![](https://blogger.googleusercontent.com/img/a/AVvXsEi5sv3GOm2dZ27UF2zmnYtmKpA1XbmLLpA2QzNzfg8Ky3WSYmHP3U-RUzfGJ-zUuO5s9PsBRQDAE8zm9TYGTa6V5UOQIaVPFcVoPYKQypjVgLf0TiX3kZCu6XSPYu1LRcGN1BDneJOE4G55TxyZVF6gKRcML-Mnzn2J5YqvBmfl_1fHrXctpJxx0iy8I4Qp=w400-h361-rw)
ಕರ್ತವ್ಯ ಲೋಪವೆಸಗಿರುವ ಭದ್ರಾವತಿ ತಾಲೂಕು ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್. ಗೌಡ ನೇತೃತ್ವದಲ್ಲಿ ಆಗ್ರಹಿಸಿ ಗ್ರೇಡ್-೨ ತಹಸೀಲ್ದಾರ್ ಮಂಜಾನಾಯ್ಕ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ: ಕರ್ತವ್ಯ ಲೋಪವೆಸಗಿರುವ ತಾಲೂಕು ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್. ಗೌಡ ಆಗ್ರಹಿಸಿದ್ದಾರೆ.
ತಾಲೂಕು ಕಚೇರಿ ಮಿನಿ ವಿಧಾನಸೌಧ ಮುಂಭಾಗ ಪ್ರತಿಭಟನಾ ಧರಣಿಯಲ್ಲಿ ಮಾತನಾಡಿದ ಶಶಿಕುಮಾರ್ ಎಸ್. ಗೌಡ, ನಗರದ ಜನ್ನಾಪುರ ಫಿಲ್ಟರ್ ಶೆಡ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ಖಾಸಗಿ ವ್ಯಕ್ತಿಗಳು ಸಾರ್ವಜನಿಕರ ಹಾಗೂ ಅಂತರಘಟ್ಟಮ್ಮ ದೇವರ ಹೆಸರಿನಲ್ಲಿ ಶಾಸಕರ, ಸಂಸದರ, ವಿಧಾನ ಪರಿಷತ್ ಸದಸ್ಯರ ಅನುದಾನ ಅಕ್ರಮವಾಗಿ ಬಳಸಿಕೊಂಡು ಸಮುದಾಯ ಭವನ ನಿರ್ಮಾಣ ಮಾಡಿ ಅದರಿಂದ ಬರುವಂತಹ ಆದಾಯ ಟ್ರಸ್ಟ್ ಹೆಸರಿನಲ್ಲೇ ಬಳಸಿಕೊಂಡು ಹಣ ಮಾಡುವ ದಂಧೆಯಲ್ಲಿ ತೊಡಗಿದ್ದಾರೆಂದು ಆರೋಪಿಸಿದರು.
ನಿರ್ಮಾಣ ಮಾಡಿರುವ ಸಮುದಾಯ ಭವನದ ಜಾಗ ಕೊಳಗೇರಿ ಮಂಡಳಿಗೆ ಸೇರಿದೆಯೋ ಅಥವಾ ಕಂದಾಯ ಇಲಾಖೆಗೆ ಸೇರಿದೆಯೋ ಅಥವಾ ಯಾವ ಇಲಾಖೆಗೆ ಸೇರಿದೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಿ ಅಕ್ರಮವಾಗಿ ಸಮುದಾಯ ಭವನ ನಿರ್ಮಾಣ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಕಳೆದ ೧೦ ತಿಂಗಳಿನಿಂದ ಸ್ಥಳೀಯ ಫಿಲ್ಟರ್ ಶೆಡ್ ನಾಗರಿಕರು ಹಲವಾರು ಬಾರಿ ತಹಸೀಲ್ದಾರ್ ಕಚೇರಿಗೆ ಮನವಿ ನೀಡಿದರೂ ಇದುವರೆಗೂ ಯಾವುದೇ ಪ್ರಯೋಜನವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಟ್ಟ ಮನವಿಗೆ ಯಾವುದೇ ರೀತಿಯ ಹಿಂಬರಹ ನೀಡದೆ ಕರ್ತವ್ಯ ಲೋಪವೆಸಗಿದ್ದು, ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮುದಾಯ ಭವನದ ಜಾಗವನ್ನು ಸರ್ವೆ ಮಾಡಿಸಿ ಜಾಗ ಯಾವ ಇಲಾಖೆಗೆ ಸೇರಿದೆ ಎಂಬುದನ್ನು ಖಾತರಿಪಡಿಸಿಕೊಂಡು ಫಿಲ್ಟರ್ ಶೆಡ್ ನಾಗರಿಕರಿಗೆ ಶುಭ ಸಮಾರಂಭ ಕಾರ್ಯಕ್ರಮಗಳಿಗೆ ಸಮುದಾಯಭವನ ಬಳಸಿಕೊಳ್ಳಲು ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಸರ್ಕಾರ ತಕ್ಷಣ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಅಂತರಘಟ್ಟಮ್ಮ ದೇವಿ ಹೆಸರಿನಲ್ಲಿ ಅಕ್ರಮವಾಗಿ ಟ್ರಸ್ಟ್ ಮಾಡಿಕೊಂಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಗ್ರೇಡ್-೨ ತಹಸೀಲ್ದಾರ್ ಮಂಜಾನಾಯ್ಕ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನಾ ಧರಣಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಸೂಡ ಸದಸ್ಯ ಎಚ್. ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.