Friday, December 1, 2023

ಐಓಸಿಎಲ್ ಗ್ಯಾಸ್ ಕಂಪನಿಯಲ್ಲಿ ಕನ್ನಡ ರಾಜ್ಯೋತ್ಸವ

ಭದ್ರಾವತಿ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿ ಐಓಸಿಎಲ್ ಗ್ಯಾಸ್ ಕಂಪನಿಯಲ್ಲಿ ಶ್ರೀ ಚೌಡೇಶ್ವರಿ ಚಾಲಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
    ಭದ್ರಾವತಿ : ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿ ಐಓಸಿಎಲ್ ಗ್ಯಾಸ್ ಕಂಪನಿಯಲ್ಲಿ ಶ್ರೀ ಚೌಡೇಶ್ವರಿ ಚಾಲಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
    ನಾಡ ಧ್ವಜಾರೋಹಣ ನೆರವೇರಿಸಿ ತಾಯಿ ಭುವನೇಶ್ವರಿ ಮಾತೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಸಿಹಿ ಹಂಚಿ ಸಂಭ್ರಮಿಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಕಂಪನಿ ಅಧಿಕಾರಿಗಳು, ಸಿಬ್ಬಂದಿಗಳು, ಪ್ರಭಾಕರ್, ಸಾಧಿಕ್ ಸೇರಿದಂತೆ ಚಾಲಕರು, ಭದ್ರತಾ ಸಿಬ್ಬಂದಿ ಗಣೇಶ್, ಸ್ಥಳೀಯರು ಪಾಲ್ಗೊಂಡಿದ್ದರು.

ವಕೀಲರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ : ಪ್ರತ್ಯೇಕ ಕಾಯ್ದೆ ರಚಿಸಿ

ವಕೀಲರೊಬ್ಬರ ಮೇಲೆ ಪೊಲೀಸರ ಹಲ್ಲೆ ಖಂಡಿಸಿ ತಾಲೂಕು ವಕೀಲರ ಸಂಘದ ವತಿಯಿಂದ ಶುಕ್ರವಾರ ಭದ್ರಾವತಿ ತಾಲೂಕು ಮುಂಭಾಗ ಪ್ರತಿಭಟನೆ ನಡೆಸಲಾಯಿತು.  
    ಭದ್ರಾವತಿ: ವಕೀಲರೊಬ್ಬರ ಮೇಲೆ ಪೊಲೀಸರ ಹಲ್ಲೆ ಖಂಡಿಸಿ ತಾಲೂಕು ವಕೀಲರ ಸಂಘದ ವತಿಯಿಂದ ಶುಕ್ರವಾರ ತಾಲೂಕು ಮುಂಭಾಗ ಪ್ರತಿಭಟನೆ ನಡೆಸಲಾಯಿತು.  
    ಚಿಕ್ಕಮಗಳೂರು ಪೊಲೀಸರು ವಕೀಲರೊಬ್ಬರ ಮೇಲೆ ವಿನಾಕಾರಣ ಹಲ್ಲೆ ನಡೆಸಿರುವುದು ಖಂಡನೀಯ. ವಕೀಲರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ವಕೀಲರು ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸದಂತಾಗಿದೆ ಎಂದು ಅಳಲು ವ್ಯಕ್ತಪಡಿಸಿದರು.
     ವಕೀಲರ ರಕ್ಷಣೆಗೆ ಪ್ರತ್ಯೇಕ ಕಾಯ್ದೆ ರಚಿಸಬೇಕು. ಈ ಸಂಬಂಧ ಈಗಾಗಲೇ ಹಲವಾರು ಬಾರಿ ಹೋರಾಟ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ತಕ್ಷಣ ಕಾಯ್ದೆ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ವಕೀಲರ ಸಂಘದ ಅಧ್ಯಕ್ಷ ಉಮೇಶ್ ನೇತೃತ್ವ ವಹಿಸಿದ್ದರು. ಸಂಘದ ಪದಾಧಿಕಾರಿಗಳು ಹಾಗೂ ವಕೀಲರು ಪಾಲ್ಗೊಂಡಿದ್ದರು. ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸಿಡಿಲು ಬಡಿದು ಮೃತಪಟ್ಟ ಸಹೋದರರಿಬ್ಬರ ಕುಟುಂಬಕ್ಕೆ ತಲಾ ೫ ಲಕ್ಷ ರು. ಪರಿಹಾರ ಧನ

ಚೆಕ್ ವಿತರಿಸಿ ಸಾಂತ್ವನ ಹೇಳಿದ ಶಾಸಕ ಬಿ.ಕೆ ಸಂಗಮೇಶ್ವರ್

ಭದ್ರಾವತಿ ತಾಲೂಕಿನ ಹುಣಸೆಕಟ್ಟೆ ಜಂಕ್ಷನ್ ಸಮೀಪ ಕಳೆದ ೩ ದಿನಗಳ ಹಿಂದೆ ಸಿಡಿಲು ಬಡಿದು ಮೃತಪಟ್ಟ ಸಹೋದರರಿಬ್ಬರ ಕುಟುಂಬಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಸರ್ಕಾರದಿಂದ ತಲಾ ೫ ಲಕ್ಷ ರು. ಪರಿಹಾರದ ಚೆಕ್ ವಿತರಿಸಿ ಸಾಂತ್ವನ ಹೇಳಿದರು.
    ಭದ್ರಾವತಿ :  ತಾಲೂಕಿನ ಹುಣಸೆಕಟ್ಟೆ ಜಂಕ್ಷನ್ ಸಮೀಪ ಕಳೆದ ೩ ದಿನಗಳ ಹಿಂದೆ ಸಿಡಿಲು ಬಡಿದು ಮೃತಪಟ್ಟ ಸಹೋದರರಿಬ್ಬರ ಕುಟುಂಬಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಸರ್ಕಾರದಿಂದ ತಲಾ ೫ ಲಕ್ಷ ರು. ಪರಿಹಾರದ ಚೆಕ್ ವಿತರಿಸಿ ಸಾಂತ್ವನ ಹೇಳಿದರು.
    ಸಿಡಿಲು ಗುಡುಗು ಸಹಿತ ಮಳೆಯಾಗುತ್ತಿದ್ದ ಸಂದರ್ಭದಲ್ಲಿ ಜಮೀನಿನಲ್ಲಿದ್ದ ಗೌಳಿಗರ ಕ್ಯಾಂಪ್ ನಿವಾಸಿಗಳಾದ ಬೀರ ಮತ್ತು ಸುರೇಶ್ ಸಹೋದರರಿಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದರು.
    ಬಿ.ಕೆ ಸಂಗಮೇಶ್ವರ್‌ರವರು ಮೃತರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಪರಿಹಾರದ ಚೆಕ್ ವಿತರಿಸಿದರು.  ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಾಂತಕುಮಾರ್, ಯುವ ಮುಖಂಡ ಬಿ.ಎಸ್ ಗಣೇಶ್, ತಾಲೂಕು ಆಡಳಿತದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳು ಉಪಸ್ಥಿತರಿದ್ದರು.

Thursday, November 30, 2023

ಛಾಯಾಗ್ರಾಹಕ ರಾಜೇಶ್ ನಿಧನ

ರಾಜೇಶ್
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆ ನಿವಾಸಿ, ತಾಲೂಕು ಛಾಯಾಗ್ರಾಹಕರ ಸಂಘದ ಸದಸ್ಯ ರಾಜೇಶ್(೩೮) ನಿಧನ ಹೊಂದಿದ್ದಾರೆ.
    ಪತ್ನಿ, ಇಬ್ಬರು ಮಕ್ಕಳು ಇದ್ದರು. ಹಲವಾರು ವರ್ಷಗಳಿಂದ ಛಾಯಾಗ್ರಾಹಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಇವರ ನಿಧನ ತಾಲೂಕು ಛಾಯಾ ಗ್ರಾಹಕರ ಸಂಘ ಸಂತಾಪ ಸೂಚಿಸಿದೆ.

ದಿನಸಿ, ಆಹಾರಗಳಂತೆಯೇ ಪತ್ರಿಕೆಗಳು ನಮ್ಮ ಜೀವನದ ಭಾಗವಾಗಲಿ : ಡಿ. ಮಂಜುನಾಥ್

ಭದ್ರಾವತಿ ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ತು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಮೆಟ್ರಿಕ್ ನಂತರ ಬಾಲಕ-ಬಾಲಕಿಯರ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ವಾಚನಾಭಿರುಚಿ ಕಮ್ಮಟ ಸಾಹಿತ್ಯ-ಸಂವಾದ-ಕುಶಲತೆ-ವ್ಯಕ್ತಿತ್ವ-ವಿಶ್ವಾಸ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಉದ್ಘಾಟಿಸಿದರು.
    ಭದ್ರಾವತಿ: ನಿತ್ಯದ ಸಮಾಚಾರಗಳನ್ನು ತಿಳಿಸುವ ಹಾಗು ಜನರಲ್ಲಿ ಜ್ಞಾನ ಬೆಳೆಸುವ ಪತ್ರಿಕೆಗಳನ್ನು ಕೊಳ್ಳಲು ನಿರಾಸಕ್ತಿವಹಿಸುವುದು ದುರಂತ. ದಿನಸಿ, ಆಹಾರಗಳಂತೆಯೇ ಪತ್ರಿಕೆಗಳು ನಮ್ಮ ಜೀವನದ ಭಾಗವಾಗಬೇಕು. ಆಗ ಮಾತ್ರ ಜ್ಞಾನಯುತ ಸಮಾಜದ ನಿರ್ಮಾಣ ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಹೇಳಿದರು.
    ಅವರು ಗುರುವಾರ ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಮೆಟ್ರಿಕ್ ನಂತರ ಬಾಲಕ- ಬಾಲಕಿಯರ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ವಾಚನಾಭಿರುಚಿ ಕಮ್ಮಟ ಸಾಹಿತ್ಯ-ಸಂವಾದ-ಕುಶಲತೆ-ವ್ಯಕ್ತಿತ್ವ-ವಿಶ್ವಾಸ ಉದ್ಘಾಟಿಸಿ ಮಾತನಾಡಿದರು.
    ಸಾಹಿತ್ಯ ಕಾರ್ಯಕ್ರಮಗಳು ಉಚಿತವಾಗಿರುವುದರಿಂದ ಜನರಲ್ಲಿ ನಿರ್ಲಕ್ಷ್ಯವಿದೆ. ಸಾಹಿತ್ಯ ಕಾರ್ಯಕ್ರಮಗಳು ಜ್ಞಾನ ಹಂಚುವ ಕಾರ್ಯಕ್ರಮಗಳು. ಉಚಿತಗಳು ನಮ್ಮ ಸ್ವಾವಲಂಬನೆ ಕಸಿದುಕೊಳ್ಳುತ್ತವೆ ಎಂದು ವಿಷಾದ ವ್ಯಕ್ತಪಡಿಸಿದರು.
    ವಿದ್ಯಾರ್ಥಿನಿಲಯಗಳಲ್ಲಿ ಕೇವಲ ಊಟ, ಬಟ್ಟೆ ಹಾಗು ದೈನಂದಿನ ಬಳಕೆಯ ವಸ್ತುಗಳನ್ನು ನೀಡುವುದರ ಜೊತೆಗೆ ಸಾಹಿತ್ಯ ಜ್ಞಾನ ನೀಡುವುದು ಅಗತ್ಯ. ಇಂಥದೊಂದು ಪ್ರಯತ್ನದ ಫಲವಾಗಿ ವಾಚನಾಭಿರುಚಿ ಕಮ್ಮಟ ನಡೆಸಲಾಗುತ್ತಿದೆ ಎಂದರು.
    ವೇದಿಕೆಯಲ್ಲಿ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯದ ನಿಲಯಪಾಲಕ ಸಿ.ಎಂ.ರಮೇಶ್, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ತಾಲ್ಲೂಕು ಅಧ್ಯಕ್ಷೆ ಸುಧಾಮಣಿ, ಸಾಹಿತಿಗಳಾದ ಪ್ರೊ.ಸಿರಾಜ್ ಅಹಮದ್, ಡಾ.ಹೆಚ್.ಟಿ.ಕೃಷ್ಣಮೂರ್ತಿ, ಲೇಖಕ ಡಾ.ಕೆ.ಜಿ. ವೆಂಕಟೇಶ್,
    ಕಾವ್ಯ-ಓದು-ಅಂತರಾಳ-ವಿವೇಕ, ಕಥೆ-ಗ್ರಹಿಕೆ-ಅರಿವು-ಅಭಿವ್ಯಕ್ತಿ ಮತ್ತು ಮುದ್ರಣ-ಮಾಧ್ಯಮ : ಅಬ್ಬರ ಅಲ್ಲ ಅಭಿವ್ಯಕ್ತಿ ಒಟ್ಟು ೩ ಗೋಷ್ಠಿಗಳು ಜರುಗಿದವು.
    ನಿವೃತ್ತ ಪ್ರಾಧ್ಯಾಪಕ, ಹಿರಿಯ ಸಾಹಿತಿ ಪ್ರೊ. ಎಂ. ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಎನ್. ಬಾಬು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ನಾಗರತ್ನ ವಾಗೀಶ್ ಕೋಠಿ ಪ್ರಾರ್ಥಿಸಿದರು. ಸುಮತಿ ಕಾರಂತ್, ಕೋಕಿಲ, ಮಾಯಮ್ಮ ತಂಡದವರು ನಾಡಗೀತೆ ಹಾಡಿದರು.

ದಾರ್ಶನಿಕರ ಆದರ್ಶ ಯುವ ಸಮುದಾಯಕ್ಕೆ ಪರಿಚಯಿಸುವುದು ಜಯಂತಿ ಆಚರಣೆಗಳ ಆಶಯ : ಸಂಗಮೇಶ್ವರ್

ಭದ್ರಾವತಿ ತಾಲೂಕು ಪಂಚಾಯಿತಿ ಆವರಣದಲ್ಲಿ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ಕನಕ ಜಯಂತಿ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
ಭದ್ರಾವತಿ: ಯುವ ಸಮುದಾಯಕ್ಕೆ ದಾರ್ಶನಿಕರ ಆದರ್ಶಗಳನ್ನು ಪರಿಚಯಿಸುವ ಜೊತೆಗೆ ಮಾರ್ಗದರ್ಶನ ನೀಡುವುದು ಜಯಂತಿ ಆಚರಣೆಗಳ ಉದ್ದೇಶವಾಗಿದೆ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ತಿಳಿಸಿದರು.
ಅವರು ಗುರುವಾರ ತಾಲೂಕು ಪಂಚಾಯಿತಿ ಆವರಣದಲ್ಲಿ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಕನಕ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಮಹಾನೀಯರ ಜಯಂತಿ ಕಾರ್ಯಕ್ರಮಗಳಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಜಯಂತಿ ಆಚರಣೆಗಳ ಆಶಯ ಅರ್ಥ ಮಾಡಿಕೊಳ್ಳುವ ಜೊತೆಗೆ ಸದ್ಬಳಕೆ ಮಾಡಿಕೊಳ್ಳಬೇಕೆಂದರು. 
ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್ ಮಾತನಾಡಿ, ಕುಲ ಕುಲ ಕುಲವೆಂದು ಹೊಡೆದಾಡದಿರಿ ಎನ್ನುವ ಸಂದೇಶದ ಮೂಲಕ ಇಡೀ ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ಶ್ರೇಷ್ಠರು ಕನಕದಾಸರು. ದಾಸವಾಣಿಯ ಮೂಲಕ ಸಮಾನತೆ ಬೋಧಿಸಿದ ಇವರು ವಿಶ್ವಮಾನ್ಯರು ಎಂದರು.
ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮತ್ತು ಕಿರುತೆರೆ ನಟ, ರಂಗಕರ್ಮಿ ಅಪರಂಜಿ ಶಿವರಾಜ್ ಕನಕದಾಸ ಕುರಿತು ಉಪನ್ಯಾಸ ನೀಡಿದರು.  ನಗರಸಭೆ ಸದಸ್ಯರಾದ ಕಾಂತರಾಜು, ಮಂಜುಳಾ ಸುಬ್ಬಣ್ಣ, ಶಶಿಕಲಾ ನಾರಾಯಣಪ್ಪ, ಅನಿತಾ ಮಲ್ಲೇಶ್, ಆರ್. ಶ್ರೇಯಸ್, ಚನ್ನಪ್ಪ, ಮಣಿ ಎಎನ್‌ಎಸ್, ಜಾರ್ಜ್, ಬಸವರಾಜ ಬಿ. ಆನೇಕೊಪ್ಪ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ವಿವಿಧ ಸಮುದಾಯಗಳ ಪ್ರಮುಖರಾದ ಕೆ. ಚಂದ್ರಶೇಖರ್, ಸೆಲ್ವರಾಜ್, ಜುಂಜ್ಯಾನಾಯ್ಕ, ಸಿ. ಜಯಪ್ಪ, ವೈ. ರೇಣುಕಮ್ಮ, ಗಿರೀಶ್, ಎಚ್. ರವಿಕುಮಾರ್, ಅಭಿಲಾಷ್, ಕುಮಾರ್, ಶ್ರೀನಿವಾಸ್(ಪೋಟೋಗ್ರಾಫರ್), ಬಿ.ಕೆ ಜಗನ್ನಾಥ್, ಬಿ.ಕೆ ಶಿವಕುಮಾರ್, ಸುಕನ್ಯ, ಶೋಭ ರವಿಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ.ಗಂಗಣ್ಣ, ನಗರಸಭೆ ಕಂದಾಯಾಧಿಕಾರಿ ರಾಜ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸ್ವಾಗತಿಸಿದರು. ಸುಮತಿ ಕಾರಂತ್ ತಂಡ ನಾಡಗೀತೆ ಹಾಡಿತು. ಉಪತಹಸೀಲ್ದಾರ್ ಮಂಜಾನಾಯ್ಕ ನಿರೂಪಿಸಿದರು. ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಅಥ್ಲೆಟಿಕ್ ವಿಕಲಚೇತನ ಕ್ರೀಡಾಪಟು ಜ್ಯೋತಿ ಸೇರಿದಂತೆ ಸಾಧಕರು, ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. 

ಶ್ರೀ ಸಂತಕವಿ, ದಾಸಶ್ರೇಷ್ಠ ಕನಕದಾಸರ ಜಯಂತಿ ಅಂಗವಾಗಿ ಮೆರವಣಿಗೆ : ಚಾಲನೆ


ಭದ್ರಾವತಿಯಲ್ಲಿ ಶ್ರೀ ಸಂತಕವಿ, ದಾಸಶ್ರೇಷ್ಠ ಕನಕದಾಸರ ಜಯಂತಿ ಅಂಗವಾಗಿ ತಾಲೂಕು ಆಡಳಿತ ಹಾಗು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಭವ್ಯ ಮೆರವಣಿಗೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
    ಭದ್ರಾವತಿ : ಶ್ರೀ ಸಂತಕವಿ, ದಾಸಶ್ರೇಷ್ಠ ಕನಕದಾಸರ ಜಯಂತಿ ಅಂಗವಾಗಿ ತಾಲೂಕು ಆಡಳಿತ ಹಾಗು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಭವ್ಯ ಮೆರವಣಿಗೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
    ಬಿ.ಎಚ್ ರಸ್ತೆ ಲೋಯರ್ ಹುತ್ತಾ ಬಸ್ ನಿಲ್ದಾಣದ ಬಳಿ ಕನಕದಾಸರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪ ನಮನದ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.
    ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಸಿ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ತಾಲೂಕು ಅಧ್ಯಕ್ಷ ಎಸ್. ಚೇತನ್‌ಕುಮಾರ್, ತಾಲೂಕು ಕುರುಬ ಸಮಾಜದ ಪದಾಧಿಕಾರಿಗಳು, ನಿರ್ದೇಶಕರು, ಕನಕ ಯುವಪಡೆ, ಸಂಗೊಳ್ಳಿ ರಾಯಣ್ಣ ಯುವ ಪಡೆ, ಕೇಸರಿ ಪಡೆ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.
    ಮೆರವಣಿಗೆ ಬಿ.ಎಚ್ ರಸ್ತೆ ಕೆ.ಎಸ್.ಆರ್.ಟಿ ಮುಖ್ಯ ಬಸ್ ನಿಲ್ದಾಣ, ಡಾ. ಬಿ.ಆರ್ ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ ಮತ್ತು ರಂಗಪ್ಪ ವೃತ್ತ ಮೂಲಕ ತಾಲೂಕು ಪಂಚಾಯಿತಿ ಕಛೇರಿ ತಲುಪಿತು.