![](https://blogger.googleusercontent.com/img/a/AVvXsEjOwGnrWLpO_stsGrbeEt5P7hpF9RTmY-wk_T5cW0RpuWLxVCuEBgyww33SM8tVOA030UMgKeS8liC10ISwhNOY2ido-7KX3XDYO8kBLM80mzYRpZDn_WH9NvfoQ5TS71M93umSz9B-iEVdIRzyrajC-uyv8UohBzM7Y5EVJrgTsyyvkFzP-Bijj6_qWODN=w228-h400-rw)
ಭದ್ರಾವತಿ ತಾಲೂಕಿನ ಅರಕೆರೆ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಬಬಿತ ಕುಮಾರಿ.
ಭದ್ರಾವತಿ: ತಾಲೂಕಿನ 5 ಶಿಕ್ಷಕರಿಗೆ ಈ ಬಾರಿ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದ್ದು, ಸೆ.5ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಕಿರಿಯ ಪ್ರಾಥಮಿಕ ವಿಭಾಗದಲ್ಲಿ ತಾಲೂಕಿನ ಅರಹತೊಳಲು ವಡ್ಡರಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಕೆ.ಎಂ ಶಿವಕುಮಾರ್, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ವಿಶ್ವನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಕೆ.ಎನ್ ರಂಗನಾಥ್, ಕಾಗದನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಫರೀದುನ್ನೀಸ, ಸಿದ್ಲೀಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ಎಚ್. ಡಾಕ್ಯಾನಾಯ್ಕ ಹಾಗು ಪ್ರೌಢಶಾಲೆ ವಿಭಾಗದಲ್ಲಿ ಅರಕೆರೆ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಬಬಿತ ಕುಮಾರಿ ಅವರಿಗೆ ಈ ಬಾರಿ ಪ್ರಶಸ್ತಿ ಲಭಿಸಿದೆ.
ಹಿಂದಿ ಭಾಷಾ ಶಿಕ್ಷಕಿಗೆ ಒಲಿದ ಪ್ರಶಸ್ತಿ :
ಪ್ರೌಢಶಾಲೆ ವಿಭಾಗದಲ್ಲಿ ತಾಲೂಕಿನ ಅರಕೆರೆ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಬಬಿತ ಕುಮಾರಿ ಅವರಿಗೆ ಈ ಬಾರಿ ಪ್ರಶಸ್ತಿ ಲಭಿಸಿದೆ. ಬಬಿತ ಕುಮಾರಿ ಅವರು ಹಿಂದಿ ಭಾಷಾ ಶಿಕ್ಷಕಿಯಾಗಿದ್ದಾರೆ.
ಮೂಲತಃ ಶಿವಮೊಗ್ಗದವರಾದ ಇವರು ಹೊಸನಗರ ತಾಲೂಕಿನ ಕಾರಣಗಿರಿ ಸರ್ಕಾರಿ ಪ್ರೌಢಶಾಲೆಯಲ್ಲಿ 2003ರಲ್ಲಿ ಶಿಕ್ಷಕ ವೃತ್ತಿಗೆ ಸೇರ್ಪಡೆಗೊಂಡಿದ್ದು, ಇಲ್ಲಿ ಸುಮಾರ 7 ವರ್ಷ ಕರ್ತವ್ಯ ನಿರ್ವಹಿಸಿದ್ದಾರೆ. ನಂತರ ಚಿಕ್ಕಜೇನಿ ಶಾಲೆಯಲ್ಲಿ 8 ವರ್ಷ ಹಾಗು 2019ರಿಂದ ತಾಲೂಕಿನ ಅರಕೆರೆ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಹಿಂದಿ ಭಾಷಾ ವಿಷಯದಲ್ಲಿ ಅತ್ಯುತ್ತಮ ಫಲಿತಾಂಶ ನೀಡುವುದರ ಜೊತೆಗೆ, ಇಲಾಖೆಯ ಎಲ್ಲಾ ಕೆಲಸಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡು ಎಲ್ಲಾರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಾಂಸ್ಕೃತಿಕ ಹಾಗೂ ಕ್ರೀಡೆಯಲ್ಲಿ ಮಕ್ಕಳಿಗೆ ತರಬೇತಿ ನೀಡುವುದರ ಜೊತೆಗೆ, ಇಲಾಖೆಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಯಶಸ್ಸು ಶಾಲೆಗೆ ಯಶಸ್ಸು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಅರಕೆರೆ ಪ್ರೌಢಶಾಲೆ 2019ರಿಂದ ಶೇ.100 ರಷ್ಟು ಫಲಿತಾಂಶ ಪಡೆಯುತ್ತಿದ್ದು, ಇವರ ಶ್ರಮ ಹೆಚ್ಚಿನದ್ದಾಗಿದೆ. ಇವರ 2022ರಲ್ಲಿ ಕರ್ನಾಟಕ ರಾಜ್ಯ ಹಿಂದಿ ಶಿಕ್ಷಕರ ಸಂಘದಿಂದ ನೀಡುವ ಹಿಂದಿ ಶಿಕ್ಷಕ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಒಟ್ಟು ಇವರ 20 ವರ್ಷಗಳ ಶಿಕ್ಷಕ ವೃತ್ತಿಯನ್ನು ಗುರುತಿಸಿ ಈ ಬಾರಿ ಪ್ರಶಸ್ತಿಯನ್ನು ನೀಡಲಾಗಿದೆ.
ಬಹುಮುಖ ಪ್ರತಿಭೆಯ ರಂಗನಾಥ ಕ. ನಾ. ದೇವರಹಳ್ಳಿಗೆ ಒಲಿದ ಪ್ರಶಸ್ತಿ :
ತಾಲೂಕಿನ ವಿಶ್ವನಗರ ಶಾಲೆಯ ರಂಗನಾಥ ಕೆ ಎನ್. ರವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದ್ದು, ಇವರು ಬಹುಮುಖ ಪ್ರತಿಭೆ ಶಿಕ್ಷಕರಾಗಿದ್ದಾರೆ.
ಭದ್ರಾವತಿ ತಾಲೂಕಿನ ವಿಶ್ವನಗರ ಶಾಲೆಯ ಸಹ ಶಿಕ್ಷಕ ರಂಗನಾಥ ಕೆ.ಎನ್
ಇವರು ಜಾನಪದ ಸೋಬಾನೆ ಕಲಾವಿದರಾದ ನಾಗರಾಜಪ್ಪ ಜಿ.ಕೆ ಮತ್ತು ರತ್ನಮ್ಮ ದಂಪತಿ ಪುತ್ರರಾಗಿದ್ದು, ಸಾಹಿತ್ಯ, ಹಾಡು, ಅಭಿನಯ, ಚಿತ್ರಕಲೆ, ಇತ್ಯಾದಿ ಬಹುಮುಖ ಪ್ರತಿಭೆ ಇವರದ್ದಾಗಿದೆ.
ರಂಗನಾಥ್ ಅವರು ಕ್ಲಸ್ಟರ್, ತಾಲೂಕು ಹಾಗೂ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡಿದ್ದು, ಅಲ್ಲದೆ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಕ್ಕಳನ್ನು ಗುರುತಿಸಿ, ಪ್ರೋತ್ಸಾಹ ನೀಡುವ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ.
ಆಸೆಯ ಕಂಗಳು (ಕವನ ಸಂಕಲನ- ಚಿಗುರು ಪ್ರಕಾಶನ- 2021), ಮಿಥ್ಯಾವತಾರ ( ಕವನ ಸಂಕಲನ:- ಎಸ್. ಎಲ್. ಆರ್. ಪ್ರಕಾಶನ ದೇವರಹಳ್ಳಿ- 2022) ಮತ್ತು ಕರಿಮುಗಿಲ ಗಿರಿಕಾವ್ಯ (ಕವನ ಸಂಕಲನ- ಎಸ್. ಎಲ್. ಆರ್. ಪ್ರಕಾಶನ ದೇವರಹಳ್ಳಿ. -2022) ಪುಸ್ತಕಗಳನ್ನು ಹೊರತಂದಿದ್ದಾರೆ.
ಶ್ರೀ ಮಯೂರವರ್ಮ ರಾಜ್ಯ ಪ್ರಶಸ್ತಿ (ಇಂದ್ರಪ್ರಭಾ ಸಾಂಸ್ಕೃತಿಕ ಕಲಾ ಟ್ರಸ್ಟ್ ಬೆಂಗಳೂರು.) ಶ್ರೀ ಕೇದಾರೇಶ್ವರ ಪ್ರಶಸ್ತಿ (ಶ್ರೀ ಕೇದಾರಮಠ ಚನ್ನಗಿರಿ.), ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ( ಶಿಕ್ಷಣ ಇಲಾಖೆ ನಂಜನಗೂಡು.), ಕನ್ನಡ ಗಾರುಡಿಗ ರಾಜ್ಯ ಪ್ರಶಸ್ತಿ (ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಹೊಸದುರ್ಗ) ಹಾಗು ತಾಲೂಕು ಭಗೀರಥ ಸರ್ಕಾರಿ ನೌಕರರಿಂದ ಗೌರವ ಸನ್ಮಾನ ಇವರಿಗೆ ಲಭಿಸಿವೆ.
ಸೆ.5 ಶಿಕ್ಷಕರ ದಿನಾಚರಣೆ :
ಈ ಬಾರಿ ಶಿಕ್ಷಕರ ದಿನಾಚರಣೆ ನಗರದ ಕೋಡಿಹಳ್ಳಿ ರಸ್ತೆ ರೈಲ್ವೆ ಮೇಲ್ಸೇತುವೆ ಸಮೀಪದಲ್ಲಿರುವ ಶ್ರೀ ದೈವಜ್ಞ ಸಭಾ ಭವನದಲ್ಲಿ ಸೆ.5ರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದ ಪೂರ್ಯಾನಾಯ್ಕ ಉದ್ಘಾಟಿಸುವರು. ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್ ಹಾಗು ಜಿಲ್ಲಾ ಉಸ್ತುವಾರಿ ಸಚಿವರು, ವಿಶೇಷ ಆಹ್ವಾನಿತ ಸಚಿವರು, ಜಿಲ್ಲೆಯ ಎಲ್ಲಾ ವಿಧಾನಪರಿಷತ್ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಕೋರಿದ್ದಾರೆ.