ಶನಿವಾರ, ಆಗಸ್ಟ್ 23, 2025

ಅಥರ್ವ ಶಾಲೆಯಲ್ಲಿ ವೈಭವಯುತ ಶ್ರೀ ಕೃಷ್ಣ ಜನ್ಮಾಷ್ಟಮಿ : ಶ್ರೀ ಕೃಷ್ಣ-ರಾಧೆ ವೇಷದಲ್ಲಿ ಕಣ್ಮನ ಸೆಳೆದ ಮಕ್ಕಳು

ಭದ್ರಾವತಿ ನಗರದ ಹುತ್ತಾ ಕಾಲೋನಿ ಅಥರ್ವ ಕಿಡ್ಸ್ ಶಾಲೆಯಲ್ಲಿ ಶನಿವಾರ ೨ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ಆಚರಿಸಲಾಯಿತು. ಮಕ್ಕಳು ಶ್ರೀ ಕೃಷ್ಣ-ರಾಧೆ ವೇಷದಲ್ಲಿ ಕಂಗೊಳಿಸಿದರು. 
    ಭದ್ರಾವತಿ : ನಗರದ ಹುತ್ತಾ ಕಾಲೋನಿ ಅಥರ್ವ ಕಿಡ್ಸ್ ಶಾಲೆಯಲ್ಲಿ ಶನಿವಾರ ೨ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ಆಚರಿಸಲಾಯಿತು. ಮಕ್ಕಳು ಶ್ರೀ ಕೃಷ್ಣ-ರಾಧೆ ವೇಷದಲ್ಲಿ ಕಂಗೊಳಿಸಿದರು. 


    ಶ್ರೀ ಕೃಷ್ಣ-ರಾಧೆ ವೇಷದೊಂದಿಗೆ ವೇದಿಕೆ ಮೇಲೆ ಪ್ರದರ್ಶನ ನೀಡಿದ ಮಕ್ಕಳು ತಮ್ಮದೇ ಆದ ಹಾವ-ಭಾವ ಭಂಗಿಗಳಿಂದ, ಮಾತುಗಳಿಂದ ಎಲ್ಲರನ್ನು ರಂಜಿಸುವ ಮೂಲಕ ಕಣ್ಮನ ಸೆಳೆದರು. ಕಾರ್ಯಕ್ರಮಕ್ಕೆ ಪೂರಕವಾಗಿ ವೈಭವಯುತವಾದ ವೇದಿಕೆಯನ್ನು ಸಹ ಸಿದ್ದಪಡಿಸಲಾಗಿತ್ತು. 

ಭದ್ರಾವತಿ ನಗರದ ಹುತ್ತಾ ಕಾಲೋನಿ ಅಥರ್ವ ಕಿಡ್ಸ್ ಶಾಲೆಯಲ್ಲಿ ಶನಿವಾರ ೨ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ಆಚರಿಸಲಾಯಿತು. ಮಕ್ಕಳು ಬಣ್ಣದ ಮಡಿಕೆ ಒಡೆದು ಸಂಭ್ರಮಿಸಿದರು.
    ಈ ನಡುವೆ ಶಾಲೆ ಒಳ ಭಾಗದಲ್ಲಿ ಶ್ರೀ ಕೃಷ್ಣ-ರಾಧೆ ಇಬ್ಬರೂ ನಿಧಿವನದಲ್ಲಿ ವಿಹಾರಗೊಂಡಿರುವಂತೆ ಅದ್ಭುತವಾಗಿ ಅಲಂಕರಿಸಲಾಗಿತ್ತು. ಮಕ್ಕಳು, ಪೋಷಕರು ಕಣ್ತುಂಬಿಕೊಂಡರು. ಮತ್ತೊಂದೆಡೆ ಶಾಲಾ ಆವರಣದಲ್ಲಿ ಅಲಂಕೃತಗೊಂಡ ಜೋಕಾಲಿಯಲ್ಲಿ ಮಕ್ಕಳು ಕುಳಿತು ಆಟವಾಡಿ ಇನ್ನೊಂದೆಡೆ ಬಣ್ಣದ ಮಡಿಕೆ ಒಡೆದು ಸಂಭ್ರಮಿಸಿದರು. ಶ್ರೀಕೃಷ್ಣ-ರಾಧೆ ವೇಷ ಧರಿಸಿದ್ದ ತಮ್ಮ ಮಕ್ಕಳ ಹಾವ-ಭಾವ ಭಂಗಿಗಳನ್ನು ಪೋಷಕರು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಆನಂದಿಸಿದರು. 


ಭದ್ರಾವತಿ ನಗರದ ಹುತ್ತಾ ಕಾಲೋನಿ ಅಥರ್ವ ಕಿಡ್ಸ್ ಶಾಲೆಯಲ್ಲಿ ಶನಿವಾರ ೨ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ಆಚರಿಸಲಾಯಿತು. ಅಲಂಕೃತಗೊಂಡ ಜೋಕಾಲಿಯಲ್ಲಿ ಮಕ್ಕಳು ಕುಳಿತು ಆಟವಾಡಿ ಸಂಭ್ರಮಿಸಿದರು. 
    ಅಕ್ಕನ ಬಳಗದ ಕಾರ್ಯದರ್ಶಿ ಸುಧಾಮಣಿ ಮತ್ತು  ಶಿವಮೊಗ್ಗ ಪತಾಂಜಲಿ ನಾಗರಾಜ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಮಕ್ಕಳನ್ನು ಅಭಿನಂದಿಸಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಬಿ.ಎಚ್ ಲಾವಣ್ಯ, ನಿರ್ವಾಹಕ ಶಿವಕುಮಾರ್ ಸೇರಿದಂತೆ ಶಾಲೆಯ ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಲಾಡು ವಿತರಿಸಲಾಯಿತು. 



ಜಾತಿ ನಿಂದನೆ, ಮಾನಹಾನಿಗೆ ಯತ್ನ ೩ ಆರೋಪಿಗಳಿಗೆ ೪ ವರ್ಷ ಶಿಕ್ಷೆ


    ಭದ್ರಾವತಿ: ಪೊಲೀಸ್ ಠಾಣೆಗೆ ದೂರು ನೀಡಿದ ಲಂಬಾಣಿ (ಪರಿಶಿಷ್ಟ ಜಾತಿ) ಜನಾಂಗಕ್ಕೆ ಸೇರಿದ ಮಹಿಳೆಯೊಬ್ಬರ ಮೇಲೆ ಜಾತಿ ನಿಂದನೆ, ಹಲ್ಲೆ ಮಾಡಿ ಮಾನಹಾನಿಗೆ ಯತ್ನಿಸಿದ್ದ ನಾಲ್ವರು ಆರೋಪಿಗಳಿಗೆ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್‌ರವರು ಶನಿವಾರ ೪ ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿ ಆದೇಶಿಸಿದ್ದಾರೆ. 
    ತಾಲೂಕಿನ ಸಿರಿಯೂರು ವೀರಾಪುರ ಗ್ರಾಮದ ಮನು (ಮೃತಪಟ್ಟಿದ್ದಾರೆ), ಶ್ರೀಧರ, ಮೋಹನ್ ಮತ್ತು ಹರೀಶ್ ಶಿಕ್ಷೆಗೊಳಗಾದ ಆರೋಪಿಗಳಾಗಿದ್ದಾರೆ. ೧೦ ಆಗಸ್ಟ್, ೨೦೧೮ರಂದು ಇದೆ ಗ್ರಾಮದ ಲಂಬಾಣಿ ಜನಾಂಗದ ಮಹಿಳೆಯೊಬ್ಬರ ಮನೆಗೆ ಈ ನಾಲ್ವರು ಆರೋಪಿಗಳು ನುಗ್ಗಿ ದಾಂಧಲೆ ನಡೆಸುವ ಜೊತೆಗೆ ಆಶ್ಲೀಲ ಪದಗಳಿಂದ ಜಾತಿ ನಿಂದನೆ ಮಾಡಿ ಮನೆಯ ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಮಾನಹಾನಿಗೆ ಯತ್ನಿಸಿದ್ದರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 
    ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅಂದಿನ ಪೊಲೀಸ್ ಉಪಾಧೀಕ್ಷಕರಾಗಿದ್ದ ಓಂಕಾರ ನಾಯ್ಕರವರು ತನಿಖಾಧಿಕಾರಿಯಾಗಿ ಹಾಗು ಸಹಾಯಕ ಠಾಣಾ ಉಪ ನಿರೀಕ್ಷಕರಾಗಿದ್ದ ಕೆ.ಎಚ್ ಜಯಪ್ಪ ಸಹಾಯಕ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. 
    ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪ ಸಾಬೀತಾದ ಹಿನ್ನಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕರಾದ ರತ್ನಮ್ಮ ವಾದ ಮಂಡಿಸಿದ್ದರು. 

ರಾಷ್ಟ್ರೀಯ ಮಾಸ್ಟರ್‍ಸ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಜಂಜುಂಡೇಗೌಡರಿಗೆ ಚಿನ್ನದ ಪದಕ

ಇತ್ತೀಚಿಗೆ ಕೇರಳದ ಕೊಯಿಕೋಡ್(ಕ್ಯಾಲಿಕಟ್)ನಲ್ಲಿ ಜರುಗಿದ ರಾಷ್ಟ್ರೀಯ ಮಾಸ್ಟರ್‍ಸ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭದ್ರಾವತಿ ನಗರದ ವಿಐಎಸ್‌ಎಲ್ ವ್ಯಾಯಾಮ ಶಾಲೆಯ ನಂಜುಂಡೇಗೌಡರವರು ಭಾಗವಹಿಸಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. 
    ಭದ್ರಾವತಿ: ಇತ್ತೀಚಿಗೆ ಕೇರಳದ ಕೊಯಿಕೋಡ್(ಕ್ಯಾಲಿಕಟ್)ನಲ್ಲಿ ಜರುಗಿದ ರಾಷ್ಟ್ರೀಯ ಮಾಸ್ಟರ್‍ಸ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ನಗರದ ವಿಐಎಸ್‌ಎಲ್ ವ್ಯಾಯಾಮ ಶಾಲೆಯ ನಂಜುಂಡೇಗೌಡರವರು ಭಾಗವಹಿಸಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. 
    ವಿಐಎಸ್‌ಎಲ್ ಕಾರ್ಖಾನೆ ನಿವೃತ್ತ ಉದ್ಯೋಗಿಯಾಗಿರುವ ನಂಜುಂಡೇಗೌಡರವರು ೬೦ ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಭಾಗವಹಿಸಿ ಚಿನ್ನದ ಪದಕ ತಮ್ಮದಾಗಿಸಿಕೊಳ್ಳುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. 
    ನಂಜುಂಡೇಗೌಡರವರು ಈಗಾಗಲೇ ರಾಷ್ಟ್ರ ಮತ್ತು ರಾಜ್ಯಮಟ್ಟದ ಹಲವಾರು ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ನಗರದ ಕ್ರೀಡಾಪಟುಗಳು, ಅಭಿಮಾನಿಗಳು ಹಾಗು ಗಣ್ಯರು ಇವರನ್ನು ಅಭಿನಂದಿಸಿದ್ದಾರೆ. 

ಗಂಡನ ಕೊಲೆಗೈದ ಪತ್ನಿ, ಬಾಲ್ಯದ ಸ್ನೇಹಿತನಿಗೆ ಮರಣ ದಂಡನೆ ಶಿಕ್ಷೆ

ಮರಣ ದಂಡನೆ ಶಿಕ್ಷೆಗೆ ಗುರಿಯಾದ ಆರೋಪಿ ಲಕ್ಷ್ಮಿ.
    ಭದ್ರಾವತಿ : ಸುಮಾರು ೯ ವರ್ಷಗಳ ಹಿಂದೆ ನಡೆದಿದ್ದ ವ್ಯಕ್ತಿಯೋರ್ವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಮರಣ ದಂಡನೆ ಹಾಗು ಓರ್ವನಿಗೆ ೭ ವರ್ಷ ಶಿಕ್ಷೆ ವಿಧಿಸಿ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್‌ರವರು ಶನಿವಾರ ತೀರ್ಪು ನೀಡಿ ಆದೇಶಿಸಿದ್ದಾರೆ. 
    ಜನ್ನಾಪುರ ಎನ್‌ಟಿಬಿ ರಸ್ತೆ ನಿವಾಸಿಗಳಾದ ಲಕ್ಷ್ಮಿ(೩೮) ಮತ್ತು ಕೃಷ್ಣಮೂರ್ತಿ ಅಲಿಯಾಸ್ ಕಿಟ್ಟಿ(೩೯) ಮರಣ ದಂಡನೆ ಶಿಕ್ಷೆಗೆ ಒಳಗಾದ ಆರೋಪಿಗಳಾಗಿದ್ದಾರೆ. ಮತ್ತೊಬ್ಬ ಆರೋಪಿ ಶಿವರಾಜ ಅಲಿಯಾಸ್ ಶಿಷು ಅಲಿಯಾಸ್ ಶಿವರಾಜು(೪೧)ಗೆ ೭ ವರ್ಷ ಶಿಕ್ಷೆ ವಿಧಿಸಲಾಗಿದೆ. 
    ಶಿಕ್ಷಕ ಇಮ್ತಿಯಾಜ್ ಅಹಮದ್ ಖಾನ್ ಕೊಲೆಯಾದ ದುರ್ದೈವಿಯಾಗಿದ್ದು, ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಇವರ ಸಹೋದರ(ತಮ್ಮ) ಜು.೮, ೨೦೧೬ರ ರಾತ್ರಿ ದೂರು ನೀಡಿ ಉದ್ದೇಶ ಪೂರ್ವಕವಾಗಿ ಲಕ್ಷ್ಮಿ ಮತ್ತು ಕೃಷ್ಣಮೂರ್ತಿ ಇಬ್ಬರು ಸೇರಿ ಕೊಲೆ ಮಾಡಿ ಮೃತದೇಹವನ್ನು ಹೊಳೆಗೆ ಎಸೆದಿದ್ದು, ಹುಡುಕಿ ಕೊಡುವಂತೆ ಕೋರಿದ್ದರು. 


ಮರಣ ದಂಡನೆ ಶಿಕ್ಷೆಗೆ ಗುರಿಯಾದ ಆರೋಪಿ ಕೃಷ್ಣಮೂರ್ತಿ 

    ಇದರನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಅಂದಿನ ಠಾಣಾಧಿಕಾರಿಯಾಗಿದ್ದ ತನಿಖಾಧಿಕಾರಿ ಟಿ.ಕೆ ಚಂದ್ರಶೇಖರ್ ಮತ್ತು ಮಹಿಳಾ ಕಾನ್ಸ್‌ಸ್ಟೇಬಲ್ ಸಹಾಯಕ ತನಿಖಾಧಿಕಾರಿಯಾಗಿದ್ದ ಅನ್ನಪೂರ್ಣರವರು ೩ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. 
    ಘಟನೆ ವಿವರ : 
    ಇಮ್ತಿಯಾಜ್ ಅಹಮದ್ ಖಾನ್ ಗುಲ್ಬರ್ಗ ಜಿಲ್ಲೆಯಲ್ಲಿ ಸರ್ಕಾರಿ ಶಾಲೆ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸರ್ಕಾರಿ ಶಾಲೆ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲಕ್ಷ್ಮಿಯನ್ನು ಪ್ರೀತಿಸಿ ವಿವಾಹವಾಗಿದ್ದು, ನಂತರ ಇಮ್ತಿಯಾಜ್ ಸೊರಬ ತಾಲೂಕಿನ ತೆಲಗುಂದ ಗ್ರಾಮದ ಸರ್ಕಾರಿ ಶಾಲೆಗೆ ವರ್ಗಾವಣೆಗೊಂಡಿದ್ದಾನೆ. ಲಕ್ಷ್ಮಿ ತಾಲೂಕಿನ ಅಂತರಗಂಗೆ ಸರ್ಕಾರಿ ಶಾಲೆಗೆ ವರ್ಗಾವಣೆಗೊಂಡಿದ್ದಾಳೆ. ಇಮ್ತಿಯಾಜ್ ತನ್ನ ತಮ್ಮನ ಮನೆಯಲ್ಲೇ ಇದ್ದು, ಅಲ್ಲಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದನು. ಲಕ್ಷ್ಮಿ ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿ ವಾಸವಿದ್ದಳು. ಈ ನಡುವೆ ಲಕ್ಷ್ಮೀಗೆ ಬಾಲ್ಯದ ಸ್ನೇಹಿತ, ಚಾಲಕ ಕೃಷ್ಣಮೂರ್ತಿಯೊಂದಿಗೆ ಅನೈತಿಕ ಸಂಬಂಧವಿದ್ದು, ಈ ಹಿನ್ನಲೆಯಲ್ಲಿ ಲಕ್ಷ್ಮೀ ಮನೆ ಸಮೀಪದಲ್ಲಿಯೇ ಈತನ ಸಹ ವಾಸವಿದ್ದನು ಎನ್ನಲಾಗಿದೆ. ಈ ವಿಚಾರ ಇಮ್ತಿಯಾಜ್‌ಗೆ ತಿಳಿದು ಆಗಾಗ ಲಕ್ಷ್ಮಿ ಜೊತೆಗೆ ಜಗಳ ಸಹ ನಡೆದಿದೆ. 


೭ ವರ್ಷ ಶಿಕ್ಷೆಗೆ ಗುರಿಯಾದ ಶಿವರಾಜು 
    ಜು.೭, ೨೦೧೬ರ ರಾತ್ರಿ ಇದೆ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ನಡೆದು ಇಮ್ತಿಯಾಜ್ ಕೊಲೆಯೊಂದಿಗೆ ಅಂತ್ಯವಾಗಿದೆ. ಈ ವಿಚಾರ ಲಕ್ಷ್ಮಿ ಇಮ್ಮಿಯಾಜ್ ತಮ್ಮನಿಗೆ ತಿಳಿಸಿದ್ದು, ಉದ್ದೇಶ ಪೂರ್ವಕವಾಗಿ ಕೊಲೆ ಮಾಡಿರುವ ಅನುಮಾನದ ಮೇರೆಗೆ ಪೊಲೀಸರಿಗೆ ದೂರು ನೀಡಿದ್ದರು. 
    ದೂರು ದಾಖಲಿಸಿಕೊಂಡ ಪೊಲೀಸರು ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದರು. ಲಕ್ಷ್ಮೀ ಮತ್ತು ಕೃಷ್ಣಮೂರ್ತಿ ಇಬ್ಬರು ಸೇರಿ ಕೊಲೆ ಮಾಡಿ ಮೃತದೇಹವನ್ನು ಬೈಪಾಸ್ ರಸ್ತೆಯ ಭದ್ರಾ ಸೇತುವೆ ಬಳಿ ನದಿಗೆ ಎಸೆದಿದ್ದರು. ಈ ಕೃತ್ಯಕ್ಕೆ ಸಹಕರಿಸಿದ್ದ ಶಿವರಾಜುನನ್ನು ಸಹ ಬಂಧಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. 
ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪ ಸಾಬೀತಾದ ಹಿನ್ನಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕಿ ರತ್ನಮ್ಮ ವಾದ ಮಂಡಿಸಿದ್ದರು. 

ಶುಕ್ರವಾರ, ಆಗಸ್ಟ್ 22, 2025

ಆರ್‌ಎಎಫ್ ಅಧಿಕಾರಿಗಳು, ಸಿಬ್ಬಂದಿಗಳು ಸೇರಿ ೩೮ ಮಂದಿ ರಕ್ತದಾನ

ರಕ್ತದ ಅಗತ್ಯತೆ ಹಾಗು ರಕ್ತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುತ್ತಿರುವ ಜಿಲ್ಲಾ ಪೊಲೀಸ್ ಭದ್ರಾವತಿ ನಗರದ ೯೭ ಬೆಟಾಲಿಯನ್ ಕ್ಷಿಪ್ರ ಕಾರ್ಯ ಪಡೆ (ಆರ್‌ಎಎಫ್) ಹಾಗು ಜೀವ ಸಂಜೀವಿನಿ ಸ್ವಯಂ ಪ್ರೇರಿತ ರಕ್ತ ಕೇಂದ್ರದ ಸಹಯೋಗದೊಂದಿಗೆ ಶುಕ್ರವಾರ ೫೪ನೇ ರಕ್ತದಾನ ಶಿಬಿರ ಆಯೋಜಿಸುವಲ್ಲಿ ಯಶಸ್ವಿಯಾಗಿದೆ.
  ಭದ್ರಾವತಿ : ರಕ್ತದ ಅಗತ್ಯತೆ ಹಾಗು ರಕ್ತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುತ್ತಿರುವ ಜಿಲ್ಲಾ ಪೊಲೀಸ್ ನಗರದ ೯೭ ಬೆಟಾಲಿಯನ್ ಕ್ಷಿಪ್ರ ಕಾರ್ಯ ಪಡೆ (ಆರ್‌ಎಎಫ್) ಹಾಗು ಜೀವ ಸಂಜೀವಿನಿ ಸ್ವಯಂ ಪ್ರೇರಿತ ರಕ್ತ ಕೇಂದ್ರದ ಸಹಯೋಗದೊಂದಿಗೆ ಶುಕ್ರವಾರ ೫೪ನೇ ರಕ್ತದಾನ ಶಿಬಿರ ಆಯೋಜಿಸುವಲ್ಲಿ ಯಶಸ್ವಿಯಾಗಿದೆ. 
ಮೈಸೂರು ಕಾಗದ ಕಾರ್ಖಾನೆಯ ೯೭ ಬೆಟಾಲಿಯನ್ ಕ್ಷಿಪ್ರ ಕಾರ್ಯ ಪಡೆ ಕಛೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಶಿಬಿರದಲ್ಲಿ ಬೆಟಾಲಿಯನ್ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಸೇರಿದಂತೆ ಒಟ್ಟು ೩೮ ಮಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. 
೯೭ ಬೆಟಾಲಿಯನ್ ಕಮಾಂಡೆಂಟ್ ಕಮಲೇಶ್ ಕುಮಾರ್, ಕಮಾಂಡೆಂಟ್-೨ ಸಚಿನ್ ಗಾಯಕ್‌ವಾಡ್ ಸಂತೋ, ಉಪ ಕಮಾಂಡೆಂಟ್ ರಮೇಶ್ ಸಿಂಗ್, ಸಹಾಯಕ ಕಮಾಂಡೆಂಟ್ ಅನಿಲ್‌ಕುಮಾರ್, ವೈದ್ಯಾಧಿಕಾರಿ ಡಾ. ಚಂದ್ರಶೇಖರ್, ಜೀವ ಸಂಜೀವಿನಿ ಸ್ವಯಂ ಪ್ರೇರಿತ ರಕ್ತ ಕೇಂದ್ರದ ಸಂಸ್ಥಾಪಕ ಹರೀಶ್, ವೈದ್ಯಾಧಿಕಾರಿ ಆತ್ಯಾರ, ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಸ್ಟೇಬಲ್, ಹಸಿರು ಸೇನಾನಿ ಹಾಲೇಶಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 


ಶಿಕ್ಷಣದ ಜೊತೆಗೆ ಗುರು-ಹಿರಿಯರಿಗೆ ಗೌರವ ನೀಡುವ ಉತ್ತಮ ಸಂಸ್ಕಾರ ರೂಢಿಸಿಕೊಳ್ಳಿ : ಬೆಕ್ಕಿನಕಲ್ಮಠ ಶ್ರೀ

ಭದ್ರಾವತಿ ನಗರದ ಜೇಡಿಕಟ್ಟೆ ಮಾತೃಶ್ರೀ ಟ್ರಸ್ಟ್, ಶ್ರೀ ವಿನಾಯಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಶ್ರಾವಣ ಚಿಂತನ ಹಾಗು ಅಕ್ಷರಾಭ್ಯಾಸ ಕಾರ್ಯಕ್ರಮದ ದಿವ್ಯ ಸಾನಿಧ್ಯ ಶಿವಮೊಗ್ಗ ಶ್ರೀ ಬೆಕ್ಕಿನಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಯವರುವಹಿಸಿ ಉದ್ಘಾಟಿಸಿದರು. 
    ಭದ್ರಾವತಿ : ನಗರದ ಜೇಡಿಕಟ್ಟೆ ಮಾತೃಶ್ರೀ ಟ್ರಸ್ಟ್, ಶ್ರೀ ವಿನಾಯಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಶ್ರಾವಣ ಚಿಂತನ ಹಾಗು ಅಕ್ಷರಾಭ್ಯಾಸ ಕಾರ್ಯಕ್ರಮದ ದಿವ್ಯ ಸಾನಿಧ್ಯ ಶಿವಮೊಗ್ಗ ಶ್ರೀ ಬೆಕ್ಕಿನಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಯವರುವಹಿಸಿ ಆಶೀರ್ವಚನ ನೀಡಿದರು. 
    ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಣದ ಮಹತ್ವ ಹಾಗು ಶಿಕ್ಷಕರ ಪಾತ್ರ ಕುರಿತು ಶ್ರೀಗಳು ಮಾತನಾಡಿ, ಶಿಕ್ಷಣದ ಜೊತೆಗೆ ಗುರು-ಹಿರಿಯರಿಗೆ ಗೌರವ ನೀಡುವುದು ಸೇರಿದಂತೆ ಉತ್ತಮ ಸಂಸ್ಕಾರ ರೂಢಿಸಿಕೊಳ್ಳುವಂತೆ ಕರೆ ನೀಡಿದರು. 
    ವಿದ್ಯಾಸಂಸ್ಥೆ ಅಧ್ಯಕ್ಷ ಡಾ. ಕುಮಾರಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಗರಸಭೆ ಉಪಾಧ್ಯಕ್ಷ ಮಣಿ ಎಎನ್‌ಎಸ್, ವಾಲ್ಮೀಕಿ ಸಮಾಜದ ನಗರ ಅಧ್ಯಕ್ಷ, ನಗರಸಭೆ ಸದಸ್ಯ ಬಸವರಾಜ ಬಿ. ಆನೇಕೊಪ್ಪ, ಜೇಡಿಕಟ್ಟೆ ಶ್ರೀ ಮರುಳ ಸಿದ್ದೇಶ್ವರ ಧಾರ್ಮಿಕ ಜನ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ, ಕಾರ್ಯದರ್ಶಿ ಎಸ್. ವಾಗೀಶ್,  ಶ್ರೀ ಮರುಳ ಸಿದ್ದೇಶ್ವರ ದೇವಸ್ಥಾನದ ಅರ್ಚಕ ರುದ್ರೇಶ್, ವಾಲ್ಮೀಕಿ ಸಮಾಜದ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ವಿದ್ಯಾರ್ಥಿನಿ ಖುಷಿ ಪ್ರಾರ್ಥಿಸಿ, ಸಹ ಶಿಕ್ಷಕಿ ಭಾರ್ಗವಿ ಸ್ವಾಗತಿಸಿದರು. ಸಹ ಶಿಕ್ಷಕಿಯರಾದ ಹೇಮಾವತಿ ಮತ್ತು ರಮ್ಯಾ ಕಾರ್ಯಕ್ರಮ ನಿರೂಪಿಸಿ, ಎಂ. ಕಾವ್ಯ ವಂದಿಸಿದರು. 

ಆ.೨೪ರಂದು ರಾಜ್ಯಮಟ್ಟದ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆಯ ಅಂತಿಮ ಸ್ಪರ್ಧೆ

೧೬ ಗಾಯಕರು ಆಯ್ಕೆ, ಹಿರಿಯ ಕಲಾವಿದರು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ 

ಕರ್ನಾಟಕ ಸ್ಟಾರ್ ಸಿಂಗರ್-೨೦೨೫, ಸೀಸನ್-೨ ರಾಜ್ಯಮಟ್ಟದ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆ
    ಭದ್ರಾವತಿ: ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಶ್ರೀ ಬಸವೇಶ್ವರ ಧರ್ಮಸಂಸ್ಥೆ ಸಹಕಾರದೊಂದಿಗೆ ಸಂಘದ ೫ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಕರ್ನಾಟಕ ಸ್ಟಾರ್ ಸಿಂಗರ್-೨೦೨೫, ಸೀಸನ್-೨ ರಾಜ್ಯಮಟ್ಟದ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆಯ ಅಂತಿಮ ಸ್ಪರ್ಧೆ ಆ.೨೪ರ ಭಾನುವಾರ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಸಂಜೆ ೪ ಗಂಟೆಗೆ ನಡೆಯಲಿದೆ. 
    ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಬಿ.ಎ ಮಂಜುನಾಥ್, ರಾಜ್ಯದ ವಿವಿಧೆಡೆಗಳಿಂದ ಗಾಯಕ, ಗಾಯಕಿಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಅಲ್ಲದೆ ಟಿ.ವಿ ಶೋ ಗಳಲ್ಲಿ ನುಡಿಸಿದ ಖ್ಯಾತಿಯುಳ್ಳ ಸಂಗೀತ ವಾದ್ಯಗಾರರು, ನಿರೂಪಕರು ಭಾಗವಹಿಸಲಿದ್ದಾರೆ. ಗಾಯಕರಾದ `ಅಜಯ್ ವಾರಿಯರ್' ಮತ್ತು `ಉಷಾ ಕೋಕಿಲ' ತೀರ್ಪುಗಾರರಾಗಿ ಹಾಗು `ವಿದ್ವಾನ್ ಮಹೇಂದ್ರ ಗೋರೆ' ಮತ್ತು ಚನ್ನಗಿರಿ ಗಾಯಕ `ಶಶಿಕಿರಣ್' ಸಹ ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು. 


ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷ ಬಿ.ಎ ಮಂಜುನಾಥ್ 
    ಇದೆ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕಲಾವಿದರ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ, ಹಿರಿಯ ಕಲಾವಿದರಿಗೆ ದಿವಂಗತ ಜಯಶೀಲನ್ ರಾಜ್ಯ ಪ್ರಶಸ್ತಿ ಮತ್ತು ದಿವಂಗತ ಗೀತಾಂಜಲಿ ಶ್ರೀನಿವಾಸ್ ರಾಜ್ಯಪ್ರಶಸ್ತಿ ಪ್ರದಾನ ಮತ್ತು ಸಂಘದ ಹಿರಿಯ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು. 
    ಈಗಾಗಲೇ ಆ.೧೬ರಂದು ಸೆಲೆಕ್ಷನ್ ಆಡಿಷನ್ ಮತ್ತು ಆ.೧೭ರಂದು ಸೆಮಿಫೈನಲ್ ಆಡಿಷನ್ ನಗರದ ನ್ಯೂಟೌನ್ ಜೆಟಿಎಸ್ ಶಾಲೆ ಪಕ್ಕದ ಲಯನ್ಸ್ ಕ್ಲಬ್, ಶುಗರ್ ಟೌನ್‌ನಲ್ಲಿ ನಡೆದಿದ್ದು, ಸೆಲೆಕ್ಷನ್ ಆಡಿಷನ್‌ನಲ್ಲಿ ಒಟ್ಟು ೬೬ ಸ್ಪರ್ಧಿಗಳು ಭಾಗವಹಿಸಿದ್ದರು. ಈ ಪೈಕಿ ೩೦ ಸ್ಪರ್ಧಿಗಳು ಸೆಮಿಫೈನಲ್ ಆಡಿಷನ್ ತಲುಪಿ ಅಂತಿಮ ಸ್ಪರ್ಧೆಗೆ ೧೬ ಸ್ಪರ್ಧಿಗಳು ಆಯ್ಕೆಯಾಗಿದ್ದಾರೆ. ಅಂತಿಮ ಸ್ಪರ್ಧೆ ಎಲ್ಲರ ಗಮನ ಸೆಳೆಯುತ್ತಿದೆ. ಮೊದಲ ಬಹುಮಾನ ರು. ೨೫ ಸಾವಿರ ನಗದು, ಅಭಿನಂದನಾ ಪತ್ರ ಮತ್ತು ಟ್ರೋಫಿ, ದ್ವಿತೀಯ ಬಹುಮಾನ ರು. ೧೫ ಸಾವಿರ ನಗದು, ಅಭಿನಂದನಾ ಪತ್ರ ಮತ್ತು ಟ್ರೋಫಿ, ತೃತೀಯ ಬಹುಮಾನ ರು. ೧೦ ಸಾವಿರ ನಗದು, ಅಭಿನಂದನಾ ಪತ್ರ ಮತ್ತು ಟ್ರೋಫಿ ಹಾಗು ಸಮಾಧಾನಕರ ಬಹುಮಾನ ರು. ೨ ಸಾವಿರ ನಗದು ಮತ್ತು ಭಿನಂದನ ಪತ್ರ ನೀಡಲಾಗುವುದು. ಅಂತಿಮ ಸ್ಪರ್ಧೆ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಕಲಾವಿದರು, ಅಭಿಮಾನಿಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕೋರಿದರು. 
    ಸಂಘದ ಉಪಾಧ್ಯಕ್ಷ ವೈ.ಕೆ ಹನುಮಂತಯ್ಯ, ಪ್ರಧಾನ ಕಾರ್ಯದರ್ಶಿ ಚರಣ್ ಕವಾಡ್, ಸಹ ಕಾರ್ಯದರ್ಶಿ ಚಿದಾನಂದ, ಖಜಾಂಚಿ ಎ. ಪ್ರಶಾಂತ್, ಕಾರ್ಯಕಾರಿ ಸಮಿತಿ ಸದಸ್ಯ ವಿಶ್ವನಾಥ್ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.