ಬುಧವಾರ, ನವೆಂಬರ್ 30, 2022

ಬೀದಿನಾಯಿಗಳ ದಾಳಿಗೆ ೪ ವರ್ಷದ ಬಾಲಕ ಬಲಿ

ಭದ್ರಾವತಿ ದೊಣಬಘಟ್ಟ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಗೆ ಬಲಿಯಾದ ೪ ವರ್ಷದ ಬಾಲಕ ಸೈಯದ್ ಅರ್ಷದ್ ಮದನಿ
    ಭದ್ರಾವತಿ, ನ. ೩೦: ಬೀದಿನಾಯಿಗಳ ದಾಳಿಗೆ ಸುಮಾರು ೪ ವರ್ಷದ ಬಾಲಕ ಸಾವನ್ನಪ್ಪಿರುವ ಧಾರುಣ ಘಟನೆ ಬುಧವಾರ ಸಂಜೆ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ನಡೆದಿದೆ. ಇದರಿಂದಾಗಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
     ಸೈಯದ್ ನಸ್ರುಲ್ಲಾ ಮತ್ತು ಶೇರ್‌ಬಾನು ದಂಪತಿ ಪುತ್ರ ಸೈಯದ್ ಅರ್ಷದ್ ಮದನಿ ಸಾವನ್ನಪ್ಪಿದ್ದು,  ತಂದೆ ನಸ್ರುಲ್ಲಾ ಜೊತೆ ಬಾಲಕ ಮನೆ ಸಮೀಪದಲ್ಲಿರುವ ಗದ್ದೆಗೆ ತೆರಳಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.  
    ಸುಮಾರು ೭-೮ ಬೀದಿನಾಯಿಗಳು ದಾಳಿ ನಡೆಸಿದ್ದು, ತೀವ್ರ ಗಾಯಗೊಂಡ ಮದನಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಪ್ರಕರಣ ದಾಖಲಾಗಿದೆ.  
    ಬೀದಿನಾಯಿಗಳ ನಿಯಂತ್ರಣದಲ್ಲಿ ನಿರ್ಲಕ್ಷ್ಯವಹಿಸಿರುವ ಗ್ರಾಮ ಪಂಚಾಯಿತಿ ಆಡಳಿತದ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಗ್ರಾಮದಲ್ಲಿ ಮಕ್ಕಳು ಒಬ್ಬಂಟಿಯಾಗಿ ಸಂಚರಿಸದಂತಹ ಭಯದ ವಾತಾವರಣ ನಿರ್ಮಾಣವಾಗಿದೆ.


ಭದ್ರಾವತಿ ದೊಣಬಘಟ್ಟ ಗ್ರಾಮದಲ್ಲಿ ಸುಮಾರು ೪ ವರ್ಷದ ಬಾಲಕನ ಮೇಲೆ ಬೀದಿನಾಯಿಗಳು ದಾಳಿ ನಡೆಸಿರುವುದು.


ನಗರಸಭೆ ವ್ಯಾಪ್ತಿಯ ೩೭ ಘೋಷಿತ ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ

ತಾಂತ್ರಿಕ ಸಮಸ್ಯೆ ಬಗೆಹರಿಸಿ ಹಕ್ಕುಪತ್ರ ನೀಡಿ ಖಾತೆ ಮಾಡಿಕೊಡಲು ವಸತಿ ಸಚಿವರ ಆದೇಶ

ಭದ್ರಾವತಿ ನಗರಸಭೆ ವ್ಯಾಪ್ತಿಯ ೩೭ ಘೋಷಿತ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ವಿತರಿಸಲಾಗಿರುವ ಹಕ್ಕುಪತ್ರದಲ್ಲಿ ಉಂಟಾಗಿರುವ ತಾಂತ್ರಿಕ ದೋಷ ಸರಿಪಡಿಸಿ ಸೂಕ್ತ ಕ್ರಮ ಕೈಗೊಳ್ಳಲು ವಸತಿ ಸಚಿವ ವಿ. ಸೋಮಣ್ಣನವರ ನಿರ್ದೇಶನದ ಮೇರೆಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿಮಂಡಳಿ ಬೆಂಗಳೂರಿನ ಮುಖ್ಯ ಇಂಜಿನಿಯರ್‌ರವರು ಸೂಚಿಸಿರುವುದು.
    ಭದ್ರಾವತಿ, ನ. ೩೦: ಕಳೆದ ಸುಮಾರು ೪೦ ವರ್ಷದಿಂದ ಕೊಳಚೆ ಪ್ರದೇಶದ ನಿವಾಸಿಗಳ ಧ್ವನಿಯಾಗಿ ಹೋರಾಟ ನಡೆಸುತ್ತಿರುವ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ಮುಖಂಡರು, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್‌ರವರ ಪರಿಶ್ರಮ ಸಾರ್ಥಕಗೊಳ್ಳುತ್ತಿದ್ದು, ನಗರಸಭೆ ವ್ಯಾಪ್ತಿಯ ೩೭ ಘೋಷಿತ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ವಿತರಿಸಲಾಗಿರುವ ಹಕ್ಕುಪತ್ರದಲ್ಲಿ ಉಂಟಾಗಿರುವ ತಾಂತ್ರಿಕ ದೋಷ ಬಗೆಹರಿಸಿ ಖಾತೆ ಮಾಡಿಕೊಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ವಸತಿ ಸಚಿವ ವಿ. ಸೋಮಣ್ಣ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

 ಆರ್. ವೇಣುಗೋಪಾಲ್.
    ಆರ್. ವೇಣುಗೋಪಾಲ್‌ರವರು ಈ ಹಿಂದೆ ವಸತಿ ಸಚಿವರಿಗೆ ಮನವಿ ಸಲ್ಲಿಸಿ ನಗರಸಭೆ ವಿಐಎಸ್‌ಎಲ್ ಆಡಳಿತ ವ್ಯಾಪ್ತಿಯ ವೇಲೂರ್ ಶೆಡ್, ಜಿಂಕ್‌ಲೈನ್, ಕೂಲಿಬ್ಲಾಕ್, ಆಂಜನೇಯ ಅಗ್ರಹಾರ, ಸುರಗಿತೋಪು ಕೊಳಚೆ ಪ್ರದೇಶಗಳಿಗೆ ಹಕ್ಕುಪತ್ರ ವಿತರಣೆಯಾಗಿದ್ದು, ಫಿಲ್ಟರ್‌ಶೆಡ್ ಕೊಳಚೆ ಪ್ರದೇಶದಲ್ಲಿ ಪರಿಚಯ ಪತ್ರ ವಿತರಣೆಯಾಗಿದೆ. ಕಾಗದನಗರ ಎಂಪಿಎಂ ಆಡಳಿತ ವ್ಯಾಪ್ತಿಯ ವಾರ್ಡ್ ನಂ.೪,೫,೬ ಮತ್ತು ೮ ಹಾಗು ಆನೆಕೊಪ್ಪ ಸೇರಿದಂತೆ ನಗರಸಭೆ ವ್ಯಾಪ್ತಿಯ ಸುಮಾರು ೩೭ ಘೋಷಿತ ಕೊಳಚೆ ಪ್ರದೇಶಗಳಲ್ಲಿ ಸುಮಾರು ೫೦ ಸಾವಿರ ಜನಸಂಖ್ಯೆ ಇದ್ದು, ಇವರುಗಳಿಗೆ ಹಕ್ಕುಪತ್ರ ವಿತರಣೆಯಾಗಿರುತ್ತದೆ. ಈ ನಡುವೆ ವಿಐಎಸ್‌ಎಲ್ ಮತ್ತು ಎಂಪಿಎಂ ಆಡಳಿತ ವ್ಯಾಪ್ತಿಯ ಕೊಳಚೆ ಪ್ರದೇಶಗಳಿಗೆ ಜಿಲ್ಲಾಡಳಿತ ನಿಗದಿಪಡಿಸಿರುವ ಪರಿಹಾರ ಮೊತ್ತವನ್ನು ಎರಡು ಕಾರ್ಖಾನೆಗಳ ಆಡಳಿತ ಮಂಡಳಿಯವರು ತಿರಸ್ಕರಿಸಿದ್ದು, ಇದರಿಂದಾಗಿ ವಿತರಣೆಯಾಗಿರುವ ಹಲವು ಕೊಳಚೆ ಪ್ರದೇಶಗಳ ಹಕ್ಕು ಪತ್ರಗಳಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಅಲ್ಲದೆ ಹಾಲಪ್ಪಶೆಡ್ ಸೇರಿದಂತೆ ಇನ್ನಿತರ ಕೊಳಚೆ ಪ್ರದೇಶಗಳ ಸುಮಾರು ೧೦೦೦ಕ್ಕೂ ಅಧಿಕ ಮನೆಗಳಿಗೆ ಇನ್ನೂ ಹಕ್ಕುಪತ್ರ ವಿತರಣೆಯಾಗಿರುವುದಿಲ್ಲ. ಈ ಹಿನ್ನಲೆಯಲ್ಲಿ ತಕ್ಷಣ ತಾಲೂಕು ಆಡಳಿತ, ನಗರಸಭೆ ಹಾಗು ವಿಐಎಸ್‌ಎಲ್ ಮತ್ತು ಎಂಪಿಎಂ ಆಡಳಿತ ಮಂಡಳಿ ಹಾಗು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಜೊತೆ ಸಭೆನಡೆಸಿ ಸಮಸ್ಯೆ ಪರಿಹರಿಸುವಂತೆ ಕೋರಿದ್ದರು.
    ಅಲ್ಲದೆ ೨೦೨೦ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪನವರು ರಾಜ್ಯದೆಲ್ಲೆಡೆ ಘೋಷಿತ ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವಂತೆ ಆದೇಶ ಹೊರಡಿಸಿದ್ದರು. ಅದರಂತೆ ಸಾಮಾನ್ಯ ವರ್ಗದವರಿಗೆ ರು. ೨೦೦೦, ಪರಿಶಿಷ್ಟ ಜಾತಿ/ಪಂಗಡದವರಿಗೆ ರು.೧೦೦೦ ಪಡೆದು ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿದ್ದರು.
    ಮನವಿಗೆ ಸ್ಪಂದಿಸಿರುವ ವಸತಿ ಸಚಿವರು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಈ ಹಿನ್ನಲೆಯಲ್ಲಿ ಮಂಡಳಿಯ ಬೆಂಗಳೂರಿನ ಮುಖ್ಯ ಇಂಜಿನಿಯರ್‌ರವರು ಧಾರವಾಡದ ತಾಂತ್ರಿಕ ನಿರ್ದೇಶಕರಿಗೆ ಹಾಗು ಶಿವಮೊಗ್ಗ ಕಾರ್ಯಪಾಲಕ ಅಭಿಯಂತರರಿಗೆ ಅಗತ್ಯಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
    ಮನವಿಗೆ ಸ್ಪಂದಿಸಿ ಕೊಳಚೆ ಪ್ರದೇಶದ ನಿವಾಸಿಗಳ ಸಂಕಷ್ಟ ಬಗೆಹರಿಸಲು ಮುಂದಾಗಿರುವ ವಸತಿ ಸಚಿವ ವಿ. ಸೋಮಣ್ಣನವರಿಗೆ ಆರ್. ವೇಣುಗೋಪಾಲ್ ಕೃತಜ್ಞತೆ ಸಲ್ಲಿಸಿದ್ದಾರೆ.

ಮಂಗಳವಾರ, ನವೆಂಬರ್ 29, 2022

ಡಿ.೩ರಂದು ನಗರಕ್ಕೆ ಪ.ಪೂ ದತ್ತಾವಧೂತ ಮಹಾರಾಜರ ಆಗಮನ

ಪ.ಪೂ ದತ್ತಾವಧೂತ ಮಹಾರಾಜರು
    ಭದ್ರಾವತಿ, ನ. ೨೯: ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾದಲ್ಲಿರುವ ಶ್ರೀ ಚಂಡಿಕಾದುರ್ಗಾ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿರುವ ಉಪಾಸನಾ ಹಾಗು ನಾಮಸಾಧನಾ ಅಭ್ಯಾಸ ಶಿಬಿರದ ಸಮಾರಂಭಕ್ಕೆ ಡಿ.೩ರಂದು ಶ್ರೀ ಕ್ಷೇತ್ರ ಹೆಬ್ಬಳ್ಳಿಯಿಂದ ಪ.ಪೂ ದತ್ತಾವಧೂತ ಮಹಾರಾಜರು ಆಗಮಿಸಲಿದ್ದಾರೆ.
    ಅಂದು ಸಂಜೆ ೬ ಗಂಟೆಗೆ ಶ್ರೀ ಮಹಾರಾಜರ ದಿವ್ಯ ಪಾದುಕೆಗಳೊಂದಿಗೆ ಪ.ಪೂ ದತ್ತಾವಧೂತ ಮಹಾರಾಜರು ಹಾಗು ಆಶ್ರಮ ವಾಸಿಗಳು ಆಗಮಿಸಲಿದ್ದಾರೆ. ಆರತಿ ಮಂತ್ರಪುಷ್ಪ, ಪ್ರಸಾದ ವಿನಿಯೋಗ ಜರುಗಲಿದೆ.
    ಡಿ.೪ರಂದು ಸಂಜೆ ೬ ಗಂಟೆಯಿಂದ ಕಾಕಡಾರತಿ ಹಾಗು ಪಂಚಪದಿ ಭಜನೆ, ೭ ರಿಂದ ಪ್ರಾತಃಕಾಲ ಪೂಜೆ, ೮ರಿಂದ ಸಾಮೂಹಿಕ ಜಪ, ೯ ರಿಂರ ಉಪಹಾರ, ೧೦ರಿಂದ ಸಾಮೂಹಿಕ ಜಪ, ೧೧ ರಿಂದ ಶ್ರೀ ಹನುಮಾನ್ ಚಾಲೀಸ ಪಾಠ, ೧೧.೩೦ರಿಂದ ಆಶೀರ್ವಚನ ಹಾಗು ೧೨.೩೦ರಿಂದ ಮಾಹಾನೈವೇದ್ಯ, ಮಹಾಮಂಗಳಾರತಿ ಹಾಗು ಮಹಾಪ್ರಸಾದ ವಿನಿಯೋಗ ನಡೆಯಲಿದೆ.
    ಭಕ್ತಾಧಿಗಳು ಹೆಚ್ಚಿನಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ: ೮೬೬೦೬೦೦೮೨೭ ಅಥವಾ ೯೬೩೨೬೨೩೩೦೩ ಸಂಖ್ಯೆಗೆ ಕರೆ ಮಾಡಬಹುದಾಗಿದೆ.


ಶ್ರೀ ರಾಮೇಶ್ವರ ಯುವಕ ಸಂಘದಿಂದ ಕನ್ನಡ ರಾಜ್ಯೋತ್ಸವ

ಭದ್ರಾವತಿ ತಾಲೂಕಿನ ಶ್ರೀ ರಾಮನಗರದ ಶ್ರೀ ರಾಮೇಶ್ವರ ಯುವಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಜೆಡಿಎಸ್ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ, ಎಸ್. ಮಣಿಶೇಖರ್, ಧರ್ಮೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಭದ್ರಾವತಿ, ನ. ೨೯: ತಾಲೂಕಿನ ಶ್ರೀ ರಾಮನಗರದ ಶ್ರೀ ರಾಮೇಶ್ವರ ಯುವಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಜೆಡಿಎಸ್ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ ಉದ್ಘಾಟಿಸಿದರು.
    ಶ್ರೀ ರಾಮೇಶ್ವರ ರಂಗಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಭದ್ರಾವತಿ ಬೀಟ್ಸ್ ಆರ್ಕೇಸ್ಟ್ರಾ ವತಿಯಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
    ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಧರ್ಮೇಗೌಡ(ಕುಂಬ್ರಿ ಚಂದ್ರಣ್ಣ), ವೀರಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಎಲ್ ಯಶೋಧರಯ್ಯ, ಜೆಡಿಎಸ್ ಪಕ್ಷದ ಮುಖಂಡರಾದ ಭಾಗ್ಯಮ್ಮ, ಶ್ರೀ ರಾಮೇಶ್ವರ ಯುವಕರ ಸಂಘದ ಗೌರವಾಧ್ಯಕ್ಷ ಟಿ.ಎಸ್ ಶಶಿಕಾಂತ, ಅಧ್ಯಕ್ಷ ಎಸ್.ಪಿ ಅಭಿರಾಜ್, ನಿರಂಜನ ಕೆ ಗೌಡ ಸೇರಿದಂತೆ ಸಂಘದ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ಎಂ.ಜೆ ಅಪ್ಪಾಜಿ ಅಭಿಮಾನಿಗಳು, ಗ್ರಾಮದ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಸತ್ಯ ಸಂಸ್ಕೃತಿ ಸ್ಪಿರಿಚ್ಯುಯಲ್ ಟ್ರಸ್ಟ್ ವತಿಯಿಂದ ೧೯ ಸರ್ಕಾರಿ ಶಾಲೆಗಳಿಗೆ ಉಚಿತ ಕಲಿಕಾ ಸಾಮಾಗ್ರಿ ವಿತರಣೆ

ಬೆಂಗಳೂರಿನ ಸತ್ಯ ಸಂಸ್ಕೃತಿ ಸ್ಪಿರಿಚ್ಯುಯಲ್ ಟ್ರಸ್ಟ್ ವತಿಯಿಂದ ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮದ ಆಟಗಾರಿ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ  ಸುಮಾರು ೧೬ ಸರ್ಕಾರಿ ಶಾಲೆಗಳಿಗೆ ಉಚಿತ ಕಲಿಕಾ  ಸಾಮಾಗ್ರಿಗಳನ್ನು  ವಿತರಿಸಲಾಯಿತು.
    ಭದ್ರಾವತಿ, ನ. ೨೯: ಬೆಂಗಳೂರಿನ ಸತ್ಯ ಸಂಸ್ಕೃತಿ ಸ್ಪಿರಿಚ್ಯುಯಲ್ ಟ್ರಸ್ಟ್ ವತಿಯಿಂದ ತಾಲೂಕಿನ ಕೂಡ್ಲಿಗೆರೆ ಗ್ರಾಮದ ಆಟಗಾರಿ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ  ಸುಮಾರು ೧೬ ಸರ್ಕಾರಿ ಶಾಲೆಗಳಿಗೆ ಉಚಿತ ಕಲಿಕಾ  ಸಾಮಾಗ್ರಿಗಳನ್ನು  ವಿತರಿಸಲಾಯಿತು.
   ಟ್ರಸ್ಟ್ ಸಂಸ್ಥಾಪಕ ಪಂಡಿತ್ ಶ್ರೀನಿವಾಸ್ ಮಾತನಾಡಿ, ಕಳೆದ ಸುಮಾರು ೮ ವರ್ಷದಿಂದ ಕಲಿಕಾ ಸಾಮಾಗ್ರಿಗಳನ್ನು  ವಿಸ್ತರಿಸಲಾಗುತ್ತಿದೆ. ೧೯ ಶಾಲೆಗಳಿಂದ ಆರಂಭಗೊಂಡ ಕಾರ್ಯ ಪ್ರಸ್ತುತ ೧೦೫ ಸರ್ಕಾರಿ ಶಾಲೆಗಳಿಗೆ ವಿಸ್ತರಣೆಯಾಗಿದೆ. ದೀನದಲಿತರು ಮತ್ತು ಬುಡಕಟ್ಟು ಶಾಲೆಯ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳನ್ನು ಹಂಚಲಾಗುತ್ತಿದೆ. ಇದೊಂದು ಅಳಿಲು ಸೇವೆ ಎಂದರು.
       ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮಾತನಾಡಿ, ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಟ್ರಸ್ಟ್ ವತಿಯಿಂದ ಕಲಿಕಾ ಸಾಮಾಗ್ರಿಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ.  ಇಂತಹ ಸಮಾಜಮುಖಿ ಕಾರ್ಯಗಳು ಹೆಚ್ಚಾಗಿ ನಡೆಯಬೇಕೆಂದರು.
     , ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿಬಾಯಿ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಪಂಚಾಕ್ಷರಿ, ಪ್ರಾರ್ಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಟಿ. ಪೃಥ್ವಿರಾಜ್, ಮಾಜಿ ಅಧ್ಯಕ್ಷ ಎಂ.ಎಸ್ ಬಸವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ.ಎನ್ ಶ್ರೀಧರಗೌಡ, ಸತ್ಯ ಸಂಸ್ಕೃತಿ ಸ್ಪಿರಿಚ್ಯುಯಲ್ ಟ್ರಸ್ಟ್ ಕಾರ್ಯದರ್ಶಿ ಮೋನಿಷಾ, ಎಸ್‌ಡಿಎಂಸಿ ಅಧ್ಯಕ್ಷ ಗಣೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಆರ್.ಎಸ್ ರೂಪ ಪ್ರಾರ್ಥಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಖಜಾಂಚಿ ಎಸ್.ಕೆ ಮೋಹನ್ ನಿರೂಪಿಸಿ, ಶಾಲೆಯ ಮುಖ್ಯಶಿಕ್ಷಕಿ ಎಚ್. ಭಾರತಿ ವಂದಿಸಿದರು.  

ಭದ್ರಾವತಿಯಲ್ಲಿ ವಿಜೃಂಭಣೆಯಿಂದ ಜರುಗಿದ ಸುಬ್ರಹ್ಮಣ್ಯ ಷಷ್ಠಿ

ಭದ್ರಾವತಿ ಹಳೇನಗರದ ಶ್ರೀ ರಾಮೇಶ್ವರ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಸುಬ್ರಹ್ಮಣ್ಯ ಷಷ್ಠಿ ವಿಜೃಂಭಣೆಯಿಂದ ನೆರವೇರಿತು.
    ಭದ್ರಾವತಿ, ನ. ೨೯ : ಹಳೇನಗರದ ಶ್ರೀ ರಾಮೇಶ್ವರ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಸುಬ್ರಹ್ಮಣ್ಯ ಷಷ್ಠಿ ವಿಜೃಂಭಣೆಯಿಂದ ನೆರವೇರಿತು.
ಸುಬ್ರಹ್ಮಣ್ಯ ಷಷ್ಠಿ ಅಂಗವಾಗಿ ಶ್ರೀ ರಾಮೇಶ್ವರ ದೇವರಿಗೆ ಹಾಗೂ ಸುಬ್ರಹ್ಮಣ್ಯ ದೇವರಿಗೆ ಬೆಳಗ್ಗೆಯಿಂದಲೇ ವಿಶೇಷ ಅಭಿಷೇಕ, ಅಲಂಕಾರ ಹಾಗೂ ಪೂಜೆ ನೆರವೇರಿಸಲಾಯಿತು.
  ಅದ್ವೈತ ವಾಚಸ್ಪತಿ ಶ್ರೀ ಕೃಷ್ಣಮೂರ್ತಿ ಸೋಮಯಾಜಿ ಅವರ ನೇತೃತ್ವದಲ್ಲಿ ಶ್ರೀ ಸ್ವಾಮಿಗೆ ಪಂಚಾಮೃತ ಅಭಿಷೇಕ, ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ ನೆರವೇರಿಸಲಾಯಿತು. ಆ ನಂತರ ಸುಬ್ರಹ್ಮಣ್ಯ ಮೂಲಮಂತ್ರ ಹೋಮ, ಪೂರ್ಣಾಹುತಿ, ಬ್ರಹ್ಮಚಾರಿಗಳ ವಿಶೇಷ ಪೂಜೆ, ಇದಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀ ಸ್ವಾಮಿಯ ರಾಜಬೀದಿ ಉತ್ಸವ ಅದ್ಧೂರಿಯಾಗಿ ನಡೆಯಿತು.
    ಮಹಾಮಂಗಳಾರತಿ ನಂತರ ಸಾವಿರಾರು ಮಂದಿಗೆ ಮಹಾಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು. ಎಲ್ಲಾ ಕಾರ್ಯಕ್ರಮದಲ್ಲಿ ಶ್ರೀ ರಾಮೇಶ್ವರ, ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿಯವರು, ಭಕ್ತರು ಪಾಲ್ಗೊಂಡಿದ್ದರು.

ಸೋಮವಾರ, ನವೆಂಬರ್ 28, 2022

ಸಂವಿಧಾನ ಗೌರವಿಸುವ ಜೊತೆಗೆ ಮಹತ್ವ ಅರಿತುಕೊಳ್ಳಿ : ನ್ಯಾ. ಉಜ್ವಲ ವೀರಣ್ಣ ಸಿದ್ದನ್ನವರ

ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ ಮತ್ತು ಲಯನ್ಸ್ ಕ್ಲಬ್ ಹಾಗು ಸರ್ಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜಿನ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ದಿನಾಚರಣೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷೆ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಉಜ್ವಲ ವೀರಣ್ಣ ಸಿದ್ದನ್ನವರ ಮಾತನಾಡಿದರು.   
    ಭದ್ರಾವತಿ, ನ. ೨೮: ಪ್ರತಿಯೊಬ್ಬರು ಸಂವಿಧಾನಕ್ಕೆ ಗೌರವ ನೀಡುವ ಜೊತೆಗೆ ಸಂವಿಧಾನದ ಮಹತ್ವ ಅರಿತುಕೊಳ್ಳಬೇಕೆಂದು ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷೆ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಉಜ್ವಲ ವೀರಣ್ಣ ಸಿದ್ದನ್ನವರ ಹೇಳಿದರು.
    ಅವರು ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ ಮತ್ತು ಲಯನ್ಸ್ ಕ್ಲಬ್ ಹಾಗು ಸರ್ಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜಿನ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶದ ಸಂವಿಧಾನಕ್ಕೆ ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸಂವಿಧಾನದ ಆಶಯದಂತೆ ನಡೆದುಕೊಳ್ಳುವ ಮೂಲಕ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸುವಂತಾಗಬೇಕು. ಆಗ ಮಾತ್ರ ಸಂವಿಧಾನ ದಿನಾಚರಣೆಗೆ ಅರ್ಥ ಬರುತ್ತದೆ ಎಂದರು.
    ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಎನ್ ಕಾರ್ತಿಕ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಪ್ರಾಸ್ತಾವಿಕ ನುಡಿಗಳನ್ನಾಡಿದರು.
    ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಯದರ್ಶಿ, ನ್ಯಾಯಾಧೀಶ ಆರ್. ಯತೀಶ್, ಸರ್ಕಾರಿ ಬಾಲಿಕಾ ಪದವಿ ಕಾಲೇಜಿನ ಪ್ರಾಂಶುಪಾಲ ಗುಡ್ಡಪ್ಪ ಕುಟ್ರೆ, ಸರ್ಕಾರಿ ಅಭಿಯೋಜಕ ಎಂ.ಜಿ ತ್ಯಾಗರಾಜ್, ವಕೀಲರ ಸಂಘದ ಉಪಾಧ್ಯಕ್ಷ ಡಿ.ಎಂ ವಿಶ್ವನಾಥ್, ಕಾರ್ಯದರ್ಶಿ ಉದಯ್‌ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಸಂವಿಧಾನ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಸಂವಿಧಾನ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಭಾಷಣ ಹಾಗು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.