Friday, March 28, 2025

ಕನ್ನಡ ಸಾಹಿತ್ಯ ಭವನದ ಸಭಾಮಂಟಪ ರಂಗಮಂದಿರದ ಮಾದರಿಯಲ್ಲಿ ನಿರ್ಮಿಸಿ

ಭದ್ರಾವತಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕನ್ನಡ ಸಾಹಿತ್ಯ ಭವನದ ಸಭಾಮಂಟಪ ರಂಗಮಂದಿರದ ಮಾದರಿಯಲ್ಲಿ ನಿರ್ಮಾಣಗೊಳಿಸುವಂತೆ ಅಂಬೇಡ್ಕರ್ ಜಾನಪದ ಕಲಾ ಸಂಘದಿಂದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ : ನಗರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕನ್ನಡ ಸಾಹಿತ್ಯ ಭವನದ ಸಭಾಮಂಟಪ ರಂಗಮಂದಿರದ ಮಾದರಿಯಲ್ಲಿ ನಿರ್ಮಾಣಗೊಳಿಸುವಂತೆ ಅಂಬೇಡ್ಕರ್ ಜಾನಪದ ಕಲಾ ಸಂಘದಿಂದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು. 
    ನ್ಯೂಟೌನ್ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಛೇರಿಯಲ್ಲಿ ಸಂಜೆ ನೂತನ ಕನ್ನಡ ಸಾಹಿತ್ಯ ಭವನ ನಿರ್ಮಾಣ ಸಂಬಂಧ ಏರ್ಪಡಿಸಲಾಗಿದ್ದ ಸಭೆಯಲ್ಲಿ ಮನವಿ ಸಲ್ಲಿಸಲಾಯಿತು. 
    ನಗರದಲ್ಲಿ ರಂಗಮಂದಿರದ ಕೊರತೆ ಇದ್ದು, ಈ ಹಿನ್ನಲೆಯಲ್ಲಿ ನಾಟಕಗಳು ಹೆಚ್ಚು ಪ್ರದರ್ಶನಗೊಳ್ಳುತ್ತಿಲ್ಲ. ಬಾಡಿಗೆಗೆ ಕಲ್ಯಾಣ ಮಂಟಪಗಳಿಗೆ ಹಣ ಕೊಟ್ಟು ನಾಟಕ ಪ್ರದರ್ಶನ ಮಾಡುವುದು ಅಸಾಧ್ಯವಾಗಿದೆ. ಕೆಲವು ರಂಗ ತಂಡಗಳು ಮತ್ತು ರಂಗ ಕಲಾವಿದರು ನಾಟಕ ಪ್ರದರ್ಶನ ಮಾಡಲು ಉತ್ಸುಕರಾಗಿದ್ದಾರೆ. ಅಲ್ಲದೆ ಪ್ರಸ್ತುತ ರಂಗ ಚಟುವಟಿಕೆಗಳು ಕಣ್ಮರೆಯಾಗುತ್ತಿದ್ದು, ಇವುಗಳನ್ನು ಉಳಿಸಿಕೊಳ್ಳುವುದು ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ನೂತನ ಕನ್ನಡ ಸಾಹಿತ್ಯ ಭವನದ ಸಭಾಮಂಟಪ ರಂಗಮಂದಿರದ ಮಾದರಿಯಲ್ಲಿ ನಿರ್ಮಾಣ ಮಾಡಬೇಕೆಂದು ಮನವಿಯಲ್ಲಿ ಕೋರಲಾಗಿದೆ.
    ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಕನ್ನಡ ಸಾಹಿತ್ಯ ಪರಿಷತ್ ಭವನ ನಿರ್ಮಾಣ ಸಮಿತಿ ಅಧ್ಯಕ್ಷೆ, ಎಮರಿಟಸ್ ಪ್ರಾಧ್ಯಾಪಕಿ ಡಾ. ವಿಜಯದೇವಿ, ಸಮಿತಿ ಪ್ರಮುಖರಾದ ಡಿ. ಪ್ರಭಾಕರ ಬೀರಯ್ಯ, ಜಾನಪದ ಪರಿಷತ್ ಹಿರಿಯೂರು ಹೋಬಳಿ ಘಟಕದ ಅಧ್ಯಕ್ಷ ಜಯರಾಂ ಗೊಂದಿ, ಅಂಬೇಡ್ಕರ್ ಜಾನಪದ ಕಲಾ ಸಂಘದ ತಮಟೆ ಜಗದೀಶ್, ದಿವಾಕರ್, ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಯುಗಾದಿ ಕವಿತಾ ವಾಚನ ಸ್ಪರ್ಧೆಯಲ್ಲಿ ಸಾಹಿತಿ ಜೆ.ಎನ್ ಬಸವರಾಜಪ್ಪ ಕವನ ವಾಚನ

ಶಿವಮೊಗ್ಗ ಸಹ್ಯಾದ್ರಿ ಲಲಿತ ಕಲಾ ಅಕಾಡೆಮಿ ವತಿಯಿಂದ ಕೀರ್ತಿನಗರದ ವನಿತಾ ವಿದ್ಯಾಲಯದ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಯುಗಾದಿ ಕವಿತಾ ವಾಚನ ಸ್ಪರ್ಧೆಯಲ್ಲಿ ಭದ್ರಾವತಿ ನಗರದ ಹೊಸಮನೆ ನಿವಾಸಿ, ಹಿರಿಯ ಸಾಹಿತಿ ಜೆ.ಎನ್ ಬಸವರಾಜಪ್ಪ ಭಾಗವಹಿಸಿದ್ದರು. 
    ಭದ್ರಾವತಿ : ಶಿವಮೊಗ್ಗ ಸಹ್ಯಾದ್ರಿ ಲಲಿತ ಕಲಾ ಅಕಾಡೆಮಿ ವತಿಯಿಂದ ಕೀರ್ತಿನಗರದ ವನಿತಾ ವಿದ್ಯಾಲಯದ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಯುಗಾದಿ ಕವಿತಾ ವಾಚನ ಸ್ಪರ್ಧೆಯಲ್ಲಿ ನಗರದ ಹೊಸಮನೆ ನಿವಾಸಿ, ಹಿರಿಯ ಸಾಹಿತಿ ಜೆ.ಎನ್ ಬಸವರಾಜಪ್ಪ ಭಾಗವಹಿಸಿದ್ದರು. 
    ವನಿತಾ ವಿದ್ಯಾಲಯದಲ್ಲಿ ಜರುಗಿದ ಸ್ಪರ್ಧೆಯಲ್ಲಿ ಸುಮಾರು ೨೦ಕ್ಕೂ ಹೆಚ್ಚು ಕವಿಗಳು ಪಾಲ್ಗೊಂಡಿದ್ದರು. ಜೆ.ಎನ್ ಬಸವರಾಜಪ್ಪರವರು ತಾವು ರಚಿಸಿರುವ ಮತ್ತೆ ಮತ್ತೆ ಯುಗಾದಿ ಕವನ ವಾಚಿಸಿದರು. ಈಗಾಗಲೇ ಹಲವಾರು ವೇದಿಕೆಗಳಲ್ಲಿ ಬಸವರಾಜಪ್ಪರವರು ತಮ್ಮ ಕವನಗಳನ್ನು ವಾಚಿಸಿದ್ದಾರೆ. ಅಲ್ಲದೆ ಭದ್ರಾವತಿ ಆಕಾಶವಾಣಿ ಕೇಂದ್ರದ ಹಲವಾರು ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾರೆ. 
    ವಿಜೇತರಿಗೆ ಪ್ರಾಂಶುಪಾಲ ಪ್ರೊ. ಸತ್ಯನಾರಾಯಣ ಬಹುಮಾನಗಳನ್ನು ವಿತರಿಸಿದರು. ಸಹ್ಯಾದ್ರಿ ಲಲಿತ ಕಲಾ ಅಕಾಡೆಮಿ ಅಧ್ಯಕ್ಷೆ ತಾರಾ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ವನಿತಾ ವಿದ್ಯಾಲಯದ ರಮ್ಯ ಉಪಸ್ಥಿತರಿದ್ದರು. 

ಅವ್ಯಸ್ಥೆಯ ಸಂಚಾರ ಸುಗಮಗೊಳಿಸಲು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ

ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಅಧಿಕವಾಗುತ್ತಿದ್ದು, ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಂಚಾರಿ ಪೊಲೀಸರೊಂದಿಗೆ ಶುಕ್ರವಾರ ನಗರಸಭೆ ಆಡಳಿತ ಅಧ್ಯಕ್ಷೆ ಕೆ.ಸಿ ಗೀತಾ ರಾಜಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಚರ್ಚೆ ನಡೆಸಿತು. 
    ಭದ್ರಾವತಿ: ನಗರಸಭೆ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಅಧಿಕವಾಗುತ್ತಿದ್ದು, ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಂಚಾರಿ ಪೊಲೀಸರೊಂದಿಗೆ ಶುಕ್ರವಾರ ನಗರಸಭೆ ಆಡಳಿತ ಅಧ್ಯಕ್ಷೆ ಕೆ.ಸಿ ಗೀತಾ ರಾಜಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಚರ್ಚೆ ನಡೆಸಿತು. 
    ನಗರಸಭೆ ಹಿರಿಯ ಸದಸ್ಯ ಬಿ.ಟಿ ನಾಗರಾಜ್ ಮಾತನಾಡಿ, ಈ ಹಿಂದೆ ಪೊಲೀಸ್ ಅಧಿಕಾರಿಗಳು ಪ್ರತಿನಿತ್ಯ ಸಂಜೆ ಬೀದಿಗೆ ಬರುತ್ತಿದ್ದರು. ಸುಗಮ ಸಂಚಾರಕ್ಕೆ ಮಾಧ್ಯಮ ಪ್ರತಿನಿಧಿ, ಮುಖಂಡರು, ಸಾರ್ವಜನಿಕರಿಂದ ಮಾಹಿತಿ ಪಡೆಯುತ್ತಿದ್ದರು. ಸ್ವತಃ ಅಧಿಕಾರಿಗಳೇ ನಗರಸಭೆ, ಮತ್ತಿತರರ ಸಿಬ್ಬಂದಿಗಳೊಂದಿಗೆ ಬಿಡಾಡಿ ದನಗಳನ್ನು  ಹಿಡಿದು ಠಾಣೆಗಳಲ್ಲಿ ಕಟ್ಟಿ ಹಾಕುತ್ತಿದ್ದರು. ಈಗ ಪೊಲೀಸ್ ಅಧಿಕಾರಿಗಳಿಗೆ ಜನ ಸಂಪರ್ಕವೇ ಇಲ್ಲವಾಗಿದೆ. ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕಾಲ ಕಳೆದು ಹೋಗುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿ, ಈ ಹಿಂದೆ ನಗರಸಭೆಯಿಂದ ಸಂಚಾರ ನಿಯಂತ್ರಣಕ್ಕಾಗಿ ೫ ಲಕ್ಷ ರೂ ವೆಚ್ಚದಲ್ಲಿ ಟವರ್, ಮೈಕ್, ಸಿಗ್ನಲ್ ಮಾಡಿಸಲಾಗಿತ್ತು. ಅವೆಲ್ಲವೂ ಈಗ ನಾಪತ್ತೆಯಾಗಿದೆ. ಎಲ್ಲಿಗೆ ಹೋಗಿದೆ ಪತ್ತೆ ಹಚ್ಚಿ ಎಂದು ಪೊಲೀಸ್ ಅಧಿಕಾರಿಗಳಿಗೆ ಪ್ರಶ್ನಿಸಿದರು.  
    ಸದಸ್ಯ ಚನ್ನಪ್ಪ ಮಾತನಾಡಿ, ತರೀಕೆರೆ ರಸ್ತೆಯ ಗಾಂಧಿ ವೃತ್ತದಲ್ಲಿ ಗ್ಯಾರೇಜ್‌ಗಳ ಮುಂಭಾಗದಲ್ಲಿ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿಕೊಂಡು ರಿಪೇರಿ ಮಾಡುತ್ತಾ ಸಂಚಾರಕ್ಕೆ ಅಡ್ಡಿಪಡಿಸುತ್ತಾ ಸಂಚಾರಕ್ಕೆ ತೊಂದರೆಯಾಗಿದೆ. ಭದ್ರಾ ಕಾಲೋನಿ ಸರ್ಕಾರಿ ಶಾಲೆ ಮುಂಭಾಗ ಅಪಘಾತ ವಲಯವಾಗಿದೆ. ಅಲ್ಲಿ ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ. ನಗರದೆಲ್ಲೆಡೆ ಸಂಚಾರ ವ್ಯವಸ್ಥೆ ತುಂಬಾ ಹದಗೆಟ್ಟಿದೆ ಸರಿಪಡಿಸಿ, ಟ್ರಾಫಿಕ್ ಸಿಗ್ನಲ್‌ಗೆ ಅಳವಡಿಕೆಗೆ ಅಗತ್ಯವಿರುವ ಅನುದಾನ ಸಂಬಂಧ ಶಾಸಕರ ಬಳಿ ಚರ್ಚಿಸೋಣ, ಮಾರ್ಕೆಟ್ ಬಳಿ ರಂಜಾನ್ ಹಾಗು ಯುಗಾದಿ ಹಬ್ಬಕ್ಕೆ ಸುಗಮ ವಾಹನ ಸಂಚಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಿ ಎಂದರು.
    ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್ ಮಾತನಾಡಿ, ಯಾವ ರಸ್ತೆಯಲ್ಲಿ ನೋಡಿದರೂ ಬಾರ್‌ಗಳ ಮುಂದೆ ಮತ್ತು ನಗರಸಭೆ ಕಚೇರಿ ಮುಂದೆ ವಾಹನಗಳ ದಟ್ಟಣೆ ಹೆಚ್ಚಾಗಿದೆ. ರೈಲು ಬರುವಾಗ ಬಿ.ಎಚ್.ರಸ್ತೆ ಲಕ್ಷ್ಮೀ ಸ್ವೀಟ್ ಹೌಸ್, ಸೃಷ್ಟಿ ಸಿಲ್ಕ್ಸ್ ಮುಂಭಾಗ ಆಟೋಗಳ ನಿಲ್ದಾಣವಾಗಿ ಮಾರ್ಪಾಡಾಗುತ್ತಿದ್ದು, ಇದರಿಂದಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದರು. 
    ಸದಸ್ಯ ಜಾರ್ಜ್ ಮಾತನಾಡಿ, ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ವಾಹನಗಳು ನಿಲ್ಲಿಸಿ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದರು, ಸದಸ್ಯ ಮೋಹನ್‌ಕುಮಾರ್ ಮಾತನಾಡಿ, ಬಿ.ಎಚ್ ರಸ್ತೆಯ ಫುಟ್‌ಪಾತ್ ಜನರಿಗೆ ಉಪಯೋಗವಾಗದೆ ವ್ಯಾಪಾರಸ್ಥರು, ಕೋಳಿ ಅಂಗಡಿ ಮುಂತಾದವರಿಂದ ತೊಂದರೆಯಾಗುತ್ತಿದೆ, ಪೊಲೀಸ್ ಅಧಿಕಾರಿಗಳ ಆದೇಶದಂತೆ ಪೊಲೀಸರು ಕೇವಲ ಕೇಸುಗಳನ್ನು ಹಾಕಿಕೊಂಡು ಕಾಲ ಕಳೆಯುತ್ತಿದ್ದಾರೆ. ಸುಗಮ ರಸ್ತೆ ಸಂಚಾರಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು. ಸದಸ್ಯ ಆರ್. ಶ್ರೇಯಸ್(ಚಿಟ್ಟೆ)ಮಾತನಾಡಿ, ಎಲ್ಲಾ ವೃತ್ತಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕೆಂದರು. ಸದಸ್ಯ ಹನುಮಂತಪ್ಪ ಅಂಬೇಡ್ಕರ್ ವೃತ್ತದಲ್ಲಿರುವ ಕಟ್ಟೆಯನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕೆಂದರು.
    ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್ ಮಾತನಾಡಿ, ನಗರದೆಲ್ಲೆಡೆ ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನಗಳ ನಿಲುಗಡೆಯಿಂದ ತೊಂದರೆಯಾಗುತ್ತಿದೆ. ಶಾಲೆಗಳ ಕಾಂಪೌಂಡ್ ಹಾರಿ ಮಧ್ಯ ಸೇವನೆ ಮಾಡುತ್ತಾರೆ. ಮಹಿಳೆಯರು ರಸ್ತೆಗಳಲ್ಲಿ ಓಡಾಡುವುದೇ ತೋದರೆಯಾಗಿದೆ. ಪೊಲೀಸರು ಶಿಸ್ತು ಕ್ರಮ ಜರುಗಿಸಿ ಎಂದರು.  
    ಪೊಲೀಸ್ ನಗರವೃತ್ತ ನಿರೀಕ್ಷಕ ಶ್ರೀಶೈಲಕುಮಾರ್ ಮಾತನಾಡಿ, ನಗರದಲ್ಲಿ ಟಿ.ಕೆ ರಸ್ತೆ ಮಾದರಿ ರಸ್ತೆ ಡಿವೈಡರ್ ಇದ್ದರೆ ಸಿಗ್ನಲ್ ಲೈಟ್ಸ್ ಅಳವಡಿಸುವ ವ್ಯವಸ್ಥೆ ಮಾಡಬಹುದು. ಇಲ್ಲದಿರುವುದರಿಂದ ಅವಶ್ಯಕತೆಯಿಲ್ಲ. ಇರುವೆಡೆ ಸಿಗ್ನಲ್‌ಲೈಟ್ಸ್ ಅಳವಡಿಕೆಗೆ ಸುಮಾರು ಎರಡೂವರೆ ಲಕ್ಷ ರು. ಬೇಕಾಗುತ್ತದೆ. ನಗರದಲ್ಲಿ ಮದ್ಯಸೇವಿಸಿ ವಾಹನ ಚಲಾಯಿಸುವುದು ಹೆಚ್ಚಾಗಿದೆ. ಕಟ್ಟುನಿಟ್ಟಾಗಿ ಕ್ರಮಕೈಗೊಂಡರೆ ಬಿಡುವಂತೆ ಒತ್ತಡ ಹೆಚ್ಚಾಗುತ್ತದೆ. ಆದರೂ ಸಹ ಕ್ರಮ ಜರುಗಿಸುತ್ತೇವೆ ಎಂದರು. ಪೇಪರ್‌ಟೌನ್ ಠಾಣೆ ಉಪ ನಿರೀಕ್ಷಕಿ ಕವಿತಾ ಮಾತನಾಡಿ, ಮಿಲ್ಟ್ರಿಕ್ಯಾಂಪ್ ಬಳಿ ಪ್ರೊ.ಬಿ. ಕೃಷ್ಣಪ್ಪ ವೃತ್ತದಲ್ಲಿ ಸಂಚಾರ ನಿಯಂತ್ರಣಕ್ಕೆ ಪೊಲೀಸರಿಗೆ ಬಾಕ್ಸ್ ಒಂದನ್ನು ನಿರ್ಮಿಸಿಕೊಡಿ ಎಂದರು.  
 ಪೌರಾಯುಕ್ತ ಪ್ರಕಾಶ್ ಎಂ.ಚೆನ್ನಪ್ಪನವರ್ ಸಭೆಯ ಔಚಿತ್ಯವನ್ನು ಹಾಗೂ ಸಂಚಾರದಲ್ಲಿ ಆಗುತ್ತಿರುವ ಅವ್ಯವಸ್ಥೆಯನ್ನು ಸರಿಪಡಿಸಲು ಸಿ.ಸಿ ಕ್ಯಾಮರಾ, ಹೈಲೈಟ್ಸ್ ದೀಪಗಳು, ಸಂಚಾರ ನಿಯಂತ್ರಣಕ್ಕೆ ಬೇಕಾದ ಸೌಲಭ್ಯಗಳು, ಫುಟ್ ಪಾತ್ ಅವ್ಯವಸ್ಥೆ ಮುಂತಾದ ಉಪಯುಕ್ತ ವಿಚಾರಗಳು ಚರ್ಚೆಯಾಗಿರುವುದು ಸಂತಸ ತಂದಿದೆ ಎಂದರು. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಕೆ. ಸುದೀಪ್‌ಕುಮಾರ್, ಕಾಂತರಾಜ್ ಉಪಸ್ಥಿತರಿದ್ದರು.  ವಿವಿಧ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು ಹಾಗು ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು. 

Thursday, March 27, 2025

ಉಜ್ಜನಿಪುರ ನಗರ ಆರೋಗ್ಯ ಕೇಂದ್ರದ ಬಳಿ ಸ್ವಚ್ಛತಾ ಕಾರ್ಯ : ತ್ಯಾಜ್ಯ ಎಸೆಯದಂತೆ ಜಾಗೃತಿ

ಭದ್ರಾವತಿ ನಗರಸಭೆ ಪೌರಕಾರ್ಮಿಕರು ಸೂಪರ್‌ವೈಸರ್ ಎನ್. ಗೋವಿಂದ ನೇತೃತ್ವದಲ್ಲಿ ಗುರುವಾರ ಉಜ್ಜನಿಪುರ ನಗರ ಆರೋಗ್ಯ ಕೇಂದ್ರದ ಬಳಿ ಸ್ವಚ್ಛತಾ ಕಾರ್ಯ ಕೈಗೊಂಡು ತ್ಯಾಜ್ಯ ಎಸೆಯದಂತೆ ಜಾಗೃತಿ ಮೂಡಿಸುವ ಜೊತೆಗೆ ಒಂದು ವೇಳೆ ತ್ಯಾಜ್ಯ ಎಸೆಯುವುದು ಮುಂದುವರೆಸಿದ್ದಲ್ಲಿ ೫೦೦ ರು. ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿ ಫಲಕ ಅಳವಡಿಸಿದರು. 
ಭದ್ರಾವತಿ: ನಗರಸಭೆ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ತ್ಯಾಜ್ಯ ಪ್ರಮಾಣ ಹೆಚ್ಚಳವಾಗುತ್ತಿದ್ದು, ಮನೆ ಮನೆ ಕಸ ಸಂಗ್ರಹಣೆ ನಡುವೆಯೂ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಕಂಡು ಬರುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಈ ನಡುವೆ ನಗರಸಭೆ ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯದಂತೆ ಎಚ್ಚರಿಕೆ ಫಲಕಗಳನ್ನು ಅಳವಡಿಸಿ ಜಾಗೃತಿ ಮೂಡಿಸಲಾಗುತ್ತಿದೆ. 
ಉಜ್ಜನಿಪುರ ನಗರ ಆರೋಗ್ಯ ಕೇಂದ್ರದ ಬಳಿ ತ್ಯಾಜ್ಯ ಎಸೆಯದಂತೆ ಸ್ಥಳೀಯ ನಿವಾಸಿಗಳಿಗೆ ಹಲವಾರು ಬಾರಿ ತಿಳುವಳಿಕೆ ನೀಡಲಾಗಿದೆ. ಪ್ರತಿದಿನ ನೂರಾರು ಮಂದಿ ರೋಗಿಗಳು  ಆಸ್ಪತ್ರೆಗೆ ಬಂದು ಹೋಗುತ್ತಿದ್ದಾರೆ. ಆಸ್ಪತ್ರೆ ಬಳಿ ಜನಸಂದಣಿ ಹೆಚ್ಚಾಗಿದ್ದು, ಇಂತಹ ಸ್ಥಳದಲ್ಲಿ ಪ್ರತಿದಿನ ತ್ಯಾಜ್ಯ ಕಂಡು ಬರುತ್ತಿದೆ. 
ತ್ಯಾಜ್ಯ ಎಸೆಯದಂತೆ ಹಲವಾರು ಬಾರಿ  ಸೂಚನೆ ನೀಡಲಾಗಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ನಗರಸಭೆ ಪೌರಕಾರ್ಮಿಕರು ಸೂಪರ್‌ವೈಸರ್ ಎನ್. ಗೋವಿಂದ ನೇತೃತ್ವದಲ್ಲಿ ಗುರುವಾರ ನಗರ ಆರೋಗ್ಯ ಕೇಂದ್ರದ ಬಳಿ ಸ್ವಚ್ಛತಾ ಕಾರ್ಯ ಕೈಗೊಂಡು ತ್ಯಾಜ್ಯ ಎಸೆಯದಂತೆ ಜಾಗೃತಿ ಮೂಡಿಸುವ ಜೊತೆಗೆ ಒಂದು ವೇಳೆ ತ್ಯಾಜ್ಯ ಎಸೆಯುವುದು ಮುಂದುವರೆಸಿದ್ದಲ್ಲಿ ೫೦೦ ರು. ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿ ಫಲಕ ಅಳವಡಿಸಿದರು. 
ಪೌರಕಾರ್ಮಿಕರಾದ ನಾಗಣ್ಣ, ಸುಶೀಲಮ್ಮ, ಸುಬ್ರಮಣಿ, ಮೋಹನ್, ಕುಮಾರಿಯಮ್ಮ, ಎಂ. ಮಂಜುನಾಥ್, ವಿಶ್ವನಾಥ್, ಹೇಮಂತ, ಮಂಜಾ, ಶಂಕರ, ಅಯ್ಯಪ್ಪ, ಜಯರಾಜ್ ಮತ್ತು ಕೃಷ್ಣ(ಡ್ರೈವರ್) ಸೇರಿದಂತೆ ಇನ್ನಿತರರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. 
 

ವಿಐಎಸ್‌ಎಲ್ ನಗರಾಡಳಿತ ಅಧಿಕಾರಿ ಮೋಹನ್‌ರಾಜ್ ಶೆಟ್ಟಿ ವರ್ಗಾವಣೆ

ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದಿಂದ ಸನ್ಮಾನ 

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಗರಾಡಳಿತ ಇಲಾಖೆಯಲ್ಲಿ ನಗರಾಡಳಿತ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮೋಹನ್‌ರಾಜ್ ಶೆಟ್ಟಿ ಕೇಂದ್ರ ಸರ್ಕಾರದ ಅಸ್ಸಾಂ ಬ್ರಹ್ಮಪುತ್ರ ವಾಲಿ ಫರ್ಟಿಲೈಜರ್ ಕಾರ್ಪೋರೇಷನ್ ಲಿಮಿಟೆಡ್(ಬಿವಿಎಫ್‌ಸಿಎಲ್) ಕಂಪನಿ ನಿರ್ದೇಶಕರಾಗಿ ವರ್ಗಾವಣೆಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದಿಂದ ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಗರಾಡಳಿತ ಇಲಾಖೆಯಲ್ಲಿ ನಗರಾಡಳಿತ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮೋಹನ್‌ರಾಜ್ ಶೆಟ್ಟಿ ಕೇಂದ್ರ ಸರ್ಕಾರದ ಅಸ್ಸಾಂ ಬ್ರಹ್ಮಪುತ್ರ ವಾಲಿ ಫರ್ಟಿಲೈಜರ್ ಕಾರ್ಪೋರೇಷನ್ ಲಿಮಿಟೆಡ್(ಬಿವಿಎಫ್‌ಸಿಎಲ್) ಕಂಪನಿ ನಿರ್ದೇಶಕರಾಗಿ ವರ್ಗಾವಣೆಗೊಂಡಿದ್ದಾರೆ. 
    ಮೋಹನ್‌ರಾಜ್ ಶೆಟ್ಟಿಯವರು ಮಾ.೩೧ರಂದು ನಗರಾಡಳಿತ ಅಧಿಕಾರಿ ಹುದ್ದೆಯಿಂದ ಬಿಡುಗಡೆಗೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದಲ್ಲಿ ಗುರುವಾರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಹೆಚ್ಚಿನ ಸಹಕಾರ ನೀಡಿದ ನಿವೃತ್ತ ಕಾರ್ಮಿಕರಿಗೆ ಮೋಹನ್‌ರಾಜ್ ಶೆಟ್ಟಿ ಕೃತಜ್ಞತೆ ಸಲ್ಲಿಸಿದರು. 
    ಕಲ್ಯಾಣ ಕೇಂದ್ರದ ಅಧ್ಯಕ್ಷ ಬಿ.ಜೆ ರಾಮಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ನರಸಿಂಹಚಾರ್, ಶಂಕರ್, ಕೆಂಪಯ್ಯ, ಪ್ರಸಾದ್, ಅಡವೀಶಯ್ಯ, ನಾಗರಾಜ್, ಬಸವರಾಜ್, ಜಯರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಹನುಮಂತರಾವ್ ಸ್ವಾಗತಿಸಿ, ಕಾರ್ಯದರ್ಶಿ ಮಹೇಶ್ ವಂದಿಸಿದರು. 

ಎಂಪಿಎಂ ನಿವೃತ್ತ ಕಾರ್ಮಿಕ ಎಂ. ಪುಟ್ಟಸ್ವಾಮಿ ನಿಧನ

ಎಂ. ಪುಟ್ಟಸ್ವಾಮಿ 
    ಭದ್ರಾವತಿ: ನಗರದ ಹುಡ್ಕೋ ಕಾಲೋನಿ ಉಂಬ್ಳೆಬೈಲು ರಸ್ತೆ ನಿವಾಸಿ, ಮೈಸೂರು ಕಾಗದ ಕಾರ್ಖಾನೆ ಓಲ್ಡ್ ಸ್ಟಾಕ್ ರೂಮ್ ನಿವೃತ್ತ ಕಾರ್ಮಿಕ ಎಂ. ಪುಟ್ಟಸ್ವಾಮಿ (೭೨) ಬುಧವಾರ ರಾತ್ರಿ ನಿಧನ ಹೊಂದಿದ್ದಾರೆ. 
    ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಇದ್ದಾರೆ. ಮೃತರ ಅಂತ್ಯಕ್ರಿಯೆ ಬೈಪಾಸ್ ರಸ್ತೆ ಸಮೀಪದ ತಿಮ್ಲಾಪುರ ರಸ್ತೆಯ ಶಂಕರಪ್ಪನಕಟ್ಟೆ ಶ್ರೀ ಸತ್ಯಹರಿಶ್ಚಂದ್ರ ಹಿಂದು ರುದ್ರಭೂಮಿಯಲ್ಲಿ ಗುರುವಾರ ಸಂಜೆ ನೆರವೇರಿತು. ಇವರ ನಿಧನಕ್ಕೆ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಕಾರ್ಮಿಕರು, ಸ್ಥಳೀಯ ಮುಖಂಡರು, ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಮೆಸ್ಕಾಂ ಗ್ರಾಹಕರ ಸಲಾಹ ಸಮಿತಿ ಸಭೆ, ಕಚೇರಿ ಉದ್ಘಾಟನೆ


ಭದ್ರಾವತಿ ಮೆಸ್ಕಾಂ ನಗರ ಉಪ ವಿಭಾಗ ಹಾಗೂ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಗೆ ರಚಿಸಲಾದ ಗ್ರಾಹಕರ ಸಲಾಹ ಸಮಿತಿ ಸಭೆ ಹಾಗೂ ಕಚೇರಿ ಉದ್ಘಾಟನಾ ಸಮಾರಂಭ ನಗರದ ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ಉಂಬ್ಳೆಬೈಲು ರಸ್ತೆಯಲ್ಲಿರುವ ಮೆಸ್ಕಾಂ ಕಛೇರಿಯಲ್ಲಿ ಗುರುವಾರ ನಡೆಯಿತು. ಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ನೂತನ ಕಚೇರಿ ಉದ್ಘಾಟಿಸಿದರು.
    ಭದ್ರಾವತಿ: ಮೆಸ್ಕಾಂ ನಗರ ಉಪ ವಿಭಾಗ ಹಾಗೂ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಗೆ ರಚಿಸಲಾದ ಗ್ರಾಹಕರ ಸಲಾಹ ಸಮಿತಿ ಸಭೆ ಹಾಗೂ ಕಚೇರಿ ಉದ್ಘಾಟನಾ ಸಮಾರಂಭ ನಗರದ ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ಉಂಬ್ಳೆಬೈಲು ರಸ್ತೆಯಲ್ಲಿರುವ ಮೆಸ್ಕಾಂ ಕಛೇರಿಯಲ್ಲಿ ಗುರುವಾರ ನಡೆಯಿತು.
    ಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ನೂತನ ಕಚೇರಿ ಉದ್ಘಾಟಿಸಿದರು. ಸಲಹಾ ಸಮಿತಿ ತಾಲೂಕು ಅಧ್ಯಕ್ಷ ಬಸವಂತಪ್ಪ ಅಧ್ಯಕ್ಷತೆ ವಹಿಸಿದ್ದರು. 
    ನಗರದ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಾಶ್ ಬಳ್ಳಾಪುರ ಮಾತನಾಡಿ, ಸಲಹಾ ಸಮಿತಿ ರಚನೆಯಿಂದ ಗ್ರಾಹಕರ ಕುಂದುಕೊರತೆಗಳನ್ನು ತಕ್ಷಣ ಬಗೆಹರಿಸಬಹುದಾಗಿದೆ. ಅಲ್ಲದೆ ಗ್ರಾಹಕರಿಗೆ ಸಮಿತಿ ಹೆಚ್ಚಿನ ಸಹಕಾರಿಯಾಗಲಿದೆ ಎಂದರು.
    ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್, ಮೆಸ್ಕಾಂ ಗ್ರಾಮಾಂತರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೊಹಮ್ಮದ್ ಮುನಾಫ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎಸ್. ಕುಮಾರ್, ಎಚ್.ಎಲ್ ಷಡಾಕ್ಷರಿ,  ಉದ್ಯಮಿ ಬಿ.ಕೆ ಜಗನ್ನಾಥ್, ನಗರಸಭೆ ಸದಸ್ಯರಾದ ಚನ್ನಪ್ಪ, ಬಿ.ಟಿ ನಾಗರಾಜ್, ಮಾವಿನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್, ಮುಖಂಡರಾದ ಪ್ರಕಾಶ್‌ರಾವ್, ಸಿ. ಜಯಪ್ಪ, sಸುರೇಶ್ ವರ್ಮಾ, ವಿಜಯಲಕ್ಷ್ಮೀ, ಮಂಜುನಾಥ್ ಸೇರಿದಂತೆ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
    ನಗರ ಉಪ ವಿಭಾಗ ಹಾಗೂ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಗೆ ರಚಿಸಲಾದ ಮೆಸ್ಕಾಂ ಗ್ರಾಹಕರ ಸಲಾಹ ಸಮಿತಿಯಲ್ಲಿ ತಲಾ ೧೨ ಸದಸ್ಯರಂತೆ ಒಟ್ಟು ೪೬ ಸದಸ್ಯರಿದ್ದು, ಈ ಪೈಕಿ ೫ ಸದಸ್ಯರು ಮುಖ್ಯ ಸಮಿತಿಯಲ್ಲಿದ್ದಾರೆ. 
 

ಭದ್ರಾವತಿ ಮೆಸ್ಕಾಂ ನಗರ ಉಪ ವಿಭಾಗ ಹಾಗೂ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಗೆ ರಚಿಸಲಾದ ಗ್ರಾಹಕರ ಸಲಾಹ ಸಮಿತಿ ಸಭೆ ಹಾಗೂ ಕಚೇರಿ ಉದ್ಘಾಟನಾ ಸಮಾರಂಭ ನಗರದ ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ಉಂಬ್ಳೆಬೈಲು ರಸ್ತೆಯಲ್ಲಿರುವ ಮೆಸ್ಕಾಂ ಕಛೇರಿಯಲ್ಲಿ ಗುರುವಾರ ನಡೆಯಿತು. ಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ಮೆಸ್ಕಾಂ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.