Friday, September 4, 2020

ಶಿಕ್ಷಕರ ದಿನಾಚರಣೆ : ೩ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ

ಚಂದ್ರಶೇಖರಪ್ಪ ಚಕ್ರಸಾಲಿ

ಭದ್ರಾವತಿ, ಸೆ. ೪: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಈ ಬಾರಿ ಶಿಕ್ಷಕರ ದಿನಾಚರಣೆ ಸರಳವಾಗಿ ನಡೆಯುತ್ತಿದ್ದು, ಈ ನಡುವೆ ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಸೇವೆ ಸಲ್ಲಿಸಿರುವ ತಾಲೂಕಿನ ೩ ಶಿಕ್ಷಕರಿಗೆ ಈ ಬಾರಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.
      ಕಿರಿಯ ಪ್ರಾಥಮಿಕ ಶಾಲೆಯ ವಿಭಾಗದಲ್ಲಿ ಹನುಮಂತನಗರ ಎ.ಕೆ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರಪ್ಪ ಚಕ್ರಸಾಲಿಯವರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದ್ದು, ಚಕ್ರಸಾಲಿಯವರು ಮೂತಃ ಹಿರೇಕೆರೆ ತಾಲೂಕಿನ ರಟ್ಟೇಹಳ್ಳಿ ಗ್ರಾಮದವರಾಗಿದ್ದಾರೆ. ಕುಂಬಾರಿಕೆ ವೃತ್ತಿ ಕುಟುಂಬದಲ್ಲಿ ಹುಟ್ಟಿ ಬೆಳೆದ ಇವರು ಬಡತನದಲ್ಲಿ ವಿದ್ಯಾಭ್ಯಾಸ ಪೂರೈಸಿ ೧೯೯೮ರಲ್ಲಿ ಶಿಕ್ಷಕ ವೃತ್ತಿಗೆ ಸೇರ್ಪಡೆಗೊಂಡರು. ಆರಂಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
        ಶಿಕ್ಷಕ ವೃತ್ತಿ ಜೊತೆಗೆ ಜಾನಪದ ಕಲೆಯನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದು, ಗೀಗೀ ಪದ, ಭಜನಾ ಪದ, ಡೊಳ್ಳು ಕುಣಿತ, ನಾಟಕ ಸೇರಿದಂತೆ ಇನ್ನಿತರ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಆಸಕ್ತಿ ಹೊಂದಿದ್ದಾರೆ.  ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬಿ. ಮಂಜಪ್ಪ

      ಹಿರಿಯ ಪ್ರಾಥಮಿಕ ಶಾಲೆಯ ವಿಭಾಗದಲ್ಲಿ ತಾಲೂಕಿನ ಕಾಳಿಂಗನ ಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯೋಪಾಧ್ಯಾಯ ಬಿ. ಮಂಜಪ್ಪರವರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದ್ದು, ಮಂಜಪ್ಪರವರು ೧೯೮೫ರಲ್ಲಿ ಶಿಕ್ಷಕ ವೃತ್ತಿಗೆ ಸೇರ್ಪಡೆಗೊಂಡಿದ್ದಾರೆ. ತೀರ್ಥಹಳ್ಳಿ ತಾಲೂಕಿನಲ್ಲಿ ೧೯೮೫ ರಿಂದ ೧೯೯೩ರವರೆಗೆ ಕರ್ತವ್ಯ ನಿರ್ವಹಿಸಿದ್ದು, ನಂತರ ೧೯೯೩ ರಿಂದ ಇಲ್ಲಿಯವರೆಗೆ ಭದ್ರಾವತಿ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
       ಇವರು ಚಿತ್ರಕಲೆ, ಸಂಗೀತ, ರಂಗಕಲೆ, ಕ್ರೀಡೆಗಳಲ್ಲಿ ಆಸಕ್ತಿ ಹೊಂದಿದ್ದು, ಬೆಂಗಳೂರಿನ ಪ್ರತಿಭಾ ಪರಿಷತ್ ವತಿಯಿಂದ ೨೦೧೦ರಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ, ೨೦೦೩ರಲ್ಲಿ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, ಜನಗಣತಿ ಸೇವೆಗಾಗಿ ೨೦೦೧ರಲ್ಲಿ ರಜತ ಪದಕ, ೨೦೧೦ರಲ್ಲಿ ರಾಜ್ಯಮಟ್ಟದ ಕನಕ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
      

   ಕೆ. ಜ್ಯೋತಿ
ಪ್ರೌಢಶಾಲಾ ವಿಭಾಗದಲ್ಲಿ ಅರಳಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕಿ ಕೆ. ಜ್ಯೋತಿಯವರಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದೆ.  ಜ್ಯೋತಿಯವರು ೨೦೦೯ರಲ್ಲಿ ಈ ಶಾಲೆಗೆ ವರ್ಗಾವಣೆಗೊಂಡು ಬಂದಿದ್ದಾರೆ. ಇವರು ಉತ್ತಮ ಕ್ರೀಡಾಪಟು ಆಗಿದ್ದು,  ೨೦೦೦ ರಿಂದ ೨೦೦೩ರ ವರೆಗೆ ಕರ್ನಾಟಕ ರಾಜ್ಯ ವಾಲಿಬಾಲ್ ತಂಡದ ನಾಯಕಿಯಾಗಿದ್ದರು. ೮ ರಾಷ್ಟ್ರಮಟ್ಟದ, ೧೫ ರಾಜ್ಯಮಟ್ಟದ ಮತ್ತು ೨೫ ಜಿಲ್ಲಾ ಮಟ್ಟದ ಪ್ರಶಸ್ತಿ ಹಾಗು ೩ ವಿಶ್ವ ವಿದ್ಯಾನಿಲಯ ಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಇವರು ಈ ಶಾಲೆಯಲ್ಲಿ ಕರ್ತವ್ಯ ಆರಂಭಿಸಿದ ನಂತರ ಮಕ್ಕಳನ್ನು ಹೆಚ್ಚಾಗಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಮೂಲಕ ೩ ರಾಷ್ಟ್ರಮಟ್ಟದ, ೧೫ ರಾಜ್ಯಮಟ್ಟದ ಹಾಗೂ ೩೦ ಜಿಲ್ಲಾಮಟ್ಟದ ಹಾಗು ೫೦ಕ್ಕೂ ಹೆಚ್ಚು ತಾಲೂಕು ಮಟ್ಟದ ಪ್ರಶಸ್ತಿಗಳು ಶಾಲೆಗೆ ಲಭಿಸಿವೆ.

ಎ.ವಿ ನಂಜಯ್ಯ ನಿಧನ

ಎ.ವಿ ನಂಜಯ್ಯ
ಭದ್ರಾವತಿ, ಸೆ. ೪: ಎಂಪಿಎಂ ಕಾರ್ಖಾನೆಯ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ಸಿದ್ದಾರೂಢ ನಗರದ ನಿವಾಸಿ ಎ.ವಿ ನಂಜಯ್ಯ(೬೪) ಶುಕ್ರವಾರ ನಿಧನ ಹೊಂದಿದರು.
        ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹೊಂದಿದ್ದರು. ಶನಿವಾರ ಬೆಳಿಗ್ಗೆ ತಾಲೂಕಿನ ಗುಡ್ಡದ ನೇರಳೆಕೆರೆಯಲ್ಲಿರುವ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಮೃತರ ನಿಧನಕ್ಕೆ ಎಂಪಿಎಂ ಕಾರ್ಖಾನೆಯ ಕಾರ್ಮಿಕರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

ತಾಲೂಕು ಬೋರ್ಡ್ ಮಾಜಿ ಅಧ್ಯಕ್ಷ ಪಟೇಲ್ ಸಿದ್ದಲಿಂಗಪ್ಪ ನಿಧನ

ಪಟೇಲ್ ಸಿದ್ದಲಿಂಗಪ್ಪ
ಭದ್ರಾವತಿ, ಸೆ. ೪: ತಾಲೂಕು ಬೋರ್ಡ್ ಮಾಜಿ ಅಧ್ಯಕ್ಷರಾದ ಸಿಂಗನ ಮನೆ ಗ್ರಾಮದ ನಿವಾಸಿ ಪಟೇಲ್ ಸಿದ್ದಲಿಂಗಪ್ಪ(೯೦) ಶುಕ್ರವಾರ ನಿಧನ ಹೊಂದಿದರು.
   ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಹೊಂದಿದ್ದರು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಸಿದ್ದಲಿಂಗಪ್ಪನವರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿದ್ದು, ತಾಲೂಕು ಬೋರ್ಡ್ ಅಧ್ಯಕ್ಷರಾಗಿ, ಸಿಂಗನಮನೆ ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ, ಗ್ರಾಮದ ಮೊದಲ ಪ್ರಧಾನರಾಗಿ ಸೇವೆ ಸಲ್ಲಿಸಿದ್ದರು.
     ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆ, ಕುವೆಂಪು ವಿ.ವಿ ಆರಂಭಕ್ಕೆ ಹೆಚ್ಚಿನ ಶ್ರಮ ವಹಿಸಿದ್ದರು. ಅಂದಿನ ಶಿಕ್ಷಣ ಸಚಿವರಾಗಿದ್ದ ಎ.ಆರ್ ಬದರಿನಾರಾಯಣ್‌ರವರ ಒಡನಾಡಿಯಾಗಿದ್ದರು.
    ಸಿದ್ದಲಿಂಗಪ್ಪನವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ಸಿಂಗನಮನೆ ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಟಿ.ಡಿ ಶಶಿಕುಮಾರ್, ಜಿಲ್ಲಾ ಗೌರವಾಧ್ಯಕ್ಷ ಜಿ.ಆರ್ ತ್ಯಾಗರಾಜ್, ಸಾಧನ ಮಹಿಳಾ ವೇದಿಕೆ ಅಧ್ಯಕ್ಷರು, ಅಧ್ಯಕ್ಷರು, ಪದಾಧಿಕಾರಿಗಳು, ಸಿಂಗನಮನೆ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗು ಗ್ರಾಮದ ಹಿರಿಯರು, ಮುಖಂಡರು, ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.

Thursday, September 3, 2020

ಸಾವಿರಾರು ಮಂದಿ ಕಾರ್ಯಕರ್ತರು, ಅಭಿಮಾನಗಳ ಕಣ್ಣಂಚಿನಲ್ಲಿ ಲೀನವಾದ ಮಾಜಿ ಶಾಸಕ

ಬುಧವಾರ ರಾತ್ರಿ ನಿಧನ ಹೊಂದಿದ ಭದ್ರಾವತಿ ಕ್ಷೇತ್ರದ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಅಂತಿಮ ದರ್ಶನದಲ್ಲಿ ಪಾಲ್ಗೊಂಡಿರುವ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು.
ಭದ್ರಾವತಿ, ಸೆ. ೩: ಬುಧವಾರ ರಾತ್ರಿ ನಿಧನ ಹೊಂದಿದ ಕ್ಷೇತ್ರದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಸಾವಿರಾರು ಮಂದಿ ಕಾರ್ಯಕರ್ತರು, ಅಭಿಮಾನಿಗಳ ಕಣ್ಣಂಚಿನಲ್ಲಿ ಲೀನವಾಗಿದ್ದು, ಗುರುವಾರ ಸಂಜೆ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಿತು.
    ಅಪ್ಪಾಜಿಯವರ ಅಂತಿಮ ಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡ ಕಾರಣ ಬೆಳಿಗ್ಗೆ ೧೧ ಗಂಟೆಗೆ ನಡೆಯಬೇಕಿದ್ದ ಅಂತ್ಯಕ್ರಿಯೆ ವಿಳಂಬವಾಗಿದ್ದು, ತಾಲೂಕಿನ ಗೋಣಿಬೀಡು ಗ್ರಾಮದಲ್ಲಿರುವ ಅಪ್ಪಾಜಿಯವರ ತೋಟ ತಲುಪುವಲ್ಲಿ ಸಂಜೆಯಾಯಿತು. ಈ ನಡುವೆ ಬಾರಿ ಮಳೆಯಿಂದಾಗಿ ಮತ್ತಷ್ಟು ವಿಳಂಬವಾಯಿತು. ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸಲಾಗಿದ್ದು, ಪುತ್ರ, ನಗರಸಭೆ ಸದಸ್ಯ ಎಂ.ಎ ಅಜಿತ್ ಅಗ್ನಿ ಸ್ಪರ್ಶ ನೆರವೇರಿಸಿದರು.
       ಅಪ್ಪಾಜಿ ಮೃತಪಟ್ಟ ನಂತರ ಅವರಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಆದರೂ ಸಹ ಮುನ್ನಚ್ಚರಿಕೆ ಕ್ರಮಗಳೊಂದಿಗೆ ಬೆಳಿಗ್ಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವರ ನಿವಾಸದಲ್ಲಿ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಕೊರೋನಾ ಭೀತಿ ನಡುವೆಯೂ ಅಗಲಿದ ನಾಯಕನ ಅಂತಿಮ ದರ್ಶನಕ್ಕೆ ತಾಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಆಗಮಿಸಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಹೆಚ್ಚಿನ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.


ಸೆ.೪ರಂದು ರೈತ ಸಂಘದಿಂದ ಸಂತಾಪ ಸೂಚಕ ಸಭೆ

ಭದ್ರಾವತಿ, ಸೆ. ೩: ಜನಸಾಮಾನ್ಯರ ಧ್ವನಿ ಕ್ಷೇತ್ರದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿಧನಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ವತಿಯಿಂದ ಸೆ.೪ರಂದು ಸಂತಾಪ ಸೂಚಕ ಸಭೆ ಹಮ್ಮಿಕೊಳ್ಳಲಾಗಿದೆ.
         ಹಳೇನಗರದ ಪತ್ರಿಕಾಭವನದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಸಭೆ ನಡೆಯಲಿದ್ದು, ಸಂಘದ ತಾಲೂಕು ಅಧ್ಯಕ್ಷ ಎಚ್.ಪಿ ಹಿರಿಯಣ್ಣಯ್ಯ, ಪ್ರಧಾನ ಕಾರ್ಯದರ್ಶಿ ರಾಮಚಂದ್ರರಾವ್ ಘೋರ್ಪಡೆ ಸಭೆ ಯಶಸ್ವಿಗೊಳಿಸಲು ಕೋರಿದ್ದಾರೆ.


ಸೆ.೫ರಂದು ಶಿಕ್ಷಕರ ದಿನಾಚರಣೆ

ಭದ್ರಾವತಿ, ಸೆ. ೫: ರಾಜ್ಯಾದ್ಯಂತ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಈ ಬಾರಿ ಸೆ.೫ರಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮ ದಿನಾಚರಣೆ, ಶಿಕ್ಷಕರ ದಿನಾಚರಣೆ ಸರಳವಾಗಿ ಹಮ್ಮಿಕೊಳ್ಳಲಾಗಿದೆ.
         ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿವಮೊಗ್ಗ ಹಾಗು ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ ವತಿಯಿಂದ ನಗರಸಭೆ ಸಭಾಂಗಣದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಕೋರಿದ್ದಾರೆ.


Wednesday, September 2, 2020

ಕಳಚಿಬಿದ್ದ ಉಕ್ಕಿನ ನಗರದ ೩ ದಶಕಗಳ ರಾಜಕೀಯ ಕೊಂಡಿ

ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿಧನ

ಮಾಜಿ ಶಾಸಕ ಎಂ.ಜೆ ಅಪ್ಪಾಜಿ
ಭದ್ರಾವತಿ, ಸೆ. ೩: ಕ್ಷೇತ್ರದ ೩ ದಶಕಗಳ ರಾಜಕೀಯ ಕೊಂಡಿಯೊಂದು ಕಳಚಿ ಹೋಗಿದ್ದು, ೩ ಬಾರಿ ಶಾಸಕರಾಗಿದ್ದ ಎಂ.ಜೆ ಅಪ್ಪಾಜಿ(೬೭) ಬುಧವಾರ ರಾತ್ರಿ ನಿಧನ ಹೊಂದಿದರು. 
ಪತ್ನಿ, ಓರ್ವ ಪುತ್ರ, ಸೊಸೆ, ಮೊಮ್ಮಕ್ಕಳನ್ನು ಹೊಂದಿದ್ದರು. ಅಪ್ಪಾಜಿಯವರಿಗೆ ರಾತ್ರಿ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ ನಂತರ ಮೃತಪಟ್ಟಿದ್ದಾರೆ. ಈ ನಡುವೆ ಅಪ್ಪಾಜಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 
ಈ ಹಿಂದೆ ೨ ಬಾರಿ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ರಕ್ತದೊತ್ತಡ, ಮಧುಮೇಹದಿಂದ ಸಹ ಬಳಲುತ್ತಿದ್ದರು. ಈ ಹಿನ್ನಲೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. 
ಸಾಮಾನ್ಯ ಕಾರ್ಮಿಕ: 
ಕೇಂದ್ರ ಉಕ್ಕು ಪ್ರಾಧಿಕಾರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಸಾಮಾನ್ಯ ಕಾರ್ಮಿಕನಾಗಿ ೨೦ ರು. ಸಂಬಳಕ್ಕೆ ದುಡಿಯುತ್ತಿದ್ದ ಅಪ್ಪಾಜಿ ಆರಂಭದಲ್ಲಿ ಕಾರ್ಮಿಕ ಹೋರಾಟಗಾರನಿಗೆ ಗುರುತಿಸಿ ಕೊಂಡಿದ್ದರು. ತಿಂಗಳ ಸಂಬಳದಲ್ಲಿ ಜೀವನ ನಡೆಸುವುದೇ ಕಷ್ಟವಿರುವ ಸಂದರ್ಭದಲ್ಲಿ ಜನರು ನೀಡಿದ ದೇಣಿಗೆ ಹಣದಿಂದಲೇ ಚುನಾವಣೆಗೆ ಸ್ಪರ್ಧಿಸುವ ಮೂಲಕ ರಾಜಕೀಯ ಅಸ್ತಿತ್ವ ಕಂಡು ಕೊಂಡರು. 
ಮೊದಲ ಚುನಾವಣೆಯಲ್ಲಿ ಸೋಲು: 
ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯಿತರು, ಒಕ್ಕಲಿಗರು ಮತ್ತು ಮುಸ್ಲಿಂ ಸಮುದಾಯದವರು ಪ್ರತಿ ಬಾರಿ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿದ್ದು, ಒಕ್ಕಲಿಗ ಸಮುದಾಯಕ್ಕೆ ಸೇರಿದ ಅಪ್ಪಾಜಿ ಮೊದಲ ಬಾರಿಗೆ ೧೯೮೯ರಲ್ಲಿ ಜೆಎನ್‌ಪಿ ಪಕ್ಷದ ಅಭ್ಯರ್ಥಿಯಾಗಿ ಅಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಎಸ್.  ಇಸಾಮಿಯಾ ವಿರುದ್ಧ ಸ್ಪರ್ಧಿಸಿ ಪರಾವಗೊಂಡಿದ್ದರು. 
೧೯೯೪ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಪ್ಪಾಜಿ ಜೆಡಿ ಪಕ್ಷದ ಅಭ್ಯರ್ಥಿ ಬಿ.ಪಿ ಶಿವಕುಮಾರ್ ವಿರುದ್ಧ ಗೆಲುವು ಸಾಧಿಸಿದ್ದರು. ನಂತರ ೧೯೯೦ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ಕೆ ಸಂಗಮೇಶ್ವರ್ ವಿರುದ್ಧ ಗೆಲುವು ಸಾಧಿಸಿದ್ದರು. ಮುಂದಿನ ೨ ಚುನಾವಣೆಯಲ್ಲೂ ಸೋಲು ಕಂಡಿದ್ದರು. ನಂತರ ೨೦೧೩ರ ಚುನಾವಣೆಯಲ್ಲಿ ೩ನೇ ಬಾರಿಗೆ ಗೆಲುವು ಸಾಧಿಸಿದ್ದರು. ೨೦೧೮ರ ಚುನಾವಣೆಯಲ್ಲಿ ಪುನಃ ಸಂಗಮೇಶ್ವರ್ ವಿರುದ್ಧ ಪರಾಭವಗೊಂಡಿದ್ದರು. 
ಅಧಿಕಾರ ಇಲ್ಲದಿದ್ದರೂ ವರ್ಚಸ್ಸಿನ ನಾಯಕ: 
ಅಧಿಕಾರ ಇರಲಿ, ಇಲ್ಲದಿರಲಿ ಕ್ಷೇತ್ರದಲ್ಲಿ ಅಪ್ಪಾಜಿ ತಮ್ಮದೇ ಆದ ವರ್ಚಸ್ಸು, ಮತ ಬ್ಯಾಂಕ್ ಹೊಂದಿದ್ದರು. ಈ ನಡುವೆ ಸ್ಥಳೀಯ ಸಂಸ್ಥೆಗಳ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ ಹಲವು ಮುಖಂಡರು ರಾಜಕೀಯವಾಗಿ ಮುಂಚೂಣಿಗೆ ಬರಲು ಕಾರಣಕರ್ತರಾಗಿದ್ದರು. ಇದೀಗ ಅಪ್ಪಾಜಿ ನಿಧನದಿಂದ ಕ್ಷೇತ್ರದ ರಾಜಕಾರಣದ ೩ ದಶಕಗಳ ಕೊಂಡಿ ಕಳಚಿ ಬಿದ್ದಂತಾಗಿದೆ.   
ಕೊರೋನಾ ಸಂಕಷ್ಟಕ್ಕೆ ಸ್ಪಂದಿಸಿದ ನಾಯಕ: 
ದೇಶಾದ್ಯಂತ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್‌ಡೌನ್ ಸೇರಿದಂತೆ ಇನ್ನಿತರ ಕಠಿಣ ಕ್ರಮಗಳನ್ನು ಕೈಗೊಂಡ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾದ ಕ್ಷೇತ್ರದ ಶ್ರೀಸಾಮಾನ್ಯರ ನೆರವಿಗೆ ಅಪ್ಪಾಜಿ ಧಾವಿಸುವ ಮೂಲಕ ಅಧಿಕಾರ ಇಲ್ಲದಿದ್ದರೂ ಸಹ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಿ ಮಾನವೀಯತೆ ಮೆರೆದರು. ಕೊನೆಯವರೆಗೂ ರೈತರು, ಕಾರ್ಮಿಕರು ಹಾಗೂ ಬಡವರ ಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಶಿವಮೊಗ್ಗ ಆಸ್ಪತ್ರೆಯೊಂದರ ಹಣದಾಹಕ್ಕೆ ಬಲಿಯಾದ ತಾಲೂಕಿನ ಬಡ ಕುಟುಂಬದ ಪರವಾಗಿ ಹೋರಾಟ, ತಾಲೂಕಿನ ತಾವರಘಟ್ಟ ಸ್ಮಶಾನ ಭೂಮಿ ಸಂಬಂಧ ರೈತರ ಪರ ಹೋರಾಟ ಸೇರಿದಂತೆ ಇನ್ನಿತರ ಹೋರಾಟಗಳು ಅಪ್ಪಾಜಿಯವರ ಕೊನೆಯ ಹೋರಾಟಗಳಾಗಿವೆ. 
ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಎಂದರೆ ಅಪ್ಪಾಜಿ : 
ಉಕ್ಕಿನ ನಗರದಲ್ಲಿ ದೇಶದ ಎರಡನೇ ಅತಿದೊಡ್ಡ ಉಕ್ಕಿನ ಮತ್ತು ಕಬ್ಬಿಣ ಕಾರ್ಖಾನೆ ಹಾಗು ಮೈಸೂರು ಕಾಗದ ಕಾರ್ಖಾನೆಗಳು ಆರಂಭಗೊಂಡರೂ ಸಹ ನಗರಕ್ಕೆ ಸುಸಜ್ಜಿತ ಬಸ್ ನಿಲ್ದಾಣದ ಕೊರತೆ ಎದ್ದು ಕಾಣುತ್ತಿತ್ತು. ಬಸ್ ನಿಲ್ದಾಣ ನಿರ್ಮಾಣಕ್ಕೆ ಹಲವು ಸವಾಲುಗಲು ಎದುರಾಗಿದ್ದವು. ಎಲ್ಲಾ ಸಮಸ್ಯೆ ನಿವಾರಣೆ ಮಾಡುವ ಮೂಲಕ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕೆ ೨ ದಶಕಗಳ ಹಿಂದೆ ಅಂದರೆ ಜು.೯, ೨೦೦೦ ಇಸವಿಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ನಂತರ ಆ.೧೧, ೨೦೦೨ರಲ್ಲಿ ಉದ್ಘಾಟನೆಗೊಂಡಿತು. ಈಗಲೂ ಬಸ್ ನಿಲ್ದಾಣ ಎಂದರೆ ಅಪ್ಪಾಜಿ ನೆನಪು ಮಾಡಿಕೊಳ್ಳುತ್ತಾರೆ ಕ್ಷೇತ್ರದ ನಾಗರೀಕರು. 
ಕ್ಷೇತ್ರದಲ್ಲಿ ಮಾಜಿ ಶಾಸಕರೇ ಇಲ್ಲ: 
ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪಂದಿಸಿ ಆಯ್ಕೆಯಾಗಿದ್ದ ಮಾಜಿ ಶಾಸಕರೆಲ್ಲರೂ ತಮ್ಮ ಬದುಕಿನ ಪಯಣ ಅಂತ್ಯಗೊಳಿಸಿದ್ದಾರೆ. ೧೯೫೭ರಲ್ಲಿ ಮೊದಲ ಶಾಸಕರಾಗಿದ್ದ ಡಿ.ಟಿ ಸೀತಾರಾಮರಾವ್, ೧೯೬೨ರಲ್ಲಿ ಕ್ಷೇತ್ರದ ಎರಡನೇ ಶಾಸಕರಾಗಿದ್ದ ಟಿ.ಡಿ ದೇವೇಂದ್ರಪ್ಪ, ೧೯೬೭ ಹಾಗೂ ೧೯೭೨ರಲ್ಲಿ ೩ ಮತ್ತು ೪ನೇ ಶಾಸಕರಾಗಿದ್ದ  ಅಬ್ದುಲ್  ಖುದ್ದೂಸ್ ಅನ್ವರ್, ೧೯೭೮ರಲ್ಲಿ ೫ನೇ ಶಾಸಕರಾಗಿದ್ದ ಜಿ. ರಾಜಶೇಖರ್, ೧೯೮೩ ಮತ್ತು ೧೯೮೫ರಲ್ಲಿ ೬ ಹಾಗು ೭ನೇ ಶಾಸಕರಾಗಿದ್ದ ಸಾಲೇರ ಎಸ್ ಸಿದ್ದಪ್ಪ, ೧೯೮೯ರಲ್ಲಿ ೮ನೇ ಶಾಸಕರಾಗಿದ್ದ ಎಸ್ ಇಸಾಮಿಯಾ ಮತ್ತು ೧೯೯೪, ೧೯೯೯ ಮತ್ತು ೨೦೧೩ರಲ್ಲಿ ಶಾಸಕರಾಗಿದ್ದ ಎಂ.ಜೆ ಅಪ್ಪಾಜಿ ಇದೀಗ ನಿಧನ ಹೊಂದಿದ್ದಾರೆ. ಇದರೊಂದಿಗೆ ಕ್ಷೇತ್ರದಲ್ಲಿ ಮಾಜಿ ಶಾಸಕರು ಯಾರು ಇಲ್ಲದಂತಾಗಿದೆ. 

ಅನಾರೋಗ್ಯದಿಂದ ಅಕಾಲಿಕ ನಿಧನ ಹೊಂದಿದ ಭದ್ರಾವತಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ನ್ಯೂಟೌನ್‌ನಲ್ಲಿರುವ ನಿವಾಸದ ಮುಂದೆ ವ್ಯವಸ್ಥೆ ಕಲ್ಪಿಸಲಾಗಿತ್ತು. 
ಪಾರ್ಥಿವ ಶರೀರದ ಅಂತಿಮ ದರ್ಶನ: 
ನ್ಯೂಟೌನ್ ಪೊಲೀಸ್ ಉಪಾಧೀಕ್ಷಕರ ಕಛೇರಿ ಮುಂಭಾಗದಲ್ಲಿರುವ ಅಪ್ಪಾಜಿ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಗಣ್ಯರು, ಧಾರ್ಮಿಕ ಮುಖಂಡರು, ಕಾರ್ಮಿಕ ಹಾಗು ರೈತ ಮುಖಂಡರು, ಮಹಿಳಾ ಸಂಘಟನೆಗಳ ಪ್ರಮುಖರು, ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಕ್ಷೇತ್ರದ ಅಭಿಮಾನಿಗಳು, ಕಾರ್ಯಕರ್ತರು ಅಂತಿಮ ದರ್ಶನ ಪಡೆದರು. 
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಬಿ.ಕೆ ಸಂಗಮೇಶ್ವರ್, ಕೆ.ಬಿ ಅಶೋಕ್‌ನಾಯ್ಕ್, ಮಾಜಿ ಶಾಸಕಿ ಶಾರದ ಪೂರ‍್ಯಾನಾಯ್ಕ, ಜೆಡಿಎಸ್ ಪಕ್ಷದ ಮುಖಂಡ ಎಂ. ಶ್ರೀಕಾಂತ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ ಮಂಜುನಾಥಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಸದಸ್ಯರಾದ ಜೆ.ಪಿ ಯೋಗೇಶ್, ಎಸ್. ಮಣಿಶೇಖರ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ಡಿ. ಲಕ್ಷ್ಮೀದೇವಿ ಸೇರಿದಂತೆ ಅನೇಕ ಗಣ್ಯರು, ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಮಿಕರ ಸಂಘಟನೆಗಳು, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಪತ್ರಿಕಾ ಭವನ ಟ್ರಸ್ಟ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಅಪ್ಪಾಜಿ ನಿಧನಕ್ಕೆ ಸಂತಾಪ ಸೂಚಿಸಿವೆ. 
ಕೃತಜ್ಞತೆ : 
ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿಧನದ ಸಂದರ್ಭದಲ್ಲಿ ಎಲ್ಲಾ ರೀತಿಯ ಸಹಕಾರ ನೀಡಿದ ಟಿ.ವಿ ಮಾದ್ಯಮದವರು, ಪತ್ರಕರ್ತರು, ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಸಮಸ್ತೆ ನಾಗರೀಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್ ತಿಳಿಸಿದ್ದಾರೆ.