ಭದ್ರಾವತಿಯಲ್ಲಿ ತಾಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಹಳೇನಗರದ ಶ್ರೀವೀರಭದ್ರೇಶ್ವರ ದೇವಸ್ಥಾನದ ಶ್ರೀ ಮಾತಾ ಬನಶಂಕರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಶಿವಮೊಗ್ಗ ಕಾರಗೃಹ ಸಹಾಯಕ ಅಧೀಕ್ಷಕಿ ಪಿ. ಭವ್ಯ ಅವರಿಗೆ ಸರ್ವಮಂಗಳಮ್ಮ ಶಿವಶಂಕರಯ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಭದ್ರಾವತಿ: ಮಹಿಳೆಯರು ಮೊದಲು ತಮ್ಮನ್ನು ತಾವು ಗೌರವಿಸಿಕೊಳ್ಳುವ ಮೂಲಕ ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕು. ಪ್ರಸ್ತುತ ಮಹಿಳೆ ಎಲ್ಲಾ ರೀತಿಯ ಜವಾಬ್ದಾರಿಗಳನ್ನು ನಿರ್ವಹಿಸುವ ಸಾಮರ್ಥ್ಯ ಪಡೆದುಕೊಂಡಿದ್ದಾಳೆ ಎಂದು ಶಿವಮೊಗ್ಗ ಕಾರಗೃಹ ಸಹಾಯಕ ಅಧೀಕ್ಷಕಿ ಪಿ. ಭವ್ಯ ಹೇಳಿದರು.
ಅವರು ಸೋಮವಾರ ತಾಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಹಳೇನಗರದ ಶ್ರೀವೀರಭದ್ರೇಶ್ವರ ದೇವಸ್ಥಾನದ ಶ್ರೀ ಮಾತಾ ಬನಶಂಕರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸರ್ವಮಂಗಳಮ್ಮ ಶಿವಶಂಕರಯ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಒಂದು ಕಾಲದಲ್ಲಿ ಮಹಿಳೆ ಮನೆಯ ೪ ಗೋಡೆಗಳ ನಡುವೆ ಸೀಮಿತವಾಗಿದ್ದಳು. ಆದರೆ ಪ್ರಸ್ತುತ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದು, ಪುರುಷನ ಸಮಾನತೆ ಎದುರು ನೋಡುತ್ತಿದ್ದಾಳೆ. ಸಮಾಜದಲ್ಲಿ ಪುರುಷ ಮತ್ತು ಮಹಿಳೆ ಇಬ್ಬರನ್ನು ಸಮಾನವಾಗಿ ಕಾಣುವ ಮನಸ್ಥಿತಿ ಬದಲಾಗಬೇಕಿದೆ. ಈ ಹಿನ್ನಲೆಯಲ್ಲಿ ಮನೆಗಳಲ್ಲಿ ಇಬ್ಬರಿಗೂ ಸಮಾನ ಅವಕಾಶಗಳನ್ನು ನೀಡಬೇಕು. ಹೆಣ್ಣು ಮಕ್ಕಳಿಗೆ ಇನ್ನೂ ಹೆಚ್ಚಿನ ಶಿಕ್ಷಣ ನೀಡಬೇಕು. ಆಕೆಗೆ ತನ್ನದೇ ಭವಿಷ್ಯ ರೂಪಿಸಿಕೊಳ್ಳುವ ಜವಾಬ್ದಾರಿ ನೀಡಬೇಕೆಂದರು.
ಮಹಿಳೆ ಪ್ರಕೃತಿಯ ವಿಶೇಷ ಸೃಷ್ಟಿಯಾಗಿದ್ದು, ಮಹಿಳೆಯಿಂದ ಯಾವುದೂ ಅಸಾಧ್ಯವಲ್ಲ. ಆಕೆಯಲ್ಲಿ ಅದ್ಭುತ ಶಕ್ತಿ ಇದ್ದು, ಇದು ನಮ್ಮ ನಡುವೆಯೇ ಬಹಳಷ್ಟು ಬಾರಿ ಸಾಬೀತಾಗಿದೆ. ಆಕೆಯ ಸಾಧನೆಗೆ ಮತ್ತಷ್ಟು ಪ್ರಶಂಸೆ, ಪ್ರೋತ್ಸಾಹ ನಮ್ಮಿಂದ ಲಭಿಸಿದಾಗ ಇನ್ನೂ ಹೆಚ್ಚಿನ ಸಾಧನೆ ಮಾಡಲು ಆಕೆಗೆ ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್, ಮಹಿಳೆಯರು ಎಲ್ಲಾ ಕೆಲಸಗಳನ್ನು ಸ್ವತಂತ್ರವಾಗಿ ನಿರ್ವಹಿಸ ಬಲ್ಲರು. ಕುಟುಂಬದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದ್ದು, ಅಲ್ಲದೆ ಕುಟುಂಬ ನಿರ್ವಹಣೆ ಜೊತೆಗೆ ಸಮಾಜದ ಇತರೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಪುರುಷರಂತೆ ಯಾವುದರಲ್ಲೂ ಕಡಿಮೆ ಇಲ್ಲದಂತೆ ಮುನ್ನಡೆಯುತ್ತಿದ್ದು, ನಮ್ಮ ಇತಿಹಾಸದ ಪುಟದಲ್ಲಿ ಆನೇಕ ಸಾಧಕ ಮಹಿಳೆಯರಿದ್ದಾರೆ. ನಮಗೆ ಅವರು ಸ್ಪೂರ್ತಿದಾಯಕರಾಗಿದ್ದು, ಅವರ ದಾರಿಯಲ್ಲಿ ನಾವುಗಳು ಸಹ ಮುನ್ನಡೆಯಬೇಕೆಂದರು.
ಸಮಾಜದ ಗೌರವಾಧ್ಯಕ್ಷೆ ಆರ್.ಎಸ್ ಶೋಭಾ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ. ವಿಜಯದೇವಿಯವರ ಮಾರ್ಗದರ್ಶನದಲ್ಲಿ ಅವರ ತಾಯಿಯವರ ನೆನಪಿನಲ್ಲಿ ಸಾಧಕ ಮಹಿಳೆಯರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುವ ಮೂಲಕ ಕಳೆದ ಕೆಲವು ವರ್ಷಗಳಿಂದ ಮಹಿಳಾ ದಿನಾಚರಣೆ ಆಯೋಜಿಸಿಕೊಂಡು ಬರಲಾಗುತ್ತಿದೆ. ಮಹಿಳೆಯರು ತಮ್ಮನ್ನು ತಾವು ಆತ್ಮವಾಲೋಕನ ಮಾಡಿಕೊಳ್ಳುವ ಜೊತೆಗೆ ಪುರುಷರೊಂದಿಗೆ ತಮ್ಮ ನೋವು-ನಲಿವುಗಳನ್ನು ಹಂಚಿಕೊಳ್ಳುವ ದಿನ ಮಹಿಳಾ ದಿನಾಚರಣೆಯಾಗಬೇಕೆಂಬ ಆಶಯ ನಮ್ಮದಾಗಿದೆ ಎಂದರು.
ನಗರಸಭೆ ಪೌರಕಾರ್ಮಿಕರಾದ ಲಕ್ಷ್ಮಮ್ಮ ಸೋಮಣ್ಣ, ಪತ್ರಕರ್ತೆ ಆರ್. ಫಿಲೋಮಿನ ಅಂತೋಣಿ, ಡಿ.ಜಿ ಹಳ್ಳಿ ಆಶಾ ಕಾರ್ಯಕರ್ತೆ ರಾಜೇಶ್ವರಿ ನಂದೀಶ್ ಮತ್ತು ಹಳ್ಳಿಕೆರೆ-ಬಾರಂದೂರು ಅಂಗನವಾಡಿ ಕಾರ್ಯಕರ್ತೆ ಟಿ. ಮಂಜುಳ ಮಂಜುನಾಥ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾಜದ ಅಧ್ಯಕ್ಷೆ ನಾಗರತ್ನ ವಾಗೀಶ್ ಕೋಠಿ, ಪ್ರಶಸ್ತಿ ಸಂಸ್ಥಾಪಕಿ, ಎಮೆರಿಟಸ್ ಪ್ರಾಧ್ಯಾಪಕಿ ಡಾ. ವಿಜಯದೇವಿ, ಸಮಾಜದ ಉಪಾಧ್ಯಕ್ಷೆ ವಿಜಯ ಜಗನ್ನಾಥ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಬಾರಿ ಲಾಟರಿ ಮೂಲಕ ಅದೃಷ್ಟ ಮಹಿಳೆಯಾಗಿ ನಾಗರತ್ನ ಕೋಠಿ ಆಯ್ಕೆಯಾದರು. ವಾಣಿಶ್ರೀ, ಸರಿತ ಪ್ರಾರ್ಥಿಸಿ, ಕಲ್ಪನ ಮಂಜುನಾಥ್ ಸ್ವಾಗತಿಸಿದರು. ಶಶಿಕಲಾ, ಅನುಪಮ ಮತ್ತು ಗುಣ ಅತಿಥಿ ಪರಿಚಯ ನಡೆಸಿಕೊಟ್ಟರು. ವೀಣಾ ಚಂದ್ರಶೇಖರ್ ಕೋಠಿ ಕಾರ್ಯಕ್ರಮ ನಿರೂಪಿಸಿ, ಭಾಗ್ಯ ನಿಜಗುಣ ವಂದಿಸಿದರು.
ಭದ್ರಾವತಿಯಲ್ಲಿ ತಾಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಹಳೇನಗರದ ಶ್ರೀವೀರಭದ್ರೇಶ್ವರ ದೇವಸ್ಥಾನದ ಶ್ರೀ ಮಾತಾ ಬನಶಂಕರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಾದ ಲಕ್ಷ್ಮಮ್ಮ ಸೋಮಣ್ಣ, ಆರ್. ಫಿಲೋಮಿನ ಅಂತೋಣಿ, ರಾಜೇಶ್ವರಿ ನಂದೀಶ್ ಮತ್ತು ಟಿ. ಮಂಜುಳ ಮಂಜುನಾಥ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.