೆ ಸ್ಪಂದಿಸಿದ ವೀರಬಸಪ್ಪ ಕುಶಾಲಪುರ ಅವರು ತಕ್ಷಣ ಕ್ರಮ ಕೈಗೊಳ್ಳುವಂತೆ ತಾಲೂಕು ಆಡಳಿತಕ್ಕೆ ಸೂಚಿಸಿದರು. ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. 
    ರೈತ ಪ್ರಮುಖರಾದ ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಯಶವಂತರಾವ್ ಘೋರ್ಪಡೆ, ಹಿರಿಯಣ್ಣಯ್ಯ, ಮಂಜುನಾಥ್, ಡಿ.ವಿ ವೀರೇಶ್, ಚಂದ್ರಪ್ಪ, ರಂಗಪ್ಪ, ವೀರೇಶ ಸೇರಿದಂತೆ ಗ್ರಾಮದ ಮುಖಂಡರು, ರೈತರು ಉಪಸ್ಥಿತರಿದ್ದರು.