Sunday, October 31, 2021

ತಾಲೂಕು ಆಡಳಿತದಿಂದ ಕನ್ನಡ ರಾಜ್ಯೋತ್ಸವ


    ಭದ್ರಾವತಿ, ಅ. ೩೧: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನ.೧ರಂದು ಹಳೇನಗರದ ಕನಕಮಂಟಪ ಮೈದಾನದಲ್ಲಿ ೬೬ನೇ ಕನ್ನಡ ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿದೆ.
    ಬೆಳಿಗ್ಗೆ ೮ ಗಂಟೆಗೆ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಅಂಬೇಡ್ಕರ್ ವೃತ್ತದಿಂದ ಕನಕ ಮಂಟಪ ಮೈದಾನದವರೆಗೂ ತಾಯಿ ಶ್ರೀ ಭುವನೇಶ್ವರಿ ದೇವಿ ಮೆರವಣಿಗೆ ಹಾಗು ೯ ಗಂಟೆಗೆ ಧ್ವಜಾರೋಹಣ ನಡೆಯಲಿದೆ.
    ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಬಿ ಅಶೋಕ್‌ನಾಯ್ಕ್ ಮೆರವಣಿಗೆಗೆ ಚಾಲನೆ ನೀಡಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ವೇದಿಕೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
    ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಸಿ.ಎಂ. ಇಬ್ರಾಹಿಂ, ಆರ್. ಪ್ರಸನ್ನಕುಮಾರ್, ಆಯನೂರು ಮಂಜುನಾಥ್, ಎಸ್.ಎಲ್ ಭೋಜೇಗೌಡ, ಎಸ್. ರುದ್ರೇಗೌಡ, ಭಾರತಿಶೆಟ್ಟಿ, ಎಪಿಎಂಸಿ ಅಧ್ಯಕ್ಷ ಲವೇಶ್‌ಗೌಡ, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಪೇಕ್ಷ ಮಂಜುನಾಥ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಬಸಪ್ಪ, ತಹಸೀಲ್ದಾರ್ ಆರ್. ಪ್ರದೀಪ್, ಪೊಲೀಸ್ ಉಪಾಧೀಕ್ಷಕ ಸಾಹಿಲ್ ಬಾಗ್ಲ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ ಗಾಮನಘಟ್ಟಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ನಗರಸಭೆ ಪೌರಾಯುಕ್ತ ಕೆ. ಪರಮೇಶ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಚುಂಚಾದ್ರಿ ಮಹಿಳಾ ವೇದಿಕೆ ಸರ್ವ ಸದಸ್ಯರ ಸಭೆ, ಕನ್ನಡ ರಾಜ್ಯೋತ್ಸವ

    ಭದ್ರಾವತಿ, ಅ. ೩೧: ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ನ.೧ರಂದು ಬೆಳಿಗ್ಗೆ ೧೦.೩೦ಕ್ಕೆ ಅಪ್ಪರ್ ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ಸರ್ವ ಸದಸ್ಯೆಯರ ಮಹಾಸಭೆ ಹಾಗು ೬೬ನೇ ಕನ್ನಡ ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿದೆ.
    ಸಂಘದ ಗೌರವಾಧ್ಯಕ್ಷೆ ಡಾ. ಅನುರಾಧ ಪಟೇಲ್ ಸಭೆ ಉದ್ಘಾಟಿಸಲಿದ್ದು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ಸಂಘದ ಉಪಾಧ್ಯಕ್ಷೆ ಎಂ.ಬಿ ಸುಮ ಚಂದ್ರಶೇಖರ್, ಕಾರ್ಯದರ್ಶಿ ಲತಾ ಪ್ರಭಾಕರ್, ಸಹ ಕಾರ್ಯದರ್ಶಿ ನಳಿನ ಶ್ರೀನಿವಾಸ್ ಮತ್ತು ಖಜಾಂಚಿ ಶಶಿಕಲಾ ಸೀತರಾಂ ಉಪಸ್ಥಿತರಿರುವರು.
    ಸಂಘದ  ಅಧ್ಯಕ್ಷೆ ಎಂ.ಎಸ್ ಸುಧಾಮಣಿ ವೆಂಕಟೇಶ್ ಅಧ್ಯಕ್ಷತೆ ವಹಿಸಲಿದ್ದು, ಸದಸ್ಯೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.  

ಬಂಡವಾಳಶಾಹಿಗಳಿಗೆ ಮಣೆ ಹಾಕಿರುವ ಕೇಂದ್ರ ಸರ್ಕಾರ : ಡಾ.ಕೆ ಪ್ರಕಾಶ್ ಆರೋಪ

ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್‌ನಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಭಾರತ ಕಮ್ಯುನಿಸ್ಟ್ ಪಕ್ಷದ ೨೩ನೇ ಜಿಲ್ಲಾ ಸಮ್ಮೇಳನವನ್ನು ರಾಜ್ಯ ಸಮಿತಿ ಸದಸ್ಯ ಡಾ. ಕೆ. ಪ್ರಕಾಶ್ ಉದ್ಘಾಟಿಸಿ ಮಾತನಾಡಿದರು.
    ಭದ್ರಾವತಿ, ಅ. ೩೧: ಕೇಂದ್ರ ಸರ್ಕಾರ ದೇಶದಲ್ಲಿ ಬಂಡವಾಳಶಾಹಿಗಳಿಗೆ ಮಣೆ ಹಾಕುವ ಮೂಲಕ  ಶ್ರೀಸಾಮಾನ್ಯರ ಬಗೆಗಿನ ಕಾಳಜಿಯಿಂದ ವಿಮುಖವಾಗುತ್ತಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ರಾಜ್ಯ ಸಮಿತಿ ಸದಸ್ಯ ಡಾ. ಕೆ. ಪ್ರಕಾಶ್ ಆರೋಪಿಸಿದರು.
    ಅವರು ಭಾನುವಾರ ನಗರದ ನ್ಯೂಟೌನ್ ಲಯನ್ಸ್ ಕ್ಲಬ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತ ಕಮ್ಯುನಿಸ್ಟ್ ಪಕ್ಷದ ೨೩ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
    ಕಳೆದ ೨ ವರ್ಷಗಳಿಂದ ಮಹಾಮಾರಿ ಕೋವಿಡ್-೧೯ರ ಪರಿಣಾಮ ಪ್ರಪಂಚದಾದ್ಯಂತ ಶ್ರೀಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ನಡುವೆ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಸೇರಿದಂತೆ ಶ್ರೀಸಾಮಾನ್ಯರಿಗೆ ಅಗತ್ಯವಿರುವ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಈಗಲೂ ತೆರಿಗೆ ಪ್ರಮಾಣ ಇಳಿಸಿ ಶ್ರೀಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಬಗ್ಗೆ ಚಿಂತಿಸದೆ ಬಂಡವಾಳಶಾಹಿಗಳ ಪರವಾಗಿ ನಡೆದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ದೇಶದಲ್ಲಿ ಬಂಡವಾಳಶಾಹಿಗಳಿಗೆ ಮಣೆಹಾಕುತ್ತಿರುವ ಪರಿಣಾಮ ಎಲ್ಲಾ ಕ್ಷೇತ್ರಗಳು ಬಂಡವಾಳಶಾಹಿಗಳ ಹಿಡಿತಕ್ಕೆ ಒಳಗಾಗುತ್ತಿವೆ. ಹಂತ ಹಂತವಾಗಿ ಬಂಡವಾಳಶಾಹಿಗಳು ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ದೇಶದಲ್ಲಿ ಶ್ರೀಸಾಮಾನ್ಯರು ಹಲವು ರೀತಿಯ ಸಂಕಷ್ಟಗಳನ್ನು ಎದುರಿಸುವಂತಾಗಿದೆ ಎಂದರು. ಪ್ರಸ್ತುತ ಕೋವಿಡ್ ಲಸಿಕೆ ನೀಡುವ ವಿಚಾರದಲ್ಲೂ ಕೇಂದ್ರ ಸರ್ಕಾರ ನಿರ್ಲಕ್ಷ್ಯತನ ವಹಿಸುತ್ತಿದೆ. ದೇಶದಲ್ಲಿ ಎಲ್ಲರಿಗೂ ೧ ಮತ್ತು ೨ನೇ ಡೋಸ್ ಲಸಿಕೆ ನೀಡುವುದು ಅನಿವಾರ್ಯವಾಗಿದೆ. ಆದರೆ ಇದೀಗ ನಿಗದಿತ ಸಮಯದಲ್ಲಿ ಅಗತ್ಯವಿರುವಷ್ಟು ಲಸಿಕೆ ಒದಗಿಸಿಟ್ಟುಕೊಳ್ಳುವಲ್ಲಿ ಹಿನ್ನಡೆ ಅನುಭವಿಸುತ್ತಿದೆ ಎಂದು ಆರೋಪಿಸಿದರು.
    ಜಿಲ್ಲಾ ಸಮಿತಿ ಸದಸ್ಯ, ನ್ಯಾಯವಾದಿ ಜಿ.ಎಸ್ ನಾಗರಾಜ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಕಾರ್ಯರ್ಶಿ ಎಂ. ನಾರಾಯಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾ ಸಮಿತಿ ಸದಸ್ಯ ಅನಂತರಾಮು ಸ್ವಾಗತಿಸಿದರು.
    ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯರಾದ ಕೆ. ಪ್ರಭಾಕರನ್ ಮತ್ತು ಕೆ. ಮಂಜಣ್ಣ,  ಬಿಸಿಯೂಟ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಮ್ಮ, ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ತುಳಸಿ ಪ್ರಭಾ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿರಿತರಿದ್ದರು.

Saturday, October 30, 2021

ದಶಕದ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಣ್ಣನೊಂದಿಗೆ ಉಕ್ಕಿನ ನಗರಕ್ಕೆ ಆಗಮಿಸಿದ್ದರು..!

ಹಳೇಯ ನೆನಪು ಮರುಕಳುಹಿಸುವಂತೆ ಮಾಡುತ್ತಿದೆ ಪೊಲೀಸ್ ಸಿಬ್ಬಂದಿಗಳು ತೆಗೆಸಿಕೊಂಡ ಪೋಟೋ


ಭದ್ರಾವತಿಯಲ್ಲಿ ರಾಜ್‌ಕುಮಾರ್ ಕುಟುಂಬಕ್ಕೆ ಪರಿಚಯಸ್ಥರಾಗಿದ್ದ ರವಿ ಎಂಬುವರ ಮನೆಯಲ್ಲಿ ಭೋಜನ ಕೂಟಕ್ಕೆ ಆಗಮಿಸಿದ್ದ ಪುನೀತ್ ರಾಜ್‌ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಅವರೊಂದಿಗೆ ಹಳೇನಗರದ ಪೊಲೀಸ್ ಠಾಣಾಧಿಕಾರಿಯಾಗಿದ್ದ ನಂಜಪ್ಪ ಹಾಗು ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಯಾಗಿದ್ದ ಕುಮಾರ್ ಮತ್ತು ಸಿಬ್ಬಿಂದಿಗಳು ತೆಗೆಸಿಕೊಂಡಿರುವ ಪೋಟೋ ಹಳೇಯ ನೆನಪುಗಳನ್ನು ಮರುಕಳುಹಿಸುವಂತೆ ಮಾಡಿದೆ.
    ಭದ್ರಾವತಿ, ಅ. ೩೦: ಪವರ್ ಸ್ಟಾರ್ ಪುನಿತ್‌ರಾಜ್‌ಕುಮಾರ್ ೨೦೧೦ರಲ್ಲಿ ಜಾಕಿ ಚಲನಚಿತ್ರ ಬಿಡುಗಡೆಗೊಂಡ ಒಂದು ವಾರದ ನಂತರ ನಗರದ ಸಿ.ಎನ್ ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ-ನೇತ್ರಾವತಿ(ಸತ್ಯ) ಚಿತ್ರಮಂದಿರಕ್ಕೆ ಪ್ರಚಾರ ಕಾರ್ಯ ನಿಮಿತ್ತ ಮೊದಲ ಬಾರಿಗೆ ಉಕ್ಕಿನ ನಗರಕ್ಕೆ ಅಣ್ಣ ರಾಘವೇಂದ್ರ ರಾಜ್‌ಕುಮಾರ್ ಜೊತೆ ಆಗಮಿಸಿದ್ದರು.
    ಅಂದು ಚಿತ್ರ ಮಂದಿರ ಮಾಲೀಕರಾಗಿದ್ದ ದಿವಂಗತ ಸತ್ಯನಾರಾಯಣರಾವ್ ಹಾಗು ನಗರದ ಗಣ್ಯರು ಮತ್ತು ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಸ್ವಾಗತ ಕೋರಿದ್ದರು. ಪುನೀತ್ ರಾಜ್‌ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಜಾಕಿ ಚಲನಚಿತ್ರ ವೀಕ್ಷಣೆಗೆ ಬಂದಿದ್ದ ಅಭಿಮಾನಿಗಳು, ಪ್ರೇಕ್ಷಕರೊಂದಿಗೆ ಸಂಭ್ರಮ ಹಂಚಿಕೊಂಡು ತೆರಳಿದ್ದರು ಎಂದು ಸತ್ಯನಾರಾಯಣರಾವ್ ಅವರ ಪುತ್ರ, ಚಿತ್ರಮಂದಿರ ಮಾಲೀಕ ದುಷ್ಯಂತ್‌ರಾಜ್ ನೆನಪಿಸಿಕೊಳ್ಳುತ್ತಾರೆ.
    ಅಂದು ಹಳೇನಗರದ ಪೊಲೀಸ್ ಠಾಣಾಧಿಕಾರಿಯಾಗಿದ್ದ ನಂಜಪ್ಪ ಹಾಗು ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಯಾಗಿದ್ದ ಕುಮಾರ್ ಮತ್ತು ಸಿಬ್ಬಿಂದಿಗಳು ರಾಜ್‌ಕುಮಾರ್ ಕುಟುಂಬಕ್ಕೆ ಪರಿಚಯಸ್ಥರಾಗಿದ್ದ ರವಿ ಎಂಬುವರ ಮನೆಯಲ್ಲಿ ಭೋಜನ ಕೂಟಕ್ಕೆ ಆಗಮಿಸಿದ್ದ ಪುನೀತ್ ರಾಜ್‌ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಅವರೊಂದಿಗೆ ತೆಗೆಸಿಕೊಂಡಿರುವ ಪೋಟೋ ಹಳೇಯ ನೆನಪುಗಳನ್ನು ಮರುಕಳುಹಿಸುವಂತೆ ಮಾಡಿದೆ.
    ಕಲಾ ಸಾಮ್ರಾಟ್ ಎಸ್ ನಾರಾಯಣ್, ಹಾಸ್ಯಕಲಾವಿದ ದೊಡ್ಡಣ್ಣ ಸೇರಿದಂತೆ ಅನೇಕ ಕಲಾವಿದರ ನೆಲೆ ಬೀಡಾಗಿರುವ ಉಕ್ಕಿನ ನಗರಕ್ಕೆ ಪುನಃ ಪುನೀತ್ ರಾಜ್‌ಕುಮಾರ್ ಆಗಮಿಸಲೇ ಇಲ್ಲ.

ಅ.೩೧ರಂದು ಸಿಪಿಐ(ಎಂ) ಜಿಲ್ಲಾ ಸಮ್ಮೇಳನ



    ಭದ್ರಾವತಿ, ಅ. ೩೦: ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಜಿಲ್ಲಾ ಸಮ್ಮೇಳನ ಅ.೩೧ರ ಭಾನುವಾರ ಬೆಳಿಗ್ಗೆ ೧೧ ಗಂಟೆಗೆ ನ್ಯೂಟೌನ್ ಲಯನ್ಸ್ ಕ್ಲಬ್ ಉಂಬ್ಳೆಬೈಲ್ ರಸ್ತೆಯಲ್ಲಿ ನಡೆಯಲಿದೆ.
    ರಾಜ್ಯ ಸಮಿತಿ ಸದಸ್ಯ ಡಾ. ಕೆ. ಪ್ರಕಾಶ್ ಸಮ್ಮೇಳನ ಉದ್ಘಾಟಿಸಲಿದ್ದು, ಜಿಲ್ಲಾ ಸಮಿತಿ ಸದಸ್ಯ, ನ್ಯಾಯವಾದಿ ಜಿ.ಎಸ್ ನಾಗರಾಜ ಅಧ್ಯಕ್ಷತೆ ವಹಿಸಲಿದ್ದಾರೆ.
    ರಾಜ್ಯ ಸಮಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಸಮಿತಿ ಸದಸ್ಯರಾದ ಕೆ. ಪ್ರಭಾಕರನ್, ಕೆ. ಮಂಜಣ್ಣ ಮತ್ತು ಎಂ. ಅನಂತರಾಮು ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಸಮ್ಮೇಳನ ಯಶಸ್ವಿಗೊಳಿಸುವಂತೆ ಜಿಲ್ಲಾ ಸಮಿತಿ ಕಾರ್ಯರ್ಶಿ ಎಂ. ನಾರಾಯಣ ಕೋರಿದ್ದಾರೆ.

ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭದ್ರಾವತಿ ನಗರಸಭೆ ನೂತನ ಅಧ್ಯಕ್ಷೆ ಗೀತಾ ಕೆ.ಜಿ ರಾಜ್‌ಕುಮಾರ್ ಮತ್ತು ಉಪಾಧ್ಯಕ್ಷ ಚನ್ನಪ್ಪ ಅವರಿಗೆ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಹಾಗು ಸುವಣ ಮಹಿಳಾ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಅ. ೩೦: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರಸಭೆ ನೂತನ ಅಧ್ಯಕ್ಷೆ ಗೀತಾ ಕೆ.ಜಿ ರಾಜ್‌ಕುಮಾರ್ ಮತ್ತು ಉಪಾಧ್ಯಕ್ಷ ಚನ್ನಪ್ಪ ಅವರಿಗೆ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಹಾಗು ಸುವಣ ಮಹಿಳಾ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.
    ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಈಗಾಗಲೇ ಕೈಗೊಂಡಿರುವ ಒಳಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಅಲ್ಲದೆ ಬಹುತೇಕ ರಸ್ತೆಗಳು ಹಾಳಾಗಿವೆ. ಕೆಲವೆಡೆ ಕಾಮಗಾರಿ ಮುಕ್ತಾಯಗೊಂಡಿದ್ದರೂ ಸಹ ಮನೆಗಳಿಗೆ ಒಳಚರಂಡಿ ಸಂಪರ್ಕದ ಸೌಲಭ್ಯ ಕಲ್ಪಿಸಿಲ್ಲ.  ಇನ್ನೂ ಕೆಲವು ಭಾಗಗಳಲ್ಲಿ ಕೊಳವೆಗಳ ಜೋಡಣೆ ಕಾಮಗಾರಿ ಕೈಗೊಳ್ಳದ ಕಾರಣ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಈ ಹಿನ್ನಲೆಯಲ್ಲಿ ಸಂಬಂಧಿಸಿದ ಇಲಾಖೆಗಳ ತುರ್ತು ಸಭೆ ಕರೆದು ಕಾಮಗಾರಿ ಸಮರ್ಪಕವಾಗಿ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
    ಜನ್ನಾಪುರ ಕರೆ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಈಗಾಗಲೇ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಟೆಂಡರ್ ಪ್ರಕ್ರಿಯೆ ಮುಗಿದ್ದಿದ್ದು, ಅಭಿವೃದ್ಧಿ ಕಾಮಗಾರಿಗಳು ನಡೆಯಲು ಕೆಲವು ತಾಂತ್ರಿಕ ತೊಂದರೆ ಇರುವುದರಿಂದ ಈ ಸಂಬಂಧ ಸಹ ತುರ್ತು ಸಭೆ ಕರೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗು ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೭೦ ಕೆರೆಗಳಿದ್ದು, ಸರ್ಕಾರಕ್ಕೆ ಕೋಟ್ಯಾಂತರ ರು. ಉಳಿತಾಯವಾಗುವ ನಿಟ್ಟಿನಲ್ಲಿ ಕೆರೆಗಳನ್ನು ಅಭಿವೃದ್ಧಿಪಡಿಸಲು ಸಮೀಪವಿರುವ ರೈತರಿಗೆ ಕೆರೆಗಳ ಹೂಳು ತೆಗೆಯಲು ಅನುಮತಿ ನೀಡುವಂತೆ ಆಗ್ರಹಿಸಲಾಗಿದೆ.
    ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗಣಕಯಂತ್ರ ನಿಯೋಜಕರಿಗೆ ಸೇವಾ ಭದ್ರತೆಯ ದೃಷ್ಟಿಯಿಂದ ಹಾಗು ಕುಟುಂಬ ನಿರ್ವಹಣೆಯ ದೃಷ್ಟಿಯಿಂದ ಇವರಿಗೂ ಸಹ ಪಿ.ಎಫ್, ಇ.ಎಸ್.ಐ ಸೌಲಭ್ಯ ಕಲ್ಪಿಸಿಕೊಡುವ ಜೊತೆಗೆ ನಗರಸಭೆ ವತಿಯಿಂದಲೇ ವೇತನ ಪಾವತಿಸುವಂತೆ ಮನವಿ ಮಾಡಲಾಗಿದೆ.
    ವೇದಿಕೆ ಪ್ರಮುಖರಾದ ಆರ್. ವೇಣುಗೋಪಾಲ್, ರಮಾವೆಂಕಟೇಶ್, ನಗರಸಭೆ ಪೌರಾಯುಕ್ತ ಕೆ. ಪರಮೇಶ್, ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ನೂತನ ಸದಸ್ಯರಾದ ಸರ್ವಮಂಗಳ ಭೈರಪ್ಪ, ಶೃತಿ ವಸಂತ್, ಅನುಸುಧ ಮೋಹನ್, ಕಾಂತರಾಜ್, ಟಿಪ್ಪು ಸುಲ್ತಾನ್ ಮತ್ತು ಆರ್. ಮೋಹನ್  ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೆಂಚಮ್ಮ ಹೋಬಳಿದಾರ್ ಸಗನಪ್ಪ ನಿಧನ

ಕೆಂಚಮ್ಮ ಹೋಬಳಿದಾರ್ ಸಗನಪ್ಪ
    ಭದ್ರಾವತಿ, ಅ. ೩೦: ಹಳೇನಗರದ ಶ್ರೀ ಹಳದಮ್ಮ ದೇವಿ ರಸ್ತೆಯ ನಿವಾಸಿ, ಕನಕ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಗೋಪಿ ಅವರ ತಾಯಿ ಕೆಂಚಮ್ಮ ಹೋಬಳಿದಾರ್ ಸಗನಪ್ಪ(೭೮) ಶನಿವಾರ ನಿಧನ ಹೊಂದಿದರು.
    ೪ ಜನ ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಭಾನುವಾರ ನಡೆಯಲಿದೆ.
ಇವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ, ತಾಲೂಕು ಕುರುಬರ ಸಂಘದ ಸಹಕಾರ್ಯದರ್ಶಿ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.