Wednesday, October 11, 2023

ಶತಾಯುಷಿ ಲಕ್ಷ್ಮಮ್ಮ ನಿಧನ

ಲಕ್ಷ್ಮಮ್ಮ
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಜನ್ನಾಪುರ ನಿವಾಸಿ, ಶತಾಯುಷಿ ಲಕ್ಷ್ಮಮ್ಮ ಹೃದಯಾಘಾತದಿಂದ ಬುಧವಾರ ನಿಧನ ಹೊಂದಿದರು.
    ೪ ಗಂಡು, ೩ ಹೆಣ್ಣು ಮಕ್ಕಳು ಹಾಗು ಮೊಮ್ಮಕ್ಕಳಿದ್ದಾರೆ. ಇವರ ಅಂತ್ಯಕ್ರಿಯೆ ಬೈಪಾಸ್ ರಸ್ತೆ, ಮಿಲ್ಟ್ರಿಕ್ಯಾಂಪ್ ಸಮೀಪದ ಹಿಂದೂ ರುದ್ರಭೂಮಿಯಲ್ಲಿ ಗುರುವಾರ ನಡೆಯಲಿದೆ. ಇವರ ನಿಧನಕ್ಕೆ ತಾಲೂಕು ಕುರುಬರ ಸಂಘದ ಮಾಜಿ ನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಕುರುಬ ಸಮಾಜ ಮುಖಂಡರು, ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.

ಮಹಿಳಾ ದಸರಾ : ಅ.೧೬ರಂದು ಬೆಂಕಿ ರಹಿತ ಅಡುಗೆ ತಯಾರಿಕೆ ಸ್ಪರ್ಧೆ


    ಭದ್ರಾವತಿ: ಈ ಬಾರಿ ನಗರಸಭೆ ವತಿಯಿಂದ ಸರಳ ದಸರಾ ಆಚರಣೆ ನಡೆಯುತ್ತಿದ್ದು, ಈ ನಡುವೆ ಮಹಿಳಾ ದಸರಾ ಆಚರಣೆಗೆ ಅವಕಾಶ ಮಾಡಿಕೊಡಲಾಗಿದೆ.
    ಮಹಿಳಾ ದಸರಾ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿ ಸಹ ಆಹಾರ ದಸರಾ ಹಮ್ಮಿಕೊಳ್ಳಲಾಗಿದ್ದು, ಬೆಂಕಿ ರಹಿತ ಅಡುಗೆ ತಯಾರಿಕೆ ಸ್ಪರ್ಧೆ ಅ. ೧೬ರಂದು ಮಧ್ಯಾಹ್ನ ೩ ಗಂಟೆಗೆ ನ್ಯೂಟೌನ್ ಬಂಟರ ಭವನದಲ್ಲಿ ನಡೆಯಲಿದೆ.
    ಅ.೨೦ರಂದು ಸಂಜೆ ೬ ಗಂಟೆಗೆ ಕನಕಮಂಟಪ ಮೈದಾನದಲ್ಲಿ ಮಹಿಳಾ ದಸರಾ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಅಲ್ಲದೆ ಕ್ರೀಡಾಕೂಟದ ಸಮಾರೋಪ ಸಹ ನಡೆಯಲಿದೆ.

ಅ.೧೭ರಿಂದ ೩ ದಿನ ದಸರಾ ಕ್ರೀಡಾಕೂಟ


    ಭದ್ರಾವತಿ: ನಾಡಹಬ್ಬ ದಸರಾ ಅಂಗವಾಗಿ ನಗರಸಭೆ ವತಿಯಿಂದ ಅ.೧೭ ರಿಂದ ೧೯ರವರೆಗೆ ೩ ದಿನಗಳ ವರೆಗೆ ದಸರಾ ಕ್ರೀಡಾಕೂಟ ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
    ಪುರುಷರಿಗೆ ಕ್ರಿಕೆಟ್, ಕಬ್ಬಡಿ, ಕುಸ್ತಿ, ಹಗ್ಗ-ಜಗ್ಗಾಟ ಮತ್ತು ಮಹಿಳೆಯರಿಗೆ ಹಗ್ಗ-ಜಗ್ಗಾಟ, ಗುಂಡು ಎಸೆತ, ಟೈರ್ & ಸ್ಟಿಕ್ ಮತ್ತು ಲೆಮೆನ್ ಇನ್ ಸ್ಪೂನ್ ಸ್ಪರ್ಧೆಗಳು ನಡೆಯಲಿವೆ.
    ಅ.೧೭ರಂದು ಬೆಳಿಗ್ಗೆ ೯.೩೦ಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಕ್ರೀಡಾಕೂಟ ಉದ್ಘಾಟಿಸಲಿದ್ದು, ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಚನ್ನಪ್ಪ, ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿರುವರು.
    ಕ್ರೀಡಾಕೂಟದಲ್ಲಿ ಭಾಗವಹಿಸಲಿಚ್ಛಿಸುವವರು, ನೋಂದಾಯಿತ ಸಂಘ-ಸಂಸ್ಥೆಗಳು ಅ.೧೩ರ ಸಂಜೆ ೫ ಗಂಟೆಯೊಳಗೆ ಡಿ.ಎಸ್ ಹೇಮಂತಕುಮಾರ್, ಮೊ: ೯೪೮೧೯೭೦೨೬೫ ಅಥವಾ ಎಂ.ಎಸ್ ಬಸವರಾಜು, ಮೊ: ೭೭೬೦೦೫೭೭೧೬೬ ಅವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಬಹುದಾಗಿದೆ ಎಂದು ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಚನ್ನಪ್ಪ, ಕಾರ್ಯದರ್ಶಿ ಎಂ. ಸುವಾಸಿನಿ ಕೋರಿದ್ದಾರೆ. 

ಗಮನ ಸೆಳೆಯುತ್ತಿದೆ ಶಿವನ ಹೆಗಲ ಮೇಲೆ ಕುಳಿತ ವಿನಾಯಕ ಮೂರ್ತಿ

ಭದ್ರಾವತಿ ನಗರಸಭೆ ವ್ಯಾಪ್ತಿಯ ಉಜ್ಜನಿಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ, ಟ್ಯಾಂಕ್ ಸರ್ಕಲ್‌ನಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣಪತಿ ಮೂರ್ತಿ ಭಕ್ತರ ಗಮನ ಸೆಳೆಯುತ್ತಿದೆ.
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಉಜ್ಜನಿಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ, ಟ್ಯಾಂಕ್ ಸರ್ಕಲ್‌ನಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣಪತಿ ಮೂರ್ತಿ ಭಕ್ತರ ಗಮನ ಸೆಳೆಯುತ್ತಿದೆ.
    ಯುದ್ಧಕಾಂಡ ಯುವಕ ಸಂಘದ ವತಿಯಿಂದ ೩೫ನೇ ವರ್ಷದ ವಿನಾಯಕ ಚತುರ್ಥಿ ಆಚರಣೆ ಅಂಗವಾಗಿ ಜಗದೊಡೆಯ, ನೀಲಕಂಠ ಶಿವನ ಹೆಗಲ ಮೇಲೆ ಕುಳಿತ ವಿಘ್ನನಿವಾರಕ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಗಣಪತಿ ಮೂರ್ತಿ ಭಕ್ತರ ಗಮನ ಸೆಳೆಯುತ್ತಿದ್ದು, ಪ್ರತಿ ದಿನ ವಿವಿಧ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.

ದಾಸರಕಲ್ಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮನೆಗಳ ನಿರ್ಮಾಣದಲ್ಲಿ ಅಕ್ರಮ

ಪಿಡಿಓ ಅಮಾನುತುಗೊಳಿಸಲು ಆಗ್ರಹಿಸಿ ಡಿಎಸ್‌ಎಸ್ ಪ್ರತಿಭಟನೆ

ಮಳೆಯಿಂದ ಹಾನಿಗೊಳಗಾದ ಮನೆಗಳ ನಿರ್ಮಾಣದಲ್ಲಿ ಮನೆಗಳನ್ನು ಕ್ರಮಬದ್ಧವಾಗಿ ನಿರ್ಮಿಸದೆ ಫಲಾನುಭವಿಗಳೊಂದಿಗೆ ಶಾಮೀಲಾಗಿ ಫೋರ್ಜರಿ ಜಿಪಿಎಸ್ ಮಾಡಿ ಬಿಲ್ ಮಾಡಿಸಿ ಅಕ್ರಮವೆಸಗಿರುವ ಭದ್ರಾವತಿ ತಾಲೂಕಿನ ದಾಸರಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಓ) ಅಮಾನತುಗೊಳಿಸುವಂತೆ ಹಾಗು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ  ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ವತಿಯಿಂದ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ: ಮಳೆಯಿಂದ ಹಾನಿಗೊಳಗಾದ ಮನೆಗಳ ನಿರ್ಮಾಣದಲ್ಲಿ ಮನೆಗಳನ್ನು ಕ್ರಮಬದ್ಧವಾಗಿ ನಿರ್ಮಿಸದೆ ಫಲಾನುಭವಿಗಳೊಂದಿಗೆ ಶಾಮೀಲಾಗಿ ಫೋರ್ಜರಿ ಜಿಪಿಎಸ್ ಮಾಡಿ ಬಿಲ್ ಮಾಡಿಸಿ ಅಕ್ರಮವೆಸಗಿರುವ ತಾಲೂಕಿನ ದಾಸರಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಓ) ಅಮಾನತುಗೊಳಿಸುವಂತೆ ಹಾಗು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ವತಿಯಿಂದ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
    ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೨೦೧೯-೨೦ ರಿಂದ ೨೦೨೨-೨೩ನೇ ಸಾಲಿನವರೆಗೆ ಮಳೆ ಹಾನಿಯಿಂದ ಒಟ್ಟು ೬೨ ಮನೆಗಳು ಹಾನಿಗೊಳಗಾಗಿವೆ ಎಂದು ಸರ್ಕಾರಕ್ಕೆ ವರದಿ ನೀಡಿ ಅನುದಾನ ಪಡೆಯಲಾಗಿದೆ. ಒಂದು ಗೋಡೆ ಬಿದ್ದ ಮನೆಗೂ ಬಿ೨ ವರದಿ ನೀಡಿ ೫ ಲಕ್ಷ ಅನುದಾನ ಮಂಜೂರಾತಿ ಮಾಡಿಸಲಾಗಿದ್ದು, ಫಲಾನುಭವಿಗಳ ಜೊತೆ ಶಾಮೀಲಾಗಿ ಫೋರ್ಜರಿ ಜಿಪಿಎಸ್ ಮಾಡಿಸಿ ನಿಯಮಾನುಸಾರ ಮನೆಗಳನ್ನು ನಿರ್ಮಿಸದೇ ಬಿಲ್ ಪಾಸ್ ಮಾಡಿಸಲಾಗಿದೆ ಎಂದು ಆರೋಪಿಸಲಾಯಿತು.
    ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸರ್ಕಾರಕ್ಕೆ ವಂಚಿಸಿದ್ದು, ಕರ್ತವ್ಯ ಲೋಪ ಎಸಗಿದ್ದಾರೆ. ಈ ಹಿನ್ನಲೆಯಲ್ಲಿ ಇವರನ್ನು ತಕ್ಷಣ ಕರ್ತವ್ಯದಿಂದ ಅಮಾನತುಗೊಳಿಸಬೇಕು. ೬೨ ಮನೆಗಳ ಸಂಪೂರ್ಣ ತನಿಖೆ ನಡೆಸಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಆಗಸನಹಳ್ಳಿ, ಎಮ್ಮೆಹಟ್ಟಿ, ಅರದೊಟ್ಲು ಗ್ರಾಮಗಳಲ್ಲಿರುವ ಸ್ಮಶಾನ ಭೂಮಿಯಲ್ಲಿ ಮೃತದೇಹ ಸುಡಲು ಬರ್ನಿಂಗ್ ಶೆಡ್ ಹಾಗು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಲಾಯಿತು.
    ಅರದೊಟ್ಲು ಗ್ರಾಮದ ಅಂಗನವಾಡಿ ಕೇಂದ್ರಗಳ ಕಿಟಿಕಿ ಹಾಗು ಬಾಗಿಲುಗಳನ್ನು ದುರಸ್ತಿಪಡಿಸಿ ಸುಣ್ಣ ಬಣ್ಣ ಮಾಡಿಸುವುದು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ೩ ಗ್ರಾಮಗಳಲ್ಲಿ ಎಸ್.ಸಿ/ಎಸ್.ಟಿ ಕುಟುಂಬಗಳಿಗೆ ಶೌಚಾಲಯ ನಿರ್ಮಿಸುವುದು. ರಾಷ್ಟ್ರೀಯ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಒಂದು ಕುಟುಂಬಕ್ಕೆ ೧೫೦ ದಿನ ಕೆಲಸ ನೀಡುವಂತೆ ಒತ್ತಾಯಿಸಲಾಯಿತು.
    ಪ್ರಗತಿಪರ ಸಂಘಟನೆಗಳ ಮುಖಂಡ ಪ್ರಜಾಪ್ರತಿನಿಧಿ ಸುರೇಶ್, ಡಿಎಸ್‌ಎಸ್ ಶಿವಮೊಗ್ಗ ಗ್ರಾಮಾಂತರ ಪ್ರಧಾನ ಸಂಚಾಲಕ ಟಿ. ಹನುಮಂತಪ್ಪ, ಸಂಘಟನಾ ಸಂಚಾಲಕ ಬಿ. ನವೀನ್‌ಕುಮಾರ್ ಅರದೊಟ್ಲು, ವಸಂತ ಕಲ್ಲಜ್ಜನಹಾಳ್, ರವಿಕುಮಾರ್ ಅರಕೆರೆ, ಮಲ್ಲೇಶ್ ಕೆರೆಬೀರನಹಳ್ಳಿ, ಮೋಹನ್ ನಿಂಬೆಗುಂದಿ, ದೇವರಾಜ ಬೊಮ್ಮನಕಟ್ಟೆ, ಹರೀಶ್ ಕಲ್ಲಿಹಾಳ್ ಮತ್ತು ಇಮ್ರಾನ್ ಬಾಷಾ ಕಲ್ಲಿಹಾಳ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Tuesday, October 10, 2023

೧೫೫ನೇ ಗಾಂಧಿ ಜಯಂತಿ ಸಂಭ್ರಮಾಚರಣೆ : ಜಾಥ, ಅಭಿನಂದನೆ, ಆರ್ಥಿಕ ನೆರವು ವಿತರಣೆ

ಭದ್ರಾವತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ವತಿಯಿಂದ ೧೫೫ನೇ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾಥ, ಅಭಿನಂದನೆ, ಆರ್ಥಿಕ ನೆರವು ವಿತರಣೆ ಕಾರ್ಯಕ್ರಮ ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಎಂ. ಪಾಲಾಕ್ಷಪ್ಪ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ವತಿಯಿಂದ ೧೫೫ನೇ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಜಾಥ ನಡೆಯಿತು.
    ಜಾಥ ಹಳೇನಗರದ ಕನಕಮಂಟಪ ಮೈದಾನದಿಂದ ಆರಂಭಗೊಂಡಿತು. ಪೊಲೀಸ್ ನಿರೀಕ್ಷಕ ಜಿ. ಶ್ರೀಶೈಲ ಕುಮಾರ್ ಹಸಿರು ಪತಾಕೆ ಹಾರಿಸಿ ಚಾಲನೆ ನೀಡಿದರು. ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದವರೆಗೂ ಜಾಥ ನಡೆಯಿತು.
    ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನೆ, ವಿಕಲಚೇತನರಿಗೆ ವ್ಹೀಲ್‌ಚೇರ್ ಹಾಗು ಆರ್ಥಿಕ ನೆರವು ವಿತರಣೆ ನಡೆಯಿತು. ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಎಂ. ಪಾಲಾಕ್ಷಪ್ಪ ಅಧ್ಯಕ್ಷತೆ ವಹಿಸಿದ್ದರು.
.    ಕಾರ್ಯಕ್ರಮದಲ್ಲಿ  ಜಿಲ್ಲಾ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಜಿ. ಆನಂದಕುಮಾರ್,  ಗಾಂದಿನಗರದ ವೇಳಾಂಗಣಿ ಆರೋಗ್ಯ ಮಾತೆ ಪುಣ್ಯ ಕ್ಷೇತ್ರದ ಧರ್ಮಗುರು ಫಾದರ್ ಸ್ಟೀವನ್ ಡೇಸಾ, ಶಿವಮೊಗ್ಗ ಮಸೀದಿ ಧರ್ಮಗುರು ಸಾಹುಲ್ ಹಮೀದ್, ಹೊಸಮನೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಸಂತೋಷ್ ಭಟ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಆರ್. ಕರುಣಾ ಮೂರ್ತಿ,  ಜಯರಾಂ ಗೊಂದಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಯೋಜನಾಧಿಕಾರಿಗಳಾದ ಮಾಧವ್, ಪ್ರಕಾಶ್, ಪಾರ್ವತಮ್ಮ, ಜಗದೀಶ್, ಮೋಹನ್ ಕುಮಾರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಿ.ಎಲ್ ಸುರಭಿ ಚೆಸ್ ಪಂದ್ಯಾವಳಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಬಿ.ಎಲ್ ಸುರಭಿ
    ಭದ್ರಾವತಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಆಂಗ್ಲ ವಿಭಾಗದ ೯ನೇ ತರಗತಿ ವಿದ್ಯಾರ್ಥಿನಿ ಬಿ.ಎಲ್ ಸುರಭಿ ಚೆಸ್ ಪಂದ್ಯಾವಳಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
    ಶಿಕಾರಿಪುರದಲ್ಲಿ ನಡೆದ ಜಿಲ್ಲಾಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರನ್ನು ವಿದ್ಯಾಸಂಸ್ಥೆ ಅಧ್ಯಕ್ಷ ಬಿ. ಸಿದ್ದಬಸಪ್ಪ, ಕಾರ್ಯದರ್ಶಿ, ಆಡಳಿತಾಧಿಕಾರಿ, ಆಡಳಿತ ಮಂಡಳಿಯವರು, ದೈಹಿಕ ಶಿಕ್ಷಣ ನಿರ್ದೇಶಕರು, ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.