![](https://blogger.googleusercontent.com/img/b/R29vZ2xl/AVvXsEiImDLndc0JFpdwGj4Dc6e2Ov0uwRnKpzcaaS9UkRq4c8uPlA3tmGdV3LyClD6r-Am5AxDo2FMmW2JTUoIcLT9rQloKm3etYHZki6vXnr-W6aPRxdUGeqRBfOQU_-_-EPTdnbAGKuKQAnro/w640-h256-rw/D21-BDVT-761394.jpg)
ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜಯ ಕರ್ನಾಟಕ ತಾಲೂಕು ಘಟಕದ ಪುನರ್ ರಚನೆ ಹಾಗು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
ಭದ್ರಾವತಿ, ಫೆ. ೨೧: ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕರಾದ ದಿವಂಗತ ಮುತ್ತಪ್ಪ ರೈ ಕುರಿತು ಸಮಾಜದಲ್ಲಿ ತಪ್ಪು ಪರಿಕಲ್ಪನೆ ಮೂಡಿಸಲಾಗಿದ್ದು, ವಾಸ್ತವವಾಗಿ ಮುತ್ತಪ್ಪ ರೈ ಸಾಮಾಜಿಕ ಕಾಳಜಿ ಹೊಂದಿದ್ದರು ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
ಅವರು ಭಾನುವಾರ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜಯ ಕರ್ನಾಟಕ ತಾಲೂಕು ಘಟಕದ ಪುನರ್ ರಚನೆ ಹಾಗು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮುತ್ತಪ್ಪ ರೈ ನೆಲ, ಜಲ, ಭಾಷೆ ಅಭಿಮಾನದ ಜೊತೆಗೆ ಬಡವರು, ಶೋಷಿತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಸಮಾಜದಲ್ಲಿ ಹಣ ಹೊಂದಿರುವ ಸಾಕಷ್ಟು ಜನರಿದ್ದಾರೆ. ಆದರೆ ಬಹುತೇಕ ಮಂದಿ ತಾವು ದುಡಿದ ಹಣ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುವುದಿಲ್ಲ. ಮುತ್ತಪ್ಪ ರೈ ಯಾರು ಸಹ ನಿರೀಕ್ಷಿಸಲಾರದಷ್ಟು ಸಾವಿರಾರು ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದಾರೆ. ಅವರು ಸಮಾಜದಲ್ಲಿ ಅಕ್ರಮ, ಅನೀತಿ ಮಾರ್ಗಗಳಲ್ಲಿ ತೊಡಗಿರುವವರ ವಿರುದ್ಧ ಹೋರಾಟ ನಡೆಸಿದರು ಹೊರತು ಅವರಿಂದ ಸಮಾಜಕ್ಕೆ ಯಾವುದೇ ರೀತಿ ಕೆಡಕು ಉಂಡಾಗಿಲ್ಲ. ಈ ಹಿನ್ನಲೆಯಲ್ಲಿ ಅವರು ತೋರಿಸಿಕೊಟ್ಟಿರುವ ಮಾರ್ಗದಲ್ಲಿ ಪ್ರತಿಯೊಬ್ಬರು ಮುನ್ನಡೆಯುವ ಜೊತೆಗೆ ಸಂಘಟನೆಯನ್ನು ಮತ್ತಷ್ಟು ಸದೃಢಗೊಳಿಸಬೇಕೆಂದರು.
ಮುಖಂಡರಾದ ಸಿ.ಎಂ ಖಾದರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಹಾಗು ಹಿರಿಯ ನಗರಸಭಾ ಸದಸ್ಯ ವಿ. ಕದಿರೇಶ್ ಮಾತನಾಡಿ, ಜಯ ಕರ್ನಾಟಕ ಸಂಘಟನೆ ಇನ್ನೂ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಸಂಘಟನೆ ಮುಂದಾಳತ್ವವಹಿಸಿಕೊಂಡವರು ಸಂಘಟನೆಯನ್ನು ಒಳ್ಳೆಯ ಮಾರ್ಗದಲ್ಲಿ ಕೊಂಡೊಯ್ಯಲು ಶಕ್ತಿಮೀರಿ ಶ್ರಮಿಸಬೇಕು. ಯಾವುದೇ ಕಾರಣಕ್ಕೂ ಅಕ್ರಮ, ಅನೀತಿ ಮಾರ್ಗಗಳಿಗೆ ಅವಕಾಶ ಕಲ್ಪಿಸಿಕೊಡಬಾರದು ಎಂದರು.
ಸಂಘಟನೆ ರಾಜ್ಯಾಧ್ಯಕ್ಷ ಡಾ. ಬಿ.ಎನ್ ಜಗದೀಶ್, ರಾಜ್ಯ ಕಾರ್ಯಾಧ್ಯಕ್ಷ ಎಚ್. ರಾಮಚಂದ್ರಯ್ಯ, ರಾಜ್ಯ ಉಪಾಧ್ಯಕ್ಷರಾದ ಮುನಿಸ್ವಾಮಿ, ಹರೀಶ್, ಜಿಲ್ಲಾಧ್ಯಕ್ಷ ಡಾ. ಜೆ.ಆರ್ ದೀಪಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಅರ್ ಶಿವಕುಮಾರ್ ಅದ್ವಾನಿ, ಕಾರ್ಯಾಧ್ಯಕ್ಷ ಅಬ್ದುಲ್ ರಹೀಮ್, ಮಹಿಳಾ ಘಟಕದ ಅಧ್ಯಕ್ಷೆ ನಾಜೀಮಾ, ತ್ಯಾಗರಾಜ್, ಡಿ.ಟಿ ಶಶಿಕುಮಾರ್, ಮುಕುಂದ, ಮುಖಂಡರಾದ ಬಾಲಕೃಷ್ಣ, ಚನ್ನಪ್ಪ, ಬಿ.ಎಸ್ ಬಸವೇಶ್ವರ್, ಶೋಭ ರವಿಕುಮಾರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳಾಗಿ ಆರ್. ಅರುಣ್, ಪಿ. ಶರವಣ, ಜೀವನ್, ಪಿ.ಬಿ ವಿನಯ್ ಸೇರಿದಂತೆ ಇನ್ನಿತರರು ಪದಗ್ರಹಣ ಸ್ವೀಕರಿಸಿದರು.
ಇದಕ್ಕೂ ಮೊದಲು ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದಿಂದ ಲಯನ್ಸ್ ಕ್ಲಬ್ ವರೆಗೂ ಬೈಕ್ ರ‍್ಯಾಲಿ ನಡೆಸಲಾಯಿತು. ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.