ಭದ್ರಾವತಿ ಹಳೇನಗರದಲ್ಲಿ ಸುಮಾರು ೫೫ ಲಕ್ಷ ರು. ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ಕನಕಮಂಟಪವನ್ನು ಶನಿವಾರ ಶಾಸಕ ಬಿ.ಕೆ ಸಂಗಮೇಶ್ವರ್, ತಹಸೀಲ್ದಾರ್ ಎಚ್.ಸಿ ಶಿವಕುಮಾರ್, ಪೌರಾಯುಕ್ತ ಮನೋಹರ್, ಹಿರಿಯ ರಂಗದಾಸೋಹಿ ಎಸ್.ಜಿ ಶಂಕರಮೂರ್ತಿ ಸೇರಿದಂತೆ ಇನ್ನಿತರ ಗಣ್ಯರು ಕನಕಮಂಟಪ ಲೋಕಾರ್ಪಣೆಗೊಳಿಸಿದರು.
ಭದ್ರಾವತಿ, ಆ. ೧೫: ಸುಮಾರು ೫ ದಶಕಗಳಷ್ಟು ಹಳೇಯದಾದ ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿರುವ ರಂಗ ಚಟುವಟಿಕೆಗಳಿಗೆ ನೆಲೆಯಾಗಿರವ ಕನಕ ಮಂಟಪ ಸುಮಾರು ೫೫ ಲಕ್ಷ ರು. ವೆಚ್ಚದಲ್ಲಿ ನವೀಕರಣಗೊಂಡಿದ್ದು, ಸ್ವಾತಂತ್ರ್ಯೋತ್ಸವ ದಿನವಾದ ಶನಿವಾರ ಲೋಕಾರ್ಪಣೆಗೊಂಡಿತು.
ಈ ಹಿಂದೆ ನಿರ್ಮಾಣಗೊಂಡಿದ್ದ ಕಟ್ಟಡ ಶಿಥಿಲಗೊಂಡ ಪರಿಣಾಮ ಸುಮಾರು ೨ ದಶಕಗಳಿಂದ ರಂಗ ಚಟುವಟಿಕೆಗಳು ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೂಕ್ತ ವೇದಿಕೆ ಇಲ್ಲದೆ ಸಾಕಷ್ಟು ಕಲಾತಂಡಗಳು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಲ್ಲಿ ಹಿನ್ನಡೆ ಕಂಡುಕೊಂಡಿದ್ದವು.
ಹಿರಿಯ ರಂಗದಾಸೋಹಿ ಎಸ್.ಜಿ ಶಂಕರಮೂರ್ತಿ ಹಾಗು ನಗರಸಭೆ ಪೌರಾಯುಕ್ತ ಮನೋಹರ್ ನೇತೃತ್ವದ ತಂಡ ಕೈಗೊಂಡ ಪರಿಶ್ರಮದ ಫಲವಾಗಿ ಶಿಥಿಲಗೊಂಡ ಕಟ್ಟಡ ನೆಲಸಮಗೊಂಡು ಹೊಸ ಕಟ್ಟಡ ನಿರ್ಮಾಣಗೊಂಡಿದೆ. ಈ ಕಟ್ಟಡ ೫೪ ಅಡಿ ಸುತ್ತಳತೆಯಲ್ಲಿ ನಿರ್ಮಾಣಗೊಂಡಿದ್ದು, ೩೨ ಅಡಿ ವೇದಿಕೆಯನ್ನು ಹೊಂದಿದೆ. ೨ ಪ್ರತ್ಯೇಕ ಕೊಠಡಿ, ಮಧ್ಯಭಾಗದಲ್ಲಿ ವಿಶಾಲವಾದ ಕೊಠಡಿ, ೨ ಪ್ರತ್ಯೇಕ ಶೌಚಾಲಯಗಳನ್ನು ಹೊಂದಿದೆ. ಅಲ್ಲದೆ ಹೊರ ಭಾಗದಲ್ಲಿ ಆಕರ್ಷಕ ಕಲಾಕೃತಿಗಳೊಂದಿಗೆ ಕಂಗೊಳಿಸುತ್ತಿದೆ.
ಕಲಾವಿದರ ೨ ದಶಕಗಳ ಕನಸು ನನಸಾಗಿದೆ. ಶಾಸಕ ಬಿ.ಕೆ ಸಂಗಮೇಶ್ವರ್, ತಾಲೂಕು ದಂಡಾಧಿಕಾರಿ, ತಹಸೀಲ್ದಾರ್ ಎಚ್.ಸಿ ಶಿವಕುಮಾರ್, ಪೌರಾಯುಕ್ತ ಮನೋಹರ್, ಹಿರಿಯ ರಂಗದಾಸೋಹಿ ಎಸ್.ಜಿ ಶಂಕರಮೂರ್ತಿ ಸೇರಿದಂತೆ ಇನ್ನಿತರ ಗಣ್ಯರು ಕನಕಮಂಟಪ ಲೋಕಾರ್ಪಣೆಗೊಳಿಸಿದರು.