ಮಂಗಳವಾರ, ಆಗಸ್ಟ್ 12, 2025

ಮಾಜಿ ಮುಖ್ಯಮಂತ್ರಿ ಡಿ. ದೇವರಾಜಅರಸು ಜನ್ಮದಿನಾಚರಣೆ ಪೂರ್ವಭಾವಿ ಸಭೆ

ಪ್ರತಿಭಾ ಪುರಸ್ಕಾರ, ಹಿರಿಯ ಸಮಾಜವಾದಿ ಹೋರಾಟಗಾರರಿಗೆ ಸನ್ಮಾನ 

ಭದ್ರಾವತಿ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ದಿವಂಗತ ಡಿ. ದೇವರಾಜ ಅರಸು ಜನ್ಮ ದಿನಾಚರಣೆ ಅದ್ದೂರಿಯಾಗಿ ಆಚರಿಸಲು ಪೂರ್ವಭಾವಿ ಸಭೆ ನಡೆಸಲಾಯಿತು.      
ಭದ್ರಾವತಿ : ತಾಲೂಕಿನ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟ ಮತ್ತು ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆ.೨೦ರಂದು ಹಳೇನಗರದ ಬಲಿಜ ಸಮುದಾಯ ಭವನದಲ್ಲಿ ಹಿಂದುಳಿದ ವರ್ಗಗಳ ಹರಿಕಾರ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜಅರಸುರವರ ಜನ್ಮದಿನಾಚರಣೆ ಅದ್ದೂರಿಯಾಗಿ ಆಚರಿಸಿಲು ತೀರ್ಮಾನಿಸಲಾಯಿತು.
  ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲು ಹಾಗೂ ಹಿರಿಯ ಹೋರಾಟಗಾರರಾದ ಸಮಾಜವಾದಿ ಕಡಿದಾಳ ಶಾಮಣ್ಣ ಅಥವಾ ಕಾಗೋಡು ತಿಮ್ಮಪ್ಪ ಅವರನ್ನು ಸನ್ಮಾನಿಸಲು ತೀರ್ಮಾನಿಸಲಾಯಿತು. ತಾಲೂಕಿನ ವಿದ್ಯಾರ್ಥಿ ನಿಲಯದಲ್ಲಿ ವ್ಯಾಸಂಗ ಮಾಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ಸಭೆ ನಿರ್ಣಯ ಕೈಗೊಂಡಿತು.
  ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸಭೆ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಉಪಾಧ್ಯಕ್ಷ ಮಣಿ ಎಎನ್‌ಎಸ್, ಪೌರಾಯುಕ್ತ ಕೆ.ಎನ್ ಹೇಮಂತ್, ಸದಸ್ಯರಾದ ಬಿ.ಕೆ ಮೋಹನ್, ಚನ್ನಪ್ಪ, ಗ್ರೇಡ್-೨ ತಹಸೀಲ್ದಾರ್ ಮಂಜಾನಾಯ್ಕ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶೈಲಜಾ, ಪುರಸಭೆ ಮಾಜಿ ಉಪಾಧ್ಯಕ್ಷ ಟಿ. ವೆಂಕಟೇಶ್, ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಈಶ್ವರಪ್ಪ, ವಿನೋದ್‌ಕುಮಾರ್, ತೀರ್ಥೇಶ್, ವೈ. ಶಶಿಕುಮಾರ್, ಶಿವುಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

     



ಸೋಮವಾರ, ಆಗಸ್ಟ್ 11, 2025

ಕುಟುಂಬ ವೈದ್ಯರಿಂದ ರೋಗಿಗಳಿಗೆ ಸೂಕ್ತ ಮಾರ್ಗದರ್ಶನ ಲಭಿಸುತ್ತದೆ : ಡಾ. ಬಿ.ಎಸ್ ಶ್ರೀನಾಥ್

ಭದ್ರಾವತಿ ವಿಐಎಸ್‌ಎಲ್ ಅತಿಥಿಗೃಹದಲ್ಲಿ ಪತ್ರಕರ್ತರೊಂದಿಗೆ ಕ್ಯಾನ್ಸರ್ ಚಿಕಿತ್ಸೆ, ಪರಿಣಾಮ, ಅದರ ನಿಯಂತ್ರಣ. ಜೀವನ ನಿರ್ವಹಣೆಗಳ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯ ವೈದ್ಯ ಡಾ.ಬಿ.ಎಸ್ ಶ್ರೀನಾಥ್ ಭಾಗವಹಿಸಿ ಮಾತನಾಡಿದರು.
    ಭದ್ರಾವತಿ: ಕುಟುಂಬ ವೈದ್ಯರುಗಳು ರೋಗಿಗಳ ರೋಗ ಪತ್ತೆಯಲ್ಲಿ ನಿರ್ಣಾಯಕ ಪಾತ್ರವಹಿಸುವ ಮೂಲಕ ಅವರ ಚಿಕಿತ್ಸೆಗೆ ಸರಿಯಾದ ಮಾರ್ಗದರ್ಶನ ಹಾಗು ವೆಚ್ಚ ಕಡಿತ ಮಾಡುವ ವಿಚಾರದಲ್ಲಿ ಸೂಕ್ತ ಮಾಹಿತಿ ನೀಡುತ್ತಾರೆಂದು ಬೆಂಗಳೂರಿನ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯ ವೈದ್ಯ ಡಾ.ಬಿ.ಎಸ್ ಶ್ರೀನಾಥ್ ಹೇಳಿದರು.
    ಅವರು ನಗರದ ವಿಐಎಸ್‌ಎಲ್ ಅತಿಥಿಗೃಹದಲ್ಲಿ ಪತ್ರಕರ್ತರೊಂದಿಗೆ ಕ್ಯಾನ್ಸರ್ ಚಿಕಿತ್ಸೆ, ಪರಿಣಾಮ, ಅದರ ನಿಯಂತ್ರಣ. ಜೀವನ ನಿರ್ವಹಣೆಗಳ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
    ಪ್ರಾರಂಭಿಕ ಹಂತದಲ್ಲಿಯೇ ಶೇ.೬೦ರಷ್ಟು ರೋಗದ ಮೂಲವನ್ನು ಪತ್ತೆಹಚ್ಚಿ ದೇಹದಲ್ಲಿ ಉಂಟಾಗುವ ಬದಲಾವಣೆಗಳನ್ನು ಗಮನಿಸಿ ಸೂಕ್ತ ಚಿಕಿತ್ಸೆ ನೀಡಿ ರೋಗವನ್ನು ಗುಣಪಡಿಸಬಹುದು. ಆದರೆ ಚಿಕಿತ್ಸೆ ಪಡೆಯುವ ವಿಚಾರದಲ್ಲಿ ರೋಗಿಗಳು ತಾಳ್ಮೆವಹಿಸುವುದು ಬಹಳ ಮುಖ್ಯವಾಗಿದೆ. ರೋಗ ಗುಣಮುಖವಾಗಿಲ್ಲ ಎಂದು ಪದೇ ಪದೇ ವೈದ್ಯರುಗಳನ್ನು ಬದಲಾಯಿಸಿದರೆ ರೋಗದ ಸಮಗ್ರ ಮಾಹಿತಿ ಅರಿಯಲು ಸಾಧ್ಯವಾಗದ ಕಾರಣ ಚಿಕತ್ಸೆ ವಿಳಂಬ ಹಾಗು ದುಬಾರಿಯಾಗುತ್ತಾ ಹೋಗುತ್ತದೆ ಎಂದರು.  
    ಸಾಮಾನ್ಯ ವರ್ಗದ ಜನರು ತಮ್ಮ ಆರೋಗ್ಯದ ಬಗ್ಗೆ ತಾವೇ ಮೊದಲು ಕಾಳಜಿ ವಹಿಸಬೇಕು. ಆರೋಗ್ಯವಂತ ಜೀವನ ನಡೆಸಬೇಕು. ಆರೋಗ್ಯದ ಬಗೆಗಿನ ಸಾಮಾನ್ಯ ತಿಳುವಳಿಕೆ ಹೆಚ್ಚಿಸಿಕೊಳ್ಳಬೇಕು. ರೋಗ ಕಾಣಿಸಿಕೊಂಡ ನಂತರ ಚಿಕಿತ್ಸೆ ದುಬಾರಿ ಎಂದು ನರಳುವುದು ಸರಿಯಲ್ಲ. ಹಣವಂತರೂ ಸಹ ಹಣ ಇದ್ದರೂ ಸರಿಯಾದ ಚಿಕಿತ್ಸೆ ಪಡೆಯಯುವಲ್ಲಿ ಹಿಂದೇಟು ಹಾಕುತ್ತಾರೆ. ಒಟ್ಟಾರೆ ಎಲ್ಲರೂ ಆರೋಗ್ಯದ ಬಗ್ಗೆ ಜಾಗೃತರಾದಾಗ ಮಾತ್ರ ಎಲ್ಲಾ ರೀತಿಯ ರೋಗಗಳನ್ನು ನಿಯಂತ್ರಿಸಲು ಸಾಧ್ಯ ಎಂದರು. 
       ವ್ಯಕ್ತಿಯ ದೇಹದಲ್ಲಿನ ಜೀವಕೋಶಗಳು ಆರೋಗ್ಯಕರ ನಿಯಂತ್ರಣದಲ್ಲಿ ಬೆಳೆದು ವಿಭಜಿಸುತ್ತವೆ, ಸಾಯುತ್ತವೆ. ಈ ಪ್ರಕ್ರಿಯೆಯಲ್ಲಿ ಲೋಪವಾಗಿ ಅಸಹಜ ಕೋಶಗಳ ಅನಿಯಂತ್ರಿತ ಬೆಳವಣಿಗೆ ಉಂಟಾಗಿ ಅದರ ಹರಡುವಿಕೆ ಕಾರ್ಯ ನಡೆದಾಗ ಕೆಟ್ಟ ಕಣಗಳಿಂದ ಕ್ಯಾನ್ಸರ್ ಉಂಟಾಗುತ್ತದೆ. ಇದನ್ನು ಕೂಡಲೆ ಪತ್ತೆಹಚ್ಚಿ ಸರಿಯಾದ ಚಿಕಿತ್ಸೆ ಪಡೆಯದಿದ್ದಲ್ಲಿ ಅದು ದೇಹದ ಇತರ ಹತ್ತಿರದ ಅಂಗಾಂಶಗಳನ್ನು ಆಕ್ರಮಿಸಬಹುದು ಅಥವಾ ದೂರದ ಅಂಗಗಳಿಗೂ ಹರಡುವ ಮೂಲಕ ಕ್ಯಾನ್ಸರ್ ಉಂಟಾಗಿ ವ್ಯಕ್ತಿಯ ಜೀವಕ್ಕೆ ಅಪಾಯ ಉಂಟಾಗುತ್ತದೆ ಎಂದರು.
    ಬೆಂಗಳೂರಿನ ಶಂಕರಪುರಂನಲ್ಲಿ ಶೃಂಗೇರಿ ಶ್ರೀ ಶಂಕರ ಮಠದ ಸಹಕಾರದೊಂದಿಗೆ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿತವಾಗಿದೆ. ಇಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಆಧುನಿಕ ತಂತ್ರಜ್ಞಾನದ ಸಹಾಯದೊಂದಿಗೆ ಅತ್ಯತ್ತಮ ಗುಣಮಟ್ಟದ ಕೈಗೆಟಕುವ ದರದಲ್ಲಿ ವಿಶ್ವದರ್ಜೆಯ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೂ ಕ್ಯಾನ್ಸರ್ ಅರಿವು ಮತ್ತು ತಪಾಸಣೆ ಮೂಲಕ ೬.೫ ಲಕ್ಷ ಜನರಿಗೆ ಚಿಕಿತ್ಸೆ ನೀಡಲಾಗಿದೆ. ೨.೫ ಲಕ್ಷ ಉಚಿತ ಸ್ಕ್ರೀನಿಂಗ್ ಮತ್ತು ೧೪೬ ಸಂಪೂರ್ಣ ಉಚಿತ ಚಿಕಿತ್ಸೆ ನೀಡಿದೆ. ೮೩ ಬೆಂಬಲಿತ ಪ್ರಕರಣಗಳು ಸೇರಿದಂತೆ ೩೬.೩೮೭ ಶಸ್ತ್ರಚಿಕಿತ್ಸೆಗಳು, ೧೫೭ ಬಿಎಂಟಿನಡೆಸಲಾಗಿದೆ ಎಂದರು. 
    ಸಂಶೋಧನೆ ಜೊತೆಗೆ ಶ್ರೀ ಶಂಕರ ನ್ಯಾಷನಲ್ ಸೆಂಟರ್ ಫಾರ್ ಕ್ಯಾನ್ಸರ್ ಪ್ರಿವೆಂಕ್ಷನ್ ಅಂಡ್ ರಿಸರ್ಚ್ ಮೂಲಕ ಅನ್ವಯಿಕ ರೋಗ ನಿರ್ಣಯ, ಆರಂಭಿಕ ಪತ್ತೆ ಕಾರ್ಯ ಗ್ರಾಮೀಣ ಮಾದರಿಗಳಲ್ಲಿ ಬೆಂಚ್ ಟು ಬೆಡ್ ಸೈಡ್ ಅವಿಷ್ಕಾರ ನಿರಂತರವಾಗಿ ನಡೆಸುತ್ತಿದೆ. ಇದಕ್ಕೆ ಅಮೇರಿಕ ಮೇಯೋ ಕ್ಲಿನಿಕ್, ಲಂಡನ್ ಕ್ಯಾನ್ಸರ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ಗಳ ಜೊತೆಗಿನ ಸಹಕಾರ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಜಾಗತೀಕ ಹೆಜ್ಜೆ ಗುರುತನ್ನು ಮೂಡಿಸುವ ಮೂಲಕ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿದೆ ಎಂದರು. 
ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ಭವಿಷ್ಯ ರೂಪಿಸಲಾಗುತ್ತಿದೆ. ಕೇವಲ ಔಷಧ ಚಿಕಿತ್ಸೆ ಮಾತ್ರ ನೀಡದೆ, ಅಪ್ತ ಸಮಾಲೋಚನೆ, ಧ್ಯಾನ, ಯೋಗ, ಪ್ರಾಣಾಯಾಮ ಇತ್ಯಾದಿಗಳನ್ನು ಹೇಳಿಕೋಡುವ ಮೂಲಕ ರೋಗಿಗೆ ಆತ್ಮಸ್ಥೈರ್ಯ ತುಂಬುವ ಮಾನವೀಯ ಕಾರ್ಯ ಮಾಡುತ್ತಿದೆ. ಆ ಮೂಲಕ ಕ್ಯಾನ್ಸರ್ ರೋಗಿಗೆ ತನ್ನ ಬದುಕಿನಲ್ಲಿ ಭವಿಷ್ಯದ ಬಗ್ಗೆ ಹೊಸ ಆಶಾಕಿರಣ ಮೂಡಿಸುತ್ತಿದೆ ಎಂದರು.
    ಎಲ್ಲದಕ್ಕಿಂತ ಬಹುಮುಖ್ಯವಾಗಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹಾಗು ಇದರ ಇತ್ತೀಚಿನ ಅವಿಷ್ಕಾರಗಳ ಬಗ್ಗೆ ವೈದ್ಯರುಗಳಿಗೆ ಸಾಕಷ್ಟು ತಿಳುವಳಿಕೆ ಇರಬೇಕು. ಕ್ಯಾನ್ಸರ್ ತಂತ್ರಜ್ಞಾನದ ಬಗ್ಗೆ, ಅದರ ಪರಿಕರಗಳ ಬಗ್ಗೆ, ನಿರ್ವಹಣೆಯ ಬಗ್ಗೆ, ಆಸ್ಪತ್ರೆಯ ಪರಿಸರ, ಸ್ವಚ್ಚತೆ, ರೋಗ ಹರುಡುವ ಬಗ್ಗೆ ಮುಂಜಾಗ್ರತೆ ಎಷ್ಟು ಎಚ್ಚರವಹಿಸಿದರೂ ಸಾಲುತ್ತಿಲ್ಲ. ಐಸಿಯುನಂತಹ ಘಟಕಗಳಲ್ಲಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುವ ಮೂಲಕ ಸೋಂಕು ಉಂಟಾಗಿ ರೋಗಿಗೆ ಖಾಯಿಲೆ ಉಲ್ಬಣ ಮಾಡುತ್ತದೆ. ಈ ಕಾರಣ ಚಿಕಿತ್ಸೆ ನೀಡಿದರೂ ರೋಗ ಸರಿಯಾಗಿ ನಿರ್ಮೂಲನೆಯಾಗುತ್ತಿಲ್ಲ. ಸೋಂಕುಗಳು ಉತ್ಪತ್ತಿಯಾಗಿ ಹರಡುತ್ತದೆ. ಬೇರೆ ಆಸ್ಪತ್ರೆಯಲ್ಲಿ ಈ ಪ್ರಮಾಣ ೮ ರಿಂದ ೧೬ರಷ್ಟು ಇದ್ದರೆ ಈ ಆಸ್ಪತ್ರೆಯಲ್ಲಿ ಶೇ.೧ರಷ್ಟು ಇದೆ. ಇದಕ್ಕೆ ಮುಖ್ಯ ಕಾರಣ ಸೋಂಕುಗಳು ಹರಡದಂತೆ ತೆಗೆದುಕೊಂಡ ಕ್ರಮಗಳು ಮುಖ್ಯ ಕಾರಣ. ಈ ಸ್ವಚ್ಚತಾ ಕಾರ್ಯಕ್ಕೆ ಹಣ ಹೆಚ್ಚು ಖರ್ಚಾಗುತ್ತದೆ. ಆದರೂ ರೋಗಿಯ ಹಿತದೃಷ್ಟಿಯಿಂದ ಇದು ಅನಿವಾರ್ಯ. ಇದರಿಂದ ಪರೋಕ್ಷವಾಗಿ ರೋಗಿಯ ಚಿಕಿತ್ಸೆಯ ವೆಚ್ಚದಲ್ಲಿ ಖರ್ಚಿನ ಹೊರೆ ಕಡಿಮೆಯಾಗುತ್ತದೆ  ಎಂದರು.
    ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಹುಹಂತದ ಪರೀಕ್ಷೆಗಳನ್ನು ನಡೆಸಬೇಕು. ಕೇವಲ ಒಬ್ಬ ತಜ್ಞ ವೈದ್ಯರಿಂದ ಇದಕ್ಕೆ ಚಿಕಿತ್ಸೆ ನೀಡುವುದಿಲ್ಲ. ಅದರಲ್ಲಿ ಆಂಕೋಲೋಜಿಸ್ಟ್, ರೇಡಿಯಾಜಿಸ್ಟ್, ಪೆಥಾಲಜಿಸ್ಟ್, ಶಸ್ತ್ರ ಚಿಕಿತ್ಸಕರ ಟ್ಯೂಮರ್ ಬೋರ್ಡ್ ತಂಡಗಳ ವೈದ್ಯರುಗಳು ಸೇರಿ ರೋಗಿಯ ರೋಗದ ಬಗ್ಗೆ ಚರ್ಚೆ ನಡೆಸಿ ಅಂತಿಮವಾಗಿ ಯಾವ ರೀತಿಯ ಚಿಕಿತ್ಸೆ ನೀಡಬೇಕು ಎಂದು ತೀರ್ಮನಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಚಿಕಿತ್ಸಾ ವಿಧಾನ ತಿಳಿಸಿದರು.
    ತಜ್ಞ ವೈದ್ಯರುಗಳಾದ ಡಾ. ರೇಖಾ, ಡಾ. ವಿನಾಯಕ, ಡಾ. ಎಂ. ರವೀಂದ್ರನಾಥ ಕೋಠಿ, ಡಾ. ರಾಮಕೃಷ್ಣ, ಡಾ. ಸ್ವರ್ಣಲತಾ, ಡಾ. ಪ್ರೀತಿ ಹಾಗು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಶಾಮಿಯಾನ ಕೆಲಸದಿಂದ ಸಾಹಿತ್ಯ ಕಡೆಗೆ ಸಂತೋಷ್ ಎನ್ ಶೆಟ್ಟಿ

ಆ.೧೫ರಂದು ಬೆಂಗಳೂರಿನಲ್ಲಿ ೩ ಹಾಡುಗಳ ಬಿಡುಗಡೆ 

ಸಂತೋಷ್ ಎನ್ ಶೆಟ್ಟಿ 
    ಭದ್ರಾವತಿ : ಶಾಮಿಯಾನ ಕೆಲಸದಿಂದ ಇದೀಗ ಸಾಹಿತ್ಯದ ಕಡೆಗೆ ಒಲವು ತೋರಿಸಿರುವ ನಗರದ ಉಜ್ಜನಿಪುರ ಸಂತೋಷ್ ಶಾಮಿಯಾನ ಮಾಲೀಕ ಸಂತೋಷ್ ಎನ್ ಶೆಟ್ಟಿ ಕನ್ನಡ ಚಲನಚಿತ್ರ ರಂಗಕ್ಕೆ ಚಿತ್ರ ಸಾಹಿತಿಯಾಗಿ ಪ್ರವೇಶಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರ ಸಾಹಿತ್ಯದ ೩ ಹಾಡುಗಳು(ಆಲ್ಬಮ್ ಸಾಂಗ್) ಆ.೧೫ರಂದು ಬಿಡುಗಡೆಗೊಳ್ಳುತ್ತಿದೆ. 
  ಬೆಂಗಳೂರಿನ ಮಾಗಡಿ ರೋಡ್, ಜಿಟಿ ಮಾಲ್‌ನಲ್ಲಿ ಸಂಜೆ ೬೦೩ಕ್ಕೆ ಹಾಡುಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಪ್ರಪ್ರಥಮ ಬಾರಿಗೆ ಬಿಡುಗಡೆಗೊಳ್ಳುತ್ತಿರುವ ಹಾಡುಗಳಿಗೆ ಎಲ್ಲರ ಮೆಚ್ಚುಗೆ, ಅಭಿಮಾನ, ಪ್ರೋತ್ಸಾಹವಿರಲಿ ಎಂದು ಸಂತೋಷ್ ಎನ್ ಶೆಟ್ಟಿ ಕೋರಿದ್ದಾರೆ. 
    ವಸಂತ ಮಾಧವ ಭದ್ರಾವತಿಯವರ ಸಂಗೀತ ಮತ್ತು ಗಾಯನದಲ್ಲಿ ಮೊದಲ ಹಾಡು `ತುತ್ತು ನೀಡುವ ಹೆತ್ತ ತಾಯಿಯು', ಬೆಂಗಳೂರಿನ ಎ.ಟಿ ರವೀಶ್ ಸಂಗೀತದಲ್ಲಿ ಎರಡನೇ ಹಾಡು `ಗಣೇಶ ಡಿಜೆ ಹಾಡು' ಮತ್ತು  ಮೂರನೇ ಹಾಡು `ಪೋಲ್ಸ್ ಪೆಂಡಾಲ್, ಪೈಪ್ ಪೆಂಡಾಲ್' ಸಂತೋಷ್ ಎನ್. ಶೆಟ್ಟಿ ಸಾಹಿತ್ಯ ಹಾಗು ನಿರ್ಮಾಣದಲ್ಲಿ ಬಿಡುಗಡೆಗೊಳ್ಳುತ್ತಿರುವ ಹಾಡುಗಳಾಗಿವೆ. 
    ಕಳೆದ ಸುಮಾರು ಒಂದೂವರೆ ವರ್ಷದಲ್ಲಿ ಸಂತೋಷ್ ಎನ್ ಶೆಟ್ಟಿ ಶಾಮಿಯಾನ ಕೆಲಸದೊಂದಿಗೆ ಸಾಹಿತ್ಯದ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದು, ಈಗಾಗಲೇ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಕುರಿತು ಭಕ್ತಿ ಗೀತೆಗಳ ಧ್ವನಿಸುರಳಿ ಸಹ ಬಿಡುಗಡೆಗೊಳಿಸಿದ್ದಾರೆ. ಶ್ರೀ ಕ್ಷೇತ್ರದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರಾದ ಡಾ. ಡಿ. ವೀರೇಂದ್ರ ಹೆಗಡೆಯವರು ಧ್ವನಿಸುರಳಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
    ಇದೀಗ ಕನ್ನಡ ಚಲನಚಿತ್ರ ರಂಗಕ್ಕೆ ಚಿತ್ರ ಸಾಹಿತಿಯಾಗಿ ಪ್ರವೇಶಿಸುವ ನಿಟ್ಟಿನಲ್ಲಿ ಮೊದಲ ಪ್ರಯತ್ನದಲ್ಲಿದ್ದು, ಈಗಾಗಲೇ ಕನ್ನಡ ಚಲನಚಿತ್ರ ರಂಗದ ಪ್ರಸಿದ್ದ ಸಾಹಿತಿಗಳನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆದುಕೊಂಡಿದ್ದು, ಎಲ್ಲಕ್ಕಿಂತ ಮುಖ್ಯವಾಗಿ ನಾಡಿನ ಕನ್ನಡಿಗರ  ಮೆಚ್ಚುಗೆ, ಅಭಿಮಾನ, ಪ್ರೋತ್ಸಾಹ ಹೆಚ್ಚಿದ್ದಾಗಿದೆ. 

ಮೆಸ್ಕಾಂ, ಆಧಾರ್ ಕೌಂಟರ್, ಅಂಚೆ ಕಛೇರಿಗೆ ಸ್ಥಳಾವಕಾಶ ಕಲ್ಪಿಸಿಕೊಡಿ

ಪೌರಾಯುಕ್ತರಿಗೆ ಶ್ರೀ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಮನವಿ 


ಭದ್ರಾವತಿ ನಗರದ ಜನ್ನಾಪುರ ಶ್ರೀ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಛೇರ್ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಹೋರಾಟ ಪ್ರಾರಂಭಿಸಿದ ೫೦ನೇ ವರ್ಷದ ನೆನಪಿಗಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ  ನಗರಸಭೆ ಪೌರಾಯುಕ್ತ ಕೆ.ಎನ್ ಹೇಮಂತ್‌ರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. 
    ಭದ್ರಾವತಿ: ನಗರದ ಜನ್ನಾಪುರ ಶ್ರೀ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಛೇರ್ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಹೋರಾಟ ಪ್ರಾರಂಭಿಸಿದ ೫೦ನೇ ವರ್ಷದ ನೆನಪಿಗಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ  ನಗರಸಭೆ ಪೌರಾಯುಕ್ತ ಕೆ.ಎನ್ ಹೇಮಂತ್‌ರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. 
    ಟ್ರಸ್ಟ್‌ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗು ನಗರಸಭೆ ಸಹಕಾರದೊಂದಿಗೆ ಕ್ಷೇತ್ರವನ್ನು ಮಾದರಿ ನಗರವನ್ನಾಗಿ ಮಾಡಲು ಪಣತೊಟ್ಟಿರುವ ಹಿನ್ನಲೆಯಲ್ಲಿ ಬೇಡಿಕೆಗಳನ್ನು ಈಡೇರಿಸಲು ಮುಂದಾಗುವಂತೆ ಕೋರಲಾಗಿದೆ.  
    ನಗರಸಭೆ ನ್ಯೂಟೌನ್ ಶಾಖಾ ಕಛೇರಿ ಆವರಣಕ್ಕೆ ಒಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಆವರಣದಲ್ಲಿ `ಮೆಸ್ಕಾಂ ಕೌಂಟರ್, ಆಧಾರ್ ಕೌಂಟರ್ ಮತ್ತು ಅಂಚೆ ಕಛೇರಿ ಕಾರ್ಯಾರಂಭಮಾಡಲು ಸ್ಥಳಾವಕಾಶ ಕಲ್ಪಿಸಿಕೊಡುವುದು. ನಗರಸಭೆ ವತಿಯಿಂದ ಹಸಿಕಸ-ಒಣಕಸ ಸಂಗ್ರಹಣೆ ಮಾಡುವ ಸಂಬಂಧ ಮನೆ ಮನೆಗಳಿಗೆ ಸಮರ್ಪಕವಾಗಿ ಕಸದ ಡಬ್ಬಿಗಳನ್ನು ವಿತರಣೆ ಮಾಡದೇ ಇರುವುದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದ್ದು, ಈ ಹಿನ್ನಲೆಯಲ್ಲಿ ಪರಿಶೀಲನೆ ನಡೆಸಿ ಕಸದ ಡಬ್ಬಿಗಳನ್ನು ವಿತರಣೆ ಮಾಡದೆ ಇರುವ ಮನೆಗಳಿಗೆ ಕಸದ ಡಬ್ಬಿಗಳನ್ನು ವಿತರಿಸಲು ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಗಿದೆ. 
    ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಬಿ.ವಿ ಗಿರಿ, ಸಂಚಾಲಕ ಎಂ.ವಿ ಚಂದ್ರಶೇಖರ್, ನಗರಸಭೆ ಹಿರಿಯ ಸದಸ್ಯ ವಿ. ಕದಿರೇಶ್, ಮಾಜಿ ಸದಸ್ಯ ಶಶಿಧರಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ನೀಲಕಂಠನ್ ನಿಧನ

ನೀಲಕಂಠನ್
ಭದ್ರಾವತಿ : ತಾಲೂಕು ವನ್ನಿಯರ್ ತಮಿಳು ಗೌಂಡರ್ ಸಮಾಜದ  ಮಾಜಿ ಅಧ್ಯಕ್ಷ, ದಲಿತ ಮುಖಂಡ ನೀಲಕಂಠನ್(೬೨) ಭಾನುವಾರ ರಾತ್ರಿ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. 
ಪತ್ನಿ, ಪುತ್ರ ಹಾಗು ಪುತ್ರಿ ಮತ್ತು ಸಹೋದರರು ಇದ್ದಾರೆ. ನಗರಸಭೆ ವ್ಯಾಪ್ತಿಯ ಗಾಂಧಿನಗರದ ಕೇಶಪುರ ಬಡಾವಣೆಯಲ್ಲಿ ವಾಸವಾಗಿದ್ದರು. ನೀಲಕಂಠನ್‌ರವರು ಕೆಲವು ವರ್ಷಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. 
ಮನೆ ದೇವರ ಪೂಜೆ ಸಲ್ಲಿಸಲು ತಮಿಳುನಾಡಿಗೆ ತೆರಳಿ ಮರಳುತ್ತಿದ್ದಾಗ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಹೃದಯಾಘಾತವಾಗಿದ್ದು, ಮೃತದೇಹವನ್ನು ನಗರಕ್ಕೆ ತರಲಾಗಿದೆ. ಮಂಗಳವಾರ ಮಧ್ಯಾಹ್ನ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. 
ಇವರ ನಿಧನಕ್ಕೆ ವನ್ನಿಯರ್ ತಮಿಳು ಗೌಂಡರ್ ಸಮಾಜದ ಅಧ್ಯಕ್ಷ, ನಗರಸಭೆ ಉಪಾಧ್ಯಕ್ಷ ಮಣಿ ಎಎನ್‌ಎಸ್, ಮೊದಲಿಯಾರ್ ಸಮಾಜದ ಪ್ರಮುಖರಾದ ಹಿರಿಯ ಪತ್ರಕರ್ತ ಕಣ್ಣಪ್ಪ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ. 
 

ಭಾನುವಾರ, ಆಗಸ್ಟ್ 10, 2025

ಆ.೧೬ರಂದು ಆಡಿ ಕೃತಿಕ ಕಾವಡಿ ಜಾತ್ರಾ ಉತ್ಸವ


    ಭದ್ರಾವತಿ : ಇಲ್ಲಿಗೆ ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಆ.೧೬ರ ಶನಿವಾರ ಆಡಿ ಕೃತಿಕ ಕಾವಡಿ ಜಾತ್ರಾ ಉತ್ಸವ ನಡೆಯಲಿದೆ.  
    ಶ್ರೀ ಕ್ಷೇತ್ರದ ಶಿವೈಕ್ಯರಾದ ಶ್ರೀ ಮಹಾ ಸಿದ್ದರ್ ಸ್ವಾಮಿಯವರ ಭಕ್ತಿ ಪೂರ್ವಕ ನಮನಗಳೊಂದಿಗೆ ಆ.೧೧ ರಿಂದ ೧೮ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದ್ದು, ೧೧ರ ಬೆಳಿಗ್ಗೆ ೬ರಂದು ಧ್ವಜಾರೋಹಣದ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ೧೫ರಂದು ಭರಣಿ ಕಾವಡಿ ಉತ್ಸವ, ಬೆಳಗಿನ ಜಾವ ೪ ಗಂಟೆಯಿಂದ ವಿಶ್ವರೂಪ ದರ್ಶನ ಆರಂಭ, ೫ ರಿಂದ ಮಹಾಪೂಜೆ, ೮ ಗಂಟೆಗೆ ಸಂಧಿಪೂಜೆ, ೧೨ಕ್ಕೆ ಉಚ್ಚಿಕಾಲ ಪೂಜೆ, ಸಂಜೆ ೫.೩೦ಕ್ಕೆ ದೀಪಾರಧನೆ, ರಾತ್ರಿ ೯ಕ್ಕೆ ಸಂಧಿಪೂಜೆ, ೧೨ಕ್ಕೆ ವಿಶೇಷ ಅಭಿಷೇಕ, ಆರಾಧನೆ ನಡೆಯಲಿದೆ. 
    ಆ.೧೬ರಂದು ಆಡಿಕೃತಿಕಾ ಕಾವಡಿ ಉತ್ಸವ ಬೆಳಗಿನ ಜಾವ ೪ ಗಂಟೆಯಿಂದ ವಿಶ್ವರೂಪ ದರ್ಶನ ಮತ್ತು ಅಭಿಷೇಕ, ೫ ರಿಂದ ಉತ್ಸವ ಪೂಜೆ ಹಾಗು ಕಾವಡಿ ಹರಕೆ ಸಮರ್ಪಣೆ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಸಂಜೆ ೫.೩೦ ರಿಂದ ದೀಪಾರಾಧನೆ, ರಾತ್ರಿ ೧೦ಕ್ಕೆ ಅರ್ಧ ಜಾಮಪೂಜೆ ಜರುಗಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಕೋರಲಾಗಿದೆ. 

ಅನಾಥ ಹೆಣ್ಣು ಮಕ್ಕಳಿಗೆ ನೆರವಾದ ಮನೆ ಮನೆಗೆ ಪೊಲೀಸ್

ಭದ್ರಾವತಿ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಮುಸ್ಲಿಂ ಕ್ಯಾಂಪ್ ಗ್ರಾಮದಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದಡಿ ಸಮಸ್ಯೆಗಳನ್ನು ಆಲಿಸುವಾಗ ೯ ಮತ್ತು ೩ ವರ್ಷದ ಇಬ್ಬರು ಅನಾಥ ಹೆಣ್ಣು ಮಕ್ಕಳು ಪತ್ತೆಯಾಗಿದ್ದು, ಇವರನ್ನು ಡಾನ್ ಬೋಸ್ಕೋ ಸಂಸ್ಥೆ ಮೂಲಕ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಕಳುಹಿಸಿಕೊಡಲಾಗಿದೆ. ಈ ಮೂಲಕ ಘೋಷಕತ್ವದಿಂದ ವಂಚಿತರಾಗಿರುವ ಇಬ್ಬರು ಹೆಣ್ಣು ಮಕ್ಕಳಿಗೆ ಆಶ್ರಯ ಕಲ್ಪಿಸಿಕೊಡುವ ಮೂಲಕ ಪೊಲೀಸ್ ಇಲಾಖೆ ಮಾನವೀಯತೆ ಮೆರೆದಿದೆ. 
ಭದ್ರಾವತಿ : ಪೊಲೀಸ್ ಇಲಾಖೆ ವತಿಯಿಂದ ಇತ್ತೀಚೆಗೆ ನೂತನವಾಗಿ ಆರಂಭಿಸಿರುವ ಮನೆ ಮನೆಗೆ ಪೊಲೀಸ್ ಯೋಜನೆ ನಾಗರಿಕ ಸಮಾಜಕ್ಕೆ ಹೆಚ್ಚಿನ ಸಹಕಾರಿಯಾಗಿದ್ದು, ಘಟನೆಯೊಂದರ ಮೂಲಕ ಪೊಲೀಸ್ ಇಲಾಖೆ ಸಹ ಮಾನವೀಯತೆ ಎತ್ತಿ ಹಿಡಿಯುವ ಜೊತೆಗೆ ನಿಮ್ಮೊಂದಿಗೆ ನಾವು ಸದಾ ಇದ್ದೇವೆಂಬ ಭಾವನೆ ಮೂಡಿಸುವಲ್ಲಿ ಯಶಸ್ವಿಯಾಗಿದೆ. 
ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಲಾಖೆ ಸಿಬ್ಬಂದಿ ಕಾನ್ಸ್‌ಸ್ಟೇಬಲ್ ಎಚ್.ವಿ ಆನಂದ್‌ರವರು ಮನೆ ಮನೆಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸುವಾಗ ಗ್ರಾಮ ಗಸ್ತು ಸಂಖ್ಯೆ ೪ರ ಮುಸ್ಲಿಂ ಕ್ಯಾಂಪ್ ಗ್ರಾಮದಲ್ಲಿ ೯ ಮತ್ತು ೩ ವರ್ಷದ ಇಬ್ಬರು ಅನಾಥ ಹೆಣ್ಣು ಮಕ್ಕಳು ಪತ್ತೆಯಾಗಿದ್ದಾರೆ. ಈ ಇಬ್ಬರು ಹೆಣ್ಣು ಮಕ್ಕಳ ತಂದೆ-ತಾಯಿ ಸುಮಾರು ೧ ವರ್ಷದ ಹಿಂದೆ ಮರಣ ಹೊಂದಿದ್ದಾರೆ. ಇದರಿಂದಾಗಿ ಅನಾಥರಾಗಿದ್ದು, ಪೋಷಕತ್ವದಿಂದ ವಂಚಿತರಾಗಿದ್ದಾರೆ.    
ಅನಾಥ ಮಕ್ಕಳಿಗೆ ನೆಲೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಾರ್ಯಗತವಾಗಿರುವ ಇಲಾಖೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿಗಳಾದ ಎ.ಜಿ ಕಾರಿಯಪ್ಪ ಮತ್ತು ಎಸ್. ರಮೇಶ್ ಕುಮಾರ್‌ರವರ ಮಾರ್ಗದರ್ಶನದಲ್ಲಿ ನಗರದ ಡಾನ್ ಬೋಸ್ಕೋ ಜಿಲ್ಲಾ ಸಂಯೋಜಕ ರಂಗನಾಥ್‌ರವರನ್ನು ಸಂಪರ್ಕಿಸಿ, ಅನಾಥ ಮಕ್ಕಳ ಕುರಿತು ಮಾಹಿತಿ ನೀಡುವ ಮೂಲಕ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಕಳುಹಿಸಿಕೊಡಲಾಗಿದೆ. ಈ ಮೂಲಕ ಘೋಷಕತ್ವದಿಂದ ವಂಚಿತರಾಗಿರುವ ಇಬ್ಬರು ಹೆಣ್ಣು ಮಕ್ಕಳಿಗೆ ಆಶ್ರಯ ಕಲ್ಪಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದೆ.