Saturday, May 14, 2022

ಮೇ.೧೫ರಂದು ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ

    ಭದ್ರಾವತಿ, ಮೇ. ೧೪: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಶ್ರೀ ಬಸವೇಶ್ವರ ಧರ್ಮಸಂಸ್ಥೆ ಹಾಗು ತಾಲೂಕಿನ ವಿವಿಧ ಸಂಘ-ಸಂಸ್ಥೆಗಳು ಮತ್ತು ಬಸವಾಭಿಮಾನಿಗಳ ಸಹಯೋಗದೊಂದಿಗೆ ಮೇ.೧೫ರಂದು ಸಂಜೆ ೬ ಗಂಟೆಗೆ ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
    ಬೆಳಗಾವಿ ನಿಡಸೋಸಿ ಶ್ರೀ ಸಿದ್ದ ಸಂಸ್ಥಾನ ಮಠದ ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಹೊಸನಗರ ಮೂಲೆಗದ್ದೆ ಶ್ರೀ ಸದಾನಂದ ಶಿವಯೋಗಾಶ್ರಮದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
    ಬೆಂಗಳೂರಿನ ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಉಪನ್ಯಾಸ ನೀಡಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್, ವಿಧಾನಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ, ಡಿ.ಎಸ್ ಅರುಣ್, ನಗರಸಭಾ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ ಹಾಗು ಶ್ರೀ ಬಸವೇಶ್ವರ ಧರ್ಮ ಸಂಸ್ಥೆಯ ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.

ಮೇ.೧೬ರಂದು ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ :

ವಿಜೃಂಭಣೆಯಿಂದ ಜರುಗಿದ ಗರುಡೋತ್ಸವ

ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವದ ಅಂಗವಾಗಿ ಶನಿವಾರ ಗರುಡೋತ್ಸವ ವಿಜೃಂಭಣೆಯಿಂದ ಜರುಗಿತು.
    ಭದ್ರಾವತಿ, ಮೇ. ೧೪: ಹಳೇನಗರದ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವದ ಅಂಗವಾಗಿ ಶನಿವಾರ ಗರುಡೋತ್ಸವ ವಿಜೃಂಭಣೆಯಿಂದ ಜರುಗಿತು.
    ಬೆಳಿಗ್ಗೆ ಯಾಗಶಾಲೆ ಪ್ರವೇಶ, ಧ್ವಜಾರೋಹಣ ನಂತರ ಗರುಡವಾಹನದಲ್ಲಿ ನಗರದ ಪ್ರಮುಖಬೀದಿಗಳಲ್ಲಿ ಭೂದೇವಿ ಶ್ರೀದೇವಿಸಹಿತನಾಗಿ ವಿರಾಜಮಾನನಾದ ಶ್ರೀನಿವಾಸ ದೇವರ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು. ನಂತರ ಅಷ್ಟಾವಧಾನ, ಮಹಾಮಂಗಳಾರತಿ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಶುಕ್ರವಾರ ಸಂಜೆ ಗಣಪತಿಪೂಜೆ, ಭೂಮಿ ಪೂಜೆ ನಡೆಸಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿರುವ ವಿಗ್ರಹಗಳಿಗೆ ಕಂಕಣಧಾರಣೆ ನಡೆಯಿತು.
    ಮೇ.೧೫ರಂದು ಬೆಳಿಗ್ಗೆ ಶ್ರೀ ನರಸಿಂಹ ಜಯಂತಿ, ವಸಂತ ಸೇವೆ, ಅಷ್ಟಾವಧಾನ, ಮಹಾಮಂಗಳಾರತಿ, ಸಂಜೆ ಕಲ್ಯಾಣೋತ್ಸವ ನಡೆಯಲಿದೆ. ಮೇ.೧೬ರಂದು ಮಧ್ಯಾಹ್ನ ಬ್ರಹ್ಮ ರಥೋತ್ಸವ ನಡೆಯಲಿದೆ.
    ಮೇ.೧೭ರಂದು ಬೆಳಿಗ್ಗೆ ಗಜವಾಹನೋತ್ಸವ, ಅಷ್ಟಾವಧಾನ, ಮಹಾಮಂಗಳಾರತಿ, ಸಂಜೆ ಶೇಷವಾಹನೋತ್ಸವ, ೧೮ರಂದು ಬೆಳಿಗ್ಗೆ ಉತ್ಸವ, ಸಂಧಾನಸೇವೆ, ಅವಭೃತ ಸ್ನಾನ, ಹನುಮಂತೋತ್ಸವ, ಪೂರ್ಣಾಹುತಿ, ಧ್ವಜಾವತರಣ, ದೇವತಾಸಂಪ್ರೋಕ್ಷಣೆ, ಅಷ್ಟಾವಧಾನ, ಮಹಾಮಂಗಳಾರತಿ ಹಾಗು ೧೯ರಂದು ಬೆಳಿಗ್ಗೆ ಮಹಾಭಿಷೇಕ, ಅಷ್ಟಾವಧಾನ, ಮಹಾಮಂಗಳಾರತಿ, ಸಂಜೆ ಪಲ್ಲಕ್ಕಿ ಉತ್ಸವ, ಅಷ್ಟಾವಧಾನ, ಮಹಾಮಂಗಳಾರತಿ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಲಿವೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.


ಮೇ.೧೬ರಿಂದ ಶಾಲೆಗಳ ಆರಂಭಕ್ಕೆ ಭರದ ಸಿದ್ದತೆ

೭೫ ರಿಂದ ೮೦ ಸರ್ಕಾರಿ ಶಾಲೆಗಳಲ್ಲಿ ಸುಣ್ಣ-ಬಣ್ಣ ಬಳಿಯುವ ಕಾರ್ಯ ಪೂರ್ಣ

ಭದ್ರಾವತಿ ತಾಲೂಕಿನ ಹುಣಸೇಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲಮಾಧ್ಯಮ ಶಾಲೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್ ವೈಶಾಲಿಯವರು ಆಗಮಿಸಿ ಪರಿಶೀಲನೆ ನಡೆಸಿ ಸುಣ್ಣ-ಬಣ್ಣ ಬಳಿಯುವ ಕಾರ್ಯಕ್ಕೆ ಚಾಲನೆ ನೀಡಿದರು.
    ಭದ್ರಾವತಿ, ಮೇ. ೧೪ : ತಾಲೂಕಿನಲ್ಲಿ ಸೋಮವಾರದಿಂದ ಸರ್ಕಾರಿ ಶಾಲೆಗಳ ಆರಂಭಕ್ಕೆ ಭರದ ಸಿದ್ದತೆ ನಡೆಯುತ್ತಿದ್ದು, ಈ ಬಾರಿ ಸರ್ಕಾರಿ ಶಾಲೆಗಳು ಸುಣ್ಣ-ಬಣ್ಣಗಳಿಂದ ಕಂಗೊಳಿಸುತ್ತಿವೆ. ಹಸಿರು ತೋರಣಗಳಿಂದ ಅಲೃಂಕೃತಗೊಂಡು ಮಕ್ಕಳನ್ನು ಆಹ್ವಾನಿಸಲು ಶಾಲೆಗಳು ಎದುರು ನೋಡುತ್ತಿವೆ.
    ತಾಲೂಕಿನಲ್ಲಿ ಸರ್ಕಾರಿ, ಅನುದಾನ ಮತ್ತು ಅನುದಾನ ರಹಿತ ಒಟ್ಟು ೨೩೫ ಶಾಲೆಗಳಿದ್ದು, ಈ ಪೈಕಿ ೭೫ ರಿಂದ ೮೦ ಸರ್ಕಾರಿ ಶಾಲೆಗಳಲ್ಲಿ ಸುಣ್ಣ-ಬಣ್ಣ ಬಳಿಯುವ ಕಾರ್ಯ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಈ ಬಾರಿ ವಿಶೇಷ ಎಂದರೆ ಆಯಾ ಭಾಗದ ಶಾಲೆಗಳ ವ್ಯಾಪ್ತಿಯಲ್ಲಿನ ಜನಪ್ರತಿನಿಧಿಗಳು, ನಿವಾಸಿಗಳು, ದಾನಿಗಳು ಹಾಗು ಶಾಲಾಭಿವೃದ್ಧಿ ಸಮಿತಿ ಸದಸ್ಯರ ಸಹಕಾರದೊಂದಿಗೆ ಸುಣ್ಣ-ಬಣ್ಣ ಬಳಿಯುವ ಕಾರ್ಯ ನಡೆಯುತ್ತಿದೆ.

ಶನಿವಾರ ತಾಲೂಕಿನ ಎಮ್ಮೆಹಟ್ಟಿ, ತಳ್ಳಿಕಟ್ಟೆ ಸೇರಿದಂತೆ ಇತ್ಯಾದಿಗಳ ಭಾಗಗಳಲ್ಲಿ ಸರ್ಕಾರಿ ಶಾಲೆಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದು, ಬಹುತೇಕ ಶಾಲೆಗಳಲ್ಲಿ ಈಗಾಗಲೇ ಸುಣ್ಣ-ಬಣ್ಣ ಬಳಿಯುವ ಕಾರ್ಯ ಮುಕ್ತಾಯಗೊಂಡಿದೆ. ಉಳಿದ ೩-೪ ದಿನಗಳಲ್ಲಿ ಎಲ್ಲಾ ಶಾಲೆಗಳು ಸುಣ್ಣ-ಬಣ್ಣಗಳಿಂದ ಕಂಗೊಳಿಸಲಿವೆ. ಅಲ್ಲದೆ ಅಡುಗೆ ಸಿಬ್ಬಂದಿಗಳಿಗೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಮೊದಲು ಸ್ವಚ್ಛತೆಗೆ ಹೆಚ್ಚಿನ ಗಮನ ನೀಡುವಂತೆ ಹಾಗು ಪರಿಕರಗಳನ್ನು ಪರಿಶೀಲಿಸಿಕೊಳ್ಳುವಂತೆ ಸೂಚಿಸಲಾಗಿದೆ. ಜಿಲ್ಲಾ ಅಕ್ಷರ ದಾಸೋಹ ಕೇಂದ್ರದಿಂದ ತಾಲೂಕು ಕೇಂದ್ರಕ್ಕೆ  ಬಿಸಿಯೂಟ ತಯಾರಿಕೆಗೆ ಅಗತ್ಯವಿರುವ ದಿನಸಿ ಸಾಮಗ್ರಿಗಳು ಪೂರೈಕೆಯಾಗಿದ್ದು, ಇಲ್ಲಿಂದ ಎಲ್ಲಾ ಶಾಲೆಗಳಿಗೂ ಸರಬರಾಜು ಮಾಡಲಾಗುವುದು.
                                                                       - ಎ.ಕೆ ನಾಗೇಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ, ಭದ್ರಾವತಿ.

    ಸರ್ಕಾರ  ಸೋಮವಾರದಿಂದ ಶಾಲೆಗಳನ್ನು  ಕಡ್ಡಾಯವಾಗಿ ಆರಂಭಿಸಲು ಸೂಚಿಸಿರುವ ಹಿನ್ನಲೆಯಲ್ಲಿ ಕಳೆದ ೫-೬ ದಿನಗಳಿಂದ ಭರದ ಸಿದ್ದತೆಗಳು ನಡೆಯುತ್ತಿವೆ. ಶಾಲಾ ಆರಂಭದೊಂದಿಗೆ ಬಿಸಿಯೂಟ ಸಹ ಆರಂಭಗೊಳ್ಳುವುದರಿಂದ ಅಡುಗೆ ಸಿಬ್ಬಂದಿಗಳು ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸುವುದು, ಅಡುಗೆ ಮನೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು. ಪರಿಕರಗಳ ಪರಿಶೀಲನೆ ಮಾಡಿಕೊಳ್ಳುವುದು ಸೇರಿದಂತೆ ಇನ್ನಿತರ ವಿಚಾರಗಳ ಕುರಿತಂತೆ ಇಲಾಖೆ ವತಿಯಿಂದ ಶಾಲೆಗಳಿಗೆ ಮಾಹಿತಿ ನೀಡಲಾಗಿದೆ. ಈ ನಡುವೆ ಶಿಕ್ಷಣ ಇಲಾಖೆಗೆ ಅಗತ್ಯವಿರುವ ಎಲ್ಲಾ ಸಹಕಾರವನ್ನು ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳು ನೀಡುತ್ತಿವೆ.

ವಿಶೇಷವಾಗಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಲು ಈ ಬಾರಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ವತಿಯಿಂದ ಹೆಚ್ಚಿನ ಆಸಕ್ತಿವಹಿಸಿ ಗ್ರಾಮ ಮಟ್ಟದಲ್ಲಿ ಆಯಾ ಪಂಚಾಯಿತಿಗಳ, ಶಾಲಾಭಿವೃದ್ಧಿ ಸಮಿತಿ ಹಾಗು ದಾನಿಗಳ ಸಹಕಾರದೊಂದಿಗೆ ಸುಣ್ಣ-ಬಣ್ಣ ಬಳಿಯುವ ಕಾರ್ಯ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸಣ್ಣ-ಪುಟ್ಟ ದುರಸ್ತಿ ಕಾರ್ಯಗಳನ್ನು ಸಹ ಕೈಗೊಳ್ಳಲಾಗುವುದು.
                                               - ರಮೇಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಭದ್ರಾವತಿ

    ಈಗಾಗಲೇ ತಾಲೂಕಿನ ಹುಣಸೇಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲಮಾಧ್ಯಮ ಶಾಲೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್ ವೈಶಾಲಿಯವರು ಆಗಮಿಸಿ ಪರಿಶೀಲನೆ ನಡೆಸಿದ್ದು, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲ ಸೌರ್ಕರ್ಯಗಳ ಕುರಿತು ಹೆಚ್ಚಿನ ಗಮನ ಹರಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ಶಾಲೆಗೆ ಸುಣ್ಣ-ಬಣ್ಣ ಬಳಿಯುವ ಕಾರ್ಯಕ್ಕೆ ಚಾಲನೆ ನೀಡಿ ತೆರಳಿದ್ದು, ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
    ಮಹಾಮಾರಿ ಕೊರೋನಾ ಹಿನ್ನಲೆಯಲ್ಲಿ ಕಳೆದ ಸುಮಾರು ೨ ವರ್ಷಗಳಿಂದ ಸಮರ್ಪಕವಾಗಿ ಶಿಕ್ಷಣ ಲಭ್ಯವಾಗದೆ ವಂಚಿತರಾಗಿರುವ ಮಕ್ಕಳಿಗೆ ಕಲಿಕೆಯಲ್ಲಿನ ಕೊರತೆಯನ್ನು ನೀಗಿಸಲು ವಿಶೇಷ ಕ್ರಮಗಳನ್ನು ಇಲಾಖೆ ಕೈಗೊಂಡಿದೆ. ಇಲಾಖೆಯ ಪ್ರಯತ್ನ ಸಾಕಾರಗೊಳ್ಳುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.

ನಾನು ಹಲವು ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಎಲ್ಲಾ ಶಾಲೆಗಳಲ್ಲೂ ಬಹುತೇಕ ಸುಣ್ಣ-ಬಣ್ಣವಾಗಿದೆ. ಆದರೆ ಈ ಶಾಲೆ ಕಳೆದ ಸುಮಾರು ೧೦ ವರ್ಷಗಳಿಂದ ಸುಣ್ಣ-ಬಣ್ಣ ಕಂಡಿರಲಿಲ್ಲ. ಇದೀಗ ಎಲ್ಲರ ಸಹಕಾರದಿಂದ ಸುಣ್ಣ-ಬಣ್ಣ ನಡೆಯುತ್ತಿರುವುದು ತುಂಬಾ ಸಂತಸವನ್ನುಂಟು ಮಾಡಿದೆ. ಶಾಲೆಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಗ್ರಾಮಸ್ಥರು, ದಾನಿಗಳು, ಶಿಕ್ಷಕರು, ಶಾಲಾಭಿವೃದ್ಧಿ ಸದಸ್ಯರು ಕ್ರೋಢಿಕರಣಕ್ಕೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು.
                                                                                                        - ಅನಿತಾ ಮೇರಿ, ಶಿಕ್ಷಕಿ,  
                                                       ಹುಣಸೇಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲಮಾಧ್ಯಮ ಶಾಲೆ



ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಸೇರಿದಂತೆ ವಿವಿಧೆಡೆ ಸರ್ಕಾರಿ ಶಾಲೆಗಳಿಗೆ ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ವತಃ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.

Friday, May 13, 2022

ಖಬರ್‌ಸ್ಥಾನದಲ್ಲಿ ರು. ೬ ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ಪ್ಲಾಟ್ ಫಾರಂ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಭದ್ರಾವತಿ ನಗರಸಭೆ ವಾರ್ಡ್ ೨೩ರ ತಿಮ್ಲಾಪುರ ರಸ್ತೆಯಲ್ಲಿರುವ ಖಬರ್‌ಸ್ಥಾನದಲ್ಲಿ ಪ್ರಾರ್ಥನೆ ಮಾಡಲು ಸುಮಾರು ರು. ೬ ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ಪ್ಲಾಟ್ ಫಾರಂ ನಿರ್ಮಾಣಕ್ಕೆ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಲಾಯಿತು.
    ಭದ್ರಾವತಿ, ಮೇ. ೧೩: ನಗರಸಭೆ ವಾರ್ಡ್ ೨೩ರ ತಿಮ್ಲಾಪುರ ರಸ್ತೆಯಲ್ಲಿರುವ ಖಬರ್‌ಸ್ಥಾನದಲ್ಲಿ ಪ್ರಾರ್ಥನೆ ಮಾಡಲು ಸುಮಾರು ರು. ೬ ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ಪ್ಲಾಟ್ ಫಾರಂ ನಿರ್ಮಾಣಕ್ಕೆ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಲಾಯಿತು.
    ಕಾಗದನಗರ, ಜೆಪಿಎಸ್ ಕಾಲೋನಿ, ಉಜ್ಜನಿಪುರ, ಬುಳ್ಳಾಪುರ ಹಾಗು ತಿಮ್ಲಾಪುರ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ ಮುಸ್ಲಿಂ ಸಮುದಾಯವರಿಗೆ ಈ ಖಬರ್‌ಸ್ಥಾನ ಹೆಚ್ಚು ಅವಶ್ಯಕವಾಗಿದೆ. ಖಬರ್‌ಸ್ಥಾನವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಿಕೊಂಡು ಬರಲಾಗುತ್ತಿದೆ.
    ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸದಸ್ಯರಾದ ಬಿ.ಕೆ ಮೋಹನ್, ಪ್ರೇಮಾ ಬದರಿನಾರಾಯಣ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಉಪಾಧ್ಯಕ್ಷ ಎಚ್. ನಾಗರಾಜ್, ಮುಸ್ಲಿಂ ಸಮುದಾಯದ ಪ್ರಮುಖರಾದ ಜಹೀರ್ ಜಾನ್, ಅಮೀರ್ ಜಾನ್, ಜೆಬಿಟಿ ಬಾಬು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಸಂತ ಜೋಸೆಫರ ದೇವಾಲಯಕ್ಕೆ ಶಾಂತಕುಮಾರ್ ಕೆನಡಿ ಭೇಟಿ

ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ಮಂಡಳಿ ರಾಜ್ಯಾಧ್ಯಕ್ಷ : ಸನ್ಮಾನ

ಭದ್ರಾವತಿ ಕಾಗದನಗರದ ಸಂತ ಜೋಸೆಫರ ದೇವಾಲಯಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ಮಂಡಳಿ ರಾಜ್ಯಾಧ್ಯಕ್ಷ ಶಾಂತಕುಮಾರ್ ಕೆನಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಮೇ. ೧೩: ಕಾಗದನಗರದ ಸಂತ ಜೋಸೆಫರ ದೇವಾಲಯಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ಮಂಡಳಿ ರಾಜ್ಯಾಧ್ಯಕ್ಷ ಶಾಂತಕುಮಾರ್ ಕೆನಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಈ ಸಂದರ್ಭದಲ್ಲಿ ಮಾತನಾಡಿದ ಶಾಂತಕುಮಾರ್, ಕ್ರೈಸ್ತರಿಗೆ ಮಂಡಳಿ ವತಿಯಿಂದ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇವುಗಳ ಕುರಿತು ತಿಳಿದುಕೊಳ್ಳುವ ಜೊತೆಗೆ ಸದ್ಬಳಕೆ ಮಾಡಿಕೊಳ್ಳಬೇಕು. ಸರ್ಕಾರ ಕ್ರೈಸ್ತರ ಅಭಿವೃದ್ಧಿಗೆ ಬದ್ಧವಾಗಿದ್ದು, ಯಾವುದೇ ರೀತಿ ಗೊಂದಲಕ್ಕೆ ಒಳಗಾಗದಿರುವಂತೆ ಮನವಿ ಮಾಡಿದರು.
    ಮಂಡಳಿ ಮಾಜಿ ಸದಸ್ಯ ವಿನ್ಸೆಂಟ್ ರೋಡಿಗ್ರಸ್, ದೇವಾಲಯದ ಧರ್ಮಗುರು ಫಾದರ್ ಡಾಮಿನಿಕ್ ಕ್ರಿಸ್ತುರಾಜ್, ಉಜ್ಜನಿಪುರ ಡಾನ್ ಬೋಸ್ಕೋ ಸಂಸ್ಥೆ ನಿರ್ದೇಶಕ ಫಾದರ್ ಆರೋಗ್ಯ ರಾಜ್ ಮತ್ತು ದೇವಾಲಯ ಕಾರ್ಯದರ್ಶಿ ಸೆಲ್ವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಮೇ.೧೬ರಂದು ಸಾಮೂಹಿಕ ವಿವಾಹ

ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಕ್ಕುಂದ ಗ್ರಾಮದ ಶ್ರೀ ಗುಡ್ಡದ ಕೆಂಚಮ್ಮ ಹಾಗು ಮಾತಂಗಮ್ಮ ಗವಿಸಿದ್ದೇಶ್ವರ ದೇವಸ್ಥಾನ.
    ಭದ್ರಾವತಿ, ಮೇ. ೧೩: ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಕ್ಕುಂದ ಗ್ರಾಮದ ಶ್ರೀ ಗುಡ್ಡದ ಕೆಂಚಮ್ಮ ಹಾಗು ಮಾತಂಗಮ್ಮ ಗವಿಸಿದ್ದೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಮೇ.೧೬ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಶಿವಮೊಗ್ಗ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ಅಂದು ಬೆಳಿಗ್ಗೆ ೯.೫೦ ರಿಂದ ೧೦.೫೦ರವರೆಗೆ ಸಾಮೂಹಿಕ ವಿವಾಹ ನಡೆಯಲಿದ್ದು, ಅಲ್ಲದೆ ಶ್ರೀ ದೇವಿಯವರ ೧೦೧ ಎಡೆ ಹಾಗು ಚಂಡಿಕಾ ಹೋಮ ಕಾರ್ಯಕ್ರಮ ನಡೆಯಲಿದೆ.
    ಇದಕ್ಕೂ ಮೊದಲು ಬೆಳಿಗ್ಗೆ ೮ ಗಂಟೆಗೆ ಉಕ್ಕುಂದ ಗ್ರಾಮ ಒಳಗೊಂಡಂತೆ ಸುತ್ತಮುತ್ತಲಿನ ಗ್ರಾಮಗಳ ದೇವಾನು ದೇವತೆಗಳ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.


ದಿಂಡಿ ಉತ್ಸವ : ಅದ್ದೂರಿಯಾಗಿ ಜರುಗಿದ ರಾಜಬೀದಿ ಉತ್ಸವ

ಭಾವಸಾರ ಕ್ಷತ್ರೀಯ ಸಮಾಜದ ವತಿಯಿಂದ ಭದ್ರಾವತಿ ಭೂತನಗುಡಿಯಲ್ಲಿರುವ ಕೃಷ್ಣ ರುಕ್ಮಿಣಿ ದೇವಸ್ಥಾನದಲ್ಲಿ ೩ ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ದಿಂಡಿ ಉತ್ಸವ ಅಂಗವಾಗಿ ಕೊನೆಯ ದಿನವಾದ ಶುಕ್ರವಾರ ಬೆಳಿಗ್ಗೆ ರಾಜಬೀದಿ ಉತ್ಸವ ನಡೆಯಿತು.
    ಭದ್ರಾವತಿ, ಮೇ. ೧೩: ಭಾವಸಾರ ಕ್ಷತ್ರೀಯ ಸಮಾಜದ ವತಿಯಿಂದ ನಗರದ ಭೂತನಗುಡಿಯಲ್ಲಿರುವ ಕೃಷ್ಣ ರುಕ್ಮಿಣಿ ದೇವಸ್ಥಾನದಲ್ಲಿ ೩ ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ದಿಂಡಿ ಉತ್ಸವ ಅಂಗವಾಗಿ ಕೊನೆಯ ದಿನವಾದ ಶುಕ್ರವಾರ ಬೆಳಿಗ್ಗೆ ರಾಜಬೀದಿ ಉತ್ಸವ ನಡೆಯಿತು.
    ನಗರದ ಬಿ.ಎಚ್ ರಸ್ತೆ, ಸಿ.ಎನ್ ರಸ್ತೆ, ತರಕೆರೆ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಅಲಂಕೃತಗೊಂಡ ರಥದಲ್ಲಿ ಕೃಷ್ಣ ರುಕ್ಮಿಣಿ ಮೂರ್ತಿಗಳ ಉತ್ಸವ ಮೆರವಣಿಗೆ ನಡೆಯಿತು.
    ಉತ್ಸವದಲ್ಲಿ ಭಾವಸಾರ ಕ್ಷತ್ರೀಯ ಸಮಾಜದವರು ಭಜನೆ, ಕೀರ್ತನೆಗಳೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
.    ವಿವಿಧ ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷಗಳ ಪ್ರಮುಖರು, ಗಣ್ಯರು, ಜನಪ್ರತಿನಿಧಿಗಳು ಉತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಭಾವಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷ ಡಿ.ಕೆ ರಾಘವೇಂದ್ರರಾವ್ ಹಾಗು ಪದಾಧಿಕಾರಿಗಳು ಉಪಸ್ಥಿತರಿದ್ದರು.