ಸೋಮವಾರ, ಆಗಸ್ಟ್ 11, 2025

ಶಾಮಿಯಾನ ಕೆಲಸದಿಂದ ಸಾಹಿತ್ಯ ಕಡೆಗೆ ಸಂತೋಷ್ ಎನ್ ಶೆಟ್ಟಿ

ಆ.೧೫ರಂದು ಬೆಂಗಳೂರಿನಲ್ಲಿ ೩ ಹಾಡುಗಳ ಬಿಡುಗಡೆ 

ಸಂತೋಷ್ ಎನ್ ಶೆಟ್ಟಿ 
    ಭದ್ರಾವತಿ : ಶಾಮಿಯಾನ ಕೆಲಸದಿಂದ ಇದೀಗ ಸಾಹಿತ್ಯದ ಕಡೆಗೆ ಒಲವು ತೋರಿಸಿರುವ ನಗರದ ಉಜ್ಜನಿಪುರ ಸಂತೋಷ್ ಶಾಮಿಯಾನ ಮಾಲೀಕ ಸಂತೋಷ್ ಎನ್ ಶೆಟ್ಟಿ ಕನ್ನಡ ಚಲನಚಿತ್ರ ರಂಗಕ್ಕೆ ಚಿತ್ರ ಸಾಹಿತಿಯಾಗಿ ಪ್ರವೇಶಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರ ಸಾಹಿತ್ಯದ ೩ ಹಾಡುಗಳು(ಆಲ್ಬಮ್ ಸಾಂಗ್) ಆ.೧೫ರಂದು ಬಿಡುಗಡೆಗೊಳ್ಳುತ್ತಿದೆ. 
  ಬೆಂಗಳೂರಿನ ಮಾಗಡಿ ರೋಡ್, ಜಿಟಿ ಮಾಲ್‌ನಲ್ಲಿ ಸಂಜೆ ೬೦೩ಕ್ಕೆ ಹಾಡುಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಪ್ರಪ್ರಥಮ ಬಾರಿಗೆ ಬಿಡುಗಡೆಗೊಳ್ಳುತ್ತಿರುವ ಹಾಡುಗಳಿಗೆ ಎಲ್ಲರ ಮೆಚ್ಚುಗೆ, ಅಭಿಮಾನ, ಪ್ರೋತ್ಸಾಹವಿರಲಿ ಎಂದು ಸಂತೋಷ್ ಎನ್ ಶೆಟ್ಟಿ ಕೋರಿದ್ದಾರೆ. 
    ವಸಂತ ಮಾಧವ ಭದ್ರಾವತಿಯವರ ಸಂಗೀತ ಮತ್ತು ಗಾಯನದಲ್ಲಿ ಮೊದಲ ಹಾಡು `ತುತ್ತು ನೀಡುವ ಹೆತ್ತ ತಾಯಿಯು', ಬೆಂಗಳೂರಿನ ಎ.ಟಿ ರವೀಶ್ ಸಂಗೀತದಲ್ಲಿ ಎರಡನೇ ಹಾಡು `ಗಣೇಶ ಡಿಜೆ ಹಾಡು' ಮತ್ತು  ಮೂರನೇ ಹಾಡು `ಪೋಲ್ಸ್ ಪೆಂಡಾಲ್, ಪೈಪ್ ಪೆಂಡಾಲ್' ಸಂತೋಷ್ ಎನ್. ಶೆಟ್ಟಿ ಸಾಹಿತ್ಯ ಹಾಗು ನಿರ್ಮಾಣದಲ್ಲಿ ಬಿಡುಗಡೆಗೊಳ್ಳುತ್ತಿರುವ ಹಾಡುಗಳಾಗಿವೆ. 
    ಕಳೆದ ಸುಮಾರು ಒಂದೂವರೆ ವರ್ಷದಲ್ಲಿ ಸಂತೋಷ್ ಎನ್ ಶೆಟ್ಟಿ ಶಾಮಿಯಾನ ಕೆಲಸದೊಂದಿಗೆ ಸಾಹಿತ್ಯದ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದು, ಈಗಾಗಲೇ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಕುರಿತು ಭಕ್ತಿ ಗೀತೆಗಳ ಧ್ವನಿಸುರಳಿ ಸಹ ಬಿಡುಗಡೆಗೊಳಿಸಿದ್ದಾರೆ. ಶ್ರೀ ಕ್ಷೇತ್ರದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರಾದ ಡಾ. ಡಿ. ವೀರೇಂದ್ರ ಹೆಗಡೆಯವರು ಧ್ವನಿಸುರಳಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
    ಇದೀಗ ಕನ್ನಡ ಚಲನಚಿತ್ರ ರಂಗಕ್ಕೆ ಚಿತ್ರ ಸಾಹಿತಿಯಾಗಿ ಪ್ರವೇಶಿಸುವ ನಿಟ್ಟಿನಲ್ಲಿ ಮೊದಲ ಪ್ರಯತ್ನದಲ್ಲಿದ್ದು, ಈಗಾಗಲೇ ಕನ್ನಡ ಚಲನಚಿತ್ರ ರಂಗದ ಪ್ರಸಿದ್ದ ಸಾಹಿತಿಗಳನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆದುಕೊಂಡಿದ್ದು, ಎಲ್ಲಕ್ಕಿಂತ ಮುಖ್ಯವಾಗಿ ನಾಡಿನ ಕನ್ನಡಿಗರ  ಮೆಚ್ಚುಗೆ, ಅಭಿಮಾನ, ಪ್ರೋತ್ಸಾಹ ಹೆಚ್ಚಿದ್ದಾಗಿದೆ. 

ಮೆಸ್ಕಾಂ, ಆಧಾರ್ ಕೌಂಟರ್, ಅಂಚೆ ಕಛೇರಿಗೆ ಸ್ಥಳಾವಕಾಶ ಕಲ್ಪಿಸಿಕೊಡಿ

ಪೌರಾಯುಕ್ತರಿಗೆ ಶ್ರೀ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಮನವಿ 


ಭದ್ರಾವತಿ ನಗರದ ಜನ್ನಾಪುರ ಶ್ರೀ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಛೇರ್ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಹೋರಾಟ ಪ್ರಾರಂಭಿಸಿದ ೫೦ನೇ ವರ್ಷದ ನೆನಪಿಗಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ  ನಗರಸಭೆ ಪೌರಾಯುಕ್ತ ಕೆ.ಎನ್ ಹೇಮಂತ್‌ರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. 
    ಭದ್ರಾವತಿ: ನಗರದ ಜನ್ನಾಪುರ ಶ್ರೀ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಛೇರ್ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಹೋರಾಟ ಪ್ರಾರಂಭಿಸಿದ ೫೦ನೇ ವರ್ಷದ ನೆನಪಿಗಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ  ನಗರಸಭೆ ಪೌರಾಯುಕ್ತ ಕೆ.ಎನ್ ಹೇಮಂತ್‌ರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. 
    ಟ್ರಸ್ಟ್‌ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗು ನಗರಸಭೆ ಸಹಕಾರದೊಂದಿಗೆ ಕ್ಷೇತ್ರವನ್ನು ಮಾದರಿ ನಗರವನ್ನಾಗಿ ಮಾಡಲು ಪಣತೊಟ್ಟಿರುವ ಹಿನ್ನಲೆಯಲ್ಲಿ ಬೇಡಿಕೆಗಳನ್ನು ಈಡೇರಿಸಲು ಮುಂದಾಗುವಂತೆ ಕೋರಲಾಗಿದೆ.  
    ನಗರಸಭೆ ನ್ಯೂಟೌನ್ ಶಾಖಾ ಕಛೇರಿ ಆವರಣಕ್ಕೆ ಒಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಆವರಣದಲ್ಲಿ `ಮೆಸ್ಕಾಂ ಕೌಂಟರ್, ಆಧಾರ್ ಕೌಂಟರ್ ಮತ್ತು ಅಂಚೆ ಕಛೇರಿ ಕಾರ್ಯಾರಂಭಮಾಡಲು ಸ್ಥಳಾವಕಾಶ ಕಲ್ಪಿಸಿಕೊಡುವುದು. ನಗರಸಭೆ ವತಿಯಿಂದ ಹಸಿಕಸ-ಒಣಕಸ ಸಂಗ್ರಹಣೆ ಮಾಡುವ ಸಂಬಂಧ ಮನೆ ಮನೆಗಳಿಗೆ ಸಮರ್ಪಕವಾಗಿ ಕಸದ ಡಬ್ಬಿಗಳನ್ನು ವಿತರಣೆ ಮಾಡದೇ ಇರುವುದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದ್ದು, ಈ ಹಿನ್ನಲೆಯಲ್ಲಿ ಪರಿಶೀಲನೆ ನಡೆಸಿ ಕಸದ ಡಬ್ಬಿಗಳನ್ನು ವಿತರಣೆ ಮಾಡದೆ ಇರುವ ಮನೆಗಳಿಗೆ ಕಸದ ಡಬ್ಬಿಗಳನ್ನು ವಿತರಿಸಲು ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಗಿದೆ. 
    ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಬಿ.ವಿ ಗಿರಿ, ಸಂಚಾಲಕ ಎಂ.ವಿ ಚಂದ್ರಶೇಖರ್, ನಗರಸಭೆ ಹಿರಿಯ ಸದಸ್ಯ ವಿ. ಕದಿರೇಶ್, ಮಾಜಿ ಸದಸ್ಯ ಶಶಿಧರಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ನೀಲಕಂಠನ್ ನಿಧನ

ನೀಲಕಂಠನ್
ಭದ್ರಾವತಿ : ತಾಲೂಕು ವನ್ನಿಯರ್ ತಮಿಳು ಗೌಂಡರ್ ಸಮಾಜದ  ಮಾಜಿ ಅಧ್ಯಕ್ಷ, ದಲಿತ ಮುಖಂಡ ನೀಲಕಂಠನ್(೬೨) ಭಾನುವಾರ ರಾತ್ರಿ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. 
ಪತ್ನಿ, ಪುತ್ರ ಹಾಗು ಪುತ್ರಿ ಮತ್ತು ಸಹೋದರರು ಇದ್ದಾರೆ. ನಗರಸಭೆ ವ್ಯಾಪ್ತಿಯ ಗಾಂಧಿನಗರದ ಕೇಶಪುರ ಬಡಾವಣೆಯಲ್ಲಿ ವಾಸವಾಗಿದ್ದರು. ನೀಲಕಂಠನ್‌ರವರು ಕೆಲವು ವರ್ಷಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. 
ಮನೆ ದೇವರ ಪೂಜೆ ಸಲ್ಲಿಸಲು ತಮಿಳುನಾಡಿಗೆ ತೆರಳಿ ಮರಳುತ್ತಿದ್ದಾಗ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಹೃದಯಾಘಾತವಾಗಿದ್ದು, ಮೃತದೇಹವನ್ನು ನಗರಕ್ಕೆ ತರಲಾಗಿದೆ. ಮಂಗಳವಾರ ಮಧ್ಯಾಹ್ನ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. 
ಇವರ ನಿಧನಕ್ಕೆ ವನ್ನಿಯರ್ ತಮಿಳು ಗೌಂಡರ್ ಸಮಾಜದ ಅಧ್ಯಕ್ಷ, ನಗರಸಭೆ ಉಪಾಧ್ಯಕ್ಷ ಮಣಿ ಎಎನ್‌ಎಸ್, ಮೊದಲಿಯಾರ್ ಸಮಾಜದ ಪ್ರಮುಖರಾದ ಹಿರಿಯ ಪತ್ರಕರ್ತ ಕಣ್ಣಪ್ಪ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ. 
 

ಭಾನುವಾರ, ಆಗಸ್ಟ್ 10, 2025

ಆ.೧೬ರಂದು ಆಡಿ ಕೃತಿಕ ಕಾವಡಿ ಜಾತ್ರಾ ಉತ್ಸವ


    ಭದ್ರಾವತಿ : ಇಲ್ಲಿಗೆ ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಆ.೧೬ರ ಶನಿವಾರ ಆಡಿ ಕೃತಿಕ ಕಾವಡಿ ಜಾತ್ರಾ ಉತ್ಸವ ನಡೆಯಲಿದೆ.  
    ಶ್ರೀ ಕ್ಷೇತ್ರದ ಶಿವೈಕ್ಯರಾದ ಶ್ರೀ ಮಹಾ ಸಿದ್ದರ್ ಸ್ವಾಮಿಯವರ ಭಕ್ತಿ ಪೂರ್ವಕ ನಮನಗಳೊಂದಿಗೆ ಆ.೧೧ ರಿಂದ ೧೮ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದ್ದು, ೧೧ರ ಬೆಳಿಗ್ಗೆ ೬ರಂದು ಧ್ವಜಾರೋಹಣದ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ೧೫ರಂದು ಭರಣಿ ಕಾವಡಿ ಉತ್ಸವ, ಬೆಳಗಿನ ಜಾವ ೪ ಗಂಟೆಯಿಂದ ವಿಶ್ವರೂಪ ದರ್ಶನ ಆರಂಭ, ೫ ರಿಂದ ಮಹಾಪೂಜೆ, ೮ ಗಂಟೆಗೆ ಸಂಧಿಪೂಜೆ, ೧೨ಕ್ಕೆ ಉಚ್ಚಿಕಾಲ ಪೂಜೆ, ಸಂಜೆ ೫.೩೦ಕ್ಕೆ ದೀಪಾರಧನೆ, ರಾತ್ರಿ ೯ಕ್ಕೆ ಸಂಧಿಪೂಜೆ, ೧೨ಕ್ಕೆ ವಿಶೇಷ ಅಭಿಷೇಕ, ಆರಾಧನೆ ನಡೆಯಲಿದೆ. 
    ಆ.೧೬ರಂದು ಆಡಿಕೃತಿಕಾ ಕಾವಡಿ ಉತ್ಸವ ಬೆಳಗಿನ ಜಾವ ೪ ಗಂಟೆಯಿಂದ ವಿಶ್ವರೂಪ ದರ್ಶನ ಮತ್ತು ಅಭಿಷೇಕ, ೫ ರಿಂದ ಉತ್ಸವ ಪೂಜೆ ಹಾಗು ಕಾವಡಿ ಹರಕೆ ಸಮರ್ಪಣೆ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಸಂಜೆ ೫.೩೦ ರಿಂದ ದೀಪಾರಾಧನೆ, ರಾತ್ರಿ ೧೦ಕ್ಕೆ ಅರ್ಧ ಜಾಮಪೂಜೆ ಜರುಗಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಕೋರಲಾಗಿದೆ. 

ಅನಾಥ ಹೆಣ್ಣು ಮಕ್ಕಳಿಗೆ ನೆರವಾದ ಮನೆ ಮನೆಗೆ ಪೊಲೀಸ್

ಭದ್ರಾವತಿ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಮುಸ್ಲಿಂ ಕ್ಯಾಂಪ್ ಗ್ರಾಮದಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದಡಿ ಸಮಸ್ಯೆಗಳನ್ನು ಆಲಿಸುವಾಗ ೯ ಮತ್ತು ೩ ವರ್ಷದ ಇಬ್ಬರು ಅನಾಥ ಹೆಣ್ಣು ಮಕ್ಕಳು ಪತ್ತೆಯಾಗಿದ್ದು, ಇವರನ್ನು ಡಾನ್ ಬೋಸ್ಕೋ ಸಂಸ್ಥೆ ಮೂಲಕ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಕಳುಹಿಸಿಕೊಡಲಾಗಿದೆ. ಈ ಮೂಲಕ ಘೋಷಕತ್ವದಿಂದ ವಂಚಿತರಾಗಿರುವ ಇಬ್ಬರು ಹೆಣ್ಣು ಮಕ್ಕಳಿಗೆ ಆಶ್ರಯ ಕಲ್ಪಿಸಿಕೊಡುವ ಮೂಲಕ ಪೊಲೀಸ್ ಇಲಾಖೆ ಮಾನವೀಯತೆ ಮೆರೆದಿದೆ. 
ಭದ್ರಾವತಿ : ಪೊಲೀಸ್ ಇಲಾಖೆ ವತಿಯಿಂದ ಇತ್ತೀಚೆಗೆ ನೂತನವಾಗಿ ಆರಂಭಿಸಿರುವ ಮನೆ ಮನೆಗೆ ಪೊಲೀಸ್ ಯೋಜನೆ ನಾಗರಿಕ ಸಮಾಜಕ್ಕೆ ಹೆಚ್ಚಿನ ಸಹಕಾರಿಯಾಗಿದ್ದು, ಘಟನೆಯೊಂದರ ಮೂಲಕ ಪೊಲೀಸ್ ಇಲಾಖೆ ಸಹ ಮಾನವೀಯತೆ ಎತ್ತಿ ಹಿಡಿಯುವ ಜೊತೆಗೆ ನಿಮ್ಮೊಂದಿಗೆ ನಾವು ಸದಾ ಇದ್ದೇವೆಂಬ ಭಾವನೆ ಮೂಡಿಸುವಲ್ಲಿ ಯಶಸ್ವಿಯಾಗಿದೆ. 
ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಲಾಖೆ ಸಿಬ್ಬಂದಿ ಕಾನ್ಸ್‌ಸ್ಟೇಬಲ್ ಎಚ್.ವಿ ಆನಂದ್‌ರವರು ಮನೆ ಮನೆಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸುವಾಗ ಗ್ರಾಮ ಗಸ್ತು ಸಂಖ್ಯೆ ೪ರ ಮುಸ್ಲಿಂ ಕ್ಯಾಂಪ್ ಗ್ರಾಮದಲ್ಲಿ ೯ ಮತ್ತು ೩ ವರ್ಷದ ಇಬ್ಬರು ಅನಾಥ ಹೆಣ್ಣು ಮಕ್ಕಳು ಪತ್ತೆಯಾಗಿದ್ದಾರೆ. ಈ ಇಬ್ಬರು ಹೆಣ್ಣು ಮಕ್ಕಳ ತಂದೆ-ತಾಯಿ ಸುಮಾರು ೧ ವರ್ಷದ ಹಿಂದೆ ಮರಣ ಹೊಂದಿದ್ದಾರೆ. ಇದರಿಂದಾಗಿ ಅನಾಥರಾಗಿದ್ದು, ಪೋಷಕತ್ವದಿಂದ ವಂಚಿತರಾಗಿದ್ದಾರೆ.    
ಅನಾಥ ಮಕ್ಕಳಿಗೆ ನೆಲೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಾರ್ಯಗತವಾಗಿರುವ ಇಲಾಖೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿಗಳಾದ ಎ.ಜಿ ಕಾರಿಯಪ್ಪ ಮತ್ತು ಎಸ್. ರಮೇಶ್ ಕುಮಾರ್‌ರವರ ಮಾರ್ಗದರ್ಶನದಲ್ಲಿ ನಗರದ ಡಾನ್ ಬೋಸ್ಕೋ ಜಿಲ್ಲಾ ಸಂಯೋಜಕ ರಂಗನಾಥ್‌ರವರನ್ನು ಸಂಪರ್ಕಿಸಿ, ಅನಾಥ ಮಕ್ಕಳ ಕುರಿತು ಮಾಹಿತಿ ನೀಡುವ ಮೂಲಕ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಕಳುಹಿಸಿಕೊಡಲಾಗಿದೆ. ಈ ಮೂಲಕ ಘೋಷಕತ್ವದಿಂದ ವಂಚಿತರಾಗಿರುವ ಇಬ್ಬರು ಹೆಣ್ಣು ಮಕ್ಕಳಿಗೆ ಆಶ್ರಯ ಕಲ್ಪಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದೆ. 

ಶನಿವಾರ, ಆಗಸ್ಟ್ 9, 2025

ರಾಯರ ಮಠದಲ್ಲಿ ಉಪಕರ್ಮ, ಆ.೧೨ರಂದು ರಥೋತ್ಸವ

ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ೩೫೪ನೇ ಆರಾಧನಾ ಮಹೋತ್ಸವ ಅಂಗವಾಗಿ ಶನಿವಾರ ಉಪಕರ್ಮ ಜರುಗಿತು. 
    ಭದ್ರಾವತಿ : ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ೩೫೪ನೇ ಆರಾಧನಾ ಮಹೋತ್ಸವ ಅಂಗವಾಗಿ ಶನಿವಾರ ಉಪಕರ್ಮ ಜರುಗಿತು. 
    ಮಠದಲ್ಲಿ ಬೆಳಿಗ್ಗೆ ೬.೩೦ಕ್ಕೆ ವೇದಬ್ರಹ್ಮ ಶ್ರೀ ಗೋಪಾಲಕೃಷ್ಣ ಆಚಾರ್‌ರವರ ನೇತೃತ್ವದಲ್ಲಿ ಉಪಕರ್ಮ ನಡೆಸಲಾಯಿತು. ಶ್ರೀ ಗುರುರಾಜ ಸೇವಾಸಮಿತಿ ಅಧ್ಯಕ್ಷ ಮುರಳಿಧರ ತಂತ್ರಿ ಹಾಗು ಉಪಾಧ್ಯಕ್ಷೆ ಸುಮಾ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ರಮಾಕಾಂತ್, ನಿರಂಜನಾಚಾರ್ಯ, ಮಾಧುರಾವ್, ಗಿರಿ ಆಚಾರ್, ಪವನ್ ಕುಮಾರ್ ಉಡುಪ, ಪ್ರಮೋದ್ ಕುಮಾರ್, ಶುಭ ಗುರುರಾಜ್, ವಿದ್ಯಾನಂದನಾಯಕ, ಪ್ರಶಾಂತ್, ಶಶಿಧರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ೨ ದಿನಗಳ ಕಾಲ ಆರಾಧನಾ ಮಹೋತ್ಸವ : 
    ಆ.೧೧ ಮತ್ತು ೧೨ರಂದು ಎರಡು ದಿನಗಳ ಕಾಲ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ೩೫೪ನೇ ಆರಾಧನಾ ಮಹೋತ್ಸವ ನಡೆಯಲಿದ್ದು, ಈ ಸಂಬಂಧ ವಿವಿಧ ಧಾರ್ಮಿಕ ಆಚರಣೆಗಳು ಜರುಗಲಿವೆ. ಆ.೧೨ರಂದು ಬೆಳಿಗ್ಗೆ ೧೦ ಗಂಟೆಗೆ ರಾಯರ ರಥೋತ್ಸವ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ  ಆಗಮಿಸಿ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಮೈಸೂರು ಸಂಸ್ಥಾನ ಒಕ್ಕೂಟ ವ್ಯವಸ್ಥೆಗೆ ಸೇರ್ಪಡೆಗೊಂಡ ದಿನ ಆಚರಣೆ

ಕನ್ನಡ ಧ್ವಜ ಹಿಡಿದು ಕನ್ನಡಾಭಿಮಾನ ಬೆಳೆಸಿಕೊಳ್ಳಲು ಕರೆ 

ಮೈಸೂರು ಸಂಸ್ಥಾನ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ವಿಲೀನಗೊಂಡ ದಿನವನ್ನು ಭದ್ರಾವತಿ ನಗರದಲ್ಲಿ ವಿಶಿಷ್ಟವಾಗಿ ಕನ್ನಡ ಬಾವುಟ ಹಿಡಿದು ಪ್ರತಿಯೊಬ್ಬರ ಮನೆಗಳಲ್ಲಿ ಕನ್ನಡದ ಧ್ವಜ ಹಾರಾಡಲಿ ಎಂಬ ಭಾವನೆಯೊಂದಿಗೆ ಆಚರಿಸಲಾಯಿತು
    ಭದ್ರಾವತಿ : ಮೈಸೂರು ಸಂಸ್ಥಾನ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ವಿಲೀನಗೊಂಡ ದಿನವನ್ನು ನಗರದಲ್ಲಿ ವಿಶಿಷ್ಟವಾಗಿ ಕನ್ನಡ ಬಾವುಟ ಹಿಡಿದು ಪ್ರತಿಯೊಬ್ಬರ ಮನೆಗಳಲ್ಲಿ ಕನ್ನಡದ ಧ್ವಜ ಹಾರಾಡಲಿ ಎಂಬ ಭಾವನೆಯೊಂದಿಗೆ ಆಚರಿಸಲಾಯಿತು
    ಆ.೯, ೧೯೪೭ರಂದು ಮೈಸೂರು ಸಂಸ್ಥಾನ ದೇಶದ ಒಕ್ಕೂಟ ವ್ಯವಸ್ಥೆಗೆ ಸೇರ್ಪಡೆಗೊಂಡ ದಿನ. ಅಂದಿನ ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್‌ರವರು ಒಕ್ಕೂಟ ವ್ಯವಸ್ಥೆಗೆ ಸಹಿ ಮಾಡಿದ ದಿನ ಇದಾಗಿದ್ದು, ಮಹಾರಾಜರ ತ್ಯಾಗ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರತಿಯೊಬ್ಬರು ಕನ್ನಡ ನಾಡಿನ ಮೇಲೆ ಅಭಿಮಾನ ಬೆಳೆಸಿಕೊಳ್ಳಬೇಕು. ನೆಲ, ಜಲ, ಭಾಷೆ, ಸಂಸ್ಕೃತಿ ಪ್ರೀತಿಸಿ ಗೌರವಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಬೇಕೆಂದು ಮನವಿ ಮಾಡಲಾಯಿತು. 
    ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ತಾಲೂಕು ಅಧ್ಯಕ್ಷ ತೀರ್ಥೇಶ್,. ಡಿಎಸ್‌ಎಸ್ ಮುಖಂಡರಾದ ದಾಸರಕಲ್ಲಳ್ಳಿ ನಾಗರಾಜ್, ವೀರಾಪುರ ಗಣೇಶ್, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಮೊಹಮ್ಮದ್ ಸಲ್ಮಾನ್, ಹಸಿರು ಸೇನೆ ಯುವ ಘಟಕದ ತಾಲೂಕು ಅಧ್ಯಕ್ಷ ಇಮ್ರಾನ್, ಶ್ರೀ ತಿರುಮಲ ಚಾರಿಟಬಲ್ ಫೌಂಡೇಷನ್ ಪ್ರಶಾಂತ್, ಜಾನು, ನಿತಿನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.