Friday, November 27, 2020

ನ.೨೯ರಂದು ವಿದ್ಯುತ್ ಇಲ್ಲ

ಭದ್ರಾವತಿ, ನ.೨೮: ಮೆಸ್ಕಾಂ ನಗರ ಉಪವಿಭಾಗದ ಘಟಕ-೫ರ ವ್ಯಾಪ್ತಿಯ ಮಾಚೇನಹಳ್ಳಿ ೧೧೦/೧೧ ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನ.೨೯ರಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೬ ಗಂಟೆ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
      ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ, ಡೈರಿ ವೃತ್ತ, ಜೇಡಿಕಟ್ಟೆ, ವಿಶ್ವೇಶ್ವರಯ್ಯನಗರ, ಶಿವರಾಮನಗರ, ಬಿ.ಎಚ್ ರಸ್ತೆ, ರಾ.ಮೀ.ಪೋ.ಪ ವಸತಿ ಗೃಹಗಳು, ಜಯಂತಿ ಗ್ರಾಮ, ರಾಮಮೂರ್ತಿ ಮಿನರಲ್ಸ್, ಬಾಳೇನಹಳ್ಳಿ, ಗೌಡ್ರಕೊಪ್ಪ, ವೀರಭದ್ರ ಕಾಲೋನಿ, ಹೊನ್ನವಿಲೆ, ಶೆಟ್ಟಿಹಳ್ಳಿ, ಮಾಚೇನಹಳ್ಳಿ, ಮಲ್ನಾಡ್ ಆಸ್ಪತ್ರೆ, ಅರೇಕೊಪ್ಪ, ಬಿದರೆ, ನಿದಿಗೆ, ದುಮ್ಮಳ್ಳಿ, ಓತಿಘಟ್ಟ, ಸೋಗಾನೆ, ಆಚಾರಿ ಕ್ಯಾಂಪ್, ರೆಡ್ಡಿ ಕ್ಯಾಂಪ್ ಹಾಗು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಕೋರಲಾಗಿದೆ.


ಓಬಿಸಿ ಮೋರ್ಚಾ ಕಾರ್ಯಕಾರಿಣಿ ಸಭೆ, ನ.೨೮ರಿಂದ ೨ ದಿನ ಪ್ರಶಿಕ್ಷಣ ವರ್ಗ

ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಓಬಿಸಿ ಮೋರ್ಚಾದ ಕಾರ್ಯಕಾರಿಣಿ ಸಭೆಯನ್ನು ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಾಲತೇಶ್ ಉದ್ಘಾಟಿಸಿದರು.
ಭದ್ರಾವತಿ, ನ. ೨೭: ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಓಬಿಸಿ ಮೋರ್ಚಾದ ಕಾರ್ಯಕಾರಿಣಿ ಸಭೆ ನಡೆಯಿತು.
    ಸಭೆಯನ್ನು ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಾಲತೇಶ್ ಉದ್ಘಾಟಿಸಿದರು. ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್, ಜಿಲ್ಲಾ ಕಾರ್ಯದರ್ಶಿ ಪ್ರದೀಪ್, ತಾಲೂಕು ಮಂಡಲದ ಅಧ್ಯಕ್ಷ ಎಂ. ಪ್ರಭಾಕರ್, ತಾಲೂಕು ಓಬಿಸಿ ಮೋರ್ಚಾ ಅಧ್ಯಕ್ಷ ಸುಬ್ರಹ್ಮಣಿ, ಪ್ರಧಾನ ಕಾರ್ಯದರ್ಶಿ ಆರ್.ಪಿ ವೆಂಕಟೇಶ್, ರಾಜಶೇಖರ್, ಮಂಜಪ್ಪ ಸೇರಿದಂತೆ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
          ನ.೨೮ರಂದು ಪ್ರಶಿಕ್ಷಣ ವರ್ಗ :
     ಪಕ್ಷದ ತಾಲೂಕು ಮಟ್ಟದ ಪ್ರಶಿಕ್ಷಣ ವರ್ಗ ನ.೨೮ ಮತ್ತು ೨೯ ಎರಡು ದಿನ ಜನ್ನಾಪುರದ ಮಲ್ಲೇಶ್ವರ ಸಮುದಾಯ ಭವನದಲ್ಲಿ ನಡೆಯಲಿದೆ. ನ.೨೮ರ ಬೆಳಿಗ್ಗೆ ೯.೩೦ಕ್ಕೆ ಜಿಲ್ಲಾಧ್ಯಕ್ಷ ಮೇಘರಾಜ್ ಉದ್ಘಾಟಿಸಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮಾಧ್ಯಮ್ ಪ್ರಮುಖ್ ಬಿ.ಎಸ್ ಶ್ರೀನಾಥ್ ಕೋರಿದ್ದಾರೆ.


ಛಲವಾದಿಗಳ ಸಮಾಜದ ವಾರ್ಷಿಕ ಮಹಾಸಭೆ

ಭದ್ರಾವತಿ ನ್ಯೂಟೌನ್ ಜಯಶ್ರೀ ವೃತ್ತದ ಸಮೀಪದಲ್ಲಿರುವ ತಾಲ್ಲೂಕು ಛಲವಾದಿಗಳ(ಪರಿಶಿಷ್ಟ ಜಾತಿ) ಸಮಾಜದ ಸರ್ವ ಸದಸ್ಯರ ೧೯ನೇ ವಾರ್ಷಿಕ ಸಭೆ ಸಂಘದ ಅಧ್ಯಕ್ಷ ಚನ್ನಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.
ಭದ್ರಾವತಿ, ನ. ೨೭ : ನಗರದ ನ್ಯೂಟೌನ್ ಜಯಶ್ರೀ ವೃತ್ತದ ಸಮೀಪದಲ್ಲಿರುವ ತಾಲ್ಲೂಕು ಛಲವಾದಿಗಳ(ಪರಿಶಿಷ್ಟ ಜಾತಿ) ಸಮಾಜದ ಸರ್ವ ಸದಸ್ಯರ ೧೯ನೇ ವಾರ್ಷಿಕ ಸಭೆ ಸಂಘದ ಅಧ್ಯಕ್ಷ ಚನ್ನಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.
   ಸಮಾಜದ ಕಾರ್ಯ ಚಟುವಟಿಕೆಗಳ ಹಾಗು ಲೆಕ್ಕಪತ್ರಗಳ ವರದಿ ಮಂಡಿಸಲಾಯಿತು. ಇದಕ್ಕೂ ಮೊದಲು ಸಂವಿಧಾನ ದಿನದ ಅಂಗವಾಗಿ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
    ಸಮಾಜದ ಪ್ರಮುಖರಾದ ಪ್ರಧಾನ ಕಾರ್ಯದರ್ಶಿ ಎಚ್.ಎಂ ಮಹಾದೇವಯ್ಯ, ಕಾರ್ಯದರ್ಶಿ ಲೋಕೇಶ್ ಮಾಳಿನಹಳ್ಳಿ, ಎಸ್.ಎಸ್ ಭೈರಪ್ಪ, ಡಿ. ನರಸಿಂಹಮೂರ್ತಿ, ಹುಚ್ಚಯ್ಯ ಹಾಗು ಸಮಾಜದ ಮಹಿಳಾ ಸದಸ್ಯರುಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ನ.೩೦, ಡಿ.೪ರಂದು ನಗರಸಭೆ ವ್ಯಾಪ್ತಿಯಲ್ಲಿರುವ ೨ ಕೆರೆಗಳ ಅಳತೆ ಕಾರ್ಯ, ಬೌಂಡರಿ ನಿಗದಿ

ಭದ್ರಾವತಿ ನಗರಸಭೆ ಪೌರಾಯುಕ್ತ ಮನೋಹರ್ ಜುಲೈ ತಿಂಗಳಿನಲ್ಲಿ ಜನ್ನಾಪುರ ಕೆರೆಯನ್ನು ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳೊಂದಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಸಂದರ್ಭ.
ಭದ್ರಾವತಿ, ನ. ೨೭: ನಗರದ ಜನ್ನಾಪುರದ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಛೇರ‍್ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್‌ರವರು ಕಳೆದ ಸುಮಾರು ೧ ವರ್ಷದಿಂದ ನಡೆಸುತ್ತಿದ್ದ ಹೋರಾಟ ಯಶಸ್ವಿಯಾಗಿದ್ದು, ನಿರಂತರ ಹೋರಾಟದ ಪರಿಣಾಮ ತಾಲೂಕು ಆಡಳಿತ ಇದೀಗ ನಗರಸಭೆ ವ್ಯಾಪ್ತಿಯಲ್ಲಿನ ಕೆರೆಗಳ ಅಳತೆ ಕಾರ್ಯ ಕೈಗೊಂಡು ಬೌಂಡರಿ ನಿಗದಿಪಡಿಸಲು ಮುಂದಾಗಿದೆ.
    ನಗರಸಭೆ ವ್ಯಾಪ್ತಿಯಲ್ಲಿರುವ ಕೆರೆಗಳ ಅಳತೆ ಕಾರ್ಯ ಕೈಗೊಂಡು ಬೌಂಡರಿ ನಿಗದಿಪಡಿಸುವ ಮೂಲಕ ಅಭಿವೃದ್ಧಿಪಡಿಸಿ ಬೇಸಿಗೆಯಲ್ಲಿ ರೈತರಿಗೆ, ಜಾನುವಾರುಗಳಿಗೆ ಅವಕಾಶ ಕಲ್ಪಿಸಿಕೊಡಬೇಕು. ಅಲ್ಲದೆ ಕೆಲವು ಕೆರೆಗಳನ್ನು ಪ್ರವಾಸಿ ತಾಣಗಳಾಗಿ ಪರಿವರ್ತಿಸುವಂತೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಸಂಸದರಿಗೆ, ಸ್ಥಳೀಯ ಶಾಸಕರಿಗೆ, ಜಿಲ್ಲಾಡಳಿತ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ, ತಾಲೂಕು ಆಡಳಿತ ಮತ್ತು ನಗರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಿದ್ದರು.
    ಪೌರಾಯುಕ್ತ ಮನೋಹರ್ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿವಹಿಸಿ ತಾಲೂಕು ಆಡಳಿತ ಬೌಂಡರಿ ನಿಗದಿಪಡಿಸಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಈ ಹಿನ್ನಲೆಯಲ್ಲಿ ತಾಲೂಕು ಆಡಳಿತ ಮೊದಲ ಹಂತವಾಗಿ ನ.೩೦ರಂದು ಬೆಳಿಗ್ಗೆ ೧೧ ಗಂಟೆಗೆ ಹಳೇಸೀಗೇಬಾಗಿ ಸರ್ವೆ ನಂ.೩೩ರ ಸುಮಾರು ೧೮ ಎಕರೆ ೧೯ ಗುಂಟೆ ವಿಸ್ತೀರ್ಣವುಳ್ಳ ಸರ್ಕಾರಿ ಕೆರೆ ಹಾಗು ಡಿ.೪ರಂದು ಬೆಳಿಗ್ಗೆ ೧೧ ಗಂಟೆಗೆ ಸರ್ವೆ ನಂಬರ್ ೭೦ರ ಸುಮಾರು ೪೫ ಎಕರೆ ೨೦ ಗುಂಟೆ ವಿಸ್ತೀರ್ಣವುಳ್ಳ ಜನ್ನಾಪುರ ಕೆರೆ ಅಳತೆ ಕಾರ್ಯ ಕೈಗೊಂಡು ಬೌಂಡರಿ ನಿಗದಿಪಡಿಸಲು ಮುಂದಾಗಿದೆ.  

ನ.೨೯ರಂದು ೫೬ನೇ ವರ್ಷದ ಕಾರ್ತಿಕ ದೀಪೋತ್ಸವ


ಭದ್ರಾವತಿ, ನ. ೨೭: ಇಲ್ಲಿಗೆ ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹನ.೨೯ರಂದು ೩ನೇ ವರ್ಷದ ಗುರು ಪೂಜೆ ಹಾಗು ೫೬ನೇ ವರ್ಷದ ಕಾರ್ತಿಕ ದೀಪೋತ್ಸವ ನ.೨೯ರಂದು ಸಂಜೆ ೬ ಗಂಟೆಗೆ ಹಮ್ಮಿಕೊಳ್ಳಲಾಗಿದೆ.
    ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಈ ಬಾರಿ ಸರಳವಾಗಿ ಆಚರಿಸಲಾಗುತ್ತಿದ್ದು, ಭಕ್ತಾಧಿಗಳು ಸಹಕರಿಸಬೇಕೆಂದು ನಗರದ ತರೀಕೆರೆ ರಸ್ತೆಯಲ್ಲಿರುವ ಶ್ರೀ ಶಿವಸುಬ್ರಮಣ್ಯ ಸ್ವಾಮಿ ಆಶ್ರಮದ ಆಡಳಿತ ಮಂಡಳಿ ತಿಳಿಸಿದೆ.


Thursday, November 26, 2020

ವಚನ ಸಾಹಿತ್ಯ, ದಾಸ ಸಾಹಿತ್ಯ ಕನ್ನಡ ನಾಡಿನಲ್ಲಿ ಜೀವಂತ ಸಾಹಿತ್ಯಗಳಾಗಿ ಉಳಿದಿವೆ : ಎಚ್.ಎನ್ ಮಹಾರುದ್ರ

ಭದ್ರಾವತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗುರುವಾರ ದತ್ತಿ ದಾನಿಗಳಾದ ವಿಜಾಪುರ ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಡಾ. ಎಸ್.ಎಸ್ ವಿಜಯರವರ ಸಹಕಾರೊಂದಿಗೆ ಕಾಗದನಗರದ ಆಂಗ್ಲ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ದತ್ತಿ ಕಾರ್ಯಕ್ರಮವನ್ನು ಎಂಪಿಎಂ ಶಿಕ್ಷಣ ಸಂಸ್ಥೆಗಳ ಕೋಶಾಧ್ಯಕ್ಷ ಎಂ.ಡಿ ರವಿಕುಮಾರ್ ಉದ್ಘಾಟಿಸಿದರು. 
ಭದ್ರಾವತಿ, ನ. ೨೬: ವಚನ ಸಾಹಿತ್ಯ, ದಾಸ ಸಾಹಿತ್ಯ ಸೇರಿದಂತೆ ಹಲವು ಸಾಹಿತ್ಯಗಳು ಕನ್ನಡ ನಾಡಿನಲ್ಲಿ ಎಂದಿಗೂ ಜೀವಂತವಾಗಿ ಉಳಿದುಕೊಳ್ಳುವ ಸಾಹಿತ್ಯಗಳಾಗಿವೆ. ಈ ಹಿನ್ನಲೆಯಲ್ಲಿ ಕನ್ನಡಕ್ಕೆ ಶಾಸ್ತ್ರಿಯ ಸ್ಥಾನಮಾನ ಲಭಿಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಎಚ್.ಎನ್ ಮಹಾರುದ್ರ ತಿಳಿಸಿದರು.
      ಅವರು ಗುರುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದತ್ತಿ ದಾನಿಗಳಾದ ವಿಜಾಪುರ ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಡಾ. ಎಸ್.ಎಸ್ ವಿಜಯರವರ ಸಹಕಾರೊಂದಿಗೆ ಕಾಗದನಗರದ ಆಂಗ್ಲ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ದತ್ತಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
     ಕನ್ನಡಕ್ಕೆ ತನ್ನದೇ ಆದ ಪರಂಪರೆ ಇದ್ದು, ವೈಭವದ ಭಾಷೆಯಾಗಿದೆ. ವಿಶೇಷವಾದ ಸ್ಥಾನಮಾನ ನೀಡಲಾಗಿದೆ. ಇಂತಹ ಭಾಷೆ ಮೇಲಿನ ಅಭಿಮಾನ ಹೆಚ್ಚಾಗಬೇಕು. ಎಲ್ಲಾ ಭಾಷೆಗಳನ್ನು ಕಲಿಯಬೇಕು. ಆದರೆ ಮಾತೃ ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದರು.
ವಚನ ಸಾಹಿತ್ಯ ಎಂಬುದು ಬದುಕಿನ ಸಾಹಿತ್ಯವಾಗಿದೆ. ನಮ್ಮ ಬದುಕು ವಚನಗಳ ಆಶಯದಂತೆ ರೂಪುಕೊಳ್ಳಬೇಕು. ಈ ಹಿನ್ನಲೆಯಲ್ಲಿ ನಾವುಗಳು ವಚನಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕೆಂದರು.
   ಪ್ರಾಂಶುಪಾಲ ಆರ್. ಸತೀಶ್ ಮಾತನಾಡಿ, ದೇಶದ ಸಂವಿಧಾನ ಎಲ್ಲರೂ ಸಮಾನತೆ, ಸಹಬಾಳ್ವೆಯಿಂದ ಬದುಕುವಂತಹ ಅವಕಾಶ ಕಲ್ಪಿಸಿಕೊಟ್ಟಿದೆ. ಇಂತಹ ಸಂವಿಧಾನವನ್ನು ನಾವೆಲ್ಲರೂ ಗೌರವಿಸಬೇಕೆಂದು ಸಂವಿಧಾನ ಪ್ರತಿಜ್ಞಾ ವಿಧಿ ಬೋಧಿಸಿದರು.
ಕುರಿತು ಬೊಮ್ಮನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎ. ತಿಪ್ಪೇಸ್ವಾಮಿ ವಚನಗಾರ್ತಿಯರ ವಚನ ಗಾಯನ ಮತ್ತು ವ್ಯಾಖ್ಯಾನ ಕುರಿತು ಉಪನ್ಯಾಸ ನೀಡಿದರು.
    ಎಂಪಿಎಂ ಶಿಕ್ಷಣ ಸಂಸ್ಥೆಗಳ ಕೋಶಾಧ್ಯಕ್ಷ ಎಂ.ಡಿ ರವಿಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಅಧ್ಯಕ್ಷ ಅಪೇಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಜಿ.ಎನ್ ಲಕ್ಷ್ಮೀಕಾಂತ, ಮುಖ್ಯೋಪಾಧ್ಯಾಯಿನಿ ಭಾರತಿ, ಕಸಾಪ ಕಾರ್ಯದರ್ಶಿಗಳಾದ ಸಿ. ಚನ್ನಪ್ಪ, ವೈ.ಕೆ ಹನುಮಂತಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಐಎಸ್‌ಎಲ್ ಕಾರ್ಖಾನೆ ಖಾಸಗಿಕರಣ ವಿರೋಧಿಸಿ ಪ್ರತಿಭಟನೆ

ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಖಾಸಗಿಕರಣ ವಿರೋಧಿಸಿ ಗುರುವಾರ ಕಾರ್ಖಾನೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ, ನ. ೨೬: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ  ಖಾಸಗಿಕರಣಗೊಳಿಸಬಾರದು ಹಾಗು ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುರುವಾರ ಕಾರ್ಖಾನೆ ಮುಂಭಾಗ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
    ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು, ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ಬಂಡವಾಳ ಶಾಹಿಗಳಿಗೆ ಮಾರಾಟ ಮಾಡುತ್ತಿದೆ. ಅಲ್ಲದೆ ಹಲವಾರು ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ಕಾರ್ಮಿಕ ವರ್ಗವನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಕಾರ್ಮಿಕ ಮುಖಂಡರು ಆರೋಪಿಸಿದರು.
     ವಿಐಎಸ್‌ಎಲ್ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಖಾಸಗಿಕರಣಗೊಳಿಸಬಾರದು. ಇದರಿಂದ ಭವಿಷ್ಯದಲ್ಲಿ ಕಾರ್ಖಾನೆ ಶಾಶ್ವತವಾಗಿ ಮುಚ್ಚಿ ಹೋಗಲಿದೆ. ಕಾರ್ಮಿಕರು ಬೀದಿ ಪಾಲಾಗಲಿದ್ದು, ಉದ್ಯೋಗ ಹುಡುಕಿಕೊಂಡು ಬೇರೆಡೆಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದೀಗ ನಿವೃತ್ತ ಕಾರ್ಮಿಕರು ವಾಸಿಸುತ್ತಿರುವ ಮನೆಗಳನ್ನು ಖಾಲಿ ಮಾಡಿಸುವ ಹುನ್ನಾರ ನಡೆಸಲಾಗುತ್ತಿದ್ದು, ೩೦-೪೦ ವರ್ಷ ಕಾರ್ಖಾನೆಯಲ್ಲಿ ದುಡಿದ ಕಾರ್ಮಿಕರು, ಕುಟುಂಬ ವರ್ಗದವರು ಅತಂತ್ರರಾಗಿ ಬದುಕುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತಕ್ಷಣ ಖಾಸಗಿಕರಣ ಪ್ರಕ್ರಿಯೆ ಕೈಬಿಡಬೇಕು. ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಬೇಕು. ಕಾರ್ಮಿಕರಿಗೆ ನಿರಂತರವಾಗಿ ಕೆಲಸ ನೀಡಬೇಕೆಂದು ಆಗ್ರಹಿಸಿದರು.
    ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಪದಾಧಿಕಾರಿಗಳಾದ ಬಸಂತಕುಮಾರ್, ಅಮೃತ್, ರಾಘವೇಂದ್ರ, ಮೋಹನ್, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ರಾಕೇಶ್, ನಿವೃತ್ತ ಕಾರ್ಮಿಕರ ಸಂಘದ ನರಸಿಂಹಚಾರ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸುರೇಶ್ ಸೇರಿದಂತೆ ಕಾಯಂ ಮತ್ತು ಗುತ್ತಿಗೆ ಕಾರ್ಮಿಕರು, ಇನ್ನಿತರರು ಪಾಲ್ಗೊಂಡಿದ್ದರು.