Wednesday, November 11, 2020

ಕನ್ನಡ ರಾಜ್ಯೋತ್ಸವ ಸಾಂಕೇತಿಕವಾಗಬಾರದು, ನಿತ್ಯದ ಬದುಕಿನಲ್ಲಿ ಕನ್ನಡ ಹೆಚ್ಚು ಬಳಕೆಯಾಗಲಿ : ನ್ಯಾ. ಹೇಮಾವತಿ

ಭದ್ರಾವತಿಯಲ್ಲಿ ಬುಧವಾರ ನ್ಯಾಯಾಲಯದ ಆವರಣದಲ್ಲಿ ತಾಲೂಕು ವಕೀಲರ ಸಂಘ ವತಿಯಿಂದ ಕನ್ನಡರಾಜ್ಯೋತ್ಸವ ನಡೆಯಿತು.
ಭದ್ರಾವತಿ, ನ. ೧೧: ಕನ್ನಡ ರಾಜ್ಯೋತ್ಸವ ಎಂಬುದು ಕೇವಲ ಸಾಂಕೆತಿಕ ಆಚರಣೆಯಾಗಬಾರದು. ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡದ ಬಳಕೆ ಹೆಚ್ಚಾಗಬೇಕೆಂದು ೪ನೇ ಹೆಚ್ಚುವರಿ ಜಿಲ್ಲಾ ಸತ್ರನ್ಯಾಯಾಲಯದ ನ್ಯಾಯಾಧೀಶರಾದ ಹೇಮಾವತಿ ಹೇಳಿದರು.
   ಅವರು ಬುಧವಾರ ನ್ಯಾಯಾಲಯದ ಆವರಣದಲ್ಲಿ ತಾಲೂಕು ವಕೀಲರ ಸಂಘದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ  ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
      ವಕೀಲರು ನ್ಯಾಯಾಲಯದಲ್ಲಿ ಹೆಚ್ಚು ಕನ್ನಡ ಬಳಸುವ ಮೂಲಕ ಕನ್ನಡ ಬಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಸಹಜವಾಗಿ ಕನ್ನಡ ಬಳಸುವ ಮನಸ್ಥಿತಿ ಹೆಚ್ಚಾಗಬೇಕು. ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಂಡಲ್ಲಿ ಕನ್ನಡ ಸಹಜವಾಗಿ ಅಭಿವೃದ್ಧಿ ಹೊಂದುತ್ತದೆ ಎಂದರು.
    ಹಿರಿಯ ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಪ್ರಭಾಕರ್ ಮಾತನಾಡಿ, ಇಂದಿನ ದಿನಗಳಲ್ಲಿ ಬಹುತೇಕರು ಕನ್ನಡಿಗರು ಕನ್ನಡನಾಡಿನ ಪರಂಪರೆ, ಇತಿಹಾಸದ ಬಗ್ಗೆ ತಿಳಿದು ಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳದಿರುವುದು ನಿಜಕ್ಕೂ ವಿಷಾದನೀಯ ಬೆಳವಣಿಗೆಯಾಗಿದೆ. ಕನ್ನಡ ನಾಡಿಗಾಗಿ ಶ್ರಮಿಸಿದ ಮಹನೀಯರ ಹೋರಾಟ, ಆದರ್ಶತನಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕೆಂದರು.  
ಜೆಎಂಎಫ್‌ಸಿ ಪ್ರಧಾನ ನ್ಯಾಯಾಲಯದ ನ್ಯಾಯಾಧೀಶ ಮೋಹನ ಗೌಡ ಮಾತನಾಡಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ವಿ. ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ವೈ.ಜಯರಾಂ ವಂದಿಸಿದರು. ಕಾರ್ಯದರ್ಶಿ ಟಿ.ಎಸ್ ರಾಜುನಿರೂಪಿಸಿದರು.
     ನ್ಯಾಯಾಧೀಶರಾದ ಉಜ್ವಲ ವೀರಣ್ಣ, ಪುರುಷೋತ್ತಮ್, ಚಂದ್ರಶೇಖರ ಬಣಕಾರ್, ಸ್ನೇಹ ಹಾಗೂ ಹಿರಿಯ ವಕೀಲರಾದ ಉಮಾಪತಿ, ಮಂಜಪ್ಪ, ನಾರಾಯಣರಾವ್, ವಾಗಿಶ್, ರೂಪರಾವ್, ವಿದ್ಯಾಬೇಕಲ್, ವಿಮಲ, ಶೋಭ, ಆಶಾ, ವಿನಾಯಕ್, ಪಂಡರಿನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹೆಸರು ನಾಮಕರಣಗೊಳಿಸಲು ಒತ್ತಾಯಿಸಿ ಮನವಿ

ಭದ್ರಾವತಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಹೆಸರು ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ನಾಮಕರಣಗೊಳಿಸಲು ಒತ್ತಾಯಿಸಿ ಶಾಸಕ ಬಿ ಕೆ ಸಂಗಮೇಶ್ವರ್‌ಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ನ. ೧೧: ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಹೆಸರು ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ನಾಮಕರಣಗೊಳಿಸಲು ಒತ್ತಾಯಿಸಿ ಶಾಸಕ ಬಿ ಕೆ ಸಂಗಮೇಶ್ವರ್‌ಗೆ ಮನವಿ ಸಲ್ಲಿಸಲಾಯಿತು.
    ಎಂ.ಜೆ ಅಪ್ಪಾಜಿಯವರು  ೩ ಬಾರಿ ಕ್ಷೇತ್ರದ ಶಾಸಕರಾಗಿದ್ದು, ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ.  ಬಸ್ ನಿಲ್ದಾಣ ನಿರ್ಮಾಣಕ್ಕೂ ಸಾಕಷ್ಟು ಶ್ರಮಿಸಿರುವುದು ತಮಗೂ ತಿಳಿದಿರುವ ವಿಚಾರವಾಗಿದೆ. ಈಗಾಗಲೇ ಅಪ್ಪಾಜಿ ಹೆಸರು ನಾಮಕರಣಗೊಳಿಸಲು ಮಾಜಿ ಶಾಸಕ ವೈಎಸ್‌ವಿ ದತ್ತ ನೇತೃತ್ವದಲ್ಲಿ ಹೋರಾಟ ನಡೆಸಿ ತಾಲೂಕು ಆಡಳಿತಕ್ಕೂ ಮನವಿ ಸಹ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಾವು ಸಹ ಸರ್ಕಾರಕ್ಕೆ ಅಪ್ಪಾಜಿ ಹೆಸರು ನಾಮಕರಣಗೊಳಿಸಲು ಸರ್ಕಾರಕ್ಕೆ ಆಗ್ರಹಿಸಬೇಕೆಂದು ಸಮಿತಿ ವತಿಯಿಂದ ಒತ್ತಾಯಿಸುತ್ತೇವೆಂದು ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮನವಿಯಲ್ಲಿ ತಿಳಿಸಿದ್ದಾರೆ.

Tuesday, November 10, 2020

ಸೈಲ್ ಅಧಿಕಾರಿಗಳು, ಕಾರ್ಮಿಕರಿಗೆ ವಾರಕ್ಕೆ ೩ ದಿನ ಕೆಲಸ : ಉಳಿದ ದಿನಗಳಿಗೆ ವಿನಾಯಿತಿ

ನ.೧ರಿಂದ ನೂತನ ಯೋಜನೆ ಜಾರಿಗೆ : ಎಲ್. ಪ್ರವೀಣ್‌ಕುಮಾರ್


ಭದ್ರಾವತಿ, ನ. ೧೦: ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಉಕ್ಕು ಪ್ರಾಧಿಕಾರ ತನ್ನ ಅಧೀನಕ್ಕೆ ಒಳಪಟ್ಟ ಕಂಪನಿಗಳ ಕಾಯಂ ಅಧಿಕಾರಿಗಳು ಹಾಗು ಕಾರ್ಮಿಕರಿಗೆ ನ.೧ರಿಂದ ನೂತನವಾಗಿ 'ಕೆಲಸದ ಅವಧಿ ಕಡಿಮೆಗೊಳಿಸುವ ಯೋಜನೆ' ಜಾರಿಗೆ ತಂದಿದೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್‌ಕುಮಾರ್ ತಿಳಿಸಿದ್ದಾರೆ.
      ವೃತ್ತಿ ಜೀವನ ಸರಿದೂಗಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದ್ದು, ಈ ಯೋಜನೆಯಡಿ ಅಧಿಕಾರಿಗಳು ಹಾಗು ಕಾರ್ಮಿಕರು ವಾರದಲ್ಲಿ ಕೇವಲ ೩ ದಿನಗಳು ಮಾತ್ರ ಕರ್ತವ್ಯ ನಿರ್ವಹಿಸಬಹುದಾಗಿದೆ. ಉಳಿದ ದಿನಗಳನ್ನು ರಜಾ ದಿನಗಳೆಂದು ಪರಿಗಣನೆ ತೆಗೆದುಕೊಳ್ಳುವುದಿಲ್ಲ. ಇದರಿಂದ ಅಧಿಕಾರಿಗಳ ಹಾಗು ಕಾರ್ಮಿಕರ ಎಚ್‌ಆರ್‌ಎ, ಆರೋಗ್ಯ ಯೋಜನೆ ಸೌಲಭ್ಯಗಳು ಸೇರಿದಂತೆ ಇನ್ನಿತರ ಮೂಲ ಸೌಲಭ್ಯಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
    ಈ ಯೋಜನೆ ಕುರಿತು ಪ್ರಾಧಿಕಾರದ ಅಧ್ಯಕ್ಷ ಅನಿಲ್‌ಕುಮಾರ್ ಚೌಧರಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಯೋಜನೆಯಿಂದ ಅಧಿಕಾರಿಗಳಿಗೆ, ಕಾರ್ಮಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ಪ್ರವೀಣ್‌ಕುಮಾರ್ ಮಾಹಿತಿ ನೀಡಿದ್ದಾರೆ.

ವಿಐಎಸ್‌ಎಲ್ ಕಾರ್ಮಿಕ ಮುಖಂಡ ಆರ್. ಮುಕುಂದಯ್ಯ ನಿಧನ

ಆರ್. ಮುಕುಂದಯ್ಯ
ಭದ್ರಾವತಿ, ನ. ೧೦: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ನಿವೃತ್ತ ಕಾರ್ಮಿಕ ಆರ್. ಮುಕುಂದಯ್ಯ(೬೮) ನಿಧನ ಹೊಂದಿದರು.
      ಮೃತರು ಪತ್ನಿ, ಮೂವರು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಮೃತರ ಅಂತ್ಯಕ್ರಿಯೆ ಮಂಗಳವಾರ ನಗರದ ಬೈಪಾಸ್ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಆರ್. ಮುಕುಂದಯ್ಯ ವಿಐಎಸ್‌ಎಲ್ ಕಾರ್ಮಿಕ ಸಂಘದ ಖಜಾಂಚಿಯಾಗಿ, ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಚಾರಿಟಬಲ್ ಟ್ರಸ್ಟ್‌ನ ಟ್ರಸ್ಟಿಯಾಗಿ ಹಾಗು ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
     ಮೃತರ ನಿಧನಕ್ಕೆ ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಚಾರಿಟಬಲ್ ಟ್ರಸ್ಟ್‌ನ ಛೇರ‍್ಮನ್ ಆರ್. ವೇಣುಗೋಪಾಲ್, ಪ್ರಮುಖರಾದ ಗ್ಸೇವಿಯರ್, ಭವಾನಿ ಶಂಕರ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಿ. ಧರ್ಮಪ್ರಸಾದ್ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

ಕನ್ನಡ ನೆಲ, ಜಲ, ಭಾಷೆ ಪ್ರೀತಿಸುವ ಮನೋಭಾವ ಹೆಚ್ಚಿಸಿಕೊಳ್ಳಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ಸಹಯೋಗದೊಂದಿಗೆ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಹಾಗು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಭಾಷೆಯಾಗಿ ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಭಾರಂಭವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
ಭದ್ರಾವತಿ, ನ. ೧೦: ಪ್ರತಿಯೊಬ್ಬರು ಕನ್ನಡ ನೆಲ, ಜಲ, ಭಾಷೆ ಪ್ರೀತಿಸುವ ಮನೋಭಾವ ಹೆಚ್ಚಿಸಿಕೊಳ್ಳಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಕರೆ ನೀಡಿದರು.
  ಅವರು ಮಂಗಳವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ಸಹಯೋಗದೊಂದಿಗೆ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಹಾಗು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಭಾಷೆಯಾಗಿ ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಭಾರಂಭ ಉದ್ಘಾಟಿಸಿ ಮಾತನಾಡಿದರು.
      ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದಿರುವ ನಾವುಗಳು ಭಾಷೆಯ ಮೇಲಿನ ಪ್ರೀತಿ, ಅಭಿಮಾನ ಎಂದಿಗೂ ಕಡಿಮೆ ಮಾಡಿಕೊಳ್ಳಬಾರದು. ಕನ್ನಡಪರ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರಬೇಕು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕ್ರಿಯಾಶೀಲವಾಗಿ ಮುನ್ನಡೆಯುತ್ತಿದೆ. ಪರಿಷತ್‌ನ ಎಲ್ಲಾ ಚಟುವಟಿಕೆಗಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುವುದಾಗಿ ಭರವಸೆ ನೀಡಿದರು.
ಕನ್ನಡದಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾಥಿಗಳನ್ನು ಗುರುತಿಸಿ ಗೌರವಿಸುವುದು ಒಳ್ಳೆಯ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳು ಕನ್ನಡದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ನಿಟ್ಟಿನಲ್ಲಿ ಗಮನ ಹರಿಸಬೇಕೆಂದರು.
    ಕಸಾಪ ಜಿಲ್ಲಾ ಉಪಾಧ್ಯಕ್ಷ ಎಚ್.ಎನ್ ಮಹಾರುದ್ರಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಸಾಪ ತಾಲೂಕು ಅಧ್ಯಕ್ಷ ಅಪೇಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.


ಭದ್ರಾವತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ಸಹಯೋಗದೊಂದಿಗೆ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಭಾಷೆಯಾಗಿ ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
      ಪೌರಾಯುಕ್ತ ಮನೋಹರ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ನಗರಸಭೆ ಮಾಜಿ ಅಧ್ಯಕ್ಷ ಬಿ.ಟಿ ನಾಗರಾಜ್, ಕಸಾಪ ಮಾಜಿ ಅಧ್ಯಕ್ಷ ಬೇಲಿಮಲ್ಲೂರು ಎಂ. ನಾಗಪ್ಪ, ಶ್ರೀ ಬಸವೇಶ್ವರ ಧರ್ಮಸಂಸ್ಥೆ ಅಧ್ಯಕ್ಷ ಶಿವಕುಮಾರ್, ಸ್ತ್ರೀ ರೋಗ ತಜ್ಞೆ ಡಾ. ವೀಣಾ ಎಸ್ ಭಟ್, ಕಸಾಪ ತಾಲೂಕು ಉಪಾಧ್ಯಕ್ಷ ಡಾ. ಬಿ.ಎಂ ನಾಸಿರ್‌ಖಾನ್, ಕಾರ್ಯದರ್ಶಿಗಳಾದ ಸಿ. ಚನ್ನಪ್ಪ, ವೈ.ಕೆ ಹನುಮಂತಯ್ಯ, ಕೋಶಾಧ್ಯಕ್ಷ ಜಿ.ಎನ್ ಸತ್ಯಮೂರ್ತಿ, ಎ. ತಿಪ್ಪೇಸ್ವಾಮಿ ಇತರರು ಉಪಸ್ಥಿತರಿದ್ದರು. ಅರಳೆಹಳ್ಳಿ ಅಣ್ಣಪ್ಪ ನಿರೂಪಿಸಿದರು. ಹಾಗು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಭಾಷೆಯಾಗಿ ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

Monday, November 9, 2020

ನೀರಿನಲ್ಲಿ ಮುಳುಗಿ ಮೃತಪಟ್ಟ ಇಬ್ಬರು ಆರ್‌ಎಸ್‌ಎಸ್ ಕಾರ್ಯಕರ್ತರ ಕುಟುಂಬಗಳಿಗೆ ತಲಾ ೫ ಲಕ್ಷ ರು. ಪರಿಹಾರ

ಇತ್ತೀಚೆಗೆ ಭದ್ರಾವತಿಯಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕರ್ತರು, ನಗರದ ಜನ್ನಾಪುರ ನಿವಾಸಿಗಳಾದ ರಾಜೇಶ್ ಹಾಗೂ ಮನೋಜ್ ಕುಟುಂಬಗಳಿಗೆ ಸಂಸದ ಬಿ.ವೈ ರಾಘವೇಂದ್ರ ತಲಾ ೫ ಲಕ್ಷ ರು. ಪರಿಹಾರ ಧನ ವಿತರಿಸಿದರು
ದ್ರಾವತಿ, ನ. ೯: ಇತ್ತೀಚೆಗೆ ನೀರಿನಲ್ಲಿ ಮುಳುಗಿ ಮೃತಪಟ್ಟ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕರ್ತರು, ನಗರದ ಜನ್ನಾಪುರ ನಿವಾಸಿಗಳಾದ ರಾಜೇಶ್ ಹಾಗೂ ಮನೋಜ್ ಕುಟುಂಬಗಳಿಗೆ ಸಂಸದ ಬಿ.ವೈ ರಾಘವೇಂದ್ರ ತಲಾ ೫ ಲಕ್ಷ ರು. ಪರಿಹಾರ ಧನ ವಿತರಿಸಿದರು.
ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕ ರಾಕೇಶ್‌ರವರ ಸಹೋದರ ರಾಜೇಶ್ ಹಾಗೂ ೧೦ನೇ ತರಗತಿ ವಿದ್ಯಾರ್ಥಿಯಾಗಿರುವ ಮನೋಜ್ ಕುಟುಂಬಕ್ಕೆ ಚೆಕ್ ವಿತರಿಸಿದ ಸಂಸದರು ಸಾಂತ್ವನ ಹೇಳಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಹಿರಿಯರಾದ ಪಟ್ಟಭಿ ಜೀ , ಬಿಜೆಪಿ ಜಿಲ್ಲಾ ಪ್ರ ಕಾರ್ಯದರ್ಶಿ ಜಿ. ಧರ್ಮಪ್ರಸಾದ್ ,  ತಾಲೂಕು ಮಂಡಲ ಮಾಜಿ ಅಧ್ಯಕ್ಷರಾದ ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್, ತಾಲೂಕು ಪಂಚಾಯತ್ ಸದಸ್ಯ ಕೆ. ಮಂಜುನಾಥ್ ಕದಿರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಒಳಚರಂಡಿ ಮಂಡಳಿ ನಾಮನಿರ್ದೇಶಿತ ಸದಸ್ಯರಾಗಿ ಮಂಗೋಟೆ ರುದ್ರೇಶ್ ನೇಮಕ

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿರುವ ಭದ್ರಾವತಿ ಮಂಗೋಟೆ ರುದ್ರೇಶ್‌ರವರಿಗೆ ತಾಲೂಕು ಪದಾಧಿಕಾರಿಗಳು ಸನ್ಮಾನಿಸುವ ಮೂಲಕ ಅಭಿನಂದಿಸಿದರು.
ಭದ್ರಾವತಿ, ನ. ೯: ಭಾರತೀಯ ಜನತಾ ಪಕ್ಷದ ಯುವ ಮುಖಂಡ, ನಗರದ ನಿವಾಸಿ ಮಂಗೋಟೆ ರುದ್ರೇಶ್‌ರವರನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಾಮನಿರ್ದೇಶಿತ ಸದಸ್ಯರನ್ನಾಗಿ ಸರ್ಕಾರ ನೇಮಕಗೊಳಿಸಿ ಆದೇಶ ಹೊರಡಿಸಿದೆ.
    ಮೂಲತಃ ನ್ಯಾಯವಾದಿಗಳಾಗಿರುವ ಮಂಗೋಟೆ ರುದ್ರೇಶ್‌ರವರು ವಿದ್ಯಾರ್ಥಿ ಪರಿಷತ್ ಹೋರಾಟಗಳಲ್ಲಿ ತೊಡಗಿಸಿಕೊಂಡು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡವರು. ಯುವ ಮೋರ್ಚಾ, ನಂತರ ತಾಲೂಕು ಮಂಡಲ ಗ್ರಾಮಾಂತರ ಅಧ್ಯಕ್ಷರಾಗಿ ಹುದ್ದೆಗಳನ್ನು ಅಲಂಕರಿಸಿದ್ದರು. ಇವರ ಪಕ್ಷ ನಿಷ್ಠೆಯನ್ನು ಗುರುತಿಸಿ ಇದೀಗ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕಗೊಳಿಸಲಾಗಿದೆ.
    ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಳ್ಳಲು ಕಾರಣಕರ್ತರಾದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ ಸೇರಿದಂತೆ ಜಿಲ್ಲೆಯ ಪ್ರಮುಖ ನಾಯಕರಿಗೆ, ಪಕ್ಷದ ಜಿಲ್ಲಾ ಹಾಗು ತಾಲೂಕು ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ಮಂಗೋಟೆ ರುದ್ರೇಶ್ ಕೃತಜ್ಞತೆ ಸಲ್ಲಿಸಿದ್ದಾರೆ.
         ತಾಲೂಕು ಪದಾಧಿಕಾರಿಗಳಿಂದ ಅಭಿನಂದನೆ:
   ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿರುವ ಮಂಗೋಟೆ ರುದ್ರೇಶ್‌ರವರಿಗೆ ತಾಲೂಕು ಪದಾಧಿಕಾರಿಗಳು ಸನ್ಮಾನಿಸುವ ಮೂಲಕ ಅಭಿನಂದಿಸಿದರು.
    ಮುಖಂಡರಾದ ಜಿ. ಧರ್ಮಪ್ರಸಾದ್, ಜಿ. ಆನಂದಕುಮಾರ್, ಸುನಿಲ್‌ಗಾಯಕ್‌ವಾಡ್, ರೇವಣಕರ್, ಎಂ. ಮಂಜುನಾಥ್, ಬಿ.ಎಸ್ ಶ್ರೀನಾಥ್ ಆಚಾರ್, ಬಿ.ಕೆ ಶ್ರೀನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.