Monday, June 16, 2025

ನಕಲಿ ನೋಟು ನೀಡಿ ವ್ಯವಹಾರ : ರಿಯಲ್ ಎಸ್ಟೇಟ್ ಉದ್ಯಮಿ ಬಂಧನ

ನಕಲಿ ನೋಟು ನೀಡಿ ವ್ಯವಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ನಗರಸಭೆ ವ್ಯಾಪ್ತಿಯ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ನ್ಯೂಟೌನ್ ಠಾಣೆ ಪೊಲೀಸರು ಬಂಧಿಸಿ ಆತನಿಂದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ. 
    ಭದ್ರಾವತಿ: ನಕಲಿ ನೋಟು ನೀಡಿ ವ್ಯವಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ವ್ಯಾಪ್ತಿಯ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ನ್ಯೂಟೌನ್ ಠಾಣೆ ಪೊಲೀಸರು ಬಂಧಿಸಿ ಆತನಿಂದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ. 
    ಭಂಡಾರಹಳ್ಳಿ ನಿವಾಸಿ, ರಿಯಲ್ ಎಸ್ಟೇಟ್ ಉದ್ಯಮಿ ರಂಗೇಗೌಡನನ್ನು ಪೊಲೀಸರು ಬಂಧಿಸಿದ್ದಾರೆ. ಕೂಲಿಬ್ಲಾಕ್ ಶೆಡ್ ನಿವಾಸಿ ಅಜಯ್ ಎಂಬ ಯುವಕ ನೀಡಿದ ನೀಡಿದ ದೂರಿನ ಅನ್ವಯ ತನಿಖೆ ಕೈಗೊಂಡಿದ್ದ ಪೊಲೀಸರ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದು,  ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಹಾಗೂ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ನಡುವೆ ನಕಲಿ ನೋಟುಗಳು ಕಂಡು ಬಂದಿದ್ದಲ್ಲಿ ಸಾರ್ವಜನಿಕರು ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ. 
    ಸದ್ಯಕ್ಕೆ ಪೊಲೀಸರು ರಂಗೇಗೌಡನಿಂದ ರು. ೫೦೦ ಮುಖ ಬೆಲೆಯ ೧೩ ನೋಟುಗಳು, ರು. ೨೦೦ ಮುಖ ಬೆಲೆಯ ೧ ನೋಟು, ರು. ೧೦೦ ಮುಖ ಬೆಲೆಯ ೧ ನೋಟು ಮತ್ತು ರು. ೫೦ ಮುಖ ಬೆಲೆಯ ೧ ನೋಟು ವಶಪಡಿಸಿಕೊಂಡಿದ್ದಾರೆ. 
    ಜೂ. ೧೨ರಂದು ಸಂಜೆ ವೇಳೆ ದ್ವಿಚಕ್ರ ವಾಹನ(ಡಿಸ್ಕವರ್ ಬೈಕ್)ದಲ್ಲಿ ಬಂದ ವ್ಯಕ್ತಿಯೋರ್ವ ರು. ೫೦೦ ಮುಖ ಬೆಲೆಯ ನಕಲಿ ನೋಟು ನೀಡಿ ವ್ಯಾಪಾರ ಮಾಡಿ ಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.


ನಕಲಿ ನೋಟು ನೀಡಿ ವ್ಯವಹರಿಸಿದ್ದ ರಿಯಲ್ ಎಸ್ಟೇಟ್ ಉದ್ಯಮಿ ರಂಗೇಗೌಡ 

    ಪ್ರಕರಣ ಬೇಧಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕ  ಜಿ.ಕೆ ಮಿಥುನ್ ಕುಮಾರ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮರಡ್ಡಿ ಮತ್ತು ಎ.ಜಿ ಕಾರಿಯಪ್ಪರವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕ ಕೆ ಆರ್ ನಾಗರಾಜ, ಪ್ರಭಾರ ನಗರ ವೃತ್ತ ನಿರೀಕ್ಷಕ ಮಂಜುನಾಥ್‌ರವರ ಮೇಲ್ವಿಚಾರಣೆಯಲ್ಲಿ ನ್ಯೂಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕ ರಮೇ ರವರ ನೇತೃತ್ವದ ಸಿಬ್ಬಂದಿಗಳಾದ ಠಾಣೆಯ ಸಹಾಯಕ ನಿರೀಕ್ಷಕ ಶಿವಸ್ವಾಮಿ , ಸಿಬ್ಬಂದಿಗಳಾದ ನವೀನ್, ಎಚ್. ವೈ ವಿಜಯ್, ಶ್ರೀಧರ್, ಮಾರುತಿ ಪಾಟೀಲ, ಪ್ರಸನ್ನ, ಬಿ.ಎಂ ರಘು, ಬಿ.ಎಚ್ ನಾಗರಾಜಪ್ಪರವರನ್ನೊಳಗೊಂಡ ತನಿಖಾ ತಂಡ ರಚಸಿಲಾಗಿತ್ತು.
ಬಂಧಿತ ರಂಗೇಗೌಡ ಬೇರೆ ಕಡೆ ವ್ಯವಹಾರ ಮಾಡಿರುವುದಾಗಿ ಮಾಹಿತಿ ನೀಡಿದ್ದು, ಈ ಹಿನ್ನಲೆಯಲ್ಲಿ ಓಎಫ್‌ಪಿ ೭೯೦೮೨೯ ಮತ್ತು ೯ಟಿವಿ ೯೭೮೨೦೨ ಈ ನಂಬರಿನ ೫೦೦ ರು. ಮುಖ ಬೆಲೆಯ ನೋಟುಗಳು ಕಂಡು ಬಂದಲ್ಲಿ ಸಾರ್ವಜನಿಕರು ನ್ಯೂಟೌನ್ ಪೊಲೀಸ್ ಠಾಣೆಗೆ ಅಥವಾ ಶಿವಮೊಗ್ಗ, ಕಂಟ್ರೋಲ್ ರೂಂಗೆ ಮಾಹಿತಿ ನೀಡಬೇಕೆಂದು ಕೋರಲಾಗಿದೆ. ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ತನಿಖಾ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ ಮಿಥುನ್‌ಕುಮಾರ್‌ರವರು ಪ್ರಶಂಸಿಸಿ ಅಭಿನಂದಿಸಿದ್ದಾರೆ.

Sunday, June 15, 2025

ಮನೆಯ ಮೇಲ್ಛಾವಣಿ ಹಂಚು ತೆಗೆದು ಕಳ್ಳತನ

    ಭದ್ರಾವತಿ: ತಾಲೂಕಿನ ಸುಣ್ಣದಹಳ್ಳಿ ಮನೆಯೊಂದರ ಮೇಲ್ಛಾವಣಿ ಹಂಚನ್ನು ತೆಗೆದು ಒಳಗೆ ಪ್ರವೇಶಿಸಿ ನಗದು, ಚಿನ್ನಾಭರಣ ಕಳವು ಮಾಡಿರುವ ಘಟನೆ ಕಳೆದ ೩ ದಿನಗಳ ಹಿಂದೆ ನಡೆದಿದೆ. 
    ನಾಗರಾಜ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯವರು ಜೂ.೧೩ರ ಬೆಳಿಗ್ಗೆ ೬ ಗಂಟೆ ಸಮಯದಲ್ಲಿ ಮನೆಗೆ ಬೀಗ ಹಾಕಿ ತುಮಕೂರಿಗೆ ಹೋಗಿದ್ದು, ಪುನಃ ಹಿಂದಿರುಗಿ ಸಂಜೆ ೬.೩೦ರ ಸಮಯದಲ್ಲಿ ಮನೆಗೆ ಬಂದು ನೋಡಿದಾಗ ಕಳ್ಳತನ ಮಾಡಿರುವುದು ಕಂಡು ಬಂದಿದೆ. 
    ಬೀರುವಿನಲ್ಲಿದ್ದ ಸುಮಾರು ೬೫ ಸಾವಿರ ರು. ಮೌಲ್ಯದ ಚಿನ್ನಾಭರಣ ಹಾಗು ೩ ಲಕ್ಷ ರು. ನಗದು ಹಣ ಕಳ್ಳತನ ಮಾಡಲಾಗಿದ್ದು, ಈ ಸಂಬಂಧ ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಓಸಿ ಮಟ್ಕಾ ಜೂಜಾಟ ಎರಡು ಪ್ರತ್ಯೇಕ ಪ್ರಕರಣಗಳು ದಾಖಲು

    ಭದ್ರಾವತಿ : ನ್ಯಾಯಾಲಯದ ಆದೇಶದ ಮೇರೆಗೆ ಓಸಿ ಮಟ್ಕಾ ಜೂಜಾಟ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಘಟನೆ ನಡೆದಿದೆ. 
    ಪೇಪರ್‌ಟೌನ್ ಪೊಲೀಸ್ ಠಾಣೆ ಸಿಬ್ಬಂದಿ ಹಣಮಂತ ಅಮಾತಿ ಗಸ್ತು ಕರ್ತವ್ಯದಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ಕಾಗದನಗರದ ೧೦ನೇ ವಾರ್ಡ್ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಪರಿಶೀಲನೆ ನಡೆಸಿದಾಗ ಯಾರೋ ಒಬ್ಬ ವ್ಯಕ್ತಿ ಓಸಿ ಮಟ್ಕಾ ಜೂಜಾಟದಲ್ಲಿ ತೊಡಗಿರುವುದು ಕಂಡು ಬಂದಿದೆ. ಆತನನ್ನು ವಶಕ್ಕೆ ಪಡೆದು ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
    ಮತ್ತೊಂದು ಪ್ರಕರಣದಲ್ಲಿ ಹಳೇನಗರ ಪೊಲೀಸ್ ಠಾಣೆ ಸಿಬ್ಬಂಧಿ ಉದಯ್ ಕುಮಾರ್ ಗಸ್ತು ಕರ್ತವ್ಯದಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ಭೂತನಗುಡಿ ೨ನೇ ಕ್ರಾಸ್ ಹತ್ತಿರದ ಆಸ್ಪತ್ರೆ ಪಕ್ಕದಲ್ಲಿ ಪರಿಶೀಲನೆ ನಡೆಸಿದಾಗ ಯಾರೋ ಒಬ್ಬ ವ್ಯಕ್ತಿ ಓಸಿ ಮಟ್ಕಾ ಜೂಜಾಟದಲ್ಲಿ ತೊಡಗಿರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಆತನನ್ನು ವಶಕ್ಕೆ ಪಡೆದು ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ತಂದೆ ಎಂದರೆ ಆದರ್ಶ, ಆಪ್ತರಕ್ಷಕ, ಮಾರ್ಗದರ್ಶಕ : ಫಾದರ್ ಸ್ಟೀವನ್ ಡೇಸಾ

ಭದ್ರಾವತಿ ಹಳೇನಗರ ವ್ಯಾಪ್ತಿಯ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ಭಾನುವಾರ ತಂದೆಯಂದಿರ ದಿನ ಆಚರಿಸಲಾಯಿತು. 
    ಭದ್ರಾವತಿ : ಕುಟುಂಬದಲ್ಲಿ ಮಕ್ಕಳಿಗೆ ತಂದೆಯೇ ನಾಯಕ, ಶಕ್ತಿ, ಆಸರೆ, ಆಧಾರ ಸ್ತಂಭ, ಕಷ್ಟಗಳನ್ನು ನಿವಾರಿಸುವ ಪರಿಪಾಲಕ ಅವರನ್ನು ಗೌರವಿಸುವುದು ಮಕ್ಕಳ ಆದ್ಯ ಕರ್ತವ್ಯ ಎಂದು ಹಳೇನಗರ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದ ಧರ್ಮ ಗುರು ಫಾದರ್ ಸ್ಟೀವನ್ ಡೇಸಾ ಹೇಳಿದರು. 
    ಅವರು ಭಾನುವಾರ ಧರ್ಮ ಕೇಂದ್ರದ ವತಿಯಿಂದ ಶ್ರೀಸಾಮಾನ್ಯ ಆಯೋಗದ ನಿರ್ದೇಶಕಿ ಸಿಸ್ಟರ್ ಶೋಭನ ನೇತೃತ್ವದಲ್ಲಿ ನಡೆದ ತಂದೆಯಂದಿರ ದಿನಾಚರಣೆ ಅಂಗವಾಗಿ ಮಾತನಾಡಿದರು. 
    ತಂದೆಯಂದಿರು ಕುಟುಂಬದ ಬೆನ್ನೆಲುಬು, ಮಾರ್ಗದರ್ಶಕರು ಮತ್ತು ಪ್ರೇರಣೆ ನೀಡುವ ವ್ಯಕ್ತಿಯಾಗಿದ್ದಾರೆ. ಕುಟುಂಬಕ್ಕಾಗಿ ಹಗಲಿರುಳು ದುಡಿದು, ಅನೇಕ ತ್ಯಾಗಗಳನ್ನು ಮಾಡುವುದರೊಂದಿಗೆ ಕುಟುಂಬವನ್ನು ಆರ್ಥಿಕವಾಗಿ, ಸದೃಢವನ್ನಾಗಿ ಮಾಡುವಲ್ಲಿ ಶ್ರಮಿಸುತ್ತಾರೆ. ಅವರಿಗಾಗಿ ಕುಟುಂಬದ ಸದಸ್ಯರು ದೇವರಲ್ಲಿ ಪ್ರತಿದಿನ ಪ್ರಾರ್ಥಿಸುವುದರೊಂದಿಗೆ, ಪ್ರೀತಿಸಬೇಕು ಎಂದರು. 
    ನಂತರ ಧರ್ಮ ಕೇಂದ್ರದಲ್ಲಿರುವ ಎಲ್ಲಾ ತಂದೆಯಂದಿರಿಗೆ ವಿಶೇಷವಾಗಿ ಪ್ರಾರ್ಥಿಸಿ, ತೈಲಾಭಿಷೇಕ ನೆರವೇರಿಸಿ, ಸಿಹಿಯೊಂದಿಗೆ ಉಡುಗೊರೆ ನೀಡಲಾಯಿತು. ಸಿಸ್ಟರ್ ತೆರೇಸಾ, ಆಯೋಗದ ಸದಸ್ಯರು, ಭಕ್ತಾದಿಗಳು ಪಾಲ್ಗೊಂಡಿದ್ದರು.

ಪತ್ರಕರ್ತ ಕಣ್ಣಪ್ಪ ದಂಪತಿ ೫೦ನೇ ವಿವಾಹ ವಾರ್ಷಿಕೋತ್ಸವ

ಭದ್ರಾವತಿ ನಗರದ ಹಿರಿಯ ಪತ್ರಕರ್ತ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ ತಮ್ಮ ೫೦ನೇ ವರ್ಷದ ವಿವಾಹ ವಾರ್ಷಿಕೋತ್ಸವ ಭಾನುವಾರ ಪತ್ನಿ ಶಾಂತ ಅವರೊಂದಿಗೆ ತಾಲೂಕಿನ ತಮ್ಮಡಿಹಳ್ಳಿ ಶ್ರೀಗಂಧ ಪ್ರಕೃತಿಧಾಮದಲ್ಲಿ ಆಚರಿಸಿಕೊಂಡರು. 
    ಭದ್ರಾವತಿ : ನಗರದ ಹಿರಿಯ ಪತ್ರಕರ್ತ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ ತಮ್ಮ ೫೦ನೇ ವರ್ಷದ ವಿವಾಹ ವಾರ್ಷಿಕೋತ್ಸವ ಭಾನುವಾರ ಪತ್ನಿ ಶಾಂತ ಅವರೊಂದಿಗೆ ತಾಲೂಕಿನ ತಮ್ಮಡಿಹಳ್ಳಿ ಶ್ರೀಗಂಧ ಪ್ರಕೃತಿಧಾಮದಲ್ಲಿ ಆಚರಿಸಿಕೊಂಡರು. 
    ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, ಸಹೋದರರು ಸೇರಿದಂತೆ ಬಂಧು-ಬಳಗದವರೊಂದಿಗೆ ವಿವಾಹ ವಾರ್ಷಿಕೋತ್ಸವ ವಿಶೇಷವಾಗಿ ಆಚರಿಸಿಕೊಳ್ಳಲಾಯಿತು. ಕಣ್ಣಪ್ಪ ದಂಪತಿಗೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬ ವರ್ಗದವರು, ವಿಧಾನಪರಿಷತ್ ಮಾಜಿ ಸದಸ್ಯ ಎಸ್. ರುದ್ರೇಗೌಡ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಮೊದಲಿಯಾರ್ ಹಾಗು ತಮಿಳು ಸಂಘದ ಜಿಲ್ಲಾ ಹಾಗು ತಾಲೂಕು ಸಂಘ, ಲಾರಿ ಮಾಲೀಕರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆ ಅಧ್ಯಕ್ಷರು, ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಗಣ್ಯರು ಪಾಲ್ಗೊಂಡು ಸಂಭ್ರಮ ಹಂಚಿಸಿಕೊಂಡರು. 

ಜಯಕರ್ನಾಟಕ ಸಂಘಟನೆ ಕಾರ್ಯಾಧ್ಯಕ್ಷರಾಗಿ ಎಂ. ಮುಕುಂದನ್

ಎಂ. ಮುಕುಂದನ್ 
ಭದ್ರಾವತಿ: ನಗರದ ನ್ಯೂಕಾಲೋನಿ ನಿವಾಸಿ ಎಂ. ಮುಕುಂದನ್ ಅವರನ್ನು ಜಯಕರ್ನಾಟಕ ಸಂಘಟನೆ ಜಿಲ್ಲಾ ಸಮಿತಿಗೆ ೨ನೇ ಬಾರಿಗೆ ಕಾರ್ಯಾಧ್ಯಕ್ಷರಾಗಿ ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ. 
    `ಕಟ್ಟೋಣ ನಾವು ಹೊಸ ನಾಡೊಂದನ್ನು' ಎಂಬ ಶೀರ್ಷಿಕೆಗೆ ಬದ್ಧರಾಗಿ, ಸಂಘಟನೆಯನ್ನು ಪರಿಣಾಮಕಾರಿಯಾಗಿ ಸಂಘಟಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ನಾಡಿನ ನೆಲ-ಜಲ, ಪರಿಸರ ಸಾಮಾಜಿಕ ಕಳಕಳಿಯೊಂದಿಗೆ ಕಾನೂನಿನ ಚೌಕಟ್ಟಿನಲ್ಲಿ ಸಂರಕ್ಷಣೆಯ ಸಮಾಜಮುಖಿ ಕೆಲಸ-ಕಾರ್ಯಗಳನ್ನು ನಿರ್ವಹಿಸಲು ತಮ್ಮನ್ನು ನೇಮಕಗೊಳಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಬಿ.ಎ ಸುರೇಶ್‌ಶೆಟ್ಟಿ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ. 
    ಮುಕುಂದನ್‌ರವರ ನೇಮಕಕ್ಕೆ ನಗರದ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸಂತಸ ವ್ಯಕ್ತಪಡಿಸಿದ್ದು, ಜಯಕರ್ನಾಟಕ ಸಂಘಟನೆ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಶ್ರಮವಹಿಸಲಿ ಎಂದು ಆಶಿಸಿದ್ದಾರೆ. 

Saturday, June 14, 2025

ಶಾಸಕ ಸಂಗಮೇಶ್ವರ್ ಸಹೋದರರಿಂದ ಕ್ಷೇತ್ರದ ಅಭಿವೃದ್ಧಿಗೆ ಶ್ರೀಗಳ ಆಶೀರ್ವಾದಪಡೆದು ಪ್ರಾರ್ಥನೆ

ಭದ್ರಾವತಿ ತಾಲೂಕಿನ ಆನವೇರಿ ಗ್ರಾಮದಲ್ಲಿ ಶನಿವಾರ ಜರುಗಿದ ಕಾರ್ಯಕ್ರಮದಲ್ಲಿ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ನೇತೃತ್ವದಲ್ಲಿ ಚಿತ್ರದುರ್ಗ ಶ್ರೀ ತರಳಬಾಳು ಹೊಸದುರ್ಗ ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಸ್ವಾಮೀಜಿಯವರ ಆಶೀರ್ವಾದಪಡೆದು ಕ್ಷೇತ್ರದ ಅಭಿವೃದ್ಧಿಗೆ ಪ್ರಾರ್ಥಿಸಲಾಯಿತು. 
    ಭದ್ರಾವತಿ : ತಾಲೂಕಿನ ಆನವೇರಿ ಗ್ರಾಮದಲ್ಲಿ ಶನಿವಾರ ಜರುಗಿದ ಕಾರ್ಯಕ್ರಮದಲ್ಲಿ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ನೇತೃತ್ವದಲ್ಲಿ ಚಿತ್ರದುರ್ಗ ಶ್ರೀ ತರಳಬಾಳು ಹೊಸದುರ್ಗ ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಸ್ವಾಮೀಜಿಯವರ ಆಶೀರ್ವಾದಪಡೆದು ಕ್ಷೇತ್ರದ ಅಭಿವೃದ್ಧಿಗೆ ಪ್ರಾರ್ಥಿಸಲಾಯಿತು. 
    ಕರ್ನಾಟಕ ರಾಜ್ಯ ಗ್ರಾಮೀಣ ಮೂಲಕ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರರಾದ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್, ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಅಧ್ಯಕ್ಷ ಬಿ.ಕೆ ಶಿವಕುಮಾರ್ ಹಾಗು ಮೆಸ್ಲಾಂ ಸಲಹಾ ಸಮಿತಿ ತಾಲೂಕು ಅಧ್ಯಕ್ಷ ಬಸವಂತಪ್ಪ ಸೇರಿದಂತೆ ಇನ್ನಿತರರು ಸ್ವಾಮೀಜಿಯವರಿಂದ ಆಶೀರ್ವಾದಪಡೆದರು. 
    ಶ್ರೀಗಳು ತಾಲೂಕಿನ ಆನವೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಎಚ್ ನಟರಾಜ್‌ಗೌಡರವರ ಶಿವಗಣರಾಧನೆ ಹಾಗು ಧರ್ಮ ಸಮ್ಮೇಳನ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿದ್ದರು. ವಿಧಾನ ಪರಿಷತ್ ಮಾಜಿ ಅಧ್ಯಕ್ಷ ಎಸ್. ರುದ್ರೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.