ಬುಧವಾರ, ಜನವರಿ 22, 2025

ಕಾಗೋಡು ತಿಮ್ಮಪ್ಪರಿಗೆ ಡಾಕ್ಟರೇಟ್ ಪದವಿ : ಸನ್ಮಾನ, ಗೌರವ

ಮಾನವ ಹಕ್ಕುಗಳ ಹೋರಾಟ ಸಮಿತಿಯಿಂದ ಸಂಭ್ರಮ 

ಕುವೆಂಪು ವಿಶ್ವ ವಿದ್ಯಾಲಯದಿಂದ ಬುಧವಾರ ಗೌರವ ಡಾಕ್ಟರೇಟ್ ಪದವಿ ಪಡೆದ ಹಿರಿಯ ರಾಜಕೀಯ ಮುತ್ಸದ್ದಿ, ಸಮಾಜವಾದಿ ನಾಯಕ, ವಿಧಾನಸಭೆ ಮಾಜಿ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರನ್ನು ಭದ್ರಾವತಿ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ : ಕುವೆಂಪು ವಿಶ್ವ ವಿದ್ಯಾಲಯದಿಂದ ಬುಧವಾರ ಗೌರವ ಡಾಕ್ಟರೇಟ್ ಪದವಿ ಪಡೆದ ಹಿರಿಯ ರಾಜಕೀಯ ಮುತ್ಸದ್ದಿ, ಸಮಾಜವಾದಿ ನಾಯಕ, ವಿಧಾನಸಭೆ ಮಾಜಿ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರನ್ನು ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 
    ಸಮಿತಿ ಅಧ್ಯಕ್ಷ ಬಿ.ಎನ್ ರಾಜು ನೇತೃತ್ವದಲ್ಲಿ ಸಮಿತಿ ಪದಾಧಿಕಾರಿಗಳು, ಪ್ರಮುಖರು ಕುವೆಂಪು ವಿಶ್ವ ವಿದ್ಯಾಲಯಕ್ಕೆ ತೆರಳಿ ಕಾಗೋಡು ತಿಮ್ಮಪ್ಪನವರೊಂದಿಗೆ ಸಂಭ್ರಮ ಹಂಚಿಕೊಂಡರು. 
    ಕಳೆದ ಕೆಲವು ತಿಂಗಳುಗಳಿಂದ ಸಮಿತಿ ವತಿಯಿಂದ ಕಾಗೋಡು ತಿಮ್ಮಪ್ಪನವರಿಗೆ ಕರ್ನಾಟಕ ರತ್ನ ಸೇರಿದಂತೆ ಗೌರವಪೂರ್ವಕವಾಗಿ ಉನ್ನತ ಪ್ರಶಸ್ತಿಗಳನ್ನು ನೀಡಿ ಗೌರವಿಸುವಂತೆ ಜಿಲ್ಲಾಧಿಕಾರಿಗಳ ಕಛೇರಿ ಹಾಗು ಸಾಗರದಲ್ಲಿರುವ ಕಾಗೋಡು ತಿಮ್ಮಪ್ಪನವರ ನಿವಾಸದವರೆಗೂ ಪಾದಯಾತ್ರೆ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. 
    ಅಲ್ಲದೆ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯಂದು ಸಮಿತಿ ವತಿಯಿಂದ ವಿಶ್ವ ಮಾನವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇದೀಗ ಕುವೆಂಪು ವಿಶ್ವ ವಿದ್ಯಾಲಯ ಕಾಗೋಡು ತಿಮ್ಮಪ್ಪನವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿರುವುದು ಸಂಭ್ರಮವನ್ನುಂಟು ಮಾಡಿದೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕೆಂಬುದು ಸಮಿತಿ ಒತ್ತಾಯವಾಗಿದೆ. 

ಜಾಯ್ ಶರ್ಲಿಗೆ ಕುವಿವಿ ಚಿನ್ನದ ಪದಕ

ಭದ್ರಾವತಿ ನಗರ ಜನ್ನಾಪುರ ನಿವಾಸಿ ಜಾಯ್ ಶರ್ಲಿಯವರು ಕುವೆಂಪು ವಿಶ್ವ ವಿದ್ಯಾಲಯದ ವಿಜ್ಞಾನ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. 
    ಭದ್ರಾವತಿ : ನಗರ ಜನ್ನಾಪುರ ನಿವಾಸಿ ಜಾಯ್ ಶರ್ಲಿಯವರು ಕುವೆಂಪು ವಿಶ್ವ ವಿದ್ಯಾಲಯದ ವಿಜ್ಞಾನ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. 
    ಕುವೆಂಪು ವಿಶ್ವವಿದ್ಯಾಲಯದಲ್ಲಿ ಬುಧವಾರ ಆಯೋಜಿಸಲಾಗಿದ್ದ ೩೪ನೇ ಘಟಿಕೋತ್ಸವದಲ್ಲಿ ಕುಲಾಧಿಪತಿಗಳಾದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ರವರು ಚಿನ್ನದ ಪದಕ ಜಾಯ್ ಶರ್ಲಿಯವರಿಗೆ ಪ್ರಧಾನ ಮಾಡಿದರು. ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ನಿವೃತ್ತ ಕುಲಪತಿ ಪ್ರೊ. ರಾಮ್ ರಾಮಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಚಿನ್ನದ ಪದಕ ಪಡೆದ ಜಾಯ್ ಶರ್ಲಿಯವರನ್ನು ತಾಲೂಕಿನ ಮಾವಿನಕೆರೆ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಜಯಶ್ರೀ ಗಂಗಾಧರನ್ ಸೇರಿದಂತೆ ಇನ್ನಿತರ ಗಣ್ಯರು ಅಭಿನಂದಿಸಿದ್ದಾರೆ. 

ಪರಮೇಶ್ವರ್, ತಿಪ್ಪೇಸ್ವಾಮಿಗೆ ಸವಿತಾ ಸಮಾಜದಿಂದ ಸನ್ಮಾನ



ಶಿವಮೊಗ್ಗ ಜಿಲ್ಲಾ ಸವಿತಾ ಸಮಾಜದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಎಂ. ಪರಮೇಶ್ವರ್ ಮತ್ತು ಕೂಡ್ಲಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿರುವ ತಿಪ್ಪೇಸ್ವಾಮಿಯವರನ್ನು ಭದ್ರಾವತಿ ತಾಲೂಕು ಸವಿತಾ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.  
    ಭದ್ರಾವತಿ : ಶಿವಮೊಗ್ಗ ಜಿಲ್ಲಾ ಸವಿತಾ ಸಮಾಜದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಎಂ. ಪರಮೇಶ್ವರ್ ಮತ್ತು ಕೂಡ್ಲಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿರುವ ತಿಪ್ಪೇಸ್ವಾಮಿಯವರನ್ನು ತಾಲೂಕು ಸವಿತಾ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.   
    ಹಳೇನಗರದ ಸವಿತಾ ಸಮಾಜದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಎಂ. ಪರಮೇಶ್ವರ್ ಮತ್ತು ತಿಪ್ಪೇಸ್ವಾಮಿಯರನ್ನು ಸನ್ಮಾನಿಸಿ ಉತ್ತಮವಾಗಿ ಸೇವೆ ಸಲ್ಲಿಸುವ ಜೊತೆಗೆ ಸಮಾಜವನ್ನು ಮತ್ತಷ್ಟು ಸಂಘಟಿಸುವ ಮೂಲಕ ಏಳಿಗೆಗೆ ಶ್ರಮಿಸುವಂತೆ ಕೋರಲಾಗಿದೆ. 
      ಸಮಾಜದ ತಾಲೂಕು ಅಧ್ಯಕ್ಷ ವಿಶ್ವನಾಥ್, ಉಪಾಧ್ಯಕ್ಷ ಓಬಳೇಶ್, ಪ್ರಧಾನ ಕಾರ್ಯದರ್ಶಿ ರೆಡ್‌ಸನ್ ರಾಜು, ಸಹ ಕಾರ್ಯದರ್ಶಿ ಮಹೇಶ್ ಕುಮಾರ್, ಖಜಾಂಚಿ ನರಸಿಂಹಮೂರ್ತಿ, ಪ್ರಮುಖರಾದ ಶಿವಶಂಕರ್, ಗೋಪಿನಾಥ್, ಶಿವಪ್ರಸಾದ್, ವೆಂಕಟೇಶ್, ಗಣೇಶ್, ಸುರೇಶ್, ಜೋರಪ್ಪ, ಎಂಪೈರ್ ಲೋಕೇಶ್ ಸೇರಿದಂತೆ ಸೇರಿದಂತೆ ಸವಿತಾ ಸಮಾಜದ ಪದಾಧಿಕಾರಿಗಳು, ಹಿರಿಯರು, ಮುಖಂಡರು ಉಪಸ್ಥಿತರಿದ್ದರು.  

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಗ್ಯ ವಿಚಾರಿಸಿದ ಸಂಗಮೇಶ್ವರ್, ಶ್ರೀ ವಿನಯ್ ಗುರೂಜೀ

ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಕರ್ನಾಟಕ ಗ್ರಾಮೀಣ ಮೂಲಕ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.  
    ಭದ್ರಾವತಿ : ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಕರ್ನಾಟಕ ಗ್ರಾಮೀಣ ಮೂಲಕ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. 
    ಚಿಕ್ಕಮಗಳೂರು ಗೌರಿಗದ್ದೆ ಆಶ್ರಮದ ಶ್ರೀ ವಿನಯ್ ಗುರೂಜೀ ಮತ್ತು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಜೊತೆ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದರು. 
ಲಕ್ಷ್ಮೀ ಹೆಬ್ಬಾಳ್ಕರ್‌ರವರು ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಕುಟುಂಬ ಸಂಬಂಧಿ ಸಹ ಆಗಿದ್ದು, ಶೀಘ್ರ ಗುಣಮುಖರಾಗುವಂತೆ ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಮಂಗಳವಾರ, ಜನವರಿ 21, 2025

ಜ.23ರಂದು 12ನೇ ವರ್ಷದ ಕ್ರಿಸ್‌ಮಸ್, ನೂತನ ವರ್ಷೋತ್ಸವ




   ಭದ್ರಾವತಿ : ತೆಲುಗು ಕ್ರಿಶ್ಚಿಯನ್ ವೆಲ್‌ಫೇರ್ ಅಸೋಸಿಯೇಷನ್ ವತಿಯಿಂದ 12ನೇ ವರ್ಷದ ಕ್ರಿಸ್‌ಮಸ್ ಮತ್ತು ನೂತನ ವರ್ಷೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜ.23ರ ಗುರುವಾರ ಸಂಜೆ 5 ಗಂಟೆಗೆ ಕಾಗದ ನಗರದ ಎಂಪಿಎಂ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ.
  ಸಂಸದ ಬಿ.ವೈ ರಾಘವೇಂದ್ರ, ಸಚಿವ ಮಧು ಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಸೋಸಿಯೇಷನ್ ಸಂಸ್ಥಾಪಕ ಅಧ್ಯಕ್ಷ ಜೆ. ಭಾಸ್ಕರ ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ.
  ಮುಖ್ಯ ಅತಿಥಿಗಳಾಗಿ ಶಾಸಕರಾದ ಬಿ.ಕೆ. ಸಂಗಮೇಶ್ವರ್, ಐವಾನ್ ಡಿಸೋಜ, ಬಲ್ಕಿಷ್ ಬಾನು, ನಗರಸಭಾ ಸದಸ್ಯ ಬಿ.ಕೆ.ಮೋಹನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ‌. ಬರ್ತಲೋಮ್, ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಗಣ್ಯರು, ಕ್ರೈಸ್ತ ಮುಖಂಡರು ಗಳು ಪಾಲ್ಗೊಳ್ಳಲಿದ್ದಾರೆ. ಕ್ರೈಸ್ತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದೆ.

ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಬೀದಿ ನಾಟಕ

ಭದ್ರಾವತಿ ನ್ಯೂಟೌನ್ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಜೆ.ಸಿ ಬೋಸ್ ಇಕೋ ಕ್ಲಬ್ ವತಿಯಿಂದ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ಸಹಯೋಗದೊಂದಿಗೆ ವಿದ್ಯಾರ್ಥಿನಿಯರಿಂದ ಬೀದಿ ನಾಟಕ ಆಯೋಜಿಸಲಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದರು. 
    ಭದ್ರಾವತಿ : ನಗರದ ನ್ಯೂಟೌನ್ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಜೆ.ಸಿ ಬೋಸ್ ಇಕೋ ಕ್ಲಬ್ ವತಿಯಿಂದ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ಸಹಯೋಗದೊಂದಿಗೆ ವಿದ್ಯಾರ್ಥಿನಿಯರಿಂದ ಬೀದಿ ನಾಟಕ ಆಯೋಜಿಸಲಾಗಿತ್ತು. 
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದರು. ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ವಿ.ಎಸ್ ಪಂಚಾಕ್ಷರಿ, ಇಕೋ ಕ್ಲಬ್ ನೋಡಲ್ ಅಧಿಕಾರಿ ಗಂಗಾಧರ ಮತ್ತು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು, ಶಿಕ್ಷಕರು ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.  
    ಬೀದಿ ನಾಟಕದಲ್ಲಿ ಕಸ ವಿಂಗಡಣೆಯ ಮಹತ್ವ, ಭೂಕುಸಿತದಂತಹ ಪ್ರಕೃತಿ ವಿಕೋಪಗಳಿಗೆ ಕಾರಣಗಳು, ತಂಬಾಕು ಸೇವನೆಯ ದುಷ್ಪರಿಣಾಮಗಳು, ಸಂಚಾರಿ ಸಮಸ್ಯೆ, ವಾಯುಮಾಲಿನ್ಯ, ನೈರ್ಮಲ್ಯದ ಕೊರತೆಯಿಂದ ಹರಡುವ ರೋಗಗಳು, ಕೃಷಿಯಲ್ಲಿ ಹೆಚ್ಚು ರಾಸಾಯನಿಕಗಳ ಬಳಕೆಯಿಂದ ಎದುರಾಗುತ್ತಿರುವ ಸವಾಲುಗಳು ಇತ್ಯಾದಿ ವಿಷಯಗಳ ಕುರಿತು ಜಾಗೃತಿ ಮೂಡಿಸಲಾಯಿತು.
    ಸಹ ಶಿಕ್ಷಕ ದಯಾನಂದ ಸಾಗರ್, ನೆಲ್ಲಿಸರರವರ ನಿರ್ದೇಶನದಲ್ಲಿ ಜಾನಪದ ಕಲಾವಿದ ತಮಟೆ ಜಗದೀಶ್‌ರವರ ರಂಗ ಸಜ್ಜಿಕೆ ಹಾಗೂ ಸಂಗೀತದಲ್ಲಿ  ಇಕೋ ಕ್ಲಬ್ ಮಾರ್ಗದರ್ಶಿ ಶಿಕ್ಷಕಿ ಜಯಲಕ್ಷ್ಮಿಯವರ ನೇತೃತ್ವದಲ್ಲಿ ಬೀದಿ ನಾಟಕ ಜರುಗಿತು.  

ಅಂತರಗಂಗೆ ಗ್ರಾಮದಲ್ಲಿ ಜ.೨೩ರಂದು ಮೊದಲ ವಾರದ ಸಂತೆ

ಭದ್ರಾವತಿ ಅಂತರಗಂಗೆ ಗ್ರಾಮ ಪಂಚಾಯಿತಿ. 
    ಭದ್ರಾವತಿ : ನಗರದ ಪ್ರದೇಶದಿಂದ ಸುಮಾರು ೧೦ ಕಿ.ಮೀ ದೂರದಲ್ಲಿರುವ ತಾಲೂಕಿನ ಕೂಡ್ಲಿಗೆರೆ ಹೋಬಳಿ ಅಂತರಗಂಗೆ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮಸ್ಥರ ಬಹಳ ವರ್ಷಗಳ ಬೇಡಿಕೆಯಾದ ವಾರದ ಸಂತೆ ಆರಂಭಿಸಲಾಗುತ್ತಿದ್ದು, ಜ.೨೩ರಂದು ಮೊದಲ ಸಂತೆ ಗ್ರಾಮದ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಮುಂಭಾಗ ಹಾಗು ಗ್ರಾಮ ಪಂಚಾಯಿತಿ ಬಳಿ ಆಯೋಜಿಸಲಾಗಿದೆ. 
    ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ೧೦ ಗ್ರಾಮಗಳಿದ್ದು, ಪ್ರಸ್ತುತ ಸುಮಾರು ೧೦ ಸಾವಿರ ಜನಸಂಖ್ಯೆ ಒಳಗೊಂಡಿದೆ. ಅಲ್ಲದೆ ಈ ಗ್ರಾಮ ಪಂಚಾಯಿತಿಗೆ ದೊಡ್ಡೇರಿ, ಎರೇಹಳ್ಳಿ ಹಾಗು ಮಾವಿನಕೆರೆ ಗ್ರಾಮ ಪಂಚಾಯಿತಿಗಳು ಹೊಂದಿಕೊಂಡಿವೆ. ಗ್ರಾಮಸ್ಥರು ವಾರದ ಸಂತೆಗೆ ಪ್ರತಿ ಭಾನುವಾರ ನಗರದ ಪ್ರದೇಶದ ಸುಮಾರು ೧೦ ಕಿ.ಮೀ ದೂರದ ಹೊಸಮನೆ ಸಂತೆ ಮೈದಾನದಲ್ಲಿ ನಡೆಯುವ ವಾರದ ಸಂತೆಗೆ ಬರಬೇಕಾಗಿದೆ. ಇದರಿಂದಾಗಿ ಗ್ರಾಮಸ್ಥರಿಗೆ ಸಾಕಷ್ಟು ಸಮಸ್ಯೆ ಎದುರಾಗಿದೆ. 
    ಹಲವಾರು ವರ್ಷಗಳಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ವಾರದ ಸಂತೆ ಆಯೋಜಿಸಬೇಕೆಂಬ ಬೇಡಿಕೆ ಗ್ರಾಮಸ್ಥರದ್ದಾಗಿತ್ತು. ಇದೀಗ ವಾರದ ಆರಂಭಿಸಲಾಗುತ್ತಿದ್ದು, ಇದರಿಂದ ಗ್ರಾಮಸ್ಥರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೆ ಗ್ರಾಮೀಣ ಭಾಗದ ವ್ಯಾಪಾರಸ್ಥರಿಗೆ, ಅದರಲ್ಲೂ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ. 
    ಕಾಡಂಚಿನ ಗ್ರಾಮಗಳು : 
    ಬಹುತೇಕ ಗ್ರಾಮಗಳು ಅರಣ್ಯ ವ್ಯಾಪ್ತಿಯಲ್ಲಿದ್ದು, ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಇದರಿಂದಾಗಿ ರಾತ್ರಿ ವೇಳೆ ಗ್ರಾಮಸ್ಥರ ಸಂಚಾರ ವಿರಳವಾಗಿದೆ. ಈ ಭಾಗದಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸಿಲ್ಲ. ಸದಾ ಭಯಭೀತಿಯಲ್ಲಿ ಬದುಕುತ್ತಿರುವ ಗ್ರಾಮಸ್ಥರಿಗೆ ವಾರದ ಸಂತೆಯಿಂದ ಹೆಚ್ಚಿನ ಪ್ರಯೋಜನವಾಗಲಿದೆ. ದಿನನಿತ್ಯದ ಬಳಕೆ ವಸ್ತುಗಳನ್ನು ವಾರದ ಒಂದೇ ದಿನ ಖರೀದಿಸಿಕೊಂಡು ಬರಬಹುದಾಗಿದೆ.  
    ಮಾರುಕಟ್ಟೆ ಕಲ್ಪಿಸಲು ಕ್ರಮ :
    ಪ್ರಸ್ತುತ ವಾರದ ಸಂತೆಗೆ  ಗ್ರಾಮದ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಮುಂಭಾಗ ಹಾಗು ಗ್ರಾಮ ಪಂಚಾಯಿತಿ ಬಳಿ ಅವಕಾಶ ಕಲ್ಪಿಸಿಕೊಡಲಾಗಿದೆ. ವ್ಯಾಪಾರ ವಹಿವಾಟಿನ ಪ್ರಮಾಣ ನೋಡಿಕೊಂಡು ಗ್ರಾಮ ಪಂಚಾಯಿತಿ ಮುಂದಿನ ತೀರ್ಮಾನ ಕೈಗೊಳ್ಳಲಿದೆ. ಸರ್ಕಾರದ ವಿವಿಧ ಯೋಜನೆಗಳು ಹಾಗು ಗ್ರಾಮ ಪಂಚಾಯಿತಿ ಅನುದಾನದಲ್ಲಿ ಮಾರುಕಟ್ಟೆ ಅಭಿವೃದ್ಧಿಗೊಳಿಸುವ ರೂಪುರೇಷೆ ಸಿದ್ದಪಡಿಸಿಕೊಂಡಿದೆ.  
 
 
ಗ್ರಾಮ ಪಂಚಾಯಿತಿ ವತಿಯಿಂದ ಪ್ರತಿ ಗುರುವಾರ ವಾರದ ಸಂತೆ ನಡೆಸಲು ತೀರ್ಮಾನಿಸಲಾಗಿದೆ. ಸದ್ಯಕ್ಕೆ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಮುಂಭಾಗ ಹಾಗು ಗ್ರಾಮ ಪಂಚಾಯಿತಿ ಬಳಿ ಅವಕಾಶ ಕಲ್ಪಿಸಿಕೊಡಲಾಗಿದೆ. ಸೂಕ್ತ ಮಾರುಕಟ್ಟೆ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಸ್ಥಳವಕಾಶಗಳಿದ್ದು, ಪ್ರಸ್ತುತ ವ್ಯಾಪಾರ ವಹಿವಾಟಿನ ಪ್ರಮಾಣ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಗ್ರಾಮಸ್ಥರು, ವ್ಯಾಪಾರಸ್ಥರು ಗುರುವಾರ ನಡೆಯಲಿರುವ ವಾರದ ಸಂತೆ ಸದ್ಬಳಕೆ ಮಾಡಿಕೊಂಡು ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಕೈಜೋಡಿಸಬೇಕು. 
          - ನಾಗೇಶ್, ಅಧ್ಯಕ್ಷರು, ಅಂತರಗಂಗೆ ಗ್ರಾಮ ಪಂಚಾಯಿತಿ, ಭದ್ರಾವತಿ.