Monday, June 27, 2022

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಮೊದಲ ದಿನ ೧೨ ವಿದ್ಯಾರ್ಥಿಗಳು ಗೈರು

    ಭದ್ರಾವತಿ, ಜೂ. ೨೭: ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಮೊದಲ ದಿನ ೧೨೪ ವಿದ್ಯಾರ್ಥಿಗಳ ಪೈಕಿ ೧೧೨ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಿದ್ದಾರೆ.
    ಈ ಕುರಿತು ಮಾಹಿತಿ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮೊದಲ ದಿನ ವಿಜ್ಞಾನ ವಿಷಯ ಪರೀಕ್ಷೆ ನಡೆದಿದ್ದು, ನ್ಯೂಟೌನ್ ಸಿಲ್ವರ್ ಜ್ಯೂಬಿಲಿ ಸರ್ಕಾರಿ ಜ್ಯೂನಿಯರ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ೫೬ ವಿದ್ಯಾರ್ಥಿಗಳ ಪೈಕಿ ೫೨ ಹಾಗು ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ೬೮ ವಿದ್ಯಾರ್ಥಿಗಳ ಪೈಕಿ ೬೦ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟು ೧೨ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿಲ್ಲ. 

ಸ್ನೇಹ ಜೀವಿ ಬಳಗದಿಂದ ಕೆಂಪೇಗೌಡ ಜಯಂತಿ : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

 ಭದ್ರಾವತಿ ಸ್ನೇಹ ಜೀವಿ ಬಳಗದ ವತಿಯಿಂದ ಪೊಲೀಸ್ ಉಮೇಶ್ ನೇತೃತ್ವದಲ್ಲಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಆಟೋ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಜೂ. ೨೭ : ಸ್ನೇಹ ಜೀವಿ ಬಳಗದ ವತಿಯಿಂದ ಪೊಲೀಸ್ ಉಮೇಶ್ ನೇತೃತ್ವದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಸೋಮವಾರ ಅದ್ದೂರಿಯಾಗಿ ಆಚರಿಸಲಾಯಿತು.
    ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಆಟೋ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಿಹಿ ಹಂಚಿಕೆ ಹಾಗು ಅನ್ನಸಂತರ್ಪಣೆ ನಡೆಸಲಾಯಿತು. ಅಲ್ಲದೆ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಮಹಿಳೆಯರಿಗೆ ಉಚಿತವಾಗಿ ಸೀರೆ ವಿತರಿಸಲಾಯಿತು.
    ಪೊಲೀಸ್ ಉಮೇಶ್ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸುವ ಮೂಲಕ ಅವರಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುವ ಕಾರ್ಯ ಕೈಗೊಳ್ಳಲಾಗುವುದು ಎಂದರು.
    ಕೆಂಪೇಗೌಡರ ಜಯಂತಿಯಂದು ಮಹಿಳೆಯರನ್ನು ವಿಶೇಷವಾಗಿ ಗೌರವಿಸುವ ಮೂಲಕ ಉಚಿತವಾಗಿ ಸೀರೆ ವಿತರಿಸಲಾಗುತ್ತಿದೆ. ಪ್ರತಿಯೊಂದು ಕಾರ್ಯದ ಹಿಂದೆ ಮಹಿಳೆಯರು ಇದ್ದಾರೆ. ಅವರನ್ನು ಸಮಾಜದಲ್ಲಿ ಪ್ರತಿಯೊಬ್ಬರು ಗೌರವಿಸುವ ಜೊತೆಗೆ ಅವರನ್ನು ಸಮಾನವಾಗಿ ಕಾಣಬೇಕೆಂಬ ಆಶಯ ಇದಾಗಿದೆ ಎಂದರು.
    ತಾಲೂಕು ಆಟೋ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಲಕ್ಷ್ಮಣ ಮಾತನಾಡಿ, ಸ್ನೇಹ ಜೀವಿ ಬಳಗದ ವತಿಯಿಂದ ಉತ್ತಮ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ತಾಲೂಕು ಒಕ್ಕಲಿಗರ ಸಂಘದ ಮಹಿಳಾ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ಸತೀಶ್, ಕಸಾಪ ಮಾಜಿ ಅಧ್ಯಕ್ಷ ಅಪೇಕ್ಷ ಮಂಜುನಾಥ್, ಸಂದೇಶ್‌ಗೌಡ, ಸುಹಾಸ್‌ಗೌಡ ಸೇರಿದಂತೆ ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು.

ನಾಡಪ್ರಭು ಕೆಂಪೇಗೌಡರು ಜಾತ್ಯಾತೀತ ಮನೋಭಾವದ ವ್ಯಕ್ತಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಹಾಗು ವಿವಿಧ ಸಂಘಟನೆಗಳ ವತಿಯಿಂದ ಸೋಮವಾರ ಸಿದ್ದರೂಢ ನಗರದ ಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಶಾಸಕ ಬಿ.ಕೆ ಸಂಗಮೇಶ್ವರ ಉದ್ಘಾಟಿಸಿದರು.
    ಭದ್ರಾವತಿ, ಜೂ. ೨೭ : ನಾಡಪ್ರಭು ಕೆಂಪೇಗೌಡರು ಜಾತ್ಯಾತೀತ ಮನೋಭಾವದವರಾಗಿದ್ದು, ಕೇವಲ ಒಂದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಕೆಂಪೇಗೌಡರ ದಾರಿಯಲ್ಲಿ ನಾವೆಲ್ಲರೂ ಸಾಗಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಹಾಗು ವಿವಿಧ ಸಂಘಟನೆಗಳ ವತಿಯಿಂದ ಸೋಮವಾರ ಸಿದ್ದರೂಢ ನಗರದ ಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಪ್ರಸ್ತುತ ಬೆಂಗಳೂರು ಮಹಾನಗರವನ್ನು ವಿಶ್ವವೇ ಎದುರು ನೋಡುವಂತಾಗಿದೆ. ಇಂತಹ ನಗರ ನಿರ್ಮಾಣಕ್ಕೆ ಕೆಂಪೇಗೌಡರ ಜಾತ್ಯಾತೀತ ಮನೋಭಾವ ಕಾರಣವಾಗಿದೆ. ಎಲ್ಲರನ್ನು ಒಗ್ಗೂಡಿಸಿ ಆಧುನಿಕ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದಾರೆ. ಇಂತಹ ಆದರ್ಶ ವ್ಯಕ್ತಿಯನ್ನು ನಾವೆಲ್ಲರೂ ಸ್ಮರಿಸುವ ಮೂಲಕ ಅವರ ದಾರಿಯಲ್ಲಿ ಸಾಗಬೇಕಾಗಿದೆ ಎಂದರು.
    ಕ್ಷೇತ್ರದಲ್ಲಿರುವ ಒಕ್ಕಲಿಗರ ಸಮುದಾಯದ ಏಳಿಗೆಗೆ ಬದ್ಧನಾಗಿದ್ದು, ಈ ಹಿಂದೆ ಸಮುದಾಯ ಭವನ ನಿರ್ಮಾಣಕ್ಕೆ ೧ ಕೋ. ರು. ಬಿಡುಗಡೆ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಸಮುದಾಯವರು ಯಾರು ಸಹ ಮುಂದೆ ಬಂದಿಲ್ಲ. ಈಗಲೂ ಸಹ ಅನುದಾನ ಬಿಡುಗಡೆ ಮಾಡಿಸಿಕೊಡಲು ಸಿದ್ದವಿದ್ದೇನೆ ಎಂದರು.
    ಉಪನ್ಯಾಸ ನೀಡಿದ ಕುವೆಂಪು ವಿಶ್ವ ವಿದ್ಯಾನಿಲಯದ ಪ್ರೊ. ಇ. ಚಂದ್ರಶೇಖರ್, ಕೆಂಪೇಗೌಡರು ಒಬ್ಬ ರಾಜನಾಗಿ, ಸಾಮಾಜಿಕ ಸುಧಾರಕನಾಗಿ ಸ್ವಾಮಿ ನಿಷ್ಠೆಯನ್ನು ಪ್ರಾಮಾಣಿಕವಾಗಿ ಪಾಲಿಸಿಕೊಂಡು ಬಂದವರು. ಇವರ ನಡೆ ವಿಭಿನ್ನ ರೀತಿಯಿಂದ ಕೂಡಿದ್ದು, ವೈಶಿಷ್ಟ್ಯ ಪೂರ್ಣವಾಗಿದೆ. ಇವರು ಹೊಂದಿದ್ದ ಜನರ ಬಗೆಗಿನ ಕಾಳಜಿ, ದೂರದೃಷ್ಟಿ, ಆಡಳಿತ ವೈಖರಿಗಳು ಎಲ್ಲರನ್ನು ಬೆರಗುಗೊಳಿಸುತ್ತವೆ ಎಂದರು.
    ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ ಮಾತನಾಡಿ, ಕೆಂಪೇಗೌಡ ಜಯಂತಿ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಸರ್ಕಾರದ ನೀತಿ ನಿರೂಪಣೆಯಂತೆ ಕಾರ್ಯಕ್ರಮ ಆಯೋಜನೆ ಮಾಡಿರುವುದು ಸರಿಯಷ್ಟೆ, ಇದರಿಂದಾಗಿ ಈ ಬಾರಿ ಕೆಲವು ಗೊಂದಲಗಳು ಉಂಟಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದರು.
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಮನು ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್. ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ನಗರಸಭಾ ಸದಸ್ಯರಾದ ಬಿ.ಕೆ ಮೋಹನ್, ಲತಾ ಚಂದ್ರಶೇಖರ್, ಶೃತಿ ವಸಂತ್, ಪಲ್ಲವಿ ದಿಲೀಪ್, ಅನುಪಮಾ ಚನ್ನೇಶ್, ಅನುಸುಧಾ, ಅನಿತಾ ಮಲ್ಲೇಶ್, ಬಿ.ಪಿ ಸ್ವರ್ಣಮಂಗಳ ಭೈರಪ್ಪ, ಕೋಟೇಶ್ವರ ರಾವ್, ಮಣಿ ಎಎನ್‌ಎಸ್, ಕಾಂತರಾಜ್, ಜಯಶೀಲ ಸುರೇಶ್, ಸವಿತಾ ಉಮೇಶ್, ಕೋಟೇಶ್ವರರಾವ್, ಉದಯಕುಮಾರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಮತಿ ಕಾರಂತ್ ತಂಡವರು ಪ್ರಾರ್ಥಿಸಿದರು. ಶಿರಸ್ತೇದಾರ್ ರಾಧಾಕೃಷ್ಣಭಟ್ ಸ್ವಾಗತಿಸಿದರು. ಉಪ ತಹಸೀಲ್ದಾರ್ ಮಂಜ್ಯಾನಾಯ್ಕ ನಿರೂಪಿಸಿದರು.


ಕೆಂಪೇಗೌಡ ಜಯಂತಿ ಬೃಹತ್ ಮೆರವಣಿಗೆಗೆ ಬಿ.ಕೆ ಸಂಗಮೇಶ್ವರ್ ಚಾಲನೆ



ಭದ್ರಾವತಿ, ಜೂ. ೨೭: ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಹಾಗು ವಿವಿಧ ಸಂಘಟನೆಗಳ ವತಿಯಿಂದ ಸೋಮವಾರ ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಮೆರವಣಿಗೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
ಬಿ.ಎಚ್ ರಸ್ತೆ ಅಪ್ಪರ್ ಹುತ್ತಾದಿಂದ ಸಭಾ ವೇದಿಕೆವರೆಗೂ ನಾಡಪ್ರಭು ಕೆಂಪೇಗೌಡ ಹಾಗೂ ಶ್ರೀ ಕ್ಷೇತ್ರ ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಭಾವಚಿತ್ರ ಹಾಗು ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಬೃಹತ್ ಮೆರವಣಿಗೆ ಬಿ.ಎಚ್ ರಸ್ತೆ ಮೂಲಕ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ, ತಾಲೂಕು ಕಛೇರಿ ರಸ್ತೆಯಲ್ಲಿ ಸಾಗಿ ಕೆಎಸ್‌ಆರ್‌ಟಿಸಿ ಡಿಪೋ ವೃತ್ತ ಮೂಲಕ ಸಿದ್ದಾರೂಢನಗರದ ಬಸವೇಶ್ವರ ಸಭಾ ಭವನದ ವರೆಗೂ ಸಾಗಿತು.
ಪುರುಷ ಮತ್ತು ಮಹಿಳೆಯರ ಡೊಳ್ಳು ಕುಣಿತ, ಗೊಂಬೆ ನೃತ್ಯ ಸೇರಿದಂತೆ ಇನ್ನಿತರ ಕಲಾತಂಡಗಳು ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿದವು. ಕೆಂಪೇಗೌಡ ವೇಷದಾರಿ ಎಲ್ಲರ ಗಮನ ಸೆಳೆದರು.
ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ಜಿಲ್ಲಾಧ್ಯಕ್ಷ ಎಂ ಶ್ರೀಕಾಂತ್, ಎಂಎಸ್ಎಂಇ ಘಟಕದ ರಾಜ್ಯಾಧ್ಯಕ್ಷ ಎಚ್.ಸಿ ರಮೇಶ್, ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಬಾಲಕೃಷ್ಣ, ತಿಮ್ಮೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಪಿ ಯೋಗೇಶ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ ಹಾಗೂ ಪದಾಧಿಕಾರಿಗಳು, ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷ ಎಂ.ಎಸ್ ಸುಧಾಮಣಿ ಹಾಗೂ ಪದಾಧಿಕಾರಿಗಳು, ಕೆಂಪೇಗೌಡ ಯುವ ಪಡೆ ಅಧ್ಯಕ್ಷ ಆರ್. ಮೋಹನ್ ಕುಮಾರ್ ಪದಾಧಿಕಾರಿಗಳು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್. ರಮೇಶ್, ನಗರಸಭೆ ಅಧ್ಯಕ್ಷೆ ಗೀತ ರಾಜಕುಮಾರ್,  ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಮನು ಕುಮಾರ್ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು, ನಗರಸಭೆ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಒಕ್ಕಲಿಗ ಸಮಾಜದ ಮುಖಂಡರು ಗಣ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.



ಅನಸೂಯಾ ನಿಧನ

ಅನಸೂಯಾ
ಭದ್ರಾವತಿ, ಜೂ. ೨೭ : ಹಳೇನಗರದ ಭೂತನಗುಡಿ ನಿವಾಸಿ, ಅನಿಲ್ ಸ್ಟೋರ್‍ಸ್‌ನ ಟಿ.ಎಚ್ ಶ್ರೀನಿವಾಸ್ ಶೆಟ್ಟಿ ಅವರ ಪತ್ನಿ ಅನಸೂಯಾ(೭೩) ಭಾನುವಾರ ರಾತ್ರಿ ನಿಧನ ಹೊಂದಿದರು.
  ಪತಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಹೊಂದಿದ್ದರು. ಮೃತರ ಅಂತ್ಯಕ್ರಿಯೆ ಸೋಮವಾರ ಹೊಳೆಹೊನ್ನೂರು ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಮೃತರ ನಿಧನಕ್ಕೆ ಆರ್ಯವೈಶ್ಯ ಸಮಾಜ ಸಂತಾಪ ಸೂಚಿಸಿದೆ.


Sunday, June 26, 2022

ಮಾದಕ ವಸ್ತುಗಳ ಕಳ್ಳಸಾಗಣೆ : ದೇಶದ ಯುವ ಶಕ್ತಿಗೆ ಮಾರಕ

ಭದ್ರಾವತಿ ಕಾಗದನಗರದ ಆಂಗ್ಲ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾದಕ ವ್ಯಸನ ಮತ್ತು ಕಳ್ಳ ಸಾಗಣೆ ವಿರುದ್ಧ ಜಾಗೃತಿ ಮಾಸಾಚರಣೆ ಕಾರ್ಯಕ್ರಮವನ್ನು ಪೇಪರ್‌ಟೌನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಇ.ಓ ಮಂಜುನಾಥ್  ಉದ್ಘಾಟಿಸಿ ಮಾತನಾಡಿದರು.
    ಭದ್ರಾವತಿ, ಜೂ. ೨೬: ಮಾದಕ ವಸ್ತುಗಳ ಸೇವನೆಯಿಂದಾಗಿ ಸಮಾಜದಲ್ಲಿ ಕಾನೂನು ಬಾಹಿರ ಕೃತ್ಯಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ಯುವ ಸಮೂಹ ದಾರಿ ತಪ್ಪುವಂತಾಗಿದೆ ಎಂದು ಪೇಪರ್‌ಟೌನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಇ.ಓ ಮಂಜುನಾಥ್ ಆತಂಕ ವ್ಯಕ್ತಪಡಿಸಿದರು.
    ಅವರು ಕಾಗದನಗರದ ಆಂಗ್ಲ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾದಕ ವ್ಯಸನ ಮತ್ತು ಕಳ್ಳ ಸಾಗಣೆ ವಿರುದ್ಧ ಜಾಗೃತಿ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಮಾದಕ ವಸ್ತುಗಳ ಸೇವನೆ ಚಟಕ್ಕೆ ಒಳಗಾದವರನ್ನು ಗುರಿಯಾಗಿಸಿಕೊಂಡು ಕಳ್ಳ ಸಾಗಣೆದಾರರು ಅಕ್ರಮವಾಗಿ ಮಾದಕ ವಸ್ತುಗಳನ್ನು ದೇಶಕ್ಕೆ ಸಾಗಾಣೆ ಮಾಡಿಕೊಳ್ಳುವ ಮೂಲಕ ದೇಶದ ಯುವ ಶಕ್ತಿಗೆ ಮಾರಕವಾಗುತ್ತಿದ್ದಾರೆ. ಮಾದಕ ವಸ್ತುಗಳ ಬಳಕೆ ಮತ್ತು ಅವುಗಳ ಕಳ್ಳ ಸಾಗಣೆ ಜಾಗತಿಕ ಸಮಸ್ಯೆಯಾಗಿದ್ದು, ಯುವಕರು ಜಾಗೃತರಾಗಿ ಇದರ ವಿರುದ್ಧ  ಹೋರಾಟ ನಡೆಸಬೇಕೆಂದು ಕರೆ ನೀಡಿದರು.
    ಎಂಪಿಎಂ ಶಿಕ್ಷಣ ಸಂಸ್ಥೆ ಖಜಾಂಚಿ ರವಿಕುಮಾರ್ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದಾಗಿ ಯುವ ಸಮುದಾಯ ಹಲವು ಕಾಯಿಲೆಗಳಿಗೆ ತುತ್ತಾಗುವ ಜೊತೆಗೆ ಸಮಾಜದಲ್ಲಿ ದಾರಿ ತಪ್ಪುವಂತಾಗುತ್ತದೆ. ಈ ಹಿನ್ನಲೆಯಲ್ಲಿ ಎಚ್ಚರ ವಹಿಸುವ ಮೂಲಕ ಮಾದಕ ವಸ್ತುಗಳಿಂದ ದೂರವಿರಬೇಕೆಂದರು.
    ಪ್ರಾಂಶುಪಾಲ ಆರ್. ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ಡಿ. ನಾಗರಾಜ್ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗು ಚಿತ್ರಕಲಾ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಿಕ್ಷಕರಾದ ಹೆನ್ರಿ, ಅನುರಾಧ, ದಿವ್ಯ, ವರಲಕ್ಷ್ಮಿ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸ್ನೇಹಜೀವಿ ಬಳಗದಿಂದ ನಾಡಪ್ರಭು ಕೆಂಪೇಗೌಡರ ಜಯಂತಿ

ಪೊಲೀಸ್ ಉಮೇಶ್
    ಭದ್ರಾವತಿ, ಜೂ. ೨೬ : ಸ್ನೇಹ ಜೀವಿ ಬಳಗದ ವತಿಯಿಂದ ಪೊಲೀಸ್ ಉಮೇಶ್ ನೇತೃತ್ವದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಜೂ. ೨೭ರಂದು ಬೆಳಿಗ್ಗೆ ೯ ಗಂಟೆಗೆ ನಗರದ ಬಿ.ಎಚ್ ರಸ್ತೆ  ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಆಟೋ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದೆ.
    ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಸಿಹಿ ಹಂಚಿಕೆ, ಅನ್ನಸಂತರ್ಪಣೆ ಸಹ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮಾಜದ ವಿವಿಧ ಸಂಘಟನೆಗಳ ಪ್ರಮುಖರು, ಸಮಾಜದ ಗಣ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪೊಲೀಸ್ ಉಮೇಶ್ ಕೋರಿದ್ದಾರೆ.