ಜೂ.೧೮ರಂದು ಅಧೀಕ್ಷಕ ಇಂಜಿನಿಯರ್ ಕಛೇರಿ ಎದುರು ಪ್ರತಿಭಟನೆ, ಧರಣಿ ಸತ್ಯಾಗ್ರಹ
ಭದ್ರಾ ಜಲಾಶಯ
ಭದ್ರಾವತಿ : ಭದ್ರಾ ಜಲಾಶಯದ ಬಲದಂಡೆನಾಲೆ ಸೀಳಿ ನೀರು ಪೂರೈಕೆ ಮಾಡುತ್ತಿರುವ ಕಾಮಗಾರಿ ವಿರುದ್ಧ ಜೂ.೧೮ರ ಬುಧವಾರ ಬೆಳಿಗ್ಗೆ ೧೧ ಬಿ.ಆರ್ ಪ್ರಾಜೆಕ್ಟ್ ಅಧೀಕ್ಷಕ ಇಂಜಿನಿಯರ್ ಕಛೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ, ಭದ್ರಾ ಅಚ್ಚುಕಟ್ಟು ರೈತರ ಹಿತರಕ್ಷಣಾ ಸಮಿತಿ ವತಿಯಿಂದ ರೈತ ಮುಖಂಡ ಕೆ.ಟಿ ಗಂಗಾಧರ್ ನೇತೃತ್ವದಲ್ಲಿ ಪ್ರತಿಭಟನೆ ಹಾಗು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಭದ್ರಾ ಜಲಾಶಯ ಮಧ್ಯ ಕರ್ನಾಟಕದ ರೈತರ ಜೀವನಾಡಿಯಾಗಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ರೈತರಿಗೆ ವ್ಯವಸಾಯ ಹಾಗೂ ಗದಗ-ಬೆಟಗೇರಿ ಪಟ್ಟಣದವರೆಗೂ ಜನರಿಗೆ ಕುಡಿಯುವ ನೀರಿಗೆ ಆಧಾರವಾಗಿದೆ. ಭದ್ರಾ ಜಲಾಶಯದ ನೀರನ್ನು ನೆಚ್ಚಿಕೊಂಡು ರೈತರು ಭತ್ತ, ಕಬ್ಬು, ಅಡಕೆ, ತೆಂಗು ಮುಂತಾದ ಬೆಳೆಗಳನ್ನು ಬೆಳೆದು ಬದುಕು ಕಟ್ಟಿಕೊಂಡಿರುತ್ತಾರೆ. ಮಧ್ಯ ಕರ್ನಾಟಕದ ಇಂತಹ ಬೃಹತ್ ಜಲಾಶಯದ ಸುರಕ್ಷತೆಯನ್ನು ನಿರ್ಲಕ್ಷಿಸಿ ರಾಜ್ಯ ಸರ್ಕಾರ ೧೬೬೦ ಹಳ್ಳಿಗಳಿಗೆ ಕುಡಿಯಲು ನೀರನ್ನು ಒದಗಿಸುವ ಬೃಹತ್ ಕಾಮಗಾರಿಯನ್ನು ಭದ್ರಾ ಜಲಾಶಯದ ನಿರ್ಬಂಧಿತ ಪ್ರದೇಶದಲ್ಲಿ (ಬಫರ್ ಜೋನ್‌ನಲ್ಲಿ) ಕೈಗೊಂಡಿದೆ. ಈ ಕಾಮಗಾರಿ ಕೈಗೊಂಡಿರುವ ಪ್ರದೇಶವು ಅತೀ ಸೂಕ್ಷ್ಮ ಪ್ರದೇಶವಾಗಿರುತ್ತದೆ, ಈ ಪ್ರದೇಶದಲ್ಲಿ ಯಾವುದೇ ಕಾಮಗಾರಿಯನ್ನು ಕೈಗೊಳ್ಳಬಾರದೆಂಬ ನಿಯಮಾವಳಿಗಳಿದ್ದರೂ ಬಹುಗ್ರಾಮ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಿ ಕುಡಿಯುವ ನೀರಿನ ಘಟಕಗಳಿಗೆ ನೀರು ಸರಬರಾಜು ಮಾಡಲು ಭದ್ರಾ ಜಲಾಶಯದ ಬಲದಂಡೆ ನಾಲೆಯನ್ನು ಸೀಳಿ ಕುಡಿಯುವ ನೀರಿನ ಘಟಕಕ್ಕೆ ನೀರು ಸರಬರಾಜು ಮಾಡಲು ಮಾಡುತ್ತಿರುವ ಕಾಮಗಾರಿಯ ಅವೈಜ್ಞಾನಿಕವಾಗಿರುತ್ತದೆ.
ಸರ್ಕಾರವು ಕುಡಿಯುವ ನೀರಿನ ಯೋಜನೆಯನ್ನು ಕೈಗೊಳ್ಳಲು ರೈತರು ಯಾವುದೇ ತಕರಾರು ಮಾಡುತ್ತಿಲ್ಲ. ಆದರೇ ಭದ್ರಾ ಜಲಾಶಯದ ನಿರ್ಬಂಧಿತ ಮತ್ತು ಸೂಕ್ಷ್ಮ ಪ್ರದೇಶದಲ್ಲಿ ಕಾಮಗಾರಿಯಿಂದ ಜಲಾಶಯ ತುಂಬಿದಾಗ ನೀರಿನ ಒತ್ತಡದಿಂದಾಗಿ ಯಾವುದೇ ರೀತಿಯ ಅಪಾಯಗಳು ಸಂಭವಿಸಬಹುದಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚು ಮಳೆಬಿದ್ದು ಗುಡ್ಡಗಳು ಕುಸಿಯುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಇವೆಲ್ಲವನ್ನೂ ಸರ್ಕಾರ ಮನಗಂಡಿದ್ದರೂ ಜಲಾಶಯದ ಸುರಕ್ಷತೆ ಮತ್ತು ಜನರ ಹಿತಾಸಕ್ತಿಯನ್ನು ಕಡೆಗಣಿಸಿ ಈ ಕಾಮಗಾರಿ ಕೈಗೊಂಡಿರುವುದನ್ನು ರೈತಸಂಘ ಹಾಗೂ ಭದ್ರಾ ಅಚ್ಚುಕಟ್ಟುದಾರರ ಹಿತರಕ್ಷಣಾ ಸಮಿತಿ ಖಂಡಿಸುತ್ತವೆ.
ಸರ್ಕಾರ ಕೂಡಲೇ ನಿರ್ಬಂಧಿತ ಪ್ರದೇಶದಲ್ಲಿ ಜಲಾಶಯಕ್ಕೆ ಆಪತ್ತು ತಂದೊಡ್ಡುವ ಕಾಮಗಾರಿಯನ್ನು ಶಾಶ್ವತವಾಗಿ ಕೈಬಿಡಬೇಕೆಂದು ಆಗ್ರಹಿಸಿ ಪ್ರತಿಭಟನೆ ಹಾಗು ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು, ಭದ್ರಾ ಬಲದಂಡೆ ನಾಲೆಯ ಅಚ್ಚುಕಟ್ಟುದಾರರು. ರೈತರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಸಮಸ್ತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.