Wednesday, August 24, 2022

ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪರವಾನಗಿ ಪಡೆಯಲು ನಗರಸಭೆಯಲ್ಲಿ ಏಕ ಗವಾಕ್ಷಿ

ಗ್ರಾಮಾಂತರದಲ್ಲಿ ಆಯಾ ಪಂಚಾಯಿತಿಗಳಲ್ಲಿ ಅರ್ಜಿ ಸ್ವೀಕಾರ

ಭದ್ರಾವತಿ ತಾಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ಅಧ್ಯಕ್ಷತೆಯಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಮುಂಜಾಗ್ರತೆ ಸಭೆ ನಡೆಯಿತು.
    ಭದ್ರಾವತಿ, ಆ. ೨೪:  ಸಾರ್ವಜನಿಕ ಸ್ಥಳಗಳಲ್ಲಿ ಈ ಬಾರಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ವಿವಿಧ ಇಲಾಖೆಗಳಿಂದ ಪರವಾನಗಿ ಪಡೆಯಲು ನಗರ ವ್ಯಾಪ್ತಿಯಲ್ಲಿ ನಗರಸಭೆ  ಕಚೇರಿಯಲ್ಲಿ ಏಕ ಗವಾಕ್ಷಿ ಹಾಗೂ ಗ್ರಾಮಾಂತರ ಭಾಗದಲ್ಲಿ ಆಯಾ ಗ್ರಾಮ ಪಂಚಾಯಿತಿಯಲ್ಲಿ ನೇರವಾಗಿ ಅರ್ಜಿಗಳನ್ನು ಸ್ವೀಕರಿಸಲು ಅವಕಾಶ ಕಲ್ಪಿಸಲಾಗಿದೆ.
       ತಾಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ಅಧ್ಯಕ್ಷತೆಯಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ನಡೆದ ಮುಂಜಾಗ್ರತ ಸಭೆಯಲ್ಲಿ ಈ ನಿರ್ಣಯ  ಕೈಗೊಳ್ಳಲಾಗಿದೆ.
      ಗ್ರಾಮಾಂತರ ಭಾಗದಲ್ಲಿ ನೇರವಾಗಿ ಪರವಾನಗಿ ಕೋರಿ ಬರುವ ಅರ್ಜಿಗಳನ್ನು ಪರಿಶೀಲಿಸಿ ಮೆಸ್ಕಾಂ ಅಭಿಪ್ರಾಯ ಪಡೆದು ಸಂಬಂಧಿಸಿದ ಪೊಲೀಸ್ ಠಾಣೆಯಿಂದ ಕನಿಷ್ಠ ಎರಡು ದಿನಗಳಲ್ಲಿ ಅನುಮತಿ ನೀಡುವಂತೆ ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿ ಸಮಸ್ಯೆಯಾಗದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಖುದ್ದಾಗಿ ಸ್ಥಳ ಪರಿಶೀಲಿಸಿ  ಕ್ರಮ ವಹಿಸಲು ಸೂಚಿಸಲಾಯಿತು.
    ಪೆಂಡಾಲ್‌ಗಳಲ್ಲಿ ಆಯೋಜಕರೇ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಲು, ಅಗ್ನಿ ಅವಘಡಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಲು, ಸ್ವಯಂಸೇವಕರನ್ನು ಗುರುತಿಸಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲು ಹಾಗೂ ಸಾಧ್ಯವಾದಷ್ಟು ಪರಿಸರ ಸ್ನೇಹಿ ಮತ್ತು ರಾಸಾಯನಿಕ ಮುಕ್ತ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಮತ್ತು ವಿಸರ್ಜನೆ ಸಂದರ್ಭದಲ್ಲಿ ಈಜು ತಜ್ಞರನ್ನು ನೇಮಿಸಿಕೊಳ್ಳುವಂತೆ ತಿಳಿಸಲು ಕ್ರಮ ಕೈಗೊಳ್ಳುವುದು.
    ಪ್ಲೆಕ್ಸ್ ವಿಚಾರದಲ್ಲಿ ಸ್ಥಳೀಯ ಪಂಚಾಯಿತಿಗಳು ಮುನ್ನೆಚ್ಚರಿಕೆ ಕ್ರಮವಹಿಸುವುದು. ಈ ಸಂಬಂಧ ಪಂಚಾಯಿತಿ ಮಟ್ಟದಲ್ಲಿ ಶಾಂತಿ ಸಭೆ ಮಾದರಿಯಲ್ಲಿ ಪೂರ್ವಭಾವಿ ಸಭೆ ನಡೆಸುವುದು ಹಾಗೂ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಪಡೆಯುವಂತೆ ಮತ್ತು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಎಲ್ಲರೂ ಹಬ್ಬವನ್ನು ಸಂಭ್ರಮದಿಂದ ಶಾಂತಿ ಸೌಹಾರ್ದತೆಯಿಂದ ಆಚರಿಸುವಂತೆ ನೋಡಿಕೊಳ್ಳಲು ತಿಳಿಸಲಾಯಿತು.
     ಸಭೆಯಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ನಗರ, ಗ್ರಾಮಾಂತರ, ಪೇಪರ್ ಟೌನ್ ಮತ್ತು ಹೊಳೆಹೊನ್ನೂರು ಪೊಲೀಸ್ ವೃತ್ತ ನಿರೀಕ್ಷಕರು, ವಿವಿಧ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು, ಕಂದಾಯ, ಮೆಸ್ಕಾಂ, ತಾಲೂಕ್ ಪಂಚಾಯಿತಿ, ಅಬಕಾರಿ, ಅರಣ್ಯ, ಅಗ್ನಿಶಾಮಕ ಅಧಿಕಾರಿಗಳು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಪಾಲ್ಗೊಂಡಿದ್ದರು.


ಗೌರಿ-ಗಣೇಶ ಹಬ್ಬದ ಹಿನ್ನಲೆಯಲ್ಲಿ ಭದ್ರಾವತಿ ನಗರಸಭೆಯಲ್ಲಿ ಬುಧವಾರ ಅಧ್ಯಕ್ಷೆ ಗೀತಾರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
         ನಗರಸಭೆ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಅಳವಡಿಕೆಗೆ ವಿರೋಧ :
    ಯಾವುದೇ ಸಂದರ್ಭದಲ್ಲೂ ನಗರಸಭೆ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಫ್ಲೆಕ್ಸ್‌ಗಳನ್ನು ಅಳವಡಿಸದಂತೆ ಕ್ರಮ ಕೈಗೊಳ್ಳಬೇಕೆಂದು ನಗರಸಭಾ ಸದಸ್ಯರು ಆಗ್ರಹಿಸಿದರು.
    ಗೌರಿ-ಗಣೇಶ ಹಬ್ಬದ ಹಿನ್ನಲೆಯಲ್ಲಿ ಬುಧವಾರ ಅಧ್ಯಕ್ಷೆ ಗೀತಾರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿ.ಕೆ ಮೋಹನ್ ಸೇರಿದಂತೆ ಬಹುತೇಕ ಸದಸ್ಯರು ಮಾತನಾಡಿ, ಈಗಾಗಲೇ ನಗರಸಭೆ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಫ್ಲೆಕ್ಸ್‌ಗಳನ್ನು ಅಳವಡಿಸದಂತೆ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಇದು ಕಾರ್ಯಗತಗೊಂಡಿಲ್ಲ. ಫ್ಲೆಕ್ಸ್ ಅಳವಡಿಕೆಯಿಂದ ಸಾಕಷ್ಟು ಸಮಸ್ಯೆಗಳು ಎದುರಾಗಲಿವೆ ಎಂದು ಮನವರಿಕೆ ಮಾಡಿ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ಅಧ್ಯಕ್ಷ, ನಗರಸಭಾ ಸದಸ್ಯ ವಿ. ಕದಿರೇಶ್ ಮಾತನಾಡಿ, ಮಹಾಸಭಾ ವತಿಯಿಂದ ಅನೇಕ ವರ್ಷಗಳಿಂದ ರಾಜಕೀಯ ಪ್ರೇರಿತವಲ್ಲದ ಫ್ಲೆಕ್ಸ್‌ಗಳನ್ನು ಅಳವಡಿಸಿಕೊಂಡು ಬರಲಾಗುತ್ತಿದೆ. ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಗಳು ಹಾಗು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದರು.
    ವಿಸರ್ಜನೆ ಸಂದರ್ಭದಲ್ಲಿ ಸೂಕ್ಷ್ಮ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ:
    ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ವಿನಾಯಕ ಮೂರ್ತಿಯ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಮೆರವಣಿಗೆ ಸಂದರ್ಭದಲ್ಲಿ ಪ್ರಮುಖ ವೃತ್ತಗಳು ಸೇರಿದಂತೆ ಸೂಕ್ಷ್ಮ ಸ್ಥಳಗಳಲ್ಲಿ ನಗರಸಭೆ ವತಿಯಿಂದ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಕದಿರೇಶ್ ಕೋರಿದರು.
    ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಮನುಕುಮಾರ್ ನಗರಸಭೆಯಲ್ಲಿ ಎಲ್ಲಾ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವಷ್ಟು ಹಣ ಇಲ್ಲ. ಆದರೆ ಎಲ್ಲೆಡೆ ಬ್ಯಾರಿಗೇಡ್‌ಗಳನ್ನು ಅಳವಡಿಸಿಕೊಡಲಾಗುವುದು. ಅಲ್ಲದೆ ವಿಸರ್ಜನಾ ಸ್ಥಳದಲ್ಲಿ ಬೆಳಕಿನ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.

ಕಾರ್ಯದರ್ಶಿಯಾಗಿ ನಕುಲ್ ರೇವಣ್ಕರ್

ನಕುಲ್ ರೇವಣ್ಕರ್
    ಭದ್ರಾವತಿ, ಆ. ೨೪:  ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿಯಾಗಿ ನಗರಸಭೆ ವಾರ್ಡ್ ನಂ.೩ರ ನಿವಾಸಿ ನಕುಲ್ ರೇವಣ್ಕರ್ ಅವರನ್ನು ನೇಮಕಗೊಳಿಸಲಾಗಿದೆ.
    ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್ ಸೂಚನೆಯಂತೆ ನಕುಲ್ ಅವರನ್ನು ಕಾರ್ಯದರ್ಶಿಯಾಗಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಎಂ.ವಿ ಹರಿಕೃಷ್ಣ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
    ನಕುಲ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಯುವ ಮೋರ್ಚಾದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಇವನ್ನು ಪಕ್ಷದ ಸ್ಥಳೀಯ ಪ್ರಮುಖರು ಅಭಿನಂದಿಸಿದ್ದಾರೆ.  

ಅನಿರೀಕ್ಷಿತವಾಗಿ ರಾಜಕೀಯಕ್ಕೆ ಪ್ರವೇಶ : ಕ್ಷೇತ್ರದಲ್ಲಿ ಜೆಡಿಎಸ್ ಸದೃಢಗೊಳಿಸುತ್ತೇನೆ

ಜೆಡಿಎಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಶಾರದ ಎಂ.ಜೆ ಅಪ್ಪಾಜಿ

ಜೆಡಿಎಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಶಾರದ ಎಂ.ಜೆ ಅಪ್ಪಾಜಿ
    ಭದ್ರಾವತಿ, ಆ. ೨೪: ರಾಜಕೀಯಕ್ಕೆ ಬರಬೇಕೆಂಬ ಬಯಕೆ ಹೊಂದಿಲ್ಲ. ಆದರೂ ಸಹ ಅನಿವಾರ್ಯ ಕಾರಣಗಳಿಂದ ಪಕ್ಷ ಮುನ್ನಡೆಸಿಕೊಂಡು ಹೋಗುತ್ತಿದ್ದೇನೆ ಎಂದು ಮುಂಬರುವ ವಿಧಾನಸಭಾ ಚುನಾವಣೆಯ ಜೆಡಿಎಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಶಾರದ ಎಂ.ಜೆ ಅಪ್ಪಾಜಿ ಹೇಳಿದರು.
    ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಂ.ಜೆ ಅಪ್ಪಾಜಿ ಅವರು ೩ ಬಾರಿ ಕ್ಷೇತ್ರದ ಶಾಸಕರಾದರೂ ಸಹ ನಾನು ಎಂದಿಗೂ ರಾಜಕೀಯಕ್ಕೆ ಬರಬೇಕೆಂದು ಬಯಸಲಿಲ್ಲ. ಅಲ್ಲದೆ ಅವರ ಅಧಿಕಾರವನ್ನು ನಾನಾಗಲಿ, ನನ್ನ ಮಕ್ಕಳಾಗಲಿ ಎಂದಿಗೂ ದುರ್ಬಳಕೆ ಮಾಡಿಕೊಂಡಿಲ್ಲ. ಅಪ್ಪಾಜಿ ನಿಧನದ ನಂತರ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಪಕ್ಷ ಮುನ್ನಡೆಸಿಕೊಂಡು ಹೋಗುವಂತೆ ಮನವಿ ಮಾಡಿದ ಹಿನ್ನಲೆಯಲ್ಲಿ ರಾಜಕೀಯದಲ್ಲಿ ಮುಂದುವರೆದಿದ್ದೇನೆ. ಕ್ಷೇತ್ರದಲ್ಲಿ  ಅಪ್ಪಾಜಿ ಅವರೊಂದಿಗೆ ಅವರ ರಾಜಕೀಯ ಏಳಿಗಾಗಿ ಶ್ರಮಿಸಿರುವ ಮುಖಂಡರ ಮಾರ್ಗದರ್ಶನದಲ್ಲಿ  ಪಕ್ಷವನ್ನು ಮತ್ತಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಮುನ್ನಡೆಯುತ್ತೇನೆ ಎಂದರು.

ಕ್ಷೇತ್ರದ ಹಾಲಿ ಶಾಸಕರು ಇತ್ತೀಚೆಗೆ ಕಾಮಗಾರಿಗಳ ಗುದ್ದಲಿ ಪೂಜೆ, ಉದ್ಘಾಟನೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಿಲ್ಲ. ಶಾಸಕರ ಬದಲಿಗೆ ಅವರ ಸಹೋದರರು, ಪುತ್ರರರು ಪಾಲ್ಗೊಳ್ಳುತ್ತಿದ್ದಾರೆ. ಶಾಸಕರ ಬದಲಾಗಿ ಪಾಲ್ಗೊಳ್ಳುವ ನೈತಿಕತೆ ಅವರಿಗಿಲ್ಲ. ಅದರಲ್ಲೂ ಜೆಡಿಎಸ್ ಪಕ್ಷದ ನಗರಸಭಾ ಸದಸ್ಯರ ವಾರ್ಡ್‌ಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಎಷ್ಟು ಸರಿ ?
 - ಶಾರದ ಎಂ.ಜೆ ಅಪ್ಪಾಜಿ.

    ಹಲವಾರು ವರ್ಷಗಳಿಂದ ಪಕ್ಷದಲ್ಲಿ ಪದಾಧಿಕಾರಿಗಳ ನೇಮಕ ನಡೆದಿರಲಿಲ್ಲ. ಇದೀಗ ವರಿಷ್ಠರ ಆದೇಶದ ಮೇರೆಗೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಗಿದೆ. ಪಕ್ಷವನ್ನು ಮುನ್ನಡೆಸುವ ಜೊತೆಗೆ ಕ್ಷೇತ್ರದ ನಾಗರೀಕರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುತ್ತೇನೆ. ಮುಂದಿನ ದಿನಗಳಲ್ಲಿ ಅಪ್ಪಾಜಿಯವರು ಬಿಟ್ಟು ಹೋಗಿರುವ ಕೆಲಸಗಳನ್ನು ಪೂರ್ಣಗೊಳಿಸುವ ಬಯಕೆ ಹೊಂದಿದ್ದೇನೆ. ಮತದಾರರು ನನನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು.

ಸೆ.೫ರಂದು ಗೋಣಿಬೀಡಿನಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ೨ನೇ ವರ್ಷದ ಪುಣ್ಯಸ್ಮರಣೆ

ಭದ್ರಾವತಿ, ಆ. ೨೪: ಮಾಜಿ ಶಾಸಕ ಎಂ.ಜೆ ಅಪ್ಪಾಜಿ ೨ನೇ ವರ್ಷದ ಪುಣ್ಯಸ್ಮರಣೆ ಸೆ.೫ರಂದು ತಾಲೂಕಿನ ಗೋಣಿಬೀಡು ಗ್ರಾಮದಲ್ಲಿರುವ ಅವರ ಶಕ್ತಿಧಾಮದಲ್ಲಿ ನಡೆಯಲಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಶಾರದ ಎಂ.ಜೆ ಅಪ್ಪಾಜಿ ತಿಳಿಸಿದರು.
    ಭದ್ರಾವತಿ, ಆ. ೨೪: ಮಾಜಿ ಶಾಸಕ ಎಂ.ಜೆ ಅಪ್ಪಾಜಿ ೨ನೇ ವರ್ಷದ ಪುಣ್ಯಸ್ಮರಣೆ ಸೆ.೫ರಂದು ತಾಲೂಕಿನ ಗೋಣಿಬೀಡು ಗ್ರಾಮದಲ್ಲಿರುವ ಅವರ ಶಕ್ತಿಧಾಮದಲ್ಲಿ ನಡೆಯಲಿದೆ.
    ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಈ ಕುರಿತು ಮಾಹಿತಿ ನೀಡಿದ ಶಾರದ ಎಂ.ಜೆ ಅಪ್ಪಾಜಿ, ಸೆ.೨ರಂದು ಎಂ.ಜೆ ಅಪ್ಪಾಜಿ ಅವರು ನಿಧನ ಹೊಂದಿ ೨ ವರ್ಷ ಕಳೆಯಲಿದೆ. ಆದರೆ ಅಂದು ಪುಣ್ಯಸ್ಮರಣೆ ನಡೆಸದೆ ಸೆ.೫ರಂದು ಪುಣ್ಯಸ್ಮರಣೆ, ಭದ್ರಾ ಜಲಾಶಯಕ್ಕೆ ಬಾಗಿನ ಸಮರ್ಪಣೆ ಹಾಗು ಜೆಡಿಎಸ್ ಪಕ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮಗಳು ನಡೆಯಲಿವೆ. ಎಲ್ಲರಿಗೂ ಅನುಕೂಲವಾಗುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ಒಟ್ಟಿಗೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.


    ಸೆ.೫ರಂದು ಬೆಳಿಗ್ಗೆ ೯ ಗಂಟೆಗೆ ಗೋಣಿಬೀಡಿನ ಅವರ ಶಕ್ತಿಧಾಮದಲ್ಲಿ ಪುಣ್ಯಸ್ಮರಣೆ ನಡೆಯಲಿದೆ. ನಂತರ ೧೧ ಗಂಟೆಯಿಂದ ಬಾಗಿನ ಸಮರ್ಪಣೆ ಹಾಗು ೧೨ ಗಂಟೆಗೆ ಜೆಡಿಎಸ್ ಪಕ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ. ಅಪ್ಪಾಜಿ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಹಿತೈಷಿಗಳು, ಕ್ಷೇತ್ರದ ಸಮಸ್ತ ನಾಗರೀಕರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು.
    ಅಪ್ಪಾಜಿ ಒಡನಾಡಿಗಳಾದ ನಗರಸಭೆ ಮಾಜಿ ಸದಸ್ಯ ಕರಿಯಪ್ಪ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ  ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಪಿ ಯೋಗೇಶ್ ಅವರು ಅಪ್ಪಾಜಿ ಅವರೊಂದಿಗಿನ ನೆನೆಪುಗಳನ್ನು ಸ್ಮರಿಸಿಕೊಳ್ಳುವ ಮೂಲಕ ೨ ವರ್ಷ ಪುಣ್ಯಸ್ಮರಣೆ, ಬಾಗಿನ ಸಮರ್ಪಣೆ ಹಾಗು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
    ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಧುಕುಮಾರ್, ಅಲ್ಪಸಂಖ್ಯಾತರ ನಗರ ಘಟಕದ ಅಧ್ಯಕ್ಷ ಮುತುರ್ಜಾಖಾನ್, ನಗರಸಭೆ ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ, ಡಿ.ಟಿ ಶ್ರೀಧರ್ ಸೇರಿದಂತೆ ಜೆಡಿಎಸ್ ಪಕ್ಷದ ನಗರಸಭೆ ಸದಸ್ಯರು, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tuesday, August 23, 2022

ಗೀತಾ ಕೆ.ಜಿ ರಾಜ್‌ಕುಮಾರ್ ರಾಜೀನಾಮೆ : ಮುಂದಿನ ಅವಧಿಗೆ ೩ ಮಂದಿಯಲ್ಲಿ ಪೈಪೋಟಿ

ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರಿಗೆ ಭದ್ರಾವತಿ ನಗರಸಭೆ ಅಧ್ಯಕ್ಷೆ ಗೀತಾ ಕೆ.ಜಿ ರಾಜ್‌ಕುಮಾರ್ ರಾಜೀನಾಮೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್ ಮತ್ತು ಕೆ.ಜಿ ರಾಜ್‌ಕುಮಾರ್ ಉಪಸ್ಥಿತರಿದ್ದರು.  
    ಭದ್ರಾವತಿ, ಆ. ೨೩: ನಗರಸಭೆ ಅಧ್ಯಕ್ಷೆ ಗೀತಾ ಕೆ.ಜಿ ರಾಜ್‌ಕುಮಾರ್ ಅವರು ಒಡಂಬಡಿಕೆಯಂತೆ ೧೦ ತಿಂಗಳ ಅಧಿಕಾರ ಪೂರೈಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮುಂದಿನ ೧೦ ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನಕ್ಕಾಗಿ ೩ ಮಂದಿ ನಡುವೆ ಪೈಪೋಟಿ ಎದುರಾಗಿದೆ.
    ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಮೊದಲ ಹಂತದ ೩೦ ತಿಂಗಳ ಮೀಸಲಾತಿಯನ್ವಯ ತಲಾ ೧೦ ತಿಂಗಳ ಆಡಳಿತ ಹಂಚಿಕೆ ಮಾಡಿಕೊಂಡಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲಾತಿ ಹೊಂದಿದೆ. ಈಗಾಗಲೇ ೧೦ ತಿಂಗಳ ಅವಧಿಯನ್ನು ಗೀತಾ ಕೆ.ಜಿ ರಾಜ್‌ಕುಮಾರ್ ಪೂರೈಸಿದ್ದಾರೆ. ೨೦ ತಿಂಗಳು ಬಾಕಿ ಉಳಿದಿದ್ದು, ೨ನೇ ೧೦ ತಿಂಗಳ ಅವಧಿಗೆ ೩ ಮಂದಿ ನಡುವೆ ಪೈಪೋಟಿ ಎದುರಾಗಿದೆ.
    ವಾರ್ಡ್ ನಂ.೧೩ರ ಸದಸ್ಯೆ ಅನುಸುಧಾ ಮೋಹನ್, ವಾರ್ಡ್ ನಂ.೩೪ರ ಲತಾ ಚಂದ್ರಶೇಖರ್ ಮತ್ತು ವಾರ್ಡ್ ನಂ.೩೫ರ ಶೃತಿ ವಸಂತ್ ನಡುವೆ ತೀವ್ರ ಪೈಪೋಟಿ ಎದುರಾಗಿದ್ದು, ಈ ಮೂವರ ಇಬ್ಬರು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ಒಬ್ಬರು ಗೌಂಡರ್ ಸಮುದಾಯಕ್ಕೆ ಸೇರಿದ್ದಾರೆ. ಶಾಸಕ ಬಿ.ಕೆ ಸಂಗಮೇಶ್ವರ್ ಕೈಗೊಳ್ಳುವ ನಿರ್ಧಾರ ಅಂತಿಮವಾಗಿದ್ದು, ಯಾರು ಅಧ್ಯಕ್ಷಗಿರಿ ಯಾರಿಗೆ ಎಂಬುದನ್ನು ಕಾದು ನೋಡಬೇಕಾಗಿದೆ.  

ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಗೋಕುಲಕೃಷ್ಷನ್ ಮುಂದುವರಿಕೆ


ಗೋಕುಲಕೃಷ್ಣನ್
    ಭದ್ರಾವತಿ, ಆ. ೨೩ : ತಾಲೂಕಿನ ಸುಲ್ತಾನಮಟ್ಟಿ ಗ್ರಾಮದ ನಿವಾಸಿ, ಯುವ ಮುಖಂಡ ಗೋಕುಲಕೃಷ್ಣನ್ ಅವರನ್ನು ಬಿಜೆಪಿ ಪಕ್ಷದ ಜಿಲ್ಲಾ ಯುವಮೋರ್ಚಾ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಮುಂದುವರೆಸಲಾಗಿದೆ.
    ಪಕ್ಷದ ಜಿಲ್ಲಾಧ್ಯಕ್ಷ ಡಿ.ಟಿ ಮೇಘರಾಜ್ ಅವರ ಸೂಚನೆ ಮೇರೆಗೆ ಗೋಕುಲಕೃಷ್ಣನ್ ಅವರನ್ನು ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಮುಂದುವರೆಯಲು ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಎಂ.ಬಿ ಹರಿಕೃಷ್ಣ ಆದೇಶಿಸಿದ್ದಾರೆ.
    ಗೋಕುಲಕೃಷ್ಣನ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು, ಹಂತ ಹಂತವಾಗಿ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇವರನ್ನು ಪಕ್ಷದ ತಾಲೂಕು ಪ್ರಮುಖರು ಅಭಿನಂದಿಸಿದ್ದಾರೆ.

ವಿಧಾನಸಭಾ ಕ್ಷೇತ್ರ : ಜೆಡಿಎಸ್ ಪಕ್ಷದ ನೂತನ ಪದಾಧಿಕಾರಿಗಳ ನೇಮಕ

    ಭದ್ರಾವತಿ, ಆ. ೨೩: ಜಾತ್ಯತೀತ ಜನತಾದಳ ವಿಧಾನಸಭಾ ಕ್ಷೇತ್ರದ ನೂತನ ಪದಾಧಿಕಾರಿಗಳನ್ನು ಪಕ್ಷದ ವರಿಷ್ಠರ ಆದೇಶದ ಮೇರೆಗೆ  ಪಕ್ಷದ ಮುಖಂಡರಾದ ಶಾರದ ಎಂ.ಜೆ ಅಪ್ಪಾಜಿ ನೇಮಕಗೊಳಿಸಿ ಪಟ್ಟಿ ಬಿಡುಗಡೆಗೊಳಿಸಿದ್ದಾರೆ.
    ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಮಧುಕುಮಾರ್, ತಾಲೂಕು ನಗರ ಘಟಕದ ಅಧ್ಯಕ್ಷರಾಗಿ ಆರ್. ಕರುಣಾಮೂರ್ತಿ, ಗ್ರಾಮಂತರ ಘಟಕದ ಅಧ್ಯಕ್ಷರಾಗಿ ಕೆ. ಧರ್ಮಕುಮಾರ, ನಗರ ಘಟಕದ ಮಹಿಳಾ ಅಧ್ಯಕ್ಷರಾಗಿ ವಿಶಾಲಾಕ್ಷಿ, ಗ್ರಾಮಾಂತರ ಘಟಕದ ಅಧ್ಯಕ್ಷರಾಗಿ ಪಾರ್ವತಿಬಾಯಿ, ಅಲ್ಪ ಸಂಖ್ಯಾಂತರ ನಗರ ಘಟಕದ ಅಧ್ಯಕ್ಷರಾಗಿ ಮುತುರ್ಜಾಖಾನ್, ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಎಂ.ಎ ಅಜಿತ್, ನಗರ ಘಟಕದ ಕಾರ್ಯಾಧ್ಯಕ್ಷರಾಗಿ ಬಿ.ಸಿ ಉಮೇಶ್, ಪರಿಶಿಷ್ಟ ಜಾತಿ ನಗರ ಘಟಕದ ಅಧ್ಯಕ್ಷರಾಗಿ ಮೈಲಾರಪ್ಪ, ಪರಿಶಿಷ್ಟ ಜಾತಿ ಗ್ರಾಮಾಂತರ ಘಟಕದ ಅಧ್ಯಕ್ಷರಾಗಿ ಶ್ರೀಧರನಾಯ್ಕ, ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗು ವಕ್ತಾರರಾಗಿ ಎಂ. ರಾಜು ಮತ್ತು ನಗರ ಘಟಕದ ಮಹಿಳಾ ಕಾರ್ಯದರ್ಶಿಯಾಗಿ ಭಾಗ್ಯಮ್ಮ ಅವರನ್ನು ನೇಮಕಗೊಳಿಸಿ ಪಕ್ಷದ ತತ್ವ ಸಿದ್ದಾಂತಗಳಿಗೆ ಅನುಗುಣವಾಗಿ ಜವಾಬ್ದಾರಿ ನಿರ್ವಹಿಸುವಂತೆ ಶಾರದ ಎಂ.ಜೆ ಅಪ್ಪಾಜಿ ಸೂಚಿಸಿದ್ದಾರೆ.