Monday, August 31, 2020

ಪೌರಕಾರ್ಮಿಕರ ದಿನಾಚರಣೆಯಲ್ಲಿ ಜಾನಪದ ಕಲಾವಿದರಿಗೆ ವೇದಿಕೆ ನೀಡಲು ಮನವಿ

 ಪೌರಕಾರ್ಮಿಕರ ದಿನಾಚರಣೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ಕಲಾವಿದರಿಗೆ ವೇದಿಕೆಯಲ್ಲಿ ಅವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಸೋಮವಾರ ಭದ್ರಾವತಿ ನಗರಸಭೆ ಪೌರಾಯುಕ್ತ ಮನೋಹರ್‌ಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಆ. ೩೧: ಪ್ರತಿ ವರ್ಷ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗುವ ಪೌರಕಾರ್ಮಿಕರ ದಿನಾಚರಣೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ಕಲಾವಿದರಿಗೆ ವೇದಿಕೆಯಲ್ಲಿ ಅವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಸೋಮವಾರ ನಗರಸಭೆ ಪೌರಾಯುಕ್ತ ಮನೋಹರ್‌ಗೆ ಮನವಿ ಸಲ್ಲಿಸಲಾಯಿತು.
      ಸ್ವಚ್ಛತೆ ಹಾಗು ಕಾರ್ಮಿಕರಿಗೆ ಸಂಬಂಧಿಸಿದ ಮತ್ತು ಅಂಬೇಡ್ಕರ್‌ರವರ ಕುರಿತು ಹಾಡುಗಳನ್ನು ಹಾಡಲು ಕಲಾವಿದರಿಗೆ ಅವಕಾಶ ನೀಡುವಂತೆ  ಮನವಿಯಲ್ಲಿ ಕೋರಲಾಗಿದೆ.
      ಕಲಾವಿದರಾದ ತಮಟೆ ಜಗದೀಶ್, ಜಿ. ದಿವಾಕರ, ಲಾವಣ್ಯ ಮತ್ತು ಶಿವಾನಂದ ಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕ ಜಿ.ಟಿ ಗುರುಲಿಂಗಪ್ಪ ನಿಧನ


ಜಿ.ಟಿ ಗುರುಲಿಂಗಪ್ಪ
ಭದ್ರಾವತಿ, ಆ. ೩೧: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷ, ನಿವೃತ್ತ ಶಿಕ್ಷಕ ಜಿ.ಟಿ ಗುರುಲಿಂಗಪ್ಪ ಸೋಮವಾರ ನಿಧನ ಹೊಂದಿದರು.
       ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹೊಂದಿದ್ದರು. ನಗರಸಭೆ ವ್ಯಾಪ್ತಿಯ ಭದ್ರಾ ಕಾಲೋನಿ ಭದ್ರಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು. ಸ್ಕೌಟ್ಸ್ ಮಾಸ್ಟರ್ ಆಗಿದ್ದ ಗುರುಲಿಂಗಪ್ಪನವರಿಗೆ ಹಲವು ಪ್ರಶಸ್ತಿಗಳು ಲಭಿಸಿದ್ದವು. ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್ ಸೇರಿದಂತೆ ಹಲವು ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
      ಮೃತರ ನಿಧನಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್ ಸೇರಿದಂತೆ ಹಲವು ಸಂಘ-ಸಂಸ್ಥೆಗಳು, ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ನಿವೃತ್ತಿ ಹೊಂದಿದ ಶಿಕ್ಷಕರುಗಳಿಗೆ ಸನ್ಮಾನ, ಅಭಿನಂದನೆ

ಭದ್ರಾವತಿ ಕಾಗದನಗರ ಪೇಪರ್‌ಟೌನ್ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಬೇಲಿಮಲ್ಲೂರು ಎಂ. ನಾಗಪ್ಪ ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ಅವರನ್ನು ಸೋಮವಾರ ತಾಲೂಕು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ, ಆ. ೩೧: ತಾಲೂಕಿನ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕರುಗಳಿಗೆ ಸೋಮವಾರ ತಾಲೂಕು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
    ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸುಮಾರು ೩೪ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕಾಗದನಗರ ಎಂಪಿಎಂ ಶಿಕ್ಷಣ ಮಂಡಳಿಯ ಪೇಪರ್‌ಟೌನ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬೇಲಿಮಲ್ಲೂರು ಎಂ. ನಾಗಪ್ಪ, ಅರಬಿಳಚಿ ಬಸವೇಶ್ವರ ಪ್ರೌಢಶಾಲೆ ಸಹ ಶಿಕ್ಷಕ ದೇವೇಂದ್ರಪ್ಪ ಹಾಗೂ ನ್ಯೂಟೌನ್ ಸೇಂಟ್‌ಚಾರ್ಲ್ಸ್ ಕನ್ನಡ ಶಾಲೆಯ ಶಿಕ್ಷಕಿ ಜಾನಿ ಅವರನ್ನು ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ನೇತೃತ್ವದಲ್ಲಿ ಸನ್ಮಾನಿಸಿ ಅಭಿನಂದಿಸುವ ಮೂಲಕ ನಿವೃತ್ತಿ ಜೀವನಕ್ಕೆ ಶುಭ ಕೋರಲಾಯಿತು.

Sunday, August 30, 2020

ರಕ್ತದಾನ ಶಿಬಿರ : ೫೦ ಯೂನಿಟ್ ರಕ್ತ ಸಂಗ್ರಹ


ಭದ್ರಾವತಿ ಹಳೇನಗರದ ಶ್ರೀ ಬಸವೇಶ್ವರ ವೃತ್ತದ ಜಾಮಿಯಾ ಶಾದಿ ಮಹಲ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ರೋಟರಿ ರಕ್ತ ನಿಧಿ ಮುಖ್ಯಸ್ಥ ಸತೀಶ್‌ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
     ಭದ್ರಾವತಿ, ಆ. ೩೦: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತಾಲೂಕು ಶಾಖೆ ವತಿಯಿಂದ ಶಿವಮೊಗ್ಗ ರೋಟರಿ ರಕ್ತ ನಿಧಿ ಸಹಯೋಗದೊಂದಿಗೆ ಭಾನುವಾರ ಹಳೇನಗರದ ಶ್ರೀ ಬಸವೇಶ್ವರ ವೃತ್ತದ ಜಾಮಿಯಾ ಶಾದಿ ಮಹಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ಸುಮಾರು ೫೦ ಯೂನಿಟ್ ರಕ್ತ ಸಂಗ್ರಹಿಸಲಾಯಿತು.    
      ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಕಾರ್ಯದರ್ಶಿ ಉಮರ್ ಫಾರೂಕ್, ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಅಲ್ಲಾಹ್ ಬಕಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ರೋಟರಿ ರಕ್ತ ನಿಧಿ ಮುಖ್ಯಸ್ಥ  ಸತೀಶ್‌ರವರನ್ನು ಸಂಘಟನೆಯ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ವಿಧಾನಸಭೆ ಕಾರ್ಯದರ್ಶಿ ಹುದ್ದೆಗೆ ಎಸ್. ಮೂರ್ತಿ ಮರು ನೇಮಕಗೊಳಿಸಲು ಆಗ್ರಹ

ಭದ್ರಾವತಿ, ಆ. ೩೦: ಪರಿಶಿಷ್ಟ ಜಾತಿಗೆ ಸೇರಿದ ಎಸ್. ಮೂರ್ತಿಯವರನ್ನು ಪುನಃ ವಿಧಾನಸಭೆ ಕಾರ್ಯದರ್ಶಿ ಸೇವೆಗೆ ನೇಮಕ ಮಾಡಿಕೊಳ್ಳುವಂತೆ ತಾಲೂಕು ಬಾಪೂಜಿ ಹರಿಜನ ಸೇವಾ ಸಂಘ ಆಗ್ರಹಿಸಿದೆ.
    ಪರಿಶಿಷ್ಟ ಜಾತಿಗೆ ಸೇರಿದ ಎಸ್. ಮೂರ್ತಿಯವರನ್ನು ಪ್ರಮುಖ ಹುದ್ದೆಯಿಂದ ಹೊರಗಿಡುವ ಹುನ್ನಾರ ನಡೆಸಲಾಗಿದ್ದು, ಕಾರ್ಯದರ್ಶಿ ಹುದ್ದೆಯಲ್ಲಿದ್ದ ಮೂರ್ತಿಯವರ ಮೇಲೆ ವಿನಾಕಾರಣ ಕರ್ತವ್ಯಲೋಪ ಆರೋಪ ಮಾಡಿ ೨೦೧೮ರಲ್ಲಿ ಸೇವೆಯಿಂದ ಅಮಾನತು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ರಿಟ್ ಪಿಟೀಷನ್ ಹಾಕಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಪಿ.ಬಿ. ಭಜಂತ್ರಿಯವರು ೩ ವಾರಗಳೊಗಾಗಿ ಕಾರ್ಯದರ್ಶಿ ಹುದ್ದೆಗೆ ಮರು ನೇಮಕ ಮಾಡಿಕೊಳ್ಳುವಂತೆ ಜು.೨ರಂದು ತೀರ್ಪು ನೀಡಿದ್ದಾರೆ. ಈ ಆದೇಶವನ್ನು ಪಾಲಿಸದೆ ತೀರ್ಪನ್ನು ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿದ್ದು, ಇದನ್ನು ಸಂಘವು ಖಂಡಿಸುತ್ತದೆ.
   ತಕ್ಷಣ ಸರ್ಕಾರ ನ್ಯಾಯಾಲಯದ ಆದೇಶದಂತೆ ಮೂರ್ತಿಯವರನ್ನು ಮರು ನೇಮಕ ಮಾಡಿಕೊಳ್ಳಬೇಕು. ದಲಿತ ವಿರೋಧಿ ನೀತಿಯನ್ನು ಕೈಬಿಡಬೇಕು. ಇಲ್ಲವಾದಲ್ಲಿ ಮುಖ್ಯಮಂತ್ರಿ, ಕಾನೂನು ಸಚಿವರು ಹಾಗು ಸಭಾಧ್ಯಕ್ಷರ ನಿವಾಸದ ಮುಂದೆ ಬೃಹತ್ ಹೋರಾಟ ನಡೆಸುವುದಾಗಿ ಸಂಘ ಎಚ್ಚರಿಸಿದೆ ಎಂದು ಪ್ರಧಾನ ಕಾರ್ಯದರ್ಶಿ ಎಂ. ರಾಜೇಂದ್ರ ತಿಳಿಸಿದ್ದಾರೆ.


ಶಿಕ್ಷಕರು ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳಿ : ಮಧುಕರ್ ವಿ. ಕಾನಿಟ್ಕರ್

ಭದ್ರಾವತಿ ತರುಣ ಭಾರತಿ ವಿದ್ಯಾಕೇಂದ್ರದ ಕೋಡಿಹಳ್ಳಿ ರಸ್ತೆಯಲ್ಲಿರುವ ಪ್ರೌಢಶಾಲೆಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ಕಾರ್ಯಾಗಾರದ ಸಮಾರೋಪ ಸಮಾರಂಭ ಮತ್ತು ಬೀಳ್ಕೊಡುಗೆ ಸಮಾರಂಭದಲ್ಲಿ ನಿವೃತ್ತಿ ಹೊಂದಿದ ಶಿಕ್ಷಕಿ ಜಯಶ್ರೀ ದಂಪತಿಯನ್ನು ಸನ್ಮಾನಿಸಿ ಅಭಿನಂದಿಸುವ ಮೂಲಕ ಬೀಳ್ಕೊಡುಗೆ ನೀಡಲಾಯಿತು.
ಭದ್ರಾವತಿ, ಆ. ೩೦: ಶಿಕ್ಷಕರು ವೃತ್ತಿ ಜೀವನದಲ್ಲಿ ಉತ್ತಮ ಗುಣಗಳನ್ನು ರೂಢಿಸಿಕೊಂಡಾಗ ಮಾತ್ರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯ ಎಂದು ತರುಣ ಭಾರತಿ ವಿಶ್ವಸ್ಥ ಮಂಡಳಿ ಕಾರ್ಯದರ್ಶಿ ಮಧುಕರ್ ವಿ. ಕಾನಿಟ್ಕರ್ ಹೇಳಿದರು.
    ಅವರು ಭಾನುವಾರ ತರುಣ ಭಾರತಿ ವಿದ್ಯಾಕೇಂದ್ರದ ಕೋಡಿಹಳ್ಳಿ ರಸ್ತೆಯಲ್ಲಿರುವ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ಕಾರ್ಯಾಗಾರದ ಸಮಾರೋಪ ಸಮಾರಂಭ ಮತ್ತು ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
      ಶಿಕ್ಷಕರು ಮತ್ತು ಮಕ್ಕಳ ನಡುವಿನ ಸ್ವಭಾವಗಳು ಶಿಕ್ಷಣದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಉತ್ತಮ ಸ್ವಭಾವಗಳು ಭವಿಷ್ಯದಲ್ಲಿ ಮಕ್ಕಳ ವ್ಯಕ್ತಿತ್ವ ರೂಪಿಸುತ್ತವೆ. ನಮ್ಮ ದೇಶ, ನಮ್ಮ ಸಮಾಜ, ನಮ್ಮ ಸಂಸ್ಕೃತಿ, ಸ್ವಾಭಿಮಾನದ ಗುಣಗಳನ್ನು ಶಿಕ್ಷಣದ ಜೊತೆ ಜೊತೆಗೆ ತಿಳಿಸಿಕೊಡಬೇಕಾಗಿದೆ. ಶಿಕ್ಷಕರ ವೃತ್ತಿ ಬದುಕು ಸಾರ್ಥಕವಾಗಬೇಕೆಂದರು.
    ನ್ಯೂಟೌನ್ ಬಾಲಬಾರತಿ ಶಾಲೆಯ ಮುಖ್ಯ ಶಿಕ್ಷಕಿ ಶಕುಂತಲ ಮಾತನಾಡಿ, ನಗರದಲ್ಲಿ ಮೊದಲ ಬಾರಿಗೆ ವಿದ್ಯಾಸಂಸ್ಥೆ ಆರಂಭಗೊಂಡಾಗ ಎದುರಾದ ಸಮಸ್ಯೆಗಳು, ೩೫ ವರ್ಷಗಳ ನಿರಂತರ ಸೇವೆಯಲ್ಲಿ ಅನುಭವಿಸಿದ ಶಿಕ್ಷಕ ವೃತ್ತಿಯಲ್ಲಿನ ಸವಾಲುಗಳನ್ನು ವಿವರಿಸಿದರು.
    ಇದಕ್ಕೂ ಮೊದಲು ಶಿಕ್ಷಕರಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರದ ಅನುಭವಗಳನ್ನು ಶಿಕ್ಷಕರಾದ ತೇಜಸ್ವಿ, ಶಿಲ್ಪ, ರಾಘವಿ ಮತ್ತು ಪೂರ್ಣಿಮಾ ಹಂಚಿಕೊಂಡರು. ಕಾರ್ಯಾಗಾರ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಹಲವು ಸಮಸ್ಯೆಗಳ ನಿವಾರಣೆಗೆ ಸಹಕಾರಿಯಾಗಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
    ವಿದ್ಯಾಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕಿ ಜಯಶ್ರೀ ದಂಪತಿಯನ್ನು ಸನ್ಮಾನಿಸಿ ಅಭಿನಂದಿಸುವ ಮೂಲಕ ಬೀಳ್ಕೊಡುಗೆ ನೀಡಲಾಯಿತು. ವಿದ್ಯಾಸಂಸ್ಥೆ ಕಾರ್ಯದರ್ಶಿ ಡಾ. ಎಂ.ಎಚ್ ವಿದ್ಯಾಶಂಕರ್ ಉಪಸ್ಥಿತರಿದ್ದರು.  ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಚ್ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು.
    ಮುಖ್ಯ ಶಿಕ್ಷಕಿ ರಾಧಿಕಾ ನಿರೂಪಿಸಿದರು. ಹಳೇ ವಿದ್ಯಾರ್ಥಿನಿ ದೃತಿ ಪ್ರಾರ್ಥಿಸಿದರು. ಶಿಕ್ಷಕಿ ಸುಜಾತ ಸ್ವಾಗತಿಸಿದರು. ಶಿಕ್ಷಕಿ ಸವಿತಾ ಕಾರ್ಯಾಗಾರದ ವರದಿ ಮಂಡಿಸಿದರು. ವಿದ್ಯಾಕೇಂದ್ರದ ಖಜಾಂಚಿ ವಿಶ್ವನಾಥ್ ವಂದಿಸಿದರು.  

ಭದ್ರೆ ನದಿಯಲ್ಲ, ಐತಿಹಾಸಿಕ ಸ್ಥಳದ ಹೆಗ್ಗುರುತು

ಹೆಸರಿಗೆ ತಕ್ಕಂತೆ ಭವ್ಯ ಜಲಾಶಯ

ಭದ್ರಾ ಜಲಾಶಯ
* ಅನಂತಕುಮಾರ್
ಭದ್ರಾವತಿ: ನಾಡಿನ ಜೀವನದಿ ಕಾವೇರಿಯಂತೆ ಭದ್ರೆಗೂ ಒಂದು ಅಸ್ತಿತ್ವವಿದ್ದು, ಭದ್ರೆ ತನ್ನ ಇತಿಹಾಸದ ಗರ್ಭದೊಳಗೆ ಅಡಗಿಸಿಟ್ಟುಕೊಂಡಿರುವ ಭವ್ಯಪರಂಪರೆ ಇದೀಗ ಅನಾವರಣಗೊಳ್ಳುವ ಕಾಲ ಸನ್ನಿಹಿತವಾಗುತ್ತಿದೆ.
        ನಗರದ ಹಿರಿಯ ರಂಗದಾಸೋಹಿ, ಶಿಲ್ಪ ಕಲಾವಿದ ಹಾಗೂ ವರ್ಣ ವಿನ್ಯಾಸಕರಾಗಿರುವ ಎಸ್.ಜಿ ಶಂಕರಮೂರ್ತಿಯವರು ಭದ್ರೆ ತನ್ನ ಇತಿಹಾಸದ ಗರ್ಭದೊಳಗೆ ಅಡಗಿಸಿಟ್ಟುಕೊಂಡಿರುವ ಭವ್ಯಪರಂಪರೆ ಅನಾವರಣಕ್ಕೆ ಮುಂದಾಗಿದ್ದಾರೆ. ಭದ್ರೆ ಎಂಬುದು ಕೇವಲ ನದಿಯಲ್ಲ, ಅದು ಒಂದು ಐತಿಹಾಸಿಕ ಸ್ಥಳದ ಹೆಗ್ಗುರುತು.
         ಪೌರಾಣಿಕ ಇತಿಹಾಸ :
       ಕ್ರಿ.ಶ ೧೨೧೬ರ ಕಾಲಘಟ್ಟದಲ್ಲಿ ಆಳ್ವಿಕೆ ನಡೆಸಿದ್ದ ವೀರನರಸಿಂಹ ಭೂಪತೆ (ವಿಷ್ಣುವರ್ಧನ ಹಾಗು ಶಾಂತಲೆಯ ಮರಿ ಮೊಮ್ಮೊಗ) ವೆಂಕಿ ಮಹರ್ಷಿಯವರು ಭದ್ರಾ ನದಿ ದಡದಲ್ಲಿ ತಪ್ಪಸ್ಸು ನಡೆಸಿದ್ದ ಹಿನ್ನಲೆಯಲ್ಲಿ ಅಂದು ವಂಕಿ ತಾಣವಾಗಿದ್ದ ಸ್ಥಳದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ನಿರ್ಮಾಣ ಮಾಡಿ, ೧೨೨೬ನೇ ವ್ಯಯನಾಮ ಸಂವತ್ಸರದಂದು ಲೋಕಾರ್ಪಣೆ ಮಾಡಿ ವಂಕಿಪುರ ಎಂದು ನಾಮಕರಣ ಮಾಡುವ ಮೂಲಕ ಭದ್ರೆಯ ಆರಾಧನೆಗೂ ಮುನ್ನುಡಿ ಬರೆದಿದ್ದನು ಎನ್ನಲಾಗಿದೆ. ಈ ಕುರಿತ ಮಾಹಿತಿ ಪೌರಾಣಿಕ ಇತಿಹಾಸದಲ್ಲಿ ದಾಖಲಾಗಿದೆ ಎಂಬುದು ಊರಿನ ಹಿರಿಯರ ಉಲ್ಲೇಖವಾಗಿದೆ.  
      ೮.೫ ಅಡಿ ಎತ್ತರದ ಭದ್ರೆ ವಿಗ್ರಹ:
     ಭದ್ರೆಯ ಇತಿಹಾಸ ಅನಾವರಣಗೊಳಿಸುವ ಕಾಲ ಇದೀಗ ಕೂಡಿ ಬಂದಿದ್ದು, ನಗರಸಭೆ ಆಡಳಿತ ಭದ್ರೆ ವಿಗ್ರಹ ಪ್ರತಿಷ್ಠಾಪನೆಗೆ ಮುಂದಾಗಿದೆ. ದೈವ ಸ್ವರೂಪಿಣಿ ಭದ್ರೆಯ ವಿಗ್ರಹದ ಅಡಿಭಾಗದಲ್ಲಿ ವೀರನರಸಿಂಹ ಭೂಪತೆ ಭದ್ರಾಪಾನ ಮಾಡುವ ಸುಂದರ ವಿಗ್ರಹ ಎಸ್.ಜಿ ಶಂಕರಮೂರ್ತಿರವರ ಕಲಾ ಕೌಶಲ್ಯತೆಯಲ್ಲಿ ಆಕರ್ಷಕವಾಗಿ ನಿರ್ಮಾಣಗೊಳ್ಳುತ್ತಿದೆ. ಸುಮಾರು ೮.೫ ಅಡಿ ಎತ್ತರದ ವಿಗ್ರಹ ನಗರಸಭೆ ಮುಂಭಾಗದ ಉದ್ಯಾನವನದಲ್ಲಿ ಪ್ರತಿಷ್ಠಾಪನೆಗೊಳ್ಳಲಿದ್ದು, ಆ ಮೂಲಕ ಗರ್ಭದೊಳಗೆ ಅಡಗಿರುವ ಇತಿಹಾಸ ಅನಾವರಣಗೊಳ್ಳಲಿದೆ.


ಭದ್ರೆ ವಿಗ್ರಹ ನಿರ್ಮಾಣದಲ್ಲಿ ತೊಡಗಿರುವ ಹಿರಿಯ ಶಿಲ್ಪ ಕಲಾವಿದ, ರಂಗದಾಸೋಹಿ ಜಿ.ಎಸ್ ಶಂಕರಮೂರ್ತಿ ದಂಪತಿ.

      ಭದ್ರಾ ಜಲಾಶಯ:
      ಪಶ್ಚಿಮಘಟ್ಟಗಳ ಪರ್ವತ ಶ್ರೇಣಿಯಲ್ಲಿ ಹುಟ್ಟಿ ಬೆಟ್ಟಗುಡ್ಡಗಳ ನಡುವೆ ಹರಿಯುವ ಭದ್ರೆ ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರಿನ ಕೂಡಲಿಯಲ್ಲಿ ತುಂಗಾನದಿಯೊಂದಿಗೆ ಸೇರಿ ಮುಂದೆ ಹರಿದು ತುಂಗಾಭದ್ರಾ ಜಲಾಶಯ ಸೇರುತ್ತದೆ. ಈ ನದಿಗೆ ೧೯೬೫ರಲ್ಲಿ ಸುಮಾರು ೪೩ ಕೋಟಿ ರು. ವೆಚ್ಚದಲ್ಲಿ ಪ್ರಸ್ತುತ ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ನಿರ್ಮಾಣಗೊಂಡ ಜಲಾಶಯ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ರೈತರಿಗೆ ವರದಾನವಾಗಿದೆ. ಒಟ್ಟು ೧,೬೨,೮೧೮ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.
     ಭದ್ರಾ ಜಲಾಶಯ ೧೮೬ ಅಡಿ ಎತ್ತರವಿದ್ದು, ಸುಮಾರು ೭೧ ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ವಿದೇಶಿ ತಂತ್ರಜ್ಞಾನದ ಅತ್ಯಾಧುನಿಕ ಸ್ವಯಂ ಚಾಲಿತ ೪ ಕ್ರೆಸ್ಟ್‌ಗೇಟ್‌ಗಳನ್ನು ಒಳ ಗೊಂಡಿದೆ. ಅಣೆಕಟ್ಟೆಯ ಮೇಲ್ಭಾಗದಲ್ಲಿ ಎರಡು ಕಾರುಗಳು ಒಟ್ಟಿಗೆ ಚಲಿಸುವಷ್ಟು ವಿಶಾಲ ಸ್ಥಳಾವಕಾಶವಿದೆ. ಎಡ-ಬಲ ಎರಡು ಬೃಹತ್ ನಾಲೆಗಳನ್ನು ಒಳಗೊಂಡಿದೆ.  ಎಡದಂಡೆ ನಾಲೆ ಮೂಲಕ ಶಿವಮೊಗ್ಗ ಹಾಗೂ ಭದ್ರಾವತಿ ತಾಲ್ಲೂಕಿನ ಸುಮಾರು ೮,೩೦೦ ಹೆಕ್ಟೇರು ಪ್ರದೇಶಕ್ಕೆ  ಹಾಗೂ ಬಲದಂಡೆ ನಾಲೆ ಮೂಲಕ ತರೀಕೆರೆ ಹಾಗೂ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಲಕ್ಷಾಂತರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. 
         ಜಲಾಶಯದ ನೀರನ್ನು ಕೇವಲ ನೀರಾವರಿಗೆ ಮಾತ್ರವಲ್ಲದೆ ಕುಡಿಯುವ ನೀರು, ಕೈಗಾರಿಕೆ ಹಾಗೂ ವಿದ್ಯುತ್ ಉತ್ಪಾದನೆಗೂ ಬಳಸಿಕೊಳ್ಳಲಾಗುತ್ತಿದೆ. ಸುಮಾರು ೩೯ ಮೆಗವ್ಯಾಟ್ ವಿದ್ಯುತ್  ಉತ್ಪಾದಿಸಲಾಗುತ್ತಿದೆ. ಕಳೆದ ಹಲವಾರುಗಳಿಂದ ವರ್ಷಗಳಿಂದ ಬಯಲುಸೀಮೆ ಹಾಗೂ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶ ದಿಂದ ಭದ್ರಾ ಮೇಲ್ಡಂಡೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಯೋಜನೆ ಇನ್ನೂ ಪ್ರಗತಿಯಲ್ಲಿದೆ.
         ೨೮ ಬಾರಿ ಪೂರ್ಣ ಪ್ರಮಾಣದಲ್ಲಿ ಭರ್ತಿ:  
ಜಲಾಶಯ ನಿರ್ಮಾಣಗೊಂಡ ಇದುವರೆಗೂ ಒಟ್ಟು ೨೮ ಬಾರಿ  ಪೂರ್ಣ ಪ್ರಮಾಣದಲ್ಲಿ ಭತ್ತಿಯಾಗಿದ್ದು, ೧೯೬೯ರಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿತ್ತು. ನಂತರ ೧೯೯೦ ರಿಂದ ೯೪ರ ವರೆಗೆ ೫ ಬಾರಿ, ೨೦೦೫ ರಿಂದ ೨೦೧೧ರ ವರೆಗೆ ೬ ಬಾರಿ, ೨೦೧೩ ಮತ್ತು ೨೦೧೪ರಲ್ಲಿ ಹಾಗೂ ೨೦೧೮ ಮತ್ತು ೨೦೧೯ರಲ್ಲಿ ಜಲಾಶಯ ಭರ್ತಿಯಾಗಿದ್ದು, ಹಲವು ಬಾರಿ ೧೭೦ ಅಡಿಗೂ ಅಧಿಕ ನೀರು ಸಂಗ್ರಹವಾದರೂ ಸಹ ಭರ್ತಿಯಾಗಿಲ್ಲ.


           ಹಲವು ವಿಶೇಷತೆಗಳು:
     ದೇಶದಲ್ಲಿ ೨ನೇ ಅತಿ ಎತ್ತರದ ಜಲಾಶಯ ಇದಾಗಿದ್ದು, ೧೮೬ ಅಡಿ ಎತ್ತರ ಹೊಂದಿದೆ. ಜಲಾಶಯದ ನೀರು ಬಿದಿರು ಹಸಿರಿನಿಂದ ಕಂಗೊಳಿಸುವುದು ವಿಶೇಷವಾಗಿದ್ದು, ಜಲಾಶಯದ ವ್ಯಾಪ್ತಿಯನ್ನು ಕಳಲೆ ಔಷಧಿ ಸಸಿಗಳು ಆವರಿಸಿಕೊಂಡಿವೆ. ಈ ಹಿನ್ನಲೆಯಲ್ಲಿ ಕ್ರಿಮಿಕೀಟಗಳಿಂದ ಮುಕ್ತಿಹೊಂದಿದ ಪರಿಶುದ್ಧ ನೀರು ಇದಾಗಿದೆ. ಭದ್ರಾ ಆಭಯಾರಣ್ಯದಲ್ಲಿ ೧೪೭ ಕಿ.ಮೀ. ವರೆಗೆ, ೫೨ ಕಿ.ಮೀ ಎನ್.ಆರ್ ಪುರದ ವರೆಗೆ, ೭೦ ಕಿ.ಮೀ. ಚಿಕ್ಕಮಗಳೂರುವರೆಗೆ, ೩೨ ಕಿ.ಮೀ. ಮುದ್ದಿನಕೊಪ್ಪದವರೆಗೆ ಜಲಾಶಯದ ನೀರು ವಿಸ್ತರಿಸಿಕೊಂಡಿದೆ. 
    ಭದ್ರಾ ನದಿಗೆ ಯಾವುದೇ ಉಪನದಿಗಳಿಲ್ಲ. ಜಲಾಶಯದಲ್ಲಿ ಅಲ್ಲಲ್ಲಿ ಹಸಿರು ಗುಡ್ಡಗಳಿದ್ದು, ಪ್ರತಿ ವರ್ಷ ಆನೇಕ ಜಾತಿಯ ಪಕ್ಷಿಗಳು ದೇಶ-ವಿದೇಶಗಳಿಂದ ಇಲ್ಲಿಗೆ ವಲಸೆ ಬಂದು ಸುಮಾರು ೫-೬ ತಿಂಗಳುಗಳು ಇದ್ದು, ಪುನಃ ಹಿಂದಿರುಗುತ್ತವೆ. ಈ ಪಕ್ಷಿಗಳ ವೀಕ್ಷಣೆಗಾಗಿಯೇ ಗುಡ್ಡಗಳಲ್ಲಿ ಪ್ರವಾಸಿಗರಿಗೆ ವೀಕ್ಷಣಾ ಧಾಮಗಳನ್ನು ನಿರ್ಮಿಸಲಾಗಿದ್ದು, ಅಲ್ಲದೆ ಬೋಟಿಂಗ್ ವ್ಯವಸ್ಥೆ ಸಹ ಕಲ್ಪಿಸಲಾಗಿದೆ. 
        ಕಳೆದ ಕೆಲವು ವರ್ಷಗಳ ಹಿಂದೆ ಜಲಾಶಯಕ್ಕೆ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಕೈಗೊಳ್ಳಲಾಗಿದ್ದು, ರಾತ್ರಿ ವೇಳೆ ವೈಭವಯುತವಾಗಿ ಕಂಗೊಳಿಸುತ್ತದೆ. ಒಟ್ಟಾರೆ ಜಲಾಶಯ ಹಲವು ವಿಶೇಷತೆಗಳಿಂದ ಕೂಡಿದೆ.
      ಕೆಆರ್‌ಎಸ್ ಮಾದರಿ ಉದ್ಯಾನವನ:
   ಜಲಾಶಯ ಮುಂಭಾಗ ವಿಶಾಲವಾದ ಸ್ಥಳವಕಾಶವಿದ್ದು, ಈ ಸ್ಥಳದಲ್ಲಿ ಕೆಆರ್‌ಎಸ್ ಮಾದರಿ ಉದ್ಯಾನವನ ನಿರ್ಮಾಣ ಮಾಡುವಂತೆ ಹಲವಾರು ವರ್ಷಗಳಿಂದ ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರಕ್ಕೆ ಒತ್ತಾಯಿಸಿಕೊಂಡು ಬರುತ್ತಿದ್ದಾರೆ. ಆದರೆ ಇದುವರೆಗೂ ಕಾರ್ಯಗತಗೊಂಡಿಲ್ಲ. ಅಲ್ಲದೆ ತಾಲೂಕಿನ ಅನ್ನದಾತ ಭಾರತರತ್ನ ಸರ್.ಎಂ ವಿಶ್ವೇಶ್ವರಾಯರವರ ಅತಿ ಎತ್ತರದ ಪ್ರತಿಮೆ ಸಹ ನಿರ್ಮಾಣಬೇಕೆಂಬ ಒತ್ತಾಯ ಕೇಳಿ ಬರುತ್ತಿದ್ದು, ಆದರೆ ಈ ಬಗ್ಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.