Monday, September 19, 2022

ಸೆ.೨೧ರಂದು ಮಹಾತ್ಮಗಾಂಧೀಜಿ, ಸ್ವಾತಂತ್ರ್ಯ ಚಳವಳಿ ಕುರಿತಾದ ರಸಪ್ರಶ್ನೆ ಕಾರ್ಯಕ್ರಮ

    ಭದ್ರಾವತಿ, ಸೆ. ೧೯: ಕನ್ನಡ ಸಾಹಿತ್ಯ ಪರಿಷತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಕಾರದೊಂದಿಗೆ ಸಂಚಿ ಹೊನ್ನಮ್ಮ ಪದವಿ ಪೂರ್ವ ಕಾಲೇಜಿನ ಸಹಯೋಗದೊಂದಿಗೆ ಸೆ.೨೧ರಂದು ಬೆಳಿಗ್ಗೆ ೧೦ ಗಂಟೆಗೆ ಪ್ರೌಢಶಾಲೆ ಪದವಿಪೂರ್ವ ಮತ್ತು ಪದವಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಮಹಾತ್ಮಗಾಂಧೀಜಿ ಹಾಗು ಸ್ವಾತಂತ್ರ್ಯ ಚಳವಳಿ ಕುರಿತಾದ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಸಂಚಿಹೊನ್ಮಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದು, ಕಾಲೇಜಿನ ಪ್ರಾಂಶುಪಾಲ ಡಾ. ಸಿದ್ದಲಿಂಗಮೂರ್ತಿ, ಮೆಸ್ಕಾಂ ಗ್ರಾಮಾಂತರ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಬ್ದುಲ್ ಮುನಾಫ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಆಶಯನುಡಿಗಳನ್ನಾಡಲಿದ್ದು, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಿ. ಸಿದ್ದಬಸಪ್ಪ ಅವರಿಗೆ ಅಭಿನಂದನೆ ನಡೆಯಲಿದೆ. ಕಸಾಪ ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.

ಭದ್ರಾವತಿ ನಗರಸಭೆ : ೧೦ ದಿನ ನಾಡಹಬ್ಬ ದಸರಾ ಉತ್ಸವ

ಲಾಂಛನ ಬಿಡುಗಡೆಗೊಳಿಸಿದ ಪ್ರಭಾರ ಅಧ್ಯಕ್ಷ ಚನ್ನಪ್ಪ

ಭದ್ರಾವತಿ ನಗರಸಭೆ ವತಿಯಿಂದ ಈ ಬಾರಿ ೧೦ ದಿನಗಳ ಕಾಲ ನಾಡಹಬ್ಬ ದಸರಾ ಆಚರಣೆ ಹಮ್ಮಿಕೊಳ್ಳಲಾಗಿದ್ದು, ಈ ಸಂಬಂಧ ಸೋಮವಾರ ನಗರಸಭೆ ಪ್ರಭಾರ ಅಧ್ಯಕ್ಷ ಚನ್ನಪ್ಪ ಲಾಂಛನ ಬಿಡುಗಡೆಗೊಳಿಸಿದರು. 
    ಭದ್ರಾವತಿ, ಸೆ. ೧೯: ನಗರಸಭೆ ವತಿಯಿಂದ ಈ ಬಾರಿ ನಾಡಹಬ್ಬ ದಸರಾ ೧೦ ದಿನಗಳ ಕಾಲ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ನಗರಸಭೆ ಪ್ರಭಾರ ಅಧ್ಯಕ್ಷ ಚನ್ನಪ್ಪ ತಿಳಿಸಿದರು.
    ಅವರು ಸೋಮವಾರ ನಗರಸಭೆ ಸಭಾಂಗಣದಲ್ಲಿ ನಾಡಹಬ್ಬ ದಸರಾ-೨೦೨೨ರ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು. ನಗರಸಭೆ ವತಿಯಿಂದ ನಾಡಹಬ್ಬ ದಸರಾ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಸೆ.೨೬ರಂದು ನಗರಸಭೆ ಆವರಣದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹಿರಿಯ ಕಾರ್ಮಿಕ ಹೋರಾಟ ಡಿ.ಸಿ ಮಾಯಣ್ಣ ದಸರಾ ಉತ್ಸವಕ್ಕೆ ಚಾಲನೆ ನೀಡುವರು ಎಂದರು.


    ಸೆ.೨೭ರಂದು ಯುವ ದಸರಾ, ೨೮ರಂದು ಜಾನಪದ ದಸರಾ, ೨೯ರಂದು ಪರಿಸರ ದಸರಾ, ೩೦ರಂದು ಯೋಗ ದಸರಾ, ಅ.೧ರಂದು ಮಹಿಳಾ ದಸರಾ, ೨ರಂದು ರಂಗದಸರಾ, ೩ರಂದು ಮಕ್ಕಳ ದಸರಾ ಹಾಗು ೪ರಂದು ಹಾಸ್ಯೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಪ್ರತಿದಿನ ಸಂಜೆ ಹಳೇನಗರದ ಕನಕಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
    ಅ.೫ರಂದು ಕೊನೆಯ ದಿನ ಲೋಯರ್ ಹುತ್ತಾ  ಶ್ರೀ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಿಂದ ವಿವಿಧ ಕಲಾ ತಂಡಗಳು, ಸುಮಾರು ೫೦ಕ್ಕೂ ಹೆಚ್ಚು ಅಲಂಕೃತಗೊಂಡ ದೇವಾನುದೇವತೆಗಳ ಮೆರವಣಿಗೆ ನಡೆಯಲಿದೆ. ಸಂಜೆ ೬.೩೦ಕ್ಕೆ ಕನಕಮಂಟಪ ಮೈದಾನದಲ್ಲಿ ಬನ್ನಿ ಮುಡಿಯುವ(ಶಮಿ ಪೂಜೆ) ಕಾರ್ಯಕ್ರಮದ ಮೂಲಕ ರಾವಣನ ಸಂಹಾರದೊಂದಿಗೆ ಅಂತ್ಯಗೊಳ್ಳಲಿದೆ ಎಂದರು.
    ನಾಡಹಬ್ಬ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ನಗರಸಭಾ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳನ್ನೊಳಗೊಂಡ ಸಮಿತಿಗಳನ್ನು ರಚಿಸಲಾಗಿದೆ. ಉಸ್ತುವಾರಿ ಸಮಿತಿ, ಸ್ವಾಗತ ಸಮಿತಿ, ಸಾಂಸ್ಕೃತಿಕ ಮತ್ತು ಮೆರವಣಿಗೆ ಸಮಿತಿ, ಪ್ರಚಾರ ಮತ್ತು ಅಲಂಕಾರ ಸಮಿತಿ, ಮನರಂಜನಾ ಸಮಿತಿ, ದೇವರುಗಳ ಉತ್ಸವ ಸಮಿತಿ ಮತ್ತು ಆಯುಧ ಪೂಜೆ ಉಸ್ತುವಾರಿ ಸಮಿತಿಗಳು ಕಾರ್ಯ ನಿರ್ವಹಿಸಲಿವೆ.
ಈಗಾಗಲೇ ಕಾರ್ಯಕ್ರಮದ ಸಂಪೂರ್ಣ ರೂಪುರೇಷೆ ಸಿದ್ದಪಡಿಸಲಾಗಿದ್ದು, ವಿವಿಧ ಸಂಘ-ಸಂಸ್ಥೆಗಳು, ಸಾರ್ವಜನಿಕರು ನಾಡಹಬ್ಬ ದಸರಾ ಯಶಸ್ವಿಗೊಳಿಸುವ ನಿಟ್ಟಿನಲ್ಲಿ  ಕೈ ಜೋಡಿಸಬೇಕೆಂದು ಮನವಿ ಮಾಡಿದರು.  
    ಪೌರಾಯುಕ್ತ ಮನುಕುಮಾರ್, ವಿವಿಧ ಸಮಿತಿ ಅಧ್ಯಕ್ಷರುಗಳಾದ ವಿ. ಕದಿರೇಶ್, ಲತಾ ಚಂದ್ರಶೇಖರ್, ಆರ್. ಶ್ರೇಯಸ್(ಚಿಟ್ಟೆ), ಜಾರ್ಜ್, ಕಾಂತರಾಜು, ಮಾಜಿ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ನಗರಸಭೆ ಅಧಿಕಾರಿಗಳಾದ ರಾಜ್‌ಕುಮಾರ್, ಪ್ರಭಾಕರ್, ಸುವಾಸಿನಿ, ಪವನ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ವಿದ್ಯೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಿ : ಬಿ.ಕೆ ಸಂಗಮೇಶ್ವರ್


ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ರೋವರ‍್ಸ್-ರೇಂಜರ‍್ಸ್, ಯುವ ರೆಡ್ ಕ್ರಾಸ್ ಮತ್ತು ಎನ್‌ಸಿಸಿ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗು ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಮತ್ತು ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ಸೆ. ೧೯ : ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳುವ ಜೊತೆಗೆ ಭವಿಷ್ಯ ರೂಪಿಸಿಕೊಳ್ಳುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಕರೆ ನೀಡಿದರು.
    ಅವರು ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ರೋವರ‍್ಸ್-ರೇಂಜರ‍್ಸ್, ಯುವ ರೆಡ್ ಕ್ರಾಸ್ ಮತ್ತು ಎನ್‌ಸಿಸಿ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗು ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಮತ್ತು ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಶಿಕ್ಷಕರು ಚಾರಿತ್ರ್ಯವಂತರಾದಾಗ ನವಭಾರತ ನಿರ್ಮಾಣ ಸಾಧ್ಯ. ಯುವ ಜನತೆ ಸಮಾಜದ ಅತ್ಯಮೂಲ್ಯ ಸಂಪತ್ತು. ಯುವಶಕ್ತಿಯನ್ನು ರಚನಾತ್ಮಕ ಕೆಲಸಗಳಿಗೆ ಬಳಸಿಕೊಳ್ಳಬೇಕು ಎಂದರು.
    ವಿದ್ಯಾರ್ಥಿಗಳು ಪೋಷಕರು ಮತ್ತು ಗುರುಗಳನ್ನು ಗೌರವಿಸಿ ಅವರ ಮಾರ್ಗದರ್ಶನದಲ್ಲಿ ಜೀವನ ರೂಪಿಸಿಕೊಳ್ಳಬೇಕು. ದುಶ್ಚಟಗಳಿಂದ ದೂರವಿದ್ದು, ವಿದ್ಯೆ ಜೊತೆಗೆ ಸಾಹಿತ್ಯ, ಕ್ರೀಡೆ, ಮತ್ತು ಸಮಾಜ ಸೇವೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕೆಂದರು.
    ನಗರಸಭೆ ಪ್ರಭಾರ ಅಧ್ಯಕ್ಷ ಚನ್ನಪ್ಪ, ಶಿಕ್ಷಣ ತಜ್ಞ ಎಚ್.ಎನ್ ಮಹಾರುದ್ರ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಸದಸ್ಯರಾದ ಅನಿತಾ ಮಲ್ಲೇಶ್, ಮಣಿ ಎಎನ್‌ಎಸ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಪರಮೇಶ್ವರಪ್ಪ, ಷಣ್ಮುಗಂ, ಶಿವಲಿಂಗಂ, ಸೂರ್ಯಕಲಾ, ರಾಜೇಶ್, ತಳ್ಳಿಕಟ್ಟೆ ಲೋಕೇಶ್, ಪುಟ್ಟೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಹಳೇಯ ವಿದ್ಯಾರ್ಥಿ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಖೋ ಖೋ ಕ್ರೀಡಾಪಟು ಎ. ಮುನಿರ್ ಬಾಷಾ ಅವರನ್ನು ಸನ್ಮಾನಿಸಲಾಯಿತು. ನಗರಸಭಾ ಸದಸ್ಯ ಬಿ.ಕೆ ಮೋಹನ್ ಬಹುಮಾನಗಳನ್ನು ವಿತರಿಸಿದರು. ಅಪೂರ್ವ ಸಂಗಡಿಗರು ಪ್ರಾರ್ಥಿಸಿದರು. ಆಯುಷಾ ಸಿದ್ದಿಕಾ ಸ್ವಾಗತಿಸಿದರು. ರೇವತಿ ಮತ್ತು ತೇಜಸ್ವಿನಿ ನಿರೂಪಿಸಿ ಕೆ. ಚಂದನ ವಂದಿಸಿದರು.

ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ವಾರ್ಷಿಕ ಸಭೆ

ಭದ್ರಾವತಿ ಕಾಗದನಗರದ ಚಂದ್ರಾಲಯದಲ್ಲಿ ಸೋಮವಾರ ನಡೆದ ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ವಾರ್ಷಿಕ ಸಭೆಯಲ್ಲಿ ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ ಮಾತನಾಡಿದರು.
    ಭದ್ರಾವತಿ, ಸೆ. ೧೯: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ಸಂಪೂರ್ಣವಾಗಿ ಸ್ಥಗಿತಗೊಂಡು ಸುಮಾರು ೭ ವರ್ಷಗಳು ಕಳೆದಿವೆ. ಈ ನಡುವೆ  ತಮ್ಮ ಮುಂದಿನ ಭವಿಷ್ಯಕ್ಕಾಗಿ ಕಾರ್ಮಿಕರು ರೂಪಿಸಿಕೊಂಡಿರುವ ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಹಲವು ಸಮಸ್ಯೆಗಳ ನಡುವೆ ಹೆಣಗಾಡುತ್ತಿದೆ. ಸಂಕಷ್ಟದ ಪರಿಸ್ಥಿತಿಯಲ್ಲೂ ಸೋಮವಾರ ಕಾಗದನಗರದ ಚಂದ್ರಾಲಯದಲ್ಲಿ ಸರ್ವ ಸದಸ್ಯರ ಸಭೆ ನಡೆಸುವ ಮೂಲಕ ತಮ್ಮ ಅಳಲನ್ನು ತೋರ್ಪಡಿಸಿಕೊಂಡರು.
    ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲೆಕ್ಕಪತ್ರ ಮಂಡನೆ, ೨೦೨೨-೨೩ನೇ ಸಾಲಿನ ಅಂದಾಜು ಆಯವ್ಯಯ ಪಟ್ಟಿ ಮಂಡನೆ, ಲೆಕ್ಕ ಪರಿಶೋಧಕರ ನೇಮಕ ಹಾಗು  ಸಂಘ ಎದುರಿಸುತ್ತಿರುವ ಸಮಸ್ಯೆಗಳು ಹಾಗು ಮುಂದಿರುವ ಸವಾಲುಗಳ ಕುರಿತು ಚರ್ಚಿಸಲಾಯಿತು. ಸಭೆ ಆರಂಭದಲ್ಲಿ ನಿಧನ ಹೊಂದಿದ ಸದಸ್ಯರಿಗೆ ಶ್ರದ್ದಾಂಜಲಿ ಸಲ್ಲಿಸಿ ಮೌನಾಚರಣೆ ನಡೆಸಲಾಯಿತು.
    ಸಂಘದ ಉಪಾಧ್ಯಕ್ಷ ವಿ. ಗೋವಿಂದಪ್ಪ, ಕಾರ್ಯದರ್ಶಿ ಎಚ್. ವೀರಭದ್ರಪ್ಪ, ನಿರ್ದೇಶಕರಾದ ಪಿ.ಆರ್ ರಂಗಸ್ವಾಮಿ, ಎಸ್.ಆರ್ ಸೋಮಶೇಖರ್, ಪರಮಶಿವ, ಎಚ್. ಆನಂದಮೂರ್ತಿ, ಮಂಜುನಾಥ್ ಮತ್ತು ಕೆ. ಸಾರಮ್ಮ ಉಪಸ್ಥಿತರಿದ್ದರು.

ಕಾ.ರಾ ನಾಗರಾಜ್‌ಗೆ ಗಾಂಧಿ ಪ್ರಿಯ ಪ್ರಶಸ್ತಿ

ಭದ್ರಾವತಿ ನಗರದ ಶ್ರೀ ಕನ್ಯಕಾಪರಮೇಶ್ವರಿ ವಿವಿದೋದ್ದೇಶ ಸಹಕಾರ ಸಂಘದ ಗೌರವಾಧ್ಯಕ್ಷ ಕಾ.ರಾ ನಾಗರಾಜ್‌ರವರಿಗೆ ಬೆಂಗಳೂರು ಅರ್.ಟಿ ನಗರದ ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಗಾಂಧಿ ಪ್ರಿಯ ಪ್ರಶಸ್ತಿ ನೀಡಿ ಗೌರವಿಸಿದೆ.
    ಭದ್ರಾವತಿ, ಸೆ. ೧೯ : ನಗರದ ಶ್ರೀ ಕನ್ಯಕಾಪರಮೇಶ್ವರಿ ವಿವಿದೋದ್ದೇಶ ಸಹಕಾರ ಸಂಘದ ಗೌರವಾಧ್ಯಕ್ಷ ಕಾ.ರಾ ನಾಗರಾಜ್‌ರವರಿಗೆ ಬೆಂಗಳೂರು ಅರ್.ಟಿ ನಗರದ ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಗಾಂಧಿ ಪ್ರಿಯ ಪ್ರಶಸ್ತಿ ನೀಡಿ ಗೌರವಿಸಿದೆ.
    ತುಮಕೂರು ಜಿಲ್ಲಾ ಆರ್ಯವೈಶ್ಯ ಮಹಿಳಾ ಸಮಾವೇಶದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಕಾ.ರಾ ನಾಗರಾಜ್‌ರವರು ಶ್ರೀ ಕನ್ಯಕಾಪರಮೇಶ್ವರಿ ವಿವಿದೋದ್ದೇಶ ಸಹಕಾರ ಸಂಘದಲ್ಲಿ ಸುಮಾರು ೧೫ ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಈ ಹಿಂದೆ ಆರ್ಯವೈಶ್ಯ ಮಂಡಳಿ ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿದ್ದರು.
    ಕಾ.ರಾ ನಾಗರಾಜ್ ಕೇವಲ ಆರ್ಯವೈಶ್ಯ ಸಮಾಜಕ್ಕೆ ಸೀಮಿತವಾಗದೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಅಲ್ಲದೆ ರಾಜಕೀಯವಾಗಿ ಗುರುತಿಸಿಕೊಂಡಿದ್ದಾರೆ. ಕಲಾ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಗಾಂಧಿ ಪ್ರಿಯ ಪ್ರಶಸ್ತಿ ನೀಡಲಾಗಿದೆ.
    ತುಮಕೂರು ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ನಡೆದ ಸಮಾವೇಶದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಪ್ರಶಸ್ತಿ ಪ್ರಧಾನ ಮಾಡಿದರು. ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಡಾ.ಆರ್.ಎಲ್ ರಮೇಶ್, ಕರ್ನಾಟಕ ಆರ್ಯವೈಶ್ಯ ಮಹಾಮಂಡಲ ಮಹಿಳಾ ವಿಭಾಗದ ಅಧ್ಯಕ್ಷೆ ಗೋಕುಲ ಚಲಪತಿ, ಕರ್ನಾಟಕ ಆರ್ಯವೈಶ್ಯ ಮಹಿಳಾ ಮಹಾಸಭಾ ಅಧ್ಯಕ್ಷೆ ಸುಧಾಮೂರ್ತಿ, ತುಮಕೂರು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಶಶಿಕುಮಾರ್,  ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ರಾ. ವಿಜಯ ಸಮರ್ಥ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Sunday, September 18, 2022

ಸೆ.೨೦ರಂದು ಪ್ರತಿಭಾ ಪುರಸ್ಕಾರ, ಸರ್ವ ಸದಸ್ಯರ ಸಭೆ




    ಭದ್ರಾವತಿ, ಸೆ. ೧೮: ಶ್ರೀ ಕನ್ಯಕಾಪರಮೇಶ್ವರಿ ವಿವಿದೋದ್ದೇಶ ಸಹಕಾರ ಸಂಘದ ವತಿಯಿಂದ ಸೆ.೨೦ರಂದು ಬೆಳಿಗ್ಗೆ ೧೦ ಗಂಟೆಗೆ ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ವಾಸವಿ ಮಹಲ್‌ನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸರ್ವ ಸದಸ್ಯರ ಸಭೆ ಮತ್ತು ಬೂಸ್ಟರ್ ಡೋಸ್ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಸಂಘದ ೨೮ನೇ ವರ್ಷದ ಸರ್ವ ಸದಸ್ಯರ ಸಭೆಯ ಅಂಗವಾಗಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ಅತಿ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದ್ದು, ಅಲ್ಲದೆ ಮಹಾಮಾರಿ ಕೊರೋನಾ ಮುನ್ನಚ್ಚರಿಕೆ ಕ್ರಮವಾಗಿ ಬೂಸ್ಟರ್ ಡೋಸ್ ಲಸಿಕೆ ಹಾಕುವ ಕಾರ್ಯಕ್ರಮ ಸಹ ನಡೆಯಲಿದೆ. ಸದಸ್ಯರು ಹೆಚ್ಚಿನ  ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಓಂ ಹಿಂದೂ ಕೋಟೆ ವಿನಾಯಕ ಮೂರ್ತಿ ವಿಸರ್ಜನೆ : ಆಕರ್ಷಕ ಮೂರ್ತಿ ಕಣ್ತುಂಬಿಕೊಂಡ ಭಕ್ತರು

ಮುಸ್ಲಿಂ ಸಮುದಾಯದವರಿಂದ ತಂಪು ಪಾನಿಯ ವಿತರಣೆ

ಭದ್ರಾವತಿ ಹೊಸಮನೆ ಶಿವಾಜಿ ವೃತ್ತದಲ್ಲಿ ಶ್ರೀ ರಾಮಮಂದಿರ, ಬಜರಂಗದಳ ಮತ್ತು ಓಂ ಹಿಂದೂ ಕೋಟೆ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಶ್ರೀ ವಿನಾಯಕ ಸ್ವಾಮಿಯ ವಿಸರ್ಜನೆ ಭಾನುವಾರ ವಿಜೃಂಭಣೆಯಿಂದ ಜರುಗಿತು.
    ಭದ್ರಾವತಿ, ಸೆ. ೧೮: ನಗರದ ಹೊಸಮನೆ ಶಿವಾಜಿ ವೃತ್ತದಲ್ಲಿ ಶ್ರೀ ರಾಮಮಂದಿರ, ಬಜರಂಗದಳ ಮತ್ತು ಓಂ ಹಿಂದೂ ಕೋಟೆ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಶ್ರೀ ವಿನಾಯಕ ಸ್ವಾಮಿಯ ವಿಸರ್ಜನೆ ಭಾನುವಾರ ವಿಜೃಂಭಣೆಯಿಂದ ಜರುಗಿತು.
    ನಗರದ ಪ್ರಮುಖ ವಿನಾಯಕ ಮೂರ್ತಿಗಳಲ್ಲಿ ಇದು ಸಹ ಒಂದಾಗಿದ್ದು, ಪ್ರತಿ ವರ್ಷ ವಿಭಿನ್ನ ಮತ್ತು ಆಕರ್ಷಕವಾಗಿ ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿದೆ. ಧಾರ್ಮಿಕ ಆಚರಣೆಗಳೊಂದಿಗೆ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಸಹ ಯಶಸ್ವಿಯಾಗಿ ನೆರವೇರಿಸಿಕೊಂಡು ಬರಲಾಗುತ್ತಿದೆ.
    ಮಧ್ಯಾಹ್ನ ೩.೩೦ಕ್ಕೆ ಕಲಾತಂಡಗಳೊಂದಿಗೆ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಮೆರವಣಿಗೆ ಆರಂಭಗೊಂಡಿತು. ಮೆರವಣಿಗೆ ರಂಗಪ್ಪ ವೃತ್ತ, ಮಾಧವಚಾರ್ ವೃತ್ತ ಮೂಲಕ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದ ವರೆಗೆ ಸಾಗಿ ಪುನಃ ಹಿಂದಿರುಗಿ ನಗರಸಭೆ ಮುಂಭಾಗ ಭದ್ರಾ ನದಿಯಲ್ಲಿ ಮೂರ್ತಿ ವಿಸರ್ಜನೆ ನಡೆಯಿತು.
    ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಈ ಭಾಗದ ಭಕ್ತರು ಮೆರವಣಿಗೆ ಪಾಲ್ಗೊಂಡು ಸಂಭ್ರಮಿಸಿದರು. ಸೇವಾಕರ್ತರಿಂದ ಪಾನಕ, ಮಜ್ಜಿಗೆ, ಪ್ರಸಾದ ವಿತರಣೆ ನಡೆಯಿತು.
    ಮುಸ್ಲಿಂ ಸಮುದಾಯದವರಿಂದ ತಂಪು ಪಾನಿಯ ವಿತರಣೆ :
    ಇಲ್ಲಿ ಪ್ರತಿವರ್ಷ ವಿನಾಯಕ ಮೂರ್ತಿ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಮೆರವಣಿಗೆ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರು ಸಹ ಸೇವಾಕರ್ತರಾಗಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
    ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ ಮೋರ್ಚಾ ಹಾಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ಮತ್ತು ಮುಸ್ಲಿಂ ಯುವಕರಿಂದ ತಂಪು ಪಾನಿಯ ವಿತರಿಸಲಾಯಿತು. ಅಮೀರ್ ಪಾಷಾ, ಜಮೀರ್, ಜಬಿಉಲ್ಲಾ, ಕಲಿಮುಲ್ಲಾ ಸೇರಿದಂತೆ ಇನ್ನಿತರರು ಸೇವಾಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಗಮನ ಸೆಳೆದರು. ಅಮೀರ್ ಪಾಷಾ ಅವರು ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರಾಗಿದ್ದು, ಪ್ರತಿವರ್ಷ ತಂಪು ಪಾನಿಯ ವಿತರಿಸುವ ಮೂಲಕ ಸೌಹಾರ್ದತೆ ಕಾಯ್ದುಕೊಂಡು ಬಂದಿದ್ದಾರೆ.
    ಆಕರ್ಷಕ ವಿನಾಯಕ ಮೂರ್ತಿ ಕಣ್ತುಂಬಿಕೊಂಡ ಭಕ್ತರು :
    ಈ ಬಾರಿ ವಿಶೇಷವಾಗಿ ಶ್ರೀರಾಮನ ಪರಮ ಭಕ್ತ, ಹಿಂದುಗಳ ಆರಾಧ್ಯ ದೈವ ಹನುಮನ ತೊಡೆಯ ಮೇಲೆ ಕುಳಿತ ಬಾಲ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು.  ರಾಜಬೀದಿ ಉತ್ಸವ ಮೆರವಣಿಗೆಯಲ್ಲಿ ಆಕರ್ಷಕ ವಿನಾಯಕ ಮೂರ್ತಿ ದರ್ಶನ ಪಡೆಯುವ ಮೂಲಕ ಭಕ್ತರು ಕಣ್ತುಂಬಿಕೊಂಡರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.


ಭದ್ರಾವತಿ ಹೊಸಮನೆ ಶಿವಾಜಿ ವೃತ್ತದಲ್ಲಿ ಶ್ರೀ ರಾಮಮಂದಿರ, ಬಜರಂಗದಳ ಮತ್ತು ಓಂ ಹಿಂದೂ ಕೋಟೆ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಶ್ರೀ ವಿನಾಯಕ ಸ್ವಾಮಿಯ ವಿಸರ್ಜನೆ ಭಾನುವಾರ ವಿಜೃಂಭಣೆಯಿಂದ ಜರುಗಿತು. ಈ ಸಂಬಂಧ ಜರುಗಿದ ರಾಜಬೀದಿ ಉತ್ಸವ ಮೆರವಣಿಗೆಯಲ್ಲಿ ಮುಸ್ಲಿಂ ಸಮುದಾಯದವರು ಭಕ್ತರಿಗೆ ತಂಪು ಪಾನಿಯ ವಿತರಿಸಿ ಗಮನ ಸೆಳೆದರು.