Friday, December 16, 2022

ಬೆಳಗಾವಿ ಅಧಿವೇಶನದಲ್ಲಿ ವಕೀಲರ ಸಂರಕ್ಷಣಾ ಕಾಯ್ದೆ ಮಂಡಿಸಿ


ಎಲ್ಲೆಡೆ ವಕೀಲರ ಮೇಲೆ ಹಲ್ಲೆ ಪ್ರಕರಣಗಳು, ಶೋಷಣೆಗಳು ಹೆಚ್ಚಾಗುತ್ತಿವೆ. ಈ ಹಿನ್ನಲೆಯಲ್ಲಿ ತಕ್ಷಣ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರಬೇಕೆಂದು ಆಗ್ರಹಿಸಿ ಶುಕ್ರವಾರ ಭದ್ರಾವತಿಯಲ್ಲಿ ತಾಲೂಕು ವಕೀಲರ ಸಂಘದ ವತಿಯಿಂದ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಡಿ. ೧೬ : ಎಲ್ಲೆಡೆ ವಕೀಲರ ಮೇಲೆ ಹಲ್ಲೆ ಪ್ರಕರಣಗಳು, ಶೋಷಣೆಗಳು ಹೆಚ್ಚಾಗುತ್ತಿವೆ. ಈ ಹಿನ್ನಲೆಯಲ್ಲಿ ತಕ್ಷಣ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರಬೇಕೆಂದು ಆಗ್ರಹಿಸಿ ಶುಕ್ರವಾರ ತಾಲೂಕು ವಕೀಲರ ಸಂಘದ ವತಿಯಿಂದ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಪ್ರಮುಖರು ಮಾತನಾಡಿ, ವಕೀಲರು ಪ್ರತಿನಿತ್ಯ ಭಯದ ವಾತವರಣದಲ್ಲಿ ಬದುಕುವಂತಾಗಿದೆ. ವಕೀಲರ ಹಲ್ಲೆ ಪ್ರಕರಣಗಳು, ಶೋಷಣೆಗಳು ಹೆಚ್ಚಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಈ ಬಾರಿ ಬೆಳಗಾವಿ ಅಧಿವೇಶನದಲ್ಲಿ ವಕೀಲರ ಸಂರಕ್ಷಣೆ ಕಾಯ್ದೆಯನ್ನು ಮಂಡಿಸಬೇಕೆಂದು ಆಗ್ರಹಿಸಿದರು. ತಹಸೀಲ್ದಾರ್ ಆರ್. ಪ್ರದೀಪ್ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
    ವಕೀಲರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಕಾರ್ಯದರ್ಶಿ ವಿ. ಉದಯಕುಮಾರ್, ಉಪಾಧ್ಯಕ್ಷ ಡಿ.ಎಂ ವಿಶ್ವನಾಥ್, ಸಹ ಕಾರ್ಯದರ್ಶಿ ಎಸ್. ಮಂಜಪ್ಪ, ಖಜಾಂಚಿ ವಿಮಲ, ನಿರ್ದೇಶಕರಾದ ಎಸ್.ಆರ್ ನವರತ್ನಮಾಲ, ಎಸ್. ರವಿ, ಎಸ್. ಶ್ವೇತಾ, ಹರೀಶ್ ಬರ್ಗೆ ಮತ್ತು ಮಗೇಶ್ ಬಾಬು ಸೇರಿದಂತೆ ಹಿರಿಯ ಹಾಗು ಕಿರಿಯ ವಕೀಲರು ಭಾಗವಹಿಸಿದ್ದರು.

ಡಿ.೨೪ರಂದು ತಾಲೂಕಿಗೆ ಕನ್ನಡ ಜ್ಯೋತಿ ಆಗಮನ : ಪೂರ್ವಭಾವಿ ಸಭೆ

ಹಾವೇರಿಯಲ್ಲಿ ನಡೆಯಲಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ಡಿ.೨೪ರಂದು ಭದ್ರಾವತಿ ತಾಲೂಕಿಗೆ ಆಗಮಿಸಲಿದ್ದು, ಈ ಹಿನ್ನಲೆಯಲ್ಲಿ ಶುಕ್ರವಾರ ತಾಲೂಕು ಕಛೇರಿಯಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
    ಭದ್ರಾವತಿ, ಡಿ. ೧೬ : ಹಾವೇರಿಯಲ್ಲಿ ನಡೆಯಲಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ಡಿ.೨೪ರಂದು ತಾಲೂಕಿಗೆ ಆಗಮಿಸಲಿದ್ದು, ಈ ಹಿನ್ನಲೆಯಲ್ಲಿ ಶುಕ್ರವಾರ ತಾಲೂಕು ಕಛೇರಿಯಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
    ಕನ್ನಡ ರಥದಲ್ಲಿ ಜಾಥಾ ಮೂಲಕ ಕನ್ನಡ ಜ್ಯೋತಿ ಶಿವಮೊಗ್ಗ ಜಿಲ್ಲೆಯಲ್ಲಿ ತಾಲೂಕಿಗೆ ಮಾತ್ರ ಆಗಮಿಸಲಿದ್ದು, ಈ ಹಿನ್ನಲೆಯಲ್ಲಿ ಜ್ಯೋತಿಯನ್ನು ಅದ್ದೂರಿಯಾಗಿ ಸ್ವಾಗತಿಸಲು ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ರೂಪಿಸಲು ಚರ್ಚಿಸಲಾಯಿತು.
    ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಮತ್ತು ಶಾಲಾ ಮಕ್ಕಳ ಬ್ಯಾಂಡ್‌ಸೆಟ್‌ನೊಂದಿಗೆ ಮಹಿಳೆಯರು ಪೂರ್ಣ ಕುಂಭದೊಂದಿಗೆ ಸ್ವಾಗತಿಸುವುದು. ವಿವಿಧ ಸಂಘಟನೆಗಳಿಂದ ಗೀತ ಗಾಯನ ನಡೆಸುವುದು.  ಅಂದಿನ ಕಾರ್ಯಕ್ರಮದಲ್ಲಿ  ಜಿಲ್ಲಾಮಟ್ಟದ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಕನ್ನಡಪರ ಸಂಘ-ಸಂಸ್ಥೆಗಳು, ರೈತರು, ಧಾರ್ಮಿಕ ಸಂಘ-ಸಂಸ್ಥೆಗಳು, ವಿದ್ಯಾಸಂಸ್ಥೆಗಳು, ಮಹಿಳಾ ಸಂಘಟನೆಗಳು, ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ ಮತ್ತು ಗೈಡ್ ತಂಡಗಳು, ಶಾಲಾ ಮಕ್ಕಳು, ರೋಟರಿ, ಲಯನ್ಸ್ ಸೇವಾ ಸಂಸ್ಥೆಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಸುವಂತೆ ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಲಾಯಿತು.
         ಜಿಲ್ಲಾ  ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್, ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ. ಕಂದಾಯಾಧಿಕಾರಿ ರಾಜ್ ಕುಮಾರ್, ಬಿ.ಕೆ ಜಗನ್ನಾಥ್, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ  ಭಾಗವಹಿಸಿದ್ದರು.

ಗೃಹರಕ್ಷಕ ದಳ ನಿವೃತ್ತ ಪ್ಲಟೂನ್ ಕಮಾಂಡರ್ ಕೆ. ಬಾಬುರಾವ್ ನಿಧನ

ಕೆ. ಬಾಬುರಾವ್ 
    ಭದ್ರಾವತಿ, ಡಿ. ೧೬: ಕರ್ನಾಟಕ ರಾಜ್ಯ ಗೃಹರಕ್ಷಕ ದಳ ಭದ್ರಾವತಿ ಘಟಕದ ನಿವೃತ್ತ ಪ್ಲಟೂನ್ ಕಮಾಂಡರ್ ಕೆ. ಬಾಬುರಾವ್ (೭೧) ರವರು ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು.
      ಪತ್ನಿ, ಮೂವರು ಪುತ್ರಿಯರು ಇದ್ದರು. ಕೆ. ಬಾಬುರಾವ್ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಈ ನಡುವೆ ಗೃಹರಕ್ಷಕದಲ್ಲೂ ಸೇವೆ ಸಲ್ಲಿಸುತ್ತಿದ್ದರು. ಇವರ ಅಂತ್ಯಕ್ರಿಯೆ ಸಂಜೆ ಲೋಯರ್ ಹುತ್ತಾ ಹಿಂದೂ ರುದ್ರಭೂಮಿಯಲ್ಲಿ  ನೆರವೇರಿತು.    
    ಗೃಹರಕ್ಷಕ ದಳ ನಿವೃತ್ತ ಅಧಿಕಾರಿಗಳಾದ ಡಾ. ರವೀಂದ್ರನಾಥ್ ಕೋಠಿ, ಎ. ರಾಜಣ್ಣ, ಘಟಕಾಧಿಕಾರಿ ಜಗದೀಶ್, ಎನ್‌ಸಿಓ ಅಧಿಕಾರಿಗಳು, ಗೃಹರಕ್ಷಕರು ಹಾಗೂ ನಗರಸಭಾ ಸದಸ್ಯೆ ಲತಾಚಂದ್ರಶೇಖರ್ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

Thursday, December 15, 2022

ವಿಐಎಸ್‌ಎಲ್ ಕಾರ್ಖಾನೆಗೆ ಬಂಡವಾಳ ತೊಡಗಿಸಿ


ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಿ ಅಭಿವೃದ್ಧಿಪಡಿಸುವಂತೆ ಸಂಸದ ಬಿ.ವೈ ರಾಘವೇಂದ್ರ ಗುರುವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರವರಿಗೆ ಮನವಿ ಮಾಡಿದ್ದಾರೆ.
    ಭದ್ರಾವತಿ, ಡಿ. ೧೫ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಿ ಅಭಿವೃದ್ಧಿಪಡಿಸುವಂತೆ ಸಂಸದ ಬಿ.ವೈ ರಾಘವೇಂದ್ರ ಗುರುವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರವರಿಗೆ ಮನವಿ ಮಾಡಿದ್ದಾರೆ.
    ನವದೆಹಲಿ ಸಚಿವರ ಸಂಸತ್ತಿನ ಕಛೇರಿಯಲ್ಲಿ ಭೇಟಿಯಾಗಿ ಉಕ್ಕು ಪ್ರಾಧಿಕಾರದ ಮೂಲಕ ವಿಐಎಸ್‌ಎಲ್ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸುವ ಮೂಲಕ ಶಿವಮೊಗ್ಗ ಜಿಲ್ಲೆಯ ಆರ್ಥಿಕ ಬೆಳವಣಿಗೆಗೆ ಸಹಕರಿಸುವಂತೆ ಕೋರಿದರು.
    ಕೇಂದ್ರ ಸರ್ಕಾರ ಇತ್ತೀಚೆಗೆ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಕೈಬಿಟ್ಟಿದ್ದು, ಈ ನಡುವೆ ಉಕ್ಕು ಪ್ರಾಧಿಕಾರ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಲು ಮೀನಾಮೇಷ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಕೆಲವು ದಿನಗಳಿಂದ ಪುನಃ ಹೋರಾಟಗಳು ಆರಂಭಗೊಂಡಿವೆ. ಇದಕ್ಕೆ ಪೂರಕವೆಂಬಂತೆ ಇದೀಗ ಸಂಸದರು ಕೇಂದ್ರ ಹಣಕಾಸು ಸಚಿವೆಯನ್ನು ಭೇಟಿಯಾಗಿ ಮನವಿ ಮಾಡಿರುವುದು ಕಂಡು ಬರುತ್ತಿದೆ.  

ಪ್ರಸ್ತುತ ಜೆ.ಎಚ್ ಪಟೇಲ್‌ರವರ ಸಮಾಜವಾದಿ ಚಿಂತನೆಗಳು ಅವಶ್ಯಕ : ಜ್ಯೋತಿ ಸೋಮಶೇಖರ್

ಭದ್ರಾವತಿ ಹೊಸಸಿದ್ದಾಪುರದ ಸುರಕ್ಷಾ ವೃದ್ದಾಶ್ರಮ ಮತ್ತು ಅನಾಥಾಶ್ರಮದಲ್ಲಿ ಗುರುವಾರ ಸಮಾಜವಾದಿ ನಾಯಕ, ಮಾಜಿ ಮುಖ್ಯಮಂತ್ರಿ ಜೆ.ಎಚ್ ಪಟೇಲ್‌ರವರ ೨೩ನೇ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಡಿ. ೧೫: ಮಾಜಿ ಮುಖ್ಯಮಂತ್ರಿ ಜೆ.ಎಚ್ ಪಟೇಲ್‌ರವರ ಸಮಾಜವಾದಿ ಚಿಂತನೆಗಳು ಇಂದಿನ ಸಮಾಜಕ್ಕೆ ಅಗತ್ಯವಾಗಿವೆ ಎಂದು ಸುರಕ್ಷಾ ಸೇವಾ ಟ್ರಸ್ಟ್ ಅಧ್ಯಕ್ಷೆ ಜ್ಯೋತಿ ಸೋಮಶೇಖರ್ ಹೇಳಿದರು.
    ಅವರು ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರದ ಸುರಕ್ಷಾ ವೃದ್ದಾಶ್ರಮ ಮತ್ತು ಅನಾಥಾಶ್ರಮದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸಮಾಜವಾದಿ ನಾಯಕ, ಮಾಜಿ ಮುಖ್ಯಮಂತ್ರಿ ಜೆ.ಎಚ್ ಪಟೇಲ್‌ರವರ ೨೩ನೇ ಪುಣ್ಯಸ್ಮರಣೆ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು.
    ಇಂದಿನ ಪೀಳಿಗೆಯವರು ಜೆ.ಎಚ್ ಪಟೇ\ರವರ ಸಮಾಜವಾದಿ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಪಟೇಲ್‌ರವರ ಬದುಕು ಎಲ್ಲರಿಗೂ ಆದರ್ಶಪ್ರಾಯವಾಗಿದೆ. ಈ ನಿಟ್ಟಿನಲ್ಲಿ ಅವರ ಪುಣ್ಯಸ್ಮರಣೆ ಅಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.
    ಸಂಯುಕ್ತ(ಜನತಾದಳ) ಕರ್ನಾಟಕ  ರಾಜ್ಯ ಕಾರ್ಯದರ್ಶಿ ಶಶಿ ಕುಮಾರ್ ಗೌಡ, ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವಿಭಾಗದ ಅಧ್ಯಕ್ಷ ಬಿ. ಗಂಗಾಧರ . ನಗರಸಭಾ ಸದಸ್ಯ ಆರ್. ಮೋಹನ್‌ಕುಮಾರ್, ಸಮಾಜ ಸೇವಕ ಹಿರೇಮಠ್, ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ಮಧು, ತಾಲೂಕು ಅಧ್ಯಕ್ಷ ತ್ಯಾಗರಾಜ್.  ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಜಿಲ್ಲಾಧ್ಯಕ್ಷ ಕೆ. ಪ್ರಭು, ಜೆಡಿಯು ತಾಲೂಕು ಅಧ್ಯಕ್ಷ ರಘು ಸಂಕ್ಲೀಪುರ, ಸುರಕ್ಷಾ ಸೇವಾ ಟ್ರಸ್ಟ್ ಕಾರ್ಯದರ್ಶಿ ಸೋಮಶೇಖರ್, ಖಜಾಂಚಿ ಪ್ರಶಾಂತ್ ಟ್ರಸ್ಟಿ ಗಳಾದ ಮಂಜುಳಮ್ಮ, ಲಲಿತ ಸೇರಿದಂತೆ ವೃದ್ಧಾಶ್ರಮದ ವೃದ್ಧರು, ಸ್ಥಳೀಯರು ಉಪಸ್ಥಿತರಿದ್ದರು.

ಅಕ್ರಮವಾಗಿ ಪಡಿತರ ಅಕ್ಕಿ ಮಾರಾಟಕ್ಕೆ ಯತ್ನ : ಗ್ರಾಮಾಂತರ ಪೊಲೀಸರ ದಾಳಿ

೧.೭೬ ಲಕ್ಷ ರು. ಮೌಲ್ಯದ ೮೦ ಕ್ವಿಂಟಲ್ ಅಕ್ಕಿ ವಶ

ಪಡಿತರ ಅಕ್ಕಿಯನ್ನು ಅನಧಿಕೃತವಾಗಿ ಸಂಗ್ರಹಿಸಿ ಕ್ಯಾಂಟರ್ ವಾಹನಕ್ಕೆ ತುಂಬಿಕೊಂಡು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ ಸುಮಾರು ೧.೭೬ ಲಕ್ಷ ರು. ಮೌಲ್ಯದ ೮೦ ಕ್ವಿಂಟಲ್ ಪಡಿತರ ಅಕ್ಕಿ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
    ಭದ್ರಾವತಿ, ಡಿ. ೧೫ :  ಪಡಿತರ ಅಕ್ಕಿಯನ್ನು ಅನಧಿಕೃತವಾಗಿ ಸಂಗ್ರಹಿಸಿ ಕ್ಯಾಂಟರ್ ವಾಹನಕ್ಕೆ ತುಂಬಿಕೊಂಡು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ  ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ ಸುಮಾರು ೧.೭೬ ಲಕ್ಷ ರು. ಮೌಲ್ಯದ ೮೦ ಕ್ವಿಂಟಲ್ ಪಡಿತರ ಅಕ್ಕಿ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
    ತಾಲೂಕಿನ ಮಜ್ಜಿಗೇನಹಳ್ಳಿ ಗ್ರಾಮದ ಅಡಕೆ ತೋಟವೊಂದರಲ್ಲಿ ಅನಧಿಕೃತವಾಗಿ ಪಡಿತರ ಅಕ್ಕಿ ಸಂಗ್ರಹಿಸಲಾಗಿದ್ದು, ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡ ದಾಳಿ ನಡೆಸಿದೆ.
    ವೀರಾಪುರಗ್ರಾಮದ ಮಹಮದ್ ಸಮೀರ್(೩೮) ಮತ್ತು ವಾಹನದ ಚಾಲಕ ಪರ್ವೇಜ್ ಪಾಷಾ(೪೨)ರನ್ನು ಬಂಧಿಸಲಾಗಿದೆ. ಕ್ಯಾಂಟರ್‌ನಲ್ಲಿದ್ದ ಒಟ್ಟು ೧೬೦ ಪಡಿತರ ಅಕ್ಕಿ ತುಂಬಿದ ಚೀಲ ಹಾಗು ಕೃತ್ಯಕ್ಕೆ ಬಳಸಿದ ಕ್ಯಾಂಟರ್ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ವಿಐಎಸ್‌ಎಲ್‌ನಿಂದ ಎಲ್ಲಾ ರೀತಿಯ ಸಹಕಾರ : ಬಿ.ಎಲ್ ಚಂದ್ವಾನಿ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯ ಮಾನವ ಸಂಪನ್ಮೂಲ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಶಾಲೆಗಳಿಗೆ ಅಗತ್ಯವಿರುವ ಒಟ್ಟು ಸುಮಾರು ೨ ಲಕ್ಷ ರು ಮೌಲ್ಯದ ಬೆಂಚು, ಡೆಸ್ಕ್, ಟೇಬಲ್‌ಗಳು, ಕುರ್ಚಿಗಳು ಮತ್ತು ಅಕ್ಷರದಾಸೋಹ ಯೋಜನೆಗೆ ಅಗತ್ಯವಿರುವ ಪಾತ್ರೆಗಳು ಸೇರಿದಂತೆ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾದ ಪರಿಕರಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪರವರಿಗೆ ಹಸ್ತಾಂತರಿಸಲಾಯಿತು.  
    ಭದ್ರಾವತಿ, ಡಿ. ೧೫ : ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಸುಧಾರಿಸಲು ಮತ್ತು ಗುಣಮಟ್ಟದ ಶಿಕ್ಷಣ ನೀಡಲು ಭಾರತೀಯ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿರಂತರವಾಗಿ ಶ್ರಮಿಸುತ್ತದೆ ಎಂದು ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಹೇಳಿದರು.
    ಕಾರ್ಖಾನೆಯ ಮಾನವ ಸಂಪನ್ಮೂಲ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಶಾಲೆಗಳಿಗೆ ಅಗತ್ಯವಿರುವ ಒಟ್ಟು ಸುಮಾರು ೨ ಲಕ್ಷ ರು ಮೌಲ್ಯದ ಬೆಂಚು, ಡೆಸ್ಕ್, ಟೇಬಲ್‌ಗಳು, ಕುರ್ಚಿಗಳು ಮತ್ತು ಅಕ್ಷರದಾಸೋಹ ಯೋಜನೆಗೆ ಅಗತ್ಯವಿರುವ ಪಾತ್ರೆಗಳು ಸೇರಿದಂತೆ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾದ ಪರಿಕರಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪರವರಿಗೆ ಹಸ್ತಾಂತರಿಸಲಾಯಿತು.  
    ಶಾಲೆಗಳ ಬೆಳವಣಿಗೆಗೆ ಕೈಜೋಡಿಸಿರುವ ಸೈಲ್-ವಿಐಎಸ್‌ಎಲ್ ಆಡಳಿತಕ್ಕೆ ಎ.ಕೆ ನಾಗೇಂದ್ರಪ್ಪ ಕೃತಜ್ಞತೆ ಸಲ್ಲಿಸಿದರು.  ಧನ್ಯವಾದಗಳನ್ನು  ವಿದ್ಯಾರ್ಥಿಗಳ ಮೂಲಸೌಕರ್ಯ ಸೌಲಭ್ಯಗಳ ಸುಧಾರಣೆಗೆ ಸಾಮಗ್ರಿಗಳನ್ನು ಸೂಕ್ತವಾಗಿ ಬಳಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
    ಕಾರ್ಖಾನೆಯ ಕಾರ್ಮಿಕರ ಸಂಘದ ಅಧ್ಯಕ್ಷ  ಜೆ. ಜಗದೀಶ, ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಅಜಯ್.ಡಿ ಸೋಂಕುವಾರ್, ಹಿರಿಯ ಅಧಿಕಾರಿಗಳಾದ ಮಹಾ ಪ್ರಬಂಧಕರು (ಹಣಕಾಸು ಮತ್ತು ಲೆಕ್ಕ) ಶೋಭ ಶಿವಶಂಕರನ್,  ಮಹಾಪ್ರಬಂಧಕರು (ಎಮ್.ಎಮ್ ಮತ್ತು ಸಿ.ಸಿ) ಎನ್.ಕೆ. ಶಶಿಧರ್  ಉಪಸ್ಥಿತರಿದ್ದರು. ಸಹಾಯಕ ವ್ಯವಸ್ಥಾಪಕರು (ಸಿಬ್ಬಂದಿ) ಕೆ.ಎಸ್ ಶೋಭ ನಿರೂಪಿಸಿದರು. ಮಹಾ ಪ್ರಬಂಧಕರು (ಸಿಬ್ಬಂದಿ ಮತ್ತು ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್ ವಂದಿಸಿದರು.