ಖಾಸಗಿ ಶಾಲೆಗಳ ಮುಖ್ಯಸ್ಥರ ಸಭೆಯಲ್ಲಿ ತಹಸೀಲ್ದಾರ್ ಶಿವಕುಮಾರ್ ಎಚ್ಚರಿಕೆ
ಭದ್ರಾವತಿ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಗುರುವಾರ ತಹಸೀಲ್ದಾರ್ ಶಿವಕುಮಾರ್ ನೇತೃತ್ವದಲ್ಲಿ ಶುಲ್ಕ ವಸೂಲಾತಿಗೆ ಸಂಬಂಧಿಸಿದಂತೆ ಖಾಸಗಿ ಶಾಲೆಗಳ ಮುಖ್ಯಸ್ಥರ ಸಭೆ ನಡೆಯಿತು.
ಭದ್ರಾವತಿ, ಮೇ. ೨೮: ಖಾಸಗಿ ಶಾಲೆಗಳು ಯಾವುದೇ ಕಾರಣಕ್ಕೂ ಬಲವಂತದಿಂದ ಶಾಲಾ ಶುಲ್ಕ ವಸೂಲಾತಿ ಮಾಡುವಂತಿಲ್ಲ ಎಂದು ತಹಸೀಲ್ದಾರ್ ಶಿವಕುಮಾರ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಅವರು ಗುರುವಾರ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಖಾಸಗಿ ಶಾಲೆಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ತುತ ಕೊರೋನಾ ವೈರಸ್ ಪರಿಣಾಮ ಶ್ರೀಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದು, ಈ ಸಂದಿಗ್ದ ಪರಿಸ್ಥಿತಿಯಲ್ಲಿ ಬಲವಂತವಾಗಿ ಶಾಲಾ ಶುಲ್ಕ ವಸೂಲಾತಿ ಮಾಡಬಾರದು. ಈ ಸಂಬಂಧ ಸರ್ಕಾರ ಸಹ ಆದೇಶ ಹೊರಡಿಸಿದೆ. ಇದನ್ನು ಪಾಲಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಮಾತನಾಡಿ, ಶಾಲಾ ಶುಲ್ಕ ವಸೂಲಾತಿಗೆ ಸಂಬಂಧಿಸಿದಂತೆ ತಾಲೂಕು ಆಡಳಿತ ಹಾಗು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ತಹಸೀಲ್ದಾರ್‌ರವರು ಪೂರಕವಾಗಿ ಸ್ಪಂದಿಸಿ ಸಭೆ ಕರೆದಿದ್ದು, ಖಾಸಗಿ ಶಾಲೆಗಳು ಯಾವುದೇ ಕಾರಣಕ್ಕೂ ಈ ಬಾರಿ ಶಾಲಾ ಶುಲ್ಕ ವಸೂಲಾತಿ ಮಾಡಬಾರದು. ಅದರಲ್ಲೂ ಭದ್ರಾವತಿಯಂತಹ ನಗರದಲ್ಲಿ ಶ್ರೀಸಾಮಾನ್ಯರು ತುಂಬಾ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಯಾವುದೇ ಉದ್ಯೋಗವಿಲ್ಲದೆ ದಿನದ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಅರ್ಥ ಮಾಡಿಕೊಂಡು ಖಾಸಗಿ ಶಾಲೆಗಳು ಸಹಕರಿಸಬೇಕು. ಅಲ್ಲದೆ ಈ ಸಂಬಂಧ ಸರ್ಕಾರ ಸಹ ಆದೇಶ ಹೊರಡಿಸಿದ್ದು, ಇದನ್ನು ಪಾಲಿಸುವ ಮೂಲಕ ಶ್ರೀಸಾಮಾನ್ಯರ ನೆರವಿಗೆ ಮುಂದಾಗುವಂತೆ ಕೋರಿದರು.
ಒಂದು ವೇಳೆ ಸರ್ಕಾರದ ಆದೇಶ ಉಲ್ಲಂಘಿಸಿ, ಬಲವಂತವಾಗಿ ಶುಲ್ಕ ವಸೂಲಾತಿ ಮಾಡಿದ್ದಲ್ಲಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದರು.
ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ರಾಜಶೇಖರ್, ಶಿಕ್ಷಣ ಸಂಯೋಜಕ ರವಿಕುಮಾರ್, ಆಮ್ ಆದ್ಮಿ ಪಾರ್ಟಿ ಮುಖಂಡರಾದ ಇಬ್ರಾಹಿಂ ಖಾನ್, ಪೀಟರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸುಮಾರು ೫೨ ಖಾಸಗಿ ಶಾಲೆಗಳ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.