ಸೋಮವಾರ, ಆಗಸ್ಟ್ 11, 2025

ನೀಲಕಂಠನ್ ನಿಧನ

ನೀಲಕಂಠನ್
ಭದ್ರಾವತಿ : ತಾಲೂಕು ವನ್ನಿಯರ್ ತಮಿಳು ಗೌಂಡರ್ ಸಮಾಜದ  ಮಾಜಿ ಅಧ್ಯಕ್ಷ, ದಲಿತ ಮುಖಂಡ ನೀಲಕಂಠನ್(೬೨) ಭಾನುವಾರ ರಾತ್ರಿ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. 
ಪತ್ನಿ, ಪುತ್ರ ಹಾಗು ಪುತ್ರಿ ಮತ್ತು ಸಹೋದರರು ಇದ್ದಾರೆ. ನಗರಸಭೆ ವ್ಯಾಪ್ತಿಯ ಗಾಂಧಿನಗರದ ಕೇಶಪುರ ಬಡಾವಣೆಯಲ್ಲಿ ವಾಸವಾಗಿದ್ದರು. ನೀಲಕಂಠನ್‌ರವರು ಕೆಲವು ವರ್ಷಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. 
ಮನೆ ದೇವರ ಪೂಜೆ ಸಲ್ಲಿಸಲು ತಮಿಳುನಾಡಿಗೆ ತೆರಳಿ ಮರಳುತ್ತಿದ್ದಾಗ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಹೃದಯಾಘಾತವಾಗಿದ್ದು, ಮೃತದೇಹವನ್ನು ನಗರಕ್ಕೆ ತರಲಾಗಿದೆ. ಮಂಗಳವಾರ ಮಧ್ಯಾಹ್ನ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. 
ಇವರ ನಿಧನಕ್ಕೆ ವನ್ನಿಯರ್ ತಮಿಳು ಗೌಂಡರ್ ಸಮಾಜದ ಅಧ್ಯಕ್ಷ, ನಗರಸಭೆ ಉಪಾಧ್ಯಕ್ಷ ಮಣಿ ಎಎನ್‌ಎಸ್, ಮೊದಲಿಯಾರ್ ಸಮಾಜದ ಪ್ರಮುಖರಾದ ಹಿರಿಯ ಪತ್ರಕರ್ತ ಕಣ್ಣಪ್ಪ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ. 
 

ಭಾನುವಾರ, ಆಗಸ್ಟ್ 10, 2025

ಆ.೧೬ರಂದು ಆಡಿ ಕೃತಿಕ ಕಾವಡಿ ಜಾತ್ರಾ ಉತ್ಸವ


    ಭದ್ರಾವತಿ : ಇಲ್ಲಿಗೆ ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಆ.೧೬ರ ಶನಿವಾರ ಆಡಿ ಕೃತಿಕ ಕಾವಡಿ ಜಾತ್ರಾ ಉತ್ಸವ ನಡೆಯಲಿದೆ.  
    ಶ್ರೀ ಕ್ಷೇತ್ರದ ಶಿವೈಕ್ಯರಾದ ಶ್ರೀ ಮಹಾ ಸಿದ್ದರ್ ಸ್ವಾಮಿಯವರ ಭಕ್ತಿ ಪೂರ್ವಕ ನಮನಗಳೊಂದಿಗೆ ಆ.೧೧ ರಿಂದ ೧೮ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದ್ದು, ೧೧ರ ಬೆಳಿಗ್ಗೆ ೬ರಂದು ಧ್ವಜಾರೋಹಣದ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ೧೫ರಂದು ಭರಣಿ ಕಾವಡಿ ಉತ್ಸವ, ಬೆಳಗಿನ ಜಾವ ೪ ಗಂಟೆಯಿಂದ ವಿಶ್ವರೂಪ ದರ್ಶನ ಆರಂಭ, ೫ ರಿಂದ ಮಹಾಪೂಜೆ, ೮ ಗಂಟೆಗೆ ಸಂಧಿಪೂಜೆ, ೧೨ಕ್ಕೆ ಉಚ್ಚಿಕಾಲ ಪೂಜೆ, ಸಂಜೆ ೫.೩೦ಕ್ಕೆ ದೀಪಾರಧನೆ, ರಾತ್ರಿ ೯ಕ್ಕೆ ಸಂಧಿಪೂಜೆ, ೧೨ಕ್ಕೆ ವಿಶೇಷ ಅಭಿಷೇಕ, ಆರಾಧನೆ ನಡೆಯಲಿದೆ. 
    ಆ.೧೬ರಂದು ಆಡಿಕೃತಿಕಾ ಕಾವಡಿ ಉತ್ಸವ ಬೆಳಗಿನ ಜಾವ ೪ ಗಂಟೆಯಿಂದ ವಿಶ್ವರೂಪ ದರ್ಶನ ಮತ್ತು ಅಭಿಷೇಕ, ೫ ರಿಂದ ಉತ್ಸವ ಪೂಜೆ ಹಾಗು ಕಾವಡಿ ಹರಕೆ ಸಮರ್ಪಣೆ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಸಂಜೆ ೫.೩೦ ರಿಂದ ದೀಪಾರಾಧನೆ, ರಾತ್ರಿ ೧೦ಕ್ಕೆ ಅರ್ಧ ಜಾಮಪೂಜೆ ಜರುಗಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಕೋರಲಾಗಿದೆ. 

ಅನಾಥ ಹೆಣ್ಣು ಮಕ್ಕಳಿಗೆ ನೆರವಾದ ಮನೆ ಮನೆಗೆ ಪೊಲೀಸ್

ಭದ್ರಾವತಿ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಮುಸ್ಲಿಂ ಕ್ಯಾಂಪ್ ಗ್ರಾಮದಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದಡಿ ಸಮಸ್ಯೆಗಳನ್ನು ಆಲಿಸುವಾಗ ೯ ಮತ್ತು ೩ ವರ್ಷದ ಇಬ್ಬರು ಅನಾಥ ಹೆಣ್ಣು ಮಕ್ಕಳು ಪತ್ತೆಯಾಗಿದ್ದು, ಇವರನ್ನು ಡಾನ್ ಬೋಸ್ಕೋ ಸಂಸ್ಥೆ ಮೂಲಕ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಕಳುಹಿಸಿಕೊಡಲಾಗಿದೆ. ಈ ಮೂಲಕ ಘೋಷಕತ್ವದಿಂದ ವಂಚಿತರಾಗಿರುವ ಇಬ್ಬರು ಹೆಣ್ಣು ಮಕ್ಕಳಿಗೆ ಆಶ್ರಯ ಕಲ್ಪಿಸಿಕೊಡುವ ಮೂಲಕ ಪೊಲೀಸ್ ಇಲಾಖೆ ಮಾನವೀಯತೆ ಮೆರೆದಿದೆ. 
ಭದ್ರಾವತಿ : ಪೊಲೀಸ್ ಇಲಾಖೆ ವತಿಯಿಂದ ಇತ್ತೀಚೆಗೆ ನೂತನವಾಗಿ ಆರಂಭಿಸಿರುವ ಮನೆ ಮನೆಗೆ ಪೊಲೀಸ್ ಯೋಜನೆ ನಾಗರಿಕ ಸಮಾಜಕ್ಕೆ ಹೆಚ್ಚಿನ ಸಹಕಾರಿಯಾಗಿದ್ದು, ಘಟನೆಯೊಂದರ ಮೂಲಕ ಪೊಲೀಸ್ ಇಲಾಖೆ ಸಹ ಮಾನವೀಯತೆ ಎತ್ತಿ ಹಿಡಿಯುವ ಜೊತೆಗೆ ನಿಮ್ಮೊಂದಿಗೆ ನಾವು ಸದಾ ಇದ್ದೇವೆಂಬ ಭಾವನೆ ಮೂಡಿಸುವಲ್ಲಿ ಯಶಸ್ವಿಯಾಗಿದೆ. 
ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಲಾಖೆ ಸಿಬ್ಬಂದಿ ಕಾನ್ಸ್‌ಸ್ಟೇಬಲ್ ಎಚ್.ವಿ ಆನಂದ್‌ರವರು ಮನೆ ಮನೆಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸುವಾಗ ಗ್ರಾಮ ಗಸ್ತು ಸಂಖ್ಯೆ ೪ರ ಮುಸ್ಲಿಂ ಕ್ಯಾಂಪ್ ಗ್ರಾಮದಲ್ಲಿ ೯ ಮತ್ತು ೩ ವರ್ಷದ ಇಬ್ಬರು ಅನಾಥ ಹೆಣ್ಣು ಮಕ್ಕಳು ಪತ್ತೆಯಾಗಿದ್ದಾರೆ. ಈ ಇಬ್ಬರು ಹೆಣ್ಣು ಮಕ್ಕಳ ತಂದೆ-ತಾಯಿ ಸುಮಾರು ೧ ವರ್ಷದ ಹಿಂದೆ ಮರಣ ಹೊಂದಿದ್ದಾರೆ. ಇದರಿಂದಾಗಿ ಅನಾಥರಾಗಿದ್ದು, ಪೋಷಕತ್ವದಿಂದ ವಂಚಿತರಾಗಿದ್ದಾರೆ.    
ಅನಾಥ ಮಕ್ಕಳಿಗೆ ನೆಲೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಾರ್ಯಗತವಾಗಿರುವ ಇಲಾಖೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿಗಳಾದ ಎ.ಜಿ ಕಾರಿಯಪ್ಪ ಮತ್ತು ಎಸ್. ರಮೇಶ್ ಕುಮಾರ್‌ರವರ ಮಾರ್ಗದರ್ಶನದಲ್ಲಿ ನಗರದ ಡಾನ್ ಬೋಸ್ಕೋ ಜಿಲ್ಲಾ ಸಂಯೋಜಕ ರಂಗನಾಥ್‌ರವರನ್ನು ಸಂಪರ್ಕಿಸಿ, ಅನಾಥ ಮಕ್ಕಳ ಕುರಿತು ಮಾಹಿತಿ ನೀಡುವ ಮೂಲಕ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಕಳುಹಿಸಿಕೊಡಲಾಗಿದೆ. ಈ ಮೂಲಕ ಘೋಷಕತ್ವದಿಂದ ವಂಚಿತರಾಗಿರುವ ಇಬ್ಬರು ಹೆಣ್ಣು ಮಕ್ಕಳಿಗೆ ಆಶ್ರಯ ಕಲ್ಪಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದೆ. 

ಶನಿವಾರ, ಆಗಸ್ಟ್ 9, 2025

ರಾಯರ ಮಠದಲ್ಲಿ ಉಪಕರ್ಮ, ಆ.೧೨ರಂದು ರಥೋತ್ಸವ

ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ೩೫೪ನೇ ಆರಾಧನಾ ಮಹೋತ್ಸವ ಅಂಗವಾಗಿ ಶನಿವಾರ ಉಪಕರ್ಮ ಜರುಗಿತು. 
    ಭದ್ರಾವತಿ : ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ೩೫೪ನೇ ಆರಾಧನಾ ಮಹೋತ್ಸವ ಅಂಗವಾಗಿ ಶನಿವಾರ ಉಪಕರ್ಮ ಜರುಗಿತು. 
    ಮಠದಲ್ಲಿ ಬೆಳಿಗ್ಗೆ ೬.೩೦ಕ್ಕೆ ವೇದಬ್ರಹ್ಮ ಶ್ರೀ ಗೋಪಾಲಕೃಷ್ಣ ಆಚಾರ್‌ರವರ ನೇತೃತ್ವದಲ್ಲಿ ಉಪಕರ್ಮ ನಡೆಸಲಾಯಿತು. ಶ್ರೀ ಗುರುರಾಜ ಸೇವಾಸಮಿತಿ ಅಧ್ಯಕ್ಷ ಮುರಳಿಧರ ತಂತ್ರಿ ಹಾಗು ಉಪಾಧ್ಯಕ್ಷೆ ಸುಮಾ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ರಮಾಕಾಂತ್, ನಿರಂಜನಾಚಾರ್ಯ, ಮಾಧುರಾವ್, ಗಿರಿ ಆಚಾರ್, ಪವನ್ ಕುಮಾರ್ ಉಡುಪ, ಪ್ರಮೋದ್ ಕುಮಾರ್, ಶುಭ ಗುರುರಾಜ್, ವಿದ್ಯಾನಂದನಾಯಕ, ಪ್ರಶಾಂತ್, ಶಶಿಧರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ೨ ದಿನಗಳ ಕಾಲ ಆರಾಧನಾ ಮಹೋತ್ಸವ : 
    ಆ.೧೧ ಮತ್ತು ೧೨ರಂದು ಎರಡು ದಿನಗಳ ಕಾಲ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ೩೫೪ನೇ ಆರಾಧನಾ ಮಹೋತ್ಸವ ನಡೆಯಲಿದ್ದು, ಈ ಸಂಬಂಧ ವಿವಿಧ ಧಾರ್ಮಿಕ ಆಚರಣೆಗಳು ಜರುಗಲಿವೆ. ಆ.೧೨ರಂದು ಬೆಳಿಗ್ಗೆ ೧೦ ಗಂಟೆಗೆ ರಾಯರ ರಥೋತ್ಸವ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ  ಆಗಮಿಸಿ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಮೈಸೂರು ಸಂಸ್ಥಾನ ಒಕ್ಕೂಟ ವ್ಯವಸ್ಥೆಗೆ ಸೇರ್ಪಡೆಗೊಂಡ ದಿನ ಆಚರಣೆ

ಕನ್ನಡ ಧ್ವಜ ಹಿಡಿದು ಕನ್ನಡಾಭಿಮಾನ ಬೆಳೆಸಿಕೊಳ್ಳಲು ಕರೆ 

ಮೈಸೂರು ಸಂಸ್ಥಾನ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ವಿಲೀನಗೊಂಡ ದಿನವನ್ನು ಭದ್ರಾವತಿ ನಗರದಲ್ಲಿ ವಿಶಿಷ್ಟವಾಗಿ ಕನ್ನಡ ಬಾವುಟ ಹಿಡಿದು ಪ್ರತಿಯೊಬ್ಬರ ಮನೆಗಳಲ್ಲಿ ಕನ್ನಡದ ಧ್ವಜ ಹಾರಾಡಲಿ ಎಂಬ ಭಾವನೆಯೊಂದಿಗೆ ಆಚರಿಸಲಾಯಿತು
    ಭದ್ರಾವತಿ : ಮೈಸೂರು ಸಂಸ್ಥಾನ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ವಿಲೀನಗೊಂಡ ದಿನವನ್ನು ನಗರದಲ್ಲಿ ವಿಶಿಷ್ಟವಾಗಿ ಕನ್ನಡ ಬಾವುಟ ಹಿಡಿದು ಪ್ರತಿಯೊಬ್ಬರ ಮನೆಗಳಲ್ಲಿ ಕನ್ನಡದ ಧ್ವಜ ಹಾರಾಡಲಿ ಎಂಬ ಭಾವನೆಯೊಂದಿಗೆ ಆಚರಿಸಲಾಯಿತು
    ಆ.೯, ೧೯೪೭ರಂದು ಮೈಸೂರು ಸಂಸ್ಥಾನ ದೇಶದ ಒಕ್ಕೂಟ ವ್ಯವಸ್ಥೆಗೆ ಸೇರ್ಪಡೆಗೊಂಡ ದಿನ. ಅಂದಿನ ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್‌ರವರು ಒಕ್ಕೂಟ ವ್ಯವಸ್ಥೆಗೆ ಸಹಿ ಮಾಡಿದ ದಿನ ಇದಾಗಿದ್ದು, ಮಹಾರಾಜರ ತ್ಯಾಗ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರತಿಯೊಬ್ಬರು ಕನ್ನಡ ನಾಡಿನ ಮೇಲೆ ಅಭಿಮಾನ ಬೆಳೆಸಿಕೊಳ್ಳಬೇಕು. ನೆಲ, ಜಲ, ಭಾಷೆ, ಸಂಸ್ಕೃತಿ ಪ್ರೀತಿಸಿ ಗೌರವಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಬೇಕೆಂದು ಮನವಿ ಮಾಡಲಾಯಿತು. 
    ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ತಾಲೂಕು ಅಧ್ಯಕ್ಷ ತೀರ್ಥೇಶ್,. ಡಿಎಸ್‌ಎಸ್ ಮುಖಂಡರಾದ ದಾಸರಕಲ್ಲಳ್ಳಿ ನಾಗರಾಜ್, ವೀರಾಪುರ ಗಣೇಶ್, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಮೊಹಮ್ಮದ್ ಸಲ್ಮಾನ್, ಹಸಿರು ಸೇನೆ ಯುವ ಘಟಕದ ತಾಲೂಕು ಅಧ್ಯಕ್ಷ ಇಮ್ರಾನ್, ಶ್ರೀ ತಿರುಮಲ ಚಾರಿಟಬಲ್ ಫೌಂಡೇಷನ್ ಪ್ರಶಾಂತ್, ಜಾನು, ನಿತಿನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಶುಕ್ರವಾರ, ಆಗಸ್ಟ್ 8, 2025

ಬಾಲಿ ಇಂಡಿಯಾ ಇಂಟರ್‌ನ್ಯಾಷನಲ್ ಐಕಾನಿಕ್ ಆವಾರ್ಡ್-೨೦೨೫ ಪ್ರಶಸ್ತಿ

ಬಡತನ ಮೆಟ್ಟಿನಿಂದ ಸಾಧಕ, ಉಚಿತ ನೋಟ್ ಪುಸ್ತಕಗಳ ರೂವಾರಿ ಎ. ಧರ್ಮೇಂದ್ರ 

ಬಾಲಿ ಇಂಡಿಯಾ ಇಂಟರ್‌ನ್ಯಾಷನಲ್ ಐಕಾನಿಕ್ ಆವಾರ್ಡ್-೨೦೨೫ ಪ್ರಶಸ್ತಿ ಪುರಸ್ಕೃತ ಭದ್ರಾವತಿ ಕುಮರಿನಾರಾಯಣಪುರದ ಸಮಾಜ ಸೇವಕ ಎ. ಧರ್ಮೇಂದ್ರ. 
    * ಅನಂತಕುಮಾರ್ 
    ಭದ್ರಾವತಿ : ಕಳೆದ ೮ ವರ್ಷಗಳಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸುವ ಮೂಲಕ ಮೂಲತಃ ತಾಲೂಕಿನ ಕುಮರಿನಾರಾಯಣಪುರದ ನಿವಾಸಿ, ಸಮಾಜ ಸೇವಕ ಎ. ಧಮೇಂದ್ರರವರು ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಇದೀಗ ಇವರ ಸೇವಾಕಾರ್ಯಗಳನ್ನು ಗುರುತಿಸಿ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ವತಿಯಿಂದ ನೀಡಲಾಗುವ ಬಾಲಿ ಇಂಡಿಯಾ ಇಂಟರ್‌ನ್ಯಾಷನಲ್ ಐಕಾನಿಕ್ ಆವಾರ್ಡ್-೨೦೨೫ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 
    ಶ್ರೀ ವಿನಾಯಕ ಚಾರಿಟೇಬಲ್ ಟ್ರಸ್ಟ್ ಮೂಲಕ ಧಮೇಂದ್ರರವರು ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ೮ ವರ್ಷಗಳ ಹಿಂದೆ ಸರ್ಕಾರಿ ಶಾಲೆಯ ೫೦೦ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಿಸುವ ಕಾರ್ಯ ಆರಂಭಿಸಿದ್ದು, ಇದೀಗ ೫೦೦೦ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸುತ್ತಿದ್ದಾರೆ. 
    ಅರಳಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ೧೩, ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ೧೨ ಹಾಗು ನಾಗತಿಬೆಳಗಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ೧೧ ಸರ್ಕಾರಿ ಶಾಲೆಗಳ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ಪ್ರತಿ ವರ್ಷ ಸುಮಾರು ೧೫ ರಿಂದ ೧೬ ಸಾವಿರ ಪುಸ್ತಕಗಳನ್ನು ನೀಡುವ ಮೂಲಕ ಸರ್ಕಾರಿ ಶಾಲೆ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ. 
    ಕಡು ಬಡತನದಲ್ಲಿ ಹುಟ್ಟಿ ಬೆಳೆದು ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದಿರುವ ಧಮೇಂದ್ರರವರು ಸರ್ಕಾರಿ ಶಾಲೆ ಮಕ್ಕಳು ಶಿಕ್ಷಣ ಪಡೆಯಲು ನನ್ನಂತೆ ಸಂಕಷ್ಟಕ್ಕೆ ಒಳಗಾಗಬಾರದು ಉನ್ನತ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕೆಂಬ ಬಯಕೆ ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಉಚಿತ ನೋಟ್ ಪುಸ್ತಕ ವಿತರಿಸುವ ಕಾರ್ಯ ಆರಂಭಿಸಿದ್ದು, ಪ್ರತಿ ವರ್ಷ ತಮ್ಮ ಕೈಯಲ್ಲಿ ಸಾಧ್ಯವಾದಷ್ಟು ಉಚಿತ ನೋಟ್ ಪುಸ್ತಕಗಳನ್ನು ವಿತರಿಸುವ ಮೂಲಕ ಕಳೆದ ೮ ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ.  
ಶಾಲೆಗಳಿಗೆ ಕೇವಲ ನೋಟ್ ಪುಸ್ತಕಗಳ ವಿತರಣೆ ಮಾತ್ರವಲ್ಲದೆ ಸುಮಾರು ೭-೮ ಶಾಲೆಗಳಿಗೆ ಅಗತ್ಯವಿರುವ ಕಟ್ಟಡಗಳನ್ನು ಸಹ ನಿರ್ಮಿಸಿಕೊಟ್ಟಿದ್ದಾರೆ. ಜೊತೆಗೆ ಕೆಲವು ಶಾಲೆಗಳಿಗೆ ಮತ್ತು ದೇವಸ್ಥಾನಗಳಿಗೆ ಸುಣ್ಣಬಣ್ಣ ಸಹ ಮಾಡಿಸಿಕೊಟ್ಟಿದ್ದಾರೆ. ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ಸಹ ನಿರ್ಮಿಸಿ ಕೊಟ್ಟಿದ್ದಾರೆ. 
    ಇವರ ಸೇವಾ ಕಾರ್ಯ ಇಷ್ಟಕ್ಕೆ ಸೀಮಿಗೊಳ್ಳದೆ ಮಹಾಮಾರಿ ಕೋವಿಡ್-೧೯ರ ಸಂದರ್ಭದಲ್ಲಿ ಉಚಿತ ಅಂಬ್ಯುಲೆನ್ಸ್ ಸೇವೆ ಒದಗಿಸುವ ಮೂಲಕ ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಧಮೇಂದ್ರರವರು ಮುಂದಾಗಿದ್ದಾರೆ. ಇವರ ಎಲ್ಲಾ ಸೇವಾ ಕಾರ್ಯಗಳು ತೆರೆಮರೆಯಲ್ಲಿಯೇ ನಡೆಯುತ್ತಿದ್ದು, ಎಂದಿಗೂ ಪ್ರಚಾರಕ್ಕೆ ಬಯಸಲಿಲ್ಲ. ಇದೀಗ ಇವರ ಸೇವಾಕಾರ್ಯಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 
    ಬಡತನ ಮೆಟ್ಟಿನಿಂದ ಯುವಕ ಎ. ಧರ್ಮೇಂದ್ರ : 
    ಸಮಾಜ ಸೇವಕ ಎ. ಧರ್ಮೇದ್ರರವರು ತಾಲೂಕಿನ ಕುಮರಿನಾರಾಯಣಪುರದ ಅಂದಾನಪ್ಪ-ಚಿಕ್ಕಮ್ಮ ದಂಪತಿ ೪ನೇ ಪುತ್ರರಾಗಿದ್ದು, ಕಡುಬಡಕುಟುಂಬದಲ್ಲಿ ಜನಿಸಿದ ಇವರು ಎಸ್‌ಎಸ್‌ಎಲ್‌ಸಿವರೆಗೂ ವಿದ್ಯಾಭ್ಯಾಸ ಪೂರೈಸಿ ನಂತರ ೨೫ ವಯಸ್ಸಿನಲ್ಲಿಯೇ ಉದ್ಯೋಗ ಹುಡುಕಿ ಬೆಂಗಳೂರಿಗೆ ಮುಖ ಮಾಡಿದರು. ಅಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಾ ಅಲ್ಲಿರಲು ಕಷ್ಟವಾಗಿ ಪುನಹ ಸ್ವಗ್ರಾಮದ ಕಡೆ ಮುಖ ಮಾಡಿದರು. ಈ ಸಂದರ್ಭದಲ್ಲಿ ಸ್ವ ಗ್ರಾಮದಲ್ಲೇ ಕೂಲಿ ಕೆಲಸಕ್ಕೆಂದು ಹೋದ ಧರ್ಮೇಂದ್ರರಿಗೆ ತಾವು ಏನಾದರೂ ಸಾಧಿಸಲೇಬೇಕೆಂಬ ಛಲ ಮೂಡಿತ್ತು. ಎಷ್ಟೇ ಕಷ್ಟವಾದರೂ ಸರಿ ಏನಾದರೂ ಜೀವನದಲ್ಲಿ ಸಾಧಿಸಿ ಪುನಃ ಸ್ವಗ್ರಾಮಕ್ಕೆ ಬರಬೇಕು. ತಂದೆ-ತಾಯಿಗೆ ಗೌರವ ಸಿಗುವಂತೆ ಮಾಡಬೇಕೆಂಬ ಛಲ ಹೊತ್ತು ಪುನಃ ಬೆಂಗಳೂರು ನಗರ ಸೇರಿದರು. 


ಭದ್ರಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಮಕ್ಕಳಿಗೆ ಪ್ರಸಕ್ತ ಸಾಲಿನಲ್ಲಿ ಎ. ಧರ್ಮೇಂದ್ರರವರು ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿರುವುದು. 
    ಮೊದಮೊದಲು ಧರ್ಮೇಂದ್ರ ರವರು ಚಾಲಕನ ವೃತ್ತಿಯನ್ನು ಜೀವನೋಪಾಯಕ್ಕೆ ಆಯ್ಕೆ ಮಾಡಿಕೊಂಡರು. ನಂತರ ಸೊಸೈಟಿ, ಫೈನಾನ್ಸ್ ಹಾಗೂ ಕೈಗಡ ಸಾಲದ ಮೂಲಕ ತಮ್ಮದೇ ಆದ ಸ್ವಂತದೊಂದು ಕಾರು ಖರೀದಿಸಿ ಚಾಲಕನಿಂದ ಮಾಲೀಕನಾಗುವ ಮಟ್ಟಕ್ಕೆ ಬೆಳೆದರು. ಬೆಂಗಳೂರಿನ ನಾಗರಬಾವಿಯಲ್ಲಿ ವಂದನ ಟ್ರಾವೆಲ್ಸ್ ಹೆಸರಿನ ಸಂಸ್ಥೆ  ಆರಂಭಿಸಿ ಕೇವಲ ೩-೪ ಕಾರುಗಳಿಂದ ಆರಂಭಿಸಿದ ವಾಹನ ಸಂಸ್ಥೆ ಇದೀಗ ನೂರಕ್ಕೂ ಹೆಚ್ಚು ಕಾರುಗಳನ್ನು ಸರ್ಕಾರಿ ಕಚೇರಿಗಳು ಹಾಗೂ ಖಾಸಗಿ ಸಂಸ್ಥೆಗಳಿಗೆ ಬಾಡಿಗೆಗೆ ನೀಡುವ ಮಟ್ಟಕ್ಕೆ ಬೆಳೆದಿದೆ. ಜೊತೆಗೆ ವಂದನ ಟ್ರಾವೆಲ್ಸ್ ಸಂಸ್ಥೆಯಲ್ಲಿ ನೂರಾರು ಸಂಖ್ಯೆಯಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ ಜೀವನಾಧಾರ ಕಲ್ಪಿಸಿಕೊಡಲಾಗಿದೆ. ಇಷ್ಟಾದ ಮೇಲೆ  ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕೆಂಬ ಸದುದ್ದೇಶದಿಂದ ವಿನಾಯಕ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಈ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ಸೇವ ಕಾರ್ಯಗಳಲ್ಲೂ ತೊಡಗಿಸಿ ಕೊಂಡಿದ್ದಾರೆ. 
 

ಗ್ರಾಮೀಣ ಪ್ರದೇಶದ ಮಕ್ಕಳು ಜೀವನದಲ್ಲಿ ನನ್ನಂತೆ ವಿದ್ಯಾಭ್ಯಾಸ ಅರ್ಧಕ್ಕೆ ಮೊಟಕುಗೊಳಿಸಬಾರದು ಎಂಬ ಆಲೋಚನೆಯಿಂದ ಕಳೆದ ೮ ವರ್ಷಗಳ ಹಿಂದೆ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ನೀಡುವ ಹಾಗು ಕಟ್ಟಡ ನಿರ್ಮಾಣ, ಸುಣ್ಣಬಣ್ಣ ಬಳಿಯುವ, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಶಾಲೆಗಳಿಗೆ ಅಗತ್ಯವಿರುವ ಸಣ್ಣಪುಟ್ಟ ಕಾರ್ಯಗಳನ್ನು ಮಾಡಿಸಿಕೊಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಸೇವಾ ಕಾರ್ಯಗಳು ನಿರಂತರವಾಗಿ ಮುಂದುವರೆಯಲಿವೆ. 
                                                                            - ಎ. ಧರ್ಮೇಂದ್ರ, ಸಮಾಜ ಸೇವಕರು, ಭದ್ರಾವತಿ. 
 

ಭಂಡಾರಹಳ್ಳಿ ಅಂಗವಾಡಿ ಕೇಂದ್ರದಲ್ಲಿ ಸ್ತನ್ಯಪಾನ ಸಪ್ತಾಹ

ಭದ್ರಾವತಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೩೫ರ ಭಂಡಾರಹಳ್ಳಿ ಅಂಗನವಾಡಿ-೨ ಕೇಂದ್ರದಲ್ಲಿ ಗರ್ಭಿಣಿ ಮಹಿಳೆಯರಿಗಾಗಿ ಎದೆ ಹಾಲಿನ ಮಹತ್ವ ತಿಳಿಸಲು ಸ್ತನ್ಯಪಾನ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು.    
    ಭದ್ರಾವತಿ: ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೩೫ರ ಭಂಡಾರಹಳ್ಳಿ ಅಂಗನವಾಡಿ-೨ ಕೇಂದ್ರದಲ್ಲಿ ಗರ್ಭಿಣಿ ಮಹಿಳೆಯರಿಗಾಗಿ ಎದೆ ಹಾಲಿನ ಮಹತ್ವ ತಿಳಿಸಲು ಸ್ತನ್ಯಪಾನ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು.
    ಅಂಗನವಾಡಿ ಕಾರ್ಯಕರ್ತೆ ಎನ್. ಕವಿತಾ ಮಾತನಾಡಿ, ಪ್ರಸಕ್ತ ಸಾಲಿನ ಸರ್ಕಾರದ ಘೋಷವಾಕ್ಯ "ತಾಯಿಯ ಎದೆ ಹಾಲಿನ ಮಹತ್ವ ಮಕ್ಕಳ ಆರೋಗ್ಯಕರ ಭವಿಷ್ಯ" ಎಂಬುದಾಗಿದೆ. ಹೆರಿಗೆಯಾದ ಒಂದು ಗಂಟೆಯೊಳಗೆ ತಾಯಿ ತನ್ನ ಮಗುವಿಗೆ ಎದೆ ಹಾಲು ಕುಡಿಸಬೇಕು. ತಾಯಿಯ ಮೊದಲನೆ ಹಾಲು ರೋಗ ನಿರೋಧಕ ಶಕ್ತಿ(ಕೊಲೆಸ್ಟಂ) ಹೊಂದಿರುತ್ತದೆ. ಇದು ಮಕ್ಕಳಿಗೆ ಯಾವ ಕಾಯಿಲೆಗಳು ಸಹ ಬರದಂತೆ ತಡೆಗಟ್ಟುತ್ತದೆ. ಪದೇ ಪದೇ ಹಾಲು ಕೊಡುವುದರಿಂದ ತಾಯಿಯಲ್ಲಿ ರಕ್ತ ಸ್ರಾವ ಕಡಿಮೆಯಾಗುತ್ತದೆ. ೬ ತಿಂಗಳು ತುಂಬುವವರೆಗೆ ಮಗುವಿಗೆ ತಾಯಿ ಹಾಲು ಬಿಟ್ಟು ಬೇರೇನೂ ಆಹಾರ ಕೊಡಬಾರದು. ಆರು ತಿಂಗಳ ನಂತರ ಎದೆ ಹಾಲಿನ ಜೊತೆಗೆ ತೆಳು ಮೃದು ಆಹಾರ ಕೊಡಬೇಕು. ಪ್ರತಿ ತಿಂಗಳು ತಪಾಸಣೆಗೆ ಹಾಜರಾಗಿ ೨ ಟಿಡಿ ಚುಚ್ಚುಮದ್ದು ಪಡೆದುಕೊಳ್ಳಬೇಕು. ಗರ್ಭಿಣಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಪೌಷ್ಠಿಕ ಆಹಾರ ಸೇವಿಸಬೇಕೆಂದರು. 
    ಕಾರ್ಯಕ್ರಮದಲ್ಲಿ ಆರೋಗ್ಯ ಕಾರ್ಯಕರ್ತೆ ಶೀಲಾ, ಸ್ಥಳೀಯ ಮಹಿಳಾ ಪ್ರಮುಖರಾದ ಶಾಂತಮ್ಮ, ರಂಜಿತಾ, ದೀಪಿಕಾ, ಕುಸುಮಾ, ವೇದಾವತಿ, ಪ್ರಜ್ಞಾಬಾಯಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.