ಭದ್ರಾವತಿ ವಿಐಎಸ್‌ಎಲ್ ಆಸತ್ರೆ, ನಾರಾಯಣ ಆಸ್ಪತ್ರೆ ಹಾಗೂ ಬೆಂಗಳೂರಿನ ಮಜುಂದಾರ್ ಷಾ ಕ್ಯಾನ್ಸರ್ ಸಂಸ್ಥೆ ಸಹಯೋಗದಲ್ಲಿ ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ಮಹಿಳೆಯರಿಗಾಗಿ ಉಚಿತ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಭದ್ರಾವತಿ: ವಿಐಎಸ್‌ಎಲ್ ಆಸತ್ರೆ, ನಾರಾಯಣ ಆಸ್ಪತ್ರೆ ಹಾಗೂ ಬೆಂಗಳೂರಿನ ಮಜುಂದಾರ್ ಷಾ ಕ್ಯಾನ್ಸರ್ ಸಂಸ್ಥೆ ಸಹಯೋಗದಲ್ಲಿ ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ಮಹಿಳೆಯರಿಗಾಗಿ ಉಚಿತ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ವಿಐಎಸ್‌ಎಲ್ ಕಾರ್ಖಾನೆ ಹಣಕಾಸು ವಿಭಾಗದ ಪ್ರಧಾನ ವ್ಯವಸ್ಥಾಪಕಿ ಶೋಭಾ ಶಿವಶಂಕರನ್ ಶಿಬಿರ ಉದ್ಘಾಟಿಸಿದರು. ವಿಐಎಸ್‌ಎಲ್ ಆಸ್ಪತ್ರೆ ಮುಖ್ಯ ಸಲಹೆಗಾರರಾದ ಡಾ. ಎಚ್. ಶೋಭಾ(ಮೆಡಿಕಲ್), ಡಾ. ಟಿ.ಎನ್. ಸುಷ್ಮಾ(ಮೆಡಿಕಲ್) ಮತ್ತು ಸಹಾಯಕ ಪ್ರಬಂಧಕರಾದ ಕೆ.ಎಸ್. ಶೋಭಾ, (ಸಿಬ್ಬಂದಿ), ನಾರಾಯಣ ಆಸ್ಪತ್ರೆ ಡಾ. ಕೀರ್ತನ, ಮಾರುಕಟ್ಟೆ ಕಾರ್ಯನಿರ್ವಾಹಕ ಕೆ.ಸಿ. ಆಕಾಶ್, ಎಕ್ಸ್ ರೇ-ತಂತ್ರಜ್ಞರಾದ ನಿರ್ಮಲ ಮತ್ತು ಲಲಿತ ಕ್ಯಾನ್ಸರ್ ತಪಾಸಣಾ ತಂಡದ ನೇತೃತ್ವದ ವಹಿಸಿದ್ದರು. ವಿಐಎಸ್‌ಎಲ್ ಆಸ್ಪತ್ರೆ ವೈದ್ಯರಾದ ಡಾ. ಕೆ.ಎಸ್ ಸುಜೀತ್ ಕುಮಾರ್ ಮತ್ತು ಡಾ. ಎಸ್.ಎನ್ ಸುರೇಶ್ ಉಪಸ್ಥಿತರಿದ್ದರು.
ಧಾರ್ಮಿಕ, ಶಿಕ್ಷಣ, ಸಾಮಾಜಿಕ ಸೇವಾಕಾರ್ಯಗಳ ಬಹುವ್ಯಕ್ತಿತ್ವ
ಭದ್ರಾವತಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಉದ್ಘಾಟಿಸಲಿರುವ ಸಮಾಜ ಸೇವಕ ಪಿ. ವೆಂಕಟರಮಣ ಶೇಟ್ ದಂಪತಿ.
ಭದ್ರಾವತಿ: ನಗರಸಭೆ ವತಿಯಿಂದ ಈ ಬಾರಿ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಆಚರಣೆಗೆ ಸಮಾಜ ಸೇವಕ ಪಿ. ವೆಂಕಟರಮಣ ಶೇಟ್ ಚಾಲನೆ ನೀಡಲಿದ್ದಾರೆ.
ನಾಡಹಬ್ಬ ದಸರಾ ಆಚರಣೆ ಉದ್ಘಾಟನೆಗೆ ಆಗಮಿಸಲಿರುವ ಪಿ. ವೆಂಕಟರಮಣ ಶೇಟ್ ಬಹುವ್ಯಕ್ತಿತ್ವದವರಾಗಿದ್ದು, ಬಳಹ ವರ್ಷಗಳಿಂದ ಧಾರ್ಮಿಕ, ಶಿಕ್ಷಣ, ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೆರೆಮರೆಯಲ್ಲಿ ಸೇವೆ ಸಲ್ಲಿಸಿಕೊಂಡು ಬರುತ್ತಿದ್ದಾರೆ. ಇವರನ್ನು ನಗರಸಭೆ ಗುರುತಿಸಿರುವುದು ಈ ಬಾರಿ ವಿಶೇಷವಾಗಿದೆ.
ದಸರಾ ಉದ್ಘಾಟನೆಗೆ ಆಹ್ವಾನಿಸಿರುವ ಕುರಿತು ವೆಂಕಟರಮಣ ಶೇಟ್ ಪತ್ರಿಕೆಯೊಂದಿಗೆ ಸಂಭ್ರಮ ಹಂಚಿಕೊಂಡಿದ್ದಾರೆ. ನಾನು ಜೀವನೋಪಾಯಕ್ಕಾಗಿ ಭದ್ರಾವತಿ ನಗರಕ್ಕೆ ಆಗಮಿಸಿದ್ದು, ಇಲ್ಲಿಯೇ ನಾನು ಬದುಕು ಕಟ್ಟಿಕೊಳ್ಳುವ ಜೊತೆಗೆ ಹಲವು ಕ್ಷೇತ್ರಗಳಲ್ಲಿ ನನ್ನ ಕೈಲಾದಷ್ಟು ಸೇವೆ ಸಲ್ಲಿಸಿಕೊಂಡು ಬರುತ್ತಿದ್ದೇನೆ. ನನ್ನ ಅಳಿಲು ಸೇವೆಯನ್ನು ಗುರುತಿಸಿರುವುದಕ್ಕೆ ನಗರಸಭೆ ಆಡಳಿತಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿ ಭದ್ರಾವತಿ ಕ್ಷೇತ್ರದ ಜನತೆಗೆ ಒಳಿತು ಮಾಡಲಿ, ಯಾವುದೇ ಸಂಕಷ್ಟಗಳು ಎದುರಾಗದಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ವೆಂಕಟರಮಣ ಶೇಟ್‌ರವರ ಪತ್ನಿ ಪ್ರೇಮ ಶೇಟ್‌ರವರು ಮಾತನಾಡಿ, ನನ್ನ ಪತಿಯವರು ಸಮಾಜದಲ್ಲಿ ಸಾಕಷ್ಟು ಸೇವೆಯನ್ನು ಸಲ್ಲಿಸಿದ್ದಾರೆ. ಅವರನ್ನು ನಾಡಹಬ್ಬ ಉದ್ಘಾಟನೆಗೆ ಆಹ್ವಾನಿಸಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ ಎಂದರು.
ವೆಂಕಟರಮಣ ಶೇಟ್ ಪರಿಚಯ:
ಇವರು ಮೂಲತಃ ಉದ್ಯಮಿಯಾಗಿದ್ದು, ೧೯೪೮ರಲ್ಲಿ ಹೊನ್ನಾವರ ತಾಲೂಕಿನ ಉಪ್ಪಾಣಿಯಲ್ಲಿ ಜನಿಸಿದ್ದಾರೆ. ಇವರಿಗೆ ಪತ್ನಿ ಪ್ರೇಮ ಶೇಟ್, ೪ ಹೆಣ್ಣು, ೨ ಗಂಡು ಮಕ್ಕಳಿದ್ದಾರೆ. ೧೯೬೯ರಲ್ಲಿ ಭದ್ರಾವತಿಗೆ ಆಗಮಿಸಿ ಉದ್ಯಮ ಆರಂಭಿಸಿ, ಹಳೇನಗರದಲ್ಲಿಯೇ ವಾಸವಾಗಿದ್ದಾರೆ.
ಸಾಮಾಜಿಕ ಸೇವೆ: ನಗರದ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ವಲಯ ಅಧ್ಯಕ್ಷರಾಗಿ, ಜಿಲ್ಲಾ ಛೇರ್‍ಮನ್‌ರಾಗಿ, ಪ್ರಾಂತೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ನಗರದ ದೈವಜ್ಞ ಬ್ರಾಹ್ಮಣ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಹಲವಾರು ವರ್ಷ ಸೇವೆ ಸಲ್ಲಿಸಿದ್ದು, ಅಲ್ಲದೆ ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘದ ವಲಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಸುಮಾರು ೨೮ ವರ್ಷಗಳಿಂದ ಎಸ್‌ಬಿಸಿ/ಸಿ.ಬಿ.ಸಿ ಸದಸ್ಯರಾಗಿ, ಕಾರ್ಯಾಧ್ಯಕ್ಷರಾಗಿ ಕಾಲೇಜಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಶಿವಮೊಗ್ಗ ಗಾಯತ್ರಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಟ್ರಸ್ಟ್ ಅಧ್ಯಕ್ಷರಾಗಿ, ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷರಾಗಿ, ಕಾಳಿಕಾಂಬ ಸೇವಾ ಸಮಿತಿ ಹಾಗು ಕರ್ನಾಟಕ ಜಾನಪದ ಪರಿಷತ್ ಗೌರವಾಧ್ಯಕ್ಷರಾಗಿ, ಪತಂಜಲಿ ಯೋಗ ಸಂಸ್ಥೆ ಅಧ್ಯಕ್ಷರಾಗಿ, ಸೈಂಟ್ ಜೋಸೆಫ್ ಕಾಲೇಜಿನ ಉಪಾಧ್ಯಕ್ಷರಾಗಿ ಹಾಗು ಸಂಧ್ಯಾದೀಪ ವೃದ್ಧಾಶ್ರಮದ ಟ್ರಸ್ಟಿಗಳಾಗಿ, ದೈವಜ್ಞ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಅಲ್ಲದೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ದಸರಾ ಉದ್ಘಾಟನೆ:
ಈ ಬಾರಿ ದಸರಾ ಉದ್ಘಾಟನೆ ಅ.೧೫ರಂದು ಬೆಳಿಗ್ಗೆ ೧೦.೧೫ ರಿಂದ ೧೦.೩೬ರವರೆಗೆ ನಡೆಯಲಿದ್ದು, ಸಮಾಜ ಸೇವಕರಾದ ಪಿ. ವೆಂಕಟರಮಣ ಶೇಟ್‌ರವರು ನಗರಸಭೆ ಆವರಣದಲ್ಲಿರುವ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆಯೊಂದಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಲಿದ್ದಾರೆ. ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಎಚ್.ಎಂ ಮನುಕುಮಾರ್ ಹಾಗು ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಪೌರಕಾರ್ಮಿಕರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಉಪಸ್ಥಿತರಿರುವರು.
ನೇಪಾಳ ಪೊಖಾರದಲ್ಲಿ ನಡೆದ ೮ನೇ ಇಂಟರ್‌ನ್ಯಾಷನಲ್ ಗೇಮ್ಸ್ - ೨೦೨೩ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭದ್ರಾವತಿ ಪವನ್‌ಕುಮಾರ್ ಭಾರತ ತಂಡ ಪ್ರತಿನಿಧಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ
ಭದ್ರಾವತಿ: ನೇಪಾಳ ಪೊಖಾರದಲ್ಲಿ ನಡೆದ ೮ನೇ ಇಂಟರ್‌ನ್ಯಾಷನಲ್ ಗೇಮ್ಸ್ - ೨೦೨೩ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪವನ್‌ಕುಮಾರ್ ಭಾರತ ತಂಡ ಪ್ರತಿನಿಧಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಪಂದ್ಯಾವಳಿ ಅ.೫ ರಿಂದ ೯ರವರೆಗೆ ಜರುಗಿತು. ಸೌತ ಏಷ್ಯಾದ ೯ ದೇಶಗಳು ಭಾಗವಹಿಸಿದ್ದವು. ಮೆನ್ಸ್ ಅಂಡರ್-೩೦ ಸಿಂಗಲ್ಸ್‌ನಲ್ಲಿ ಪವನ್ ಕುಮಾರ್ ಉತ್ತಮ ಸಾಧನೆ ಮಾಡುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಪವನ್‌ಕುಮಾರ್ ನಗರದ ಎಂಪಿಎಂ ಕಾರ್ಖಾನೆ ನಿವೃತ್ತ ಉದ್ಯೋಗಿ, ಹೊಸಮನೆ ನಿವಾಸಿ ಕೃಷ್ಣ ಮತ್ತು ಸರಸ್ವತಿ ದಂಪತಿ ಪುತ್ರರಾಗಿದ್ದಾರೆ. ಇವರ ಸಾಧನೆಯನ್ನು ಕ್ರೀಡಾಭಿಮಾನಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಅಭಿನಂದಿಸಿದ್ದಾರೆ.
ಭದ್ರಾವತಿ ಹಳೇನಗರ ಮಹಿಳಾ ಸೇವಾ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆ ಹಾಗು ಸನ್ಮಾನ ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ, ಅರಕೆರೆ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಬಬಿತ ಕುಮಾರಿ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಭದ್ರಾವತಿ: ಹಳೇನಗರದ ಮಹಿಳಾ ಸೇವಾ ಸಮಾಜ ಇತರೆ ಸಂಘಟನೆಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪೌರಾಯುಕ್ತ ಎಚ್.ಎಂ ಮನುಕುಮಾರ್ ಹೇಳಿದರು.
ಅವರು ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆ ಹಾಗು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಒಗ್ಗಟ್ಟಾಗಿ ಸಂಘಟನೆಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದರು.
ಸಂಘದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ಪ್ರಸಕ್ತ ಸಾಲಿನ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ, ಅರಕೆರೆ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಬಬಿತ ಕುಮಾರಿ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಉಪಸ್ಥಿತರಿದ್ದರು.
ಶಾರದ ಶ್ರೀನಿವಾಸ್ ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ಶೋಭಾಗಂಗರಾಜ್ ಸ್ವಾಗತಿಸಿದರು. ಕಮಲ ರಾಯ್ಕರ್ ನಿರೂಪಸಿ, ಖಜಾಂಚಿ ಶಾಂತಿ ನಾಗರಾಜ್ ಶೇಟ್ ವಂದಿಸಿದರು.
ಭದ್ರಾವತಿ : ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ, ಕುರುಬ ಸಮಾಜದ ಮುಖಂಡರಾದ ಹುಚ್ಚಪ್ಪರವರ ತಾಯಿ ಕೆಂಪಮ್ಮ(೯೦) ನಿಧನ ಹೊಂದಿದರು.
ಹುಚ್ಚಪ್ಪ ಸೇರಿದಂತೆ ೪ ಪುತ್ರರು, ಓರ್ವ ಪುತ್ರಿ ಇದ್ದರು. ಇವರ ಅಂತ್ಯಕ್ರಿಯೆ ಗುರುವಾರ ಸಂಜೆ ಹುತ್ತಾ ಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಇವರ ನಿಧನಕ್ಕೆ ತಾಲೂಕು ಕುರುಬ ಸಮಾಜ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಮುಖಂಡರು ಸಂತಾಪ ಸೂಚಿಸಿದ್ದಾರೆ.
ಭದ್ರಾವತಿ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಉಪಾಧ್ಯಕ್ಷರಾದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಂಗಣ್ಣರವರ ಅಧ್ಯಕ್ಷತೆಯಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಪೂರ್ವಭಾವಿ ಸಭೆ ನಡೆಯಿತು.
ಭದ್ರಾವತಿ: ತಾಲೂಕು ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ, ವಾಲ್ಮೀಕಿ ಸಮಾಜ ಹಾಗು ವಿವಿಧ ಇಲಾಖೆಗಳ ಸಹಯೋಗದಲ್ಲಿ ಅ.೨೮ರಂದು ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು.
ಗುರುವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಉಪಾಧ್ಯಕ್ಷರಾದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಂಗಣ್ಣರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಈ ಬಾರಿ ನಗರದ ವೀರಶೈವ ಸಭಾ ಭವನದಲ್ಲಿ ಆಚರಿಸಲು ನಿರ್ಧರಿಸಲಾಯಿತು.
ಸಭೆ ಆರಂಭದಲ್ಲಿ ಕೆಲವು ಸರ್ಕಾರಿ ಇಲಾಖೆ ಅಧಿಕಾರಿಗಳ ಗೈರು ಹಾಜರಿಗೆ ಅಸಮಾಧಾನ ವ್ಯಕ್ತಪಡಿಸಲಾಯಿತು. ನಗರಸಭೆ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಮಹನೀಯರ ಜಯಂತಿ ಕಾರ್ಯಕ್ರಮಗಳಲ್ಲಿ ಸರ್ಕಾರಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಸಮಾಜದ ನಗರ ಅಧ್ಯಕ್ಷ ಬಸವರಾಜ್ ಬಿ. ಆನೇಕೊಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ಪೂರ್ವಭಾವಿ ಸಭೆ ೧ ತಿಂಗಳು ಮುಂಚಿತವಾಗಿ ನಡೆಸಬೇಕು. ಇಲ್ಲವಾದರೆ ಆಚರಣೆಗೆ ತೊಡಕಾಗುತ್ತದೆ ಎಂದರು.
ಸಮಾಜದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಪ್ರತಿಭಾ ಪುರಸ್ಕಾರದ ಸಂಖ್ಯೆ ಹೆಚ್ಚಿಸುವುದರ ಜೊತೆಗೆ ಸಮಾಜದ ಸಾಧಕರಿಗೂ ಪುರಸ್ಕಾರ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮಂಡಿಸಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎನ್. ಗೋಪಾಲಪ್ಪ, ಕ್ಷೇತ್ರಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಉಪತಹಸೀಲ್ದಾರ್ ಅರಸು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಟರಾಜ್, ನಗರಸಭೆ ಪರಿಸರ ಅಭಿಯಂತರ ಪ್ರಭಾಕರ್, ವಲಯ ಅರಣ್ಯಾಧಿಕಾರಿ ಬಿ.ಆರ್ ದಿನೇಶ್‌ಕುಮಾರ್, ಪೊಲೀಸ್ ನಿರೀಕ್ಷಕ ಜಯಪ್ಪ, ಸಮಾಜದ ಮುಖಂಡರಾದ ಶೇಖರಪ್ಪ, ಶಿವಣ್ಣ, ಶಿವಾನಂದ್, ಲಕ್ಷ್ಮೀದೇವಿ, ದಸಂಸ ಮುಖಂಡರಾದ ಈಶ್ವರಪ್ಪ, ತಮ್ಮಯ್ಯ, ವಿ. ವಿನೋದ್, ರವಿನಾಯ್ಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಮಾಜದ ಮುಖಂಡರು ಹಾಜರಿದ್ದರು.
ಭದ್ರಾವತಿ: ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ, ನಗರಸಭೆ ಮಾಜಿ ಸದಸ್ಯ ಜಿ. ಸುರೇಶಯ್ಯ(೫೭) ನಿಧನ ಹೊಂದಿದರು.
ಪತ್ನಿ, ಓರ್ವ ಪುತ್ರಿ ಇದ್ದರು. ಇವರ ಅಂತ್ಯಕ್ರಿಯೆ ಹಳೇನಗರದ ವೀರಶೈವ ರುದ್ರಭೂಮಿಯಲ್ಲಿ ಗುರುವಾರ ಸಂಜೆ ನಡೆಯಿತು. ಸುರೇಶಯ್ಯ ಕಡದಕಟ್ಟೆ ನಿವಾಸಿವಾಗಿದ್ದು, ಒಂದು ಬಾರಿ ನಗರಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮೂಲತಃ ಪಿಡಬ್ಲ್ಯೂಡಿ ಗುತ್ತಿಗೆದಾರರಾಗಿದ್ದು, ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕಳೆದ ಸುಮಾರು ಒಂದೂವರೆ ವರ್ಷದಿಂದ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಹೊನ್ನಾಳಿ ಸ್ವಾಮೀಜಿ, ಸಂಸದ ಬಿ.ವೈ ರಾಘವೇಂದ್ರ, ಸಮಾಜದ ಜಿಲ್ಲಾ ಪ್ರಮುಖರಾದ ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್, ಎಸ್.ಎಸ್ ಜ್ಯೋತಿ ಪ್ರಕಾಶ್, ಶಾಸಕ ಬಿ.ಕೆ ಸಂಗಮೇಶ್ವರ್, ಮಹಾಸಭಾ ಮಾಜಿ ಅಧ್ಯಕ್ಷ ಸಿದ್ದಲಿಂಗಯ್ಯ ಸೇರಿದಂತೆ ಇನ್ನಿತರರು ಅಂತಿಮ ದರ್ಶನ ಪಡೆದು ಮೃತರ ಆತ್ಮಕ್ಕೆ ಶಾಂತಿ ಕೋರಿದರು.
ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ, ಪ್ರಧಾನ ಕಾರ್ಯದರ್ಶಿ, ಸಚಿವ ಈಶ್ವರ್ ಖಂಡ್ರೆ, ರಾಜ್ಯಾಧ್ಯಕ್ಷ ತಿಪ್ಪಣ್ಣ ಸೇರಿದಂತೆ ಇನ್ನಿತರರು ಸುರೇಶಯ್ಯ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.