Friday, October 23, 2020
ಹಿರಿಯ ಕಾರ್ಮಿಕ ಮುಖಂಡ ಎಚ್.ಜಿ ಉಮಾಪತಿ ಸ್ಮರಣೆ
ಭದ್ರಾವತಿ ಅಭಿವೃದ್ಧಿ ವೇದಿಕೆಯಿಂದ ಶ್ರದ್ದಾಂಜಲಿ, ಗೌರವ
ಭದ್ರಾವತಿ ಅಭಿವೃದ್ಧಿ ವೇದಿಕೆ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್.ಜಿ ಉಮಾಪತಿಯವರಿಗೆ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು.
ಭದ್ರಾವತಿ, ಅ. ೨೩: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಉಕ್ಕು ಪ್ರಾಧಿಕಾರದ ಅಧೀನಕ್ಕೆ ವಹಿಸಿಕೊಡುವ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿದ್ದ ಕಾರ್ಮಿಕ ಮುಖಂಡ ದಿವಂಗತ ಎಚ್.ಜಿ ಉಮಾಪತಿಯವರಿಗೆ ಶುಕ್ರವಾರ ಭದ್ರಾವತಿ ಅಭಿವೃದ್ಧಿ ವೇದಿಕೆ ವತಿಯಿಂದ ಶ್ರದ್ದಾಂಜಲಿ ಸಲ್ಲಿಸುವ ಮೂಲಕ ಗೌರವ ಸೂಚಿಸಲಾಯಿತು.
ಇತ್ತೀಚೆಗೆ ಬೆಂಗಳೂರಿನಲ್ಲಿ ಉಮಾಪತಿಯವರು ನಿಧನ ಹೊಂದಿದ್ದರು. ಈ ಹಿನ್ನಲೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಶ್ರದ್ದಾಂಜಲಿ ಸಭೆ ನಡೆಸಿದ ವೇದಿಕೆ ಮುಖಂಡರು ಉಮಾಪತಿಯವರು ಕಾರ್ಖಾನೆಯಲ್ಲಿ ಸಾಮಾನ್ಯ ಕಾರ್ಮಿಕನಾಗಿ ಸೇವೆ ಸಲ್ಲಿಸುವ ಮೂಲಕ ಕಾರ್ಮಿಕ ಮುಖಂಡರಾಗಿ ಬೆಳೆದು ಎಲ್ಲರ ಒಡನಾಡಿಯಾಗಿದ್ದರು. ಅಲ್ಲದೆ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸೇವಾದಳ ಘಟಕದಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು ಎಂದು ಸ್ಮರಿಸಿದರು.
ಶ್ರದ್ದಾಂಜಲಿ ಸಭೆಯಲ್ಲಿ ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ, ಸಹಕಾರ ಧುರೀಣ ಕೆ.ಎನ್ ಭೈರಪ್ಪಗೌಡ, ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಹಿರಿಯ ರಂಗ ಕಲಾವಿದ ಜವರೇಗೌಡ ಕೊರೋನಾ ಸೋಂಕಿಗೆ ಬಲಿ
ಜವರೇಗೌಡ
ಭದ್ರಾವತಿ, ಅ. ೨೩: ನಗರದ ಹಿರಿಯ ರಂಗ ಕಲಾವಿದ, ಮೈಸೂರು ಕಾಗದ ಕಾರ್ಖಾನೆ ಉದ್ಯೋಗಿ ಜವರೇಗೌಡ(೬೭) ಶುಕ್ರವಾರ ನಿಧನ ಹೊಂದಿದರು.
ಪತ್ನಿ, ಮೂವರು ಹೆಣ್ಣು ಮಕ್ಕಳು, ಅಳಿಯಂದಿರನ್ನು ಹೊಂದಿದ್ದರು. ಕೆಲವು ದಿನಗಳ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಜವರೇಗೌಡರವರು ವಿಕಸಂ ರಂಗ ತಂಡದ ಹಿರಿಯ ಕಲಾವಿದರಾಗಿದ್ದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮೃತರ ನಿಧನಕ್ಕೆ ಎಂಪಿಎಂ ಕಾರ್ಖಾನೆ ನೌಕರರು, ರಂಗಕಲಾವಿದರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.
ಮದ್ಯದಂಗಡಿಗಳಲ್ಲಿ ಹೆಚ್ಚಿನ ದರ ವಿರೋಧಿಸಿ ಹೋರಾಟ
ಪೂರಕ ಸ್ಪಂದನೆ : ೯ನೇ ದಿನಕ್ಕೆ ಹೋರಾಟ ತಾತ್ಕಾಲಿಕ ಅಂತ್ಯ
ಜನತಾದಳ(ಸಂಯುಕ್ತ) ವತಿಯಿಂದ ಭದ್ರಾವತಿ ತಾಲೂಕು ಕಚೇರಿ ಮುಂಭಾಗ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ನೇತೃತ್ವದಲ್ಲಿ ಮದ್ಯದಂಗಡಿಗಳಲ್ಲಿ ಅಧಿಕ ದರಕ್ಕೆ ಮದ್ಯ ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ಧರಣಿ ಸತ್ಯಾಗ್ರಹ ಶುಕ್ರವಾರ ತಾತ್ಕಾಲಿಕವಾಗಿ ಅಂತ್ಯಗೊಂಡಿದ್ದು, ಈ ಸಂದರ್ಭದಲ್ಲಿ ತಹಸೀಲ್ದಾರ್ ಎನ್.ಜೆ ನಾಗರಾಜ್‌ರವರಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ: ಜನತಾದಳ(ಸಂಯುಕ್ತ) ವತಿಯಿಂದ ತಾಲೂಕು ಕಚೇರಿ ಮುಂಭಾಗ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ನೇತೃತ್ವದಲ್ಲಿ ಮದ್ಯದಂಗಡಿಗಳಲ್ಲಿ ಅಧಿಕ ದರಕ್ಕೆ ಮದ್ಯ ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ಧರಣಿ ಸತ್ಯಾಗ್ರಹ ಶುಕ್ರವಾರ ತಾತ್ಕಾಲಿಕವಾಗಿ ಅಂತ್ಯಗೊಂಡಿದೆ.
ತಾಲೂಕಿನ ಸಿಎಲ್-೨ ಮತ್ತು ಎಂಎಸ್‌ಐಎಲ್ ಮದ್ಯದಂಗಡಿಗಳಲ್ಲಿ ಸರ್ಕಾರ ನಿಗದಿಪಡಿಸಿರುವ ದರಗಿಂತ ಹೆಚ್ಚಿನ ದರ ವಸೂಲಾತಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಅ.೧೫ ರಿಂದ ಹೋರಾಟ ಆರಂಭಿಸಲಾಗಿತ್ತು. ಹೋರಾಟಕ್ಕೆ ತಾಲ್ಲೂಕು ಆಡಳಿತ ಹಾಗೂ ಅಬಕಾರಿ ಇಲಾಖೆ ಪೂರಕವಾಗಿ ಸ್ಪಂದಿಸಿದ್ದು, ಶೇ.೮೦ರಷ್ಟು ಮದ್ಯದಂಗಡಿಗಳಲ್ಲಿ ಹೆಚ್ಚಿನ ದರ ವಸೂಲಾತಿ ಮಾಡದಂತೆ ಫಲಕಗಳನ್ನು ಹಾಕಲಾಗಿದೆ. ಈ ಹಿನ್ನಲೆಯಲ್ಲಿ ಹೋರಾಟವನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಲಾಗಿದೆ.
ಉಜ್ಜನಿಪುರದ ಎಂಎಸ್‌ಐಎಲ್ ಮದ್ಯದಂಗಡಿ ತೆರವುಗೊಳಿಸುವುದು, ಮೈಕ್ರೋ ಫೈನಾನ್ಸ್‌ಗಳಿಂದ ಮಹಿಳೆಯರಿಗೆ ಉಂಟಾಗುತ್ತಿರುವ ಕಿರುಕುಳ ತಪ್ಪಿಸುವುದು, ಅಬಕಾರಿ ಕಾಯ್ದೆಗಳಿಗೆ ಚ್ಯುತಿ ಬರುವಂತೆ ಹಾಗು ಹೋರಾಟಗಾರರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಅಬಕಾರಿ ನಿರೀಕ್ಷಕ ಧರ್ಮಪ್ಪರನ್ನು ತಕ್ಷಣ ಕರ್ತವ್ಯದಿಂದ ಅಮಾನತುಗೊಳಿಸುವುದು ಸೇರಿದಂತೆ ಇನ್ನೂ ಹಲವು ಬೇಡಿಕೆಗಳು ಬಾಕಿ ಉಳಿದಿದ್ದು, ಈ ಹಿನ್ನಲೆಯಲ್ಲಿ ನ.೪ರಂದು ತಾಲೂಕು ಕಚೇರಿ ಮುಂಭಾಗದಿಂದ ಜಿಲ್ಲಾಧಿಕಾರಿ ಕಛೇರಿ ಮತ್ತು ಜಿಲ್ಲಾ ಅಬಕಾರಿ ಉಪ ಆಯುಕ್ತರ ಕಛೇರಿವರೆಗೂ ಪಾದಯಾತ್ರೆ ನಡೆಸಲಾಗುವುದು. ಹೋರಾಟಕ್ಕೆ ಸಹಕರಿಸಿದ ಪಕ್ಷದ ರಾಜಾಧ್ಯಕ್ಷ ಮಹಿಮಾ ಜೆ. ಪಟೇಲ್, ರಾಜ್ಯ ಸಂಘಟನಾ ಕಾರ್ಯದರ್ಶಿ ಬಾಬು ದೀಪಕ್‌ಕುಮಾರ್ ಸೇರಿದಂತೆ ಎಲ್ಲಾ ಮುಖಂಡರಿಗೆ, ಕಾರ್ಯಕರ್ತರಿಗೆ, ತಾಲೂಕು ಆಡಳಿತಕ್ಕೆ, ಅಬಕಾರಿ ಇಲಾಖೆ ಹಾಗು ಪೊಲೀಸ್ ಇಲಾಖೆಗೆ ಶಶಿಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.
ಹೋರಾಟ ಅಂತ್ಯಗೊಳಿಸುವ ಸಂಬಂಧ ತಹಸೀಲ್ದಾರ್ ಡಾ. ಎನ್.ಜೆ ನಾಗರಾಜ್, ಪೊಲೀಸ್ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆರವರಿಗೆ ಮನವಿ ಸಲ್ಲಿಸಲಾಯಿತು.
ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್, ಸಂದೇಶ್‌ಕುಮಾರ್, ಚಂದ್ರಶೇಖರ್, ಅಬ್ದುಲ್ ಖದೀರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Thursday, October 22, 2020
ಹೆಚ್ಚಿನ ದರಕ್ಕೆ ಮದ್ಯ ಮಾರಾಟ ವಿರುದ್ಧ ಏಕಾಂಗಿ ಹೋರಾಟ
ಬೇಡಿಕೆ ಈಡೇರದಿದ್ದಲ್ಲಿ ನ.೨ರಿಂದ ಅಮರಣಾಂತರ ಉಪವಾಸ ಸತ್ಯಾಗ್ರಹ
ಜನಾತದಳ(ಸಂಯುಕ್ತ) ವತಿಯಿಂದ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ನೇತೃತ್ವದಲ್ಲಿ ಅ.೧೫ರಿಂದ ಭದ್ರಾವತಿ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ನಡೆಸುತ್ತಿರುವ ಹೋರಾಟ ಬುಧವಾರ ೭ ದಿನಗಳನ್ನು ಪೂರೈಸಿದ್ದು, ಏಕಾಂಗಿಯಾಗಿ ಹೋರಾಟ ಮುಂದುವರೆಸಿದ್ದಾರೆ.
ಭದ್ರಾವತಿ: ತಾಲೂಕಿನ ಮದ್ಯದಂಗಡಿಗಳಲ್ಲಿ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡುತ್ತಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಹಾಗು ಬಡ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಮೈಕ್ರೋ ಪೈನಾನ್ಸ್‌ಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜನಾತದಳ(ಸಂಯುಕ್ತ) ವತಿಯಿಂದ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ನೇತೃತ್ವದಲ್ಲಿ ಅ.೧೫ರಿಂದ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ನಡೆಸುತ್ತಿರುವ ಹೋರಾಟ ಗುರುವಾರ ೮ನೇ ದಿನಕ್ಕೆ ಕಾಲಿಟ್ಟಿದೆ.
ಕಳೆದ ೪-೫ ದಿನಗಳಿಂದ ಏಕಾಂಗಿಯಾಗಿ ಹೋರಾಟ ನಡೆಸುತ್ತಿರುವ ಶಶಿಕುಮಾರ್‌ರವರು, ತಾಲೂಕಿನ ಸಿಎಲ್ ೨ ಮದ್ಯದಂಗಡಿ ಮತ್ತು ಎಂಎಸ್‌ಐಎಲ್ ಮದ್ಯದಂಗಡಿಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಎಂಆರ್‌ಪಿ ದರ ಪಡೆಯದೆ ಹೆಚ್ಚಿನ ದರ ಪಡೆಯಲಾಗುತ್ತಿದೆ. ಈ ಸಂಬಂಧ ಹಲವಾರು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಅಲ್ಲದೆ ಉಜ್ಜನಿಪುರ ಆನೆಕೊಪ್ಪದಲ್ಲಿರುವ ಎಂಎಸ್‌ಐಎಲ್ ಮದ್ಯದಂಗಡಿಯಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದು, ಈ ಮದ್ಯದಂಗಡಿ ಸ್ಥಳಾಂತರಿಸುವಂತೆ ಒತ್ತಾಯಿಸಲಾಗಿದೆ. ಅಲ್ಲದೆ ನಿವಾಸಿಗಳು ಅರ್ನಿಷ್ಟಾವಧಿ ಧರಣಿ ಸತ್ಯಾಗ್ರಹ ಸಹ ನಡೆಸಿರುತ್ತಾರೆ. ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಇದೆ ರೀತಿ ಮೈಕ್ರೋ ಫೈನಾನ್ಸ್‌ಗಳು ಸಾಲ ಪಡೆದಿರುವ ಬಡ ಮಹಿಳೆಯರಿಗೆ ತೊಂದರೆ ಕೊಡುತ್ತಿದ್ದು, ಕೊರೋನಾ ಸಂಕಷ್ಟದ ಸಮಯದಲ್ಲಿ ಒಂದೆಡೆ ಉದ್ಯೋಗವಿಲ್ಲದೆ, ಮತ್ತೊಂದೆಡೆ ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿರುವ ಸಂದರ್ಭದಲ್ಲಿ ಸರ್ಕಾರದ ಆದೇಶವಿದ್ದರೂ ಸಹ ಬಲವಂತವಾಗಿ ಕಂತು ಪಾವತಿಸಿಕೊಳ್ಳಲಾಗುತ್ತಿದೆ. ಈ ಸಂಬಂಧ ಸಹ ಹಳೇನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕಳೆದ ೭ ದಿನಗಳಿಂದ ಹೋರಾಟ ನಡೆಸಲಾಗುತ್ತಿದ್ದು, ಈ ನಡುವೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿರುವ ಅಬಕಾರಿ ನಿರೀಕ್ಷಕ ಧರ್ಮಪ್ಪರವರು ದೌರ್ಜನ್ಯದಿಂದ ವರ್ತಿಸುವ ಜೊತೆಗೆ ಹೋರಾಟಗಾರರನ್ನು ಅವಮಾನಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇವರನ್ನು ತಕ್ಷಣ ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಒತ್ತಾಯಿಸಿದರು.
ಒಂದು ವೇಳೆ ಬೇಡಿಕೆ ಈಡೇರದಿದ್ದಲ್ಲಿ ನ.೨ರಿಂದ ಅಮರಣಾಂತರ ಉಪವಾಸ ಸತ್ಯಗ್ರಹ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಮನವಿಗೆ ಪೂರಕವಾಗಿ ಸ್ಪಂದಿಸದೆ ದೌರ್ಜನ್ಯ : ಅಬಕಾರಿ ನಿರೀಕ್ಷಕರನ್ನು ಅಮಾನತುಗೊಳಿಸಲು ಆಗ್ರಹ
ಅಬಕಾರಿ ಇಲಾಖೆ ನಿರೀಕ್ಷಕರ ದೌರ್ಜನ್ಯ ಖಂಡಿಸಿ ತಕ್ಷಣ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಗುರುವಾರ ಭದ್ರಾವತಿಯಲ್ಲಿ ಹೊಸ ಸೇತುವೆ ರಸ್ತೆಯಲ್ಲಿರುವ ಅಬಕಾರಿ ನಿರೀಕ್ಷಕರ ಕಛೇರಿ ಮುಂಭಾಗ ಕರ್ನಾಟಕ ಜನಸೈನ್ಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ: ನಗರದ ಅಬಕಾರಿ ಇಲಾಖೆ ನಿರೀಕ್ಷಕರ ದೌರ್ಜನ್ಯ ಖಂಡಿಸಿ ತಕ್ಷಣ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಗುರುವಾರ ಹೊಸ ಸೇತುವೆ ರಸ್ತೆಯಲ್ಲಿರುವ ಅಬಕಾರಿ ನಿರೀಕ್ಷಕರ ಕಛೇರಿ ಮುಂಭಾಗ ಕರ್ನಾಟಕ ಜನಸೈನ್ಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಜನ್ನಾಪುರದಲ್ಲಿರುವ ಮದ್ಯದಂಗಡಿಯೊಂದರಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆ ಬಗೆಹರಿಸುವಂತೆ ಅಬಕಾರಿ ನಿರೀಕ್ಷಕ ಧರ್ಮಪ್ಪರವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಮನವಿಗೆ ಪೂರಕವಾಗಿ ಸ್ಪಂದಿಸಬೇಕಾದ ನಿರೀಕ್ಷಕರು ಮನವಿ ಸಲ್ಲಿಸಿದವರ ವಿರುದ್ಧ ದೌರ್ಜನ್ಯದಿಂದ ವರ್ತಿಸುತ್ತಿದ್ದಾರೆ. ಕನಿಷ್ಠ ಗೌರವ ನೀಡದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ಹಿನ್ನಲೆಯಲ್ಲಿ ನ್ಯೂಟೌನ್ ಪೊಲೀಸ್ ದೂರು ಸಹ ನೀಡಲಾಗಿದೆ.
ಅಬಕಾರಿ ಕಾಯ್ದೆಗಳನ್ನು ಉಲ್ಲಂಘಿಸಿ ಸಾರ್ವಜನಿಕರೊಂದಿಗೆ ದೌರ್ಜನ್ಯದಿಂದ ವರ್ತಿಸುತ್ತಿರುವ ಧರ್ಮಪ್ಪರವರನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು.
ಕರ್ನಾಟಕ ಜನಸೈನ್ಯ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ನಗರಸಭೆ ಸದಸ್ಯರಾದ ಆರ್. ಕರುಣಾಮೂರ್ತಿ, ಎಂ.ಎ ಅಜಿತ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಿ.ವಿ ಗಿರೀಶ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಮುಖಂಡರಾದ ಅನಂತರಾಮು, ರುದ್ರೇಶ್, ಸಂತೋಷ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕೊರೋನಾಗೆ ಎಂಪಿಎಂ ಹಣಕಾಸು ಅಧಿಕಾರಿ ಬಲಿ
ವಿಶ್ವನಾಥ ಮಲಗನ್
ಭದ್ರಾವತಿ: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ಮುಖ್ಯ ಹಣಕಾಸು ಅಧಿಕಾರಿ ವಿಶ್ವನಾಥ ಮಲಗನ್(೫೯) ಗುರುವಾರ ನಿಧನ ಹೊಂದಿದರು.
ಪತ್ನಿ, ಓರ್ವ ಪುತ್ರ ಹೊಂದಿದ್ದರು. ಹಳೇನಗರದ ವೀರಶೈವ ರುದ್ರಭೂಮಿಯಲ್ಲಿ ಇವರ ಅಂತ್ಯಕ್ರಿಯೆ ನೆರವೇರಿತು. ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಕಳೆದ ೨ ವಾರದ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸರ್ಕಾರ ಜಾರಿಗೊಳಿಸಿದ ೨೦೧೭ ಸ್ವಯಂ ನಿವೃತ್ತಿ ಯೋಜನೆಯಡಿ ಸ್ವಯಂ ನಿವೃತ್ತಿ ಹೊಂದಿದ್ದರು. ನಂತರ ನಿಯೋಜನೆ ಮೇಲೆ ಹುದ್ದೆಯಲ್ಲಿ ಮುಂದುವರೆದಿದ್ದರು. ಕಾರ್ಮಿಕರಿಗೆ ಸ್ವಯಂ ನಿವೃತ್ತಿ ಹಣ ಕೊಡಿಸುವ ಕಾರ್ಯದಲ್ಲಿ ಹೆಚ್ಚಿನ ಶ್ರಮ ವಹಿಸಿದ್ದರು. ಅಲ್ಲದೆ ಹಣಕಾಸಿನ ಇಲಾಖೆಗೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದರು.
ಮೃತರ ನಿಧನಕ್ಕೆ ಎಂಪಿಎಂ ಕಾರ್ಖಾನೆಯ ವಿವಿಧ ಕಾರ್ಮಿಕ ಸಂಘಟನೆಗಳು, ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
Subscribe to:
Posts (Atom)