![](https://blogger.googleusercontent.com/img/a/AVvXsEjd0IddMzu0jrbGwKU2O2WNr6zgurr-IcaQxPwThIvqaTEGLevPgDsmD0t156Y7xlYpzCxtGiNgjgKw-2hWTxA0IAwHRSHX8k1dSsDvPDrvpA-ohZnCsMW-NmX_MqEGCAsdJjQL4ZyQ3kALUwmBMxB9Xx5Rkb9W1tDf17B3VJWS5LQSVYJJHI86mkaEHQ=w400-h186-rw)
ಭದ್ರಾವತಿಯಲ್ಲಿ ತಾಲೂಕು ಬಲಿಜ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಕೈವಾರ ಸದ್ಗುರು ಯೋಗಿನಾರೇಯಣ ತಾತಯ್ಯನವರ ೧೮೭ನೇ ಜಯಂತ್ಯೋತ್ಸವ ಕಾರ್ಯಕ್ರಮ ಮಾಜಿ ಸಚಿವ ಎಂ.ಆರ್ ಸೀತರಾಮ್ ಉದ್ಘಾಟಿಸಿದರು.
ಭದ್ರಾವತಿ, ಮಾ. ೧೮: ಬಲಿಜ ಸಮುದಾಯದವರು ಹೆಚ್ಚು ಸಂಘಟಿತರಾಗುವ ಜೊತೆಗೆ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೋರಾಟ ನಡೆಸಬೇಕಾಗಿದೆ ಎಂದು ಮಾಜಿ ಸಚಿವ ಎಂ.ಆರ್ ಸೀತರಾಮ್ ಹೇಳಿದರು.
ಅವರು ಶುಕ್ರವಾರ ತಾಲೂಕು ಬಲಿಜ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಕೈವಾರ ಸದ್ಗುರು ಯೋಗಿನಾರೇಯಣ ತಾತಯ್ಯನವರ ೧೮೭ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಲಿಜ ಸಮುದಾಯ ರಾಜ್ಯದಲ್ಲಿ ಹಿಂದುಳಿದ ಸಮುದಾಯಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದು, ಈ ಹಿಂದೆ ಮೀಸಲಾತಿಯಿಂದ ವಂಚಿತರಾಗಿ ಪುನಃ ಹೋರಾಟದ ಮೂಲಕ ಮೀಸಲಾತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ನಮ್ಮ ಹೋರಾಟ ಮುಂದುವರೆಯಬೇಕಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಸಮುದಾಯ ಗುರುತಿಸಿಕೊಳ್ಳುವಂತಾಗಬೇಕು. ಮೊದಲು ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸಬೇಕು. ಶೈಕ್ಷಣಿಕವಾಗಿ, ರಾಜಕೀಯ ಹಾಗು ಸಾಮಾಜಿಕವಾಗಿ ಪ್ರಗತಿ ಸಾಧಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಸಹಕಾರದೊಂದಿಗೆ ನಮ್ಮ ಹೋರಾಟ ಮುಂದುವರೆಯಬೇಕೆಂದರು.
ಸಮುದಾಯಕ್ಕೆ ದಾರಿದೀಪವಾಗಿರುವ ತಾತಯ್ಯನವರ ಸಂದೇಶಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಮುನ್ನಡೆಯಬೇಕು. ಅಲ್ಲದೆ ಸಮುದಾಯದಲ್ಲಿ ಮುಂದೆ ಬಂದವರು ಹಿಂದುಳಿದವರ ನೆರವಿಗೆ ಮುಂದಾಗಬೇಕು. ಸರ್ಕಾರ ತಾತಯ್ಯನವರ ಜಯಂತಿಯನ್ನು ಆಚರಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಸಮುದಾಯದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಮಾತನಾಡಿ, ಕ್ಷೇತ್ರದಲ್ಲಿ ಬಲಿಜ ಸಮುದಾಯದವರು ಅಲ್ಪ ಪ್ರಮಾಣದಲ್ಲಿದ್ದರೂ ಸಹ ಸಮಾಜದಲ್ಲಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಸಿಕೊಂಡಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಯನ್ನು ಬಲಿಷ್ಠವಾಗಿ ರೂಪಿಸಿಕೊಂಡಿದ್ದಾರೆ. ಸಮುದಾಯದ ಬೆಳವಣಿಗೆಗೆ ಇನ್ನೂ ಹೆಚ್ಚಿನ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಈ ಸಮುದಾಯಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕುಳ್ಳೂರು ಶ್ರೀ ಶಿವಯೋಗಿಶ್ವರ ಸಂಸ್ಥಾನ ಮಠದ ಶ್ರೀ ಸದ್ಗುರು ಬಸವಾನಂದ ಭಾರತಿ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಸಂಘದ ಅಧ್ಯಕ್ಷ ಜೆ.ಎಸ್ ಸಂಜೀವಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಗೌರವಾಧ್ಯಕ್ಷ ಎಸ್.ಎನ್ ಸುಬ್ರಮಣ್ಯ, ಉಪಾಧ್ಯಕ್ಷ ಜಂಗಮಪ್ಪ, ಸಹಕಾರ್ಯದರ್ಶಿ ಟಿ. ರಮೇಶ್, ಖಜಾಂಚಿ ನರೇಂದ್ರಬಾಬು, ನಿರ್ದೇಶಕರಾದ ಡಿ.ಆರ್ ಶಿವಕುಮಾರ್, ಯು. ಪಂಪಣ್ಣ, ವೈ.ಎಸ್ ರಾಮಮೂರ್ತಿ, ಪದ್ಮಮ್ಮ ಹನುಮಂತಪ್ಪ, ಕೆ.ಜಿ ಕುಮಾರಸ್ವಾಮಿ, ಎಚ್. ನಾರಾಯಣಪ್ಪ, ಎಚ್.ಆರ್ ರಂಗನಾಥ್, ಬಿ. ಯಲ್ಲಪ್ಪ, ದಶರಥಕುಮಾರ, ಪಿ. ಸತೀಶ, ಟಿ.ಕೆ ಪ್ರಹ್ಲಾದ, ರಾಜೇಶ್, ವೆಂಕಟೇಶ್ ಮತ್ತು ಉದಯಕುಮಾರ್ ಸೇರಿದಂತೆ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.
ವಿಶ್ವನಾಥ್ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಎಂ. ರಮೇಶ್ ಸ್ವಾಗತಿಸಿದರು. ಉಪಾಧ್ಯಕ್ಷೆ ಶಕುಂತಲ ನಿರೂಪಿಸಿದರು.