Thursday, March 27, 2025

ಎಂಪಿಎಂ ನಿವೃತ್ತ ಕಾರ್ಮಿಕ ಎಂ. ಪುಟ್ಟಸ್ವಾಮಿ ನಿಧನ

ಎಂ. ಪುಟ್ಟಸ್ವಾಮಿ 
    ಭದ್ರಾವತಿ: ನಗರದ ಹುಡ್ಕೋ ಕಾಲೋನಿ ಉಂಬ್ಳೆಬೈಲು ರಸ್ತೆ ನಿವಾಸಿ, ಮೈಸೂರು ಕಾಗದ ಕಾರ್ಖಾನೆ ಓಲ್ಡ್ ಸ್ಟಾಕ್ ರೂಮ್ ನಿವೃತ್ತ ಕಾರ್ಮಿಕ ಎಂ. ಪುಟ್ಟಸ್ವಾಮಿ (೭೨) ಬುಧವಾರ ರಾತ್ರಿ ನಿಧನ ಹೊಂದಿದ್ದಾರೆ. 
    ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಇದ್ದಾರೆ. ಮೃತರ ಅಂತ್ಯಕ್ರಿಯೆ ಬೈಪಾಸ್ ರಸ್ತೆ ಸಮೀಪದ ತಿಮ್ಲಾಪುರ ರಸ್ತೆಯ ಶಂಕರಪ್ಪನಕಟ್ಟೆ ಶ್ರೀ ಸತ್ಯಹರಿಶ್ಚಂದ್ರ ಹಿಂದು ರುದ್ರಭೂಮಿಯಲ್ಲಿ ಗುರುವಾರ ಸಂಜೆ ನೆರವೇರಿತು. ಇವರ ನಿಧನಕ್ಕೆ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಕಾರ್ಮಿಕರು, ಸ್ಥಳೀಯ ಮುಖಂಡರು, ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಮೆಸ್ಕಾಂ ಗ್ರಾಹಕರ ಸಲಾಹ ಸಮಿತಿ ಸಭೆ, ಕಚೇರಿ ಉದ್ಘಾಟನೆ


ಭದ್ರಾವತಿ ಮೆಸ್ಕಾಂ ನಗರ ಉಪ ವಿಭಾಗ ಹಾಗೂ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಗೆ ರಚಿಸಲಾದ ಗ್ರಾಹಕರ ಸಲಾಹ ಸಮಿತಿ ಸಭೆ ಹಾಗೂ ಕಚೇರಿ ಉದ್ಘಾಟನಾ ಸಮಾರಂಭ ನಗರದ ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ಉಂಬ್ಳೆಬೈಲು ರಸ್ತೆಯಲ್ಲಿರುವ ಮೆಸ್ಕಾಂ ಕಛೇರಿಯಲ್ಲಿ ಗುರುವಾರ ನಡೆಯಿತು. ಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ನೂತನ ಕಚೇರಿ ಉದ್ಘಾಟಿಸಿದರು.
    ಭದ್ರಾವತಿ: ಮೆಸ್ಕಾಂ ನಗರ ಉಪ ವಿಭಾಗ ಹಾಗೂ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಗೆ ರಚಿಸಲಾದ ಗ್ರಾಹಕರ ಸಲಾಹ ಸಮಿತಿ ಸಭೆ ಹಾಗೂ ಕಚೇರಿ ಉದ್ಘಾಟನಾ ಸಮಾರಂಭ ನಗರದ ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ಉಂಬ್ಳೆಬೈಲು ರಸ್ತೆಯಲ್ಲಿರುವ ಮೆಸ್ಕಾಂ ಕಛೇರಿಯಲ್ಲಿ ಗುರುವಾರ ನಡೆಯಿತು.
    ಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ನೂತನ ಕಚೇರಿ ಉದ್ಘಾಟಿಸಿದರು. ಸಲಹಾ ಸಮಿತಿ ತಾಲೂಕು ಅಧ್ಯಕ್ಷ ಬಸವಂತಪ್ಪ ಅಧ್ಯಕ್ಷತೆ ವಹಿಸಿದ್ದರು. 
    ನಗರದ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಾಶ್ ಬಳ್ಳಾಪುರ ಮಾತನಾಡಿ, ಸಲಹಾ ಸಮಿತಿ ರಚನೆಯಿಂದ ಗ್ರಾಹಕರ ಕುಂದುಕೊರತೆಗಳನ್ನು ತಕ್ಷಣ ಬಗೆಹರಿಸಬಹುದಾಗಿದೆ. ಅಲ್ಲದೆ ಗ್ರಾಹಕರಿಗೆ ಸಮಿತಿ ಹೆಚ್ಚಿನ ಸಹಕಾರಿಯಾಗಲಿದೆ ಎಂದರು.
    ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್, ಮೆಸ್ಕಾಂ ಗ್ರಾಮಾಂತರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೊಹಮ್ಮದ್ ಮುನಾಫ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎಸ್. ಕುಮಾರ್, ಎಚ್.ಎಲ್ ಷಡಾಕ್ಷರಿ,  ಉದ್ಯಮಿ ಬಿ.ಕೆ ಜಗನ್ನಾಥ್, ನಗರಸಭೆ ಸದಸ್ಯರಾದ ಚನ್ನಪ್ಪ, ಬಿ.ಟಿ ನಾಗರಾಜ್, ಮಾವಿನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್, ಮುಖಂಡರಾದ ಪ್ರಕಾಶ್‌ರಾವ್, ಸಿ. ಜಯಪ್ಪ, sಸುರೇಶ್ ವರ್ಮಾ, ವಿಜಯಲಕ್ಷ್ಮೀ, ಮಂಜುನಾಥ್ ಸೇರಿದಂತೆ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
    ನಗರ ಉಪ ವಿಭಾಗ ಹಾಗೂ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಗೆ ರಚಿಸಲಾದ ಮೆಸ್ಕಾಂ ಗ್ರಾಹಕರ ಸಲಾಹ ಸಮಿತಿಯಲ್ಲಿ ತಲಾ ೧೨ ಸದಸ್ಯರಂತೆ ಒಟ್ಟು ೪೬ ಸದಸ್ಯರಿದ್ದು, ಈ ಪೈಕಿ ೫ ಸದಸ್ಯರು ಮುಖ್ಯ ಸಮಿತಿಯಲ್ಲಿದ್ದಾರೆ. 
 

ಭದ್ರಾವತಿ ಮೆಸ್ಕಾಂ ನಗರ ಉಪ ವಿಭಾಗ ಹಾಗೂ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಗೆ ರಚಿಸಲಾದ ಗ್ರಾಹಕರ ಸಲಾಹ ಸಮಿತಿ ಸಭೆ ಹಾಗೂ ಕಚೇರಿ ಉದ್ಘಾಟನಾ ಸಮಾರಂಭ ನಗರದ ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ಉಂಬ್ಳೆಬೈಲು ರಸ್ತೆಯಲ್ಲಿರುವ ಮೆಸ್ಕಾಂ ಕಛೇರಿಯಲ್ಲಿ ಗುರುವಾರ ನಡೆಯಿತು. ಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ಮೆಸ್ಕಾಂ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 

Wednesday, March 26, 2025

ಯುಗಾದಿ ಹಬ್ಬದಂದು ರೈಲ್ವೆ ಮೇಲ್ಸೇತುವೆ ಸಾರ್ವಜನಿಕ ಸೇವೆಗೆ ಸಮರ್ಪಣೆ

ಭದ್ರಾವತಿ ಹಳೇನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಬಿಜೆಪಿ ಪಕ್ಷದ ಯುವ ಮುಖಂಡರಾದ ಜಿ. ಆನಂದಕುಮಾರ್ ಮತ್ತು ಮಂಗೋಟೆ ರುದ್ರೇಶ್‌ರವರು ಆನಂದ ಸಾಮಾಜಿಕ ಸೇವಾ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ ರಾಘವೇಂದ್ರ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. 
    ಭದ್ರಾವತಿ : ಕಳೆದ ಸುಮಾರು ೩ ವರ್ಷಗಳಿಂದ ನಿರ್ಮಾಣಗೊಳ್ಳುತ್ತಿರುವ ನಗರದ ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮುಕ್ತಾಯಗೊಂಡಿದ್ದು, ಯುಗಾದಿ ಹಬ್ಬದಂದು ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗುವುದು ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು. 
    ಅವರು ಹಳೇನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಬಿಜೆಪಿ ಪಕ್ಷದ ಯುವ ಮುಖಂಡರಾದ ಜಿ. ಆನಂದಕುಮಾರ್ ಮತ್ತು ಮಂಗೋಟೆ ರುದ್ರೇಶ್‌ರವರು ಆನಂದ ಸಾಮಾಜಿಕ ಸೇವಾ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು. 
ರೈಲ್ವೆ ಮೇಲ್ಸೇತುವೆಯಿಂದ ಸಾಕಷ್ಟು ಪ್ರಯೋಜನವಾಗಲಿದ್ದು, ಬಿ.ಎಚ್ ರಸ್ತೆಯಲ್ಲಿ ಶಿವಮೊಗ್ಗ-ಭದ್ರಾವತಿ ನಡುವೆ ಸಂಚರಿಸುವ ವಾಹನಗಳ ಸುಗಮ ಸಂಚಾರಕ್ಕೆ ಸಹಕಾರಿಯಾಗಿದೆ ಎಂದರು. 
    ನಗರಸಭೆ ಮಾಜಿ ಸದಸ್ಯ, ಪಕ್ಷದ ಯುವ ಮುಖಂಡ ಜಿ. ಆನಂದಕುಮಾರ್‌ರವರು ಪ್ರತಿ ವರ್ಷದಂತೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ನೆನಪಿನಲ್ಲಿ ಕ್ಯಾಲೆಂಡರ್ ಬಿಡುಗಡೆಗೊಳಿಸುತ್ತಿದ್ದು, ಅಲ್ಲದೆ ಆನಂದ ಸಾಮಾಜಿಕ ಸೇವಾ ಸಂಸ್ಥೆ ಮೂಲಕ ಹಲವಾರು ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಾ ಬಂದಿದ್ದಾರೆ. 
    ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಮಂಡಲ ಅಧ್ಯಕ್ಷ ಜಿ.ಧರ್ಮ ಪ್ರಸಾದ್, ಮುಖಂಡರಾದ ಟಿ.ಎಸ್ ದುಗ್ಗೇಶ್, ಅಣ್ಣಪ್ಪ, ಬಿ.ಜಿ ರಾಮಲಿಂಗಯ್ಯ, ಎಂ. ಮಂಜುನಾಥ್, ಮಧುಕರ್ ಕಾನಿಟ್ಕರ್, ದಿನೇಶ್, ಕೆ.ಎಚ್ ತೀರ್ಥಯ್ಯ, ನಗರಸಭಾ ಸದಸ್ಯೆ ಅನುಪಮ ಚನ್ನೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮಲಗಿದ್ದ ವ್ಯಕ್ತಿ ಮೇಲೆ ಕುಸಿದುಬಿದ್ದ ಗೋಡೆ : ಅಗ್ನಿಶಾಮಕದಳ ಸಿಬ್ಬಂದಿಯಿಂದ ರಕ್ಷಣೆ

ಭದ್ರಾವತಿ ಕಾಗದನಗರದ ಪಾಳುಬಿದ್ದು ಶಿಥಿಲಗೊಂಡಿದ್ದ, ತುಂಬಾ ಹಳೇಯದಾದ ಮನೆಯೊಂದರಲ್ಲಿ ಮಲಗಿದ್ದ ವ್ಯಕ್ತಿಯೋರ್ವನ ಮೇಲೆ ಗೋಡೆ ಕುಸಿದುಬಿದ್ದಿದ್ದು, ಅಗ್ನಿಶಾಮಕದಳ ಸಿಬ್ಬಂದಿಗಳು ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾಗಿರುವ ಘಟನೆ ಬುಧವಾರ ನಡೆದಿದೆ. 
    ಭದ್ರಾವತಿ : ಕಾಗದನಗರದ ಪಾಳುಬಿದ್ದು ಶಿಥಿಲಗೊಂಡಿದ್ದ, ತುಂಬಾ ಹಳೇಯದಾದ ಮನೆಯೊಂದರಲ್ಲಿ ಮಲಗಿದ್ದ ವ್ಯಕ್ತಿಯೋರ್ವನ ಮೇಲೆ ಗೋಡೆ ಕುಸಿದುಬಿದ್ದಿದ್ದು, ಅಗ್ನಿಶಾಮಕದಳ ಸಿಬ್ಬಂದಿಗಳು ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾಗಿರುವ ಘಟನೆ ಬುಧವಾರ ನಡೆದಿದೆ. 
    ಸುಮಾರು ೩೮ ವರ್ಷದ ಆನಂದ ಸ್ವಾಮಿ ಎಂಬುವರು ಕಾಗದನಗರದ ೭ನೇ ವಾರ್ಡ್‌ನ ಪಾಳುಬಿದ್ದಿದ್ದ ಮನೆಯೊಂದರಲ್ಲಿ ಮಲಗಿದ್ದಾಗ ಸಂಜೆ ೫ ಗಂಟೆ ಸಮಯದಲ್ಲಿ ಏಕಾಏಕಿ ಮನೆಯ ಗೋಡೆ ಕುಸಿದು ಬಿದ್ದಿದೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗ್ನಿಶಾಮಕದಳ ಸಿಬ್ಬಂದಿಗಳು ಧಾವಿಸಿ ಸ್ಥಳೀಯರೊಂದಿಗೆ ಜೆಸಿಬಿ ಯಂತ್ರದ ಮೂಲಕ ಗೋಡೆ ಮಣ್ಣು ತೆರವುಗೊಳಿಸಿ ರಕ್ಷಿಸಿದ್ದಾರೆ. 
    ಅಗ್ನಿಶಾಮಕಠಾಣೆ ಸಹಾಯಕ ಠಾಣಾಧಿಕಾರಿ ಸಿ.ಎಚ್ ಹುಲಿಯಪ್ಪ ನೇತೃತ್ವದಲ್ಲಿ ಸಿಬ್ಬಂದಿಗಳಾದ ಬಬು, ಆನಂದ್, ಮಂಜುನಾಥ್, ಸುರೇಶ್, ಶ್ರೀನಿವಾಸ್, ಹರೀಶ್, ಮಹೇಂದ್ರ, ರಾಜಾನಾಯ್ಕ, ವೀರೇಶ್, ಬಾಬಲು ಮಾಣಿಕ ಬಾಯ್ ಮತ್ತು ಸಿದ್ದಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 

ಗಮನ ಸೆಳೆದ ಸಂಗೀತದಲ್ಲಿ ಸ್ತ್ರೀ ಸಂವೇದನೆ ವಿನೂತನ ಕಾರ್ಯಕ್ರಮ

ಭದ್ರಾವತಿ ಭೂಮಿಕಾ ವೇದಿಕೆ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ)ಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಸಂಗೀತದಲ್ಲಿ ಸ್ತ್ರೀ ಸಂವೇದನೆ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಭದ್ರಾವತಿ: ಭೂಮಿಕಾ ವೇದಿಕೆ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ)ಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಸಂಗೀತದಲ್ಲಿ ಸ್ತ್ರೀ ಸಂವೇದನೆ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಶಿವಮೊಗ್ಗದ ವಿದುಷಿ ಸುರೇಖಾ ಹೆಗಡೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಭೂಮಿಕಾ ವೇದಿಕೆ ಅಧ್ಯಕ್ಷ ಡಾ. ಕೃಷ್ಣ ಎಸ್. ಭಟ್ ಅಧ್ಯಕ್ಷತೆ ವಹಿಸಿದ್ದರು. ಸಂಗೀತದಲ್ಲಿ ಸ್ತ್ರೀ ಸಂವೇದನೆ ವಿನೂತನ ಕಾರ್ಯಕ್ರಮ ಎಲ್ಲರ ಗಮನ ಸೆಳೆಯುವ ಮೂಲಕ ಮೆಚ್ಚುಗೆಗೆ ಪಾತ್ರವಾಯಿತು. 
   ವೇದಿಕೆ ಪ್ರಧಾನ ಕಾರ್ಯದರ್ಶಿ ಅಪರಂಜಿ ಶಿವರಾಜ್, ಕಾರ್ಯದರ್ಶಿ ಡಾ. ವೀಣಾಭಟ್ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು, ಸಾಹಿತ್ಯಾಭಿಮಾನಿಗಳು ಹಾಗು ಆಸಕ್ತರು ಪಾಲ್ಗೊಂಡಿದ್ದರು. 

೩ ತಿಂಗಳಿನಿಂದ ಚರಂಡಿಗಳಲ್ಲಿ ಸ್ವಚ್ಛತೆ ಇಲ್ಲ, ಸೊಳ್ಳೆ ಹಾವಳಿಯಿಂದ ನಿವಾಸಿಗಳು ತತ್ತರ

ಭದ್ರಾವತಿ ನಗರಸಭೆ ವಾರ್ಡ್ ನಂ.೯ರ ವ್ಯಾಪ್ತಿಯ ಭದ್ರಾ ಕಾಲೋನಿಯಲ್ಲಿ ಕಳೆದ ಸುಮಾರು ೩ ತಿಂಗಳಿನಿಂದ ಚರಂಡಿ ಸ್ವಚ್ಛತೆ ಕೈಗೊಳ್ಳದ ಕಾರಣ ಸೊಳ್ಳೆ ಹಾವಳಿ ಹೆಚ್ಚಾಗಿದ್ದು, ಇದರಿಂದಾಗಿ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. 
    ಭದ್ರಾವತಿ : ನಗರಸಭೆ ವಾರ್ಡ್ ನಂ.೯ರ ವ್ಯಾಪ್ತಿಯ ಭದ್ರಾ ಕಾಲೋನಿಯಲ್ಲಿ ಕಳೆದ ಸುಮಾರು ೩ ತಿಂಗಳಿನಿಂದ ಚರಂಡಿ ಸ್ವಚ್ಛತೆ ಕೈಗೊಳ್ಳದ ಕಾರಣ ಸೊಳ್ಳೆ ಹಾವಳಿ ಹೆಚ್ಚಾಗಿದ್ದು, ಇದರಿಂದಾಗಿ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. 
    ನಗರ ಪ್ರದೇಶಕ್ಕೆ ಹೊಂದಿಕೊಂಡಿರುವ ಸ್ವಲ್ಪ ಗ್ರಾಮೀಣ ಭಾಗವಾಗಿರುವ ಭದ್ರಾ ಕಾಲೋನಿಯಲ್ಲಿ ಹೆಚ್ಚಿನ ನಿವಾಸಿಗಳು ವಾಸವಾಗಿದ್ದು, ನಗರಸಭೆ ವತಿಯಿಂದ ಪ್ರತಿದಿನ ಮನೆ ಮನೆ ಕಸ ಸಂಗ್ರಹಿಸಲಾಗುತ್ತಿದೆ. ಆದರೆ ಕಳೆದ ೩ ತಿಂಗಳಿನಿಂದ ಚರಂಡಿಗಳ ಸ್ವಚ್ಛತೆ ಕೈಗೊಂಡಿಲ್ಲ. ಇದರಿಂದಾಗಿ ಚರಂಡಿಗಳಲ್ಲಿ ಬಾರಿ ಪ್ರಮಾಣದಲ್ಲಿ ಕಸ ಸಂಗ್ರಹವಾಗಿದ್ದು, ಅಲ್ಲದೆ ಚರಂಡಿಗಳಲ್ಲಿ ನೀರು ಮುಂದೆ ಹರಿಯದೆ ನಿಂತುಕೊಳ್ಳುತ್ತಿದೆ. ಇದರಿಂದಾಗಿ ಚರಂಡಿಗಳು ಸೊಳ್ಳೆಗಳಿಗೆ ಆಶ್ರಯ ತಾಣಗಳಾಗಿ ಮಾರ್ಪಾಡಾಗಿವೆ. 
    ದೇವಸ್ಥಾನ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಅದರಲ್ಲೂ ಜನಸಂದಣಿ ಹೆಚ್ಚಾಗಿರುವ ಸ್ಥಳಗಳಲ್ಲಿ ಚರಂಡಿ ಸ್ವಚ್ಛತೆ ಕೈಗೊಳ್ಳದಿರುವುದುನಿವಾಸಿಗಳು ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ. ಪ್ರಸ್ತುತ ಬೇಸಿಗೆ ಕಾಲವಾಗಿರುವುದರಿಂದ ಸೊಳ್ಳೆಗಳ ಸಂತತಿ ವೇಗವಾಗಿ ಬೆಳೆಯುತ್ತಿದ್ದು, ರೋಗರುಜಿನಗಳು ಹೆಚ್ಚಾಗುವ ಭೀತಿ ಎದುರಾಗಿದೆ. ಈಗಾಗಲೇ ಹಲವು ಬಾರಿ ವಾರ್ಡಿನ ನಗರಸಭೆ ಚುನಾಯಿತ ಸದಸ್ಯರಿಗೆ ಹಾಗು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.  ಅಲ್ಲದೆ ತಕ್ಷಣ ಎಲ್ಲಾ ರಸ್ತೆಗಳ ಚರಂಡಿಗಳಲ್ಲಿ ಸ್ವಚ್ಛತೆ ಕೈಗೊಂಡು ಸೊಳ್ಳೆ ಹಾವಳಿಯಿಂದ ರಕ್ಷಿಸುವಂತೆ ನಿವಾಸಿಗಳು ಮನವಿ ಮಾಡಿದ್ದಾರೆ. 

Tuesday, March 25, 2025

ರೌಡಿಶೀಟರ್ ಅಬಿದ್ ಕಾಲಿಗೆ ಗುಂಡು : ಬಂಧನ

ರೌಡಿಶೀಟರ್ ಕಡೇಕಲ್ ಆಬಿದ್
    ಭದ್ರಾವತಿ : ನಗರದ ಬೊಮ್ಮನಕಟ್ಟೆ ಹಿರಿಯೂರು ಚಾನಲ್ ಬಳಿ ರೌಡಿಶೀಟರ್ ಶಿವಮೊಗ್ಗ ಕಡೇಕಲ್ ನಿವಾಸಿ ಆಬಿದ್(೩೯) ಕಾಲಿಗೆ ಪೇಪರ್‌ಟೌನ್ ಠಾಣೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ಮಂಗಳವಾರ ನಡೆದಿದೆ. 
    ಪೊಲೀಸರು ಹಿಡಿಯಲು ಹೋದಾಗ ಕಾನ್ಸ್‌ಸ್ಟೇಬಲ್ ಅರುಣ್‌ನನ್ನು ಚಾಕಿವಿನಿಂದ ಇರಿದು ಓಡಿ ಹೋಗಲು ಯತ್ನಿಸಿದಾಗ ಠಾಣೆ ನಿರೀಕ್ಷಕಿ ನಾಗಮ್ಮ ಗುಂಡು ಹಾರಿಸಿದ್ದಾರೆ.  ಶಿವಮೊಗ್ಗ ರೌಡಿಶೀಟರ್ ಯಾಸಿನ್ ಖುರೇಶಿ ಸಹಚರನಾಗಿರುವ ಈತನು ಇತ್ತೀಚೆಗೆ ಕೊಲೆ ಯತ್ನ ಕೇಸಿನಲ್ಲಿ ಭಾಗಿಯಾಗಿ ನಾಪತ್ತೆಯಾಗಿದ್ದನು. ಈತನ ಬಂಧನಕ್ಕೆ ಪೇಪರ್‌ಟೌನ್ ಠಾಣೆ ಪೊಲೀಸರ ತಂಡ ಬಲೆ ಬೀಸಿತ್ತು. 
    ಬೊಮ್ಮನಕಟ್ಟೆ ಹಿರಿಯೂರು ಚಾನಲ್ ಬಳಿ ಈತನನ್ನು ಪತ್ತೆ ಮಾಡಿದ ತಂಡ ಠಾಣೆ ನಿರೀಕ್ಷಕಿ ನಾಗಮ್ಮ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡಿತ್ತು. ಈತನನ್ನು ಹಿಡಿದು ಬಂಧಿಸಲು ಮುಂದಾದ ಕಾನ್ಸ್‌ಸ್ಟೇಬಲ್ ಅರುಣ್ ಮತ್ತು ಹನುಮಂತ ಇಬ್ಬರ ಮೇಲೆ ದಾಳಿ ನಡೆಸಿದ್ದು,  ಅರುಣ್  ಮೇಲೆ  ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ನಿರೀಕ್ಷಕಿ ನಾಗಮ್ಮ ರಕ್ಷಣೆಗಾಗಿ ಕಾಲಿಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. . ಆತನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನ ಮೇಲೆ ಕೊಲೆ, ಕೊಲೆ ಯತ್ನ. ರಾಬರಿ ಇನ್ನು ಮುಂತಾದ ೨೦ ಪ್ರಕರಣಗಳಿವೆ.