ಭದ್ರಾವತಿ: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬುಧವಾರ ತಾಲೂಕು ಕಚೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಉದ್ಘಾಟಿಸಿದರು. ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ದಾನಿಗಳನ್ನು ಅಭಿನಂದಿಸಲಾಯಿತು. 2023ನೇ ಸಾಲಿನ ಎಸ್.ಎಸ್. ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಪ್ರಥಮ ಭಾಷೆಯಲ್ಲಿ 125ಕ್ಕೆ 125 ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪರಿಷತ್ ತಾಲೂಕು ಅಧ್ಯಕ್ಷ ಕೋಡ್ಲುಯಜ್ಞಯ್ಯ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಎಮೆರಿಟಸ್ ಪ್ರೊಫೆಸರ್ ಡಾ. ವಿಜಯದೇವಿ, ಉದ್ಯಮಿ ಬಿ.ಕೆ ಜಗನ್ನಾಥ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷೆ ಎಂ.ಎಸ್ ಸುಧಾಮಣಿ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎಂ.ಆರ್ ರೇವಣಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಜಿ. ಸುರೇಶಯ್ಯ, ಪರಿಷತ್ ಕಾರ್ಯದರ್ಶಿಗಳಾದ ಎಚ್. ತಿಮ್ಮಪ್ಪ,ಎಂ.ಈ ಜಗದೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Wednesday, September 6, 2023
Tuesday, September 5, 2023
ಸೆ.6ರಂದು ಕರ್ನಾಟಕ ಸ್ಟಾರ್ ಸಿಂಗರ್ ಘೋಷಣೆ : ಬಿ.ಎ ಮಂಜುನಾಥ್
ಭದ್ರಾವತಿಯಲ್ಲಿ ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ವತಿಯಿಂದ ದಿವಂಗತ ಶಂಕರ್ ನಾಗ್ ಸಂಸ್ಮರಣೆ ಕಾರ್ಯಕ್ರಮದಡಿ ಆಯೋಜಿಸಲಾಗಿರುವ ಕರ್ನಾಟಕ ಸ್ಟಾರ್ ಸಿಂಗರ್-2023 ಸೀಸನ್-1 ರಾಜ್ಯಮಟ್ಟದ ಚಲನಚಿತ್ರ ಗೀತೆ ಗಾಯನ ಸ್ಪರ್ಧೆಯ ಅಂತಿಮ ಸುತ್ತಿನ ಕಾರ್ಯಕ್ರಮ ಕುರಿತು ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಬಿ.ಎ ಮಂಜುನಾಥ್ ಮಾಹಿತಿ ನೀಡಿದರು.
ಭದ್ರಾವತಿ: ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ವತಿಯಿಂದ ದಿವಂಗತ ಶಂಕರ್ ನಾಗ್ ಸಂಸ್ಮರಣೆ ಕಾರ್ಯಕ್ರಮದಡಿ ನಗರದ ಬಿ.ಎಚ್ ರಸ್ತೆ, ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಸೆ.6ರಂದು ಸಂಜೆ 4.30ಕ್ಕೆ ಆಯೋಜಿಸಲಾಗಿರುವ ಕರ್ನಾಟಕ ಸ್ಟಾರ್ ಸಿಂಗರ್-2023 ಸೀಸನ್-1 ರಾಜ್ಯಮಟ್ಟದ ಚಲನಚಿತ್ರ ಗೀತೆ ಗಾಯನ ಸ್ಪರ್ಧೆಯಲ್ಲಿ ಅಂತಿಮವಾಗಿ ಕರ್ನಾಟಕ ಸ್ಟಾರ್ ಸಿಂಗರ್ ಘೋಷಣೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಮಂಜುನಾಥ್ ತಿಳಿಸಿದರು.
ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆ.24ರಂದು ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯದ ವಿವಿಧೆಡೆಗಳಿಂದ ಸುಮಾರು 80 ಸ್ಫರ್ಧಿಗಳು ಭಾಗವಹಿಸಿದ್ದರು. ಈ ಪೈಕಿ 40 ಸ್ಪರ್ಧಿಗಳು ಆಯ್ಕೆಯಾಗಿದ್ದರು. 30ರಂದು ನಡೆದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ 16ಸ್ಪರ್ಧಿಗಳು ಅಂತಿಮ ಸುತ್ತಿನ ಪ್ರವೇಶ ಪಡೆದಿದ್ದಾರೆ ಎಂದರು.
ಸೆ.6ರಂದು ನಡೆಯಲಿರುವ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಕರ್ನಾಟಕ ಸ್ಟಾರ್ ಸಿಂಗರ್ ಘೋಷಣೆ ನಡೆಯಲಿದೆ. ಪ್ರಥಮ 25 ಸಾವಿರ ರು. ನಗದು ಮತ್ತು ಪಾರಿತೋಷಕ, ದ್ವಿತೀಯ 15 ಸಾವಿರ ರು. ನಗದು ಮತ್ತು ಪಾರಿತೋಷಕ, ತೃತೀಯ 10 ಸಾವಿರ ರು. ನಗದು ಮತ್ತು ಪಾರಿತೋಷಕ ಹಾಗು ಸಮಾಧಾನಕರ 2 ಸಾವಿರ ರು. ನಗದು ಬಹುಮಾನ ನೀಡಲಾಗುವುದು, ಈ ಸ್ಪರ್ಧೆಯಲ್ಲಿ ನಾಡಿನ ಪ್ರಸಿದ್ದ ಕಲಾವಿದರು ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ ಎಂದರು.
ಇದೆ ಸಂದರ್ಭದಲ್ಲಿ ನಿರ್ದೇಶಕ ಹರ್ಷಪ್ರಿಯ ನಿರ್ದೇಶನದ ಹೆಜ್ಜಾರು ಚಲನಚಿತ್ರದ ಟ್ರೈಲರ್ ಹಾಗು ಒಂದು ಗೀತೆಯನ್ನು ಬಿಡುಗಡೆಗೊಳಿಸಲಾಗುವುದು. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕಲಾವಿದರ ಪ್ರತಿಭಾವಂತೆ ಮಕ್ಕಳನ್ನು ಸನ್ಮಾನಿಸಲಾಗುವುದು. ಅಲ್ಲದೆ ಹಿರಿಯ ಕಲಾವಿದರಿಗೆ ಜಯಶೀಲನ್ ಪ್ರಶಸ್ತಿ ಹಾಗು ಗೀತಾಂಜಲಿ ಶ್ರೀನಿವಾಸ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಗೌರವ ಸಲಹೆಗಾರ ಬಿ.ಆರ್.ವಿಕ್ರಂ, ಉಪಾಧ್ಯಕ್ಷ ಅಂತೋಣಿ ಮಾರ್ಟಿನ್, ಪ್ರಧಾನ ಕಾರ್ಯದರ್ಶಿ ಬಿ.ಚಿದಾನಂದ, ಸಹಕಾರ್ಯದರ್ಶಿಗಳಾದ ಚರಣ್ ಕವಾಡ್, ಬಿ.ಎ ವಸಂತಕುಮಾರ್, ಖಜಾಂಚಿ ಪ್ರಶಾಂತ್, ವೈ.ಕೆ.ಹನುಮಂತಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಶಿಕ್ಷಕರ ದಿನಾಚರಣೆ : ಉತ್ತಮ ಶಿಕ್ಷಕರಿಗೆ ಪ್ರಶಸ್ತಿ, ಶೇ.100ರಷ್ಟು ಫಲಿತಾಂಶ ಪಡೆದ ಶಾಲೆಗಳಿಗೆ ಅಭಿನಂದನೆ
ಭದ್ರಾವತಿ ನಗರದ ಕೋಡಿಹಳ್ಳಿ ರಸ್ತೆ ರೈಲ್ವೆ ಮೇಲ್ಸೇತುವೆ ಸಮೀಪದಲ್ಲಿರುವ ಶ್ರೀ ದೈವಜ್ಞ ಸಭಾ ಭವನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದ ಪೂರ್ಯಾನಾಯ್ಕ ಉದ್ಘಾಟಿಸಿದರು.
ಭದ್ರಾವತಿ: ನಗರದ ಕೋಡಿಹಳ್ಳಿ ರಸ್ತೆ ರೈಲ್ವೆ ಮೇಲ್ಸೇತುವೆ ಸಮೀಪದಲ್ಲಿರುವ ಶ್ರೀ ದೈವಜ್ಞ ಸಭಾ ಭವನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದ ಪೂರ್ಯಾನಾಯ್ಕ ಉದ್ಘಾಟಿಸಿದರು.
ಇದಕ್ಕೂ ಮೊದಲು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಾಗು ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ತಾಲೂಕು ಮಟ್ಟದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ನಡೆಯಿತು. 2022-23ನೇ ಸಾಲಿನಲ್ಲಿ ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆದ ಶಾಲೆಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಎಸ್ ರಾಜೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ. ಪೃಥ್ವಿರಾಜ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ. ಬಸವರಾಜಪ್ಪ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ, ಶಿಕ್ಷಣ ಸಂಯೋಜಕರು, ಬಿ.ಆರ್.ಪಿ, ಸಿ.ಆರ್.ಪಿ ಮತ್ತು ಬಿ.ಐ.ಇ.ಆರ್.ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸುಮತಿ ಕಾರಂತ್, ಕೋಕಿಲ, ತ್ರಿವೇಣಿ, ಮಾಯಮ್ಮ ಸಂಗಡಿಗರು ಪ್ರಾರ್ಥಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸ್ವಾಗತಿಸಿದರು. ಎಂ.ಆರ್ ರೇವಣಪ್ಪ ಸಂಗಡಿಗರು ರೈತ ಗೀತೆ ಹಾಡಿದರು. ಶಿಕ್ಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
Monday, September 4, 2023
ತಾಲೂಕಿನ 5 ಶಿಕ್ಷಕರಿಗೆ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ
ಭದ್ರಾವತಿ ತಾಲೂಕಿನ ಅರಕೆರೆ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಬಬಿತ ಕುಮಾರಿ.
ಭದ್ರಾವತಿ: ತಾಲೂಕಿನ 5 ಶಿಕ್ಷಕರಿಗೆ ಈ ಬಾರಿ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದ್ದು, ಸೆ.5ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಕಿರಿಯ ಪ್ರಾಥಮಿಕ ವಿಭಾಗದಲ್ಲಿ ತಾಲೂಕಿನ ಅರಹತೊಳಲು ವಡ್ಡರಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಕೆ.ಎಂ ಶಿವಕುಮಾರ್, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ವಿಶ್ವನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಕೆ.ಎನ್ ರಂಗನಾಥ್, ಕಾಗದನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಫರೀದುನ್ನೀಸ, ಸಿದ್ಲೀಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ಎಚ್. ಡಾಕ್ಯಾನಾಯ್ಕ ಹಾಗು ಪ್ರೌಢಶಾಲೆ ವಿಭಾಗದಲ್ಲಿ ಅರಕೆರೆ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಬಬಿತ ಕುಮಾರಿ ಅವರಿಗೆ ಈ ಬಾರಿ ಪ್ರಶಸ್ತಿ ಲಭಿಸಿದೆ.
ಹಿಂದಿ ಭಾಷಾ ಶಿಕ್ಷಕಿಗೆ ಒಲಿದ ಪ್ರಶಸ್ತಿ :
ಪ್ರೌಢಶಾಲೆ ವಿಭಾಗದಲ್ಲಿ ತಾಲೂಕಿನ ಅರಕೆರೆ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಬಬಿತ ಕುಮಾರಿ ಅವರಿಗೆ ಈ ಬಾರಿ ಪ್ರಶಸ್ತಿ ಲಭಿಸಿದೆ. ಬಬಿತ ಕುಮಾರಿ ಅವರು ಹಿಂದಿ ಭಾಷಾ ಶಿಕ್ಷಕಿಯಾಗಿದ್ದಾರೆ.
ಮೂಲತಃ ಶಿವಮೊಗ್ಗದವರಾದ ಇವರು ಹೊಸನಗರ ತಾಲೂಕಿನ ಕಾರಣಗಿರಿ ಸರ್ಕಾರಿ ಪ್ರೌಢಶಾಲೆಯಲ್ಲಿ 2003ರಲ್ಲಿ ಶಿಕ್ಷಕ ವೃತ್ತಿಗೆ ಸೇರ್ಪಡೆಗೊಂಡಿದ್ದು, ಇಲ್ಲಿ ಸುಮಾರ 7 ವರ್ಷ ಕರ್ತವ್ಯ ನಿರ್ವಹಿಸಿದ್ದಾರೆ. ನಂತರ ಚಿಕ್ಕಜೇನಿ ಶಾಲೆಯಲ್ಲಿ 8 ವರ್ಷ ಹಾಗು 2019ರಿಂದ ತಾಲೂಕಿನ ಅರಕೆರೆ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಹಿಂದಿ ಭಾಷಾ ವಿಷಯದಲ್ಲಿ ಅತ್ಯುತ್ತಮ ಫಲಿತಾಂಶ ನೀಡುವುದರ ಜೊತೆಗೆ, ಇಲಾಖೆಯ ಎಲ್ಲಾ ಕೆಲಸಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡು ಎಲ್ಲಾರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಾಂಸ್ಕೃತಿಕ ಹಾಗೂ ಕ್ರೀಡೆಯಲ್ಲಿ ಮಕ್ಕಳಿಗೆ ತರಬೇತಿ ನೀಡುವುದರ ಜೊತೆಗೆ, ಇಲಾಖೆಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಯಶಸ್ಸು ಶಾಲೆಗೆ ಯಶಸ್ಸು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಅರಕೆರೆ ಪ್ರೌಢಶಾಲೆ 2019ರಿಂದ ಶೇ.100 ರಷ್ಟು ಫಲಿತಾಂಶ ಪಡೆಯುತ್ತಿದ್ದು, ಇವರ ಶ್ರಮ ಹೆಚ್ಚಿನದ್ದಾಗಿದೆ. ಇವರ 2022ರಲ್ಲಿ ಕರ್ನಾಟಕ ರಾಜ್ಯ ಹಿಂದಿ ಶಿಕ್ಷಕರ ಸಂಘದಿಂದ ನೀಡುವ ಹಿಂದಿ ಶಿಕ್ಷಕ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಒಟ್ಟು ಇವರ 20 ವರ್ಷಗಳ ಶಿಕ್ಷಕ ವೃತ್ತಿಯನ್ನು ಗುರುತಿಸಿ ಈ ಬಾರಿ ಪ್ರಶಸ್ತಿಯನ್ನು ನೀಡಲಾಗಿದೆ.
ಬಹುಮುಖ ಪ್ರತಿಭೆಯ ರಂಗನಾಥ ಕ. ನಾ. ದೇವರಹಳ್ಳಿಗೆ ಒಲಿದ ಪ್ರಶಸ್ತಿ :
ತಾಲೂಕಿನ ವಿಶ್ವನಗರ ಶಾಲೆಯ ರಂಗನಾಥ ಕೆ ಎನ್. ರವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದ್ದು, ಇವರು ಬಹುಮುಖ ಪ್ರತಿಭೆ ಶಿಕ್ಷಕರಾಗಿದ್ದಾರೆ.
ಭದ್ರಾವತಿ ತಾಲೂಕಿನ ವಿಶ್ವನಗರ ಶಾಲೆಯ ಸಹ ಶಿಕ್ಷಕ ರಂಗನಾಥ ಕೆ.ಎನ್
ಇವರು ಜಾನಪದ ಸೋಬಾನೆ ಕಲಾವಿದರಾದ ನಾಗರಾಜಪ್ಪ ಜಿ.ಕೆ ಮತ್ತು ರತ್ನಮ್ಮ ದಂಪತಿ ಪುತ್ರರಾಗಿದ್ದು, ಸಾಹಿತ್ಯ, ಹಾಡು, ಅಭಿನಯ, ಚಿತ್ರಕಲೆ, ಇತ್ಯಾದಿ ಬಹುಮುಖ ಪ್ರತಿಭೆ ಇವರದ್ದಾಗಿದೆ.
ರಂಗನಾಥ್ ಅವರು ಕ್ಲಸ್ಟರ್, ತಾಲೂಕು ಹಾಗೂ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡಿದ್ದು, ಅಲ್ಲದೆ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಕ್ಕಳನ್ನು ಗುರುತಿಸಿ, ಪ್ರೋತ್ಸಾಹ ನೀಡುವ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ.
ಆಸೆಯ ಕಂಗಳು (ಕವನ ಸಂಕಲನ- ಚಿಗುರು ಪ್ರಕಾಶನ- 2021), ಮಿಥ್ಯಾವತಾರ ( ಕವನ ಸಂಕಲನ:- ಎಸ್. ಎಲ್. ಆರ್. ಪ್ರಕಾಶನ ದೇವರಹಳ್ಳಿ- 2022) ಮತ್ತು ಕರಿಮುಗಿಲ ಗಿರಿಕಾವ್ಯ (ಕವನ ಸಂಕಲನ- ಎಸ್. ಎಲ್. ಆರ್. ಪ್ರಕಾಶನ ದೇವರಹಳ್ಳಿ. -2022) ಪುಸ್ತಕಗಳನ್ನು ಹೊರತಂದಿದ್ದಾರೆ.
ಶ್ರೀ ಮಯೂರವರ್ಮ ರಾಜ್ಯ ಪ್ರಶಸ್ತಿ (ಇಂದ್ರಪ್ರಭಾ ಸಾಂಸ್ಕೃತಿಕ ಕಲಾ ಟ್ರಸ್ಟ್ ಬೆಂಗಳೂರು.) ಶ್ರೀ ಕೇದಾರೇಶ್ವರ ಪ್ರಶಸ್ತಿ (ಶ್ರೀ ಕೇದಾರಮಠ ಚನ್ನಗಿರಿ.), ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ( ಶಿಕ್ಷಣ ಇಲಾಖೆ ನಂಜನಗೂಡು.), ಕನ್ನಡ ಗಾರುಡಿಗ ರಾಜ್ಯ ಪ್ರಶಸ್ತಿ (ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಹೊಸದುರ್ಗ) ಹಾಗು ತಾಲೂಕು ಭಗೀರಥ ಸರ್ಕಾರಿ ನೌಕರರಿಂದ ಗೌರವ ಸನ್ಮಾನ ಇವರಿಗೆ ಲಭಿಸಿವೆ.
ಸೆ.5 ಶಿಕ್ಷಕರ ದಿನಾಚರಣೆ :
ಈ ಬಾರಿ ಶಿಕ್ಷಕರ ದಿನಾಚರಣೆ ನಗರದ ಕೋಡಿಹಳ್ಳಿ ರಸ್ತೆ ರೈಲ್ವೆ ಮೇಲ್ಸೇತುವೆ ಸಮೀಪದಲ್ಲಿರುವ ಶ್ರೀ ದೈವಜ್ಞ ಸಭಾ ಭವನದಲ್ಲಿ ಸೆ.5ರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದ ಪೂರ್ಯಾನಾಯ್ಕ ಉದ್ಘಾಟಿಸುವರು. ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್ ಹಾಗು ಜಿಲ್ಲಾ ಉಸ್ತುವಾರಿ ಸಚಿವರು, ವಿಶೇಷ ಆಹ್ವಾನಿತ ಸಚಿವರು, ಜಿಲ್ಲೆಯ ಎಲ್ಲಾ ವಿಧಾನಪರಿಷತ್ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಕೋರಿದ್ದಾರೆ.
ಶಾಂತಿ-ಸೌಹಾರ್ದತೆಯಿಂದ ಗೌರಿ-ಗಣೇಶ, ಈದ್ ಮಿಲಾದ್ ಆಚರಿಸಿ : ಜಿ.ಕೆ ಮಿಥುನ್ ಕುಮಾರ್
ಶಿವಮೊಗ್ಗ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಸೋಮವಾರ ಭದ್ರಾವತಿ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗೌರಿ -ಗಣೇಶ ಹಾಗು ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಾಗರಿಕ ಶಾಂತಿಸಭೆಯ ನೇತೃತ್ವ ವಹಿಸಿ ಮಾತನಾಡಿದರು.
ಭದ್ರಾವತಿ: ಪ್ರತಿಯೊಂದು ಹಬ್ಬಕ್ಕೂ ಒಂದೊಂದು ರೀತಿಯ ಮಹತ್ವವಿರುತ್ತದೆ. ಹಬ್ಬಗಳ ಮಹತ್ವ ಅರಿತು ಎಲ್ಲರೂ ಶಾಂತಿ, ಸೌಹಾರ್ದತೆಯಿಂದ ಆಚರಣೆಗೆ ಮುಂದಾಗಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಹೇಳಿದರು.
ಅವರು ಸೋಮವಾರ ನಗರದ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗೌರಿ -ಗಣೇಶ ಹಾಗು ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಾಗರಿಕ ಶಾಂತಿಸಭೆಯ ನೇತೃತ್ವ ವಹಿಸಿ ಮಾತನಾಡಿದರು.
ಹಬ್ಬ ಹರಿದಿನಗಳನ್ನು ವಿಜೃಂಭಣೆಯಿಂದ ಆಚರಿಸುವ ಜೊತೆಗೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಜವಾಬ್ದಾರಿ ತೆಗೆದುಕೊಳ್ಳಬೇಕು. ಸಮಾಜದ ಎಲ್ಲರ ಮೇಲೂ ಕಾಳಜಿವಹಿಸಬೇಕು. ಕೆಲವರು ಮಾಡುವ ತಪ್ಪಿನಿಂದ ಎಲ್ಲರೂ ತೊಂದರೆ ಅನುಭವಿಸುವಂತಾಗಬಾರದು. ಸಣ್ಣಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಸಮಾಜದಲ್ಲಿ ಅನುಭವಿಗಳು, ಚಿಂತಕರು ತಮ್ಮ ಸಲಹೆ ಸಹಕಾರ ನೀಡಬೇಕೆಂದರು.
ಪೊಲೀಸ್ ಇಲಾಖೆ ಜನರ ರಕ್ಷಣೆಗೆ ಸದಾ ಬದ್ದವಾಗಿರುತ್ತದೆ. ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದವಿದೆ.ಒಂದು ವೇಳೆ ಸಮಸ್ಯೆಗಳು ಉಲ್ಬಣಗೊಳ್ಳುವ ಲಕ್ಷಣಗಳು ಕಂಡು ಬಂದಲ್ಲಿ ಇಲಾಖೆಗೆ ಮಾಹಿತಿ ನೀಡಿದ್ದಲ್ಲಿ ಇತ್ಯರ್ಥಪಡಿಸಲು ಮುಂದಾಗಲಿದೆ ಎಂದರು.
ವಿವಿಧ ಧರ್ಮದ, ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷಗಳ ಮುಖಂಡರು ಹಾಗು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಮಾತನಾಡಿ, ನಗರದಲ್ಲಿ ಹಲವಾರು ವರ್ಷಗಳಿಂದ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಶಾಂತಿಯುತವಾಗಿ ಹಬ್ಬ ಹರಿದಿನಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಮುಂದೆಯೂ ಸಹ ಇದೆ ರೀತಿ ಆಚರಿಸಲಾಗುವುದು. ಆದರೂ ಸಹ ಕೆಲವೊಂದು ಸಣ್ಣಪುಟ್ಟ ಘಟನೆಗಳಿಂದ ಸಮಾಜದಲ್ಲಿ ಆಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ. ಇದರಿಂದ ಬಡವರ್ಗದವರು ತೊಂದರೆ ಅನುಭವಿಸುವಂತಾಗಿದೆ. ಇವುಗಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಲು ಬದ್ಧವಾಗಿದ್ದೇವೆ ಎಂದರು.
ಸಭೆಯಲ್ಲಿ ಪ್ರಮುಖರಾದ ಹಿಂದೂ ಮಹಾಸಭಾ ಹಿಂದೂ ರಾಷ್ಟ್ರ ಸೇನೆ ಶ್ರೀ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ವಿ. ಕದಿರೇಶ್, ಅಂಜುಮಾನ್ ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷ ಮುರ್ತುಜಾಖಾನ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ, ನಗರಸಭಾ ಸದಸ್ಯ ಆರ್. ಮೋಹನ್ ಕುಮಾರ್, ಕೆ. ಮಂಜುನಾಥ್, ಮಂಗೋಟೆ ರುದ್ರೇಶ್, ಬಾಬಾಜಾನ್, ಅಮೀರ್ ಜಾನ್, ಜೆಬಿಟಿ ಬಾಬು ಸೇರಿದಂತೆ ಇನ್ನಿತರರು ಮಾತನಾಡಿದರು.
ವೇದಿಕೆಯಲ್ಲಿ ತಹಸೀಲ್ದಾರ್ ನಾಗರಾಜ್, ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್, ಪೌರಾಯುಕ್ತ ಎಚ್.ಎಂ ಮನುಕುಮಾರ್, ಪೊಲೀಸ್ ಉಪಧೀಕ್ಷಕ ಕೆ.ಆರ್ ನಾಗರಾಜ್, ವೃತ್ತ ನಿರೀಕ್ಷಕರಾದ ಗುರುರಾಜ್, ಜೆ. ಶೈಲ ಕುಮಾರ್, ಲಕ್ಷ್ಮೀಪತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Sunday, September 3, 2023
ಆದಿತ್ಯ-ಎಲ್1 ಉಪಗ್ರಹಕ್ಕೆ 10 ರು. ನೋಟು ಮೂಲಕ ಶುಭ ಹಾರೈಕೆ
ಭದ್ರಾವತಿ ನಗರದ ಹಿರಿಯ ನಾಣ್ಯ, ನೋಟು ಹಾಗು ಅಂಚೆ ಚೀಟಿ ಸಂಗ್ರಹಗಾರ ಗಣೇಶ್‌ರವರು ಆದಿತ್ಯ-ಎಲ್1 ಉಪಗ್ರಹ ಉಡಾವಣೆ ಯಶಸ್ವಿಯಾಗಲೆಂದು ನೋಟು ಮೂಲಕ ಶುಭ ಹಾರೈಸಿದ್ದಾರೆ.
ಭದ್ರಾವತಿ: ನಗರದ ಹಿರಿಯ ನಾಣ್ಯ, ನೋಟು ಹಾಗು ಅಂಚೆ ಚೀಟಿ ಸಂಗ್ರಹಗಾರ ಗಣೇಶ್‌ರವರು ಆದಿತ್ಯ-ಎಲ್1 ಉಪಗ್ರಹ ಉಡಾವಣೆ ಯಶಸ್ವಿಯಾಗಲೆಂದು ನೋಟು ಮೂಲಕ ಶುಭ ಹಾರೈಸಿದ್ದಾರೆ.
ಆದಿತ್ಯ-ಎಲ್1 ಉಪಗ್ರಹದ ಮೂಲಕ ಮೊಟ್ಟಮೊದಲ ಬಾರಿಗೆ ಇಸ್ರೋ ಸೂರ್ಯನ ಕುರಿತು ಅಧ್ಯಾಯನ ನಡೆಸಲು ಮುಂದಾಗಿದ್ದು, ಇದೊಂದು ಐತಿಹಾಸಿಕ ಸಾಧನೆಯಾಗಿದೆ. ಸೆ.2ರಂದು ಆದಿತ್ಯ-ಎಲ್1 ಭೂಮಿಯಿಂದ ಹೊರಡಿದ್ದು, ಇಸ್ರೋ ಕೈಗೊಂಡಿರುವ ಈ ಕಾರ್ಯ ಯಶಸ್ವಿಯಾಗಲೆಂದು ಗಣೇಶ್ ರವರು ಐತಿಹಾಸಿಕ ಸಾಧನೆಯ ದಿನಾಂಕ ಹೊಂದಿರುವ10 ರು. ಮುಖ ಬೆಲೆಯ ನೋಟು ಮೂಲಕ ಶುಭ ಹಾರೈಸಿ ದೇವರಲ್ಲಿ ಪ್ರಾರ್ಥಿಸಿದ್ದಾರೆ.
ನಾಣ್ಯ, ನೋಟು ಹಾಗು ಅಂಚೆ ಚೀಟಿ ಸಂಗ್ರಹಗಾರ ಗಣೇಶ್
ರಾಜಕಾರಣಿಗಳು, ಮಠಾಧೀಶರು, ಚಲನಚಿತ್ರ ನಟರು, ಸಾಹಿತಿಗಳು, ಕವಿ, ಕ್ರೀಡಾಪಟು ಸೇರಿದಂತೆ ಗಣ್ಯ ವ್ಯಕ್ತಿಗಳಿಗೆ ಸಭೆ ಸಮಾರಂಭಗಳಲ್ಲಿ ಅವರ ಜನ್ಮದಿನಾಂಕ ಹೊಂದಿರುವ ನೋಟು ಉಡುಗೊರೆಯಾಗಿ ನೀಡುವ ಮೂಲಕ ಶುಭ ಹಾರೈಸುವ ಹಾಗು ನಿಧನರಾದ ಸಂದರ್ಭದಲ್ಲಿ ಮರಣ ದಿನಾಂಕ ಹೊಂದಿರುವ ನೋಟಿನ ಮೂಲಕ ಸಂತಾಪ ಸೂಚಿಸುವ ಹವ್ಯಾಸ ಬೆಳೆಸಿಕೊಂಡು ಬಂದಿದ್ದಾರೆ.
ವಿಜೃಂಭಣೆಯಿಂದ ಜರುಗಿದ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 352ನೇ ಆರಾಧನಾ ಮಹೋತ್ಸವ
ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಯವರ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಯರ ಆರಾಧನಾ ಮಹೋತ್ಸವ ಅಂಗವಾಗಿ ಶನಿವಾರ ಗುರು ಸಾರ್ವಭೌಮರ ರಥೋತ್ಸವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಆವರಣದಿಂದ ಆರಂಭಗೊಂಡು ಮಠದವರೆಗೂ ನಡೆಯಿತು.
ಭದ್ರಾವತಿ: ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಯವರ ಮಠದಲ್ಲಿ 3 ದಿನಗಳ ಕಾಲ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 352ನೇ ಮಹೋತ್ಸವ ಮತ್ತು ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಭಕ್ತರ ಮನೆಗಳಲ್ಲಿ 2 ದಿನಗಳ ಕಾಲ ಹಾಗು ಕೊನೆಯ ದಿನ ಮಠದಲ್ಲಿ ಗುರು ಸಾರ್ವಭೌಮರ ಪಾದಪೂಜೆ ನೆರವೇರಿತು. ಪ್ರತಿ ದಿನ ಬೆಳಿಗ್ಗೆ ೬ ಗಂಟೆಗೆ ಸುಪ್ರಭಾತ, ೭ಕ್ಕೆ ಪಂಚಾಮೃತ ಅಭಿಷೇಕ ಹಾಗು ಮಧ್ಯಾಹ್ನ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕೈಗೊಳ್ಳಲಾಗಿತ್ತು.
ಆರಾಧನಾ ಮಹೋತ್ಸವದ ಕೊನೆಯ ದಿನ ಶನಿವಾರ ಗುರು ಸಾರ್ವಭೌಮರ ರಥೋತ್ಸವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಆವರಣದಿಂದ ಆರಂಭಗೊಂಡು ಮಠದವರೆಗೂ ನಡೆಯಿತು. ಗುರು ಸಾರ್ವಭೌಮರ ಬೃಂದಾವನಕ್ಕೆ ಫಲಪುಷ್ಪಗಳಿಂದ ವಿಶೇಷವಾಗಿ ಆಲಂಕಾರ ಕೈಗೊಳ್ಳಲಾಗಿತ್ತು. ಮಧ್ಯಾಹ್ನ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಜರುಗಿತು.
ಪ್ರಮುಖರಾದ ಗೋಪಾಲಕೃಷ್ಣ ಆಚಾರ್, ಶ್ರೀನಿವಾಸ ಆಚಾರ್, ಮಾಧುರಾವ್, ಶ್ರೀ ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರಳಿಧರ ತಂತ್ರಿ, ಉಪಾಧ್ಯಕ್ಷೆ ಸುಮಾ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಜಿ. ರಮಾಕಾಂತ್ ಹಾಗೂ ಖಜಾಂಚಿ ನಿರಂಜನ ಆಚಾರ್, ಶುಭ ಗುರುರಾಜ್, ಸುಪ್ರಿತಾ ತಂತ್ರಿ, ವಂದನ ಲಕ್ಷ್ಮಿ, ರವೀಂದ್ರ, ಶ್ರೀನಿವಾಸ್, ಪ್ರಮೋದ್ ಕುಮಾರ್, ಪವನ್ ಕುಮಾರ್ ಉಡುಪ, ಜಯತೀರ್ಥ, ಸುಧೀಂದ್ರ, ಬಾಳೆ ಎಲೆ ಗೋಪಾಲಕೃಷ್ಣ ಹಾಗು ವಿವಿಧ ಭಜರ ಮಂಡಳಿಗಳ ಪ್ರಮುಖರು, ಸದಸ್ಯರು, ಭಕ್ತಾಧಿಗಳು ಪಾಲ್ಗೊಂಡಿದ್ದರು.
Subscribe to:
Posts (Atom)