Sunday, June 15, 2025

ಓಸಿ ಮಟ್ಕಾ ಜೂಜಾಟ ಎರಡು ಪ್ರತ್ಯೇಕ ಪ್ರಕರಣಗಳು ದಾಖಲು

    ಭದ್ರಾವತಿ : ನ್ಯಾಯಾಲಯದ ಆದೇಶದ ಮೇರೆಗೆ ಓಸಿ ಮಟ್ಕಾ ಜೂಜಾಟ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಘಟನೆ ನಡೆದಿದೆ. 
    ಪೇಪರ್‌ಟೌನ್ ಪೊಲೀಸ್ ಠಾಣೆ ಸಿಬ್ಬಂದಿ ಹಣಮಂತ ಅಮಾತಿ ಗಸ್ತು ಕರ್ತವ್ಯದಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ಕಾಗದನಗರದ ೧೦ನೇ ವಾರ್ಡ್ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಪರಿಶೀಲನೆ ನಡೆಸಿದಾಗ ಯಾರೋ ಒಬ್ಬ ವ್ಯಕ್ತಿ ಓಸಿ ಮಟ್ಕಾ ಜೂಜಾಟದಲ್ಲಿ ತೊಡಗಿರುವುದು ಕಂಡು ಬಂದಿದೆ. ಆತನನ್ನು ವಶಕ್ಕೆ ಪಡೆದು ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
    ಮತ್ತೊಂದು ಪ್ರಕರಣದಲ್ಲಿ ಹಳೇನಗರ ಪೊಲೀಸ್ ಠಾಣೆ ಸಿಬ್ಬಂಧಿ ಉದಯ್ ಕುಮಾರ್ ಗಸ್ತು ಕರ್ತವ್ಯದಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ಭೂತನಗುಡಿ ೨ನೇ ಕ್ರಾಸ್ ಹತ್ತಿರದ ಆಸ್ಪತ್ರೆ ಪಕ್ಕದಲ್ಲಿ ಪರಿಶೀಲನೆ ನಡೆಸಿದಾಗ ಯಾರೋ ಒಬ್ಬ ವ್ಯಕ್ತಿ ಓಸಿ ಮಟ್ಕಾ ಜೂಜಾಟದಲ್ಲಿ ತೊಡಗಿರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಆತನನ್ನು ವಶಕ್ಕೆ ಪಡೆದು ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ತಂದೆ ಎಂದರೆ ಆದರ್ಶ, ಆಪ್ತರಕ್ಷಕ, ಮಾರ್ಗದರ್ಶಕ : ಫಾದರ್ ಸ್ಟೀವನ್ ಡೇಸಾ

ಭದ್ರಾವತಿ ಹಳೇನಗರ ವ್ಯಾಪ್ತಿಯ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ಭಾನುವಾರ ತಂದೆಯಂದಿರ ದಿನ ಆಚರಿಸಲಾಯಿತು. 
    ಭದ್ರಾವತಿ : ಕುಟುಂಬದಲ್ಲಿ ಮಕ್ಕಳಿಗೆ ತಂದೆಯೇ ನಾಯಕ, ಶಕ್ತಿ, ಆಸರೆ, ಆಧಾರ ಸ್ತಂಭ, ಕಷ್ಟಗಳನ್ನು ನಿವಾರಿಸುವ ಪರಿಪಾಲಕ ಅವರನ್ನು ಗೌರವಿಸುವುದು ಮಕ್ಕಳ ಆದ್ಯ ಕರ್ತವ್ಯ ಎಂದು ಹಳೇನಗರ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದ ಧರ್ಮ ಗುರು ಫಾದರ್ ಸ್ಟೀವನ್ ಡೇಸಾ ಹೇಳಿದರು. 
    ಅವರು ಭಾನುವಾರ ಧರ್ಮ ಕೇಂದ್ರದ ವತಿಯಿಂದ ಶ್ರೀಸಾಮಾನ್ಯ ಆಯೋಗದ ನಿರ್ದೇಶಕಿ ಸಿಸ್ಟರ್ ಶೋಭನ ನೇತೃತ್ವದಲ್ಲಿ ನಡೆದ ತಂದೆಯಂದಿರ ದಿನಾಚರಣೆ ಅಂಗವಾಗಿ ಮಾತನಾಡಿದರು. 
    ತಂದೆಯಂದಿರು ಕುಟುಂಬದ ಬೆನ್ನೆಲುಬು, ಮಾರ್ಗದರ್ಶಕರು ಮತ್ತು ಪ್ರೇರಣೆ ನೀಡುವ ವ್ಯಕ್ತಿಯಾಗಿದ್ದಾರೆ. ಕುಟುಂಬಕ್ಕಾಗಿ ಹಗಲಿರುಳು ದುಡಿದು, ಅನೇಕ ತ್ಯಾಗಗಳನ್ನು ಮಾಡುವುದರೊಂದಿಗೆ ಕುಟುಂಬವನ್ನು ಆರ್ಥಿಕವಾಗಿ, ಸದೃಢವನ್ನಾಗಿ ಮಾಡುವಲ್ಲಿ ಶ್ರಮಿಸುತ್ತಾರೆ. ಅವರಿಗಾಗಿ ಕುಟುಂಬದ ಸದಸ್ಯರು ದೇವರಲ್ಲಿ ಪ್ರತಿದಿನ ಪ್ರಾರ್ಥಿಸುವುದರೊಂದಿಗೆ, ಪ್ರೀತಿಸಬೇಕು ಎಂದರು. 
    ನಂತರ ಧರ್ಮ ಕೇಂದ್ರದಲ್ಲಿರುವ ಎಲ್ಲಾ ತಂದೆಯಂದಿರಿಗೆ ವಿಶೇಷವಾಗಿ ಪ್ರಾರ್ಥಿಸಿ, ತೈಲಾಭಿಷೇಕ ನೆರವೇರಿಸಿ, ಸಿಹಿಯೊಂದಿಗೆ ಉಡುಗೊರೆ ನೀಡಲಾಯಿತು. ಸಿಸ್ಟರ್ ತೆರೇಸಾ, ಆಯೋಗದ ಸದಸ್ಯರು, ಭಕ್ತಾದಿಗಳು ಪಾಲ್ಗೊಂಡಿದ್ದರು.

ಪತ್ರಕರ್ತ ಕಣ್ಣಪ್ಪ ದಂಪತಿ ೫೦ನೇ ವಿವಾಹ ವಾರ್ಷಿಕೋತ್ಸವ

ಭದ್ರಾವತಿ ನಗರದ ಹಿರಿಯ ಪತ್ರಕರ್ತ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ ತಮ್ಮ ೫೦ನೇ ವರ್ಷದ ವಿವಾಹ ವಾರ್ಷಿಕೋತ್ಸವ ಭಾನುವಾರ ಪತ್ನಿ ಶಾಂತ ಅವರೊಂದಿಗೆ ತಾಲೂಕಿನ ತಮ್ಮಡಿಹಳ್ಳಿ ಶ್ರೀಗಂಧ ಪ್ರಕೃತಿಧಾಮದಲ್ಲಿ ಆಚರಿಸಿಕೊಂಡರು. 
    ಭದ್ರಾವತಿ : ನಗರದ ಹಿರಿಯ ಪತ್ರಕರ್ತ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ ತಮ್ಮ ೫೦ನೇ ವರ್ಷದ ವಿವಾಹ ವಾರ್ಷಿಕೋತ್ಸವ ಭಾನುವಾರ ಪತ್ನಿ ಶಾಂತ ಅವರೊಂದಿಗೆ ತಾಲೂಕಿನ ತಮ್ಮಡಿಹಳ್ಳಿ ಶ್ರೀಗಂಧ ಪ್ರಕೃತಿಧಾಮದಲ್ಲಿ ಆಚರಿಸಿಕೊಂಡರು. 
    ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, ಸಹೋದರರು ಸೇರಿದಂತೆ ಬಂಧು-ಬಳಗದವರೊಂದಿಗೆ ವಿವಾಹ ವಾರ್ಷಿಕೋತ್ಸವ ವಿಶೇಷವಾಗಿ ಆಚರಿಸಿಕೊಳ್ಳಲಾಯಿತು. ಕಣ್ಣಪ್ಪ ದಂಪತಿಗೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬ ವರ್ಗದವರು, ವಿಧಾನಪರಿಷತ್ ಮಾಜಿ ಸದಸ್ಯ ಎಸ್. ರುದ್ರೇಗೌಡ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಮೊದಲಿಯಾರ್ ಹಾಗು ತಮಿಳು ಸಂಘದ ಜಿಲ್ಲಾ ಹಾಗು ತಾಲೂಕು ಸಂಘ, ಲಾರಿ ಮಾಲೀಕರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆ ಅಧ್ಯಕ್ಷರು, ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಗಣ್ಯರು ಪಾಲ್ಗೊಂಡು ಸಂಭ್ರಮ ಹಂಚಿಸಿಕೊಂಡರು. 

ಜಯಕರ್ನಾಟಕ ಸಂಘಟನೆ ಕಾರ್ಯಾಧ್ಯಕ್ಷರಾಗಿ ಎಂ. ಮುಕುಂದನ್

ಎಂ. ಮುಕುಂದನ್ 
ಭದ್ರಾವತಿ: ನಗರದ ನ್ಯೂಕಾಲೋನಿ ನಿವಾಸಿ ಎಂ. ಮುಕುಂದನ್ ಅವರನ್ನು ಜಯಕರ್ನಾಟಕ ಸಂಘಟನೆ ಜಿಲ್ಲಾ ಸಮಿತಿಗೆ ೨ನೇ ಬಾರಿಗೆ ಕಾರ್ಯಾಧ್ಯಕ್ಷರಾಗಿ ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ. 
    `ಕಟ್ಟೋಣ ನಾವು ಹೊಸ ನಾಡೊಂದನ್ನು' ಎಂಬ ಶೀರ್ಷಿಕೆಗೆ ಬದ್ಧರಾಗಿ, ಸಂಘಟನೆಯನ್ನು ಪರಿಣಾಮಕಾರಿಯಾಗಿ ಸಂಘಟಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ನಾಡಿನ ನೆಲ-ಜಲ, ಪರಿಸರ ಸಾಮಾಜಿಕ ಕಳಕಳಿಯೊಂದಿಗೆ ಕಾನೂನಿನ ಚೌಕಟ್ಟಿನಲ್ಲಿ ಸಂರಕ್ಷಣೆಯ ಸಮಾಜಮುಖಿ ಕೆಲಸ-ಕಾರ್ಯಗಳನ್ನು ನಿರ್ವಹಿಸಲು ತಮ್ಮನ್ನು ನೇಮಕಗೊಳಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಬಿ.ಎ ಸುರೇಶ್‌ಶೆಟ್ಟಿ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ. 
    ಮುಕುಂದನ್‌ರವರ ನೇಮಕಕ್ಕೆ ನಗರದ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸಂತಸ ವ್ಯಕ್ತಪಡಿಸಿದ್ದು, ಜಯಕರ್ನಾಟಕ ಸಂಘಟನೆ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಶ್ರಮವಹಿಸಲಿ ಎಂದು ಆಶಿಸಿದ್ದಾರೆ. 

Saturday, June 14, 2025

ಶಾಸಕ ಸಂಗಮೇಶ್ವರ್ ಸಹೋದರರಿಂದ ಕ್ಷೇತ್ರದ ಅಭಿವೃದ್ಧಿಗೆ ಶ್ರೀಗಳ ಆಶೀರ್ವಾದಪಡೆದು ಪ್ರಾರ್ಥನೆ

ಭದ್ರಾವತಿ ತಾಲೂಕಿನ ಆನವೇರಿ ಗ್ರಾಮದಲ್ಲಿ ಶನಿವಾರ ಜರುಗಿದ ಕಾರ್ಯಕ್ರಮದಲ್ಲಿ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ನೇತೃತ್ವದಲ್ಲಿ ಚಿತ್ರದುರ್ಗ ಶ್ರೀ ತರಳಬಾಳು ಹೊಸದುರ್ಗ ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಸ್ವಾಮೀಜಿಯವರ ಆಶೀರ್ವಾದಪಡೆದು ಕ್ಷೇತ್ರದ ಅಭಿವೃದ್ಧಿಗೆ ಪ್ರಾರ್ಥಿಸಲಾಯಿತು. 
    ಭದ್ರಾವತಿ : ತಾಲೂಕಿನ ಆನವೇರಿ ಗ್ರಾಮದಲ್ಲಿ ಶನಿವಾರ ಜರುಗಿದ ಕಾರ್ಯಕ್ರಮದಲ್ಲಿ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ನೇತೃತ್ವದಲ್ಲಿ ಚಿತ್ರದುರ್ಗ ಶ್ರೀ ತರಳಬಾಳು ಹೊಸದುರ್ಗ ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಸ್ವಾಮೀಜಿಯವರ ಆಶೀರ್ವಾದಪಡೆದು ಕ್ಷೇತ್ರದ ಅಭಿವೃದ್ಧಿಗೆ ಪ್ರಾರ್ಥಿಸಲಾಯಿತು. 
    ಕರ್ನಾಟಕ ರಾಜ್ಯ ಗ್ರಾಮೀಣ ಮೂಲಕ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರರಾದ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್, ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಅಧ್ಯಕ್ಷ ಬಿ.ಕೆ ಶಿವಕುಮಾರ್ ಹಾಗು ಮೆಸ್ಲಾಂ ಸಲಹಾ ಸಮಿತಿ ತಾಲೂಕು ಅಧ್ಯಕ್ಷ ಬಸವಂತಪ್ಪ ಸೇರಿದಂತೆ ಇನ್ನಿತರರು ಸ್ವಾಮೀಜಿಯವರಿಂದ ಆಶೀರ್ವಾದಪಡೆದರು. 
    ಶ್ರೀಗಳು ತಾಲೂಕಿನ ಆನವೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಎಚ್ ನಟರಾಜ್‌ಗೌಡರವರ ಶಿವಗಣರಾಧನೆ ಹಾಗು ಧರ್ಮ ಸಮ್ಮೇಳನ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿದ್ದರು. ವಿಧಾನ ಪರಿಷತ್ ಮಾಜಿ ಅಧ್ಯಕ್ಷ ಎಸ್. ರುದ್ರೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.   

ಸರ್ಕಾರಿ ಶಾಲೆ ಮಕ್ಕಳು ಸಹ ಉನ್ನತ ವಿದ್ಯಾಭ್ಯಾಸ ಪಡೆದು ಸಮಾಜದಲ್ಲಿ ಗುರುತಿಸಿಕೊಳ್ಳಿ : ಆಶಾರಾಣಿ ಧರ್ಮೇಂದ್ರ

ಶ್ರೀ ವಿನಾಯಕ ಚಾರಿಟೇಬಲ್ ಟ್ರಸ್ಟ್ ಮೂಲಕ ಭದ್ರಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ೧೩, ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ೧೨ ಹಾಗು ನಾಗತಿಬೆಳಗಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ೧೧ ಸರ್ಕಾರಿ ಶಾಲೆಗಳ ಮಕ್ಕಳಿಗೆ ಶನಿವಾರ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.     
    ಭದ್ರಾವತಿ : ಸರ್ಕಾರಿ ಶಾಲೆ ಮಕ್ಕಳು ಸಹ ಉನ್ನತ ವಿದ್ಯಾಭ್ಯಾಸ ಪಡೆದು ಸಮಾಜದಲ್ಲಿ ಗುರುತಿಸಿಕೊಳ್ಳಬೇಕು. ಇದಕ್ಕೆ ಪೂರಕವಾಗುವಂತೆ ಶಿಕ್ಷಣದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಮಾಜ ಸೇವಕಿ ಆಶಾರಾಣಿ ಧರ್ಮೇಂದ್ರ  ಹೇಳಿದರು. 
    ಅವರು ಶನಿವಾರ ಶ್ರೀ ವಿನಾಯಕ ಚಾರಿಟೇಬಲ್ ಟ್ರಸ್ಟ್ ಮೂಲಕ ತಾಲೂಕಿನ ಅರಳಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ೧೩, ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ೧೨ ಹಾಗು ನಾಗತಿಬೆಳಗಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ೧೧ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು. 
    ಮಕ್ಕಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಗಮನ ನೀಡಬೇಕು. ಎಲ್ಲರೂ ಹೆಚ್ಚಿನ ಶಿಕ್ಷಣ ಪಡೆದು ವಿದ್ಯಾವಂತರಾಗಬೇಕು. ಆಗ ಸಮಾಜದಲ್ಲಿ ಗೌರವದಿಂದ, ನೆಮ್ಮದಿಯಿಂದ ಬದಕಲು ಸಾಧ್ಯ. ಸರ್ಕಾರಿ ಶಾಲೆ ಮಕ್ಕಳು ಸಹ ಪ್ರತಿಭಾವಂತರಾಗಿದ್ದು, ಸಮಾಜದಲ್ಲಿ ಹೆಚ್ಚಿನ ಪ್ರೋತ್ಸಾಹ ಲಭಿಸಬೇಕೆಂದರು. 
    ಟ್ರಸ್ಟ್ ಅಧ್ಯಕ್ಷ, ಸಮಾಜ ಸೇವಕ ಎ. ಧಮೇಂದ್ರ ಮಾತನಾಡಿ, ಸರ್ಕಾರಿ ಶಾಲೆ ಮಕ್ಕಳು ಯಾರಿಗೂ ಕಡಿಮೆ ಇಲ್ಲದಂತೆ ಶಿಕ್ಷಣಪಡೆದು ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂಬುದು ನನ್ನ ಆಶಯವಾಗಿದೆ. ಇದಕ್ಕೆ ಪೂರಕವಾಗುವಂತೆ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ಉಚಿತ ನೋಟ್ ಪುಸ್ತಕಗಳನ್ನು ಕಳೆದ ೮ ವರ್ಷಗಳಿಂದ ವಿತರಿಸಿಕೊಂಡು ಬರಲಾಗುತ್ತಿದೆ ಎಂದರು. 


ಭದ್ರಾವತಿ ನಾಗತಿಬೆಳಗಲು ಶ್ರೀ ನಂಜುಂಡೇಶ್ವರ ಪ್ರೌಢಶಾಲೆ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿದ ಶ್ರೀ ವಿನಾಯಕ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಧಮೇಂದ್ರ-ಆಶಾರಾಣಿ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರ, ಬಗರ್ ಹುಕುಂ ತಾಲೂಕು ಅಧ್ಯಕ್ಷ ಎಸ್. ಮಣಿಶೇಖರ್ ಸೇರಿದಂತೆ ಇನ್ನಿತರರು ಸಮಾಜ ಸೇವಕ ಎ. ಧಮೇಂದ್ರ ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. 
    ಅರಳಿಹಳ್ಳಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ದಿವಾಕರ್ ಸೇರಿದಂತೆ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಶಾಲಾ ಶಿಕ್ಷಕ ವರ್ಗದವರು, ಸಿಬ್ಬಂದಿ ವರ್ಗದವರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ವಿವಿಧ ಗ್ರಾಮಗಳ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  
    ನಾಗತಿಬೆಳಗಲು ಶ್ರೀ ನಂಜುಂಡೇಶ್ವರ ಪ್ರೌಢಶಾಲೆ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿದ ಶ್ರೀ ವಿನಾಯಕ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಧಮೇಂದ್ರ-ಆಶಾರಾಣಿ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. 
ಹರೀಶ್, ದೇವರಾಜ, ಭವಾನಿ ಶಂಕರ್(ಕೂಡ್ಲಿಗೆರೆ), ಗೌಸ್‌ಫೀರ್, ಶ್ರೀನಿವಾಸ್, ವಿಜಯ್, ಚಂದ್ರ, ಭವಾನಿ ಶಂಕರ್(ಕುಮರಿ ನಾರಾಯಣಪುರ), ಷಣ್ಮುಖ, ರುದ್ರಮುನಿ, ಸುರೇಶ್, ಯೋಗೇಶ್, ಜ್ಯೋತಿ, ಗೀತಾ, ರೇಣುಕಾ, ರಾಧ, ರೂಪಕಲಾ ಮತ್ತು ಸುಧಾಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಕೋಗಲೂರು ತಿಪ್ಪೇಸ್ವಾಮಿಗೆ `ಭಾರತೀಯ ಶಿಕ್ಷಣ ರತ್ನ ರಾಷ್ಟ್ರ ಪ್ರಶಸ್ತಿ'


ಕೋಗಲೂರು ತಿಪ್ಪೇಸ್ವಾಮಿ 
    ಭದ್ರಾವತಿ: ತಾಲೂಕಿನ ಯರೇಹಳ್ಳಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಕೋಗಲೂರು ತಿಪ್ಪೇಸ್ವಾಮಿಯವರಿಗೆ ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಬೆಂಗಳೂರಿನ ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿ `ಭಾರತೀಯ ಶಿಕ್ಷಣ ರತ್ನ ರಾಷ್ಟ್ರ ಪ್ರಶಸ್ತಿ' ನೀಡಿ ಗೌರವಿಸುತ್ತಿದೆ. 
    ಕೋಗಲೂರು ತಿಪ್ಪೇಸ್ವಾಮಿಯವರು ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಅಲ್ಲದೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿನ ಸರ್ಕಾರಿ ಶಾಲೆಗಳ ಸಬಲಿಕರಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಅಭಿವೃದ್ಧಿಗೆ ಮುಂದಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿನ ಇವರ ಸಾಧನೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 
    ಬೆಂಗಳೂರಿನ ಜೆ.ಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಜೂ.೨೦ರಂದು ಬೆಳಿಗ್ಗೆ ೧೧ ಗಂಟೆಗೆ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೋಗಲೂರು ತಿಪ್ಪೇಸ್ವಾಮಿಯವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.