Friday, April 8, 2022

ಏ.9ರಂದು ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ


    ಭದ್ರಾವತಿ: ತಾಲೂಕಿನ ಬಾರಂದೂರು ಶ್ರೀ ಲಕ್ಷ್ಮಿ ವೆಂಕಟೇಶ್ವರ ಪದ್ಮಾವತಿ ದೇವಸ್ಥಾನದಲ್ಲಿ ಏ. 9ರಂದು ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಹಮ್ಮಿಕೊಳ್ಳಲಾಗಿದೆ.
    ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇತರ ಧಾರ್ಮಿಕ ಆಚರಣೆಗಳು ಜರುಗಲಿವೆ. 10 ರಂದು ಶ್ರೀ ರಾಮನವಮಿ ಆಚರಣೆ ನಡೆಯಲಿದ್ದು,  ಬೆಳಿಗ್ಗೆ 7 ಗಂಟೆ ಯಿಂದ 10  ಗಂಟೆವರೆಗೆ ರಾಮತಾರಕ ಹೋಮ ಹಾಗೂ ವಿಶೇಷ ಪೂಜೆ, ಮಧ್ಯಾಹ್ನ 12ಗಂಟೆಗೆ ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ದೇವಸ್ಥಾನ ಸೇವಾ ಸಮಿತಿ ಹಾಗೂ ವಂದೇ ಮಾತರಂ ಟ್ರಸ್ಟ್ ಕೋರಿದೆ.



ನಗರಸಭೆ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ

    ಭದ್ರಾವತಿ, ಏ. ೮: ಶ್ರೀರಾಮನವಮಿ, ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಮತ್ತು ಮಹಾವೀರ ಜಯಂತಿಯಂದು ನಗರಸಭೆ ವ್ಯಾಪ್ತಿಯಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟ ನಿಷೇಧಿಸಲಾಗಿದೆ.
    ಕುರಿ ಮತ್ತು ಕೋಳಿ ಹಾಗು ಇತರೆ ಮಾಂಸದಂಗಡಿಗಳಲ್ಲಿ ಮಾಂಸ ಮಾರಾಟ ಮಾಡುವುದನ್ನು ಹಾಗು ಬಾರ್ & ರೆಸ್ಟೋರೆಂಟ್ ಹಾಗು ಮಾಂಸಹಾರಿ ಹೋಟೆಲ್‌ಗಳಲ್ಲಿ ಮಾಂಸಹಾರ ತಯಾರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಒಂದು ವೇಳೆ ಆದೇಶ ಉಲ್ಲಂಘನೆಯಾದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೌರಾಯುಕ್ತರು ಸೂಚಿಸಿದ್ದಾರೆ.

ಭದ್ರಾವತಿ ನಗರಸಭೆ ಉಜ್ಜನಿಪುರ ವ್ಯಾಪ್ತಿಯ ಬಿಳಿಕಟ್ಟೆ, ಬಳಸಕಟ್ಟೆ ಕೆರೆ ಒತ್ತುವರಿ ತೆರವು

ತಹಸೀಲ್ದಾರ್ ಆರ್. ಪ್ರದೀಪ್ ನೇತೃತ್ವದಲ್ಲಿ ನಡೆದ ಯಶಸ್ವಿ ಕಾರ್ಯಾಚರಣೆ


ಭದ್ರಾವತಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ. ೨೨ರ ಉಜ್ಜನಿಪುರದ ಬಿಳಿಕಟ್ಟೆ ಕೆರೆ ಮತ್ತು ಬಳಸಕಟ್ಟೆ ಕೆರೆ ತೆರವು ಕಾರ್ಯಾ ಚರಣೆ ಶುಕ್ರವಾರ ತಹಸೀಲ್ದಾರ್ ಆರ್. ಪ್ರದೀಪ್ ನೇತೃತ್ವದಲ್ಲಿ ನಡೆಯಿತು.
    ಭದ್ರಾವತಿ, ಏ. ೮: ನಗರಸಭೆ ವ್ಯಾಪ್ತಿಯ ವಾರ್ಡ್ ನಂ. ೨೨ರ ಉಜ್ಜನಿಪುರದ ಬಿಳಿಕಟ್ಟೆ ಕೆರೆ ಮತ್ತು ಬಳಸಕಟ್ಟೆ ಕೆರೆ ತೆರವು ಕಾರ್ಯಾಚರಣೆ ಶುಕ್ರವಾರ ತಹಸೀಲ್ದಾರ್ ಆರ್. ಪ್ರದೀಪ್ ನೇತೃತ್ವದಲ್ಲಿ ನಡೆಯಿತು.
    ರಾಷ್ಟ್ರೀಯ ಹೆದ್ದಾರಿ-೨೦೬ ಚತುಷ್ಪಥ ರಸ್ತೆಯ ಪಕ್ಕದಲ್ಲಿರುವ ಸರ್ವೆ ನಂ. ೧೩ರ ೬ ಎಕರೆ ೧೮ ಗುಂಟೆ ವಿಸ್ತೀರ್ಣ ಹೊಂದಿರುವ ಬಿಳಿಕಟ್ಟೆ ಕೆರೆ ಮತ್ತು ೪ ಎಕರೆ ೦೧ ಗುಂಟೆ ವಿಸ್ತೀರ್ಣ ಹೊಂದಿರುವ ಸರ್ವೆ ನಂ. ೧೬ರ ಬಳಸಕಟ್ಟೆ ಕೆರೆ ಸುಮಾರು ೩-೪ ದಶಕಗಳಿಂದ ಒತ್ತುವರಿಯಾಗಿದ್ದು, ಎರಡೂ ಕೆರೆಗಳ ಒಟ್ಟು ೧೦ ಎಕರೆ ೧೮ ಗುಂಟೆ ವಿಸ್ತೀರ್ಣದಲ್ಲಿ ಬಹುಭಾಗವನ್ನು ಆಕ್ರಮಿಸಿಕೊಂಡು ಅಡಕೆ, ತೆಂಗು ತೋಟಗಳನ್ನು ನಿರ್ಮಿಸಿಕೊಂಡು ಇನ್ನಿತರ ಉಪಬೆಳೆಗಳನ್ನು ಬೆಳೆಯಲಾಗುತ್ತಿದೆ.

ಎರಡು ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆಗೆ ನಮ್ಮ ಸಂಪೂರ್ಣ ಸಹಕಾರವಿದ್ದು, ನಗರಸಭೆ ವ್ಯಾಪ್ತಿಯಲ್ಲಿರುವ ಎಲ್ಲಾ ಕೆರೆಗಳ ತೆರವು ಕಾರ್ಯಾಚರಣೆ ನಡೆಸಬೇಕು. ಕೆರೆ ತೆರವು ವಿಚಾರದಲ್ಲಿ ಯಾವುದೇ ತಾರತಮ್ಯವಿಲ್ಲ. ಕೆರೆಗಳನ್ನು ಅಭಿವೃದ್ಧಿಪಡಿಸಿ ಮಾದರಿ ನಗರವನ್ನಾಗಿಸಬೇಕು.
                                                                               - ಎಂ.ಎ ಅಜಿತ್, ನಗರಸಭೆ ಮಾಜಿ ಸದಸ್ಯ.
    ಈ ಎರಡೂ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳುವಂತೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಪುತ್ರ, ನಗರಸಭೆ ಮಾಜಿ ಸದಸ್ಯ ಎಂ.ಎ ಅಜಿತ್, ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಮತ್ತು ಜಿಲ್ಲಾ ಸಂಚಾಲಕ ಚಿನ್ನಯ್ಯ ಹಾಗು ಕನಾಟಕ ಜನಸೈನ್ಯ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ದೇವರಾಜ ಅರಸು ಜನಸ್ಪಂದನಾ ವೇದಿಕೆ ಮತ್ತು ಮಹಿಳಾ ವೇದಿಕೆ ವತಿಯಿಂದ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಅಲ್ಲದೆ ನಗರಸಭೆ ಆಡಳಿತ ಸಹ ತಾಲೂಕು ಆಡಳಿತಕ್ಕೆ ಈ ಸಂಬಂಧ  ಅಗತ್ಯ ಕ್ರಮ ಕೈಗೊಳ್ಳಲು ಪೂರಕ ಮಾಹಿತಿಗಳೊಂದಿಗೆ ವರದಿ ಸಲ್ಲಿಸಿತ್ತು. ಇದರನ್ವಯ ತಹಸೀಲ್ದಾರ್ ಆರ್. ಪ್ರದೀಪ್  ಕೆರೆ ಸರ್ವೆ ಕಾರ್ಯ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ್ದರು.
    ತಹಸೀಲ್ದಾರ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ :
    ಕೆರೆ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಹೆಚ್ಚಿನ ಆಸಕ್ತಿವಹಿಸಿರುವ ತಹಸೀಲ್ದಾರ್ ಆರ್. ಪ್ರದೀಪ್, ನಗರಸಭೆ ಪೌರಾಯುಕ್ತ ಕೆ. ಪರಮೇಶ್‌ರವರ ಅನುಪಸ್ಥಿತಿಯಲ್ಲಿ ಖುದ್ದಾಗಿ ಸ್ಥಳಕ್ಕೆ ಆಗಮಿಸಿ ನಗರಸಭೆ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಿದರು.

ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಯಾವುದೇ ರೀತಿಯ ಒತ್ತಡಕ್ಕೂ ಸಹ ಮಣಿಯುವುದಿಲ್ಲ. ಎಲ್ಲಾ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುವುದು.
                                                                                  - ಆರ್. ಪ್ರದೀಪ್ ತಹಸೀಲ್ದಾರ್, ಭದ್ರಾವತಿ.
    ತಾಲೂಕಿನಾದ್ಯಂತ ಬಹುತೇಕ ಕೆರೆಗಳು ಪ್ರಭಾವಿ ವ್ಯಕ್ತಿಗಳಿಂದ ಒತ್ತುವರಿಯಾಗಿದ್ದು, ತೆರವು ಕಾರ್ಯಾಚರಣೆ ಕೈಗೊಳ್ಳುವುದು ಸವಾಲಿನ ಕೆಲಸವಾಗಿದೆ. ಈ ಹಿಂದೆ ನಗರಸಭೆ ಪೌರಾಯುಕ್ತರಾಗಿದ್ದ ಮನೋಹರ್‌ರವರು ದಿಟ್ಟ ನಿರ್ಧಾರ ಕೈಗೊಂಡು ತೆರವು ಕಾರ್ಯಾಚರಣೆ ನಡೆಸಿದ್ದರು. ಇದೀಗ ತಹಸೀಲ್ದಾರ್ ಆರ್. ಪ್ರದೀಪ್ ಸಹ ದಿಟ್ಟತನದಿಂದ ಕಾರ್ಯಾಚರಣೆಗೆ ಮುಂದಾಗಿದ್ದು, ಆರಂಭಿಕ ಹಂತದಲ್ಲಿ ಯಶಸ್ಸು ಸಾಧಿಸಿದ್ದಾರೆ. ಈಗಾಗಲೇ ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೭೦ ಕೆರೆಗಳ ಬೌಂಡರಿ ನಿಗದಿಗೆ ಆದೇಶವಾಗಿದ್ದು, ಈ ಪೈಕಿ ೨೩ ಕೆರೆಗಳ ಬೌಂಡರಿ ನಿಗದಿಪಡಿಸಲಾಗಿದೆ. ಆದರೆ ತೆರವು ಕಾರ್ಯಾಚರಣೆ ನಡೆದಿರುವುದಿಲ್ಲ. ತೆರವು ಕಾರ್ಯಾಚರಣೆ ಕೈಗೊಳ್ಳಲು ಸ್ಥಳೀಯರು ಹಾಗು ಜನಪ್ರನಿಧಿಗಳು ಮತ್ತು ವಿವಿಧ ಸಂಘ-ಸಂಸ್ಥೆಗಳಿಂದ ಸಹಕಾರ ಹೆಚ್ಚಿನದ್ದಾಗಿದೆ.  
    ಒಂದು ವರ್ಷದ ಹಿಂದೆ ಸರ್ವೆ ಕಾರ್ಯ ನಡೆದಿದ್ದರೂ ತೆರವು ಕಾರ್ಯಾಚರಣೆ ನಡೆದಿರಲಿಲ್ಲ:
    ಈ ಹಿಂದಿನ ನಗರಸಭೆ ಪೌರಾಯುಕ್ತ ಮನೋಹರ್‌ರವರ ನೇತೃತ್ವದಲ್ಲಿ ಸರ್ವೆ ಕಾರ್ಯ ನಡೆದು ಬೌಂಡರಿ ನಿಗದಿಪಡಿಸಲಾಗಿತ್ತು. ಆದರೆ ಪ್ರಭಾವಿಗಳ ಒತ್ತಡದ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಿದಿರಲಿಲ್ಲ ಎನ್ನಲಾಗಿದೆ. ಈ ಬಾರಿ ಸಹ ಸಾಕಷ್ಟು ಒತ್ತಡಗಳು ಕಂಡು ಬಂದರೂ ಸಹ ತಹಸೀಲ್ದಾರ್ ಆರ್. ಪ್ರದೀಪ್ ದಿಟ್ಟತನದಿಂದ ಕಾರ್ಯಾಚರಣೆ ನಡೆಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
    ಬೆಳಿಗ್ಗೆಯಿಂದ ಸಂಜೆವರೆಗೂ ನಡೆದ ಕಾರ್ಯಾಚರಣೆ :
    ತೆರವು ಕಾರ್ಯಾಚರಣೆಯಲ್ಲಿ ಸುಮಾರು ಒಂದೂವರೆ ಎಕರೆಯಲ್ಲಿ ಬೆಳೆಯಲಾಗಿದ್ದ ನೂರಾರು ಅಡಿಕೆ ಮರಗಳು ಹಾಗು ತೆಂಗು ಸೇರಿದಂತೆ ಇನ್ನಿತರ ಬೆಳೆ ನಾಶವಾಗಿದ್ದು, ಅಂದಾಜು ಸುಮಾರು ರು.೪೦ ಲಕ್ಷ ನಷ್ಟ ಉಂಟಾಗಿದೆ ಎನ್ನಲಾಗಿದೆ. ಉಳಿದಂತೆ ಅರ್ಧ ಎಕರೆ ಪ್ರದೇಶದಲ್ಲಿ ಲೇಔಟ್ ನಿರ್ಮಿಸಿಕೊಂಡಿದ್ದು, ಲೇಔಟ್ ಸಹ ತೆರವುಗೊಳಿಸಲಾಗಿದೆ.

ಕೆರೆಗಳನ್ನು ಅಭಿವೃದ್ಧಿಗೊಳಿಸುವ ಸಂಬಂಧ ಹಲವಾರು ವರ್ಷಗಳಿಂದ ನಡೆಸುತ್ತಿರುವ ನಮ್ಮ ಹೋರಾಟಕ್ಕೆ ಇದೀಗ ಜಯ ಲಭಿಸಿದೆ. ಕೆರೆ ಒತ್ತುವರಿ ಕಾರ್ಯಾಚರಣೆಯಲ್ಲಿ ದಿಟ್ಟ ಕ್ರಮ ಕೈಗೊಂಡಿರುವ ತಹಸೀಲ್ದಾರ್‌ರವರಿಗೆ ಕ್ಷೇತ್ರದ ಜನರ ಪರವಾಗಿ ಕೃತಜ್ಞತೆಗಳು. ಉಳಿದಂತೆ ನಗರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ಬೌಂಡರಿ ನಿಗದಿಪಡಿಸಲಾಗಿರುವ ಸುಮಾರು ೭೦ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಬೇಕು.
                                                              -ಆರ್. ವೇಣುಗೋಪಾಲ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ.

    ಸರ್ಕಾರಿ ಭೂ ಮಾಪಕರಾದ ದಿಲೀಪ್ ಮತ್ತು ಮಂಜಾನಾಯ್ಕ, ಕಂದಾಯಾಧಿಕಾರಿ ಪ್ರಶಾಂತ್, ರಾಜಸ್ವ ನಿರೀಕ್ಷಕ ಓಂಕಾರಪ್ಪ, ಗ್ರಾಮ ಲೆಕ್ಕಾಧಿಕಾರಿ ಶಿವಣ್ಣ, ನಗರಸಭೆ ಇಂಜಿನಿಯರ್ ರಂಗರಾಜಪುರ ಮತ್ತು ಕಂದಾಯಾಧಿಕಾರಿ ರಾಜಕುಮಾರ್ ಪೊಲೀಸ್ ಇನ್ಸ್ ಪೆಕ್ಟರ್ ಈ ಓ ಮಂಜುನಾಥ್ ಸೇರಿದಂತೆ ಇನ್ನಿತರ ಅಧಿಕಾರಿಗಳು ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಕೆರೆ ತೆರವು ಕಾರ್ಯಾಚರಣೆಯಿಂದ ಉಜ್ಜನಿಪುರ ಗ್ರಾಮಸ್ಥರಿಗೆ ಮಳೆಗಾಲದಲ್ಲಿ ಮನೆಗೆ ನೀರು ನುಂಗುವ ಸಮಸ್ಯೆಯಿಂದ ಪಾರಾಗುವಂತಾಗಿದೆ. ಕಳೆದ ಬಾರಿ ನೀರು ನುಗ್ಗಿ ಹಾನಿಯಾದ ಮನೆಗಳಿಗೆ ಇದುವರೆಗೂ ಪರಿಹಾರ ನೀಡಿಲ್ಲ. ತಕ್ಷಣ ಪರಿಹಾರ ನೀಡಬೇಕು.
                                                                                                     - ವೆಂಕಟಯ್ಯ ನಗರಸಭೆ ಮಾಜಿ ಸದಸ್ಯ

    ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ನಗರಸಭೆ ಮಾಜಿ ಸದಸ್ಯರಾದ ಬದರಿ ನಾರಾಯಣ, ವೆಂಕಟಯ್ಯ, ಎಂ.ಎ ಅಜಿತ್, ಗುಣಶೇಖರ್, ಮಹೇಶ್, ಪ್ರವೀಣ್‌ಕುಮಾರ್, ಆಂಜನಪ್ಪ, ಮುಖಂಡರಾದ  ಕ್ಲಬ್ ಸುರೇಶ್, ಜಯರಾಮ್, ಧನುಷ್‌ಬೋಸ್ಲೆ, ಮೊಬೈಲ್‌ನಾಗ, ಹಾಲ್ ಪ್ರಕಾಶ್, ಮುರುಗೇಶ್, ಪರಮೇಶ್ವರಪ್ಪ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು. ಭದ್ರತೆಗೆ ಪೇಪರ್‌ಟೌನ್ ಪೊಲೀಸ್ ಠಾಣೆ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಲಾಗಿತ್ತು.  



                                                       

Thursday, April 7, 2022

ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ಎರಡು ಕೆರೆಗಳ ತೆರವು ಕಾರ್ಯಾಚರಣೆ


 
ಭದ್ರಾವತಿ: ಭದ್ರಾವತಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ. 22ರ ಬಿಳಿ ಕಟ್ಟೆ ಕೆರೆ ಮತ್ತು ಬಳಸ ಕಟ್ಟೆ ಕೆರೆ ತೆರವು ಕಾರ್ಯಾಚರಣೆ ಶುಕ್ರವಾರ ನಡೆಯಿತು.
ಸರ್ವೆ ನಂ. 13ರ ಬಿಳಿಕಟ್ಟೆ ಕೆರೆ ಮತ್ತು ಸರ್ವೆ ನಂ. 16ರ ಬಳಸಕಟ್ಟೆ ಕೆರೆ ಒಟ್ಟು10 ಎಕರೆ 18 ಗುಂಟೆ ವಿಸ್ತೀರ್ಣ ಹೊಂದಿದ್ದು, ಸುಮಾರು ಮೂರ್ನಾಲ್ಕು ದಶಕಗಳಿಂದ ಒತ್ತುವರಿಯಾಗಿತ್ತು. ವಿವಿಧ ಸಂಘ-ಸಂಸ್ಥೆಗಳಿಂದ ಕೆರೆ ಒತ್ತುವರಿ ತೆರವುಗೊಳಿಸುವಂತೆ ತಾಲೂಕು ಆಡಳಿತಕ್ಕೆ ದೂರುಗಳ ಬಂದ ಹಿನ್ನೆಲೆಯಲ್ಲಿ ಸರ್ವೆ ಕಾರ್ಯಕ್ಕೆ ಮುಂದಾಗಿ ನಗರಸಭೆ ಆಡಳಿತದೊಂದಿಗೆ ತೆರವು ಕಾರ್ಯಾಚರಣೆ ನಡೆಸಲಾಯಿತು.
ತೆರವು ಕಾರ್ಯಾಚರಣೆಯಲ್ಲಿ ನಗರಸಭೆ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಪೇಪರ್ ಟೌನ್ ಪೊಲೀಸ್ ಠಾಣೆ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಕಂದಾಯಾಧಿಕಾರಿ ಪ್ರಶಾಂತ್ ನಗರಸಭೆ ಇಂಜಿನಿಯರ್ ರಂಗರಾಜಪುರ ಮತ್ತು ಕಂದಾಯಾಧಿಕಾರಿ ರಾಜಕುಮಾರ್ ಪೊಲೀಸ್ ಇನ್ಸ್ ಪೆಕ್ಟರ್ ಈ ಓ ಮಂಜುನಾಥ್ ಸೇರಿದಂತೆ ಇನ್ನಿತರ ಅಧಿಕಾರಿಗಳು, ನಗರಸಭೆ ಮಾಜಿ ಸದಸ್ಯರಾದ ಬದರಿ ನಾರಾಯಣ, ವೆಂಕಟಯ್ಯ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.







ಪ್ರಚೋದನಾಕಾರಿ ಹೇಳಿಕೆ ಗೃಹ ಸಚಿವರ ವಿರುದ್ಧ ದೂರು

ಗೃಹ ಸಚಿವ ಅರಗ ಜ್ಞಾನೆಂದ್ರ ವಿರುದ್ಧ ಯುವ ಕಾಂಗ್ರೆಸ್ ನಗರ ಮತ್ತು ಗ್ರಾಮಾಂತರ ಘಟಕಗಳಿಂದ ಗುರುವಾರ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಯಿತು.
    ಭದ್ರಾವತಿ, ಏ. ೭: ಗೃಹ ಸಚಿವ ಅರಗ ಜ್ಞಾನೆಂದ್ರ ವಿರುದ್ಧ ಯುವ ಕಾಂಗ್ರೆಸ್ ನಗರ ಮತ್ತು ಗ್ರಾಮಾಂತರ ಘಟಕಗಳಿಂದ ಗುರುವಾರ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
    ಗೃಹ ಸಚಿವರು ಜಾತಿ-ಧರ್ಮಗಳ ನಡುವೆ ಕೋಮು ಗಲಭೆ ಸೃಷ್ಟಿಸುವ ನಿಟ್ಟಿನಲ್ಲಿ ಪ್ರಚೋದನಾಕಾರಿ ಹೇಳಿಕೆಯನ್ನು ನೀಡಿದ್ದು, ಈ ಹೇಳಿಕೆಯನ್ನು ಯುವ ಕಾಂಗ್ರೆಸ್ ಖಂಡಿಸುತ್ತದೆ. ಸಚಿವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ.
    ಪೊಲೀಸ್ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆಯವರಿಗೆ ದೂರು ನೀಡಲಾಯಿತು. ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಜಿ. ವಿನೋದ್‌ಕುಮಾರ್, ಗ್ರಾಮಾಂತರ ಘಟಕದ ಅಧ್ಯಕ್ಷ ಅಫ್ತಾಬ್ ಅಹಮದ್, ಉಪಾಧ್ಯಕ್ಷ ತಬ್ರೇಜ್ ಖಾನ್, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಬಿ. ಗಂಗಾಧರ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಚಿನ್ ಸಿಂಧ್ಯಾ, ಕೇಶವ, ಅಮೋಸ್, ಸಜ್ಜಾದ್, ಸೈಯದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಆಸ್ತಿ ತೆರಿಗೆ ಹೆಚ್ಚಳಕ್ಕೆ ತೀವ್ರ ವಿರೋಧ : ಬಾವಿಗಿಳಿದು ಧರಣಿಗೆ ಮುಂದಾದ ಸದಸ್ಯರು

ಗೀತಾರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆ

ಭದ್ರಾವತಿ ನಗರಸಭೆಯಲ್ಲಿ ಗುರುವಾರ ನಡೆದ ವಿಶೇಷ ಸಾಮಾನ್ಯಸಭೆಯಲ್ಲಿ ಸದಸ್ಯರು ಆಸ್ತಿ ತೆರಿಗೆ ಶುಲ್ಕ ಹೆಚ್ಚಳಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. 
    ಭದ್ರಾವತಿ, ಏ. ೭: ನಗರಸಭೆ ವ್ಯಾಪ್ತಿಯಲ್ಲಿ ಈ ಬಾರಿ ಆಸ್ತಿ ತೆರಿಗೆ ಹೆಚ್ಚಳಕ್ಕೆ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ಗುರುವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಕಂಡು ಬಂದಿತು.
    ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಿರಿಯ ಸದಸ್ಯರಾದ ವಿ. ಕದಿರೇಶ್, ಬಿ.ಕೆ ಮೋಹನ್, ಬಿ.ಟಿ ನಾಗರಾಜ್ ಸೇರಿದಂತೆ ಇನ್ನಿತರರು ಮಾತನಾಡಿ, ಈ ಹಿಂದೆ ಆಸ್ತಿ ತೆರಿಗೆ ಶುಲ್ಕ ಕೇವಲ ೬೭ ರು. ಗಳಿದ್ದು, ಏಕಾಏಕಿ ೨೦೦೦ ರು.ಗಳಿಗೂ ಅಧಿಕ ಏರಿಕೆಯಾಗಿದ್ದು, ಇದಕ್ಕೆ ಕಾರಣ ತಿಳಿದು ಬಂದಿಲ್ಲ. ಇದೀಗ ಪುನಃ ಶೇ.೩ ರಿಂದ ೫ರಷ್ಟು ಏರಿಕೆ ಮಾಡುತ್ತಿರುವುದು ಜನಸಾಮಾನ್ಯರನ್ನು ಸಂಕಷ್ಟಕ್ಕೆ ತಳುವಂತಾಗಿದೆ. ಈಗಾಗಲೇ ಕಳೆದ ೨ ವರ್ಷಗಳಿಂದ ಕೊರೋನಾ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ನಡುವೆ ಆಸ್ತಿ ತೆರಿಗೆ ಶುಲ್ಕ ಹೆಚ್ಚಳ ಮಾಡುವುದು ಸರಿಯಲ್ಲ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಒತ್ತಾಯಿಸಿದರು.
    ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯಾಧಿಕಾರಿ ರಾಜ್‌ಕುಮಾರ್, ಮಾ.೧೮ರಂತೆ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಕರ್ನಾಟಕ ಪುರಸಭೆಗಳ ಅಧಿನಿಯಮ ೧೯೬೪ ಹಾಗು ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ ೧೯೭೬ ಗಳಿಗೆ ತಿದ್ದುಪಡಿ ತರಲಾಗಿದ್ದು, ಕರ್ನಾಟಕ ಸ್ಟ್ಯಾಂಪ್ ಅಧಿನಿಯಮ ೧೯೫೭ ರ ೪೫(ಬಿ) ಪ್ರಕರಣದಡಿಯಲ್ಲಿ ಪ್ರಕಟಿಸಲಾಗುವ ಚಾಲ್ತಿ ಸಾಲಿನ ಮಾರುಕಟ್ಟೆ ಮೌಲ್ಯದ ಮಾರ್ಗ ಸೂಚಿ 'ಎ' ಬೆಲೆಗಳ ಆಧಾರದ ಮೇರೆಗೆ ಆಸ್ತಿ ತೆರಿಗೆ ನಿರ್ಧರಣೆ ಮಾಡಬೇಕಾಗಿರುತ್ತದೆ. ಈ ಹಿನ್ನಲೆಯಲ್ಲಿ ಶೇ.೩ ರಿಂದ ೫ರಷ್ಟು ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ. ನೋಂದಾಣಿ ಇಲಾಖೆ ಶುಲ್ಕ ಹೆಚ್ಚಳ ಮಾಡಿರುವುದು ಸೇರಿದಂತೆ ಇನ್ನಿತರ ಕಾರಣಗಳಿಂದ ಈ ಹಿಂದೆ ೬೭ ರು. ಇದ್ದ ಆಸ್ತಿ ತೆರಿಗೆ ಶುಲ್ಕ  ೨,೬೬೬ ರು.ಗಳಿಗೆ ಏರಿಕೆಯಾಗಿದೆ. ತೆರಿಗೆ ಶುಲ್ಕ ತಾಂತ್ರಿಕವಾಗಿ ನಿಗದಿಗೊಳ್ಳುತ್ತಿದ್ದು, ನಗರಸಭೆ ಇದನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
    ಇದಕ್ಕೆ ತೀವ್ರ ವಿರೋಧಪಡಿಸಿದ ಸದಸ್ಯರು ಬಾವಿಗಿಳಿದು ಧರಣಿ ನಡೆಸಲು ಮುಂದಾದರೂ ಕೆಲ ಸಮಯ ಮಾತಿನ ಚಕಮಕಿ ನಡೆದು ಕೊನೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳುವುದಾಗಿ ಅಧ್ಯಕ್ಷರು ಭರವಸೆ ನೀಡಿದರು.
        ಉಳಿದಂತೆ ೨೦೨೧-೨೨ನೇ ಸಾಲಿನ ಶೇ.೨೪.೧೦ರ ನಿಧಿ ಕ್ರಿಯಾ ಯೋಜನೆಯಡಿ ಪರಿಶಿಷ್ಟ ಜಾತಿಯವರಿಗೆ ಬ್ಯಾಂಕ್‌ಗಳ ಸಾಲದ ನೆರವಿನಿಂದ ಸಣ್ಣ ಉದ್ದಿಮೆಯನ್ನು ಪ್ರಾರಂಭಿಸಲು ಸಹಾಯಧನ ಕೋರಿ ಬಂದಿರುವ ಅರ್ಜಿಗಳ ಬಗ್ಗೆ, ಶೇ.೭.೨೫ರ ನಿಧಿ ಕ್ರಿಯಾ ಯೋಜನೆಯಡಿಯಲ್ಲಿ ಇತರೆ ಬಡವರ್ಗದವರಿಗೆ ಬ್ಯಾಂಕ್‌ಗಳ ಸಾಲದ ನೆರವಿನಿಂದ ಸಣ್ಣ ಉದ್ದಿಮೆಯನ್ನು ಪ್ರಾರಂಭಿಸಲು ಸಹಾಯಧನ ಕೋರಿ ಬಂದಿರುವ ಅರ್ಜಿಗಳ ಬಗ್ಗೆ  ಹಾಗು ಶೇ.೫ರ ನಿಧಿ ಕ್ರಿಯಾ ಯೋಜನೆಯಡಿಯಲ್ಲಿ ೫ ವಿಕಲಚೇತನರಿಗೆ ಬ್ಯಾಂಕ್‌ಗಳ ಸಾಲದ ನೆರವಿನಿಂದ ಸಣ್ಣ ಉದ್ದಿಮೆಯನ್ನು ಪ್ರಾರಂಭಿಸಲು ಸಹಾಯಧನ ಕೋರಿ ಬಂದಿರುವ ಅರ್ಜಿಗಳ ಬಗ್ಗೆ ಚರ್ಚಿಸಲಾಯಿತು.
    ೧೫ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನದಡಿಯಲ್ಲಿ ಉಳಿಕೆಯಾಗಿರುವ ಮೊತ್ತದಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು ಹಾಗು ೨೦೨೧-೨೨ನೇ ಸಾಲಿನ ಎಸ್‌ಎಫ್‌ಸಿ ಮುಕ್ತ ನಿಧಿ ಮತ್ತು ೧೫ನೇ ಹಣಕಾಸು ಅನುದಾನ, ಎಸ್‌ಎಫ್‌ಸಿ ಕುಡಿಯುವ ನೀರು ಅನುದಾನದಡಿಯಲ್ಲಿ ಮತ್ತು ೨೦೧೭-೧೮ ಹಾಗು ೨೦೧೮-೧೯ನೇ ಸಾಲಿನ ೧೪ನೇ ಹಣಕಾಸು ಸಾಮಾನ್ಯ ಮೂಲ ಅನುದಾನ ಹಾಗು ೨೦೧೬-೧೭ನೇ ಸಾಲಿನ ಹಣಕಾಸು ಪ್ರೋತ್ಸಾಹ ಅನುದಾನದ ಉಳಿತಾಯ ಮೊತ್ತಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಲು ಗುತ್ತಿಗೆದಾರರನ್ನು ಅನುಮೋದಿಸುವ ಕುರಿತು ಚರ್ಚೆ ನಡೆಸಲಾಯಿತು.
    ಸಭೆ ಆರಂಭದಲ್ಲಿ ಹಿರಿಯ ಸದಸ್ಯ ಬಿ.ಟಿ ನಾಗರಾಜ್ ಮಾತನಾಡಿ, ೩೫ ವಾರ್ಡ್‌ಗಳನ್ನು ಹೊಂದಿರುವ ನಗರಸಭೆಯಲ್ಲಿ ಕೇವಲ ಒಂದೇ ಒಂದು ಮುಕ್ತಿ ವಾಹಿನಿ ವಾಹನವಿದ್ದು, ನಗರಸಭೆ ವ್ಯಾಪ್ತಿಯಲ್ಲಿ ಮುಕ್ತಿ ವಾಹಿನಿ ವಾಹನಗಳ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
    ಬಸವರಾಜ್ ಬಿ ಆನೇಕೊಪ್ಪ ಮಾತನಾಡಿ, ಸಾಮಾನ್ಯ ಸಭೆಗಳಲ್ಲಿ ಎಲ್ಲಾ ಸದಸ್ಯರಿಗೂ ಮಾತನಾಡಲು ಅವಕಾಶ ನೀಡಬೇಕು. ಹೊಸದಾಗಿ ಆಯ್ಕೆಯಾಗಿರುವ ಸದಸ್ಯರ ಸಲಹೆಗಳಿಗೂ ಬೆಲೆ ನೀಡಿ ದಾಖಲಿಸಿಕೊಳ್ಳಬೇಕೆಂದು ಆಗ್ರಹಿಸಿದರು.
    ಈ ನಡುವೆ ಸದಸ್ಯರು ವಾರ್ಡ್‌ಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪರಿಸರ ಅಭಿಯಂತರ ಪ್ರಭಾಕರ್, ಬೀದಿಗಳನ್ನು ಹಿಡಿದು ಅವುಗಳಿಗೆ ಶಸ್ತ್ರ ಚಿಕಿತ್ಸೆ ನಡೆಸುವ ಕಾರ್ಯ ಶುಕ್ರವಾರದಿಂದ ಆರಂಭವಾಗಲಿದೆ. ಈಗಾಗಲೇ ಬೈಪಾಸ್ ರಸ್ತೆಯಲ್ಲಿರುವ ನಗರಸಭೆ ಪಂಪ್ ಹೌಸ್‌ನಲ್ಲಿ ಶಸ್ತ್ರ ಚಿಕಿತ್ಸೆಗೆ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಬೀದಿ ನಾಯಿಗಳಿಗೆ ಮಾತ್ರ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು ಈ ಹಿನ್ನಲೆಯಲ್ಲಿ ಈ ಅವಧಿಯಲ್ಲಿ ಸಾಕು ನಾಯಿಗಳನ್ನು ಮನೆಯಿಂದ ಹೊರಬಿಡದಿರುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ ಎಂದರು.
    ಸದಸ್ಯ ಆರ್. ಶ್ರೇಯಸ್ ಗ್ರಾಮ ದೇವತೆ ಹಳೇನಗರದ ಶ್ರೀ ಹಳದಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ನಗರಸಭೆವತಿಯಿಂದ ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಮಾಡಿದರು.
    ಸಭೆಯಲ್ಲಿ ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸುದೀಪ್‌ಕುಮಾರ್, ಪೌರಾಯುಕ್ತ ಕೆ. ಪರಮೇಶ್ ಉಪಸ್ಥಿತರಿದ್ದರು. ನಗರಸಭೆ ಬಹುತೇಕ ಸದಸ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು.

ಹೊಸಮನೆ ಸರ್ಕಾರಿ ಕಾಲೇಜಿಗೆ ಅಧ್ಯಾಪಕರ ಸಂಘದ ರಾಜ್ಯಾಧ್ಯಕ್ಷರ ತಂಡ ಭೇಟಿ

ಕರ್ನಾಟಕ ರಾಜ್ಯ ಸರ್ಕಾರಿ ಪದವಿ ಕಾಲೇಜು ಅಧ್ಯಾಪಕರ ಸಂಘದ ರಾಜ್ಯಾಧ್ಯಕ್ಷ ಡಾ. ಟಿ.ಎಂ. ಮಂಜುನಾಥ್ ನೇತೃತ್ವದ ತಂಡ ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜೆಗೆ ಭೇಟಿ ನೀಡಿ ಕಾಲೇಜಿನ ಅಧ್ಯಾಪಕರೊಂದಿಗೆ ಸಮಾಲೋಚನೆ ನಡೆಸಿತು. ತಂಡದ ಅಧ್ಯಕ್ಷರು ಮತ್ತು  ಪದಾಧಿಕಾರಿಗಳನ್ನು ಕಾಲೇಜು ಆಡಳಿತ ಮಂಡಳಿ ಪರವಾಗಿ ಅಭಿನಂದಿಸಲಾಯಿತು.
    ಭದ್ರಾವತಿ, ಏ. ೭: ಕರ್ನಾಟಕ ರಾಜ್ಯ ಸರ್ಕಾರಿ ಪದವಿ ಕಾಲೇಜು ಅಧ್ಯಾಪಕರ ಸಂಘದ ರಾಜ್ಯಾಧ್ಯಕ್ಷ ಡಾ. ಟಿ.ಎಂ. ಮಂಜುನಾಥ್ ನೇತೃತ್ವದ ತಂಡ ನಗರದ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜೆಗೆ ಭೇಟಿ ನೀಡಿ ಕಾಲೇಜಿನ ಅಧ್ಯಾಪಕರೊಂದಿಗೆ ಸಮಾಲೋಚನೆ ನಡೆಸಿತು
    ಅಧ್ಯಾಪಕರ ವಿವಿಧ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಿ, ಅಧ್ಯಾಪಕರು ವಿದ್ಯಾರ್ಥಿ ಸ್ನೇಹಿಯಾಗಿ ಸರ್ಕಾರದ ಎಲ್ಲಾ ಶೈಕ್ಷಣಿಕ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಮುಂದಾಗುವಂತೆ ಹಾಗು ಅಧ್ಯಾಪಕರು ಕಡ್ಡಾಯವಾಗಿ ಸಾಮಾಜಿಕ ಕಳಕಳಿಯ ವಿಷಯ ಕುರಿತು ಸಂಶೋಧನೆ ಕೈಗೊಳ್ಳಲು ಮನವಿ ಮಾಡಲಾಯಿತು.
    ತಂಡ ಕಾಲೇಜಿನ ಶೈಕ್ಷಣಿಕ ಪ್ರಗತಿ ಹಾಗು ಪರಿಸರ ಮತ್ತು ಕಲಿಕೆಯ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು.
    ಪ್ರಾಂಶುಪಾಲ ಡಾ . ಧನಂಜಯ ಬಿ. ಜಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಡಾ . ನಾರಾಯಣ, ಕೋಶಾಧ್ಯಕ್ಷ  ಡಾ. ಶ್ರೀನಾಥ್ ಮತ್ತು ರಾಜ್ಯ ಪದಾಧಿಕಾರಿಗಳು ಉಪಸ್ಥಿತರಿದ್ದರು.  ತಂಡದ ಅಧ್ಯಕ್ಷರು ಮತ್ತು  ಪದಾಧಿಕಾರಿಗಳನ್ನು ಕಾಲೇಜು ಆಡಳಿತ ಮಂಡಳಿ ಪರವಾಗಿ ಅಭಿನಂದಿಸಲಾಯಿತು.