ಶುಕ್ರವಾರ, ಆಗಸ್ಟ್ 1, 2025

ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯ ಸಿ.ಎಸ್ ನಾಗರಾಜು : ದಂಪತಿಗೆ ಹಳೇವಿದ್ಯಾರ್ಥಿಗಳು, ಸ್ಥಳೀಯರಿಂದ ಸನ್ಮಾನ

ಭದ್ರಾವತಿ ನಗರಸಭೆ ವ್ಯಾಪ್ತಿಯ ಭದ್ರಾ ಕಾಲೋನಿ ಭದ್ರಾ ಪ್ರೌಢ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ಸಿ.ಎಸ್ ನಾಗರಾಜು ದಂಪತಿ ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಭದ್ರಾ ಕಾಲೋನಿ ಭದ್ರಾ ಪ್ರೌಢ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ಸಿ.ಎಸ್ ನಾಗರಾಜು ದಂಪತಿ ಸನ್ಮಾನಿಸಿ ಗೌರವಿಸಲಾಯಿತು. 
    ಮುಖ್ಯೋಪಾಧ್ಯಾಯರಾಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ನಾಗರಾಜು ಅವರನ್ನು ಮೈಸೂರಿನ ಉದ್ಯಮಿ ಕಾಂತರಾಜ್, ವಿ. ರಮೇಶ್, ದೇವೇಂದ್ರಪ್ಪ ಸೇರಿದಂತೆ ಸುಮಾರು ೬೦ ರಿಂದ ೭೦ ಹಳೇಯ ವಿದ್ಯಾರ್ಥಿಗಳು ಹಾಗು ಸ್ಥಳೀಯರು ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಿದರು. 
ಸನ್ಮಾನಿಸ ಸ್ವೀಕರಿಸಿದ ನಾಗರಾಜುರವರು ತಮ್ಮ ವೃತ್ತಿ ಜೀವನದ ಕೆಲವು ಘಟನೆಗಳನ್ನು ಸ್ಮರಿಸಿ ಕರ್ತವ್ಯದ ಅವಧಿಯಲ್ಲಿ ಸಹಕರಿಸಿದ ಶಿಕ್ಷಕ ವೃಂದ, ಸಿಬ್ಬಂದಿ ವರ್ಗ, ಶಾಲಾ ಆಡಳಿತ ಮಂಡಳಿ, ಸ್ಥಳೀಯ ನಿವಾಸಿಗಳು, ಜನಪ್ರತಿನಿಧಿ ಸೇರಿದಂತೆ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು. 

ಲೈಂಗಿಕ ದೌರ್ಜನ್ಯ ಪ್ರಕರಣ : ೨೦ ವರ್ಷ ಕಾರವಾಸ ಗೃಹ ಶಿಕ್ಷೆ


    ಭದ್ರಾವತಿ:  ೨೦೨೪ನೇ ಸಾಲಿನಲ್ಲಿ ದಾಖಲಾಗಿದ್ದ ತಾಲೂಕಿನ ೧೫ ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ ೨೦ ವರ್ಷ ಕಾರವಾಸ ಗೃಹ ಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ನಿಂಗನ ಗೌಡ ಪಾಟೀಲ್ ತೀರ್ಪು ನೀಡಿದ್ದಾರೆ.
    ಲೈಂಗಿಕ ದೌರ್ಜನ್ಯಕ್ಕೊಳಗಾದ ನೊಂದ ಬಾಲಕಿಯ ದೂರಿನ ಮೇರೆಗೆ ನಗರದ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಕಲಂ ೪೪೮ ೩೭೬(೨) (ಎನ್), ೩೭೬ (೨)(ಎಫ್) ಐಪಿಸಿ ಮತ್ತು ಕಲಂ ೫ (ಜೆ)(೨) ೫(ಎಲ್), ೬  ಪೋಕ್ಸೋ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿತ್ತು.
    ಪ್ರಕರಣದ ತನಿಖಾಧಿಕಾರಿ ನಗರ ವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್ ಪ್ರಕರಣದ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ಆರೋಪಿಯ ವಿರುದ್ಧ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
    ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಚ್.ಆರ್ ಶ್ರೀಧರ್ ವಾದ ಮಂಡಿಸಿದ್ದರು.  ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ-೧, ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದು, ಆರೋಪಿಯ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ನಿಂಗನ ಗೌಡ ಪಾಟೀಲ್‌ರವರು ಪ್ರಕರಣದ ಆರೋಪಿತನಿಗೆ ೨೦ ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ರು. ೧,೬೧,೦೦೦ ದಂಡ, ದಂಡ ಕಟ್ಟಲು ವಿಫಲನಾದಲ್ಲಿ ೨ ವರ್ಷ ಹೆಚ್ಚುವರಿ ಸಾದಾ ಕಾರಾವಾಸ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.  

ಶಾಂತಿಭಂಗ, ಕೊಲೆಯತ್ನ ಆರೋಪಿಗೆ ೧೦ ವರ್ಷ ಶಿಕ್ಷೆ

ತಾವರಾನಾಯ್ಕ 
    ಭದ್ರಾವತಿ : ಸುಮಾರು ೧೦ ವರ್ಷಗಳ ಹಿಂದಿನ ಕೊಲೆಯತ್ನ ಹಾಗು ಶಾಂತಿಭಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ ನ್ಯಾಯಾಲಯ ೧೦ ವರ್ಷಗಳ ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.
    ತಾಲೂಕಿನ ಕೋಮಾರನಹಳ್ಳಿ ತಾಂಡ ನಿವಾಸಿ ತಾವರಾನಾಯ್ಕ(೫೮) ಶಿಕ್ಷೆಗೊಳಗಾಗಿದ್ದು, ಗ್ರಾಮಾಂತರ ಪೊಲೀಸ್ ಠಾಣೆ ಗುನ್ನೆ ನಂಬರ್ ೬೩/೨೧ ಕಲಂ ೫೦೪. ೩೦೭ ಐಪಿಸಿ ದಂಡ ಸಂಹಿತೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.  
    ಅಂದಿನ ತನಿಖಾಧಿಕಾರಿ ಸಹಾಯಕ ಪೊಲೀಸ್ ಠಾಣಾ ನಿರೀಕ್ಷಕ ಮಂಜೇಶ್ ಹಾಗು ಸಹಾಯಕ ತನಿಖಾಧಿಕಾರಿ ಟಿ.ಪಿ ಮಂಜಪ್ಪರವರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಇಂದಿರ ಮೈಲಸ್ವಾಮಿ ಚೆಟ್ಟಿಯಾರ್ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕಿ ಪಿ. ರತ್ನಮ್ಮ ವಾದ ಮಂಡಿಸಿದ್ದರು. 

ಗುರುವಾರ, ಜುಲೈ 31, 2025

ಸೆಲ್ವರಾಜ್ ನಿಧನ


ಸೆಲ್ವರಾಜ್
ಭದ್ರಾವತಿ : ಹಳೇನಗರದ ಭೂತನಗುಡಿ ನಿವಾಸಿ, ಕ್ರೈಸ್ತ ಸಮುದಾಯದ ಮುಖಂಡ ಸೆಲ್ವರಾಜ್(೫೮) ಗುರುವಾರ ನಿಧನ ಹೊಂದಿದರು. 
ಪತ್ನಿ, ಪುತ್ರ ಇದ್ದಾರೆ.  ಶುಕ್ರವಾರ ಬೈಪಾಸ್ ರಸ್ತೆಯಲ್ಲಿರುವ ಕ್ರೈಸ್ತ ಸಮಾಧಿಯಲ್ಲಿ ಇವರ ಅಂತ್ಯಕ್ರಿಯೆ ನಡೆಯಲಿದೆ. ಇವರ ನಿಧನಕ್ಕೆ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ. 
 

ಶ್ರೀ ಭಗವದ್ಗೀತಾ ಅಭಿಯಾನ ಪೂರ್ವಭಾವಿ ಸಭೆ : ಮಾಹಿತಿ ಪತ್ರ ಬಿಡುಗಡೆ

 ಶ್ರೀ ಭಗವದ್ಗೀತಾ ಅಭಿಯಾನ ಸಂಬಂಧ ಭದ್ರಾವತಿ ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಗುರುವಾರ ತಾಲೂಕು ಸಮಿತಿ ರಚನೆ ಪೂರ್ವಭಾವಿ ಸಭೆ ಜರುಗಿತು. ಸಭೆಯಲ್ಲಿ ಅಭಿಯಾನದ ಮಾಹಿತಿ ಪತ್ರ  ಶ್ರೀ ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ಕೆ.ಆರ್ ಸುಬ್ಬಾರಾವ್‌ರವರು ಬಿಡುಗಡೆಗೊಳಿಸಿದರು.
    ಭದ್ರಾವತಿ: ಶ್ರೀ ಭಗವದ್ಗೀತಾ ಅಭಿಯಾನ ಸಂಬಂಧ ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಗುರುವಾರ ತಾಲೂಕು ಸಮಿತಿ ರಚನೆ ಪೂರ್ವಭಾವಿ ಸಭೆ ಜರುಗಿತು. 
    ಸಭೆಯಲ್ಲಿ ಅಭಿಯಾನದ ಮಾಹಿತಿ ಪತ್ರ  ಶ್ರೀ ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ಕೆ.ಆರ್ ಸುಬ್ಬಾರಾವ್‌ರವರು ಬಿಡುಗಡೆಗೊಳಿಸಿದರು. ಅಭಿಯಾನ ಸಮಿತಿ ಕಾರ್ಯಾಧ್ಯಕ್ಷ ಅಶೋಕ ಜಿ.ಭಟ್ಟ ಅಭಿಯಾನದ ರೂಪುರೇಷೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು. 
     ಶ್ರೀ ಮಠದ ಪ್ರಮುಖರಾದ ನಾಗರಾಜ್, ಆನಂದ್, ಡಾ. ಬಾಲಕೃಷ್ಣ ಹೆಗಡೆ, ಮಂಜುನಾಥ ಶರ್ಮಾ, ಮ.ಸ.ನಂಜುಂಡಸ್ವಾಮಿ, ಡಾ.ಸುಧೀಂದ್ರ, ಲಕ್ಷದಮಣ ಜೋಶಿ, ಡಿ.ಎಂ ಹೆಗಡೆ, ಲಲಿತಾ ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಎಂಪಿಎಂ ಕಾರ್ಖಾನೆ ಪುನರ್ ಆರಂಭ ಸೇರಿದಂತೆ ವಿವಿಧ ಸಮಸ್ಯೆಗಳ ಅಹವಾಲು ಸಲ್ಲಿಕೆ

ಶಿವಮೊಗ್ಗ ಜಿಲ್ಲಾ ಶಾಸಕರ ಸಭೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ 

ಮುಖ್ಯಮಂತ್ರಿ ಸಿದ್ದರಾಮಯ್ಯರವರು ಖುದ್ದಾಗಿ ಕ್ಷೇತ್ರದ ಶಾಸಕರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದು, ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಭದ್ರಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಗುರುವಾರ ತಮ್ಮ ಅಹವಾಲುಗಳನ್ನು ಸಲ್ಲಿಸಿದರು. 
    ಭದ್ರಾವತಿ : ಮುಖ್ಯಮಂತ್ರಿ ಸಿದ್ದರಾಮಯ್ಯರವರು ಖುದ್ದಾಗಿ ಕ್ಷೇತ್ರದ ಶಾಸಕರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದು, ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಗುರುವಾರ ತಮ್ಮ ಅಹವಾಲುಗಳನ್ನು ಸಲ್ಲಿಸಿದರು. 
    ಶಿವಮೊಗ್ಗ ಜಿಲ್ಲಾ ಶಾಸಕರ ಸಭೆಯಲ್ಲಿ ಬಹುಮುಖ್ಯವಾಗಿ ಕ್ಷೇತ್ರದ ಮೈಸೂರು ಕಾಗದ ಕಾರ್ಖಾನೆ ಪುನರ್ ಆರಂಭಿಸುವಂತೆ ಶಾಸಕರು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ. ಕ್ಷೇತ್ರದಲ್ಲಿ ಕಾರ್ಮಿಕರು ಹೆಚ್ಚಾಗಿದ್ದು, ಎಂಪಿಎಂ ಮತ್ತು ವಿಐಎಸ್‌ಎಲ್ ಎರಡು ಕಾರ್ಖಾನೆಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಎಂಪಿಎಂ ಕಾರ್ಖಾನೆ ಸ್ಥಗಿತಗೊಂಡು ಸುಮಾರು ೧೦ ವರ್ಷಗಳು ಕಳೆಯುತ್ತಿವೆ. ಕ್ಷೇತ್ರದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಕಾರ್ಖಾನೆ ಪುನರ್ ಆರಂಭಿಸುವ ಮೂಲಕ ಉದ್ಯೋಗ ಕಲ್ಪಿಸಿಕೊಡುವಂತೆ ಕೋರಿದ್ದಾರೆ. 
    ಉಳಿದಂತೆ ಕ್ಷೇತ್ರದಲ್ಲಿನ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಶಾಸಕರು ಮನವಿ ಸಲ್ಲಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯರವರು ಬಹುತೇಕ ಬೇಡಿಕೆಗಳಿಗೆ ಪೂರಕವಾಗಿ ಸ್ಪಂದಿಸಿದ್ದಾರೆಂದು ತಿಳಿದು ಬಂದಿದೆ. ಸಿದ್ದರಾಮಯ್ಯರವರನ್ನು ಶಾಸಕರು ಸನ್ಮಾನಿಸಿ ಗೌರವಿಸಿದರು. 
    ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಗೋಪಾಲಕೃಷ್ಣ ಬೇಳೂರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
 

ಮುಖ್ಯಮಂತ್ರಿ ಸಿದ್ದರಾಮಯ್ಯರವರು ಖುದ್ದಾಗಿ ಕ್ಷೇತ್ರದ ಶಾಸಕರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದು, ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಭದ್ರಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಗುರುವಾರ ತಮ್ಮ ಅಹವಾಲುಗಳನ್ನು ಸಲ್ಲಿಸುವ ಮೂಲಕ ಸಿದ್ದರಾಮಯ್ಯನವರನ್ನು ಸನ್ಮಾನಿಸಿ ಗೌರವಿಸಿದರು.  

ಅಧಿಕೃತ ಪತ್ರ ಬರಹಗಾರರಿಗೆ ಮಾತ್ರ ನೋಂದಾಣಿಗೆ ಅವಕಾಶ ಕಲ್ಪಿಸಿಕೊಡಿ


ಅನಧಿಕೃತ ಏಜೆಂಟರು, ಬ್ರೋಕರ್‌ಗಳು, ಸೈಬರ್ ಸೆಂಟರ್ ನಡೆಸುವವರು ಉಪ ನೋಂದಾಣಾಧಿಕಾರಿಗಳ ಕಚೇರಿಗೆ ಹಾಜರಾಗಿ ಪತ್ರಗಳನ್ನು ನೋಂದಾಯಿಸುತ್ತಿದ್ದು, ಇದರಿಂದ ಅಧಿಕೃತ ಪತ್ರ ಬರಹಗಾರರ ವೃತ್ತಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಭದ್ರಾವತಿ ತಾಲೂಕು ಅಧಿಕೃತ ಪರವಾನಗಿ ಪಡೆದ ಪತ್ರ ಬರಹಗಾರರ ಸಂಘ ಉಪ ನೋಂದಾಣಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿತು.
    ಭದ್ರಾವತಿ: ಅನಧಿಕೃತ ಏಜೆಂಟರು, ಬ್ರೋಕರ್‌ಗಳು, ಸೈಬರ್ ಸೆಂಟರ್ ನಡೆಸುವವರು ಉಪ ನೋಂದಾಣಾಧಿಕಾರಿಗಳ ಕಚೇರಿಗೆ ಹಾಜರಾಗಿ ಪತ್ರಗಳನ್ನು ನೋಂದಾಯಿಸುತ್ತಿದ್ದು, ಇದರಿಂದ ಅಧಿಕೃತ ಪತ್ರ ಬರಹಗಾರರ ವೃತ್ತಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ತಾಲೂಕು ಅಧಿಕೃತ ಪರವಾನಗಿ ಪಡೆದ ಪತ್ರ ಬರಹಗಾರರ ಸಂಘ ಉಪ ನೋಂದಾಣಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿತು.
    ಇತ್ತೀಚೆಗೆ ಕಾವೇರಿ ೨.೦ ತಂತ್ರಾಂಶ ಜಾರಿಗೆ ಬಂದ ನಂತರ ಸಿಟಿಜನ್ ಲಾಗಿನ್ ಮುಖಾಂತರ ಅನಧಿಕೃತ ಏಜೆಂಟರು ದಸ್ತಾವೇಜು ತಯಾರಿಸುವ ಬಗ್ಗೆ ಯಾವುದೇ ತಿಳಿವಳಿಕೆ, ಮಾಹಿತಿ ಇಲ್ಲದೆ, ಪಕ್ಷಗಾರರ ದಾಖಲಾತಿಗಳನ್ನು ಪರಿಶೀಲಿಸದೆ ದಸ್ತಾವೇಜುಗಳನ್ನು ತಯಾರಿಸಿ ಕಾವೇರಿ ೨.೦ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ. ದಸ್ತಾವೇಜುಗಳನ್ನು ನೋಂದಾಯಿಸಿ ಕೊಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಈ ವೃತ್ತಿಯನ್ನೇ ನಂಬಿ ಪರವಾನಗಿ ಪಡೆದು ಜೀವನ ನಡೆಸುತ್ತಿರುವವರಿಗೆ ಅನ್ಯಾಯವಾಗುತ್ತಿದೆ ಎಂದು ದೂರಲಾಗಿದೆ. 
    ಈ ಕುರಿತು ಹಲವು ಬಾರಿ ಕಚೇರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಸಾರ್ವಜನಿಕರ ದಾಖಲೆಗಳನ್ನು ಪಡೆದು ನೋಂದಣಿಗೆ ಬರುವ ಅನಧಿಕೃತ ವ್ಯಕ್ತಿಗಳು ಕಚೇರಿಗೆ ಬರುವುದನ್ನು ತಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು. ತಕ್ಷಣ ಪತ್ರ ಬರಹಗಾರರ ಸಮಸ್ಯೆಗೆ ಸ್ಪಂದಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. 
ಸಂಘದ ತಾಲೂಕು ಅಧ್ಯಕ್ಷ ಮೂರ್ತಿ, ಉಪಾಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಎಂ. ಶಿವಕುಮಾರ್, ಜಿಲ್ಲಾ ಉಪಾಧ್ಯಕ್ಷ ಸತ್ಯನಾರಾಯಣ, ಪ್ರಮುಖರಾದ ನಾಗೇಂದ್ರ, ಅಶ್ವಥ್, ಶ್ರೀಧರ್, ಚಂದ್ರಶೇಖರ್, ಎಂ.ಮರುಡಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.