ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಸರ್ಕಾರಕ್ಕೆ ಒತ್ತಾಯ : ಎ.ಟಿ ರವಿ
ಭದ್ರಾವತಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ ಮಾತನಾಡಿದರು.
ಭದ್ರಾವತಿ, ಅ. ೨೮: ನಾಡಪ್ರಭು ಕೆಂಪೇಗೌಡರ ೧೦೮ ಅಡಿ ಕಂಚಿನ ಪ್ರತಿಮೆ ಉದ್ಘಾಟನೆ ಅಂಗವಾಗಿ ಅ.೨೯ ರಂದು ನಗರಕ್ಕೆ ಆಗಮಿಸುತ್ತಿರುವ ಪವಿತ್ರ ಮೃತ್ತಿಕೆ(ಮಣ್ಣು) ಮತ್ತು ಪವಿತ್ರ ಜಲ ಸಂಗ್ರಹ ಅಭಿಯಾನ ರಥದ ಮಾಹಿತಿ ನೀಡದೆ ಅವಮಾನ ಮಾಡಲಾಗಿದ್ದು, ಈ ಹಿನ್ನಲೆಯಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ ಹೇಳಿದರು.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಹಸೀಲ್ದಾರ್ ಆರ್. ಪ್ರದೀಪ್ ಹಾಗು ತಾಲೂಕು ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ಅವರು ಯಾವುದೇ ಮಾಹಿತಿ ನೀಡದೆ ತಾಲೂಕು ಒಕ್ಕಲಿಗರ ಸಂಘಕ್ಕೆ ಅವಮಾನವೆಸಗಿದ್ದಾರೆ. ಈ ಹಿನ್ನಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸುವ ಸಂಬಂಧ ಸಂಘ ತುರ್ತು ಸಭೆ ನಡೆಸಿ ನಿರ್ಣಯ ಕೈಗೊಂಡಿದೆ ಎಂದರು.
ಮೃತ್ತಿಕೆ ಹಾಗೂ ಜಲ ಸಂಗ್ರಹದ ಅಭಿಯಾನದ ರಥ ರಾಜ್ಯಾದ್ಯಂತ ಆಗಮಿಸುವ ಸಂದರ್ಭದಲ್ಲಿ ಆಯಾ ಜಿಲ್ಲೆಯ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ತಾಲೂಕು ಆಡಳಿತ ಹಾಗೂ ನಗರಸಭೆ ಆಡಳಿತ ಮತ್ತು ವಿವಿಧ ಸಂಘ-ಸಂಸ್ಥೆಗಳ, ಸಮಾಜದ ಪದಾಧಿಕಾರಿಗಳ, ಮುಖಂಡರುಗಳ ಪೂರ್ವಭಾವಿ ಸಭೆ ಕರೆದು ಎಲ್ಲರ ಸಹಯೋಗದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿ ಬೀಳ್ಕೊಡಬೇಕು ಎಂದು ಸ್ಪಷ್ಟವಾಗಿ ಸರ್ಕಾರದ ಜ್ಞಾಪನಾ ಪತ್ರದಲ್ಲಿ ಉಲ್ಲೇಖವಿದೆ. ಸರ್ಕಾರದ ಆದೇಶವಿದ್ದರೂ ಯಾವುದೇ ಸಂಘ-ಸಂಸ್ಥೆಗಳಿಗೆ, ಸಮಾಜಕ್ಕೆ ತಿಳಿಸದೆ ತಾರತಮ್ಯವೆಸಗಿದ್ದು, ಆ ಮೂಲಕ ಒಕ್ಕಲಿಗ ಸಮುದಾಯ ಸೇರಿದಂತೆ ಎಲ್ಲಾ ಸಮುದಾಯದವರಿಗೂ ಹಾಗು ನಾಡಪ್ರಭು ಕೆಂಪೇಗೌಡ ಅವರಿಗೂ ಅಪಮಾನವೆಸಗಿದ್ದಾರೆಂದು ಆರೋಪಿಸಿದರು.
ಈ ಹಿಂದೆ ತಾಲೂಕಿನಲ್ಲಿ ಕೆಂಪೇಗೌಡ ಜಯಂತಿ ಸರ್ಕಾರಿ ಕಾರ್ಯಕ್ರಮ ಆಚರಿಸುವ ಸಂದರ್ಭದಲ್ಲೂ ತಾಲೂಕು ಒಕ್ಕಲಿಗ ಸಮುದಾಯದ ಅಧ್ಯಕ್ಷರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸದೆ ಇದು ಸರ್ಕಾರದ ಕಾರ್ಯಕ್ರಮ ಎಂದು ನಮ್ಮನ್ನು ಕಡೆಗಣಿಸಿದ್ದರು. ಆದರೆ ಜಿಲ್ಲಾ ಕಾರ್ಯಕ್ರಮದಲ್ಲಿ ಸಮಾಜದ ಜಿಲ್ಲಾಧ್ಯಕ್ಷರಿಗೆ ವಿಶೇಷ ಸ್ಥಾನ ನೀಡಿದ್ದರು. ಸರ್ಕಾರದ ಕಾನೂನು ಜಿಲ್ಲೆಗೆ ಹಾಗೂ ತಾಲೂಕಿಗೆ ಬೇರೆ ಬೇರೆಯಾಗಿರುತ್ತದೆಯೇ ಎಂದು ಪ್ರೆಶ್ನಿಸಿದರು.
ತಾಲೂಕಿನಲ್ಲಿ ಸುಮಾರು ೪೦ ಸಾವಿರ ಒಕ್ಕಲಿಗರಿದ್ದು, ಇದೆ ರೀತಿ ನಮ್ಮನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಸಮಾಜದ ವತಿಯಿಂದ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಸಂಘದ ಉಪಾಧ್ಯಕ್ಷ ಆರ್.ಕೃಷ್ಣಮೂರ್ತಿ, ಖಜಾಂಚಿ ಎ.ಎನ್,ಕಾರ್ತಿಕ್, ಪ್ರಧಾನ ಕಾರ್ಯದರ್ಶಿ ಆರ್. ಪ್ರಕಾಶ್, ಕಾರ್ಯದರ್ಶಿ ಉಮೇಶ್, ಎನ್.ಜಿ ನಾಗರಾಜ್, ನಂಜುಂಡೇಗೌಡ, ರಾಧಮ್ಮ, ನಂಜಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.